ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಾರ್ವಜನಿಕ ಸೇವೆ-ಚಾಲಿತ ವಿಧಾನದೊಂದಿಗೆ, ವೇವ್ಸ್ ಒ.ಟಿ.ಟಿ ಭಾರತದ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ವರ್ಧಿಸುತ್ತಿದೆ; ಸಂಸತ್ತಿನಲ್ಲಿ ಸರ್ಕಾರದ ಹೇಳಿಕೆ
ವಾಣಿಜ್ಯ ಮತ್ತು ಮನರಂಜನೆ-ಕೇಂದ್ರಿತ ಖಾಸಗಿ ಮಾದರಿಗಳಿಗಿಂತ ಭಿನ್ನವಾಗಿ, ವೇವ್ಸ್ ಒ.ಟಿ.ಟಿ ಭಾರತೀಯ ಪರಂಪರೆ, ಸಾರ್ವಜನಿಕ ಸೇವಾ ಕಾರ್ಯಕ್ರಮಗಳು ಮತ್ತು ಆಯ್ದ ಮನರಂಜನೆ ಹಾಗೂ ಸುದ್ದಿಗಳನ್ನು ಪ್ರಸಾರ ಮಾಡುತ್ತದೆ; ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರು
ವೇವ್ಸ್ ಒ.ಟಿ.ಟಿ ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ವಿಶ್ವಾಸಾರ್ಹ, ಸಾಂಸ್ಕೃತಿಕವಾಗಿ ಶ್ರೀಮಂತ ವಿಷಯವನ್ನು ಒದಗಿಸುತ್ತದೆ, ಭಾರತೀಯ ಪರಂಪರೆ, ಪ್ರಾದೇಶಿಕ ವೈವಿಧ್ಯತೆ, ಸಾರ್ವಜನಿಕ ಸೇವಾ ಕಾರ್ಯಕ್ರಮಗಳು ಮತ್ತು ಸುದ್ದಿಗಳನ್ನು ಉಚಿತವಾಗಿ ಪ್ರದರ್ಶಿಸುತ್ತದೆ
ಕಂಟೆಂಟ್ ರಚನೆಕಾರರು, ಪ್ರಾದೇಶಿಕ ಪ್ರಸಾರಕರು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದೊಂದಿಗೆ, ವೇವ್ಸ್ ಯಾವುದೇ ಚಂದಾದಾರಿಕೆ ಶುಲ್ಕವಿಲ್ಲದೆ ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್-ಸಕ್ರಿಯವಿರುವ ಸಾಧನಗಳ ಮೂಲಕ ಅದನ್ನು ಪ್ರವೇಶಿಸುವಂತೆ ಮಾಡುತ್ತಿದೆ
Posted On:
08 AUG 2025 5:22PM by PIB Bengaluru
ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸಲು ವೇವ್ಸ್ ಒ.ಟಿ.ಟಿ ಹಲವಾರು ಪಾಲುದಾರಿಕೆಗಳನ್ನು ಮಾಡಿಕೊಂಡಿದೆ. ವೇವ್ಸ್ ಒ.ಟಿ.ಟಿ ಪ್ಲಾಟ್ಫಾರ್ಮ್ ನಲ್ಲಿ ವಿವಿಧ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳಲ್ಲಿ ಕಂಟೆಂಟ್ ಲಭ್ಯವಾಗುವಂತೆ ಮಾಡಲು ವೇದಿಕೆಯು ಕಂಟೆಂಟ್ ರಚನೆಕಾರರು, ಪ್ರಾದೇಶಿಕ ಪ್ರಸಾರಕರು ಮತ್ತು ಸಾಂಸ್ಕೃತಿಕ ಸಂಸ್ಥೆಗಳ ವ್ಯಾಪಕ ಜಾಲದೊಂದಿಗೆ ಕೆಲಸ ಮಾಡುತ್ತಿದೆ. ವೈವಿಧ್ಯಮಯ ವಿಷಯವನ್ನು ಅನ್ವೇಷಿಸಲು ಮತ್ತು ವಿಶಾಲ ಪ್ರಾದೇಶಿಕ ಪ್ರೇಕ್ಷಕರಿಗೆ ಪ್ರವೇಶಿಸಲು ವೇದಿಕೆಯು ಉಪಶೀರ್ಷಿಕೆ ಮತ್ತು ಮೆಟಾಡೇಟಾವನ್ನು ಸಹ ಬೆಂಬಲಿಸುತ್ತದೆ.
ಇದು ಆಕಾಶವಾಣಿ ಮತ್ತು ದೂರದರ್ಶನದ ಪ್ರಾದೇಶಿಕ ವಿಷಯ ಸಾಮರ್ಥ್ಯಗಳನ್ನು ಸಹ ಬಳಸಿಕೊಳ್ಳುತ್ತಿದೆ. ಎಲ್ಲಾ 35 ದೂರದರ್ಶನ ಉಪಗ್ರಹ ವಾಹಿನಿಗಳು ಮತ್ತು ಆಕಾಶವಾಣಿಯ ವಿವಿಧ ಪ್ರಾದೇಶಿಕ ವಾಹಿನಿಗಳು ವೇವ್ಸ್ ಒ.ಟಿ.ಟಿ ಪ್ಲಾಟ್ಫಾರ್ಮ್ ನಲ್ಲಿ ಲಭ್ಯವಿವೆ. ಹೆಚ್ಚುವರಿಯಾಗಿ, ಪ್ರಾದೇಶಿಕ ವಿಷಯಗಳನ್ನು ಪ್ರದರ್ಶಿಸುವ ಮತ್ತು ವಿವಿಧ ಸಂಸ್ಕೃತಿಗಳನ್ನು ಒಳಗೊಂಡ ಅನೇಕ ಎಫ್.ಟಿ.ಎ (ಉಚಿತ-ಪ್ರಸಾರ) ಪ್ರಸಾರಕರು ವೇವ್ಸ್ ನಲ್ಲಿ ಲಭ್ಯವಿವೆ.
ವೇವ್ಸ್ ಒ.ಟಿ.ಟಿ ಒಂದು ಉಚಿತ ವೇದಿಕೆಯಾಗಿದ್ದು, ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್-ಸಕ್ರಿಯವಿರುವ ಸಾಧನಗಳಲ್ಲಿ ಲಭ್ಯವಿದೆ. ಇದು ವ್ಯಾಪಕ ಡಿಜಿಟಲ್ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ. ಆಕಾಶವಾಣಿ ಮತ್ತು ದೂರದರ್ಶನದ ವಿಶಾಲವಾದ ಆರ್ಕೈವ್ ಗಳು ಮತ್ತು ಲೈವ್ ಸ್ಟ್ರೀಮ್ ಗಳಿಂದ ವಿಶ್ವಾಸಾರ್ಹ, ಮಾಹಿತಿಯುಕ್ತ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ವಿಷಯವನ್ನು ಒದಗಿಸುವ ಮೂಲಕ ಇದು ತನ್ನನ್ನು ತಾನು ವಿಭಿನ್ನವಾಗಿಸುತ್ತದೆ. ವೇದಿಕೆಯ ಪ್ರಮುಖ ತಂತ್ರವು ಭಾರತೀಯ ಪರಂಪರೆ, ಪ್ರಾದೇಶಿಕ ವೈವಿಧ್ಯತೆ, ಸಾರ್ವಜನಿಕ ಸೇವಾ ಕಾರ್ಯಕ್ರಮಗಳು ಮತ್ತು ಸುದ್ದಿಗಳನ್ನು ಆಯ್ದ ಮನರಂಜನಾ ವಿಷಯದೊಂದಿಗೆ ಯಾವುದೇ ಚಂದಾದಾರಿಕೆ ಶುಲ್ಕವಿಲ್ಲದೆ ಪ್ರದರ್ಶಿಸುವುದರ ಮೇಲೆ ಕೇಂದ್ರೀಕೃತವಾಗಿದೆ.
ಈ ಸಾರ್ವಜನಿಕ ಸೇವೆ-ಚಾಲಿತ ವಿಧಾನವು ಖಾಸಗಿ ಒ.ಟಿ.ಟಿ ಪ್ಲಾಟ್ಫಾರ್ಮ್ ಗಳ ವಾಣಿಜ್ಯ, ಮನರಂಜನೆ-ಕೇಂದ್ರಿತ ಮಾದರಿಗಳಿಗೆ ವ್ಯತಿರಿಕ್ತವಾಗಿದೆ. ಪ್ರೇಕ್ಷಕರನ್ನು ತಲುಪಲು ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಈ ವೇದಿಕೆಯು ಬಳಕೆದಾರ-ಕೇಂದ್ರಿತ ವೈಶಿಷ್ಟ್ಯಗಳನ್ನು ಸಂಯೋಜಿಸಿದೆ.
ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ವೇವ್ಸ್ ಒ.ಟಿ.ಟಿ ವೇದಿಕೆಯನ್ನು ಜನಪ್ರಿಯಗೊಳಿಸಲು ವಿವಿಧ ಪ್ರಚಾರ ಮತ್ತು ಸಂಪರ್ಕ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ಇವುಗಳಲ್ಲಿ ಆಕಾಶವಾಣಿ ಮತ್ತು ದೂರದರ್ಶನ ವಾಹಿನಿಗಳು ಹಾಗೂ MyGov ಪ್ಲಾಟ್ಫಾರ್ಮ್ ಮೂಲಕ ಪ್ರಚಾರಗಳು ಸೇರಿವೆ. ಈ ಪ್ರದೇಶಗಳಲ್ಲಿ ಪ್ರೇಕ್ಷಕರನ್ನು ತಲುಪಲು ಪ್ರಾದೇಶಿಕ ಭಾಷೆಗಳಲ್ಲಿ ಉದ್ದೇಶಿತ ಸಾಮಾಜಿಕ ಮಾಧ್ಯಮ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಗ್ರಾಮ ಮಟ್ಟದ ಉದ್ಯಮಿಗಳ (ವಿ.ಎಲ್.ಇ) ಮೂಲಕ ತಳಮಟ್ಟದ ಸಕ್ರಿಯಗೊಳಿಸುವಿಕೆಗಾಗಿ ಪ್ರಸಾರ ಭಾರತಿ ಸಾಮಾನ್ಯ ಸೇವಾ ಕೇಂದ್ರಗಳೊಂದಿಗೆ (ಸಿ.ಎಸ್.ಸಿ) ಸಹಯೋಗ ಹೊಂದಿದೆ.
ಈ ಮಾಹಿತಿಯನ್ನು ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್ ಮುರುಗನ್ ಇಂದು ರಾಜ್ಯಸಭೆಯಲ್ಲಿ ನೀಡಿದರು.
*****
(Release ID: 2154413)