ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಭಾರತೀಯ ಕಂಟೆಂಟ್ ನಿರ್ಮಾಣ ಮತ್ತು ದೇಶೀಯ ಕಥಾ ಸಂಪ್ರದಾಯಗಳನ್ನು ಉತ್ತೇಜಿಸಲು 'ಛೋಟಾ ಭೀಮ್' ಕಾಮಿಕ್ ಸರಣಿಯನ್ನು ಬಿಡುಗಡೆ ಮಾಡಿದ ಪ್ರಕಾಶನ ವಿಭಾಗ
ಪುಸ್ತಕಗಳು, ಅನಿಮೇಷನ್, ಚಲನಚಿತ್ರಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಭಾರತೀಯ ಕಂಟೆಂಟ್ ನಿರ್ಮಾಣವನ್ನು ಬಲಪಡಿಸುವ ಸರ್ಕಾರದ ಆಶಯಕ್ಕೆ ಈ ಉಪಕ್ರಮವು ಪೂರಕವಾಗಿದೆ
Posted On:
08 AUG 2025 3:22PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನ ವಿಭಾಗವು, ಇಂದು ನವದೆಹಲಿಯ ಭಾರತ್ ಮಂಟಪಂನಲ್ಲಿ 'ಛೋಟಾ ಭೀಮ್' ಕಾಮಿಕ್ ಸರಣಿಯ ಹೊಸ ಸಂಚಿಕೆಗಳನ್ನು ಅನಾವರಣಗೊಳಿಸಿತು. ಇದರ ಮೂಲಕ ಭಾರತೀಯ ಕಥಾವಸ್ತುಗಳ ಸೃಷ್ಟಿ ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಥೆಗಳನ್ನು ಯುವ ಓದುಗರಿಗೆ ತಲುಪಿಸುವ ತನ್ನ ಬದ್ಧತೆಯನ್ನು ಸಂಸ್ಥೆಯು ಪುನರುಚ್ಚರಿಸಿದೆ. ಈ ಬಿಡುಗಡೆ ಸಮಾರಂಭದಲ್ಲಿ, ಭಾರತದ ಅತ್ಯಂತ ಜನಪ್ರಿಯ ಮಕ್ಕಳ ಪಾತ್ರಗಳಲ್ಲಿ ಒಂದಾದ 'ಛೋಟಾ ಭೀಮ್' ಸೃಷ್ಟಿಯ ಹಿಂದಿನ ಸೃಜನಾತ್ಮಕ ಪ್ರಯಾಣ ಮತ್ತು ಕಥಾಹಂದರದ ಬಗ್ಗೆ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶನ ವಿಭಾಗದ ಪ್ರಧಾನ ಮಹಾನಿರ್ದೇಶಕ ಶ್ರೀ ಭೂಪೇಂದ್ರ ಕೈಂಥೋಲಾ ಅವರು, "ನಾವು ಹೇಳುವ ಕಥೆಗಳು, ವಿಶೇಷವಾಗಿ ನಮ್ಮ ಮಕ್ಕಳಿಗೆ ಹೇಳುವ ಕಥೆಗಳಿಗೆ ಭಾರತೀಯ ಸ್ಪರ್ಶ ಇರಬೇಕು. ನಮ್ಮ ಅಜ್ಜಿ-ತಾತಂದಿರು ಭಾರತೀಯ ಪಾತ್ರಗಳನ್ನು ಬಳಸಿಕೊಂಡು ಕಥೆಗಳನ್ನು ಹೇಳುತ್ತಿದ್ದ ನಮ್ಮ ನೆಲದಲ್ಲಿ, ಪ್ರಕಾಶನ ವಿಭಾಗವು ಆ ಕಥೆ ಹೇಳುವ ಸಂಪ್ರದಾಯಗಳನ್ನು ನಿರ್ಲಕ್ಷಿಸಲಾರದು. ನಾವು ಈ ಕಥೆಗಳನ್ನು ಮಾತೃಭಾಷೆಯಲ್ಲಿ ಹೆಚ್ಚೆಚ್ಚು ಹೇಳಿದಷ್ಟೂ, ನಮ್ಮ ಹೊಸ ಪೀಳಿಗೆಯ ಬೆಳವಣಿಗೆ ಹೆಚ್ಚು ಆಳವಾಗಿ ಬೇರೂರಿರುತ್ತದೆ. ಭಾರತೀಯ ಕಥೆಗಳು ಮೌಲ್ಯಗಳು ಮತ್ತು ಧೈರ್ಯದ ಸಂದೇಶವನ್ನು ನೀಡುತ್ತವೆ. ಅವು ದೇಶದ ಎಲ್ಲ ಮೂಲೆಗಳನ್ನೂ ತಲುಪಬೇಕು," ಎಂದು ಹೇಳಿದರು.
ಗ್ರೀನ್ ಗೋಲ್ಡ್ ಅನಿಮೇಷನ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಕಾಮಿಕ್ ಸರಣಿಯು, ಢೋಲಕ್ಪುರ್ ಎಂಬ ಕಾಲ್ಪನಿಕ ರಾಜ್ಯದಲ್ಲಿ ವಾಸಿಸುವ ಧೈರ್ಯವಂತ ಮತ್ತು ಕರುಣಾಮಯಿ ಬಾಲಕನಾದ ಭೀಮನ ಸಾಹಸಗಳ ಕುರಿತಾಗಿದೆ. ತನ್ನ ಅಸಾಧಾರಣ ಶಕ್ತಿಗೆ ಹೆಸರುವಾಸಿಯಾದ ಭೀಮನು, ಭಾರತೀಯ ಸಂಸ್ಕೃತಿ ಮತ್ತು ಜಾನಪದದಿಂದ ಪ್ರೇರಿತವಾದ ಸ್ನೇಹ, ಧೈರ್ಯ, ತಂಡಸ್ಪೂರ್ತಿ, ಮತ್ತು ನೈತಿಕ ಮೌಲ್ಯಗಳ ಪ್ರತೀಕವಾಗಿದ್ದಾನೆ.
ಗ್ರೀನ್ ಗೋಲ್ಡ್ ಅನಿಮೇಷನ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಸಿ.ಇ.ಒ ಆದ ಶ್ರೀ ರಾಜೀವ್ ಚಿಲಕಾ ಅವರು, “ಭಾರತ ಸರ್ಕಾರವು 'ವೇವ್ಸ್ 2025' ನಂತಹ ಉಪಕ್ರಮಗಳ ಮೂಲಕ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಕ್ಷೇತ್ರಗಳಲ್ಲಿ ಭಾರತೀಯ ಕಂಟೆಂಟ್ ನಿರ್ಮಾಣವನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ. ಈ ನಿರಂತರ ಬೆಂಬಲದೊಂದಿಗೆ, ಭಾರತವು ಈ ಕ್ಷೇತ್ರಗಳಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಜ್ಜಾಗಿದೆ” ಎಂದು ಹೇಳಿದರು.
ಛೋಟಾ ಭೀಮ್ ಕಾಮಿಕ್ ಸರಣಿಯ ಈ ಬಿಡುಗಡೆಯು, ಇತ್ತೀಚೆಗೆ ಮುಂಬೈಯಲ್ಲಿ ನಡೆದ 'ವೇವ್ಸ್' ಶೃಂಗಸಭೆಯಲ್ಲಿ ಒತ್ತಿಹೇಳಲಾದ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತದೆ. ದೇಶೀಯ ಪ್ರೇಕ್ಷಕರ ಮನಮುಟ್ಟುವ ಹಾಗೂ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕಂಟೆಂಟ್ ಗಳ ಮೂಲಕ ದೇಶದ ಸೃಜನಾತ್ಮಕ ಆರ್ಥಿಕತೆಯನ್ನು ಬಲಪಡಿಸಬೇಕೆಂಬುದು ಆ ಶೃಂಗಸಭೆಯ ಆಶಯವಾಗಿತ್ತು. ಎಲ್ಲಾ ತಲೆಮಾರುಗಳನ್ನು ಸೆಳೆಯುವ ತನ್ನ ಗುಣದಿಂದಾಗಿ, ಈ ಸರಣಿಯು ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸಲಿದೆ. ಜೊತೆಗೆ, ಪುಸ್ತಕಗಳು, ಆನಿಮೇಷನ್, ಚಲನಚಿತ್ರಗಳು ಮತ್ತು ಡಿಜಿಟಲ್ ವೇದಿಕೆಗಳಾದ್ಯಂತ ಭಾರತೀಯ ಕಥನಗಳನ್ನು ಪ್ರೋತ್ಸಾಹಿಸುವ ವಿಶಾಲವಾದ ರಾಷ್ಟ್ರೀಯ ಗುರಿಗೂ ಇದು ತನ್ನ ಕೊಡುಗೆಯನ್ನು ನೀಡಲಿದೆ.
*****
(Release ID: 2154243)
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Gujarati
,
Tamil
,
Telugu
,
Malayalam