ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾರಿಷಸ್ ಪ್ರಧಾನಮಂತ್ರಿ ಅವರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

Posted On: 11 SEP 2025 1:39PM by PIB Bengaluru

ಪ್ರಧಾನಮಂತ್ರಿ ಡಾ. ನವೀನ್ ಚಂದ್ರ ರಾಮಗೂಲಂ ಅವರೇ,
ಉಭಯ ದೇಶಗಳ ಪ್ರತಿನಿಧಿಗಳೇ,
ಮಾಧ್ಯಮ ಮಿತ್ರರೇ ಮತ್ತು ಸ್ನೇಹಿತರೇ,

 

ನಮಸ್ಕಾರ,

ನನ್ನ ಸಂಸದೀಯ ಕ್ಷೇತ್ರಕ್ಕೆ ನಿಮ್ಮನ್ನು ಸ್ವಾಗತಿಸುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಕಾಶಿಯು ಸದಾ ಭಾರತದ ನಾಗರಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.

ಶತಮಾನಗಳ ಹಿಂದೆ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಭಾರತದಿಂದ ಮಾರಿಷಸ್‌ಗೆ ಪ್ರಯಾಣಿಸಿದವು ಮತ್ತು ಅಲ್ಲಿನ ದೈನಂದಿನ ಜೀವನದ ಭಾಗವಾದವು. ಕಾಶಿಯಲ್ಲಿ ಗಂಗಾ ಮಾತೆಯ ಶಾಶ್ವತ ಹರಿವಿನಂತೆಯೇ, ಭಾರತೀಯ ಸಂಸ್ಕೃತಿಯ ನಿರಂತರ ಪ್ರವಾಹವು ಮಾರಿಷಸ್ ಅನ್ನು ಶ್ರೀಮಂತಗೊಳಿಸಿದೆ.

ಇಂದು, ನಾವು ಕಾಶಿಯಲ್ಲಿ ಮಾರಿಷಸ್‌ನ ಮಿತ್ರರನ್ನು ಸ್ವಾಗತಿಸುತ್ತಿರುವ ಈ ಸಂದರ್ಭವು ಕೇವಲ ಔಪಚಾರಿಕತೆಯಲ್ಲ, ಇದೊಂದು ಆಧ್ಯಾತ್ಮಿಕ ಸಮಾಗಮ. ಅದಕ್ಕಾಗಿಯೇ ಭಾರತ ಮತ್ತು ಮಾರಿಷಸ್ ಕೇವಲ ಪಾಲುದಾರರಲ್ಲ, ಒಂದು ಕುಟುಂಬ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ.

ಸ್ನೇಹಿತರೇ,

ಮಾರಿಷಸ್ ಸದಾ ಭಾರತದ ʻನೆರೆಹೊರೆಯವರು ಮೊದಲು ನೀತಿʼ ಮತ್ತು ನಮ್ಮ 'ಮಹಾಸಾಗರ'ದ ದೃಷ್ಟಿಕೋನದ ಪ್ರಮುಖ ಭಾಗವಾಗಿದೆ. ಕಳೆದ ಮಾರ್ಚ್‌ನಲ್ಲಿ, ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸುವ ಗೌರವ ನನಗೆ ಸಿಕ್ಕಿತ್ತು, ಅಲ್ಲಿ ನಾವು ನಮ್ಮ ಸಂಬಂಧಗಳನ್ನು 'ವರ್ಧಿತ ಕಾರ್ಯತಂತ್ರದ ಪಾಲುದಾರಿಕೆ' ಮಟ್ಟಕ್ಕೆ ಎತ್ತರಿಸಿದ್ದೇವೆ. ಇಂದು, ನಾವು ನಮ್ಮ ಸಹಕಾರದ ಎಲ್ಲಾ ಕ್ಷೇತ್ರಗಳನ್ನು ವಿವರವಾಗಿ ಪರಿಶೀಲಿಸಿದ್ದೇವೆ ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ.

ಮಿತ್ರರೇ,

ʻಚಾಗೋಸ್ ಒಪ್ಪಂದʼ ಅಂತಿಮಗೊಂಡಿರುವುದಕ್ಕೆ ನಾನು ಪ್ರಧಾನಮಂತ್ರಿ ರಾಮಗೂಲಂ ಜೀ ಮತ್ತು ಮಾರಿಷಸ್ ಜನತೆಗೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಇದು ಮಾರಿಷಸ್‌ನ ಸಾರ್ವಭೌಮತ್ವಕ್ಕೆ ಐತಿಹಾಸಿಕ ಮೈಲುಗಲ್ಲಾಗಿದೆ. ಭಾರತವು ಸದಾ ವಸಾಹತುಶಾಹಿ ವಿಮೋಚನೆ ಮತ್ತು ಮಾರಿಷಸ್‌ನ ಸಾರ್ವಭೌಮತ್ವದ ಸಂಪೂರ್ಣ ಮಾನ್ಯತೆಯನ್ನು ಬೆಂಬಲಿಸಿದೆ. ಈ ಪ್ರಯಾಣದಲ್ಲಿ ಭಾರತವು ಸದಾ ಮಾರಿಷಸ್ ನೊಂದಿಗೆ ದೃಢವಾಗಿ ನಿಂತಿದೆ.

ಸ್ನೇಹಿತರೇ,

ಮಾರಿಷಸ್‌ನ ಅಭಿವೃದ್ಧಿಯಲ್ಲಿ ವಿಶ್ವಾಸಾರ್ಹ ಪ್ರಾಥಮಿಕ ಪಾಲುದಾರನಾಗಿರುವುದಕ್ಕೆ ಭಾರತ ಹೆಮ್ಮೆಪಡುತ್ತದೆ. ಇಂದು, ಮಾರಿಷಸ್‌ನ ಅಗತ್ಯಗಳು ಮತ್ತು ಆದ್ಯತೆಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾದ ʻವಿಶೇಷ ಆರ್ಥಿಕ ಪ್ಯಾಕೇಜ್ʼ ಅನ್ನು ನಾವು ಘೋಷಿಸಿದ್ದೇವೆ. ಇದು ಮೂಲಸೌಕರ್ಯವನ್ನು ಬಲಪಡಿಸುತ್ತದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಭಾರತದ ಹೊರಗೆ ಮೊದಲ ಜನೌಷಧ ಕೇಂದ್ರವನ್ನು ಈಗ ಮಾರಿಷಸ್‌ನಲ್ಲಿ ಸ್ಥಾಪಿಸಲಾಗಿದೆ. ಮಾರಿಷಸ್‌ನಲ್ಲಿ ʻಆಯುಷ್ ಉತ್ಕೃಷ್ಟತಾ ಕೇಂದ್ರʼ, 500 ಹಾಸಿಗೆಗಳ ʻಸರ್ ಸೀವೂಸಗೂರ್ ರಾಮಗೂಲಂ ರಾಷ್ಟ್ರೀಯ ಆಸ್ಪತ್ರೆʼ ಹಾಗೂ ಪಶುವೈದ್ಯಕೀಯ ಶಾಲೆ ಮತ್ತು ಪ್ರಾಣಿ ಆಸ್ಪತ್ರೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ತನ್ನ ಸಹಕಾರವನ್ನು ವಿಸ್ತರಿಸಲು ಭಾರತವು ಇಂದು ನಿರ್ಧರಿಸಿದೆ.

ಇದೇ ವೇಳೆ, ʻಚಾಗೋಸ್ ಸಾಗರ ಸಂರಕ್ಷಿತ ಪ್ರದೇಶʼ; ʻಎಸ್ಎಸ್ಆರ್ʼ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ʻಎಟಿಸಿʼ ಟವರ್; ಜೊತೆಗೆ ಹೆದ್ದಾರಿಗಳು ಮತ್ತು ವರ್ತುಲ ರಸ್ತೆಗಳ ವಿಸ್ತರಣೆ ಯೋಜನೆಗಳನ್ನು ಸಹ ನಾವು ಮುನ್ನಡೆಸುತ್ತೇವೆ.
ಈ ಪ್ಯಾಕೇಜ್ ಒಂದು ಸಹಾಯವಲ್ಲ. ಇದು ನಮ್ಮ ಪರಸ್ಪರ ಸಮಾನ ಭವಿಷ್ಯದ ಹೂಡಿಕೆಯಾಗಿದೆ.

ಸ್ನೇಹಿತರೇ,

ಕಳೆದ ವರ್ಷ ಮಾರಿಷಸ್‌ನಲ್ಲಿ ʻಯುಪಿಐʼ ಮತ್ತು ʻರುಪೇʼ ಕಾರ್ಡ್‌ಗಳನ್ನು ಆರಂಭಿಸಲಾಯಿತು. ಈಗ, ನಾವು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರವನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.

ಇಂಧನ ಭದ್ರತೆ ನಮ್ಮ ಪಾಲುದಾರಿಕೆಯ ಪ್ರಮುಖ ಆಧಾರಸ್ತಂಭವಾಗಿದೆ. ಮಾರಿಷಸ್‌ನ ಇಂಧನ ಪರಿವರ್ತನೆಗೆ ಭಾರತ ಬೆಂಬಲ ನೀಡುತ್ತಿದೆ. ನಾವು ಮಾರಿಷಸ್‌ಗೆ 100 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುತ್ತಿದ್ದೇವೆ, ಅದರಲ್ಲಿ 10 ಬಸ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಇಂಧನ ಕ್ಷೇತ್ರದಲ್ಲಿ ಆಖೈರುಗೊಂಡ ಸಮಗ್ರ ಪಾಲುದಾರಿಕೆ ಒಪ್ಪಂದವು ಈ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಟ್ಯಾಮರಿಂಡ್‌ ಜಲಪಾತದಲ್ಲಿ 17.5 ಮೆಗಾವ್ಯಾಟ್ ತೇಲುವ ಸೌರ ವಿದ್ಯುತ್ ಸ್ಥಾವರ ಸ್ಥಾಪನೆಗೆ ಬೆಂಬಲವನ್ನು ನೀಡಲು ನಾವು ನಿರ್ಧರಿಸಿದ್ದೇವೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ ನಾವು ದೀರ್ಘಕಾಲದ ಪಾಲುದಾರಿಕೆಯನ್ನು ಹೊಂದಿದ್ದೇವೆ. ಮಾರಿಷಸ್‌ನ 5,000ಕ್ಕೂ ಹೆಚ್ಚು ನಾಗರಿಕರು ಈಗಾಗಲೇ ಭಾರತದಲ್ಲಿ ತರಬೇತಿ ಪಡೆದಿದ್ದಾರೆ. ಕಳೆದ ಮಾರ್ಚ್‌ನಲ್ಲಿ ನಾನು ಮಾರಿಷಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, 500 ನಾಗರಿಕ ಸೇವಕರಿಗೆ ತರಬೇತಿ ನೀಡಲು ನಿರ್ಧರಿಸಲಾಯಿತು. ಈ ಪೈಕಿ ಮೊದಲ ಬ್ಯಾಚ್ ಪ್ರಸ್ತುತ ಮಸ್ಸೂರಿಯಲ್ಲಿ ತರಬೇತಿ ಪಡೆಯುತ್ತಿದೆ ಎಂದು ತಿಳಿದು ನನಗೆ ತುಂಬಾ ಸಂತೋಷವಾಗಿದೆ.

ಇಂದು, ನಾವು ಮಾರಿಷಸ್‌ನಲ್ಲಿ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ದೇಶನಾಲಯವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ, ನಾವು ಮಾರಿಷಸ್‌ನಲ್ಲಿ ʻಮಿಷನ್ ಕರ್ಮಯೋಗಿʼಯ ತರಬೇತಿ ಮಾಡ್ಯೂಲ್‌ಗಳನ್ನು ಸಹ ಪ್ರಾರಂಭಿಸುತ್ತೇವೆ.

ಮದ್ರಾಸ್‌ನ ʻಭಾರತೀಯ ತಂತ್ರಜ್ಞಾನ ಸಂಸ್ಥೆʼ ಮತ್ತು ʻಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆʼಗಳು ಮಾರಿಷಸ್ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಒಪ್ಪಂದಗಳು ಸಂಶೋಧನೆ, ಶಿಕ್ಷಣ ಮತ್ತು ನಾವೀನ್ಯತೆಯಲ್ಲಿ ನಮ್ಮ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ.

ಸ್ನೇಹಿತರೇ,

ಮುಕ್ತ, ಸುರಕ್ಷಿತ, ಸ್ಥಿರ ಮತ್ತು ಸಮೃದ್ಧ ಹಿಂದೂ ಮಹಾಸಾಗರ ನಮ್ಮ ಸಮಾನ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ, ಮಾರಿಷಸ್‌ನ ʻವಿಶೇಷ ಆರ್ಥಿಕ ವಲಯʼದ ಭದ್ರತೆಯನ್ನು ಬಲಪಡಿಸಲು ಮತ್ತು ಅದರ ಕಡಲ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಸಂಪೂರ್ಣವಾಗಿ ಬದ್ಧವಾಗಿದೆ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತವು ಸದಾ ಮೊದಲ ಪ್ರತಿಸ್ಪಂದಕ ಮತ್ತು ಭದ್ರತ ಪೂರೈಕೆದಾರನಾಗಿ ನಿಂತಿದೆ.

ಮಾರಿಷಸ್ ಕರಾವಳಿ ಕಾವಲು ಪಡೆಯ ಹಡಗನ್ನು ಭಾರತದಲ್ಲಿ ಮರುಹೊಂದಿಸಲಾಗುತ್ತಿದೆ. ಇದಲ್ಲದೆ, ಅವರ 120 ಅಧಿಕಾರಿಗಳು ಭಾರತದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇಂದು, ಹೈಡ್ರೋಗ್ರಾಫಿ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ, ನಾವು ʻಇಇಝೆಡ್ʼನ ಜಂಟಿ ಸಮೀಕ್ಷೆಗಳು, ಪಥನಿರ್ದೇಶನ ಚಾರ್ಟ್‌ಗಳು ಮತ್ತು ಹೈಡ್ರೋಗ್ರಾಫಿಕ್ ದತ್ತಾಂಶ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದೇವೆ.

ಗೌರವಾನ್ವಿತರೇ,

ಭಾರತ ಮತ್ತು ಮಾರಿಷಸ್ ಎರಡು ರಾಷ್ಟ್ರಗಳು, ಆದರೆ ನಮ್ಮ ಕನಸುಗಳು ಮತ್ತು ಗುರಿ ಒಂದೇ.

ಈ ವರ್ಷ, ನಾವು ಸರ್ ಸೀವೂಸಗೂರ್ ರಾಮ್ ಗೂಲಂ ಅವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಅವರು ಮಾರಿಷಸ್ ರಾಷ್ಟ್ರಪಿತ ಮಾತ್ರವಲ್ಲದೆ ಭಾರತ ಮತ್ತು ಮಾರಿಷಸ್ ನಡುವಿನ ಶಾಶ್ವತ ಸೇತುವೆಯ ಸಂಸ್ಥಾಪಕ ವಾಸ್ತುಶಿಲ್ಪಿಯೂ ಹೌದು. ಅವರ ವಾರ್ಷಿಕೋತ್ಸವವು ನಮ್ಮ ಸಂಬಂಧವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ.

ನಾನು ಮತ್ತೊಮ್ಮೆ, ನಿಯೋಗಕ್ಕೆ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಧನ್ಯವಾದಗಳು.

 

ಗಮನಿಸಿ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಭಾವಾನುವಾದ. ಅವರ ಭಾಷಣ ಹಿಂದಿಯಲ್ಲಿತ್ತು.

 

*****


(Release ID: 2165696) Visitor Counter : 2