ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು, ಭಾರತದ ಮೊದಲ ಎಂಡ್-ಟು-ಎಂಡ್ ಒಸ್ಯಾಟ್ (OSAT) ಪೈಲಟ್ ಲೈನ್ ಸೌಲಭ್ಯ ಗುಜರಾತನ ಸನಂದನಲ್ಲಿ ಪ್ರಾರಂಭ
2032ರ ವೇಳೆಗೆ ಪ್ರಪಂಚವು 1 ಮಿಲಿಯನ್ ಸೆಮಿಕಂಡಕ್ಟರ್ ಪ್ರತಿಭಾವಂತರ ಕೊರತೆಯನ್ನು ಎದುರಿಸಲಿದೆ; ಭಾರತವು ಆ ಅಂತರವನ್ನು ತುಂಬಲು ಮತ್ತು ಸೆಮಿಕಂಡಕ್ಟರ್ ಪ್ರತಿಭೆಯನ್ನು ಮುನ್ನಡೆಸಲು ಸಿದ್ಧವಾಗಿದೆ: ಶ್ರೀ ಅಶ್ವಿನಿ ವೈಷ್ಣವ್
ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಕೇಂದ್ರವನ್ನಾಗಿ ಮಾಡುವಲ್ಲಿ ಗುಜರಾತ್ ಪ್ರಮುಖ ಪಾತ್ರ ವಹಿಸಲಿದೆ: ಶ್ರೀ ಅಶ್ವಿನಿ ವೈಷ್ಣವ್
ಸರ್ಕಾರವು ಅತ್ಯಾಧುನಿಕ ಪರಿಕರಗಳೊಂದಿಗೆ ವಿಶ್ವವಿದ್ಯಾಲಯಗಳನ್ನು ಸಬಲೀಕರಣಗೊಳಿಸಿದೆ, ಎಸ್.ಸಿ.ಎಲ್. ಮೊಹಾಲಿಯಲ್ಲಿ 20 ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಚಿಪ್ ಗಳು ಲಭ್ಯವಾಗಿವೆ: ಕೇಂದ್ರ ಸಚಿವರಾದ ವೈಷ್ಣವ್
Posted On:
28 AUG 2025 7:56PM by PIB Bengaluru
ಗುಜರಾತನ ಸನಂದನಲ್ಲಿ ಭಾರತದ ಮೊದಲ ಎಂಡ್-ಟು-ಎಂಡ್ ಸೆಮಿಕಂಡಕ್ಟರ್ ಒಸ್ಯಾಟ್ ಪೈಲಟ್ ಲೈನ್ ಸೌಲಭ್ಯವಾದ ಸಿ.ಜಿ. ಪವರ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಇಂದು ಉದ್ಘಾಟಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಈ ಸಮಾರಂಭವು ಐತಿಹಾಸಿಕ ಆರಂಭವನ್ನು ಸೂಚಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪೈಲಟ್ ಮಾರ್ಗದ ಉದ್ಘಾಟನೆಯು ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ತಳಮಟ್ಟದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಭಾರತದ ಕನಸನ್ನು ಈಡೇರಿಸುವಲ್ಲಿ ನಿರ್ಣಾಯಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಮತ್ತು ಗುಜರಾತ್ ಈ ರೂಪಾಂತರದಲ್ಲಿ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು. ಶ್ರೀ ವೈಷ್ಣವ್ ಒಸ್ಯಾಟ್ ಪೈಲಟ್ ಲೈನ್ನ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು, ಇಲ್ಲಿ ತಯಾರಾದ ಚಿಪ್ ಗಳನ್ನು ಗ್ರಾಹಕರ ಅನುಕೂಲತೆಗನುಗುಣವಾಗಿ ಬಳಸಲಾಗುತ್ತದೆ ಎಂಬುದರತ್ತ ಅವರು ಬೆಟ್ಟು ಮಾಡಿದರು. ಈ ಚಿಪ್ ಗಳನ್ನು ಅನುಮೋದಿಸಿದ ನಂತರ, ವಾಣಿಜ್ಯ ಸ್ಥಾವರಗಳು ಮಾನ್ಯತೆ ಪಡೆದ ಅರ್ಹ ಉತ್ಪನ್ನಗಳ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸುವುದು ಹೆಚ್ಚು ಸುಲಭವಾಗುತ್ತದೆ. ಇಲ್ಲಿಯವರೆಗೆ ಹತ್ತು ಯೋಜನೆಗಳನ್ನು ಅನುಮೋದಿಸಿರುವ ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಸಾಧಿಸಿದ ಅತ್ಯಂತ ಮಹತ್ವದ ಮೈಲಿಗಲ್ಲುಗಳಲ್ಲಿ ಇಂದಿನ ಉದ್ಘಾಟನೆಯು ಒಂದಾಗಿದೆ ಎಂದು ಅವರು ಒತ್ತಿ ಹೇಳಿದರು.
ಬಲವಾದ ಪ್ರತಿಭಾ ನೆಲೆಯನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಎತ್ತಿ ತೋರಿಸಿದ ಸಚಿವರು, ಭಾರತ ಸೆಮಿಕಂಡಕ್ಟರ್ ಮಿಷನ್ ನ ಪ್ರಮುಖ ಉದ್ದೇಶಗಳಲ್ಲಿ ಒಂದು ಕೌಶಲ್ಯಪೂರ್ಣ ವೃತ್ತಿಪರರ ಜಾಗತಿಕ ಪೈಪ್ಲೈನ್ ರಚಿಸುವುದಾಗಿದೆ ಎಂದು ಹೇಳಿದರು. 2032 ರ ವೇಳೆಗೆ, ಪ್ರಪಂಚವು ಒಂದು ಮಿಲಿಯನ್ ಸೆಮಿಕಂಡಕ್ಟರ್ ವೃತ್ತಿಪರರ ಕೊರತೆಯನ್ನು ಎದುರಿಸಲಿದೆ ಎಂದು ಅಂದಾಜಿಸಲಾಗಿದೆ ಮತ್ತು ಈ ಅಂತರದ ಗಮನಾರ್ಹ ಭಾಗವನ್ನು ತುಂಬಲು ಭಾರತಕ್ಕೆ ಅವಕಾಶವಿದೆ.
ಈ ನಿಟ್ಟಿನಲ್ಲಿ, ಸರ್ಕಾರವು 270 ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆ ಹೊಂದಿದ್ದು, ಅವುಗಳನ್ನು ಅತ್ಯಾಧುನಿಕ ಸೆಮಿಕಂಡಕ್ಟರ್ ವಿನ್ಯಾಸ ಪರಿಕರಗಳೊಂದಿಗೆ ಸಜ್ಜುಗೊಳಿಸಿದೆ. 2025 ರಲ್ಲಿಯೇ ಈ ಉಪಕರಣಗಳು 1.2 ಕೋಟಿಗೂ ಹೆಚ್ಚು ಬಳಕೆಗಳನ್ನು ದಾಖಲಿಸಿವೆ. ನೇರ ಪರಿಣಾಮವಾಗಿ, 17 ಸಂಸ್ಥೆಗಳು ವಿನ್ಯಾಸಗೊಳಿಸಿದ 20 ಚಿಪ್ ಗಳನ್ನು ಈಗಾಗಲೇ ಮೊಹಾಲಿಯ ಸೆಮಿ-ಕಂಡಕ್ಟರ್ ಲ್ಯಾಬೋರೇಟರಿಯಲ್ಲಿ (ಎಸ್.ಸಿ.ಎಲ್.) ಯಶಸ್ವಿಯಾಗಿ ತಯಾರಿಸಲಾಗಿದೆ.
ವಿಶ್ವದ ಕೆಲವೇ ದೇಶಗಳು ವಿದ್ಯಾರ್ಥಿಗಳಿಗೆ ಇಂತಹ ಸುಧಾರಿತ ಪರಿಕರಗಳಿಗೆ ಪ್ರವೇಶವನ್ನು ಒದಗಿಸುತ್ತವೆ ಎಂದು ಸಚಿವರು ಹೇಳಿದರು. ಈ ಉಪಕ್ರಮವು ಭಾರತದ ಯುವಜನರನ್ನು ಸಬಲೀಕರಣಗೊಳಿಸುತ್ತದೆ, ತಾಂತ್ರಿಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರಾಷ್ಟ್ರವನ್ನು ಅರೆವಾಹಕ ಪ್ರತಿಭೆಗಳ ಜಾಗತಿಕ ಕೇಂದ್ರವಾಗಿ ರೂಪಿಸುತ್ತದೆ ಎಂದು ಅವರು ಹೇಳಿದರು. ಗುಜರಾತ್ ನಲ್ಲಿ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್ ಸರ್ಕಾರ ಮತ್ತು ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರ ಬಲವಾದ ಬೆಂಬಲವನ್ನು ಅವರು ಶ್ಲಾಘಿಸಿದರು.

ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಈ ಉಪಕ್ರಮವನ್ನು ಶ್ಲಾಘಿಸಿದರಲ್ಲದೆ, ದೇಶವನ್ನು ಅರೆವಾಹಕ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ನಾಯಕನನ್ನಾಗಿ ಮಾಡುವಲ್ಲಿ ಇದರ ಪಾತ್ರವನ್ನು ಎತ್ತಿ ತೋರಿಸಿದರು. ರಾಜ್ಯ ಕೈಗಾರಿಕಾ ಸಚಿವ ಶ್ರೀ ಬಲ್ವಂತ್ ಸಿಂಗ್ ರಜಪೂತ್. ಶಾಸಕ ಶ್ರೀ ಕಾನ್ಹುಭಾಯ್ ಪಟೇಲ್ ಮತ್ತು ಎಂ.ಇ.ಐ.ಟಿ.ವೈ. ಯ ಹಿರಿಯ ಅಧಿಕಾರಿಗಳು ಹಾಗು ಸಿ.ಜಿ. ಸೆಮಿಯ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಿ.ಜಿ. ಸೆಮಿ ಒ.ಎಸ್.ಎ.ಟಿ. ಸೌಲಭ್ಯದ ಬಗ್ಗೆ
ಗುಜರಾತ್ ನ ಸನಂದನಲ್ಲಿರುವ ಸಿ.ಜಿ. ಸೆಮಿ ಸೌಲಭ್ಯವು ಭಾರತದ ಮೊದಲ ಪೂರ್ಣ ಪ್ರಮಾಣದ ಹೊರಗುತ್ತಿಗೆ ಸೆಮಿಕಂಡಕ್ಟರ್ ಜೋಡಣೆ (ಅಸೆಂಬ್ಲಿ) ಮತ್ತು ಪರೀಕ್ಷಾ (ಒಸ್ಯಾಟ್) ಸ್ಥಾವರಗಳಲ್ಲಿ ಒಂದಾಗಿದೆ. ಇದು ಸಾಂಪ್ರದಾಯಿಕ ಮತ್ತು ಮುಂದುವರಿದ ಪ್ಯಾಕೇಜಿಂಗ್ ತಂತ್ರಜ್ಞಾನಗಳನ್ನು ಒಳಗೊಂಡ ಚಿಪ್ ಜೋಡಣೆ, ಪ್ಯಾಕೇಜಿಂಗ್, ಪರೀಕ್ಷೆ ಮತ್ತು ಪರೀಕ್ಷಾ ನಂತರದ ಸೇವೆಗಳಿಗೆ ಸಮಗ್ರ ಪರಿಹಾರಗಳನ್ನು ಒದಗಿಸುತ್ತದೆ. ಇದು ಭಾರತದ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸುವಾಗ ಸ್ವಾವಲಂಬಿಯಾಗುವ ದೇಶದ ಗುರಿಯನ್ನು ಬೆಂಬಲಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಂಬಲದೊಂದಿಗೆ, ಸಿ.ಜಿ. ಸೆಮಿ ಗುಜರಾತ್ ನ ಸನಂದನಲ್ಲಿ ಎರಡು ಅತ್ಯಾಧುನಿಕ ಸೌಲಭ್ಯಗಳನ್ನು (ಜಿ 1 ಮತ್ತು ಜಿ 2) ಅಭಿವೃದ್ಧಿಪಡಿಸಲು ಐದು ವರ್ಷಗಳಲ್ಲಿ ₹7,600 ಕೋಟಿ (~870 ಮಿಲಿಯನ್ ಅಮೆರಿಕನ್ ಡಾಲರ್ ) ಹೂಡಿಕೆ ಮಾಡುತ್ತಿದೆ.
ಇಂದು ಉದ್ಘಾಟನೆಗೊಂಡ ಜಿ1 ಸೌಲಭ್ಯವು ದಿನಕ್ಕೆ ಸುಮಾರು 0.5 ಮಿಲಿಯನ್ ಯೂನಿಟ್ ಗಳ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಇದು ಸಂಪೂರ್ಣ ಅಂದರೆ ಎಂಡ್-ಟು-ಎಂಡ್ ಚಿಪ್ ಜೋಡಣೆ, ಪ್ಯಾಕೇಜಿಂಗ್, ಪರೀಕ್ಷೆ ಮತ್ತು ಪರೀಕ್ಷಾ ನಂತರದ ಸೇವೆಗಳನ್ನು ನಿರ್ವಹಿಸಲು ಸಜ್ಜುಗೊಂಡಿದೆ. ಈ ಸೌಲಭ್ಯವು ಹೆಚ್ಚಿನ ಫಲಿತಾಂಶ ನೀಡುವ ಉಪಕರಣಗಳು, ಲೆವೆಲ್ 1 ಯಾಂತ್ರೀಕೃತಗೊಂಡ ಮತ್ತು ಪತ್ತೆಹಚ್ಚುವಿಕೆಗಾಗಿ ಅತ್ಯಾಧುನಿಕ ಉತ್ಪಾದನಾ ಕಾರ್ಯಗತಗೊಳಿಸುವ ವ್ಯವಸ್ಥೆ (ಎಂ.ಇ.ಎಸ್.) ಮತ್ತು ವಿಶ್ವಾಸಾರ್ಹತೆ ಹಾಗೂ ವೈಫಲ್ಯ ವಿಶ್ಲೇಷಣೆಗಾಗಿ ಆಂತರಿಕ ಪ್ರಯೋಗಾಲಯಗಳನ್ನು ಒಳಗೊಂಡಿದೆ. ಇದು ಪ್ರಸ್ತುತ ಐ.ಎಸ್.ಒ 9001 ಮತ್ತು ಐ.ಎ.ಟಿ.ಎಫ್. 16949 ಪ್ರಮಾಣೀಕರಣಕ್ಕೆ ಒಳಗಾಗುತ್ತಿದೆ. ಉದ್ಘಾಟನೆಯ ನಂತರ ವಿವಿಧ ಪ್ಯಾಕೇಜ್ ಗಳಲ್ಲಿ ಗ್ರಾಹಕರ ಅವಶ್ಯಕತೆಗಳಿಗನುಸಾರವಾಗಿ ಅವರನ್ನು ಹುಡುಕುವ ಅರ್ಹತಾ ರನ್ ಗಳು ಪ್ರಾರಂಭವಾಗುತ್ತವೆ. ಐ.ಎಸ್.ಎಂ. ಗೆ ಬದ್ಧವಾಗಿ ಸಿ.ಜಿ. ಸೆಮಿ 2026 ರ ಕ್ಯಾಲೆಂಡರ್ ವರ್ಷದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವ ಹಾದಿಯಲ್ಲಿದೆ.
ಜಿ 1 ನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಜಿ 2 ಸೌಲಭ್ಯವು ನಿರ್ಮಾಣ ಹಂತದಲ್ಲಿದೆ ಮತ್ತು 2026 ರ ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಒಮ್ಮೆ ಕಾರ್ಯಾರಂಭ ಮಾಡಿದ ನಂತರ, ಜಿ2 ದಿನಕ್ಕೆ ಸುಮಾರು 14.5 ಮಿಲಿಯನ್ ಯೂನಿಟ್ ಗಳ ಸಾಮರ್ಥ್ಯವನ್ನು ತಲುಪುತ್ತದೆ. ಒಟ್ಟಾಗಿ, ಎರಡು ಸೌಲಭ್ಯಗಳು ಮುಂಬರುವ ವರ್ಷಗಳಲ್ಲಿ 5,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಜಿ ಪವರ್ನ ಅಧ್ಯಕ್ಷರಾದ ಶ್ರೀ ವೆಲ್ಲಯನ್ ಸುಬ್ಬಯ್ಯ, “ಈ ಸೌಲಭ್ಯವು ನನಗೆ ಅಥವಾ ಸಿಜಿ ಸೆಮಿಗೆ ಒಂದು ಮೈಲಿಗಲ್ಲುಗಿಂತ ಹೆಚ್ಚಿನದು. ಇದು ರಾಷ್ಟ್ರೀಯ ಮೈಲಿಗಲ್ಲು. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳು ನಿಗದಿಪಡಿಸಿದ ದೃಷ್ಟಿಕೋನವನ್ನು ಸಾಧಿಸಲು ಸರ್ಕಾರ ಮತ್ತು ಕೈಗಾರಿಕೆಗಳು ದೃಢನಿಶ್ಚಯ, ಬಂಡವಾಳ ಮತ್ತು ಪ್ರಮಾಣದೊಂದಿಗೆ ಹೇಗೆ ಒಗ್ಗೂಡಬಹುದು ಎಂಬುದನ್ನು ಇದು ತೋರಿಸುತ್ತದೆ. ನಾವು ಇಲ್ಲಿ ಮಾಡುವ ಪ್ರತಿಯೊಂದು ಚಿಪ್ ಭಾರತದ ತಾಂತ್ರಿಕ ಸಾರ್ವಭೌಮತ್ವದತ್ತ ಒಂದು ಹೆಜ್ಜೆಯಾಗಿದೆ.” ಎಂದರು.
ಒಸ್ಯಾಟ್ ನಿರ್ಮಿಸಲು ಮತ್ತು ನಿರ್ವಹಿಸಲು, ಸೆಮಿಕಂಡಕ್ಟರಗಳಲ್ಲಿ 1,000 ವರ್ಷಗಳಿಗೂ ಹೆಚ್ಚು ಸಂಯೋಜಿತ ಅನುಭವ ಹೊಂದಿರುವ ಉದ್ಯಮದ ಅನುಭವಿಗಳ ತಂಡವನ್ನು ಸಿಜಿ ಸೆಮಿ ಒಟ್ಟುಗೂಡಿಸಿದೆ. ಕಂಪನಿಯು ಭಾರತೀಯ ಎಂಜಿನಿಯರಗಳು, ನಿರ್ವಾಹಕರು ಮತ್ತು ತಂತ್ರಜ್ಞರನ್ನು ಮೂರು ತಿಂಗಳ ಪ್ರಾಯೋಗಿಕ ತರಬೇತಿಗಾಗಿ ಮಲೇಷ್ಯಾಕ್ಕೆ ಕಳುಹಿಸುವ ಮೂಲಕ ಕಾರ್ಮಿಕ ಶಕ್ತಿಯ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ – ಇದು ವೇಗವಾದ ಕಲಿಕೆಯ ಮತ್ತು ಹೆಚ್ಚಿನ ಪ್ರಮಾಣದ ಕಾರ್ಯಾಚರಣೆಗಳಿಗೆ ಸಿದ್ಧತೆಯನ್ನು ಖಚಿತಪಡಿಸುತ್ತದೆ.
ಈ ವ್ಯವಸ್ಥೆಯ ಆರಂಭದೊಂದಿಗೆ , ಭಾರತದ ಆತ್ಮನಿರ್ಭರ ಭಾರತ್ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಮತ್ತು ರಾಷ್ಟ್ರದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಿಜಿ ಸೆಮಿ ಪ್ರಮುಖ ಪಾತ್ರ ವಹಿಸಲು ಸಿದ್ಧವಾಗಿದೆ.
ಸಿ.ಜಿ. ಸೆಮಿ ಬಗ್ಗೆ
ಸಿ.ಜಿ. ಸೆಮಿ ಎಂಬುದು ಸಿ.ಜಿ. ಪವರ್ ಮತ್ತು ಇಂಡಸ್ಟ್ರಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ (ಮುರುಗಪ್ಪ ಗ್ರೂಪ್), ರೆನೆಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ (ಜಾಗತಿಕ ಸೆಮಿಕಂಡಕ್ಟರ್ ಸಂಸ್ಥೆ) ಮತ್ತು ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್ (ಥೈಲ್ಯಾಂಡ್ ಮೂಲದ ಒಸ್ಯಾಟ್ ಹಾಗು ಇ.ಎಂ.ಎಸ್. ಸಂಸ್ಥೆ) ನಡುವಿನ ಜಂಟಿ ಉದ್ಯಮವಾಗಿದೆ. ಗುಜರಾತ್ನ ಸನಂದನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಿ.ಜಿ. ಸೆಮಿ, ಸೆಮಿಕಂಡಕ್ಟರ್ ಜೋಡಣೆ ಮತ್ತು ಪರೀಕ್ಷೆಗೆ ಸಮಗ್ರ ಅಂದರೆ ಗ್ರಾಹಕರು ಬರೇ ಒಂದು ಹಂತದಲ್ಲಿ/ ಕೀಲಿಯಲ್ಲಿ ಬದಲಿಸಿ ಬಳಸಬಹುದಾದ ಪರಿಹಾರಗಳನ್ನು ಒದಗಿಸುತ್ತದೆ, ಇದು ಎಸ್.ಒ.ಐ.ಸಿ, ಕ್ಯೂ.ಎಫ್.ಪಿ., ಕ್ಯೂ.ಎಫ್.ಎನ್., ಬಿ.ಜಿ.ಎ., ಎಫ್.ಸಿ.ಕ್ಯು.ಎಫ್.ಎನ್., ಮತ್ತು ಎಫ್.ಸಿ.ಬಿ.ಜಿ.ಎ. ನಂತಹ ಮುಂದುವರಿದ ಮತ್ತು ಪರಂಪರೆ ಪ್ಯಾಕೇಜ್ ಗಳನ್ನು ಒಳಗೊಂಡಿದೆ. ಕಂಪನಿಯು ಆಟೋಮೋಟಿವ್, ರಕ್ಷಣಾ, ಮೂಲಸೌಕರ್ಯ ಮತ್ತು ಐ.ಒ.ಟಿ ಯಂತಹ ಕೈಗಾರಿಕೆಗಳಲ್ಲಿ ವೈವಿಧ್ಯಮಯ ಅಪ್ಲಿಕೇಶನಗಳನ್ನು ಪೂರೈಸುತ್ತದೆ.
*****
(Release ID: 2161703)
Visitor Counter : 21