ರಕ್ಷಣಾ ಸಚಿವಾಲಯ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ ಮೊದಲ ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಭೇಟಿಯಾದ ರಕ್ಷಣಾ ಸಚಿವರು
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಸ್ಪೂರ್ತಿದಾಯಕ ಪ್ರಯಾಣವು ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಅನ್ವೇಷಣೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ: ಶ್ರೀ ರಾಜನಾಥ್ ಸಿಂಗ್
Posted On:
21 AUG 2025 2:34PM by PIB Bengaluru
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಆಗಸ್ಟ್ 21, 2025 ರಂದು ನವದೆಹಲಿಯಲ್ಲಿ ಭೇಟಿಯಾದರು. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಸಾಧನೆಯನ್ನು ಅಭಿನಂದಿಸಿದ ರಕ್ಷಣಾ ಸಚಿವರು, ಇದು ಮಾನವ ಬಾಹ್ಯಾಕಾಶ ಯಾನದತ್ತ ಭಾರತದ ಪ್ರಯಾಣದಲ್ಲಿ ಮಹತ್ವದ ಮೈಲುಗಲ್ಲು ಎಂದು ಬಣ್ಣಿಸಿದರು.
ಕಕ್ಷೆಯಲ್ಲಿ ಪ್ರಮುಖ ವೈಜ್ಞಾನಿಕ ಪ್ರಯೋಗ ನಡೆಸುವ ಮೂಲಕ ಗಗನಯಾತ್ರಿಯ ಕೊಡುಗೆಯನ್ನು ಶ್ರೀ ರಾಜನಾಥ್ ಸಿಂಗ್ ಅವರು ಗುರುತಿಸಿದರು ಮತ್ತು ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ಪರಿಶೋಧನಾ ಸಾಮರ್ಥ್ಯಗಳನ್ನು ಮುನ್ನಡೆಸುವಲ್ಲಿ ಶುಲ್ಕಾ ಅವರ ಪಾತ್ರವನ್ನು ಶ್ಲಾಘಿಸಿದರು. ಶುಕ್ಲಾ ಅವರ ಸ್ಪೂರ್ತಿದಾಯಕ ಪ್ರಯಾಣವು ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ ಎಂಬ ವಿಶ್ವಾಸವನ್ನು ಶ್ರೀ ರಾಜನಾಥ್ ಅವರು ವ್ಯಕ್ತಪಡಿಸಿದರು.
ಸಂವಾದದ ನಂತರ ʻಎಕ್ಸ್ʼ ವೇದಿಕೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವರು, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರೊಂದಿಗೆ ಸ್ಪೂರ್ತಿದಾಯಕ ಬಾಹ್ಯಾಕಾಶ ಪ್ರಯಾಣ, ಕಕ್ಷೆಯಲ್ಲಿ ಅವರು ಕೈಗೊಂಡ ಪ್ರಮುಖ ಪ್ರಯೋಗಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ಮತ್ತು ಭಾರತದ ಪ್ರವರ್ತಕ ಗಗನಯಾನ ಯೋಜನೆಯ ಮುಂದಿನ ಹಾದಿಯ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ಇಸ್ರೋ ಸಹಯೋಗದೊಂದಿಗೆ ಗಗನಯಾತ್ರಿಗಳ ಆಯ್ಕೆ, ತರಬೇತಿ ಮತ್ತು ಮಿಷನ್ ಬೆಂಬಲ ಸೇರಿದಂತೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ಪ್ರಮುಖ ಪಾತ್ರವನ್ನು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ಐಎಎಫ್ ಸಿಬ್ಬಂದಿಯ ವೃತ್ತಿಪರತೆ ಮತ್ತು ಪರಿಣತಿ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗಳತ್ತ ದೇಶದ ಪ್ರಗತಿಗೆ ಪ್ರಮುಖ ಅನುವು ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಚಂದ್ರ ಮತ್ತು ಮಂಗಳ ಗ್ರಹದ ಅನ್ವೇಷಣೆಯಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಸಾಧನೆಗಳ ಬಳಿಕ ಭಾರತವು ಈಗ ಮಾನವಸಹಿತ ಬಾಹ್ಯಾಕಾಶ ಕಾರ್ಯಾಚರಣೆಗಳತ್ತ ಸಾಗುತ್ತಿದೆ ಮತ್ತು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಪ್ರಯತ್ನ ಮುಂದುವರಿಸಿದೆ. ʻಐಎಸ್ಎಸ್ʼನಲ್ಲಿ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಯಶಸ್ವಿ ಪ್ರಯಾಣವು ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಬಾಹ್ಯಾಕಾಶಯಾನ ರಾಷ್ಟ್ರವಾಗಿ ಭಾರತದ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ʻಇಸ್ರೋʼ, ʻಐಎಎಫ್ʼ ಮತ್ತು ಇತರ ರಾಷ್ಟ್ರೀಯ ಮಧ್ಯಸ್ಥಗಾರರ ನಡುವಿನ ಸಮನ್ವಯವನ್ನು ಪ್ರದರ್ಶಿಸುತ್ತದೆ ಎಂದು ಸಚಿವರು ಹೇಳಿದರು.
*****
(Release ID: 2159310)