ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹ್ಮದಾಬಾದ್ ನ ʻಸರ್ದಾರ್ ಧಾಮ್ʼ ಎರಡನೇ ಹಂತದ ಬಾಲಕಿಯರ ವಸತಿಗೃಹದ ಶಂಕುಸ್ಥಾಪನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು


ಸಮಾಜದ ಕಲ್ಯಾಣಕ್ಕಾಗಿ ಉದಾತ್ತ ಉದ್ದೇಶಗಳು ಮತ್ತು ಪರಿಶುದ್ಧತೆಯೊಂದಿಗೆ ಪ್ರಯತ್ನಗಳನ್ನು ಕೈಗೊಂಡಾಗ, ದೈವಿಕ ಬೆಂಬಲವು ಜೊತೆಯಾಗುತ್ತದೆ - ಮತ್ತು ಸಮಾಜವೇ ದೈವಿಕ ಶಕ್ತಿಯಾಗುತ್ತದೆ: ಪ್ರಧಾನಮಂತ್ರಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಕೌಶಲ್ಯ ಅಭಿವೃದ್ಧಿಗೆ ಬಲವಾದ ಒತ್ತು ನೀಡುತ್ತದೆ: ಪ್ರಧಾನಮಂತ್ರಿ

ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ದಾಖಲೆಯ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ: ಪ್ರಧಾನಮಂತ್ರಿ

ಜಗತ್ತು ಇಂದು ಭಾರತದ ಶ್ರಮ ಮತ್ತು ಪ್ರತಿಭೆಯನ್ನು ಉನ್ನತ ಗೌರವದಿಂದ ಕಾಣುತ್ತದೆ ಮತ್ತು ಅದರ ಮೌಲ್ಯವನ್ನು ಗುರುತಿಸುತ್ತದೆ, ಇದರ ಪರಿಣಾಮವಾಗಿ, ವಿವಿಧ ದೇಶಗಳಲ್ಲಿ ಹಲವಾರು ಅವಕಾಶಗಳು ಹೊರಹೊಮ್ಮುತ್ತಿವೆ: ಪ್ರಧಾನಮಂತ್ರಿ

ಭಾರತ ಸ್ವಾವಲಂಬಿಯಾಗಬೇಕು. ಸಮಾಜವು ಸ್ವದೇಶಿ ಉತ್ಪನ್ನಗಳನ್ನು ದೃಢನಿಶ್ಚಯದಿಂದ ಅಳವಡಿಸಿಕೊಳ್ಳಬೇಕು: ಪ್ರಧಾನಮಂತ್ರಿ

ಸ್ವದೇಶಿ ಆಂದೋಲನವು ಶತಮಾನಗಳಷ್ಟು ಹಳೆಯದಾದ ವಿಚಾರವಲ್ಲ; ಅದು ಭವಿಷ್ಯವನ್ನು ಬಲಪಡಿಸುವ ಅಭಿಯಾನವಾಗಿದೆ, ಮತ್ತು ಅದರ ನಾಯಕತ್ವವನ್ನು ಸಮಾಜ - ವಿಶೇಷವಾಗಿ ಯುವಕರು ವಹಿಸಬೇಕು: ಪ್ರಧಾನಮಂತ್ರಿ

Posted On: 24 AUG 2025 10:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸರ್ದಾರ್ ಧಾಮ್ ಹಂತ-2ರ ಬಾಲಕಿಯರ ವಸತಿಗೃಹದ ಶಂಕುಸ್ಥಾಪನೆ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸರ್ದಾರ್ ಧಾಮದ ಹೆಸರು ಅದರ ಕಾರ್ಯದಷ್ಟೇ ಪವಿತ್ರವಾಗಿದೆ ಎಂದು ಬಣ್ಣಿಸಿದರು. ಹೆಣ್ಣುಮಕ್ಕಳ ಸೇವೆ ಮತ್ತು ಶಿಕ್ಷಣಕ್ಕಾಗಿ ಮೀಸಲಾಗಿರುವ ವಸತಿಗೃಹದ ಉದ್ಘಾಟನೆಯ ಬಗ್ಗೆ ಒತ್ತಿ ಹೇಳಿದರು. ಈ ವಸತಿಗೃಹದಲ್ಲಿ ತಂಗುವ ಬಾಲಕಿಯರು ಆಕಾಂಕ್ಷೆಗಳು ಮತ್ತು ಕನಸುಗಳನ್ನು ಹೊಂದಿರುತ್ತಾರೆ ಮತ್ತು ಅವುಗಳನ್ನು ಪೂರೈಸಲು ಹಲವಾರು ಅವಕಾಶಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ಈ ಹೆಣ್ಣುಮಕ್ಕಳು ಒಮ್ಮೆ ಸ್ವಾವಲಂಬಿಗಳು ಮತ್ತು ಸಮರ್ಥರಾಗಿ ಬದಲಾದರೆ, ಅವರು ಸಹಜವಾಗಿಯೇ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅವರ ಕುಟುಂಬಗಳು ಸಹ ಸಬಲೀಕರಣಗೊಳ್ಳುತ್ತವೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ಈ ವಸತಿಗೃಹದಲ್ಲಿ ಉಳಿಯಲು ಅವಕಾಶ ಪಡೆದ ಎಲ್ಲ ಹೆಣ್ಣುಮಕ್ಕಳಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಅವರ ಕುಟುಂಬ ಸದಸ್ಯರಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು.

ಬಾಲಕಿಯರ ವಸತಿಗೃಹ ಹಂತ-2ಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ದೊರೆತಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದ ಶ್ರೀ ಮೋದಿ ಅವರು, ಸಮಾಜದ ಸಮರ್ಪಿತ ಪ್ರಯತ್ನಗಳ ಫಲವಾಗಿ ಈಗ 3,000 ಹೆಣ್ಣುಮಕ್ಕಳಿಗೆ ಅತ್ಯುತ್ತಮ ವ್ಯವಸ್ಥೆಗಳೊಂದಿಗೆ ಭವ್ಯ ಸೌಲಭ್ಯ ಲಭ್ಯವಿದೆ ಎಂದರು. ವಡೋದರಾದಲ್ಲಿ 2,000 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣವೂ ನಡೆಯುತ್ತಿದೆ ಮತ್ತು ಅದು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು. ಶಿಕ್ಷಣ, ಕಲಿಕೆ ಮತ್ತು ತರಬೇತಿಗಾಗಿ ಇದೇ ರೀತಿಯ ಕೇಂದ್ರಗಳನ್ನು ಸೂರತ್, ರಾಜ್ಕೋಟ್ ಮತ್ತು ಮೆಹ್ಸಾನಾದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಈ ಉಪಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲ ಕೊಡುಗೆದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, ಸಮಾಜದ ಶಕ್ತಿಯ ಮೂಲಕ ರಾಷ್ಟ್ರವು ಪ್ರಗತಿ ಸಾಧಿಸುತ್ತದೆ ಎಂದರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಭಾರತದ ಪ್ರಗತಿಗೆ ಗುಜರಾತ್ ನ ಅಭಿವೃದ್ಧಿ ಅತ್ಯಗತ್ಯ ಎಂದು ಅವರು ಸದಾ ನಂಬಿರುವುದಾಗಿ ಹೇಳಿದರು. ಇಂದು ಗುಜರಾತ್ ನಿಂದ ಕಲಿತ ಪಾಠಗಳು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ ಎಂದರು. 25-30 ವರ್ಷಗಳ ಹಿಂದೆ ಗುಜರಾತ್ ನ ಸೂಚ್ಯಂಕಗಳು ಕಳವಳಕಾರಿಯಾಗಿದ್ದ ಮತ್ತು ಸಾಮಾಜಿಕ ಸವಾಲುಗಳನ್ನು ನಿವಾರಿಸಲು ಗುಜರಾತ್ ತನ್ನೆಲ್ಲಾ ಶಕ್ತಿಯನ್ನು ಕೇಂದ್ರೀಕರಿಸಬೇಕಾದ ಪರಿಸ್ಥಿತಿಯನ್ನು ಮೋದಿ ಅವರು ಸ್ಮರಿಸಿದರು. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ರಾಜ್ಯದಲ್ಲಿ ಹೆಣ್ಣುಮಕ್ಕಳು ಶಿಕ್ಷಣದಲ್ಲಿ ಗಮನಾರ್ಹವಾಗಿ ಹಿಂದುಳಿದಿದ್ದಾರೆ, ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ ಮತ್ತು ಶಾಲೆಗೆ ದಾಖಲಾದವರಲ್ಲೂ ಹೆಚ್ಚಿನ ಮಂದಿ ಬಹಳ ಬೇಗ ಶಾಲೆ ತೊರೆಯುತ್ತಿದ್ದಾರೆ ಎಂಬ ಅಂಶವು ತಮ್ಮನ್ನು ಆಘಾತಗೊಳಿಸಿದ್ದಾಗಿ ಶ್ರೀ ಮೋದಿ ಅವರು ಹೇಳಿದರು. ಈ ಪರಿಸ್ಥಿತಿಯನ್ನು ಪರಿವರ್ತಿಸಲು 25 ವರ್ಷಗಳ ಹಿಂದೆ ದೊರೆತ ಸಾರ್ವಜನಿಕ ಬೆಂಬಲವನ್ನು ಅವರು ಪ್ರಶಂಸಿಸಿದರು. ಜೂನ್ ಮಧ್ಯದಲ್ಲಿ 40-42 ಡಿಗ್ರಿ ಸೆಲ್ಸಿಯಸ್ನಷ್ಟು ಭಾರಿ ತಾಪಮಾನ ದಾಖಲಾಗಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಹೆಣ್ಣುಮಕ್ಕಳನ್ನು ವೈಯಕ್ತಿಕವಾಗಿ ಶಾಲೆಗೆ ಕರೆದೊಯ್ಯುತ್ತಿದ್ದಾಗ 40-42 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತಿದ್ದನ್ನು ನೆನಪಿಸಿಕೊಂಡರು. ʻʻಬಾಲಕಿಯರ ರಥ ಯಾತ್ರೆ”ಯಿಂದಾಗಿ ಶಾಲಾ ದಾಖಲಾತಿಯ ಪ್ರಮಾಣ ಹೆಚ್ಚಾಗಿದ್ದನ್ನು ಅವರು ಒತ್ತಿ ಹೇಳಿದರು ಮತ್ತು ಈ ಪ್ರಯತ್ನಗಳು ನೀಡಿದ ಗಣನೀಯ ಪ್ರಯೋಜನಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇದರ ಪರಿಣಾಮವಾಗಿ, ಶಾಲಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಯಿತು, ಆಧುನಿಕ ಸೌಲಭ್ಯಗಳನ್ನು ಪರಿಚಯಿಸಲಾಯಿತು, ವ್ಯವಸ್ಥೆಗಳನ್ನು ಬಲಪಡಿಸಲಾಯಿತು ಮತ್ತು ಶಿಕ್ಷಕರನ್ನು ನೇಮಕ ಮಾಡಲಾಯಿತು ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಸಮಾಜವು ಸಕ್ರಿಯವಾಗಿ ಭಾಗವಹಿಸಿತು ಮತ್ತು ತನ್ನ ಜವಾಬ್ದಾರಿಗಳನ್ನು ಪೂರೈಸಿತು. ಆ ಸಮಯದಲ್ಲಿ ದಾಖಲಾದ ಅನೇಕ ಮಕ್ಕಳು ಈಗ ವೈದ್ಯರು ಮತ್ತು ಎಂಜಿನಿಯರ್ಗಳಾಗಿದ್ದಾರೆ, ಶಾಲೆ ಬಿಡುವ ಪ್ರಮಾಣ ಕಡಿಮೆಯಾಗಿದೆ ಮತ್ತು ಕಲಿಕೆಯ ಹಸಿವು ಗುಜರಾತ್ನಾದ್ಯಂತ ವ್ಯಾಪಿಸಿದೆ ಎಂದು ಅವರು ಗಮನ ಸೆಳೆದರು.

ಮತ್ತೊಂದು ಪ್ರಮುಖ ಕಳವಳದ ಬಗ್ಗೆ ಮಾತನಾಡಿದ ಶ್ರೀ ಮೋದಿ ಅವರು, ಹೆಣ್ಣು ಭ್ರೂಣ ಹತ್ಯೆಯ ಪಾಪವನ್ನು ಖಂಡಿಸಿದರು. ಇದೊಂದು ಗಂಭೀರ ಕಳಂಕ ಎಂದರು. ಈ ವಿಷಯದ ಸುತ್ತಲಿನ ಸಾಮಾಜಿಕ ಆತಂಕದ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು ಅದರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಲು ತಾವು ಪಡೆದ ಬೆಂಬಲವನ್ನು ನೆನಪಿಸಿಕೊಂಡರು. ಸೂರತ್ ನಿಂದ ಉಮಿಯಾ ಮಾತಾವರೆಗಿನ ಪ್ರಯಾಣವನ್ನು ಉಲ್ಲೇಖಿಸಿದ ಅವರು, ಇದು ಲಿಂಗ ಸಮಾನತೆಯ ಭಾವನೆಯನ್ನು ಬಲಪಡಿಸಲು ಸಹಾಯ ಮಾಡಿತು ಎಂದರು. ಉಮಿಯಾ ಮಾತಾ ಆಗಿರಲಿ, ಖೋಡಿಯಾರ್ ಮಾತಾ ಆಗಿರಲಿ, ಕಾಳಿ ಮಾತಾ, ಅಂಬಾ ಮಾತಾ ಅಥವಾ ಬಹುಚಾರ್ ಮಾತಾ ಆಗಿರಲಿ ಸ್ತ್ರೀ ಶಕ್ತಿಯನ್ನು ಪೂಜಿಸುವ ಭೂಮಿಯಾದ ಗುಜರಾತ್ ರಾಜ್ಯವು ಹೆಣ್ಣು ಭ್ರೂಣ ಹತ್ಯೆಯ ಕಳಂಕವನ್ನು ಹೊರಬಾರದು ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಈ ಭಾವನೆ ಜಾಗೃತಗೊಂಡು ವ್ಯಾಪಕ ಬೆಂಬಲವನ್ನು ಪಡೆದ ನಂತರ, ಗುಜರಾತ್ ನಲ್ಲಿ ಗಂಡು-ಹೆಣ್ಣು ಮಕ್ಕಳ ಅನುಪಾತದಲ್ಲಿನ ಅಂತರ  ಯಶಸ್ವಿಯಾಗಿ ಕಡಿಮೆಯಾಗತೊಡಗಿತು ಎಂದು ಅವರು ಹೇಳಿದರು.

"ಸಮಾಜದ ಕಲ್ಯಾಣಕ್ಕಾಗಿ ಉದಾತ್ತ ಉದ್ದೇಶಗಳು ಮತ್ತು ಪರಿಶುದ್ಧತೆಯೊಂದಿಗೆ ಪ್ರಯತ್ನಗಳನ್ನು ಕೈಗೊಂಡಾಗ, ದೈವಿಕ ಬೆಂಬಲವು ಜೊತೆಯಾಗುತ್ತದೆ - ಮತ್ತು ಸಮಾಜವು ಸ್ವತಃ ದೈವಿಕ ಶಕ್ತಿಯಾಗುತ್ತದೆ," ಎಂದು ಶ್ರೀ ಮೋದಿ ಅವರು ಹೇಳಿದರು. ಅಂತಹ ಪ್ರಯತ್ನಗಳು ಫಲಿತಾಂಶಗಳನ್ನು ನೀಡುತ್ತವೆ ಮತ್ತು ಇಂದು ಸಮಾಜದಲ್ಲಿ ಹೊಸ ಜಾಗೃತಿ ಹೊರಹೊಮ್ಮಿದೆ ಎಂದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು, ಅವರ ಘನತೆಯನ್ನು ಹೆಚ್ಚಿಸಲು ಮತ್ತು ಭವ್ಯ ವಸತಿಗೃಹಗಳ ನಿರ್ಮಾಣ ಸೇರಿದಂತೆ ಅವರಿಗೆ ಅಗತ್ಯ ಸೌಲಭ್ಯಗಳನ್ನು ಸೃಷ್ಟಿಸಲು ಜನರು ಈಗ ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಗುಜರಾತ್ ನಲ್ಲಿ ಬಿತ್ತಿದ ಬೀಜಗಳು ಈಗ ರಾಷ್ಟ್ರವ್ಯಾಪಿ ಆಂದೋಲನವಾಗಿ ಬೆಳೆದಿವೆ - "ಬೇಟಿ-ಬೇಟಿಯೋನ್, ಬೇಟಿ ಪಡಾವೋ" (ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ) ಎಂಬುದು ಸಾರ್ವಜನಿಕ ಅಭಿಯಾನವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ದೇಶಾದ್ಯಂತ ಐತಿಹಾಸಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ʻಆಪರೇಷನ್ ಸಿಂದೂರʼದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಹೆಣ್ಣು ಮಕ್ಕಳ ಧ್ವನಿ ಈಗ ಎಲ್ಲೆಡೆ ಕೇಳುತ್ತಿದೆ ಮತ್ತು ಅವರ ಸಾಮರ್ಥ್ಯವನ್ನು ಗುರುತಿಸಲಾಗುತ್ತಿದೆ ಎಂದರು. ಹಳ್ಳಿಗಳಲ್ಲಿ "ಲಕ್ಷಾಧಿಪತಿ ದೀದಿ"ಯರ ಉದಾಹರಣೆಯನ್ನು ಉಲ್ಲೇಖಿಸಿದ ಅವರು, 3 ಕೋಟಿ ಗುರಿಯಲ್ಲಿ 2 ಕೋಟಿಯನ್ನು ಈಗಾಗಲೇ ಸಾಧಿಸಲಾಗಿದೆ ಎಂದರು. "ಡ್ರೋನ್ ದೀದಿ" ಯಂತಹ ಉಪಕ್ರಮಗಳು ಹಳ್ಳಿಗಳಲ್ಲಿ ಮಹಿಳೆಯರ ಬಗ್ಗೆ ಸಾಮಾಜಿಕ ದೃಷ್ಟಿಕೋನಗಳನ್ನು ಪರಿವರ್ತಿಸಿವೆ ಎಂದು ಅವರು ಹೇಳಿದರು. "ಬ್ಯಾಂಕ್ ಸಖಿ" ಮತ್ತು "ಬಿಮಾ ಸಖಿ"ಯಂತಹ ಯೋಜನೆಗಳನ್ನು ಪ್ರಸ್ತಾಪಿಸಿದ ಶ್ರೀ ಮೋದಿ ಅವರು, ಈ ಕಾರ್ಯಕ್ರಮಗಳು ಭಾರತದ ಮಾತೃಶಕ್ತಿಯ ಪ್ರಯತ್ನಗಳ ಮೂಲಕ ಗ್ರಾಮೀಣ ಆರ್ಥಿಕ ಬೆಳವಣಿಗೆಯನ್ನು ಸಕ್ರಿಯವಾಗಿ ಮುನ್ನಡೆಸುತ್ತಿವೆ ಎಂದು ಒತ್ತಿ ಹೇಳಿದರು.

ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ವ್ಯಕ್ತಿಗಳನ್ನು ಪೋಷಿಸುವುದು ಮತ್ತು ಅವರ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಇಂದಿನ ವೇಗದ ವಾತಾವರಣದಲ್ಲಿ, ಈ ಗುರಿ ಇನ್ನಷ್ಟು ಪ್ರಸ್ತುತವಾಗಿದೆ ಎಂದು ಹೇಳಿದರು. ಕೌಶಲ್ಯ ಮತ್ತು ಪ್ರತಿಭೆಯಲ್ಲಿ ಸ್ಪರ್ಧಾತ್ಮಕ ಮನೋಭಾವಕ್ಕೆ ಕರೆ ನೀಡಿದ ಅವರು, ಸಮಾಜದ ನಿಜವಾದ ಶಕ್ತಿ ಅದರ ಕೌಶಲ್ಯದಲ್ಲಿ ಅಡಗಿದೆ ಎಂದು ಹೇಳಿದರು. ಶ್ರೀ ಮೋದಿ ಅವರು ಭಾರತದ ನುರಿತ ಮಾನವಶಕ್ತಿಯ ಜಾಗತಿಕ ಬೇಡಿಕೆಯನ್ನು ಎತ್ತಿ ತೋರಿದರು ಮತ್ತು ಹಿಂದಿನ ಸರ್ಕಾರಗಳು ದಶಕಗಳಿಂದ ಜಾರಿಗೆ ತಂದ ಹಳೆಯ ಶಿಕ್ಷಣ ವ್ಯವಸ್ಥೆಯನ್ನು ಅವರು ಟೀಕಿಸಿದರು. ತಮ್ಮ ಸರ್ಕಾರವು ಗಮನಾರ್ಹ ಸುಧಾರಣೆಗಳನ್ನು ತಂದಿದೆ, ಹಳೆಯ ವಿಧಾನಗಳಿಂದ ದೂರ ಸರಿದು ಶೈಕ್ಷಣಿಕ ವಲಯವನ್ನು ಪರಿವರ್ತಿಸಿದೆ ಎಂದು ಅವರು ಹೇಳಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಕೌಶಲ್ಯ ಅಭಿವೃದ್ಧಿಗೆ ಬಲವಾದ ಒತ್ತು ನೀಡಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ʻಸ್ಕಿಲ್ ಇಂಡಿಯಾʼಯೋಜನೆ ಅಡಿಯಲ್ಲಿ, ಲಕ್ಷಾಂತರ ಯುವಕರನ್ನು ವಿವಿಧ ಕ್ಷೇತ್ರಗಳಲ್ಲಿ ಪರಿಣಿತ ಮಾನವಶಕ್ತಿಯಾಗಿ ಸಜ್ಜುಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಜಗತ್ತು ವಯಸ್ಸಾದ ಜನಸಂಖ್ಯೆಯ ಪ್ರಮುಖ ಸವಾಲನ್ನು ಎದುರಿಸುತ್ತಿದೆ ಮತ್ತು ಯುವ ಪ್ರತಿಭೆಗಳ ಅಗತ್ಯವಿದೆ - ಈ ಕ್ಷೇತ್ರವು ಭಾರತವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಗಮನ ಸೆಳೆದರು. ಯುವಕರಿಗೆ ಕೌಶಲ್ಯ ನೀಡಿದಾಗ, ಅದು ಅಪಾರ ಉದ್ಯೋಗಾವಕಾಶಗಳನ್ನು ತೆರೆಯುತ್ತದೆ, ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಮತ್ತು ಸ್ವಾವಲಂಬನೆಯನ್ನು ಬೆಳೆಸುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು. ಯುವಕರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವತ್ತ ಸರ್ಕಾರ ಹೆಚ್ಚು ಗಮನ ಹರಿಸುತ್ತಿದೆ ಎಂದು ಅವರು ಪುನರುಚ್ಚರಿಸಿದರು.

11 ವರ್ಷಗಳ ಹಿಂದೆ, ಭಾರತದಲ್ಲಿ ಕೇವಲ ಬೆರಳೆಣಿಕೆಯಷ್ಟು ನವೋದ್ಯಮಗಳಿದ್ದವು. ಆದರೆ ಇಂದು ಅವುಗಳ ಈ ಸಂಖ್ಯೆ 200,000ಕ್ಕೆ ಸಮೀಪಿಸುತ್ತಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಈಗ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿಯೂ ನವೋದ್ಯಮಗಳೂ ತಲೆ ಎತ್ತುತ್ತಿವೆ ಎಂದರು. ʻಮುದ್ರಾʼ ಯೋಜನೆಯ ಆರಂಭವನ್ನು ಎತ್ತಿ ತೋರಿದ ಅವರು, ಇದು ಯುವಕರಿಗೆ ಖಾತರಿಯಿಲ್ಲದೆ ಬ್ಯಾಂಕ್ ಸಾಲಗಳನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಇದರ ಪರಿಣಾಮವಾಗಿ, ಯುವಕರಿಗೆ ಸ್ವಯಂ ಉದ್ಯೋಗಕ್ಕಾಗಿ 33 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಈ ಉಪಕ್ರಮವು ಲಕ್ಷಾಂತರ ಯುವಕರನ್ನು ಸ್ವಾವಲಂಬಿಗಳಾಗಲು ಮತ್ತು ಇತರರಿಗೆ ಉದ್ಯೋಗವನ್ನು ಒದಗಿಸಲು ಸಶಕ್ತಗೊಳಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, 1 ಲಕ್ಷ ಕೋಟಿ ರೂ.ಗಳ ಯೋಜನೆಯಾದ ʻಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್ಗಾರ್ ಯೋಜನೆʼಯ ಘೋಷಣೆ ಮತ್ತು ತಕ್ಷಣದ ಅನುಷ್ಠಾನವನ್ನು ಉಲ್ಲೇಖಿಸಿದರು. ಈ ಉಪಕ್ರಮದ ಅಡಿಯಲ್ಲಿ, ಖಾಸಗಿ ವಲಯದಲ್ಲಿ ಯಾರನ್ನಾದರೂ ನೇಮಿಸಿಕೊಂಡರೆ, ಸರ್ಕಾರವು ಅವರ ಆರಂಭಿಕ ವೇತನಕ್ಕಾಗಿ 15,000 ರೂ.ಗಳನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.

"ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿಯು ದಾಖಲೆಯ ವೇಗದಲ್ಲಿ ಪ್ರಗತಿ ಸಾಧಿಸುತ್ತಿದೆ," ಎಂದು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು. ʻಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೌರ ವ್ಯವಸ್ಥೆಗಳ ಸ್ಥಾಪನೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಭಾರತವು ಡ್ರೋನ್ ಮತ್ತು ರಕ್ಷಣಾ ಕೈಗಾರಿಕೆಗಳಲ್ಲಿ ನಿರಂತರ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು. ಮಿಷನ್ ಚಾಲಿತ ಉತ್ಪಾದನೆಯ ಮೇಲೆ ಸರ್ಕಾರ ಪ್ರಮುಖವಾಗಿ ಗಮನ ಹರಿಸಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಈ ಎಲ್ಲ ಉಪಕ್ರಮಗಳು ಗುಜರಾತ್ ನಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಗಮನ ಸೆಳೆದರು.

"ಜಗತ್ತು ಇಂದು ಭಾರತದ ಶ್ರಮ ಮತ್ತು ಪ್ರತಿಭೆಯನ್ನು ಅತ್ಯಂತ ಗೌರವದಿಂದ ಕಾಣುತ್ತದೆ ಮತ್ತು ಅದರ ಮೌಲ್ಯವನ್ನು ಗುರುತಿಸುತ್ತಿದೆ. ಇದರ ಪರಿಣಾಮವಾಗಿ, ವಿವಿಧ ದೇಶಗಳಲ್ಲಿ ಹಲವಾರು ಅವಕಾಶಗಳು ಹೊರಹೊಮ್ಮುತ್ತಿವೆ", ಎಂದು ಶ್ರೀ ಮೋದಿ ಅವರು ಹೇಳಿದರು. ಭಾರತೀಯ ಯುವಕರು ಆರೋಗ್ಯ, ಶಿಕ್ಷಣ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಗಮನಾರ್ಹ ಛಾಪು ಮೂಡಿಸುತ್ತಿದ್ದಾರೆ – ತಮ್ಮ ಸಾಮರ್ಥ್ಯ ಮತ್ತು ಸಾಧನೆಗಳಿಂದ ಜಗತ್ತನ್ನು ಬೆರಗುಗೊಳಿಸುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.

ಕೆಂಪುಕೋಟೆಯಿಂದ ಮಾಡಿದ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಒತ್ತಿ ಹೇಳಿದಂತೆ ಸ್ವಾವಲಂಬನೆ ಮತ್ತು ದೇಶೀಯ ಉತ್ಪಾದನೆಗೆ ತಮ್ಮ ಬಲವಾದ ಪ್ರಧಾನ್ಯತೆಯನ್ನು ಪ್ರಧಾನಮಂತ್ರಿ ಅವರು ಪುನರುಚ್ಛರಿಸಿದರು. ಭಾರತವು ಸ್ವಾವಲಂಬಿಯಾಗಬೇಕು ಎಂದು ಒತ್ತಾಯಿಸಿದ ಅವರು ಸ್ವದೇಶಿ ಉತ್ಪನ್ನಗಳನ್ನು ದೃಢನಿಶ್ಚಯದಿಂದ ಖರೀದಿಸುವಂತೆ ಸಮಾಜಕ್ಕೆ ಕರೆ ನೀಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಜನರ ಕೊಡುಗೆಗಳನ್ನು ಶ್ಲಾಘಿಸಿದರು. ಈ ಹಿಂದೆ ತಾವು ಕಾರ್ಯಗಳನ್ನು ನಿಯೋಜಿಸುವ ಮೂಲಕ ಹಿರಿಮೆಯನ್ನು ಗಳಿಸಿರಬಹುದು, ಆದರೆ ಜನರೇ ಆ ಕಾರ್ಯಗಳನ್ನು ಪೂರೈಸಿದ್ದಾರೆ ಮತ್ತು ಫಲಿತಾಂಶಗಳನ್ನು ನೀಡಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದರು. ಇಲ್ಲಿಯವರೆಗೆ ತಮ್ಮ ಇಡೀ ಸಾರ್ವಜನಿಕ ಜೀವನದಲ್ಲಿ, ತಮ್ಮ ನಿರೀಕ್ಷೆಗಳನ್ನು ಪೂರೈಸದ ಉದಾಹರಣೆಯೇ  ಇಲ್ಲ ಎಂದು ಪ್ರಧಾನಮಂತ್ರಿ ಅವರು ದೃಢವಾಗಿ ಹೇಳಿದರು. ಮತ್ತು ಈ ವಿಶ್ವಾಸವು ಹೊಸ ಜವಾಬ್ದಾರಿಗಳನ್ನು ನಿಯೋಜಿಸುವ ತಮ್ಮ ಬಯಕೆಯನ್ನು ಉತ್ತೇಜಿಸುತ್ತಿದೆ ಎಂದರು.

ಇಂದಿನ ಅಸ್ಥಿರ ಜಾಗತಿಕ ವಾತಾವರಣದಲ್ಲಿ, ಸ್ವಾವಲಂಬಿಯಾಗುವುದು ಭಾರತದ ಮುಂದಿರುವ ಅತ್ಯುತ್ತಮ ಮಾರ್ಗವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಸ್ವಾವಲಂಬನೆ ಎಂದರೆ ದೇಶೀಯ ಸರಕುಗಳಿಗೆ ಆದ್ಯತೆ ನೀಡುವುದು ಮತ್ತು ʻಮೇಕ್ ಇನ್ ಇಂಡಿಯಾʼ ಉಪಕ್ರಮಕ್ಕೆ ಬೆಂಬಲ ಹೆಚ್ಚಿಸುವುದು ಎಂದು ಅವರು ಸ್ಪಷ್ಟಪಡಿಸಿದರು. "ಸ್ವದೇಶಿ ಆಂದೋಲನವು ಶತಮಾನಗಳಷ್ಟು ಹಳೆಯದಾದ ವಿಚಾರವಲ್ಲ, ಬದಲಿಗೆ ಅದು ಭವಿಷ್ಯವನ್ನು ಬಲಪಡಿಸುವ ಅಭಿಯಾನವಾಗಿದೆ, ಮತ್ತು ಅದರ ನಾಯಕತ್ವವನ್ನು ಸಮಾಜ - ವಿಶೇಷವಾಗಿ ಯುವಕರು ವಹಿಸಬೇಕು," ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಯಾವುದೇ ವಿದೇಶಿ ವಸ್ತುಗಳು ತಮ್ಮ ಮನೆಗಳಿಗೆ ಪ್ರವೇಶಿಸಬಾರದು ಎಂದು ಸಂಕಲ್ಪ ಮಾಡುವಂತೆ ಅವರು ಕುಟುಂಬಗಳಿಗೆ ಕರೆ ನೀಡಿದರು. ತಮ್ಮ ʻಮೇಡ್ ಇನ್ ಇಂಡಿಯಾʼ ಕರೆಗೆ ಓಗೊಟ್ಟು ಜನರು ವಿದೇಶದಲ್ಲಿ ಮದುವೆಗಳನ್ನು ರದ್ದುಗೊಳಿಸಿ, ಭಾರತದಲ್ಲಿ ವಿವಾಹಾಚರಣೆ ಆಯ್ಕೆ ಮಾಡಿದ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಇಂತಹ ಬೆಳವಣಿಗೆಗಳು ಸ್ವಾಭಾವಿಕವಾಗಿ ದೇಶಭಕ್ತಿಯ ಭಾವನೆಗಳನ್ನು ಜಾಗೃತಗೊಳಿಸುತ್ತವೆ ಎಂದು ಅವರು ಗಮನ ಸೆಳೆದರು.

"ಮೇಕ್ ಇನ್ ಇಂಡಿಯಾ ಮತ್ತು ʻಆತ್ಮನಿರ್ಭರ ಭಾರತʼದ ಯಶಸ್ಸು ಎಲ್ಲರಿಗೂ ಸೇರಿದ್ದು ಮತ್ತು ಇದು ಸಾಮೂಹಿಕ ಶಕ್ತಿಯಾಗಿದೆ. ಇದು ಭವಿಷ್ಯದ ಪೀಳಿಗೆಯ ಅಡಿಪಾಯವಾಗಿದೆ," ಎಂದು ಶ್ರೀ ಮೋದಿ ಅವರು ಉದ್ಗರಿಸಿದರು. ಜನರು ಭಾರತೀಯ ಉತ್ಪನ್ನಗಳನ್ನು ಖರೀದಿಸಲು ಪ್ರಾರಂಭಿಸಿದರೆ ಮಾರುಕಟ್ಟೆ ಸ್ಪರ್ಧೆ, ಉತ್ತಮ ಪ್ಯಾಕೇಜಿಂಗ್ ಮತ್ತು ಕೈಗೆಟುಕುವ ದರದ ಹಿನ್ನೆಲೆಯಲ್ಲಿ ಆ ಉತ್ಪನ್ನಗಳ ಗುಣಮಟ್ಟವು ಸ್ವಯಂಚಾಲಿತವಾಗಿ ಸುಧಾರಿಸುತ್ತದೆ ಎಂದು ಅವರು ಹೇಳಿದರು. ಭಾರತೀಯ ಕರೆನ್ಸಿಯನ್ನು ದೇಶದಿಂದ ಹೊರಗೆ ಹರಿಯಲು ಅನುಮತಿಸುವುದು ಸೂಕ್ತವಲ್ಲ ಎಂದು ಅವರು ಒತ್ತಿ ಹೇಳಿದರು.

ತಾವು ವಹಿಸಿರುವ ಸಣ್ಣ ಕಾರ್ಯವನ್ನು ಸಮಾಜವು ಜಾಗೃತಿಯ ಮೂಲಕ ಪೂರೈಸುತ್ತದೆ ಮತ್ತು ರಾಷ್ಟ್ರಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ಮೋದಿ ಅವರು ವ್ಯಕ್ತಪಡಿಸಿದರು. ಇಂದು ಸಮಾಜವು ಕೇವಲ ಕೃಷಿಪ್ರಧಾನ ಮಾತ್ರವಾಗಿಲ್ಲ, ಉದ್ಯಮಶೀಲತೆ ಪ್ರಧಾನವೂ ಸಮಾಜವೂ ಹೌದೆಂದು ಪ್ರಧಾನಮಂತ್ರಿ ಅವರು ವ್ಯಾಪಾರಿಗಳಿಗೆ ಕರೆ ನೀಡಿದರು. "ಇಲ್ಲಿ ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ" ಎಂಬ ಫಲಕಗಳನ್ನು ವ್ಯಾಪಾರಿಗಳು ಪ್ರದರ್ಶಿಸಬೇಕು ಎಂದು ಅವರು ಸಲಹೆ ನೀಡಿದರು. ಭಾರತೀಯ ಸರಕುಗಳನ್ನು ಖರೀದಿಸಲು ಗ್ರಾಹಕರನ್ನು ಪ್ರೋತ್ಸಾಹಿಸಬೇಕು ಮತ್ತು ಸ್ವದೇಶಿ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಸಂಕಲ್ಪಿಸಬೇಕು. ಇದು ಕೂಡ ದೇಶಭಕ್ತಿಯ ಕಾರ್ಯವಾಗಿದೆ ಎಂದು ಶ್ರೀ ಮೋದಿ ಅವರು ದೃಢವಾಗಿ ಹೇಳಿದರು. ʻಆಪರೇಷನ್ ಸಿಂದೂರʼ ಮಾತ್ರವಲ್ಲ, ಸ್ವದೇಶಿಯತೆಯನ್ನು ಅಪ್ಪಿಕೊಳ್ಳುವುದು ಕೂಡ ದೇಶ ಸೇವೆಯ ಒಂದು ರೂಪವಾಗಿದೆ ಎಂಬ ಭಾವನೆಯನ್ನು ಜನರಿಗೆ ಮನದಟ್ಟು ಮಾಡಿದ ಪ್ರಧಾನಮಂತ್ರಿ ಅವರು, ಈ ನಿಟ್ಟಿನಲ್ಲಿ ಜನರಿಂದ ಭರವಸೆ ಮತ್ತು ಕೊಡುಗೆಯನ್ನು ಕೋರಿದರು. ಗುಜರಾತ್ ಜನರ ನಡುವೆ ಇರಲು ದೊರೆತ ಈ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ ಅವರು, ಎಲ್ಲರಿಗೂ ಶುಭ ಕೋರಿದರು ಮತ್ತು ಹೆಣ್ಣುಮಕ್ಕಳಿಗೆ ಹೃತ್ಪೂರ್ವಕ ಆಶೀರ್ವಾದ ನೀಡುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರು ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

*****


(Release ID: 2160486)