ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಹನಸಲ್ಪುರದಲ್ಲಿ ಗ್ರೀನ್ ಮೊಬಿಲಿಟಿ ಉಪಕ್ರಮಗಳನ್ನು ಉದ್ಘಾಟಿಸಿದರು


ಸುಜುಕಿಯ ಮೊದಲ ಮೇಡ್-ಇನ್-ಇಂಡಿಯಾ ಜಾಗತಿಕ ಕಾರ್ಯತಂತ್ರದ ಬ್ಯಾಟರಿ ಎಲೆಕ್ಟ್ರಿಕ್ ವಾಹನ "ಇ ವಿಟಾರಾ"ವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು ಮತ್ತು ಹಸಿರು ನಿಶಾನೆ ತೋರಿದರು

ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್, ಭಾರತದಲ್ಲಿ ತಯಾರಾದ ಎಲೆಕ್ಟ್ರಿಕ್ ವಾಹನಗಳು ಇಂದಿನಿಂದ 100 ದೇಶಗಳಿಗೆ ರಫ್ತಾಗುತ್ತವೆ, ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ತಯಾರಿಕೆಯೂ ಇಂದಿನಿಂದ ಪ್ರಾರಂಭವಾಗಲಿದೆ: ಪ್ರಧಾನಮಂತ್ರಿ

ಭಾರತವು ಪ್ರಜಾಪ್ರಭುತ್ವದ ಶಕ್ತಿ, ಜನಸಂಖ್ಯೆಯ ಪ್ರಯೋಜನ ಮತ್ತು ಕೌಶಲ್ಯಪೂರ್ಣ ಕಾರ್ಯಪಡೆಯ ದೊಡ್ಡ ಗುಂಪನ್ನು ಹೊಂದಿದೆ, ಇದು ಪ್ರತಿಯೊಬ್ಬ ಪಾಲುದಾರರಿಗೂ ಗೆಲುವಿನ ಸನ್ನಿವೇಶವಾಗಿದೆ: ಪ್ರಧಾನಮಂತ್ರಿ

ಮೇಡ್ ಇನ್ ಇಂಡಿಯಾ ಎಂದು ಹೇಳುವ ಇವಿಗಳನ್ನು ಜಗತ್ತು ಚಾಲನೆ ಮಾಡುತ್ತದೆ!: ಪ್ರಧಾನಮಂತ್ರಿ

ಮೇಕ್ ಇನ್ ಇಂಡಿಯಾ ಉಪಕ್ರಮವು ಜಾಗತಿಕ ಮತ್ತು ದೇಶೀಯ ತಯಾರಕರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ: ಪ್ರಧಾನಮಂತ್ರಿ

ಮುಂಬರುವ ದಿನಗಳಲ್ಲಿ, ಭವಿಷ್ಯದ ಕೈಗಾರಿಕೆಗಳ ಮೇಲೆ ಗಮನ ಹರಿಸಲಾಗುವುದು: ಪ್ರಧಾನಮಂತ್ರಿ

ಸೆಮಿಕಂಡಕ್ಟರ್ ವಲಯದಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿದೆ, ದೇಶದಲ್ಲಿ 6 ಸ್ಥಾವರಗಳನ್ನು ಸ್ಥಾಪಿಸಲಾಗುವುದು: ಪ್ರಧಾನಮಂತ್ರಿ

Posted On: 26 AUG 2025 1:23PM by PIB Bengaluru

ಹಸಿರು ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರರಾಗುವತ್ತ ದೊಡ್ಡ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಹನಸಲ್ಪುರದಲ್ಲಿ ಗ್ರೀನ್ ಮೊಬಿಲಿಟಿ ಉಪಕ್ರಮಗಳನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಗಣೇಶೋತ್ಸವದ ಉತ್ಸಾಹದ ನಡುವೆ, ಭಾರತದ 'ಮೇಕ್ ಇನ್ ಇಂಡಿಯಾ' ಪ್ರಯಾಣಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಗುತ್ತಿದೆ ಎಂದು ಹೇಳಿದರು. "ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್" ಎಂಬ ಹಂಚಿಕೆಯ ಗುರಿಯತ್ತ ಇದು ಮಹತ್ವದ ಮುನ್ನಡೆಯಾಗಿದೆ ಎಂದು ಅವರು ಹೇಳಿದರು. ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳನ್ನು ಇಂದಿನಿಂದ 100 ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಶ್ರೀ ಮೋದಿ ಅವರು ಹೇಳಿದರು. ದೇಶದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನೆಯನ್ನು ಪ್ರಾರಂಭಿಸುವುದಾಗಿ ಅವರು ಘೋಷಿಸಿದರು. ಭಾರತ ಮತ್ತು ಜಪಾನ್ ನಡುವಿನ ಸ್ನೇಹಕ್ಕೆ ಈ ದಿನವು ಹೊಸ ಆಯಾಮವನ್ನು ನೀಡುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ನಾಗರಿಕರು, ಜಪಾನ್ ಮತ್ತು ಸುಜುಕಿ ಮೋಟಾರ್ ಕಾರ್ಪೊರೇಷನ್ ಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

ಭಾರತದ ಯಶೋಗಾಥೆಯ ಬೀಜಗಳನ್ನು 12-13 ವರ್ಷಗಳ ಹಿಂದೆ ಬಿತ್ತಲಾಗಿತ್ತು ಎಂಬುದನ್ನು ನೆನಪಿಸಿಕೊಂಡ ಶ್ರೀ ಮೋದಿ, 2012 ರಲ್ಲಿ, ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಹನಸಲ್ಪುರದಲ್ಲಿ ಮಾರುತಿ ಸುಜುಕಿಗೆ ಭೂಮಿ ಮಂಜೂರು ಮಾಡಲಾಯಿತು ಎಂದು ಹೇಳಿದರು. ಆ ಸಮಯದಲ್ಲಿಯೂ ಸಹ, ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾದ ದೃಷ್ಟಿಕೋನವಿತ್ತು ಎಂದು ಅವರು ಒತ್ತಿ ಹೇಳಿದರು. ಆ ಆರಂಭಿಕ ಪ್ರಯತ್ನಗಳು ಈಗ ರಾಷ್ಟ್ರದ ಪ್ರಸ್ತುತ ಸಂಕಲ್ಪಗಳನ್ನು ಈಡೇರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದರು.

ದಿವಂಗತ ಶ್ರೀ ಒಸಾಮು ಸುಜುಕಿ ಅವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ ಪ್ರಧಾನಮಂತ್ರಿ, ಭಾರತ ಸರ್ಕಾರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಹೇಳಿದರು. ಮಾರುತಿ ಸುಜುಕಿ ಇಂಡಿಯಾದ ಬಗ್ಗೆ ಶ್ರೀ ಒಸಾಮು ಸುಜುಕಿ ಹೊಂದಿದ್ದ ದೂರದೃಷ್ಟಿಯ ಅಗಾಧತೆಯನ್ನು ನೋಡಿ ಸಂತೋಷವಾಗಿದೆ ಎಂದು ಹೇಳಿದರು.

"ಭಾರತವು ಬಲವಾದ ಪ್ರಜಾಪ್ರಭುತ್ವ ಮತ್ತು ಜನಸಂಖ್ಯೆಯ ಪ್ರಯೋಜನವನ್ನು ಹೊಂದಿದೆ; ಭಾರತವು ಕೌಶಲ್ಯಪೂರ್ಣ ಕಾರ್ಯಪಡೆಯ ಬೃಹತ್ ಗುಂಪನ್ನು ಹೊಂದಿದೆ, ಇದು ಪ್ರತಿಯೊಬ್ಬ ಪಾಲುದಾರರಿಗೂ ಗೆಲುವಿನ ಸನ್ನಿವೇಶವನ್ನು ಸೃಷ್ಟಿಸುತ್ತದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಸುಜುಕಿ ಜಪಾನ್ ಭಾರತದಲ್ಲಿ ಉತ್ಪಾದಿಸುತ್ತಿದೆ ಮತ್ತು ಇಲ್ಲಿ ಉತ್ಪಾದಿಸುವ ವಾಹನಗಳನ್ನು ಜಪಾನ್ ಗೆ ಮರಳಿ ರಫ್ತು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಇದು ಭಾರತ-ಜಪಾನ್ ಸಂಬಂಧಗಳ ಬಲವನ್ನು ಮಾತ್ರವಲ್ಲದೆ, ಭಾರತದಲ್ಲಿ ಜಾಗತಿಕ ಕಂಪನಿಗಳ ಹೆಚ್ಚುತ್ತಿರುವ ವಿಶ್ವಾಸವನ್ನೂ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಾರುತಿ ಸುಜುಕಿಯಂತಹ ಕಂಪನಿಗಳು ಮೇಕ್ ಇನ್ ಇಂಡಿಯಾದ ಬ್ರಾಂಡ್ ರಾಯಭಾರಿಗಳಾಗಿ ಮಾರ್ಪಟ್ಟಿವೆ ಎಂದು ಅವರು ಹೇಳಿದರು. ಸತತ ನಾಲ್ಕು ವರ್ಷಗಳಿಂದ ಮಾರುತಿ ಸುಜುಕಿ ಭಾರತದ ಅತಿದೊಡ್ಡ ಕಾರು ರಫ್ತುದಾರನಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಇಂದಿನಿಂದ ವಿದ್ಯುಚ್ಚಾಲಿತ ವಾಹನಗಳ ರಫ್ತು ಕೂಡ ಅದೇ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದರು. ಪ್ರಪಂಚದಾದ್ಯಂತ ಡಜನ್ ಗಟ್ಟಲೆ ದೇಶಗಳಲ್ಲಿ ಚಲಿಸುವ ವಿದ್ಯುಚ್ಚಾಲಿತ ವಾಹನಗಳು ಮೇಡ್ ಇನ್ ಇಂಡಿಯಾ ಲೇಬಲ್ ಅನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು.

ವಿದ್ಯುಚ್ಚಾಲಿತ ವಾಹನ (ಇವಿ) ಪರಿಸರ ವ್ಯವಸ್ಥೆಯ ಅತ್ಯಂತ ನಿರ್ಣಾಯಕ ಅಂಶವೆಂದರೆ ಬ್ಯಾಟರಿಗಳು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಕೆಲವು ವರ್ಷಗಳ ಹಿಂದಿನವರೆಗೂ ಭಾರತದಲ್ಲಿ ಬ್ಯಾಟರಿಗಳನ್ನು ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದರು. ವಿದ್ಯುಚ್ಚಾಲಿತ ವಾಹನ ಉತ್ಪಾದನೆಯನ್ನು ಬಲಪಡಿಸಲು, ಭಾರತವು ದೇಶೀಯ ಬ್ಯಾಟರಿ ಉತ್ಪಾದನೆಯನ್ನು ಪ್ರಾರಂಭಿಸುವುದು ಮುಖ್ಯ. ಈ ದೃಷ್ಟಿಕೋನದೊಂದಿಗೆ 2017 ರಲ್ಲಿ ಟಿ ಡಿ ಎಸ್ ಜಿ ಬ್ಯಾಟರಿ ಸ್ಥಾವರಕ್ಕೆ ಅಡಿಪಾಯ ಹಾಕಲಾಯಿತು ಎಂದು ಶ್ರೀ ಮೋದಿ ನೆನಪಿಸಿಕೊಂಡರು. ಟಿ ಡಿ ಎಸ್ ಜಿ ಯ ಹೊಸ ಉಪಕ್ರಮದಡಿಯಲ್ಲಿ, ಜಪಾನಿನ ಮೂರು ಕಂಪನಿಗಳು ಜಂಟಿಯಾಗಿ ಭಾರತದಲ್ಲಿ ಮೊದಲ ಬಾರಿಗೆ ಬ್ಯಾಟರಿ ಸೆಲ್ ಗಳನ್ನು ತಯಾರಿಸುತ್ತವೆ ಎಂದು ಅವರು ಘೋಷಿಸಿದರು. ಭಾರತದಲ್ಲಿ ಬ್ಯಾಟರಿ ಅವರು ಹೇಳಿದರು. ಈ ಸ್ಥಳೀಕರಣವು ಭಾರತದ ಸ್ವಾವಲಂಬನೆಯನ್ನು ಸಬಲಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಹೈಬ್ರಿಡ್ ವಿದ್ಯುಚ್ಚಾಲಿತ ವಾಹನ ಕ್ಷೇತ್ರದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು. ಈ ಐತಿಹಾಸಿಕ ಆರಂಭಕ್ಕೆ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು.

ಕೆಲವು ವರ್ಷಗಳ ಹಿಂದಿನವರೆಗೂ ವಿದ್ಯುಚ್ಚಾಲಿತ ವಾಹನಗಳನ್ನು ಕೇವಲ ಪರ್ಯಾಯ ಆಯ್ಕೆಯಾಗಿ ನೋಡಲಾಗುತ್ತಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ವಿದ್ಯುಚ್ಚಾಲಿತ ವಾಹನಗಳು ಅನೇಕ ಸವಾಲುಗಳಿಗೆ ನಿರ್ದಿಷ್ಟ ಪರಿಹಾರವನ್ನು ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು. ಕಳೆದ ವರ್ಷ ಸಿಂಗಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಳೆಯ ವಾಹನಗಳು ಮತ್ತು ಆಂಬ್ಯುಲೆನ್ಸ್ ಗಳನ್ನು ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸುವ ಪ್ರಸ್ತಾಪವನ್ನು ತಾವು ಮಾಡಿದ್ದಾಗಿ ಅವರು ನೆನಪಿಸಿಕೊಂಡರು. ಕೇವಲ ಆರು ತಿಂಗಳೊಳಗೆ ಈ ಸವಾಲನ್ನು ಸ್ವೀಕರಿಸಿ ಕಾರ್ಯನಿರ್ವಹಿಸುವ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಮಾರುತಿ ಸುಜುಕಿಯನ್ನು ಶ್ರೀ ಮೋದಿ ಶ್ಲಾಘಿಸಿದರು. ಹೈಬ್ರಿಡ್ ಆಂಬ್ಯುಲೆನ್ಸ್ ಗಳ ಮೂಲಮಾದರಿಯನ್ನು ತಾವು ವೈಯಕ್ತಿಕವಾಗಿ ಪರಿಶೀಲಿಸಿರುವುದಾಗಿ ಅವರು ತಿಳಿಸಿದರು ಮತ್ತು ಈ ಹೈಬ್ರಿಡ್ ಆಂಬ್ಯುಲೆನ್ಸ್ ಗಳು ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಗೆ ಅನುಗುಣವಾಗಿವೆ ಎಂದು ಹೇಳಿದರು. ಈ 11,000 ಕೋಟಿ ರೂ. ಯೋಜನೆಯಡಿಯಲ್ಲಿ ಇ-ಆಂಬ್ಯುಲೆನ್ಸ್ ಗಳಿಗಾಗಿ ವಿಶೇಷ ಬಜೆಟ್ ಅನ್ನು ನಿಗದಿಪಡಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಹಳೆಯ ವಾಹನಗಳನ್ನು ಬದಲಾಯಿಸಲು ಕಾರ್ಯಸಾಧ್ಯವಾದ ಆಯ್ಕೆಯನ್ನು ನೀಡುತ್ತವೆ ಎಂದು ಅವರು ಒತ್ತಿ ಹೇಳಿದರು.

ಶುದ್ಧ ಇಂಧನ ಮತ್ತು ಶುದ್ಧ ಚಲನಶೀಲತೆ ಭಾರತದ ಭವಿಷ್ಯವನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಇಂತಹ ಪ್ರಯತ್ನಗಳ ಮೂಲಕ ಭಾರತವು ಶುದ್ಧ ಇಂಧನ ಮತ್ತು ಶುದ್ಧ ಚಲನಶೀಲತೆಗೆ ವಿಶ್ವಾಸಾರ್ಹ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಪ್ರತಿಪಾದಿಸಿದರು.

ಜಗತ್ತು ಪೂರೈಕೆ ಸರಪಳಿ ಅಡಚಣೆಗಳಿಂದ ಬಳಲುತ್ತಿರುವ ಸಮಯದಲ್ಲಿ, ಕಳೆದ ದಶಕದಲ್ಲಿ ಭಾರತದ ನೀತಿ ನಿರ್ಧಾರಗಳು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. 2014 ರಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಾಗ ಈ ಪರಿವರ್ತನೆಗೆ ತಯಾರಿ ಆರಂಭಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಪ್ರಾರಂಭಿಸುವುದರ ಜೊತೆಗೆ ಜಾಗತಿಕ ಮತ್ತು ದೇಶೀಯ ಉತ್ಪಾದಕರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಬಗ್ಗೆಯೂ ಗಮನ ಸೆಳೆದರು. ಭಾರತವು ತನ್ನ ಉತ್ಪಾದನಾ ವಲಯವನ್ನು ಸಮರ್ಥ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಈ ದೃಷ್ಟಿಕೋನವನ್ನು ಬೆಂಬಲಿಸಲು, ದೇಶಾದ್ಯಂತ ಕೈಗಾರಿಕಾ ಕಾರಿಡಾರ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಜೊತೆಗೆ ಪ್ಲಗ್-ಅಂಡ್-ಪ್ಲೇ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಉತ್ಪಾದನೆ-ಆಧಾರಿತ ಪ್ರೋತ್ಸಾಹಕ ಯೋಜನೆಯಡಿ ಹಲವಾರು ವಲಯಗಳ ತಯಾರಕರಿಗೆ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಮುಖ ಸುಧಾರಣೆಗಳು ಹೂಡಿಕೆದಾರರು ಎದುರಿಸುತ್ತಿದ್ದ ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಸುಧಾರಣೆಗಳು ಹೂಡಿಕೆದಾರರು ಭಾರತೀಯ ಉತ್ಪಾದನಾ ವಲಯದಲ್ಲಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸಿವೆ ಎಂದು ಹೇಳಿದರು. ಈ  ಪ್ರಯತ್ನಗಳ ದೃಢವಾದ ಫಲಿತಾಂಶಗಳನ್ನು ಅವರು ಒತ್ತಿ ಹೇಳಿದರು ಮತ್ತು ಈ ದಶಕದಲ್ಲಿಯೇ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು ಶೇಕಡಾ 500 ರಷ್ಟು ಬೆಳೆದಿದೆ ಎಂದು ಹೇಳಿದರು. 2014 ಕ್ಕೆ ಹೋಲಿಸಿದರೆ ಮೊಬೈಲ್ ಫೋನ್ ಉತ್ಪಾದನೆಯ ಬೆಳವಣಿಗೆ ಶೇ. 2,700 ರಷ್ಟು ಹೆಚ್ಚಿರುವುದನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ, ಕಳೆದ ದಶಕದಲ್ಲಿ ರಕ್ಷಣಾ ಉತ್ಪಾದನೆಯು ಶೇ. 200 ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ ಎಂದು ಹೇಳಿದರು. ಈ ಯಶಸ್ಸು ಭಾರತದಾದ್ಯಂತ ಎಲ್ಲಾ ರಾಜ್ಯಗಳಿಗೆ ಸ್ಫೂರ್ತಿ ನೀಡುತ್ತಿದೆ ಮತ್ತು ಸುಧಾರಣೆಗಳು ಮತ್ತು ಹೂಡಿಕೆಗಳಿಗಾಗಿ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಹುಟ್ಟಿಕೊಂಡಿದೆ, ಇದು ಇಡೀ ದೇಶಕ್ಕೆ ಪ್ರಯೋಜನವನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯಗಳು ಬೆಳವಣಿಗೆ ಆಧಾರಿತ ನೀತಿಗಳು ಮತ್ತು ಸುಧಾರಣೆಗಳು ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಸೌಲಭ್ಯಗಳನ್ನು ತರಬೇಕೆಂದು ಶ್ರೀ ಮೋದಿ ಒತ್ತಾಯಿಸಿದರು.

"ಭಾರತ ಇಲ್ಲಿಗೆ ನಿಲ್ಲುವುದಿಲ್ಲ; ಭಾರತ ಉತ್ತಮವಾಗಿ ಕಾರ್ಯನಿರ್ವಹಿಸಿದ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಶ್ರೇಷ್ಠತೆಯನ್ನು ಸಾಧಿಸುವುದು ನಮ್ಮ ಗುರಿಯಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಪ್ರಗತಿಯನ್ನು ವೇಗಗೊಳಿಸಲು ಸರ್ಕಾರವು ಮಿಷನ್ ಮ್ಯಾನುಫ್ಯಾಕ್ಚರಿಂಗ್ ಗೆ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು. ಭಾರತದ ಗಮನ ಈಗ ಭವಿಷ್ಯದ ಕೈಗಾರಿಕೆಗಳತ್ತ ಸಾಗಲಿದೆ ಎಂದರು. ದೇಶಾದ್ಯಂತ ಆರು ಸ್ಥಾವರಗಳ ಸ್ಥಾಪನೆಯೊಂದಿಗೆ ಸೆಮಿಕಂಡಕ್ಟರ್ ವಲಯದ ಬೆಳೆಯುತ್ತಿರುವ ಪ್ರಗತಿಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಮತ್ತಷ್ಟು ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸಿದರು.

ಅಪರೂಪದ ಭೂ ಖನಿಜಗಳ ಕೊರತೆಯಿಂದಾಗಿ ಆಟೋ ಉದ್ಯಮ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಭಾರತ ಸರ್ಕಾರ ಗಮನಹರಿಸಿದೆ ಎಂದು ಶ್ರೀ ಮೋದಿ ಹೇಳಿದರು. ಈ ವಲಯದಲ್ಲಿ ರಾಷ್ಟ್ರೀಯ ಸಾಮರ್ಥ್ಯಗಳನ್ನು ಬಲಪಡಿಸಲು, ಅವರು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಅನ್ನು ಪ್ರಾರಂಭಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಈ ಮಿಷನ್ ಅಡಿಯಲ್ಲಿ, ನಿರ್ಣಾಯಕ ಖನಿಜಗಳನ್ನು ಗುರುತಿಸಲು ಭಾರತದ ವಿವಿಧ ಸ್ಥಳಗಳಲ್ಲಿ 1,200 ಕ್ಕೂ ಹೆಚ್ಚು ಪರಿಶೋಧನಾ ಅಭಿಯಾನಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಮುಂದಿನ ವಾರ ಜಪಾನಿಗೆ ಭೇಟಿ ನೀಡುವುದಾಗಿ ಘೋಷಿಸಿದರು ಮತ್ತು ಭಾರತ ಮತ್ತು ಜಪಾನ್ ನಡುವಿನ ಸಂಬಂಧವು ರಾಜತಾಂತ್ರಿಕ ಸಂಬಂಧಗಳನ್ನು ಮೀರಿದ್ದಾಗಿದೆ - ಇದು ಸಂಸ್ಕೃತಿ ಮತ್ತು ಪರಸ್ಪರ ನಂಬಿಕೆಯನ್ನು ಆಧರಿಸಿದೆ ಎಂದು ಒತ್ತಿ ಹೇಳಿದರು. ಎರಡೂ ದೇಶಗಳು ಪರಸ್ಪರರ ಬೆಳವಣಿಗೆಯಲ್ಲಿ ತಮ್ಮ ಪ್ರಗತಿಯನ್ನು ಕಾಣುತ್ತವೆ ಎಂದು ಅವರು ಹೇಳಿದರು. ಮಾರುತಿ ಸುಜುಕಿಯೊಂದಿಗೆ ಪ್ರಾರಂಭವಾದ ಪ್ರಯಾಣವು ಈಗ ಬುಲೆಟ್ ರೈಲಿನ ವೇಗವನ್ನು ತಲುಪಿದೆ ಎಂದ ಶ್ರೀ ಮೋದಿ, ಭಾರತ-ಜಪಾನ್ ಪಾಲುದಾರಿಕೆಯ ಕೈಗಾರಿಕಾ ಸಾಮರ್ಥ್ಯವನ್ನು ಅರಿತುಕೊಳ್ಳುವ ಪ್ರಮುಖ ಉಪಕ್ರಮಗಳು ಗುಜರಾತಿನಲ್ಲಿ ಪ್ರಾರಂಭವಾದವು ಎಂದು ಒತ್ತಿ ಹೇಳಿದರು. 20 ವರ್ಷಗಳ ಹಿಂದೆ ವೈಬ್ರಂಟ್ ಗುಜರಾತ್ ಶೃಂಗಸಭೆ ಪ್ರಾರಂಭವಾದಾಗ, ಜಪಾನ್ ಪ್ರಮುಖ ಪಾಲುದಾರರಾಗಿದ್ದರು ಎಂದು ಪ್ರಧಾನಮಂತ್ರಿಯವರು ಗಮನಸೆಳೆದರು. ಗುಜರಾತ್ ಜನರು ತಮ್ಮ ಜಪಾನಿನ ಸಹವರ್ತಿಗಳ ಬಗ್ಗೆ ತೋರಿಸಿದ ಪ್ರೀತಿಯನ್ನು ಅವರು ಶ್ಲಾಘಿಸಿದರು. ಉದ್ಯಮಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಜಪಾನೀಸ್ ಭಾಷೆಯಲ್ಲಿ ಮುದ್ರಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಜಪಾನಿನ ಅತಿಥಿಗಳಿಗೆ ಅನುಕೂಲವನ್ನು ಖಚಿತಪಡಿಸಲು ಜಪಾನಿನ ಪಾಕಪದ್ಧತಿಯನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. ಜಪಾನಿಯರ ಗಾಲ್ಫ್ ಪ್ರೀತಿಯನ್ನು ಅವರು ಶ್ಲಾಘಿಸಿದರು ಮತ್ತು ಅವರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು 7-8 ಹೊಸ ಗಾಲ್ಫ್ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಭಾರತದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಈಗ ಜಪಾನೀಸ್ ಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿವೆ ಎಂದು ಶ್ರೀ ಮೋದಿ ಹೇಳಿದರು.

ಭಾರತ ಮತ್ತು ಜಪಾನ್ ನಡುವಿನ ಜನರಿಂದ ಜನರಿಗೆ ಸಂಬಂಧಗಳನ್ನು ಬಲಪಡಿಸಲು ಭಾರತದ ನಿರಂತರ ಪ್ರಯತ್ನಗಳು ಕಾರಣ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೌಶಲ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಈಗ ಪರಸ್ಪರರ ಅಗತ್ಯಗಳನ್ನು ಪೂರೈಸಲು ಸಮರ್ಥವಾಗಿವೆ. ಮಾರುತಿ ಸುಜುಕಿಯಂತಹ ಕಂಪನಿಗಳು ಇಂತಹ ಉಪಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಯುವ ವಿನಿಮಯ ಕಾರ್ಯಕ್ರಮಗಳನ್ನು ಉತ್ತೇಜಿಸಬೇಕು ಎಂದು ಅವರು ಕರೆ ನೀಡಿದರು.

ಮುಂಬರುವ ವರ್ಷಗಳಲ್ಲಿ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ನಿರಂತರ ಪ್ರಗತಿಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಇಂದಿನ ಪ್ರಯತ್ನಗಳು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಗುರಿಯನ್ನು ಸಾಧಿಸುವಲ್ಲಿ ಜಪಾನ್ ವಿಶ್ವಾಸಾರ್ಹ ಪಾಲುದಾರನಾಗಿ ಮುಂದುವರಿಯುತ್ತದೆ ಎಂಬ ನಂಬಿಕೆಯನ್ನು ಪುನರುಚ್ಚರಿಸುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಭಾರತದಲ್ಲಿನ ಜಪಾನ್ ರಾಯಭಾರಿ ಘನತೆವೆತ್ತ ಶ್ರೀ ಓನೊ ಕೀಚಿ, ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಅಧಿಕಾರಿಗಳು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ಅಹಮದಾಬಾದ್ ನ ಹನಸಲ್ಪುರದಲ್ಲಿರುವ ಸುಜುಕಿ ಮೋಟಾರ್ ಸ್ಥಾವರದಲ್ಲಿ ಎರಡು ಐತಿಹಾಸಿಕ ಮೈಲಿಗಲ್ಲುಗಳನ್ನು ಉದ್ಘಾಟಿಸಿದರು. ಈ ಮಹತ್ವದ ಉಪಕ್ರಮಗಳು ಗ್ರೀನ್ ಮೊಬಿಲಿಟಿಯಲ್ಲಿ ಜಾಗತಿಕ ಕೇಂದ್ರವಾಗಿ ಭಾರತದ ಹೊರಹೊಮ್ಮುವಿಕೆಯನ್ನು ಒತ್ತಿಹೇಳುತ್ತವೆ ಮತ್ತು ಪ್ರಧಾನಮಂತ್ರಿಯವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತಕ್ಕೆ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಮೇಕ್ ಇನ್ ಇಂಡಿಯಾದ ಯಶಸ್ಸಿಗೆ ಒಂದು ಪ್ರಮುಖ ಉದಾಹರಣೆಯಾಗಿ, ಪ್ರಧಾನ ಮಂತ್ರಿಯವರು ಸುಜುಕಿಯ ಮೊದಲ ಜಾಗತಿಕ ಕಾರ್ಯತಂತ್ರದ ಬ್ಯಾಟರಿ ಎಲೆಕ್ಟ್ರಿಕ್ ವಾಹನ (ಬಿಇವಿ) "ಇ ವಿಟಾರಾ"ವನ್ನು ಉದ್ಘಾಟಿಸಿದರು ಮತ್ತು ಹಸಿರು ನಿಶಾನೆ ತೋರಿದರು. ಭಾರತದಲ್ಲಿ ತಯಾರಾಗುವ ಈ ಬಿಇವಿಗಳನ್ನು ಯುರೋಪ್ ಮತ್ತು ಜಪಾನಿನಂತಹ ಮುಂದುವರಿದ ಮಾರುಕಟ್ಟೆಗಳು ಸೇರಿದಂತೆ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಈ ಸಾಧನೆಯೊಂದಿಗೆ, ಭಾರತವು ಈಗ ಸುಜುಕಿಯ ವಿದ್ಯುಚ್ಚಾಲಿತ ವಾಹನಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ಗುಜರಾತಿನ ಟಿಡಿಎಸ್ ಲಿಥಿಯಂ-ಐಯಾನ್ ಬ್ಯಾಟರಿ ಸ್ಥಾವರದಲ್ಲಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಗಳ ಸ್ಥಳೀಯ ಉತ್ಪಾದನೆಯ ಪ್ರಾರಂಭದೊಂದಿಗೆ ಭಾರತದ ಬ್ಯಾಟರಿ ಪೂರಕ ವ್ಯವಸ್ಥೆಯ ಮುಂದಿನ ಹಂತವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ತೋಷಿಬಾ, ಡೆನ್ಸೊ ಮತ್ತು ಸುಜುಕಿಯ ಜಂಟಿ ಉದ್ಯಮವಾದ ಈ ಸ್ಥಾವರವು ದೇಶೀಯ ಉತ್ಪಾದನೆ ಮತ್ತು ಶುದ್ಧ ಇಂಧನ ನಾವೀನ್ಯತೆಯನ್ನು ಉತ್ತೇಜಿಸುತ್ತದೆ. ಈ ಬೆಳವಣಿಗೆಯು ಎಂಭತ್ತರಷ್ಟು ಬ್ಯಾಟರಿಗಳನ್ನು ಈಗ ಭಾರತದಲ್ಲಿ ತಯಾರಿಸುವುದನ್ನು ಖಚಿತಪಡಿಸುತ್ತದೆ.

 

 

*****

 


(Release ID: 2160919)