ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿಗಳಿಂದ (SCOPE) ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿಗಳ ಪ್ರದಾನ
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸುವಲ್ಲಿ ಸಿ.ಪಿ.ಎಸ್.ಇ. ಗಳು ಪ್ರಮುಖ ಪಾತ್ರ ವಹಿಸುತ್ತವೆ: ರಾಷ್ಟ್ರಪತಿ ಮುರ್ಮು
Posted On:
29 AUG 2025 2:03PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಆಗಸ್ಟ್ 29, 2025) ಹೊಸದಿಲ್ಲಿಯಲ್ಲಿ 2022-23ನೇ ಸಾಲಿನ ಸ್ಕೋಪ್ (SCOPE) ಶ್ರೇಷ್ಠತಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿಗಳು ಭಾರತದ ಅಭಿವೃದ್ಧಿಗೆ ಸಾರ್ವಜನಿಕ ವಲಯದ ಉದ್ಯಮಗಳ ಮಹತ್ವದ ಕೊಡುಗೆಯನ್ನು ಸಂಭ್ರಮಿಸುವ ಒಂದು ಸಂದರ್ಭವಾಗಿದೆ ಎಂದು ಹೇಳಿದರು. ಸಾಮಾಜಿಕ, ಆರ್ಥಿಕ, ಪರಿಸರ, ತಾಂತ್ರಿಕ ಮತ್ತು ನೈತಿಕತೆಯಂತಹ ಎಲ್ಲಾ ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು ಉತ್ತಮ ಉದ್ಯಮದ ವಿಶಿಷ್ಟ ಲಕ್ಷಣವಾಗಿದೆ. ಸುಸ್ಥಿರ ಅಭಿವೃದ್ಧಿ, ಸಾಂಸ್ಥಿಕ ಆಡಳಿತ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಮತ್ತು ನಾವೀನ್ಯತೆ ಮುಂತಾದ ಬಹು ಆಯಾಮಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಗೌರವಿಸಿದ್ದಕ್ಕಾಗಿ ಅವರು ಸ್ಕೋಪನ್ನು ಶ್ಲಾಘಿಸಿದರು. ಇದು ಪ್ರಗತಿ ಮತ್ತು ಅಭಿವೃದ್ಧಿಯತ್ತ ಸಮಗ್ರ ವಿಧಾನವನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ನಂತರ, ಸಾರ್ವಜನಿಕ ವಲಯವು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಒಳಗೊಳ್ಳುವಿಕೆ/ ಸೇರ್ಪಡೆಗೆ ಪ್ರಬಲ ಸಾಧನವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಸಾರ್ವಜನಿಕ ವಲಯದ ಉದ್ಯಮಗಳು ಕೈಗಾರಿಕೀಕರಣ, ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಉನ್ನತಿ ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಗೆ ಅಡಿಪಾಯ ಹಾಕಿವೆ. ಕಾಲಾನುಕ್ರಮದಲ್ಲಿ, ಈ ಉದ್ಯಮಗಳು ವಿಕಸನಗೊಂಡಿವೆ ಮತ್ತು ಬದಲಾಗಿವೆ. ಸಾರ್ವಜನಿಕ ವಲಯದ ಉದ್ಯಮಗಳಿಂದ ಸರ್ಕಾರ ಮತ್ತು ಸಮಾಜದ ನಿರೀಕ್ಷೆಗಳು ಸಹ ಬದಲಾಗಿವೆ. ಈ ಎಲ್ಲಾ ಬದಲಾವಣೆಗಳ ನಡುವೆಯೂ, ಸಾರ್ವಜನಿಕ ವಲಯದ ಉದ್ಯಮಗಳು ತಮ್ಮ ಕಾರ್ಯಕ್ಷಮತೆಯ ಮೂಲಕ ಆರ್ಥಿಕ ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
ಆರ್ಥಿಕ ಮತ್ತು ಹಣಕಾಸು ಕೊಡುಗೆಗಳ ಜೊತೆಗೆ, ಸಾರ್ವಜನಿಕ ವಲಯದ ಉದ್ಯಮಗಳು ಸಮತೋಲಿತ ಮತ್ತು ಸಮಗ್ರ ಬೆಳವಣಿಗೆಗೆ ಆದ್ಯತೆ ನೀಡಿವೆ ಎಂದೂ ರಾಷ್ಟ್ರಪತಿಗಳು ಹೇಳಿದರು, ಅವು ರಾಷ್ಟ್ರೀಯ ಗುರಿಗಳನ್ನು ಅತ್ಯುನ್ನತವಾಗಿ ಸ್ಥಾನದಲ್ಲಿರಿಸಿವೆ. ಅವುಗಳ ಪಾತ್ರ ಮತ್ತು ಕೊಡುಗೆಯನ್ನು ನೋಡುವಾಗ, ಸಾರ್ವಜನಿಕ ವಲಯದ ಉದ್ಯಮಗಳು ಬೆಳವಣಿಗೆಯ ವೇಗವರ್ಧಕಗಳು ಮತ್ತು ರಾಷ್ಟ್ರ ಹಾಗು ಅದರ ಜನರಿಗೆ ಸಮೃದ್ಧಿಯ ಆಧಾರಸ್ತಂಭಗಳಾಗಿವೆ ಎಂದು ಹೇಳುವುದು ಸೂಕ್ತವಾಗಿದೆ. ಈ ಉದ್ಯಮಗಳು ಆಡಳಿತ ಮತ್ತು ಪಾರದರ್ಶಕತೆಯ ಅನೇಕ ಉತ್ತಮ ಮಾದರಿಗಳು ಮತ್ತು ಉದಾಹರಣೆಗಳನ್ನು ಸಹ ಪ್ರಸ್ತುತಪಡಿಸಿವೆ ಎಂದೂ ಅವರು ನುಡಿದರು.

ಆತ್ಮನಿರ್ಭರ ಭಾರತ ಮತ್ತು 'ಮೇಕ್ ಇನ್ ಇಂಡಿಯಾ' ನಂತಹ ರಾಷ್ಟ್ರೀಯ ಅಭಿಯಾನಗಳಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (ಸಿ.ಪಿ.ಎಸ್.ಇ.) ಪರಿಣಾಮಕಾರಿ ಪಾತ್ರ ವಹಿಸುತ್ತಿವೆ ಎಂದು ರಾಷ್ಟ್ರಪತಿಗಳು ಸಂತೋಷ ವ್ಯಕ್ತಪಡಿಸಿದರು. ಆಪರೇಷನ್ ಸಿಂಧೂರ ಸಮಯದಲ್ಲಿ, ಸ್ಥಳೀಯ ವಾಯು ರಕ್ಷಣಾ ನಿಯಂತ್ರಣ ಮತ್ತು ವರದಿ ವ್ಯವಸ್ಥೆ - ಆಕಾಶತೀರ್ ತನ್ನ ದೋಷಾತೀತ ಸಾಮರ್ಥ್ಯವನ್ನು ಪ್ರದರ್ಶಿಸಿತು ಎಂದು ಅವರು ಹೇಳಿದರು. ಈ ವ್ಯವಸ್ಥೆಯ ರಚನೆಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಪಾತ್ರವಹಿಸಿವೆ ಎಂಬುದರತ್ತಲೂ ಅವರು ಬೆಟ್ಟು ಮಾಡಿದರು. ಇದು ಸಾರ್ವಜನಿಕ ವಲಯದ ಭ್ರಾತೃತ್ವಕ್ಕೆ ವಿಶೇಷ ಹೆಮ್ಮೆಯ ವಿಷಯವಾಗಿದೆ ಎಂದೂ ಅವರು ಹೇಳಿದರು.
ರಾಷ್ಟ್ರೀಯ ಭದ್ರತೆಯಲ್ಲಿ ಸ್ವಾವಲಂಬಿ ನಾವೀನ್ಯತೆ ಮತ್ತು ಭಾರತದ ಬೆಳೆಯುತ್ತಿರುವ ತಾಂತ್ರಿಕ ಸ್ವಾವಲಂಬನೆಯಲ್ಲಿ ಸಾರ್ವಜನಿಕ ಉದ್ಯಮಗಳ ಕೊಡುಗೆ ಸಾಬೀತಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಸಾರ್ವಜನಿಕ ವಲಯದ ಉದ್ಯಮಗಳು ಕೃಷಿ, ಗಣಿಗಾರಿಕೆ ಮತ್ತು ಪರಿಶೋಧನೆ, ಉತ್ಪಾದನೆ, ಸಂಸ್ಕರಣೆ ಮತ್ತು ಉತ್ಪಾದನೆ ಹಾಗು ಸೇವೆಗಳ ಪ್ರಮುಖ ಕ್ಷೇತ್ರಗಳಲ್ಲಿ ಬಹಳ ಮುಖ್ಯ ಪಾತ್ರ ವಹಿಸಿವೆ. ದೇಶ ಎದುರಿಸುತ್ತಿರುವ ಸವಾಲುಗಳ ವಿರುದ್ಧ ಹೋರಾಡುವಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು ಸದಾ ಪ್ರಮುಖ ಪಾತ್ರ ವಹಿಸಿವೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ರಾಷ್ಟ್ರೀಯ ಗುರಿಯನ್ನು ಸಾಧಿಸುವಲ್ಲಿ ಸಿಪಿಎಸ್ಇಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು. ಸಿಪಿಎಸ್ಇಗಳು ತಮ್ಮ ನಿರ್ಧಾರಗಳು ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾಗಬೇಕು, ಕೈಗೊಳ್ಳುವ ಕ್ರಮಗಳು ನೀತಿಶಾಸ್ತ್ರವನ್ನು ಆಧರಿಸಿರಬೇಕು ಮತ್ತು ಚಿಂತನೆಯು ಸೂಕ್ಷ್ಮತೆ ಮತ್ತು ಸಾಮಾಜಿಕ ಸೇವೆಯಿಂದ ಪ್ರೇರಿತವಾಗಬೇಕು ಎಂದು ನಿರೀಕ್ಷಿಸಲಾಗುತ್ತದೆ ಎಂದೂ ಅವರು ಹೇಳಿದರು.

ಸಾರ್ವಜನಿಕ ಉದ್ಯಮಗಳ ಸ್ಥಾಯಿ ಸಮ್ಮೇಳನ (ಸ್ಟ್ಯಾಂಡಿಂಗ್ ಕಮಿಟಿ ಆಫ್ ಪಬ್ಲಿಕ್ ಎಂಟರ್ಪ್ರೈಸಸ್- SCOPE) ಸ್ಥಾಪಿಸಿದ ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿಗಳು, ಸಾರ್ವಜನಿಕ ವಲಯದ ಉದ್ಯಮಗಳ ಗಮನಾರ್ಹ ಸಾಧನೆಗಳು ಮತ್ತು ಕೊಡುಗೆಗಳನ್ನು ಸ್ಮರಿಸುವ ಪ್ರಯತ್ನವಾಗಿದೆ.
ರಾಷ್ಟ್ರಪತಿಗಳ ಭಾಷಣವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ -
*****
(Release ID: 2161927)
Visitor Counter : 14