ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ನಾರಿ ಶಕ್ತಿಯಿಂದ ವಿಕಸಿತ ಭಾರತ: ಭಾರತದ ಆರ್ಥಿಕ ಪರಿವರ್ತನೆಯನ್ನು ಮಹಿಳೆಯರು ಮುನ್ನಡೆಸುತ್ತಿರುವ ಕಥನ
ಪಿ ಎಲ್ ಎಫ್ ಎಸ್ ದತ್ತಾಂಶದ ಪ್ರಕಾರ 2017-18 ರಿಂದ 2023-24ರ ಅವಧಿಯಲ್ಲಿ ಮಹಿಳಾ ಉದ್ಯೋಗ ದರ ದ್ವಿಗುಣಗೊಂಡಿದೆ
ಮಹಿಳಾ ನಿರುದ್ಯೋಗ ದರ 2017-18ರಲ್ಲಿ 5.6% ಇದ್ದದ್ದು 2023-24ರಲ್ಲಿ 3.2%ಕ್ಕೆ ಇಳಿದಿದೆ
ಗ್ರಾಮೀಣ ಭಾರತದಲ್ಲಿ ಮಹಿಳಾ ಉದ್ಯೋಗವು 96% ರಷ್ಟು ಏರಿಕೆಯಾಗಿದ್ದು, ನಗರ ಪ್ರದೇಶಗಳಲ್ಲಿ ಶೇ 43 ರಷ್ಟು ಹೆಚ್ಚಳವಾಗಿದೆ
ಇ ಪಿ ಎಫ್ ಒ ವೇತನದಾರರ ದತ್ತಾಂಶದ ಪ್ರಕಾರ, ಕಳೆದ ಏಳು ವರ್ಷಗಳಲ್ಲಿ 1.56 ಕೋಟಿ ಮಹಿಳೆಯರು ಔಪಚಾರಿಕ ಉದ್ಯೋಗ ವಲಯಕ್ಕೆ ಸೇರಿಕೊಂಡಿದ್ದಾರೆ
ಕಳೆದ ದಶಕದಲ್ಲಿ ಲಿಂಗ ಆಧಾರಿತ ಬಜೆಟ್‌ನಲ್ಲಿ ಶೇ 429 ರಷ್ಟು ಏರಿಕೆಯಾಗಿದೆ. 70 ಕೇಂದ್ರ ಯೋಜನೆಗಳು ಮತ್ತು 400ಕ್ಕೂ ಹೆಚ್ಚು ರಾಜ್ಯ ಮಟ್ಟದ ಯೋಜನೆಗಳು ಮಹಿಳಾ ಉದ್ಯಮಶೀಲತೆಯನ್ನು ಬೆಂಬಲಿಸುತ್ತಿವೆ
ಡಿಪಿಐಐಟಿ ನೋಂದಾಯಿತ ಪ್ರತಿ ಎರಡನೇ ಸ್ಟಾರ್ಟ್ಅಪ್‌ಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿ ಇದ್ದಾರೆ
ಒಟ್ಟು ಮುದ್ರಾ ಸಾಲಗಳಲ್ಲಿ ಶೇ 68 ರಷ್ಟು ಮಹಿಳೆಯರು; ಮತ್ತು ಪಿಎಂ ಸ್ವನಿಧಿ ಯೋಜನೆಯಲ್ಲಿ ಶೇ 44 ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ
2010-11 ರಿಂದ 2023-24ರ ಅವಧಿಯಲ್ಲಿ ಮಹಿಳಾ ನಾಯಕತ್ವದ ಎಂಸಿಎಂಇ ಗಳ ಸಂಖ್ಯೆ ದ್ವಿಗುಣಗೊಂಡಿರುವುದರೊಂದಿಗೆ, ನಾರಿ ಶಕ್ತಿ ಭಾರತವನ್ನು ವಿಕಸಿತ ಭಾರತದತ್ತ ಮುನ್ನಡೆಸುತ್ತಿದೆ
Posted On:
25 AUG 2025 3:44PM by PIB Bengaluru
2047ರ ವೇಳೆಗೆ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದು ದೇಶದಲ್ಲಿ ಮಹಿಳಾ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯನ್ನು ಶೇ 70ಗೆ ಖಚಿತಪಡಿಸಿಕೊಳ್ಳುವುದು. ಮಹಿಳಾ ಸಬಲೀಕರಣವು ರಾಷ್ಟ್ರೀಯ ಪ್ರಗತಿಗೆ ಪ್ರಮುಖ ಚಾಲಕಶಕ್ತಿಯಾಗಿದೆ, ಮತ್ತು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪರಿವರ್ತನಾತ್ಮಕ ಬದಲಾವಣೆಗೆ ಸಾಕ್ಷಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಂಪ್ರದಾಯಿಕ ಪಾತ್ರಗಳಿಗೆ ಮಾತ್ರ ಸೀಮಿತವಾಗಿಲ್ಲ; ಅವರು ಎಲ್ಲಾ ಅಡೆತಡೆಗಳನ್ನು ಮೀರಿ ದೇಶದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಗ್ರಾಮೀಣ ಉದ್ಯಮಿಗಳಿಂದ ಹಿಡಿದು ಕಾರ್ಪೊರೇಟ್ ನಾಯಕರವರೆಗೆ, ಮಹಿಳೆಯರು ವಿಕಸಿತ ಭಾರತದತ್ತ ಭಾರತದ ಪಯಣವನ್ನು ಮುನ್ನಡೆಸುತ್ತಿದ್ದಾರೆ.
ಮಹಿಳಾ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯಲ್ಲಿ ಗಮನಾರ್ಹ ಏರಿಕೆ
ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಪಾಲ್ಗೊಳ್ಳುವಿಕೆ ದರದಲ್ಲಿ ಗಮನಾರ್ಹ ಏರಿಕೆಯಾಗಿದೆ. ಪಿ ಎಲ್ ಎಫ್ ಎಸ್ (PLFS) ದತ್ತಾಂಶವು, ಮಹಿಳೆಯರ ಉದ್ಯೋಗ ದರ (WPR) 2017-18ರಲ್ಲಿ ಶೇ 22 ಇದ್ದದ್ದು 2023-24ರಲ್ಲಿ 40.3%ಗೆ ಏರಿದೆ ಎಂದು ತೋರಿಸುತ್ತದೆ. ಅದೇ ಅವಧಿಯಲ್ಲಿ ನಿರುದ್ಯೋಗ ದರ (UR) 2017-18ರಲ್ಲಿ 5.6% ಇದ್ದದ್ದು 2023-24ರಲ್ಲಿ 3.2%ಕ್ಕೆ ಇಳಿದಿದೆ. ಇದು ಮಹಿಳೆಯರಿಗೆ ಉದ್ಯೋಗಾವಕಾಶಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಈ ಬದಲಾವಣೆಯು ಗ್ರಾಮೀಣ ಭಾರತದಲ್ಲಿ ಮತ್ತಷ್ಟು ಮಹತ್ವಪೂರ್ಣವಾಗಿದ್ದು, ಇಲ್ಲಿ ಮಹಿಳಾ ಉದ್ಯೋಗವು 96% ರಷ್ಟು ಏರಿಕೆ ಕಂಡಿದೆ. ಅದೇ ಸಮಯದಲ್ಲಿ ನಗರ ಪ್ರದೇಶಗಳಲ್ಲಿ 43% ರಷ್ಟು ಹೆಚ್ಚಳವಾಗಿದೆ.


ವರದಿಗಳ ಪ್ರಕಾರ, ಮಹಿಳಾ ಪದವೀಧರರ ಉದ್ಯೋಗ ಸಾಮರ್ಥ್ಯ 2013ರಲ್ಲಿ 42% ಇದ್ದದ್ದು 2024ರಲ್ಲಿ 47.53%ಕ್ಕೆ ಹೆಚ್ಚಾಗಿದೆ. ಸ್ನಾತಕೋತ್ತರ ಮತ್ತು ಅದಕ್ಕಿಂತ ಹೆಚ್ಚಿನ ಶಿಕ್ಷಣ ಪಡೆದ ಮಹಿಳೆಯರಲ್ಲಿ ಉದ್ಯೋಗ ದರವು (WPR) 2017-18ರಲ್ಲಿ 34.5% ಇದ್ದದ್ದು 2023-24ರಲ್ಲಿ 40%ಕ್ಕೆ ಏರಿದೆ.
ಭಾರತ ಕೌಶಲ್ಯ ವರದಿ 2025 ರ ಪ್ರಕಾರ, 2025 ರ ವೇಳೆಗೆ ಸುಮಾರು 55 ಪ್ರತಿಶತದಷ್ಟು ಭಾರತೀಯ ಪದವೀಧರರು ಜಾಗತಿಕವಾಗಿ ಉದ್ಯೋಗಕ್ಕೆ ಅರ್ಹರಾಗುವ ನಿರೀಕ್ಷೆಯಿದೆ, ಇದು 2024 ರಲ್ಲಿ 51.2 ಪ್ರತಿಶತದಷ್ಟಿತ್ತು.
ಇದರ ಜೊತೆಗೆ, ಇ ಪಿ ಎಫ್ ಒ (EPFO) ವೇತನದಾರರ ದತ್ತಾಂಶವು ಔಪಚಾರಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಕಳೆದ ಏಳು ವರ್ಷಗಳಲ್ಲಿ 1.56 ಕೋಟಿ ಮಹಿಳೆಯರು ಔಪಚಾರಿಕ ಉದ್ಯೋಗ ವಲಯಕ್ಕೆ ಸೇರಿಕೊಂಡಿದ್ದಾರೆ. ಇದೇ ವೇಳೆ, ಆಗಸ್ಟ್ ವರೆಗೆ ಇ-ಶ್ರಮ್ ಪೋರ್ಟಲ್‌ನಲ್ಲಿ 16.69 ಕೋಟಿಗೂ ಹೆಚ್ಚು ಮಹಿಳಾ ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಅವರಿಗೆ ಭಾರತ ಸರ್ಕಾರದ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಪ್ರವೇಶ ಸಿಕ್ಕಿದೆ.
ಭಾರತವು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನಾಯಕತ್ವದ ಅಭಿವೃದ್ಧಿಯತ್ತ ಸಾಗುತ್ತಿದೆ
ಭಾರತ ಸರ್ಕಾರದ ಪ್ರಯತ್ನಗಳು ಮಹಿಳಾ ಉದ್ಯಮಿಗಳ ಬೆಳವಣಿಗೆಗೆ ಸಹಕಾರಿಯಾಗಿವೆ. ರಾಷ್ಟ್ರಮಟ್ಟದಲ್ಲಿ 15 ಸಚಿವಾಲಯಗಳ 70 ಕೇಂದ್ರ ಯೋಜನೆಗಳು ಮತ್ತು 400ಕ್ಕೂ ಹೆಚ್ಚು ರಾಜ್ಯ ಮಟ್ಟದ ಯೋಜನೆಗಳು ಮಹಿಳಾ ಉದ್ಯಮಶೀಲತೆಯನ್ನು ಬೆಂಬಲಿಸುವತ್ತ ಗಮನಹರಿಸಿವೆ. ಪಿ ಎಲ್ ಎಫ್ ಎಸ್ (PLFS) ದತ್ತಾಂಶದ ಪ್ರಕಾರ, ಮಹಿಳಾ ಸ್ವ-ಉದ್ಯೋಗವು 2017-18ರಲ್ಲಿ 51.9% ಇದ್ದದ್ದು 2023-24ರಲ್ಲಿ 67.4%ಕ್ಕೆ ಏರಿಕೆಯಾಗಿ, 30% ರಷ್ಟು ಬೆಳವಣಿಗೆ ಕಂಡಿದೆ. ಇದು ಮಹಿಳೆಯರು ನಿಜವಾಗಿಯೂ ಆತ್ಮನಿರ್ಭರರಾಗುತ್ತಿರುವುದನ್ನು ಸೂಚಿಸುತ್ತದೆ.
ಕಳೆದ ದಶಕದಲ್ಲಿ ಲಿಂಗ ಆಧಾರಿತ ಬಜೆಟ್‌ಗಳು 429% ರಷ್ಟು ಹೆಚ್ಚಾಗಿದ್ದು, ಆರ್ಥಿಕ ವರ್ಷ 2013-14ರಲ್ಲಿ ₹0.85 ಲಕ್ಷ ಕೋಟಿ (RE) ಇದ್ದದ್ದು ಆರ್ಥಿಕ ವರ್ಷ 2025-26ರಲ್ಲಿ ₹4.49 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಮಹಿಳಾ ಅಭಿವೃದ್ಧಿಯಿಂದ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆಯನ್ನು ವರ್ಗಾಯಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಉದ್ಯೋಗ, ಉದ್ಯೋಗಾರ್ಹತೆ, ಉದ್ಯಮಶೀಲತೆ ಮತ್ತು ಕಲ್ಯಾಣದ ಮೇಲೆ ಹೆಚ್ಚಿನ ಗಮನವನ್ನು ಹರಿಸಲಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ ಕಾರ್ಯಕ್ರಮದಂತಹ ಯೋಜನೆಗಳು ಸಶಕ್ತವಾದ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಿವೆ. ಇದರಲ್ಲಿ, ಡಿ ಪಿ ಐ ಐ ಟಿ (DPIIT) ನೋಂದಾಯಿತ ಸುಮಾರು 50% ಸ್ಟಾರ್ಟ್ಅಪ್‌ಗಳು ಕನಿಷ್ಠ ಒಬ್ಬ ಮಹಿಳಾ ನಿರ್ದೇಶಕಿಯನ್ನು ಹೊಂದಿವೆ. ಇದು 1.54 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಲ್ಲಿ 74,410 ಸ್ಟಾರ್ಟ್ಅಪ್‌ಗಳು ಮಹಿಳೆಯರನ್ನು ನಿರ್ದೇಶಕರಾಗಿ ಹೊಂದಿವೆ ಎಂದರ್ಥ. ಇಂದು ಸುಮಾರು ಎರಡು ಕೋಟಿ ಮಹಿಳೆಯರು 'ಲಕ್ಪತಿ ದೀದಿ'ಗಳಾಗಿ ಹೊರಹೊಮ್ಮಿದ್ದಾರೆ. ನಮೋ ಡ್ರೋನ್ ದೀದಿ ಮತ್ತು ದೀನದಯಾಳ್ ಅಂತ್ಯೋದಯ ಯೋಜನೆ – ಎನ್ ಆರ್ ಎಲ್ ಎಂ (NRLM) ನಂತಹ ಪ್ರಮುಖ ಕಾರ್ಯಕ್ರಮಗಳು ಈ ಪರಿವರ್ತನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ಯೋಜನೆಗಳು ಮಹಿಳೆಯರಿಗೆ ಸಂಪನ್ಮೂಲಗಳು ಮತ್ತು ಸುಸ್ಥಿರ ಪ್ರಗತಿಗೆ ಅಗತ್ಯವಿರುವ ಅವಕಾಶಗಳನ್ನು ಒದಗಿಸುತ್ತಿವೆ.
ಮಹಿಳೆಯರ ಸ್ವ-ಉದ್ಯೋಗ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಚಾಲಕ ಶಕ್ತಿ ಪಿಎಂ ಮುದ್ರಾ ಯೋಜನೆಯಾಗಿದ್ದು, ಇದು ಆರ್ಥಿಕ ಸೇರ್ಪಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ, ಒಟ್ಟು ಮುದ್ರಾ ಸಾಲಗಳಲ್ಲಿ 68% ನ್ನು ಮಹಿಳೆಯರು ಪಡೆಯುತ್ತಿದ್ದಾರೆ - (₹14.72 ಲಕ್ಷ ಕೋಟಿ ಮೌಲ್ಯದ 35.38 ಕೋಟಿಗೂ ಹೆಚ್ಚು ಸಾಲಗಳು).ಅದೇ ರೀತಿ, ಪಿಎಂ ಸ್ವನಿಧಿ ಯೋಜನೆಯು ಬೀದಿ ವ್ಯಾಪಾರಿಗಳಿಗೆ ಸಬಲೀಕರಣ ಒದಗಿಸಿದ್ದು, ಈ ಯೋಜನೆಯಡಿ 44% ರಷ್ಟು ಫಲಾನುಭವಿಗಳು ಮಹಿಳೆಯರಾಗಿದ್ದಾರೆ. ಈ ಉಪಕ್ರಮಗಳು ಭಾರತದಾದ್ಯಂತ ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆಯ ಹೊಸ ಅಲೆಯನ್ನು ಸೃಷ್ಟಿಸುತ್ತಿವೆ.
ಇದರ ಜೊತೆಗೆ, ಮಹಿಳಾ ನೇತೃತ್ವದ ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು) ಆರ್ಥಿಕ ವಿಸ್ತರಣೆಯ ಪ್ರಮುಖ ಚಾಲಕರಾಗಿ ಹೊರಹೊಮ್ಮಿವೆ. ಇವು ಆರ್ಥಿಕ ವರ್ಷ 2021 ರಿಂದ ಆರ್ಥಿಕ ವರ್ಷ 2023ರ ಅವಧಿಯಲ್ಲಿ ಮಹಿಳೆಯರಿಗೆ 89 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಿವೆ. ಮಹಿಳಾ-ಒಡೆತನದ ಏಕಮಾತ್ರ ಸಂಸ್ಥೆಗಳ ಪಾಲು 2010-11ರಲ್ಲಿ 17.4% ಇದ್ದದ್ದು 2023-24ರಲ್ಲಿ 26.2%ಗೆ ಏರಿಕೆಯಾಗಿದೆ. ಅಲ್ಲದೆ, ಮಹಿಳಾ ನೇತೃತ್ವದ ಎಂ ಎಸ್ ಎಂ ಇ (MSME)ಗಳ ಸಂಖ್ಯೆಯೂ ಸುಮಾರು ದ್ವಿಗುಣಗೊಂಡಿದ್ದು, 2010-11ರಲ್ಲಿ 1 ಕೋಟಿ ಇದ್ದದ್ದು 2023-24ರಲ್ಲಿ 1.92 ಕೋಟಿಗೆ ಬೆಳೆದಿದೆ. ಇದು ಭಾರತದ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಹೆಚ್ಚುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತದೆ.
ನಾರಿ ಶಕ್ತಿ ಭಾರತವನ್ನು ವಿಕಸಿತ ಭಾರತದತ್ತ ಮುನ್ನಡೆಸುತ್ತಿದೆ
ಮಹಿಳೆಯರು ಈಗ ಕೇವಲ ಪಾಲ್ಗೊಳ್ಳುವಿಕೆ ಮಾತ್ರವಲ್ಲ, ಅವರು ಭಾರತದ ಆರ್ಥಿಕ ಬೆಳವಣಿಗೆಯ ಬೆನ್ನೆಲುಬಾಗಿದ್ದಾರೆ. ಇಂದು, ಮಹಿಳೆಯರು ಅಭಿವೃದ್ಧಿಯತ್ತ ಸಾಗುತ್ತಿರುವ ಪಯಣವನ್ನು ಮುನ್ನಡೆಸುತ್ತಿದ್ದಾರೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಸಮಾನ ಉದ್ಯೋಗಾವಕಾಶಗಳ ಅವಕಾಶಗಳ ಮೂಲಕ ನಾರಿ ಶಕ್ತಿಯನ್ನು ಸಬಲೀಕರಣಗೊಳಿಸುವ ಸಮಗ್ರ ಪರಿಸರ ವ್ಯವಸ್ಥೆಯನ್ನು ರಚಿಸಲು ಮೋದಿ ಸರ್ಕಾರ ಬದ್ಧವಾಗಿದೆ.
*****
(Release ID: 2160658)