ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸೌಲಭ್ಯ(ಎನ್‌ಸಿಎಚ್)ವು 2025 ಜುಲೈನಲ್ಲಿ 2.72 ಕೋಟಿ ರೂ. ಮೊತ್ತದ ಮರುಪಾವತಿಗಳನ್ನು ಮಾಡಿದೆ


1.34 ಕೋಟಿ ರೂ.  ಪರಿಹಾರ ಪಡೆದಿರುವ ಇ-ಕಾಮರ್ಸ್ ವಲಯವು ಮರುಪಾವತಿ ದೂರುಗಳಲ್ಲಿ ಅಗ್ರಸ್ಥಾನದಲ್ಲಿದೆ

ಎನ್‌ಸಿಎಚ್ ಕರೆಗಳಲ್ಲಿ 10 ಪಟ್ಟು ಹೆಚ್ಚಳ; ವಾಟ್ಸ್ಆಪ್ ದೂರುಗಳು 20% ಏರಿಕೆ

Posted On: 22 AUG 2025 12:28PM by PIB Bengaluru

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ(ಎನ್‌ಸಿಎಚ್)ಯು 2025 ಜುಲೈನಲ್ಲಿ 2.72 ಕೋಟಿ ರೂ. ಮೊತ್ತದ ಮರುಪಾವತಿಗಳನ್ನು ಮಾಡಿದ್ದು, 27 ವಲಯಗಳಿಗೆ ಸೇರಿದ 7,256 ಗ್ರಾಹಕರ ದೂರುಗಳನ್ನು ಪರಿಹರಿಸಿದೆ.

ಇ-ಕಾಮರ್ಸ್ ವಲಯದಿಂದ ಅತಿ ಹೆಚ್ಚಿನ ದೂರುಗಳು ದಾಖಲಾಗಿದ್ದು, ಈ ವಲಯದ 3,594 ದೂರಿನ ಪ್ರಕರಣಗಳಿಗೆ ಸಂಬಂಧಿಸಿ ವಿಧಿಸಲಾಗಿದ್ದ ಖರೀದಿ ಹಣ, ದಂಡ ಮತ್ತು ಇತರೆ ಶುಲ್ಕಗಳಿಗೆ ಸಂಬಂಧಿಸಿದ ಕುಂದುಕೊರತೆ ಮನವಿಗಳಿಗೆ 1.34 ಕೋಟಿ ರೂ. ಮೊತ್ತವನ್ನು ಮರುಪಾವತಿಸಲಾಗಿದೆ. ಇದರ ನಂತರ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯವು 31 ಲಕ್ಷ ರೂ. ಮರುಪಾವತಿ ಪಡೆದಿವೆ.

ಸಹಾಯವಾಣಿಯ ತಾಂತ್ರಿಕ ಪರಿವರ್ತನೆಯು ಅದರ ವ್ಯಾಪ್ತಿ ಮತ್ತು ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಕರೆಗಳ ಪ್ರಮಾಣವು 10 ಪಟ್ಟು ಹೆಚ್ಚಾಗಿದೆ. 2014 ಡಿಸೆಂಬರ್  ನಲ್ಲಿ ಇದ್ದ 12,553ರಿಂದ 2025 ಡಿಸೆಂಬರ್ ನಲ್ಲಿ 1,55,138ಕ್ಕೆ ಏರಿದೆ. ಅದೇ ರೀತಿ, ಸರಾಸರಿ ಮಾಸಿಕ ದೂರು ನೋಂದಣಿಗಳು 2017ರಲ್ಲಿ ಇದ್ದ 37,062ರಿಂದ 2024 ರಲ್ಲಿ 1,11,951ಕ್ಕೆ ಏರಿದೆ. ಡಿಜಿಟಲ್ ಚಾನೆಲ್‌ಗಳ ಗ್ರಾಹಕರ ಅಳವಡಿಕೆಯೂ ಹೆಚ್ಚಾಗಿದೆ, ವಾಟ್ಸಾಪ್ ಮೂಲಕ ಕುಂದುಕೊರತೆ ನೋಂದಣಿ 2023 ಮಾರ್ಚ್  ನಲ್ಲಿ ಇದ್ದ 3%ರಿಂದ 2025 ಮಾರ್ಚ್ ನಲ್ಲಿ 20%ಗೆ ಏರಿದೆ.

ಗ್ರಾಹಕರು, ಸರ್ಕಾರಿ ಸಂಸ್ಥೆಗಳು, ಖಾಸಗಿ ವಲಯದ ಕಂಪನಿಗಳು ಮತ್ತು ನಿಯಂತ್ರಕ ಸಂಸ್ಥೆಗಳನ್ನು ಒಟ್ಟುಗೂಡಿಸುವ ಏಕೀಕೃತ ವೇದಿಕೆಯಾಗಿ ಎನ್‌ಸಿಎಚ್ ಕಾರ್ಯ ನಿರ್ವಹಿಸುತ್ತದೆ. ಸಹಕಾರಿ ಪರಿಹಾರ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಪಾಲುದಾರರ ಸಂಖ್ಯೆ 2017ರಲ್ಲಿ ಇದ್ದ 263ರಿಂದ 2025ರಲ್ಲಿ 1,131 ಕಂಪನಿಗಳಿಗೆ ಸ್ಥಿರವಾಗಿ ವಿಸ್ತರಿಸಿದೆ.

ಗ್ರಾಹಕ ಹಕ್ಕುಗಳನ್ನು ರಕ್ಷಿಸುವ ಮತ್ತು ನ್ಯಾಯಯುತ ವ್ಯಾಪಾರ ಅಭ್ಯಾಸಗಳನ್ನು ಉತ್ತೇಜಿಸುವ ತನ್ನ ಆದೇಶಕ್ಕೆ ಅನುಗುಣವಾಗಿ, ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯು ಎನ್‌ಸಿಎಚ್ ಮೂಲಕ ಸ್ವೀಕರಿಸಿದ ಕುಂದುಕೊರತೆ ದತ್ತಾಂಶವನ್ನು ಮೇಲ್ವಿಚಾರಣೆ ಮಾಡುತ್ತದೆ. ಇದಲ್ಲದೆ, ಹೆಚ್ಚಿನ ಪ್ರಮಾಣದ ದೂರುಗಳನ್ನು ಹೊಂದಿರುವ ಕಂಪನಿಗಳನ್ನು ಇಲಾಖೆ ಗುರುತಿಸುತ್ತದೆ, ಅವುಗಳು ಇನ್ನೂ ಒಮ್ಮುಖ ಕಾರ್ಯಕ್ರಮದ ಭಾಗವಾಗಿಲ್ಲ. ಎನ್‌ಸಿಎಚ್ ಕುಂದುಕೊರತೆ ಪರಿಹಾರಕ್ಕೆ ಪೂರ್ವಭಾವಿ ವಿಧಾನವನ್ನು ಪ್ರದರ್ಶಿಸುವ ಕಂಪನಿಗಳೊಂದಿಗೆ ಸಹಕರಿಸುತ್ತದೆ, ಸ್ವಯಂಪ್ರೇರಿತ ಆಧಾರದ ಮೇಲೆ ಅವುಗಳನ್ನು ಒಮ್ಮುಖ ಪಾಲುದಾರರನ್ನಾಗಿ ಸೇರಿಸುತ್ತದೆ. ಒಮ್ಮೆ ಆನ್‌ಬೋರ್ಡ್ ಮಾಡಿದ ನಂತರ, ಎನ್‌ಸಿಎಚ್ ಈ ಕಂಪನಿಗಳೊಂದಿಗೆ ನೈಜ-ಸಮಯದ ದೂರು ದತ್ತಾಂಶವನ್ನು ಹಂಚಿಕೊಳ್ಳುತ್ತದೆ, ಸಹಕಾರಿ ತೊಡಗಿಸಿಕೊಳ್ಳುವಿಕೆ ಮೂಲಕ ಉಚಿತ, ನ್ಯಾಯಯುತ ಮತ್ತು ತ್ವರಿತ ಪರಿಹಾರವನ್ನು ಸಕ್ರಿಯಗೊಳಿಸುತ್ತದೆ.

ಹೆಚ್ಚಿನ ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಎನ್‌ಸಿಎಚ್, ವ್ಯವಸ್ಥಿತವಾಗಿ ದೂರುಗಳನ್ನು ಸ್ವೀಕರಿಸಿದ ತಕ್ಷಣ ಒಮ್ಮುಖ ಪಾಲುದಾರರಿಗೆ ರವಾನಿಸುತ್ತದೆ, ಕಂಪನಿಗಳು ಸಕಾಲಿಕ ಪರಿಹಾರಕ್ಕೆ ಆದ್ಯತೆ ನೀಡುವ ನಿರೀಕ್ಷೆಯಿದೆ. ಈ ಸಹಯೋಗದ ಮಾದರಿಯು ಪಾರದರ್ಶಕತೆ, ಕಾರ್ಪೊರೇಟ್ ಹೊಣೆಗಾರಿಕೆ ಮತ್ತು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ, ಆದರೆ ನ್ಯಾಯ ನಿರ್ಣಯ ಕಾರ್ಯವಿಧಾನಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. ಉದ್ಯಮ ಭಾಗವಹಿಸುವಿಕೆಯನ್ನು ಮತ್ತಷ್ಟು ಉತ್ತೇಜಿಸಲು ಎನ್‌ಸಿಎಚ್, ಪಾಲುದಾರ-ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿದೆ, ಇದು ಸಂಪೂರ್ಣವಾಗಿ ಆನ್‌ಲೈನ್, ಪಾರದರ್ಶಕ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡಿದೆ.

ಹೆಚ್ಚಿನ ಕರೆಗಳ ಪ್ರಮಾಣದ ಅವಧಿಯಲ್ಲಿ ಪ್ರವೇಶ ಹೆಚ್ಚಿಸಲು ಮತ್ತು ದೂರು ನೋಂದಣಿಯನ್ನು ಸುಗಮಗೊಳಿಸಲು ಎನ್‌ಸಿಎಚ್, ತನ್ನ ಟೋಲ್-ಫ್ರೀ ಸಂಖ್ಯೆಯೊಂದಿಗೆ ವಾಟ್ಸ್ಆಪ್ ಸಂಯೋಜಿಸಿದೆ(1915). ಭಾರಿ ಸಂಚಾರ ಅಥವಾ ತಾಂತ್ರಿಕ ಅಂಶಗಳಿಂದಾಗಿ ದೀರ್ಘಾವಧಿಯ ಕಾಯುವ ಸಮಯದ ಸಂದರ್ಭಗಳಲ್ಲಿ, ಸ್ವಯಂಚಾಲಿತ ವಾಟ್ಸ್ಆಪ್ ಅಧಿಸೂಚನೆಗಳನ್ನು ಗ್ರಾಹಕರಿಗೆ ಕಳುಹಿಸಲಾಗುತ್ತದೆ, ಇದು ವೇದಿಕೆಯ ಮೂಲಕ ನೇರವಾಗಿ ದೂರುಗಳನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ಈ ಉಪಕ್ರಮವು ಸಹಾಯವಾಣಿಯ ದಕ್ಷತೆ ಮತ್ತು ಸ್ಪಂದನೆ ಸುಧಾರಿಸುವ ತಡೆರಹಿತ ಮತ್ತು ಬಳಕೆದಾರಸ್ನೇಹಿ ಪರ್ಯಾಯ ವ್ಯವಸ್ಥೆಯನ್ನು ನೀಡುತ್ತದೆ. ಇದಲ್ಲದೆ,

https://consumerhelpline.gov.in/public/feedback ಮೂಲಕ ಸಲಹೆಗಳನ್ನು ಹಂಚಿಕೊಳ್ಳಲು ಗ್ರಾಹಕರನ್ನು ಪ್ರೋತ್ಸಾಹಿಸುವ ಮೀಸಲಾದ ಪ್ರತಿಕ್ರಿಯೆ ಕಾರ್ಯವಿಧಾನವನ್ನು ಪರಿಚಯಿಸಲಾಗಿದೆ. ಸ್ವೀಕರಿಸಿದ ಪ್ರತಿಕ್ರಿಯೆಯನ್ನು ವ್ಯವಸ್ಥಿತವಾಗಿ ಪರಿಶೀಲಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನಿರಂತರ ಸುಧಾರಣೆಗೆ ಪ್ರಮುಖ ಮಾಹಿತಿ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಭಾರತದಲ್ಲಿ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಎನ್‌ಸಿಎಚ್,  ಪರಿಣಾಮಕಾರಿ ಪೂರ್ವ-ದಾವೆ ವೇದಿಕೆಯಾಗಿ ಹೊರಹೊಮ್ಮಿದೆ. ಸಾಂಪ್ರದಾಯಿಕ ಪ್ರಕರಣಗಳಿಗೆ ರಗಳೆ-ಮುಕ್ತ, ತ್ವರಿತ ಮತ್ತು ವೆಚ್ಚ-ಪರಿಣಾಮಕಾರಿ ಪರ್ಯಾಯವನ್ನು ನೀಡುತ್ತದೆ. ಕಾರ್ಯವಿಧಾನದ ವಿಳಂಬಗಳು ಮತ್ತು ಗ್ರಾಹಕರ ಔಪಚಾರಿಕ ಪ್ರಕರಣಗಳನ್ನು ಮುಂದುವರಿಸುವುದನ್ನು ತಡೆಯುವ ಹೆಚ್ಚಿನ ವೆಚ್ಚಗಳನ್ನು ನಿವಾರಿಸಲು ವಿನ್ಯಾಸಗೊಳಿಸಲಾದ ಸಹಾಯವಾಣಿಯು, ಪೂರ್ವ-ದಾವೆ ಹಂತದಲ್ಲಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವನ್ನು ಒದಗಿಸುತ್ತದೆ. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆಯ ಒಂದು ಉಪಕ್ರಮವಾದ ಎನ್‌ಸಿಎಚ್, ಎಲ್ಲರೂ ಪ್ರವೇಶಿಸಬಹುದಾದ ಮತ್ತು ಸಕಾಲಿಕ ಕುಂದುಕೊರತೆ ಪರಿಹಾರವನ್ನು ಖಚಿತಪಡಿಸಿಕೊಳ್ಳುವ ಮೂಲಕ ಗ್ರಾಹಕರ ವಿಶ್ವಾಸ ಬಲಪಡಿಸುವುದನ್ನು ಮುಂದುವರೆಸಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿರುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್) ಡಿಜಿಟಲ್ ಸಬಲೀಕರಣ, ನಾಗರಿಕ-ಕೇಂದ್ರಿತ ಸೇವಾ ವಿತರಣೆ ಮತ್ತು ಗ್ರಾಹಕರ ಕುಂದುಕೊರತೆ ಪರಿಹಾರದಲ್ಲಿ ಸಾಂಸ್ಥಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ವಿಕಸಿತ ಭಾರತದ ಮನೋಭಾವವನ್ನು ಪ್ರದರ್ಶಿಸುತ್ತದೆ.

ದೇಶಾದ್ಯಂತ ಸಹಾಯವಾಣಿಯಲ್ಲಿ ಗ್ರಾಹಕರ ಇತ್ತೀಚಿನ ಕೆಲವು ಸಕಾರಾತ್ಮಕ ಅನುಭವಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ:

ಅಸ್ಸಾಂ (ತಿನ್‌ಸುಕಿಯಾ)

ಅಸ್ಸಾಂನ ತಿನ್‌ಸುಕಿಯಾದಿಂದ ಬಂದ ಗ್ರಾಹಕರೊಬ್ಬರು ಸಾಮಾಜಿಕ ಮಾಧ್ಯಮ ಆಧಾರಿತ ಇ-ಕಾಮರ್ಸ್ ವೇದಿಕೆಯ ಮೂಲಕ ಎಲ್‌ಇಡಿ ದೀಪಕ್ಕಾಗಿ ಆನ್‌ಲೈನ್ ಆರ್ಡರ್ ಮಾಡಿದರು. 1,000 ರೂ. ಪಾವತಿಸಿದರೂ, ಗ್ರಾಹಕರು ಉತ್ಪನ್ನವನ್ನು ಅಥವಾ ಮಾರಾಟಗಾರರಿಂದ ಯಾವುದೇ ಪ್ರತಿಕ್ರಿಯೆ ಪಡೆಯಲಿಲ್ಲ. ವಿತರಣೆ, ಮರುಪಾವತಿ ಅಥವಾ ಸಂವಹನದ ಕೊರತೆಯಿಂದ ನಿರಾಶೆಗೊಂಡ ಗ್ರಾಹಕರು ಸಹಾಯವಾಣಿಗೆ ದೂರು ಸಲ್ಲಿಸಿದರು. ಎನ್‌ಸಿಎಚ್‌ನ ಹಸ್ತಕ್ಷೇಪದಿಂದ, ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಲಾಯಿತು ಮತ್ತು ಗ್ರಾಹಕರು ಮರುಪಾವತಿಯನ್ನು ಪಡೆದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಹಕರು “ಬಹುತ್ ಅಚಾ ಹೈ, ಬಹುತ್ ಸಹಾಯಕ ಹೈ. ಮೇನ್ ಸಬ್ಕೊ ಸುಗ್ಜೆಸ್ಟ್ ಭಿ ಕರುಂಗಿ. ಬಹುತ್ ಜಲ್ದಿ ಸಮಾಧಾನ್ ಭಿ ಮಿಲ್ ಗಯಾ.” ಎಂದು ಸಂತೋಷ ಹಂಚಿಕೊಂಡರು. [ತಿನ್‌ಸುಕಿಯಾ, ಅಸ್ಸಾಂ] (ಡಾಕೆಟ್ ಸಂಖ್ಯೆ.7556893)

ತ್ರಿಪುರ (ಅಗರ್ತಲಾ)

ತ್ರಿಪುರಾದ ಅಗರ್ತಲಾದ ಗ್ರಾಹಕರೊಬ್ಬರು ಮಾನ್ಯವಾದ ಖಾತರಿಯೊಂದಿಗೆ ಬಂದ ಏರ್ ಕಂಡಿಷನರ್ ಖರೀದಿಸಿದರು. ಎಸಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ, ಗ್ರಾಹಕರು ದುರಸ್ತಿ ಸೇವೆಗಾಗಿ ಕಂಪನಿಯನ್ನು ಸಂಪರ್ಕಿಸಿದರು, ಆದರೆ ಹೆಚ್ಚಿನ ವಿಳಂಬ ಅನುಭವಿಸಿದರು. ಕಂಪನಿಯ ನಿಧಾನಗತಿಯ ಪ್ರತಿಕ್ರಿಯೆಯಿಂದಾಗಿ, ಗ್ರಾಹಕರು ಸಮಸ್ಯೆಯನ್ನು ಪರಿಹರಿಸಲು ಎನ್‌ಸಿಎಚ್‌ನಲ್ಲಿ ದೂರು ದಾಖಲಿಸಿದರು. ಎನ್‌ಸಿಎಚ್‌ನಿಂದ ಸಕಾಲಿಕ ಸೌಲಭ್ಯದೊಂದಿಗೆ, ಸಮಸ್ಯೆಯನ್ನು 24 ಗಂಟೆಗಳ ಒಳಗೆ ಪರಿಹರಿಸಲಾಯಿತು. ಗ್ರಾಹಕರು ತೃಪ್ತಿ ವ್ಯಕ್ತಪಡಿಸಿದರು, "ಸಮಸ್ಯೆಯನ್ನು 24 ಗಂಟೆಗಳ ಒಳಗೆ ತಕ್ಷಣವೇ ಪರಿಹರಿಸಲಾಯಿತು. ನಾನು ನಿಮ್ಮ ಸಹಾಯವಾಣಿಗೆ ಪ್ರತಿ ಬಾರಿ ದೂರು ನೀಡಿದಾಗಲೂ, ಸಮಸ್ಯೆ ಬಗೆಹರಿಯಿತು." ಎಂದು ಸಂತಸ ವ್ಯಕ್ತಪಡಿಸಿದರು. [ಅಗರ್ತಲಾ, ತ್ರಿಪುರ] (ಡಾಕೆಟ್ ಸಂಖ್ಯೆ. 7614502)

ಮಹಾರಾಷ್ಟ್ರ (ಮುಂಬೈ)

ಮಹಾರಾಷ್ಟ್ರದ ಮುಂಬೈ ಗ್ರಾಹಕರೊಬ್ಬರು ಏಜೆನ್ಸಿ ಸೇವಾ ಪೂರೈಕೆದಾರರಿಗೆ ಭರವಸೆ ನೀಡಿದ ಸೇವೆಗಳಿಗಾಗಿ ಡೆಬಿಟ್ ಕಾರ್ಡ್ ಮೂಲಕ 6,000 ರೂ. ಪಾವತಿಸಿದರು. ಆದಾಗ್ಯೂ, ಸೇವೆಗಳನ್ನು ಬದ್ಧವಾಗಿ ತಲುಪಿಸದ ಕಾರಣ ಗ್ರಾಹಕರು ಮರುಪಾವತಿ ಕೋರಿದರು. ಸಮಸ್ಯೆಯನ್ನು ಪರಿಹರಿಸಲು ಪದೇಪದೆ ನಡೆಸಿದ ವಿಫಲ ಪ್ರಯತ್ನಗಳ ನಂತರ, ಗ್ರಾಹಕರು ಎನ್‌ಸಿಎಚ್‌ನಲ್ಲಿ ದೂರು ದಾಖಲಿಸಿದರು. ಎನ್‌ಸಿಎಚ್‌ ಸಹಾಯದಿಂದ, ವಿಷಯವನ್ನು ತಕ್ಷಣವೇ ಪರಿಹರಿಸಲಾಯಿತು, ಗ್ರಾಹಕರು ಮರುಪಾವತಿ ಪಡೆದರು. ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡ ಗ್ರಾಹಕರು "ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಒಂದು ತಿಂಗಳಿನಿಂದ ಮಾಡಲು ಸಾಧ್ಯವಾಗದ್ದನ್ನು ಎನ್‌ಸಿಎಚ್‌ ಎರಡೇ ದಿನಗಳಲ್ಲಿ ಮಾಡಿ ಮುಗಿಸಿದೆ." ಎಂದು ಸಮಾಧಾನ ವ್ಯಕ್ತಪಡಿಸಿದರು. [ಮುಂಬೈ, ಮಹಾರಾಷ್ಟ್ರ] (ಡಾಕೆಟ್ ಸಂಖ್ಯೆ.7601336)

ಬಿಹಾರ (ನಳಂದ)

ಬಿಹಾರದ ನಳಂದ ಗ್ರಾಹಕರೊಬ್ಬರು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಮೂಲಕ ಅಗತ್ಯ ಆಹಾರ ಸರಬರಾಜು ಪಡೆಯಲು ತೊಂದರೆಗಳನ್ನು ಎದುರಿಸಿದರು. ಮಾನ್ಯ ಪಡಿತರ ಚೀಟಿ ಹೊಂದಿದ್ದರೂ, ಗೊತ್ತುಪಡಿಸಿದ ನ್ಯಾಯಬೆಲೆ ಅಂಗಡಿಯಿಂದ ಕಳೆದ 4 ತಿಂಗಳಿನಿಂದ ಯಾವುದೇ ಪಡಿತರ ಪಡೆಯುತ್ತಿಲ್ಲ ಎಂದು ಗ್ರಾಹಕರು ವರದಿ ಮಾಡಿದರು. ಸಂಬಂಧಪಟ್ಟ ಇಲಾಖೆಯಿಂದ ಸಹಾಯ ಪಡೆಯಲು ಪದೇಪದೆ ಪ್ರಯತ್ನಿಸಿದರೂ ಯಾವುದೇ ಫಲಿತಾಂಶ ಬಂದಿಲ್ಲ. ಯಾವುದೇ ಪರ್ಯಾಯವಿಲ್ಲದೆ, ಗ್ರಾಹಕರು ಎನ್‌ಸಿಎಚ್‌ನಲ್ಲಿ ದೂರು ದಾಖಲಿಸಿದರು. ಎನ್‌ಸಿಎಚ್‌ನ ಸಕಾಲಿಕ ಮಧ್ಯಪ್ರವೇಶದಿಂದ, ಸಮಸ್ಯೆ ಪರಿಹರಿಸಲಾಯಿತು, ಪಡಿತರ ಪೂರೈಕೆಯನ್ನು ಪುನಃಸ್ಥಾಪಿಸಲಾಯಿತು. ಆಳವಾದ ಕೃತಜ್ಞತೆ ವ್ಯಕ್ತಪಡಿಸುತ್ತಾ ಗ್ರಾಹಕರು "ನಾನು ನಿಮಗೆ ಯಾವ ಪದಗಳಲ್ಲಿ ಧನ್ಯವಾದ ಹೇಳಬೇಕು ಸರ್? ನಿಮ್ಮ ಮೂಲಕ ನನ್ನ ಸಮಸ್ಯೆ ಬಗೆಹರಿದಿದೆ. ನನಗೆ ತುಂಬಾ ಸಂತೋಷವಾಗಿದೆ. ನಿಮಗೆ, ನಿಮ್ಮ ತಂಡಕ್ಕೆ ಮತ್ತು ಈ ರಾಷ್ಟ್ರೀಯ ಉಪೋಕ್ತ ಸಹಾಯವಾಣಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ." ಎಂದು ಸಂತೋಷ ಹಂಚಿಕೊಂಡರು. [ನಳಂದಾ, ಬಿಹಾರ] (ಡಾಕೆಟ್ ನಂ.7563209)

ಹರಿಯಾಣ (ಗುರಗಾಂವ್)

ಹರಿಯಾಣದ ಗುರಗಾಂವ್‌ನ ಗ್ರಾಹಕರೊಬ್ಬರು ಅಧಿಕೃತ ಗ್ಯಾಸ್ ಏಜೆನ್ಸಿಯಿಂದ ಪಡೆದ ಗ್ಯಾಸ್ ಸಿಲಿಂಡರ್‌ನ ತೂಕದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಿಲಿಂಡರ್ ಬುಕ್ ಮಾಡಿದ ನಂತರ ಬಂದ ಸಿಲಿಂಡರ್ ಅಳತೆ ಮಾಡಿದಾಗ ತೂಕವು ನಿರೀಕ್ಷೆಗಿಂತ ಕಡಿಮೆಯಾಗಿತ್ತು.. ಸಂಬಂಧಪಟ್ಟ ಏಜೆನ್ಸಿಗೆ ಸಮಸ್ಯೆ ಕುರಿತು ವರದಿ ಮಾಡಿದರೂ, ಆರಂಭದಲ್ಲಿ ಯಾವುದೇ ಪರಿಹಾರ ಒದಗಿಸಲಿಲ್ಲ. ನಂತರ ಗ್ರಾಹಕರು ಎನ್‌ಸಿಎಚ್‌ನಲ್ಲಿ ದೂರು ದಾಖಲಿಸಿದರು. ಸಕಾಲಿಕವಾಗಿ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲಾಯಿತು. ತ್ವರಿತ ಸ್ಪಂದನೆಯನ್ನು ಶ್ಲಾಘಿಸಿದ ಗ್ರಾಹಕರು, "ಸಮಸ್ಯೆ ಪರಿಹರವಾಗಿದೆ, ಇದು ತುಂಬಾ ಒಳ್ಳೆಯ ವಿಷಯ. ನೀವು ತಕ್ಷಣ ಕ್ರಮ ತೆಗೆದುಕೊಂಡು ಸಕಾಲಿಕ ಪರಿಹಾರ ಒದಗಿಸಿದ್ದೀರಿ." ಎಂದು ಸಂತಸ ಹಂಚಿಕೊಂಡರು. [ಗುರಗಾಂವ್, ಹರಿಯಾಣ] (ಡಾಕೆಟ್ ಸಂಖ್ಯೆ.7593115)

ರಾಜಸ್ಥಾನ (ಜೈಪುರ)

ರಾಜಸ್ಥಾನದ ಜೈಪುರ ಗ್ರಾಹಕರೊಬ್ಬರು ಇ-ಕಾಮರ್ಸ್ ವೇದಿಕೆ ಮೂಲಕ ಹತ್ತಿ ಮುದ್ರಿತ ವಸ್ತುವನ್ನು ಆರ್ಡರ್ ಮಾಡಿದರು. ಉತ್ಪನ್ನ ಸ್ವೀಕರಿಸಿದ ನಂತರ, ಗ್ರಾಹಕರು ಗುಣಮಟ್ಟದ ಸಮಸ್ಯೆ ನೋಡಿ, ಹಿಂತಿರುಗಿಸುವುದಾಗಿ ಮನವಿ ಮಾಡಿದರು. ಆದಾಗ್ಯೂ, ಗ್ರಾಹಕರ ವಿಳಾಸ ತಪ್ಪಾಗಿದೆ ಎಂದು ಕಂಪನಿ ಹೇಳಿತು ಮತ್ತು ಉತ್ಪನ್ನವನ್ನು ಅದೇ ವಿಳಾಸಕ್ಕೆ ಯಶಸ್ವಿಯಾಗಿ ತಲುಪಿಸಲಾಗಿದ್ದರೂ ಸಹ, ಪಿಕಪ್ ವ್ಯವಸ್ಥೆ ಮಾಡಲು ನಿರಾಕರಿಸಿತು. ಕಂಪನಿಯನ್ನು ಸಂಪರ್ಕಿಸಲು ಪದೇಪದೆ ಮಾಡಿದ ಪ್ರಯತ್ನಗಳಿಗೆ ಉತ್ತರವಿಲ್ಲ. ನಂತರ ಗ್ರಾಹಕರು ಪರಿಹಾರಕ್ಕಾಗಿ ಎನ್‌ಸಿಎಚ್‌ ಸಂಪರ್ಕಿಸಿದರು. ಎನ್‌ಸಿಎಚ್‌ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿತು, ಪೂರ್ಣ ಮರುಪಾವತಿಯೊಂದಿಗೆ ರಿಟರ್ನ್ ಅನ್ನು ಪ್ರಕ್ರಿಯೆಗೊಳಿಸಲಾಯಿತು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕರು "ನನಗೆ ಸಹಾಯ ಮಾಡಿದ್ದಕ್ಕಾಗಿ ನಿಮಗೆ ಮತ್ತು ನಿಮ್ಮ ತಂಡಕ್ಕೆ ನನ್ನ ಧನ್ಯವಾದಗಳು - ನನಗೆ ನನ್ನ ಮರುಪಾವತಿ ಸಿಕ್ಕಿತು." ಎಂದು ಸಂತಸ ಹಂಚಿಕೊಂಡರು. [ಜೈಪುರ, ರಾಜಸ್ಥಾನ] (ಡಾಕೆಟ್ ಸಂಖ್ಯೆ. 7556220)

ತಮಿಳುನಾಡು (ಕೊಯಮತ್ತೂರು)

ತಮಿಳುನಾಡಿನ ಕೊಯಮತ್ತೂರಿನ ಗ್ರಾಹಕರು ಇ-ಕಾಮರ್ಸ್ ವೇದಿಕೆ ಮೂಲಕ 7,781 ರೂ. ಮೌಲ್ಯದ ವಸ್ತುವನ್ನು ಆರ್ಡರ್ ಮಾಡಿದರು. ಖರೀದಿಯ ನಂತರ, ಗ್ರಾಹಕರು ವಿತರಣೆ ಅಥವಾ ಟ್ರ್ಯಾಕಿಂಗ್ ಕುರಿತು ಯಾವುದೇ ಹೆಚ್ಚಿನ ಮಾಹಿತಿ ಸ್ವೀಕರಿಸಲಿಲ್ಲ. ರದ್ದತಿ ಮತ್ತು ಮರುಪಾವತಿಗೆವಿ ನಂತಿಸಿ ಇಮೇಲ್ ಕಳುಹಿಸಿದರೂ, ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಗ್ರಾಹಕರು ಪರಿಹಾರ ಪಡೆಯಲು ಎನ್‌ಸಿಎಚ್‌ ಸಂಪರ್ಕಿಸಿದರು. ಎನ್‌ಸಿಎಚ್‌ ​​ನೀಡಿದ ಬೆಂಬಲದ ನಂತರ, ಸಮಸ್ಯೆ ಪರಿಹರಿಸಲಾಯಿತು. ಗ್ರಾಹಕರ ಕಳವಳವನ್ನು ತೃಪ್ತಿಕರವಾಗಿ ಪರಿಹರಿಸಲಾಯಿತು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕರು "ನೀವು ಉತ್ತಮ ಕೆಲಸ ಮಾಡಿದ್ದೀರಿ! ಇಡೀ ತಂಡಕ್ಕೆ ಧನ್ಯವಾದಗಳು" ಎಂದು ಸಂತಸ ಹಂಚಿಕೊಂಡರು. [ಕೊಯಮತ್ತೂರು, ತಮಿಳುನಾಡು] (ಡಾಕೆಟ್ ಸಂಖ್ಯೆ. 7340644)

 

*****


(Release ID: 2159765)