ಪ್ರಧಾನ ಮಂತ್ರಿಯವರ ಕಛೇರಿ
ಬೆಂಗಳೂರಿನಲ್ಲಿ 22,800 ಕೋಟಿ ರೂಪಾಯಿಗಳ ಮೆಟ್ರೋ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಆಪರೇಷನ್ ಸಿಂಧೂರದ ಯಶಸ್ಸು, ಗಡಿಯಾಚೆಗಿನ ಉಗ್ರರ ಅಡಗುತಾಣಗಳನ್ನು ನಾಶಮಾಡುವ ಶಕ್ತಿ ಮತ್ತು ಉಗ್ರರ ರಕ್ಷಣೆಗೆ ಬಂದ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮಂಡಿಯೂರುವಂತೆ ಮಾಡುವ ಸಾಮರ್ಥ್ಯ - ಭಾರತದ ಈ ಹೊಸ ಮುಖವನ್ನು ಇಡೀ ಜಗತ್ತು ನೋಡಿದೆ: ಪ್ರಧಾನಮಂತ್ರಿ
ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ: ಪ್ರಧಾನಮಂತ್ರಿ
ಕಳೆದ 11 ವರ್ಷಗಳಲ್ಲಿ, ನಮ್ಮ ಆರ್ಥಿಕತೆಯು 10 ನೇ ಸ್ಥಾನದಿಂದ ಅಗ್ರ ಐದಕ್ಕೆ ಏರಿದೆ. ಇದೀಗ, ವಿಶ್ವದ ಅಗ್ರ 3 ಆರ್ಥಿಕ ಶಕ್ತಿಗಳಲ್ಲಿ ಒಂದಾಗುವತ್ತ ನಾವು ದಾಪುಗಾಲಿಡುತ್ತಿದ್ದೇವೆ: ಪ್ರಧಾನಮಂತ್ರಿ
ʼವಿಕಸಿತ ಭಾರತ'ದ ಪಯಣ 'ಡಿಜಿಟಲ್ ಇಂಡಿಯಾ'ದೊಂದಿಗೆ ಕೈಜೋಡಿಸಿ ಮುನ್ನಡೆಯಲಿದೆ: ಪ್ರಧಾನಮಂತ್ರಿ
ತಂತ್ರಜ್ಞಾನದಲ್ಲಿ ಸ್ವಾವಲಂಬಿಗಳಾಗುವುದು ನಮ್ಮ ಮುಂದಿನ ದೊಡ್ಡ ಆದ್ಯತೆಯಾಗಿದೆ: ಪ್ರಧಾನಮಂತ್ರಿ
Posted On:
10 AUG 2025 3:31PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ ಸುಮಾರು 7,160 ಕೋಟಿ ರೂ. ಮೌಲ್ಯದ ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಿದರು ಮತ್ತು 15,610 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಬೆಂಗಳೂರಿನ ಕೆ ಎಸ್ ಆರ್ ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ನೆಲಕ್ಕೆ ಕಾಲಿಟ್ಟಾಗ ತಮಗೆ ಒಂದು ರೀತಿಯ ಆತ್ಮೀಯತೆಯ ಭಾವನೆ ಮೂಡಿತು ಎಂದು ಹೇಳಿದರು. ಕರ್ನಾಟಕದ ಸಂಸ್ಕೃತಿಯ ಶ್ರೀಮಂತಿಕೆ, ಜನರ ವಾತ್ಸಲ್ಯ, ಮತ್ತು ಹೃದಯವನ್ನು ತಟ್ಟುವ ಕನ್ನಡ ಭಾಷೆಯ ಮಾಧುರ್ಯವನ್ನು ಶ್ಲಾಘಿಸಿದ ಶ್ರೀ ಮೋದಿ ಅವರು ಬೆಂಗಳೂರಿನ ಅಧಿದೇವತೆ ಅಣ್ಣಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸುವುದರ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು. ಶತಮಾನಗಳ ಹಿಂದೆ ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರಕ್ಕೆ ಅಡಿಪಾಯ ಹಾಕಿದ್ದನ್ನು ಸ್ಮರಿಸಿದ ಪ್ರಧಾನ ಮಂತ್ರಿಗಳು, ಕೆಂಪೇಗೌಡರು ಸಂಪ್ರದಾಯದಲ್ಲಿ ಬೇರೂರಿರುವ ಜೊತೆಗೆ ಪ್ರಗತಿಯ ಹೊಸ ಎತ್ತರಗಳನ್ನು ತಲುಪುವ ನಗರದ ಕನಸು ಕಂಡಿದ್ದರು ಎಂದು ಹೇಳಿದರು. “ಬೆಂಗಳೂರು ಯಾವಾಗಲೂ ಆ ಮನೋಭಾವವನ್ನು ಜೀವಂತವಾಗಿರಿಸಿದೆ ಮತ್ತು ಅದನ್ನು ಕಾಪಾಡಿಕೊಂಡಿದೆ. ಇಂದು, ಬೆಂಗಳೂರು ಅದೇ ಕನಸನ್ನು ನನಸಾಗಿಸುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಶ್ರೀ ಮೋದಿ ಅವರು, “ಇಂದು ಬೆಂಗಳೂರು 'ನವ ಭಾರತದ ಉದಯ'ದ ಸಂಕೇತವಾಗಿ ಹೊರಹೊಮ್ಮುತ್ತಿರುವ ನಗರವಾಗಿದೆ” ಎಂದು ಬಣ್ಣಿಸಿದರು. ಬೆಂಗಳೂರಿನ ಆತ್ಮವು ತಾತ್ವಿಕ ಜ್ಞಾನವನ್ನು ಹೊಂದಿದ್ದರೆ, ಅದರ ಕಾರ್ಯಗಳು ತಾಂತ್ರಿಕ ಪರಿಣತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಬಣ್ಣಿಸಿದರು. ಬೆಂಗಳೂರು ಭಾರತವನ್ನು ಜಾಗತಿಕ ಮಾಹಿತಿ ತಂತ್ರಜ್ಞಾನ ನಕ್ಷೆಯಲ್ಲಿ ಹೆಮ್ಮೆಯಿಂದ ಗುರುತಿಸಿದೆ ಎಂದು ಅವರು ಒತ್ತಿ ಹೇಳಿದರು. ಬೆಂಗಳೂರಿನ ಈ ಯಶಸ್ಸಿಗೆ ಇಲ್ಲಿನ ಜನರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯೇ ಕಾರಣ ಎಂದು ಅವರು ಶ್ಲಾಘಿಸಿದರು.
ಪ್ರಧಾನಮಂತ್ರಿ ಅವರು, “21ನೇ ಶತಮಾನದಲ್ಲಿ, ನಗರ ಯೋಜನೆ ಮತ್ತು ನಗರ ಮೂಲಸೌಕರ್ಯವು ನಮ್ಮ ನಗರಗಳಿಗೆ ನಿರ್ಣಾಯಕ ಅಗತ್ಯಗಳಾಗಿವೆ” ಎಂದು ಒತ್ತಿ ಹೇಳಿದರು. ಬೆಂಗಳೂರಿನಂತಹ ನಗರಗಳು ಭವಿಷ್ಯಕ್ಕಾಗಿ ಸಿದ್ಧವಾಗಿರಬೇಕು ಎಂದು ಅವರು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ, ಭಾರತ ಸರ್ಕಾರವು ಬೆಂಗಳೂರಿಗಾಗಿ ಸಾವಿರಾರು ಕೋಟಿ ಮೌಲ್ಯದ ಯೋಜನೆಗಳನ್ನು ಪ್ರಾರಂಭಿಸಿದೆ ಮತ್ತು ಇಂದು ಈ ಅಭಿಯಾನವು ಹೊಸ ವೇಗವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಿದರು ಮತ್ತು ಮೆಟ್ರೋ ಹಂತ-3ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸುವ ಮೂರು ಹೊಸ ವಂದೇ ಭಾರತ್ ರೈಲುಗಳಿಗೂ ಅವರು ಹಸಿರು ನಿಶಾನೆ ತೋರಿದರು. ಬೆಂಗಳೂರು ಮತ್ತು ಬೆಳಗಾವಿ ನಡುವಿನ ವಂದೇ ಭಾರತ್ ಸೇವೆಯ ಪ್ರಾರಂಭವು ಬೆಳಗಾವಿಯಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಇದರ ಜೊತೆಗೆ, ನಾಗ್ಪುರ ಮತ್ತು ಪುಣೆ ಹಾಗೂ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮತ್ತು ಅಮೃತಸರ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಯಿತು. ಈ ಸೇವೆಗಳು ಲಕ್ಷಾಂತರ ಭಕ್ತರಿಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ ಎಂದು ಪ್ರಧಾನ ಮಂತ್ರಿ ಹೇಳಿದರು. ಈ ಯೋಜನೆಗಳು ಮತ್ತು ಹೊಸ ವಂದೇ ಭಾರತ್ ರೈಲುಗಳಿಗಾಗಿ ಬೆಂಗಳೂರು, ಕರ್ನಾಟಕ ಮತ್ತು ಇಡೀ ದೇಶದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಆಪರೇಷನ್ ಸಿಂಧೂರ್ ನಂತರ ಬೆಂಗಳೂರಿಗೆ ತಮ್ಮ ಮೊದಲ ಭೇಟಿ ಇದಾಗಿದೆ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಹೇಳಿದರು. ಆಪರೇಷನ್ ಸಿಂಧೂರ್ ನಲ್ಲಿ ಭಾರತೀಯ ಸೇನೆಯ ಯಶಸ್ಸನ್ನು ಎತ್ತಿ ತೋರಿಸಿದ ಅವರು, ಗಡಿಯಾಚೆಗಿನ ಭಯೋತ್ಪಾದಕರ ಅಡಗುತಾಣಗಳನ್ನು ನಾಶಮಾಡುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದರು. ಭಯೋತ್ಪಾದಕರ ರಕ್ಷಣೆಗೆ ಬಂದ ಪಾಕಿಸ್ತಾನವನ್ನು ಕೆಲವೇ ಗಂಟೆಗಳಲ್ಲಿ ಮೊಣಕಾಲೂರುವಂತೆ ಮಾಡಿದ ಭಾರತದ ಶಕ್ತಿಯನ್ನು ಅವರು ಒತ್ತಿ ಹೇಳಿದರು. “ಇಡೀ ಜಗತ್ತು ನವ ಭಾರತದ ಈ ಹೊಸ ಮುಖವನ್ನು ಕಂಡಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಆಪರೇಷನ್ ಸಿಂಧೂರ್ ನ ಯಶಸ್ಸಿಗೆ ತಂತ್ರಜ್ಞಾನದ ಶಕ್ತಿ ಮತ್ತು ರಕ್ಷಣಾ ವಲಯದಲ್ಲಿ ‘ಮೇಕ್ ಇನ್ ಇಂಡಿಯಾ’ದ ಬಲವೇ ಕಾರಣ ಎಂದು ಅವರು ಹೇಳಿದರು. ಈ ಸಾಧನೆಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಯುವಕರ ಮಹತ್ವದ ಕೊಡುಗೆಯನ್ನು ಅವರು ಗುರುತಿಸಿ, ಈ ಯಶಸ್ಸಿನಲ್ಲಿ ಅವರ ಪಾತ್ರಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಬೆಂಗಳೂರು ಈಗ ಪ್ರಮುಖ ಜಾಗತಿಕ ನಗರಗಳೊಂದಿಗೆ ಗುರುತಿಸಲ್ಪಟ್ಟಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಭಾರತವು ಜಾಗತಿಕವಾಗಿ ಸ್ಪರ್ಧಿಸುವುದು ಮಾತ್ರವಲ್ಲದೆ, ಮುಂಚೂಣಿಯಲ್ಲಿರಬೇಕು ಎಂದು ಅವರು ಒತ್ತಿ ಹೇಳಿದರು. ನಮ್ಮ ನಗರಗಳು ಸ್ಮಾರ್ಟ್, ವೇಗ ಮತ್ತು ದಕ್ಷತೆಯನ್ನು ಹೊಂದಿದ್ದಾಗ ಮಾತ್ರ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಆಧುನಿಕ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸುವುದರ ಮೇಲೆ ಸರ್ಕಾರ ಬಲವಾದ ಗಮನ ಹರಿಸಿದೆ ಎಂದು ಅವರು ತಿಳಿಸಿದರು. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಈ ಮಾರ್ಗವು ಬೆಂಗಳೂರಿನ ಹಲವಾರು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಎಂದು ಶ್ರೀ ಮೋದಿ ಘೋಷಿಸಿದರು. ಇದರಿಂದ ಬಸವನಗುಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅವರು ಹೇಳಿದರು. ಇದು ಲಕ್ಷಾಂತರ ಜನರ ಜೀವನ ಮತ್ತು ಕೆಲಸವನ್ನು ಸುಗಮಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿ ಅವರು, ಹಳದಿ ಮಾರ್ಗದ ಉದ್ಘಾಟನೆಯ ಜೊತೆಗೆ, ಬೆಂಗಳೂರು ಮೆಟ್ರೋದ ಮೂರನೇ ಹಂತದ ಅಂದರೆ ಆರೆಂಜ್ ಮಾರ್ಗಕ್ಕೆ ಸಹ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಘೋಷಿಸಿದರು. ಈ ಮಾರ್ಗವು ಕಾರ್ಯಾಚರಣೆಗೆ ಬಂದ ನಂತರ, ಹಳದಿ ಮಾರ್ಗದೊಂದಿಗೆ ಸೇರಿ ಪ್ರತಿದಿನ 25 ಲಕ್ಷ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲ ಕಲ್ಪಿಸುತ್ತದೆ ಎಂದು ಅವರು ಹೇಳಿದರು. ಇದು ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ತಿಳಿಸಿದರು. ಬೆಂಗಳೂರು ಮೆಟ್ರೋ ದೇಶದಲ್ಲಿ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಮಾದರಿಯನ್ನು ಪರಿಚಯಿಸಿದೆ ಎಂದು ಶ್ರೀ ಮೋದಿ ಹೇಳಿದರು. ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್‌ನಂತಹ ಕಂಪನಿಗಳು ಕೆಲವು ಪ್ರಮುಖ ಮೆಟ್ರೋ ನಿಲ್ದಾಣಗಳಿಗೆ ಭಾಗಶಃ ಹಣವನ್ನು ಒದಗಿಸಿವೆ ಎಂದು ಅವರು ಎತ್ತಿ ತೋರಿಸಿದರು. ಸಿ ಎಸ್ ಆರ್ ಅನ್ನು ಈ ರೀತಿ ನವೀನವಾಗಿ ಬಳಸಿದ್ದಕ್ಕಾಗಿ ಅವರು ಪ್ರಶಂಸಿಸಿದರು ಮತ್ತು ಈ ಕೊಡುಗೆಗಾಗಿ ಕಾರ್ಪೊರೇಟ್ ವಲಯಕ್ಕೆ ಅಭಿನಂದನೆ ಸಲ್ಲಿಸಿದರು.
ಪ್ರಧಾನಮಂತ್ರಿ ಶ್ರೀ ಮೋದಿ ಅವರು, "ಭಾರತ ಪ್ರಸ್ತುತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತದ ಆರ್ಥಿಕತೆಯು 10ನೇ ಸ್ಥಾನದಿಂದ ಅಗ್ರ ಐದು ಸ್ಥಾನಕ್ಕೆ ಏರಿದೆ ಮತ್ತು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲು ವೇಗವಾಗಿ ಸಾಗುತ್ತಿದೆ" ಎಂದು ಒತ್ತಿ ಹೇಳಿದರು. 'ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ'ಯ ಮನೋಭಾವ, ಸ್ಪಷ್ಟ ಉದ್ದೇಶ ಮತ್ತು ಪ್ರಾಮಾಣಿಕ ಪ್ರಯತ್ನಗಳಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಅವರು ಹೇಳಿದರು. ಮೂಲಸೌಕರ್ಯ ಬೆಳವಣಿಗೆಯ ಕುರಿತು ಮಾತನಾಡಿದ ಪ್ರಧಾನ ಮಂತ್ರಿಗಳು, 2014 ರಲ್ಲಿ ಮೆಟ್ರೋ ಸೇವೆಗಳು ಕೇವಲ ಐದು ನಗರಗಳಿಗೆ ಸೀಮಿತವಾಗಿದ್ದವು ಎಂದು ಸ್ಮರಿಸಿದರು. ಇಂದು, 24 ನಗರಗಳಲ್ಲಿ 1,000 ಕಿಲೋಮೀಟರ್ ಗಳಿಗೂ ಹೆಚ್ಚು ಮೆಟ್ರೋ ಜಾಲವಿದೆ, ಇದು ಜಾಗತಿಕವಾಗಿ ಭಾರತವನ್ನು ಮೂರನೇ ಅತಿದೊಡ್ಡ ಮೆಟ್ರೋ ಜಾಲವನ್ನಾಗಿ ಮಾಡಿದೆ ಎಂದು ಅವರು ಹೇಳಿದರು. 2014 ಕ್ಕಿಂತ ಮೊದಲು ಕೇವಲ 20,000 ಕಿಲೋಮೀಟರ್ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿದ್ದವು. ಆದರೆ, ಕಳೆದ ಹನ್ನೊಂದು ವರ್ಷಗಳಲ್ಲಿ 40,000 ಕಿಲೋಮೀಟರ್ ಗಳಿಗಿಂತ ಹೆಚ್ಚು ರೈಲು ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ, ಇದು ಸುಸ್ಥಿರ ಸಾರಿಗೆ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಶ್ರೀ ಮೋದಿ ತಿಳಿಸಿದರು.
ಭಾರತದ ಸಾಧನೆಗಳು ಕೇವಲ ನೆಲದ ಮೇಲೆ ಮಾತ್ರವಲ್ಲ, ಆಕಾಶದಲ್ಲೂ ಉತ್ತುಂಗಕ್ಕೇರುತ್ತಿವೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. 2014 ರಲ್ಲಿ ಭಾರತದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು, ಆದರೆ ಇಂದು ಈ ಸಂಖ್ಯೆ 160 ಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು. ಜಲಮಾರ್ಗ ಮೂಲಸೌಕರ್ಯದಲ್ಲಿನ ಅದ್ಭುತ ಪ್ರಗತಿಯನ್ನೂ ಅವರು ಎತ್ತಿ ತೋರಿಸಿದರು. 2014 ರಲ್ಲಿ ಕೇವಲ ಮೂರು ರಾಷ್ಟ್ರೀಯ ಜಲಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದವು; ಆದರೆ ಈಗ ಈ ಸಂಖ್ಯೆ ಮೂವತ್ತಕ್ಕೆ ಏರಿದೆ ಎಂದು ಅವರು ಹೇಳಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತವು ಸಾಧಿಸಿದ ಮಹತ್ವದ ಪ್ರಗತಿಯ ಬಗ್ಗೆ ಮಾತನಾಡಿದ ಶ್ರೀ ಮೋದಿ, 2014 ರವರೆಗೆ ದೇಶದಲ್ಲಿ ಕೇವಲ 7 ಏಮ್ಸ್ (AIIMS) ಮತ್ತು 387 ವೈದ್ಯಕೀಯ ಕಾಲೇಜುಗಳಿದ್ದವು, ಆದರೆ ಇಂದು 22 ಏಮ್ಸ್ ಮತ್ತು 704 ವೈದ್ಯಕೀಯ ಕಾಲೇಜುಗಳು ಜನರಿಗೆ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದರು. ಕಳೆದ 11 ವರ್ಷಗಳಲ್ಲಿ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಹೊಸ ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು. ಈ ವಿಸ್ತರಣೆಯು ಮಧ್ಯಮ ವರ್ಗದ ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುವುದರ ಮೂಲಕ ಪ್ರಯೋಜನವನ್ನು ನೀಡಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ 11 ವರ್ಷಗಳಲ್ಲಿ, ಐಐಟಿಗಳ (IIT) ಸಂಖ್ಯೆ 16 ರಿಂದ 23 ಕ್ಕೆ, ಐಐಐಟಿಗಳ (IIIT) ಸಂಖ್ಯೆ 9 ರಿಂದ 25 ಕ್ಕೆ ಮತ್ತು ಐಐಎಂಗಳ (IIM) ಸಂಖ್ಯೆ 13 ರಿಂದ 21 ಕ್ಕೆ ಹೆಚ್ಚಾಗಿದೆ ಎಂದು ಶ್ರೀ ಮೋದಿ ಹೇಳಿದರು. ಇಂದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಗಣನೀಯವಾಗಿ ಹೆಚ್ಚಿನ ಅವಕಾಶಗಳು ಲಭ್ಯವಿದೆ ಎಂದು ಅವರು ತಿಳಿಸಿದರು.
ದೇಶವು ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಂತೆ, ಬಡವರು ಮತ್ತು ಹಿಂದುಳಿದವರ ಜೀವನವೂ ಅದೇ ವೇಗದಲ್ಲಿ ಬದಲಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ಈಗ ಸರ್ಕಾರವು ಮತ್ತಷ್ಟು 3 ಕೋಟಿ ಮನೆಗಳನ್ನು ನಿರ್ಮಿಸಲು ಮುಂದಾಗಿದೆ ಎಂದು ಅವರು ಘೋಷಿಸಿದರು. ಕೇವಲ 11 ವರ್ಷಗಳಲ್ಲಿ, ದೇಶಾದ್ಯಂತ 12 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಉಪಕ್ರಮವು ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರಿಗೆ ಗೌರವ, ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಒದಗಿಸಿದೆ ಎಂದು ಅವರು ಒತ್ತಿ ಹೇಳಿದರು.
ದೇಶದ ಆರ್ಥಿಕ ಬೆಳವಣಿಗೆಯಿಂದ ಅಭಿವೃದ್ಧಿಯ ವೇಗ ಹೆಚ್ಚಿದೆ ಎಂದು ಶ್ರೀ ಮೋದಿ ಅವರು ಹೇಳಿದರು 2014ಕ್ಕಿಂತ ಮೊದಲು ಭಾರತದ ಒಟ್ಟು ರಫ್ತು ಕೇವಲ $468 ಬಿಲಿಯನ್ ತಲುಪಿತ್ತು, ಆದರೆ ಇಂದು ಆ ಮೊತ್ತವು $824 ಬಿಲಿಯನ್‌ಗೆ ಏರಿದೆ ಎಂದು ಅವರು ಉಲ್ಲೇಖಿಸಿದರು. 'ಹಿಂದೆ ಭಾರತವು ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು, ಆದರೆ ಈಗ ದೇಶವು ಮೊಬೈಲ್ ಹ್ಯಾಂಡ್ ಸೆಟ್ ಗಳ ಅಗ್ರ ಐದು ರಫ್ತುದಾರರಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದರು. ಈ ಪರಿವರ್ತನೆಯಲ್ಲಿ ಬೆಂಗಳೂರು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ಅವರು ತಿಳಿಸಿದರು. ಶ್ರೀ ಮೋದಿ ಅವರು, 2014ಕ್ಕಿಂತ ಮೊದಲು ಭಾರತದ ಎಲೆಕ್ಟ್ರಾನಿಕ್ಸ್ ರಫ್ತು ಸುಮಾರು $6 ಬಿಲಿಯನ್ ಇತ್ತು, ಅದು ಈಗ ಸುಮಾರು $38 ಬಿಲಿಯನ್‌ಗೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಹನ್ನೊಂದು ವರ್ಷಗಳ ಹಿಂದೆ ಭಾರತದ ಆಟೋಮೊಬೈಲ್ ರಫ್ತು ಸುಮಾರು $16 ಶತಕೋಟಿಯಷ್ಟಿತ್ತು, ಆದರೆ ಇಂದು ಆ ಅಂಕಿ-ಅಂಶವು ಎರಡು ಪಟ್ಟು ಹೆಚ್ಚಾಗಿದ್ದು, ಭಾರತವನ್ನು ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಆಟೋಮೊಬೈಲ್ ರಫ್ತುದಾರ ರಾಷ್ಟ್ರವನ್ನಾಗಿ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಾಧನೆಗಳು 'ಆತ್ಮನಿರ್ಭರ ಭಾರತ'ದ ಸಂಕಲ್ಪವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು ಮತ್ತು ನಾವೆಲ್ಲರೂ ಒಗ್ಗಟ್ಟಾಗಿ ಮುಂದುವರಿದು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ ಎಂದು ಪ್ರತಿಪಾದಿಸಿದರು.
“ಡಿಜಿಟಲ್ ಇಂಡಿಯಾದೊಂದಿಗೆ 'ವಿಕಸಿತ ಭಾರತ'ದ ಪಯಣ ಮುಂದುವರಿಯುತ್ತದೆ” ಎಂದು ಶ್ರೀ ಮೋದಿ ಹೇಳಿದರು. 'ಇಂಡಿಯಾ AI ಮಿಷನ್' ನಂತಹ ಉಪಕ್ರಮಗಳ ಮೂಲಕ ಭಾರತವು ಜಾಗತಿಕ AI ನಾಯಕತ್ವದತ್ತ ಸಾಗುತ್ತಿದೆ ಎಂದು ಅವರು ಹೇಳಿದರು. 'ಸೆಮಿಕಂಡಕ್ಟರ್ ಮಿಷನ್' ಕೂಡಾ ವೇಗ ಪಡೆಯುತ್ತಿದ್ದು, ಶೀಘ್ರದಲ್ಲೇ ಭಾರತವು ತನ್ನದೇ 'ಮೇಡ್-ಇನ್-ಇಂಡಿಯಾ' ಚಿಪ್ ಅನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.ಕಡಿಮೆ ವೆಚ್ಚದ, ಹೈಟೆಕ್ ಬಾಹ್ಯಾಕಾಶ ಯೋಜನೆಗಳಿಗೆ ಭಾರತವು ಜಾಗತಿಕ ಮಾದರಿಯಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಭವಿಷ್ಯದ ತಂತ್ರಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಪ್ರಗತಿ ಸಾಧಿಸುತ್ತಿದೆ ಮತ್ತು ಈ ಪ್ರಗತಿಯ ಅತ್ಯಂತ ಗಮನಾರ್ಹ ಅಂಶವೆಂದರೆ ಬಡವರ ಸಬಲೀಕರಣ ಎಂದು ಅವರು ಒತ್ತಿ ಹೇಳಿದರು. ಡಿಜಿಟಲೀಕರಣವು ಈಗ ದೇಶದ ಪ್ರತಿ ಹಳ್ಳಿಯನ್ನು ತಲುಪಿದೆ ಎಂದು ಅವರು ತಿಳಿಸಿದರು. UPI ಮೂಲಕ, ವಿಶ್ವದ ರಿಯಲ್ ಟೈಮ್ ವಹಿವಾಟುಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಭಾರತದಲ್ಲಿ ನಡೆಯುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನವು ಸರ್ಕಾರ ಮತ್ತು ನಾಗರಿಕರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಇಂದು 2,200 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಮೊಬೈಲ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು. UMANG ಆ್ಯಪ್ ಮೂಲಕ ನಾಗರಿಕರು ಮನೆಯಿಂದಲೇ ಸರ್ಕಾರಿ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಡಿಜಿಲಾಕರ್ ಮೂಲಕ ಸರ್ಕಾರಿ ಪ್ರಮಾಣಪತ್ರಗಳನ್ನು ನಿರ್ವಹಿಸುವ ತೊಂದರೆ ನಿವಾರಣೆಯಾಗಿದೆ ಎಂದು ಅವರು ಹೇಳಿದರು. AI-ಚಾಲಿತ ಬೆದರಿಕೆ ಪತ್ತೆಯಂತಹ ತಂತ್ರಜ್ಞಾನಗಳಲ್ಲಿ ಭಾರತವು ಈಗ ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಸಮಾಜದ ಕಡೆಯ ವ್ಯಕ್ತಿಗೆ ತಲುಪುವುದನ್ನು ಖಚಿತಪಡಿಸುವುದು ನಮ್ಮ ಗುರಿ ಎಂದು ಅವರು ಒತ್ತಿ ಹೇಳಿದರು. ಈ ರಾಷ್ಟ್ರೀಯ ಪ್ರಯತ್ನಕ್ಕೆ ಬೆಂಗಳೂರು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.
“ನಮ್ಮ ಮುಂದಿನ ದೊಡ್ಡ ಆದ್ಯತೆಯೆಂದರೆ ತಂತ್ರಜ್ಞಾನದಲ್ಲಿ ಸ್ವಾವಲಂಬಿಗಳಾಗುವುದು,” ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಭಾರತೀಯ ತಂತ್ರಜ್ಞಾನ ಕಂಪನಿಗಳು ವಿಶ್ವಾದ್ಯಂತ ಸಾಫ್ಟ್‌ವೇರ್ ಮತ್ತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಜಾಗತಿಕವಾಗಿ ತಮ್ಮ ಛಾಪು ಮೂಡಿಸಿವೆ ಎಂದು ಅವರು ಹೇಳಿದರು. ಈಗ ಭಾರತದ ಸ್ವಂತ ಅಗತ್ಯಗಳಿಗೆ ಹೆಚ್ಚು ಒತ್ತು ನೀಡುವ ಸಮಯ ಬಂದಿದೆ ಮತ್ತು ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ವೇಗಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು, ಏಕೆಂದರೆ ಈಗ ಪ್ರತಿ ಕ್ಷೇತ್ರದಲ್ಲೂ ಸಾಫ್ಟ್ ವೇರ್ ಮತ್ತು ಆ್ಯಪ್ ಗಳನ್ನು ಬಳಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಭಾರತವು ಹೊಸ ಎತ್ತರವನ್ನು ತಲುಪುವುದು ಅತ್ಯಗತ್ಯ ಎಂದು ಶ್ರೀ ಮೋದಿ ಹೇಳಿದರು. ಉದಯೋನ್ಮುಖ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಲು ಉದ್ದೇಶಪೂರ್ವಕ ಪ್ರಯತ್ನಗಳಿಗೆ ಕರೆ ನೀಡಿದ ಪ್ರಧಾನ ಮಂತ್ರಿಗಳು, 'ಮೇಕ್ ಇನ್ ಇಂಡಿಯಾ' ಮತ್ತು ಉತ್ಪಾದನಾ ವಲಯದಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಉಪಸ್ಥಿತಿಯನ್ನು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಭಾರತದ ಉತ್ಪನ್ನಗಳು 'ಶೂನ್ಯ ದೋಷ, ಶೂನ್ಯ ಪರಿಣಾಮ' (Zero Defect, Zero Effect) ಮಾನದಂಡಕ್ಕೆ ಬದ್ಧವಾಗಿರಬೇಕು, ಅಂದರೆ ಅವು ಗುಣಮಟ್ಟದಲ್ಲಿ ದೋಷರಹಿತವಾಗಿರಬೇಕು ಮತ್ತು ಪರಿಸರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು ಎಂದು ಅವರು ಹೇಳಿದರು. ಕರ್ನಾಟಕದ ಪ್ರತಿಭೆಯು 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನವನ್ನು ಮುನ್ನಡೆಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರಗಳು ಹೀಗೆ ಎಲ್ಲರೂ ಜನರಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ನಾಗರಿಕರ ಜೀವನವನ್ನು ಸುಧಾರಿಸಲು ಸಹಯೋಗದ ಪ್ರಯತ್ನಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಹೊಸ ಸುಧಾರಣೆಗಳನ್ನು ಜಾರಿಗೆ ತರುವುದು ಒಂದು ಪ್ರಮುಖ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ ಕೇಂದ್ರ ಸರ್ಕಾರವು ನಿರಂತರವಾಗಿ ಸುಧಾರಣೆಗಳನ್ನು ಜಾರಿಗೊಳಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಇದಕ್ಕೆ ಉದಾಹರಣೆಯಾಗಿ, ಕಾನೂನುಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು 'ಜನ್ ವಿಶ್ವಾಸ್ ಮಸೂದೆ'ಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು ಮತ್ತು ಈಗ 'ಜನ್ ವಿಶ್ವಾಸ್ 2.0' ಅನ್ನು ಸಹ ಪರಿಚಯಿಸಲಾಗುತ್ತಿದೆ ಎಂದು ಘೋಷಿಸಿದರು. ಅನಗತ್ಯ ಕ್ರಿಮಿನಲ್ ನಿಬಂಧನೆಗಳಿರುವ ಕಾನೂನುಗಳನ್ನು ಗುರುತಿಸಿ ಅವುಗಳನ್ನು ತೆಗೆದುಹಾಕಲು ರಾಜ್ಯ ಸರ್ಕಾರಗಳು ಪ್ರಯತ್ನಿಸಬೇಕು ಎಂದು ಅವರು ಪ್ರೋತ್ಸಾಹಿಸಿದರು. ಸರ್ಕಾರಿ ನೌಕರರಿಗೆ ಸಾಮರ್ಥ್ಯ ಆಧಾರಿತ ತರಬೇತಿ ನೀಡುವ 'ಮಿಷನ್ ಕರ್ಮಯೋಗಿ' ಉಪಕ್ರಮವನ್ನು ಶ್ರೀ ಮೋದಿ ಅವರು ಉಲ್ಲೇಖಿಸಿದರು. ರಾಜ್ಯಗಳು ಸಹ ತಮ್ಮ ಅಧಿಕಾರಿಗಳಿಗಾಗಿ ಈ ಕಲಿಕಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು. 'ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮ' (Aspirational Districts Programme) ಮತ್ತು 'ಆಕಾಂಕ್ಷಿ ಬ್ಲಾಕ್ ಕಾರ್ಯಕ್ರಮ'ಗಳ ಮೇಲೆ ಗಮನ ಹರಿಸುವಂತೆ ಹೇಳಿದ ಪ್ರಧಾನ ಮಂತ್ರಿಗಳು, ರಾಜ್ಯಗಳು ಕೂಡಾ ವಿಶೇಷ ಗಮನ ಅಗತ್ಯವಿರುವ ಪ್ರದೇಶಗಳನ್ನು ಇದೇ ರೀತಿ ಗುರುತಿಸುವಂತೆ ಕರೆ ನೀಡಿದರು. ರಾಜ್ಯಮಟ್ಟದಲ್ಲಿ ನಿರಂತರ ಸುಧಾರಣೆಗಳಿಗಾಗಿ ಕರೆ ನೀಡಿದ ಅವರು, ಈ ಜಂಟಿ ಉಪಕ್ರಮಗಳು ಕರ್ನಾಟಕವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಒಟ್ಟಾಗಿ, 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಈಡೇರಿಸುತ್ತೇವೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್, ಶ್ರೀ ಹೆಚ್.ಡಿ. ಕುಮಾರಸ್ವಾಮಿ, ಶ್ರೀ ಅಶ್ವಿನಿ ವೈಷ್ಣವ್, ಶ್ರೀ ವಿ. ಸೋಮಣ್ಣ, ಸುಶ್ರೀ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಬೆಂಗಳೂರು ಮೆಟ್ರೋ ಹಂತ-2 ಯೋಜನೆಯಡಿ, ಸುಮಾರು ₹7,160 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ, ಆರ್.ವಿ. ರಸ್ತೆಯ (ರಾಗಿಗುಡ್ಡ) ನಿಲ್ದಾಣದಿಂದ ಬೊಮ್ಮಸಂದ್ರದವರೆಗೆ ಸಾಗುವ 19 ಕಿ.ಮೀ.ಗೂ ಅಧಿಕ ಉದ್ದದ 'ಹಳದಿ ಮಾರ್ಗ'ವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದರು. ಈ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗದ ಸೇರ್ಪಡೆಯೊಂದಿಗೆ, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಜಾಲವು 96 ಕಿ.ಮೀ. ಗಡಿ ದಾಟಲಿದ್ದು, ಈ ಭಾಗದ ಬೃಹತ್ ಜನಸಮೂಹಕ್ಕೆ ಅನುಕೂಲವಾಗಲಿದೆ.
₹15,610 ಕೋಟಿಗೂ ಅಧಿಕ ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಗೆ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಿದರು. 44 ಕಿ.ಮೀ.ಗಿಂತಲೂ ಹೆಚ್ಚು ಉದ್ದದ ಈ ಯೋಜನೆಯು 31 ಎಲಿವೇಟೆಡ್ ನಿಲ್ದಾಣಗಳನ್ನು ಒಳಗೊಳ್ಳಲಿದೆ. ಈ ಬೃಹತ್ ಮೂಲಸೌಕರ್ಯ ಯೋಜನೆಯು ನಗರದ ವರ್ಧಿಸುತ್ತಿರುವ ಸಾರಿಗೆಯ ಬೇಡಿಕೆಗಳನ್ನು ಈಡೇರಿಸಲಿದೆ ಹಾಗೂ ವಸತಿ, ಕೈಗಾರಿಕಾ, ವಾಣಿಜ್ಯ ಮತ್ತು ಶೈಕ್ಷಣಿಕ ವಲಯಗಳಿಗೆ ಅತ್ಯುತ್ತಮ ಸಂಪರ್ಕವನ್ನು ಒದಗಿಸಲಿದೆ.
ಪ್ರಧಾನ ಮಂತ್ರಿಗಳು ಬೆಂಗಳೂರಿನಿಂದ 3 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಇದರಲ್ಲಿ ಬೆಂಗಳೂರಿನಿಂದ ಬೆಳಗಾವಿ, ಅಮೃತಸರದಿಂದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮತ್ತು ನಾಗ್ಪುರ (ಅಜ್ನಿ) ದಿಂದ ಪುಣೆ ನಡುವಿನ ರೈಲುಗಳು ಸೇರಿವೆ. ಈ ಹೈ-ಸ್ಪೀಡ್ ರೈಲುಗಳು ಪ್ರಾದೇಶಿಕ ಸಂಪರ್ಕವನ್ನು ಗಣನೀಯವಾಗಿ ಹೆಚ್ಚಿಸಿ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಪ್ರಯಾಣದ ಅನುಭವವನ್ನು ಒದಗಿಸುತ್ತವೆ.
*****
(Release ID: 2154872)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam