ಪ್ರಧಾನ ಮಂತ್ರಿಯವರ ಕಛೇರಿ
ಪರಾಕ್ರಮ್ ದಿವಸ್ ಕುರಿತು ಪ್ರಧಾನಮಂತ್ರಿ ಅವರ ಭಾಷಣದ ಅನುವಾದ
प्रविष्टि तिथि:
23 JAN 2025 2:25PM by PIB Bengaluru
ಪ್ರೀತಿಯ ಸಹೋದರರೇ, ಭೌನಿಯ ಪರಾಕ್ರಮ್ ದಿವಸ್ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು!
ಇಂದು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ, ಇಡೀ ದೇಶವು ಅವರನ್ನು ಭಕ್ತಿಯಿಂದ ಸ್ಮರಿಸುತ್ತಿದೆ. ನಾನು ನೇತಾಜಿ ಸುಭಾಷ್ ಬೋಸ್ ಅವರಿಗೆ ನನ್ನ ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ. ಈ ವರ್ಷದ ಪರಾಕ್ರಮ್ ದಿವಸ್ ಅನ್ನು ನೇತಾಜಿ ಅವರ ಜನ್ಮಸ್ಥಳದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇದಕ್ಕಾಗಿ ನಾನು ಒಡಿಶಾ ಜನರು ಮತ್ತು ಒಡಿಶಾ ಸರ್ಕಾರವನ್ನು ಅಭಿನಂದಿಸುತ್ತೇನೆ. ನೇತಾಜಿ ಅವರ ಜೀವನಕ್ಕೆ ಸಂಬಂಧಿಸಿದ ಬೃಹತ್ ಪ್ರದರ್ಶನವನ್ನು ಕಟಕ್‌ನಲ್ಲಿಯೂ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ, ನೇತಾಜಿ ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ಪರಂಪರೆಗಳನ್ನು ಒಟ್ಟಿಗೆ ಸಂರಕ್ಷಿಸಲಾಗಿದೆ. ಅನೇಕ ವರ್ಣಚಿತ್ರಕಾರರು ನೇತಾಜಿ ಅವರ ಜೀವನ ಘಟನೆಗಳ ಚಿತ್ರಗಳನ್ನು ವಿವಿಧ ಕ್ಯಾನ್ವಾಸ್‌ನಲ್ಲಿ ಚಿತ್ರಿಸಿದ್ದಾರೆ. ಇದೆಲ್ಲದರ ಜೊತೆಗೆ, ನೇತಾಜಿಯನ್ನು ಆಧರಿಸಿದ ಅನೇಕ ಪುಸ್ತಕಗಳನ್ನು ಸಹ ಸಂಗ್ರಹಿಸಲಾಗಿದೆ. ನೇತಾಜಿ ಅವರ ಜೀವನ ಪ್ರಯಾಣದ ಈ ಎಲ್ಲಾ ಪರಂಪರೆಗಳು ನನ್ನ ಯುವ ಭಾರತ, ನನ್ನ ಭಾರತಕ್ಕೆ ಹೊಸ ಶಕ್ತಿಯನ್ನು ನೀಡುತ್ತವೆ.
ಸ್ನೇಹಿತರೇ,
ಇಂದು, ನಮ್ಮ ದೇಶವು ಅಭಿವೃದ್ಧಿ ಹೊಂದಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನಾವು ನೇತಾಜಿ ಸುಭಾಷ್ ಅವರ ಜೀವನದಿಂದ ನಿರಂತರ ಸ್ಫೂರ್ತಿ ಪಡೆಯುತ್ತೇವೆ. ನೇತಾಜಿ ಅವರ ಜೀವನದ ದೊಡ್ಡ ಗುರಿ - ಆಜಾದ್ ಹಿಂದ್. ಈ ಆಶಯವನ್ನು ಸಾಧಿಸಲು, ಅವರು ಒಂದೇ ವಿಷಯದ ಕುರಿತು ತಮ್ಮ ನಿರ್ಧಾರವನ್ನು ಅಚಲವಾಗಿರಿಸಿದ್ದರು. ಆಜಾದ್ ಹಿಂದ್. ನೇತಾಜಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು, ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಬಯಸಿದ್ದರೆ ಬ್ರಿಟಿಷ್ ಆಳ್ವಿಕೆಯಲ್ಲಿ ಹಿರಿಯ ಅಧಿಕಾರಿಯಾಗುವ ಮೂಲಕ ಆರಾಮದಾಯಕ ಜೀವನವನ್ನು ನಡೆಸಬಹುದಿತ್ತು, ಆದರೆ ಸ್ವಾತಂತ್ರ್ಯ ಹೋರಾಟದ ಹಾದಿ ಹಿಡಿದರು. ಅವರು ಕಷ್ಟಗಳನ್ನು, ಸವಾಲುಗಳನ್ನು ಆರಿಸಿಕೊಂಡರು, ದೇಶ ಮತ್ತು ವಿದೇಶಗಳಲ್ಲಿ ಸಂಚರಿಸಿ ಹಲವು ಮಾಹಿತಿ ಪಡೆದುಕೊಂಡರು. ನೇತಾಜಿ ಸುಭಾಷ್ ಅವರು ಆರಾಮ ಸ್ಥಿತಿಗೆ ಎಂದಿಗೂ ಒಗ್ಗಿಕೊಳ್ಳಲಿಲ್ಲ. ಅದೇ ರೀತಿ, ಇಂದು ನಾವೆಲ್ಲರೂ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮ "ಕಮ್ ಫರ್ಟ್" ವಲಯದಿಂದ ಹೊರಬರಬೇಕಾಗಿದೆ. ನಾವು ಜಾಗತಿಕವಾಗಿ ನಮ್ಮನ್ನು ಅತ್ಯುತ್ತಮರನ್ನಾಗಿ ಮಾಡಿಕೊಳ್ಳಬೇಕು, ನಾವು ಶ್ರೇಷ್ಠತೆಯನ್ನು ಆರಿಸಿಕೊಳ್ಳಬೇಕು, ನಾವು ದಕ್ಷತೆಯ ಮೇಲೆ ಕೇಂದ್ರೀಕರಿಸಬೇಕು.
ಸ್ನೇಹಿತರೇ,
ನೇತಾಜಿ ದೇಶದ ಸ್ವಾತಂತ್ರ್ಯಕ್ಕಾಗಿ ಆಜಾದ್ ಹಿಂದ್ ಫೌಜ್ ಅನ್ನು ರಚಿಸಿದರು, ಇದು ದೇಶದ ಪ್ರತಿಯೊಂದು ಪ್ರದೇಶ ಮತ್ತು ವರ್ಗದ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡಿತ್ತು. ಪ್ರತಿಯೊಬ್ಬರ ಭಾಷೆಗಳು ವಿಭಿನ್ನವಾಗಿದ್ದವು, ಆದರೆ ಭಾವನೆ ಒಂದೇ ಆಗಿತ್ತು - ದೇಶದ ಸ್ವಾತಂತ್ರ್ಯ. ಈ ಏಕತೆ ಇಂದು ಅಭಿವೃದ್ಧಿ ಹೊಂದಿದ ಭಾರತಕ್ಕೆ ಒಂದು ಉತ್ತಮ ಪಾಠವಾಗಿದೆ. ಆಗ ನಾವು ಸ್ವರಾಜ್ಯಕ್ಕಾಗಿ ಒಂದಾಗಬೇಕಿತ್ತು, ಇಂದು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಒಂದಾಗಬೇಕು. ಇಂದು, ದೇಶ ಮತ್ತು ಪ್ರಪಂಚದಾದ್ಯಂತ ಭಾರತದ ಪ್ರಗತಿಗೆ ಅನುಕೂಲಕರ ವಾತಾವರಣವಿದೆ. ಈ 21 ನೇ ಶತಮಾನವನ್ನು ನಾವು ಭಾರತದ ಪಾಲಿಗೆ ಶ್ರೇಷ್ಠ ಶತಮಾನವಾಗಿ ಹೇಗೆ ಮಾಡುತ್ತೇವೆ ಎಂಬುದನ್ನು ಜಗತ್ತು ನೋಡುತ್ತಿದೆ. ಇಡೀ ಜಗತ್ತು ಭಾರತವನ್ನು ನೋಡುತ್ತಿದೆ ಮತ್ತು ಅಂತಹ ನಿರ್ಣಾಯಕ ಅವಧಿಯಲ್ಲಿ, ನೇತಾಜಿ ಸುಭಾಷ್ ಅವರ ಸ್ಫೂರ್ತಿಯೊಂದಿಗೆ ಭಾರತದ ಏಕತೆಗೆ ನಾವು ಒತ್ತು ನೀಡಬೇಕಾಗಿದೆ. ದೇಶವನ್ನು ದುರ್ಬಲಗೊಳಿಸಲು ಬಯಸುವವರು, ದೇಶದ ಏಕತೆಯನ್ನು ಮುರಿಯಲು ಬಯಸುವವರ ಬಗ್ಗೆಯೂ ನಾವು ಜಾಗರೂಕರಾಗಿರಬೇಕು.
ಸ್ನೇಹಿತರೇ,
ನೇತಾಜಿ ಸುಭಾಷರು ಭಾರತದ ಪರಂಪರೆಯ ಬಗ್ಗೆ ಬಹಳ ಹೆಮ್ಮೆಪಡುತ್ತಿದ್ದರು. ಅವರು ಆಗಾಗ್ಗೆ ಭಾರತದ ಶ್ರೀಮಂತ ಪ್ರಜಾಪ್ರಭುತ್ವ ಇತಿಹಾಸದ ಬಗ್ಗೆ ಚರ್ಚಿಸುತ್ತಿದ್ದರು ಮತ್ತು ಅದರಿಂದ ಸ್ಫೂರ್ತಿ ಪಡೆಯುವ ಪ್ರತಿಪಾದಕರಾಗಿದ್ದರು. ಇಂದು ಭಾರತ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರುತ್ತಿದೆ. ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಲೇ ಅಭಿವೃದ್ಧಿ ಹೊಂದುತ್ತಿದೆ. ಆಜಾದ್ ಹಿಂದ್ ಸರ್ಕಾರ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಆ ಐತಿಹಾಸಿಕ ಸಂದರ್ಭವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನೇತಾಜಿ ಅವರ ಪರಂಪರೆಯಿಂದ ಸ್ಫೂರ್ತಿ ಪಡೆದು, ನಮ್ಮ ಸರ್ಕಾರವು 2019 ರಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿ ಸುಭಾಷರಿಗೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಆರಂಭಿಸಿತು. ಸುಭಾಷ್ ಚಂದ್ರ ಬೋಸ್ ವಿಪತ್ತು ನಿರ್ವಹಣಾ ಪ್ರಶಸ್ತಿಗಳನ್ನು ಅದೇ ವರ್ಷ ಪ್ರಾರಂಭಿಸಲಾಯಿತು. 2021 ರಲ್ಲಿ, ನೇತಾಜಿ ಅವರ ಜನ್ಮ ವಾರ್ಷಿಕೋತ್ಸವವನ್ನು ಈಗ ಪರಾಕ್ರಮ್ ದಿವಸ್ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ. ಇಂಡಿಯಾ ಗೇಟ್ ಬಳಿ ನೇತಾಜಿ ಅವರ ಬೃಹತ್ ಪ್ರತಿಮೆಯನ್ನು ಸ್ಥಾಪಿಸುವುದು, ಅಂಡಮಾನ್ ದ್ವೀಪಕ್ಕೆ ನೇತಾಜಿ ಅವರ ಹೆಸರಿಡುವುದು, ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
ಸ್ನೇಹಿತರೇ,
ಕಳೆದ 10 ವರ್ಷಗಳಲ್ಲಿ, ತ್ವರಿತ ಅಭಿವೃದ್ಧಿಯು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಮಿಲಿಟರಿ ಬಲವನ್ನು ಹೆಚ್ಚಿಸುತ್ತದೆ. ಕಳೆದ ದಶಕದಲ್ಲಿ, 25 ಕೋಟಿ ಭಾರತೀಯರನ್ನು ಬಡತನದಿಂದ ಹೊರತರಲಾಗಿದೆ, ಇದು ಒಂದು ದೊಡ್ಡ ಯಶಸ್ಸು. ಇಂದು, ಅದು ಹಳ್ಳಿಯಾಗಿರಲಿ ಅಥವಾ ನಗರವಾಗಿರಲಿ, ಎಲ್ಲೆಡೆ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ, ಇದರೊಂದಿಗೆ, ಭಾರತೀಯ ಸೇನೆಯ ಬಲವೂ ಅಭೂತಪೂರ್ವವಾಗಿ ಹೆಚ್ಚಾಗಿದೆ. ಇಂದು, ವಿಶ್ವ ವೇದಿಕೆಯಲ್ಲಿ ಭಾರತದ ಪಾತ್ರ ಹೆಚ್ಚುತ್ತಿದೆ, ಭಾರತದ ಧ್ವನಿ ಗಟ್ಟಿಯಾಗುತ್ತಿದೆ, ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ದಿನ ದೂರವಿಲ್ಲ. ನೇತಾಜಿ ಸುಭಾಷ್ ಅವರಿಂದ ಪ್ರೇರಿತವಾದ ಒಂದು ಗುರಿ ಮತ್ತು ಒಂದು ಉದ್ದೇಶದೊಂದಿಗೆ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾವು ನಿರಂತರವಾಗಿ ಕೆಲಸ ಮಾಡುತ್ತಲೇ ಇರಬೇಕು ಮತ್ತು ಇದು ನೇತಾಜಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ.
ಮತ್ತೊಮ್ಮೆ, ನಿಮ್ಮೆಲ್ಲರಿಗೂ ಶುಭಾಶಯಗಳು, ಧನ್ಯವಾದಗಳು!
ಹಕ್ಕು ಸ್ವಾಮ್ಯ: ಇದು ಪ್ರಧಾನಮಂತ್ರಿ ಅವರ ಭಾಷಣದ ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*****
(रिलीज़ आईडी: 2159204)
आगंतुक पटल : 16
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam