ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ದುಬೈನಲ್ಲಿ ನಡೆದ ಸಾರ್ವತ್ರಿಕ ಅಂಚೆ ಕಾಂಗ್ರೆಸ್‌ನಲ್ಲಿ ಐತಿಹಾಸಿಕ ಯು.ಪಿ.ಐ-ಯು.ಪಿ.ಯು ಸಂಯೋಜನೆಗೆ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ
ಜಾಗತಿಕ ಅಂಚೆ ವಲಯದ ಬಲವರ್ಧನೆಗೆ 10 ದಶಲಕ್ಷ ಅಮೆರಿಕನ್ ಡಾಲರ್ ನೀಡಲು ಭಾರತ ಬದ್ಧ: ದುಬೈನಲ್ಲಿ ನಡೆದ ಯು.ಪಿ.ಯು ಕಾಂಗ್ರೆಸ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಕಟ
ಎರಡು ಪ್ರಮುಖ ಯು.ಪಿ.ಯು ಮಂಡಳಿಗಳಿಗೆ ಭಾರತದ ಸ್ಪರ್ಧೆಯ ಬಗ್ಗೆ ಜಾಗತಿಕ ಅಂಚೆ ಶೃಂಗಸಭೆಯಲ್ಲಿ ಸಿಂಧಿಯಾ ಘೋಷಣೆ
Posted On:
09 SEP 2025 11:29AM by PIB Bengaluru
ದುಬೈನಲ್ಲಿ ನಡೆದ 28ನೇ ಸಾರ್ವತ್ರಿಕ ಅಂಚೆ ಕಾಂಗ್ರೆಸ್‌ನಲ್ಲಿ ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಖಾತೆ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಇಂದು ಯು.ಪಿ.ಐ–ಯು.ಪಿ.ಯು ಸಂಯೋಜನೆಯ ಯೋಜನೆಯನ್ನು ಅನಾವರಣಗೊಳಿಸಿದರು. ಇದು ವಿಶ್ವಾದ್ಯಂತ ಲಕ್ಷಾಂತರ ಜನರು ಗಡಿಯಾಚೆಗೆ ಹಣವನ್ನು ರವಾನಿಸಲು ಸಾಧ್ಯವಾಗಿಸಿದ್ದು ಪರಿವರ್ತನಾತ್ಮಕ ಹೆಗ್ಗುರುತಿನ ಉಪಕ್ರಮವಾಗಿದೆ.

ಯುಎಇಯ ದುಬೈನಲ್ಲಿ ನಡೆದ 28 ನೇ ಸಾರ್ವತ್ರಿಕ ಅಂಚೆ ಕಾಂಗ್ರೆಸ್‌ನಲ್ಲಿ ಪ್ರತಿನಿಧಿಗಳನ್ನು ಉದ್ದೇಶಿಸಿ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಮಾತನಾಡಿದರು
ಅಂಚೆ ಇಲಾಖೆ (ಡಿ.ಒ.ಪಿ), ಎನ್.ಪಿ.ಸಿ.ಐ ಅಂತಾರಾಷ್ಟ್ರೀಯ ಪಾವತಿ ನಿಯಮಿತ (ಎನ್.ಐ.ಪಿ.ಎಲ್) ಮತ್ತು ಸಾರ್ವತ್ರಿಕ ಅಂಚೆ ಸಂಘ (ಯು.ಪಿ.ಯು) ಅಭಿವೃದ್ಧಿಪಡಿಸಿರುವ ಈ ಉಪಕ್ರಮವು ಭಾರತದ ಏಕೀಕೃತ ಪಾವತಿ ವ್ಯವಸ್ಥೆ (ಯು.ಪಿ.ಐ) ಅನ್ನು ಯು.ಪಿ.ಯು ಅಂತರ್ ಸಂಪರ್ಕ ವೇದಿಕೆ (ಐ.ಪಿ) ಯೊಂದಿಗೆ ಸಂಯೋಜಿಸುತ್ತಾ, ಯು.ಪಿ.ಐ ನ ವೇಗ ಮತ್ತು ಕೈಗೆಟುಕುವಿಕೆಯನ್ನು ಅಂಚೆ ಜಾಲದ ವ್ಯಾಪ್ತಿಯೊಂದಿಗೆ ಸಂಯೋಜಿಸುತ್ತದೆ.
ಇದನ್ನು "ತಂತ್ರಜ್ಞಾನದ ಅನಾವರಣಕ್ಕಿಂತ ಮಿಗಿಲಾದ ಸಾಮಾಜಿಕ ಒಪ್ಪಂದ" ಎಂದು ಬಣ್ಣಿಸಿರುವ ಸಿಂಧಿಯಾ ಅವರು, "ಯು.ಪಿ.ಐ ವೇಗದೊಂದಿಗೆ ಅಂಚೆ ಜಾಲದ ವಿಶ್ವಾಸಾರ್ಹತೆಯು ಗಡಿಯಾಚೆಗಿನ ಕುಟುಂಬಗಳು ವೇಗವಾಗಿ, ಸುರಕ್ಷಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಹಣವನ್ನು ಕಳುಹಿಸಲು ಸಾಧ್ಯವಾಗಿಸಿದೆ ಎಂದರು. ನಾಗರಿಕರಿಗಾಗಿ ರೂಪಿಸಲಾಗುವ ಸಾರ್ವಜನಿಕ ಮೂಲಸೌಕರ್ಯವನ್ನು ಗಡಿಯಾಚೆಗೂ ಸಂಪರ್ಕಿಸುವ ಮೂಲಕ ಮಾನವೀಯತೆಗೆ ಉತ್ತಮ ಸೇವೆ ಸಲ್ಲಿಸಬಹುದು ಎಂಬುದನ್ನು ಇದು ದೃಢೀಕರಿಸುತ್ತದೆ" ಎಂದು ಅವರು ಹೇಳಿದರು.
ಆಧುನಿಕ, ಅಂಚೆ ವಲಯವನ್ನೊಳಗೊಂಡ ಭಾರತದ ದೃಷ್ಟಿಕೋನವನ್ನು ಅವರು ನಾಲ್ಕು ಕ್ರಿಯಾಪದಗಳಲ್ಲಿ ವರ್ಣಿಸಿದ್ದಾರೆ. "ತಡೆರಹಿತ ದತ್ತಾಂಶ-ಚಾಲಿತ ಸಾಗಣೆ ಮೂಲಕ ಸಂಪರ್ಕ ಸಾಧಿಸುವುದು; ಪ್ರತಿ ವಲಸಿಗ ಮತ್ತು ಡಿಜಿಟಲ್ ಉದ್ಯಮಕ್ಕೆ ಕೈಗೆಟುಕುವ ಡಿಜಿಟಲ್ ಹಣಕಾಸು ಸೇವೆಗಳನ್ನು ತಲುಪಿಸುವುದು; ಎ.ಐ, ಡಿಜಿಪಿನ್(DigiPIN) ಮತ್ತು ಮಷಿನ್ ಲರ್ನಿಂಗ್ ನೊಂದಿಗೆ ಆಧುನೀಕರಿಸುವುದು; ಹಾಗೂ ಯು.ಪಿ.ಯು-ಬೆಂಬಲಿತ ತಾಂತ್ರಿಕ ಕೋಶದೊಂದಿಗೆ ದಕ್ಷಿಣ-ದಕ್ಷಿಣ ಪಾಲುದಾರಿಕೆಗಳ ಮೂಲಕ ಸಹಕರಿಸುವುದು."
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಮತ್ತು ವಿಕಸಿತ ಭಾರತ ಮುನ್ನೋಟ ಸಾಕಾರಗೊಳಿಸುವತ್ತ ಕಾರ್ಯ ನಿರ್ವಹಿಸುತ್ತಿರುವ ಇಂಡಿಯಾ ಪೋಸ್ಟ್ (ಅಂಚೆ ಇಲಾಖೆಯು) ಪ್ರಮಾಣ ಮತ್ತು ಒಳಗೊಳ್ಳುವಿಕೆಗೆ ಪ್ರಬಲ ಉದಾಹರಣೆಯಾಗಿದೆ. ಇದನ್ನು ವಿವರಿಸುತ್ತಾ ಸಿಂಧಿಯಾ ಅವರು, "ಆಧಾರ್, ಜನ್ ಧನ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ, ನಾವು 560 ದಶಲಕ್ಷಕ್ಕಿಂತಲೂ ಹೆಚ್ಚು ಖಾತೆಗಳನ್ನು ತೆರೆದಿದ್ದೇವೆ, ಈ ಪೈಕಿ ಹೆಚ್ಚಿನ ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಇಂಡಿಯಾ ಪೋಸ್ಟ್ ಕಳೆದ ವರ್ಷ 900 ದಶಲಕ್ಷಕ್ಕೂ ಹೆಚ್ಚು ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು ತಲುಪಿಸಿದೆ. ಇದು ನಾವು ಜಾಗತಿಕ ವೇದಿಕೆಗೆ ತರುವ ಸೇರ್ಪಡೆಯ ಭಾವ ಮತ್ತು ಪ್ರಮಾಣವಾಗಿದೆ" ಎಂದು ತಿಳಿಸಿದರು.

ಜಾಗತಿಕ ಅಂಚೆ ಸಹಕಾರವನ್ನು ಬಲಪಡಿಸುವುದು - ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ
ಸಾರ್ವತ್ರಿಕ ಅಂಚೆ ಒಕ್ಕೂಟದ ಮಹಾನಿರ್ದೇಶಕ ಶ್ರೀ ಮಸಾಹಿಕೊ ಮೆಟೋಕಿ ಅವರೊಂದಿಗೆ
ಇ-ಕಾಮರ್ಸ್ ಮತ್ತು ಡಿಜಿಟಲ್ ಪಾವತಿಗಳಿಗೆ ವಿಶೇಷ ಆದ್ಯತೆಯೊಂದಿಗೆ, ತಂತ್ರಜ್ಞಾನವನ್ನು ನಾವಿನ್ಯತೆಯೊಂದಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆಗೆ 10 ದಶಲಕ್ಷ ಡಾಲರ್ ಆರ್ಥಿಕ ಬೆಂಬಲವನ್ನು ನೀಡುವುದಾಗಿ ಶ್ರೀ ಸಿಂಧಿಯಾ ಅವರು ಇದೇ ವೇಳೆ ಘೋಷಿಸಿದರು. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ಎಂಬ ಧ್ಯೇಯವಾಕ್ಯವನ್ನು ಮುನ್ನಡೆಸಲು ಭಾರತವು ಸಂಪನ್ಮೂಲಗಳು, ಪರಿಣತಿ ಮತ್ತು ಮೈತ್ರಿಯೊಂದಿಗೆ ಹೇಗೆ ಸಿದ್ಧವಾಗಿದೆ ಎಂಬುದನ್ನು ಅವರು ಪುನರುಚ್ಚರಿಸಿದರು.
ಜಾಗತಿಕ ಅಂಚೆ ಸಮುದಾಯಕ್ಕೆ ಸಂಪರ್ಕಿತ, ಅಂತರ್ಗತ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ, ಯು.ಪಿ.ಯುನ ಆಡಳಿತ ಮಂಡಳಿ ಮತ್ತು ಅಂಚೆ ಕಾರ್ಯಾಚರಣೆ ಮಂಡಳಿಗೆ ಭಾರತದ ಉಮೇದುವಾರಿಕೆಯನ್ನು ಸಹ ಶ್ರೀ ಸಿಂಧಿಯಾ ಅವರು ಈ ಸಂದರ್ಭದಲ್ಲಿ ಪ್ರಕಟಿಸಿದರು.
"ಭಾರತವು ಕೇವಲ ಪ್ರಸ್ತಾವನೆಗಳೊಂದಿಗೆ ಅಲ್ಲ, ಪಾಲುದಾರಿಕೆಯೊಂದಿಗೆ ನಿಮ್ಮ ಬಳಿಗೆ ಬರುತ್ತದೆ. ದುಬಾರಿ ವಿಘಟನೆಯನ್ನು ತಪ್ಪಿಸುವ ಪರಸ್ಪರ ಕಾರ್ಯಸಾಧ್ಯ ಪರಿಹಾರಗಳನ್ನು ಸಕ್ರಿಯಗೊಳಿಸುವ ಸ್ಥಿತಿಸ್ಥಾಪಕತ್ವದಲ್ಲಿ ನಾವು ನಂಬಿಕೆ ಇರಿಸಿದ್ದೇವೆ ಹಾಗೂ ಪಾವತಿಗಳು, ಗುರುತು, ಸಾಗಣೆ ಮತ್ತು ಪರಿಹಾರಗಳನ್ನು ಸಂಪರ್ಕಿಸುವ ಮೂಲಕ ಜಾಗತಿಕ ವಾಣಿಜ್ಯವು ಸುಗಮವಾಗಲಿದೆ ಎಂಬ ವಿಶ್ವಾಸವಿದೆ" ಎಂದು ಹೇಳುತ್ತಾ ದುಬೈನಲ್ಲಿ ನಡೆದ 28ನೇ ಸಾರ್ವತ್ರಿಕ ಅಂಚೆ ಸಮ್ಮೇಳನದಲ್ಲಿ ಶ್ರೀ ಸಿಂಧಿಯಾ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
(Release ID: 2164922)
Visitor Counter : 2
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Odia
,
Tamil
,
Telugu
,
Malayalam