ಲೋಕಸಭಾ ಸಚಿವಾಲಯ
ಸದನದಲ್ಲಿ ಯೋಜಿತ ಅಡ್ಡಿಗಳ ಬಗ್ಗೆ ಲೋಕಸಭಾಧ್ಯಕ್ಷರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ
ಘೋಷಣೆಗಳನ್ನು ಕೂಗುವುದು, ಫಲಕಗಳನ್ನು ಪ್ರದರ್ಶಿಸುವುದು ಮತ್ತು ನಿರಂತರ ಅಸ್ತವ್ಯಸ್ತತೆ ಸಂಸತ್ತಿನ ಘನತೆಗೆ ಮಾಡಿದ ಅವಮಾನ: ಲೋಕಸಭಾ ಸ್ಪೀಕರ್
ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು, ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಗಳನ್ನು ಮುಂದುವರಿಸಬೇಕು: ಲೋಕಸಭಾ ಸ್ಪೀಕರ್
ಸದನದಲ್ಲಿ 'ಆಪರೇಷನ್ ಸಿಂಧೂರ' ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸಾಧನೆಗಳ ಕುರಿತು ವಿಶೇಷ ಚರ್ಚೆ ನಡೆದವು
ಸದನ ಮತ್ತು ಸಂಸತ್ತಿನ ಆವರಣದಲ್ಲಿ ಸದಸ್ಯರ ಭಾಷೆ ಯಾವಾಗಲೂ ಸಭ್ಯವಾಗಿರಬೇಕು: ಲೋಕಸಭಾ ಸ್ಪೀಕರ್
18ನೇ ಲೋಕಸಭೆಯ ಐದನೇ ಅಧಿವೇಶನದಲ್ಲಿ ನಿಗದಿಪಡಿಸಿದ 120 ಗಂಟೆಗಳಲ್ಲಿ ಒಟ್ಟು 37 ಗಂಟೆಗಳ ಮಾತ್ರ ಕಲಾಪಗಳು ನಡೆದವು: ಲೋಕಸಭಾ ಸ್ಪೀಕರ್
ಅಡಚಣೆಗಳಿಂದಾಗಿ, ಕಾರ್ಯಸೂಚಿಯಲ್ಲಿ ಸೇರಿಸಲಾದ 419 ಪ್ರಶ್ನೆಗಳಲ್ಲಿ 55 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮಾತ್ರ ಮೌಖಿಕವಾಗಿ ಉತ್ತರಿಸಲು ಸಾಧ್ಯವಾಯಿತು: ಲೋಕಸಭಾ ಸ್ಪೀಕರ್
ಅಧಿವೇಶನದ ಸಮಯದಲ್ಲಿ, ಲೋಕಸಭೆಯಲ್ಲಿ 14 ಸರ್ಕಾರಿ ಮಸೂದೆಗಳನ್ನು ಮಂಡಿಸಲಾಯಿತು ಮತ್ತು 12 ಮಸೂದೆಗಳನ್ನು ಅಂಗೀಕರಿಸಲಾಯಿತು: ಲೋಕಸಭಾ ಸ್ಪೀಕರ್
ಹದಿನೆಂಟನೇ ಲೋಕಸಭೆಯ ಐದನೇ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು
Posted On:
21 AUG 2025 4:08PM by PIB Bengaluru
ಜುಲೈ 21, 2025 ರಂದು ಪ್ರಾರಂಭವಾದ 18 ನೇ ಲೋಕಸಭೆಯ ಐದನೇ ಅಧಿವೇಶನ ಇಂದು ಮುಕ್ತಾಯವಾಯಿತು.
ಅಧಿವೇಶನದ ಕೊನೆಯ ದಿನದಂದು ತಮ್ಮ ಸಮಾರೋಪ ಭಾಷಣದಲ್ಲಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಸದನದಲ್ಲಿ ನಡೆಯುತ್ತಿರುವ ನಿರಂತರ ಮತ್ತು ಯೋಜಿತ ಅಡ್ಡಿಗಳ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು. ಲೋಕಸಭೆ ಅಥವಾ ಸಂಸತ್ತಿನ ಆವರಣದಲ್ಲಿ ಘೋಷಣೆಗಳು, ಫಲಕಗಳ ಪ್ರದರ್ಶನ ಮತ್ತು ಯೋಜಿತ ಅಡ್ಡಿಗಳು ಸಂಸತ್ತಿನ ಕಲಾಪಗಳ ಘನತೆಗೆ ಧಕ್ಕೆ ತರುತ್ತವೆ ಎಂದು ಅವರು ಹೇಳಿದರು. ಸಾರ್ವಜನಿಕರು ತಮ್ಮ ಪ್ರತಿನಿಧಿಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ, ಆದ್ದರಿಂದ ಅವರು ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆಗಳು ಮತ್ತು ವಿಷಯಗಳು ಮತ್ತು ಪ್ರಮುಖ ಮಸೂದೆಗಳ ಕುರಿತು ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಗಳಿಗಾಗಿ ಸದನದಲ್ಲಿ ತಮ್ಮ ಸಮಯವನ್ನು ಬಳಸಿಕೊಳ್ಳಬೇಕು ಎಂದು ಶ್ರೀ ಬಿರ್ಲಾ ಹೇಳಿದರು.
ಅಧಿವೇಶನದ ಸಮಯದಲ್ಲಿ, ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಮತ್ತು ಪ್ರಮುಖ ಮಸೂದೆಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಚರ್ಚಿಸಲು ಸಾಕಷ್ಟು ಅವಕಾಶಗಳನ್ನು ನೀಡಿದ್ದಾಗಿ ಲೋಕಸಭಾ ಸ್ಪೀಕರ್ ಹೇಳಿದರು. ಆದಾಗ್ಯೂ, ಸದನದಲ್ಲಿ ನಿರಂತರವಾದ ಅಸ್ತವ್ಯಸ್ತತೆ ದುರದೃಷ್ಟಕರ ಎಂದು ಅವರು ವಿಷಾದಿಸಿದರು. ಸದನದಲ್ಲಿ ಘೋಷಣೆಗಳು ಮತ್ತು ಅಡ್ಡಿಪಡಿಸುವಿಕೆಯನ್ನು ತಪ್ಪಿಸಿ ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಗಳನ್ನು ಮುಂದುವರಿಸಬೇಕು ಎಂದು ಅವರು ಒತ್ತಿ ಹೇಳಿದರು.
ಮುಂಗಾರು ಅಧಿವೇಶನದಲ್ಲಿ ಕಂಡುಬಂದ ಭಾಷೆ ಮತ್ತು ನಡವಳಿಕೆಯು ಸಂಸತ್ತಿನ ಘನತೆಗೆ ತಕ್ಕುದಲ್ಲ ಎಂದು ಅವರು ಹೇಳಿದರು. ಸದನದ ಒಳಗೆ ಮತ್ತು ಹೊರಗೆ ಸದಸ್ಯರ ಭಾಷೆ ಯಾವಾಗಲೂ ಸಂಯಮದಿಂದ ಮತ್ತು ಸಭ್ಯವಾಗಿರಬೇಕು ಎಂದು ಅವರು ಸದನಕ್ಕೆ ನೆನಪಿಸಿದರು. ಸದಸ್ಯರು ತಮ್ಮ ಕೆಲಸ ಮತ್ತು ನಡವಳಿಕೆಯು ದೇಶ ಮತ್ತು ಜಗತ್ತಿಗೆ ಮಾದರಿಯಾಗುವಂತೆ ನೋಡಿಕೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಅಧಿವೇಶನದ ಕಾರ್ಯಸೂಚಿಯಲ್ಲಿ 419 ಚುಕ್ಕೆ ಗುರುತಿನ ಪ್ರಶ್ನೆಗಳನ್ನು ಪಟ್ಟಿ ಮಾಟಡಲಾಗಿತ್ತು, ಆದರೆ ಯೋಜಿತ ಅಡಚಣೆಗಳಿಂದಾಗಿ, ಕೇವಲ 55 ಪ್ರಶ್ನೆಗಳಿಗೆ ಮಾತ್ರ ಮೌಖಿಕವಾಗಿ ಉತ್ತರಿಸಲು ಸಾಧ್ಯವಾಯಿತು ಎಂದು ಶ್ರೀ ಬಿರ್ಲಾ ಮಾಹಿತಿ ನೀಡಿದರು. ಅಧಿವೇಶನದ ಆರಂಭದಲ್ಲಿ, ಎಲ್ಲಾ ಪಕ್ಷಗಳು ಈ ಅಧಿವೇಶನದಲ್ಲಿ 120 ಗಂಟೆಗಳ ಕಾಲ ಚರ್ಚೆಗಳು ಮತ್ತು ಸಂವಾದಗಳನ್ನು ನಡೆಸಬೇಕೆಂದು ನಿರ್ಧರಿಸಿದ್ದವು ಮತ್ತು ಸದನ ಕಲಾಪ ಸಲಹಾ ಸಮಿತಿಯು ಸಹ ಇದಕ್ಕೆ ಒಪ್ಪಿಕೊಂಡಿತು, ಆದರೆ ನಿರಂತರ ಸ್ಥಗಿತ ಮತ್ತು ಯೋಜಿತ ಅಡಚಣೆಗಳಿಂದಾಗಿ, ಈ ಅಧಿವೇಶನದಲ್ಲಿ ಕೇವಲ 37 ಗಂಟೆಗಳ ಕಾಲ ಮಾತ್ರ ಸದನದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಅಧಿವೇಶನದಲ್ಲಿ ಹದಿನಾಲ್ಕು ಸರ್ಕಾರಿ ಮಸೂದೆಗಳನ್ನು ಮಂಡಿಸಲಾಯಿತು ಮತ್ತು ಹನ್ನೆರಡು ಮಸೂದೆಗಳನ್ನು ಅಂಗೀಕರಿಸಲಾಯಿತು ಎಂದು ಶ್ರೀ ಬಿರ್ಲಾ ಮಾಹಿತಿ ನೀಡಿದರು.
'ಆಪರೇಷನ್ ಸಿಂಧೂರ' ಕುರಿತ ಚರ್ಚೆ ಜುಲೈ 28, 2025 ರಂದು ಪ್ರಾರಂಭವಾಯಿತು ಮತ್ತು ಜುಲೈ 29, 2025 ರಂದು ಪ್ರಧಾನಮಂತ್ರಿ ಅವರ ಉತ್ತರದೊಂದಿಗೆ ಮುಕ್ತಾಯವಾಯಿತು ಎಂದು ಶ್ರೀ ಬಿರ್ಲಾ ಹೇಳಿದರು. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸಾಧನೆಗಳ ಕುರಿತು ವಿಶೇಷ ಚರ್ಚೆಯನ್ನು ಆಗಸ್ಟ್ 18, 2025 ರಂದು ಪ್ರಾರಂಭಿಸಲಾಯಿತು ಎಂದು ಶ್ರೀ ಬಿರ್ಲಾ ಹೇಳಿದರು.
*****
(Release ID: 2159587)