ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಆದಿ-ಕರ್ಮಯೋಗಿ ಅಭಿಯಾನದ ಭಾಗವಾಗಿ ಗಣ್ಯ ಬುಡಕಟ್ಟು ಜನರ ತಂಡ ರಾಷ್ಟ್ರಪತಿಯವರನ್ನು ಭೇಟಿ ಮಾಡಿತು 

Posted On: 09 SEP 2025 5:53PM by PIB Bengaluru

ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ವೈವಿಧ್ಯಮಯ ಹಿನ್ನೆಲೆಯ ಗಣ್ಯ ಬುಡಕಟ್ಟು ಜನರ ತಂಡ ಇಂದು (ಸೆಪ್ಟೆಂಬರ್ 9, 2025) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿತು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ 'ಆದಿ ಕರ್ಮಯೋಗಿ ಅಭಿಯಾನ'ದ ಅಡಿಯಲ್ಲಿ ಈ ತಂಡ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಉಪಕ್ರಮದ ಅಡಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಬುಡಕಟ್ಟು ನಾಯಕರ ಇಂತಹ ವಿವಿಧ ಸಭೆಗಳ ಸರಣಿಯನ್ನು ಆಯೋಜಿಸಲಾಗಿದೆ. ಈ ಹಂತದಲ್ಲಿ,  ಇದು ಈ ಸರಣಿಯ ಕೊನೆಯ ಸಭೆಯಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಆದಿ ಕರ್ಮಯೋಗಿ ಅಭಿಯಾನವು ಬುಡಕಟ್ಟು ಸಮಾಜ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ಕಡೆಗೆ ಸಂವಾದ ಮತ್ತು ಸಹಕಾರಕ್ಕಾಗಿ ಒಂದು ಗಮನಾರ್ಹ ಪ್ರಯತ್ನವಾಗಿದೆ. ಈ ಉಪಕ್ರಮವು ಸಮಗ್ರ ಮತ್ತು ಸಮಾನ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. ಬುಡಕಟ್ಟು ಸಮುದಾಯಗಳು ಅಭಿವೃದ್ಧಿಯ ಫಲಾನುಭವಿಗಳಾಗುವುದು ಮಾತ್ರವಲ್ಲದೆ, ದೇಶದ ಭವಿಷ್ಯದ ಸಹ-ಸೃಷ್ಟಿಕರ್ತರಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿರಬೇಕು ಎಂದು ರಾಷ್ಟ್ರಪತಿಯವರು ಹೇಳಿದರು.

ಆದಿ ಕರ್ಮಯೋಗಿ ಅಭಿಯಾನವು ಜವಾಬ್ದಾರಿಯುತ ಆಡಳಿತದ ಮೂಲಕ ಬುಡಕಟ್ಟು ಸಮುದಾಯಗಳನ್ನು ಸಬಲೀಕರಣಗೊಳಿಸುವ ಒಂದು ಪರಿವರ್ತನಾ ಉಪಕ್ರಮವಾಗಿದೆ. ಈ ವರ್ಷದ ಜುಲೈನಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಿದ ನಂತರ, ಒಂದು ಲಕ್ಷ ಹಳ್ಳಿಗಳಲ್ಲಿ, ಅಧಿಕಾರಿಗಳು, ಸ್ವಯಂಸೇವಕರು, ಸ್ವಸಹಾಯ ಗುಂಪುಗಳ ಮಹಿಳೆಯರು ಮತ್ತು ಬುಡಕಟ್ಟು ಯುವಕರು ಸೇರಿದಂತೆ 20 ಲಕ್ಷ ಆದಿ-ಕರ್ಮಯೋಗಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ರಾಷ್ಟ್ರಪತಿಯವರು ಬಹಳಷ್ಟು ಸಂತೋಷಪಟ್ಟರು.

ಒಂದು ಲಕ್ಷ ಆದಿ ಸೇವಾ ಕೇಂದ್ರಗಳನ್ನು ಏಕ ವಿಂಡೋ ಸೇವೆ ಮತ್ತು ಕುಂದುಕೊರತೆ ಪರಿಹಾರ ಕೇಂದ್ರಗಳಾಗಿ ಗುರುತಿಸಲಾಗಿದೆ . ಧರ್ತಿ ಅಬಾ ಜಂಜತಿ ಗ್ರಾಮ ಉತ್ಕರ್ಷ್ ಅಭಿಯಾನವು 63,000 ಕ್ಕೂ ಹೆಚ್ಚು ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ಸೇವೆಗಳನ್ನು ಒದಗಿಸುತ್ತಿದೆ. ಅರಣ್ಯ ಹಕ್ಕುಗಳ ಕಾಯ್ದೆ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪರಿಸರ ಸಂರಕ್ಷಣೆಯ ಪ್ರಮುಖ ಸಾಧನವಾಗಿದೆ. ಆದಾಗ್ಯೂ, ನಿಜವಾದ ಸಬಲೀಕರಣವು ಯೋಜನೆಗಳಿಂದ ಮಾತ್ರ ಬರುವುದಿಲ್ಲ. ಜನರ ಹಕ್ಕುಗಳನ್ನು ಗುರುತಿಸುವ ಮೂಲಕ ನಿಜವಾದ ಸಬಲೀಕರಣವು ರೂಪುಗೊಳ್ಳುತ್ತದೆ.  ಆ ಹಕ್ಕುಗಳ ಮೇಲಿನ ಗೌರವದಿಂದ ಮತ್ತು ಬುಡಕಟ್ಟು ಸಮುದಾಯಗಳ ಪ್ರಾತಿನಿಧ್ಯದಿಂದ ಇದು ಬಲಗೊಳ್ಳುತ್ತದೆ. ಬುಡಕಟ್ಟು ಸಮುದಾಯಗಳ ಸದಸ್ಯರು ತಮ್ಮ ಅಭಿವೃದ್ಧಿ ಪ್ರಯಾಣಕ್ಕೆ ಸಕ್ರಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ವಿವಿಧ ವೇದಿಕೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ವ್ಯವಸ್ಥೆಗಳನ್ನು ಜವಾಬ್ದಾರಿಯುತವಾಗಿಸಲು ಪ್ರಯತ್ನ ಆಗಬೇಕು ಎಂದು ರಾಷ್ಟ್ರಪತಿಯವರು ಸಲಹೆ ನೀಡಿದರು.

ಬುಡಕಟ್ಟು ಸಮಾಜದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಹಕ್ಕುಗಳನ್ನು ರಕ್ಷಿಸುವ ಸಮಾನತೆ, ನ್ಯಾಯ ಮತ್ತು ಗೌರವದ ವಾತಾವರಣವಿರುವ ಸಮಾಜ ಮತ್ತು ದೇಶವನ್ನು ನಿರ್ಮಿಸಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸುವ ಅಗತ್ಯವಿದೆ.  ಮತ್ತು ಅವರ ವಿಶಿಷ್ಟ ಗುರುತು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಅವಕಾಶ ಮಾಡಿ ಕೊಡಬೇಕು ಎಂದು ರಾಷ್ಟ್ರಪತಿಯವರು ಹೇಳಿದರು

ಬುಡಕಟ್ಟು ಭಾಷೆಗಳಿಗೆ ಎಐ ಆಧಾರಿತ ಅನುವಾದ ಸಾಧನವಾದ ಆದಿ ವಾಣಿಯ  ಬಿಡುಗಡೆಯನ್ನು ಗಮನಿಸಿದ ರಾಷ್ಟ್ರಪತಿಗಳು ಈ ಉಪಕ್ರಮ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಬುಡಕಟ್ಟು ಪ್ರದೇಶಗಳಲ್ಲಿ ಭಾಷೆ ಮತ್ತು ಶಿಕ್ಷಣ ಪರಿವರ್ತನೆಯತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು.

ಸೆಪ್ಟೆಂಬರ್ 2025ರಲ್ಲಿ ಪ್ರಾರಂಭಿಸಲಾದ ಆದಿವಾಣಿಯ ಬೀಟಾ ಆವೃತ್ತಿಯು, ಭಾರತದಲ್ಲಿ ಬುಡಕಟ್ಟು ಗುಂಪುಗಳ ಸಾಂಸ್ಕೃತಿಕ ಸಂರಕ್ಷಣೆ ಮತ್ತು ಸಾಮಾಜಿಕ ಸೇರ್ಪಡೆಗಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಯಂತ್ರ ಕಲಿಕೆ (ಎಂಎಲ್) ಅನ್ನು ಬಳಸುವ ವಿಶ್ವದ ಮೊದಲ ಎಐ-ಚಾಲಿತ ಸ್ಥಳೀಯ ಭಾಷಾ ಮಾಧ್ಯಮ ಸೇತುವೆ ಹಾಗೂ ಸಾಧನವಾಗಿದೆ.  ಇದು ಅತ್ಯಂತ ದುರ್ಬಲ ಸಾಮಾಜಿಕ ಗುಂಪುಗಳ ಕಲ್ಯಾಣಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ)ಬಳಸುವ ನಿಜವಾದ ಉದಾಹರಣೆಯಾಗಿದೆ, ಇದರ ಪರಿಣಾಮಕಾರಿ ಪ್ರಯೋಜನ ಆಗಬೇಕಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು 

ಸಭೆಯಲ್ಲಿ, ಆದಿ ಕರ್ಮಯೋಗಿ ಅಭಿಯಾನದ ಕುರಿತಾದ ಚಲನಚಿತ್ರವನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲಾಯಿತು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಜುವಾಲ್ ಓರಂ ಮತ್ತು ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಖಾತೆ ಸಚಿವರಾದ ಶ್ರೀ ದುರ್ಗಾದಾಸ್ ಉಯಿಕೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

 

*****
 


(Release ID: 2165122) Visitor Counter : 2