ಸಂಸ್ಕೃತಿ ಸಚಿವಾಲಯ
ತಿರಂಗ ಅಭಿಯಾನಕ್ಕೆ 5 ಲಕ್ಷಕ್ಕೂ ಹೆಚ್ಚು ಯುವಕರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ: ಶ್ರೀ ಗಜೇಂದ್ರ ಸಿಂಗ್ ಶೇಖಾವತ್
ಸ್ವಾತಂತ್ರ್ಯದ ಅಮೃತ ಮಹೋತ್ಸವದಡಿಯಲ್ಲಿ ಸಂಸ್ಕೃತಿ ಸಚಿವಾಲಯದಿಂದ 'ಹರ್ ಘರ್ ತಿರಂಗ' ಅಭಿಯಾನದ 4 ನೇ ಆವೃತ್ತಿ ಘೋಷಣೆ
Posted On:
11 AUG 2025 6:46PM by PIB Bengaluru
ದೇಶಾದ್ಯಂತ ನಾಗರಿಕರು ಭಾರತದ ರಾಷ್ಟ್ರ ಧ್ವಜ – ತ್ರಿವರ್ಣ ಬಾವುಟವನ್ನು ಮನೆ ಮನಗಳಿಗೆ ತರುವಂತೆ ಪ್ರೇರೇಪಿಸಲು, ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ್ ಮಹೋತ್ಸವ್) ಅಡಿಯಲ್ಲಿ ಪ್ರಾರಂಭಿಸಲಾಗಿರುವ ಹರ್ ಘರ್ ತಿರಂಗ ಅಭಿಯಾನದ 4ನೇ ಆವೃತ್ತಿಯನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಹೆಮ್ಮೆಯಿಂದ ಘೋಷಿಸಿದೆ.
"ಈ ವರ್ಷ ನಾವು ತಿರಂಗಾ ಅಭಿಯಾನದ ನಾಲ್ಕನೇ ಆವೃತ್ತಿಯನ್ನು ಆಚರಿಸಲಿದ್ದು, 5 ಲಕ್ಷಕ್ಕೂ ಹೆಚ್ಚು ಯುವಕರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ. ಈ ಯುವಕರು ತಿರಂಗಾ ಅಭಿಯಾನಕ್ಕೆ ಜನರನ್ನು ಪ್ರೇರೇಪಿಸಲಿದ್ದಾರೆ" ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಹೇಳಿದ್ದಾರೆ.

"ಹರ್ ಘರ್ ತಿರಂಗ ಅಭಿಯಾನಕ್ಕಿಂತ ಹೆಚ್ಚಿನದಾಗಿದೆ - ಇದು 1.4 ಶತಕೋಟಿ ಭಾರತೀಯರನ್ನು ನಮ್ಮ ರಾಷ್ಟ್ರ ಧ್ವಜದ ಕಾಲಾತೀತ ಬಣ್ಣಗಳಡಿಯಲ್ಲಿ ಒಂದುಗೂಡಿಸುವ ಭಾವನಾತ್ಮಕ ಆಂದೋಲನವಾಗಿದೆ. ಇದು ದೇಶಭಕ್ತಿಯನ್ನು ಉದ್ದೀಪನಗೊಳಿಸುವ, ನಾಗರಿಕ ಗರಿಮೆಯನ್ನು ಪೋಷಿಸುವ ಹಾಗೂ ನಮ್ಮ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಜೀವಂತ ಸಂಕೇತವಾಗಿರುವ ತಿರಂಗದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ" ಎಂದು ಶ್ರೀ ಶೇಖಾವತ್ ಅವರು ಪತ್ರಿಕಾ ಗೋಷ್ಟಿಯಲ್ಲಿಂದು ಹೇಳಿದರು.

ಈ ಸಂದರ್ಭದಲ್ಲಿ, ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಅಗರ್ವಾಲ್ ಅವರು ಪವರ್‌ಪಾಯಿಂಟ್ ಪ್ರಸ್ತುತಿಯೊಂದಿಗೆ ತಿರಂಗ ಅಭಿಯಾನದ ವಿಸ್ತೃತ ಅವಲೋಕನ ನೀಡಿದರು. ಗೃಹ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾದ ಶ್ರೀ ಅಭಿಜಿತ್ ಸಿನ್ಹಾ ಮತ್ತು ಜಲಶಕ್ತಿ ಸಚಿವಾಲಯದ ಆರ್ಥಿಕ ಸಲಹೆಗಾರರಾದ ಶ್ರೀ ಸಮೀರ್ ಕುಮಾರ್ ಅವರು ತಮ್ಮ ತಮ್ಮ ಸಚಿವಾಲಯಗಳು ಆಯೋಜಿಸಲಿರುವ ಕಾರ್ಯಕ್ರಮಗಳ ವಿವರಗಳನ್ನು ಪ್ರಸ್ತುತಪಡಿಸಿದರು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF), ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಗರಿಕರ ಮತ್ತು ರಾಷ್ಟ್ರಧ್ವಜದ ನಡುವಿನ ಬಾಂಧವ್ಯವನ್ನು ಔಪಚಾರಿಕ ಮತ್ತು ಸಾಂಸ್ಥಿಕ ಸಂಬಂಧದಿಂದ ಆಳವಾದ ವೈಯಕ್ತಿಕ ಬಂಧವಾಗಿ ಪರಿವರ್ತಿಸುವ ಉದ್ದೇಶದಿಂದ ರೂಪಿಸಲಾಗಿರುವ ಹರ್ ಘರ್ ತಿರಂಗಾ ಅಭಿಯಾನವು ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿಯೊಬ್ಬ ಭಾರತೀಯರ ಗೌರವ ಮತ್ತು ಗರಿಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಲು ಉತ್ತೇಜಿಸುತ್ತದೆ.
ತ್ರಿವರ್ಣ ಧ್ವಜವನ್ನು ಮನೆಗೆ ತರುವುದು ವೈಯಕ್ತಿಕ ಸಂಪರ್ಕದ ಅಭಿವ್ಯಕ್ತಿ ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಹಂಚಿತ ಬದ್ಧತೆಯ ಪುನರ್ ದೃಢೀಕರಣವೂ ಆಗಿದೆ ಎಂಬ ಆಳವಾದ ಸಾಂಕೇತಿಕ ಮೌಲ್ಯವನ್ನೂ ಈ ಉಪಕ್ರಮವು ಹೊಂದಿದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳನ್ನು ಇದು ನೆನಪಿಸುತ್ತದೆ ಹಾಗೂ ಏಕತೆ, ಸಮಗ್ರತೆ ಮತ್ತು ಪ್ರಗತಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತಿಜ್ಞೆಯೂ ಆಗಿದೆ.
ಸಂಸ್ಕೃತಿ ಸಚಿವಾಲಯವು ಈ ಅಭಿಯಾನದ ನೋಡಲ್ ಸಚಿವಾಲಯವಾಗಿದ್ದು, ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು, ಸಮುದಾಯ ಸಂಸ್ಥೆಗಳು ಮತ್ತು ಸಾರ್ವಜನಿಕರ ನಿಕಟ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ನಾಗರಿಕರು ತಮ್ಮ ಮನೆಗಳು, ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಮತ್ತು #HarGharTiranga ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಚರಣೆಗಳ ಛಾಯಾಚಿತ್ರಗಳು ಮತ್ತು ಕಥನಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ಜನರ ಅತ್ಯುತ್ಸಾಹದ ಭಾಗವಹಿಸುವಿಕೆಯೊಂದಿಗೆ, ಸ್ವಾತಂತ್ರ್ಯ ದಿನವನ್ನು ವೈವಿಧ್ಯತೆಯಲ್ಲಿ ಏಕತೆಯ ರಾಷ್ಟ್ರವ್ಯಾಪಿ ರೋಮಾಂಚಕ ಆಚರಣೆಯಾಗಿಸುತ್ತಾ ಹರ್ ಘರ್ ತಿರಂಗ ಅಭಿಯಾನವು ಜನರ ಆಂದೋಲನವಾಗಿ ಮಾರ್ಪಟ್ಟಿದೆ. 2025 ರ ಆವೃತ್ತಿಯು ನಮ್ಮ ರಾಷ್ಟ್ರೀಯ ಮನೋಭಾವ ಮತ್ತು ಗರಿಮೆಯನ್ನು ಪುನರ್ ದೃಢೀಕರಿಸುತ್ತಾ ಇನ್ನೂ ಹೆಚ್ಚಿನ ಎತ್ತರ ತಲುಪುವ ಗುರಿಯನ್ನು ಹೊಂದಿದೆ.
ಹೆಚ್ಚಿನ ವಿವರಗಳಿಗೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
*****
(Release ID: 2155331)