ಜವಳಿ ಸಚಿವಾಲಯ
11ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7, 2025 ರಂದು ಭಾರತ ಮಂಟಪದಲ್ಲಿ ಆಚರಿಸಲಾಗುವುದು
ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ
ಕೇಂದ್ರ ಜವಳಿ ಸಚಿವ ಶ್ರೀ ಗಿರಿರಾಜ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರ ಮತ್ತು ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀ ಪಬಿತ್ರ ಮಾರ್ಗರಿಟಾ ಉಪಸ್ಥಿತರಿರುತ್ತಾರೆ
Posted On:
06 AUG 2025 4:25PM by PIB Bengaluru
ಆಗಸ್ಟ್ 07, 2025 ರಂದು ನಡೆಯಲಿರುವ 11 ನೇ ರಾಷ್ಟ್ರೀಯ ಕೈಮಗ್ಗ ದಿನದ ಸಂದರ್ಭದಲ್ಲಿ, ಜವಳಿ ಸಚಿವಾಲಯವು ಭಾರತದ ಚೈತನ್ಯಶೀಲ ಕೈಮಗ್ಗ ವಲಯವನ್ನು ಆಚರಿಸಲಿದೆ. ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀ ಪಬಿತ್ರ ಮಾರ್ಗರಿಟಾ, ಕಾರ್ಯದರ್ಶಿ (ಜವಳಿ) ಶ್ರೀಮತಿ ನೀಲಂ ಶಮಿ ರಾವ್ ಮತ್ತು ಅಭಿವೃದ್ಧಿ ಆಯುಕ್ತೆ (ಕೈಮಗ್ಗ) ಡಾ. ಎಂ. ಬೀನಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಇವರಲ್ಲದೆ, ವಿದೇಶಿ ಖರೀದಿದಾರರು, ಗಣ್ಯ ವ್ಯಕ್ತಿಗಳು, ರಫ್ತುದಾರರು, ಹಿರಿಯ ಸರ್ಕಾರಿ ಅಧಿಕಾರಿಗಳು ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇಶಾದ್ಯಂತದ ಸುಮಾರು 650 ನೇಕಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೈಮಗ್ಗ ಪ್ರಶಸ್ತಿಗಳ ಅವಲೋಕನ
ಕೈಮಗ್ಗ ಉದ್ಯಮದಲ್ಲಿನ ಶ್ರೇಷ್ಠತೆಯನ್ನು ಗುರುತಿಸುವುದು ಮತ್ತು ಕರಕುಶಲತೆ, ನಾವೀನ್ಯತೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆಯಲ್ಲಿ ಮಾನದಂಡಗಳನ್ನು ನಿಗದಿಪಡಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸುವುದು ಈ ಪ್ರಶಸ್ತಿಗಳ ಉದ್ದೇಶವಾಗಿದೆ.
ಸಂತ ಕಬೀರ ಕೈಮಗ್ಗ ಪ್ರಶಸ್ತಿ
ಈ ಪ್ರಶಸ್ತಿಯನ್ನು ಕೈಮಗ್ಗ ಕ್ಷೇತ್ರದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ ಅತ್ಯುತ್ತಮ ನೇಕಾರರಿಗೆ ನೀಡಲಾಗುತ್ತದೆ. ಅರ್ಹ ನೇಕಾರರು ರಾಷ್ಟ್ರೀಯ ಅಥವಾ ರಾಜ್ಯ ಪ್ರಶಸ್ತಿಗಳು, ರಾಷ್ಟ್ರೀಯ ಅರ್ಹತೆ ಪ್ರಮಾಣಪತ್ರಗಳನ್ನು ಪಡೆದವರಾಗಿರಬಹುದು ಅಥವಾ ನೇಯ್ಗೆ ಸಂಪ್ರದಾಯಗಳು, ಸಮುದಾಯ ಕಲ್ಯಾಣ ಮತ್ತು ವಲಯ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸಂರಕ್ಷಿಸಲು ಅಸಾಧಾರಣ ಕೌಶಲ್ಯ ಮತ್ತು ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟವರಾಗಿರಬಹುದು.
ಬಹುಮಾನ ಇವುಗಳನ್ನು ಒಳಗೊಂಡಿದೆ:
- ನಗದು ಬಹುಮಾನ: ರೂ. 3.5 ಲಕ್ಷ
- ಚಿನ್ನದ ನಾಣ್ಯ
- ತಾಮ್ರಪತ್ರ (ಪ್ರಮಾಣಪತ್ರ)
- ಶಾಲು
- ಮಾನ್ಯತೆ ಪ್ರಮಾಣಪತ್ರ
ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ
ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಯು ನೇಕಾರರನ್ನು ಅಸಾಧಾರಣ ಕರಕುಶಲತೆ, ಸಮರ್ಪಣೆ ಮತ್ತು ನಾವೀನ್ಯತೆಗಾಗಿ ಗೌರವಿಸುತ್ತದೆ. ನೇಕಾರರು ತಮ್ಮ ಅತ್ಯುತ್ತಮ ಕೆಲಸವನ್ನು ಮುಂದುವರಿಸಲು ಮತ್ತು ವಲಯದಲ್ಲಿ ಇತರರಿಗೆ ಸ್ಫೂರ್ತಿ ನೀಡಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ಬಹುಮಾನ ಇವುಗಳನ್ನು ಒಳಗೊಂಡಿದೆ:
- ನಗದು ಬಹುಮಾನ: ರೂ. 2.00 ಲಕ್ಷ
- ತಾಮ್ರಪತ್ರ
- ಶಾಲು
- ಪ್ರಮಾಣಪತ್ರ
- ಪ್ರಶಸ್ತಿ ಪುರಸ್ಕೃತ ನೇಕಾರರಲ್ಲಿ 6 ಮಹಿಳೆಯರು (01 ಸಂತ ಕಬೀರ, 05 ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳು), 1 ದಿವ್ಯಾಂಗ (ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿಗಳು) ಇದ್ದಾರೆ.
- ಪ್ರಶಸ್ತಿ ಪುರಸ್ಕೃತ ಕೈಮಗ್ಗ ನೇಕಾರರ ಸಂಗ್ರಹದ ವಿಶೇಷ ಪ್ರದರ್ಶನವಿರುತ್ತದೆ.
- ಎನ್.ಐ.ಎಫ್.ಟಿ ಮುಂಬೈನಿಂದ ಕಾಫಿ ಟೇಬಲ್ ಪುಸ್ತಕ ಅನಾವರಣವಿದೆ.
- ಕೈಮಗ್ಗ ವಲಯದ ಯೋಜನೆಗಳ ಕುರಿತು ಸೌಲಭ್ಯ ಕೇಂದ್ರವಿರುತ್ತದೆ.
ಕೈಮಗ್ಗ ವಲಯವು ಭಾರತದ ಗ್ರಾಮೀಣ ಆರ್ಥಿಕತೆ ಮತ್ತು ಸಾಂಸ್ಕೃತಿಕ ಗುರುತಿನ ಆಧಾರಸ್ತಂಭವಾಗಿ ಮುಂದುವರೆದಿದೆ. 35 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದ್ದು, ಅವರಲ್ಲಿ ಶೇ.70 ಕ್ಕಿಂತ ಹೆಚ್ಚು ಮಹಿಳೆಯರು, ಈ ವಲಯವು ಸುಸ್ಥಿರ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಪರಿಸರ ಸ್ನೇಹಿ ಉತ್ಪಾದನೆಯ ಸಂಕೇತವಾಗಿದೆ.
ಆಗಸ್ಟ್ 7, 1905 ರಂದು ಪ್ರಾರಂಭವಾದ ಸ್ವದೇಶಿ ಚಳುವಳಿಯು ಸ್ಥಳೀಯ ಕೈಗಾರಿಕೆಗಳನ್ನು ಮತ್ತು ವಿಶೇಷವಾಗಿ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಿತು. ಈ ಮಹತ್ವದ ಸಂದರ್ಭವನ್ನು ಸ್ಮರಿಸಲು 2015 ರಲ್ಲಿ ಭಾರತ ಸರ್ಕಾರವು ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತು.
ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಗಸ್ಟ್ 7, 2015 ರಂದು ಚೆನ್ನೈನಲ್ಲಿ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಚರಿಸಿದರು. ಈ ದಿನದಂದು, ಕೈಮಗ್ಗ ನೇಕಾರ ಸಮುದಾಯವನ್ನು ಸನ್ಮಾನಿಸಲಾಯಿತು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಈ ಕ್ಷೇತ್ರದ ಕೊಡುಗೆಯನ್ನು ಎತ್ತಿ ತೋರಿಸಲಾಯಿತು.
ರಾಷ್ಟ್ರೀಯ ಕೈಮಗ್ಗ ದಿನವು ಭಾರತೀಯ ಕೈಮಗ್ಗವನ್ನು ಕಾಲಾತೀತ ಪರಂಪರೆಯನ್ನಾಗಿ ಮಾಡುವ ಕೌಶಲ್ಯಪೂರ್ಣ ಕೈಗಳು ಮತ್ತು ಸೃಜನಶೀಲ ಮನೋಭಾವದ ಆಚರಣೆಯಾಗಿದೆ.
List of Sant Kabir and National Handloom Awardees for the year, 2024 -
*****
(Release ID: 2153138)