ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಆ್ಯಂಟೊನಿಯೋ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜಂಟಿ ದೂರವಾಣಿ ಸಂಭಾಷಣೆ


ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ನಾವಿನ್ಯತೆ, ಸುಸ್ಥಿರತೆ, ರಕ್ಷಣೆ, ಭದ್ರತೆ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಗೆ ನಾಯಕರ ಮೆಚ್ಚುಗೆ

ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದ (FTA)ದ ಶೀಘ್ರ ತೀರ್ಮಾನಕ್ಕೆ ಬದ್ಧತೆ ಪುನರುಚ್ಚರಿಸಿದ ನಾಯಕರು

ಉಕ್ರೇನ್ ನಲ್ಲಿ ಸಂಘರ್ಷವನ್ನು ಕೊನೆಗೊಳಿಸುವ ಪ್ರಯತ್ನಗಳ ಕುರಿತು ನಾಯಕರಿಂದ ಪರಸ್ಪರ ಅಭಿಪ್ರಾಯ ಹಂಚಿಕೆ

ಪ್ರಧಾನಮಂತ್ರಿ ಅವರಿಂದ ಮುಂದಿನ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಗೆ ಇಬ್ಬರು ನಾಯಕರಿಗೆ ಭಾರತಕ್ಕೆ ಆಹ್ವಾನ

Posted On: 04 SEP 2025 6:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಮಾನ್ಯ ಆ್ಯಂಟೊನಿಯೋ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಮಾನ್ಯ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ಇಂದು ಜಂಟಿ ದೂರವಾಣಿ ಸಂಭಾಷಣೆ ನಡೆಸಿದರು.

ಭಾರತ ಮತ್ತು ಯೂರೋಪಿಯನ್‌ ಒಕ್ಕೂಟ (ಇಯು) ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳಾಗಿ, ವಿಶ್ವಾಸ, ಹಂಚಿತ ಮೌಲ್ಯಗಳು ಮತ್ತು ಭವಿಷ್ಯಕ್ಕಾಗಿ ಏಕರೂಪದ ದೃಷ್ಟಿಕೋನದ ಮೇಲೆ ರೂಪಿತವಾಗಿರುವ ಸದೃಢ ಮತ್ತು ನಿಕಟ ಬಾಂಧವ್ಯವನ್ನು ಹಂಚಿಕೊಂಡಿವೆ. ಪರಸ್ಪರ ಸಮೃದ್ಧಿಗಾಗಿ ಜಾಗತಿಕ ಸಮಸ್ಯೆಗಳನ್ನು ಜಂಟಿಯಾಗಿ ಪರಿಹರಿಸಲು, ಸ್ಥಿರತೆಯನ್ನು ಪೋಷಿಸಲು ಮತ್ತು ನಿಯಮ ಆಧಾರಿತ ಕ್ರಮವನ್ನು ಉತ್ತೇಜಿಸಲು ಭಾರತ-ಇಯು ಕಾರ್ಯತಂತ್ರ ಪಾಲುದಾರಿಕೆಯ ಪಾತ್ರವನ್ನು ನಾಯಕರು ಒತ್ತಿ ಹೇಳಿದರು.

ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ನಾವಿನ್ಯತೆ, ಸುಸ್ಥಿರತೆ, ರಕ್ಷಣೆ, ಭದ್ರತೆ ಮತ್ತು ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು ಹಾಗೂ ಭಾರತ-ಯುರೋಪ್ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದ (FTA) ಸಂಧಾನ ಮಾತುಕತೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಭಾರತ -ಮಧ್ಯಪ್ರಾಚ್ಯ - ಯುರೋಪ್‌ ಆರ್ಥಿಕ ಕಾರಿಡಾರ್ (IMEEC) ಅನುಷ್ಠಾನಕ್ಕಾಗಿ ಹಂಚಿತ ಬದ್ಧತೆಯನ್ನು ಉಭಯರು ಪುನರುಚ್ಚರಿಸಿದರು.

ಫೆಬ್ರವರಿಯಲ್ಲಿ ಭಾರತಕ್ಕೆ ಇಯು ಕಾಲೇಜ್‌ ಆಫ್‌ ಕಮಿಷಿನರ್ಸ್ ನ ಐತಿಹಾಸಿಕ ಭೇಟಿಯ ಮೇಲೆ ರೂಪಿತವಾಗಿ, ಮುಂದಿನ ಭಾರತ ಇಯು ಶೃಂಗಸಭೆಯನ್ನು ಶೀಘ್ರದಲ್ಲೇ ಪರಸ್ಪರ ಅನುಕೂಲಕರ ದಿನಗಳಂದು ಭಾರತದಲ್ಲಿ ಆಯೋಜಿಸುವ ಬಗ್ಗೆ ನಾಯಕರು ಚರ್ಚಿಸಿದರು. ಪ್ರಧಾನಮಂತ್ರಿ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಬ್ಬರೂ ನಾಯಕರನ್ನು ಭಾರತಕ್ಕೆ ಆಹ್ವಾನಿಸಿದರು.

ಉಕ್ರೇನ್ ನಲ್ಲಿನ ಸಂಘರ್ಷವನ್ನು ಕೊನೆಗಾಣಿಸುವ ಪ್ರಯತ್ನಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ನಾಯಕರು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡರು. ಸಂಘರ್ಷದ ಶಾಂತಿಯುತ ಪರಿಹಾರ ಹಾಗೂ ಶೀಘ್ರದಲ್ಲಿ ಶಾಂತಿ ಮತ್ತು ಸ್ಥಿರತೆಯ ಪುನಃಸ್ಥಾಪನೆಗೆ ಭಾರತದ ಸ್ಥಿರ ಬೆಂಬಲವನ್ನು ಪ್ರಧಾನಮಂತ್ರಿ ಮೋದಿ ಅವರು ಪುನರುಚ್ಚರಿಸಿದರು.

ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಸಮ್ಮತಿಸಿದರು.

****


(Release ID: 2163971) Visitor Counter : 2