ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಹಲ್ ಮತ್ತು ಆಧಾರ್ ದೃಢೀಕರಣದ ಮೂಲಕ ಎಲ್ ಪಿ ಜಿ ಸಬ್ಸಿಡಿ ವರ್ಗಾವಣೆಯನ್ನು ಸರ್ಕಾರ ಬಲಪಡಿಸಿದೆ: ಪೆಟ್ರೋಲಿಯಂ ಸಚಿವರಾದ ಹರದೀಪ್ ಸಿಂಗ್ ಪುರಿ


ದುರುಪಯೋಗ ತಡೆಗಟ್ಟಲು 4 ಕೋಟಿಗೂ ಹೆಚ್ಚು ನಕಲಿ ಎಲ್ ಪಿ ಜಿ ಸಂಪರ್ಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ

Posted On: 05 AUG 2025 1:10PM by PIB Bengaluru

ಗೃಹಬಳಕೆ ಎಲ್ ಪಿ ಜಿ ಗ್ರಾಹಕರಿಗೆ ಎಲ್ ಪಿ ಜಿ ವಿತರಣೆ ಮತ್ತು ಸಬ್ಸಿಡಿ ವರ್ಗಾವಣೆಯನ್ನು ಪರಿಣಾಮಕಾರಿ, ಪಾರದರ್ಶಕ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಲು ಸರ್ಕಾರ ನಿರಂತರವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮಾಹಿತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ  ಶ್ರೀ ಹರದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ. ಪಹಲ್ (ಡಿಬಿಟಿಎಲ್) ಯೋಜನೆ, ಆಧಾರ್ ಆಧಾರಿತ ಪರಿಶೀಲನೆ, ಬಯೋಮೆಟ್ರಿಕ್ ದೃಢೀಕರಣ ಮತ್ತು ಅನರ್ಹ ಅಥವಾ ನಕಲಿ ಸಂಪರ್ಕಗಳನ್ನು ತೆಗೆದುಹಾಕುವಂತಹ ಉಪಕ್ರಮಗಳ ಅನುಷ್ಠಾನವು ಉದ್ದೇಶಿತ ಸಬ್ಸಿಡಿಗಳ ವರ್ಗಾವಣೆ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಿದೆ ಎಂದು ಅವರು ಹೇಳಿದರು.

ಗ್ರಾಹಕರ ಸಬಲೀಕರಣ ಮತ್ತು ಸೇವಾ ಪಾರದರ್ಶಕತೆಯನ್ನು ಸುಧಾರಿಸಲು, ದೇಶಾದ್ಯಂತದ ಎಲ್ಲಾ ಎಲ್ ಪಿ ಜಿ ವಿತರಕರಲ್ಲಿ ಐ ವಿ ಆರ್ ಎಸ್/ಎಸ್ ಎಂ ಎಸ್ ಮೂಲಕ ಸಿಲಿಂಡರ್ ಮರುಪೂರಣ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಶ್ರೀ ಪುರಿ ಹೇಳಿದರು. ಈ ವ್ಯವಸ್ಥೆಯಡಿಯಲ್ಲಿ, ಗ್ರಾಹಕರು ಪ್ರಮುಖ ಹಂತಗಳಲ್ಲಿ - ಸಿಲಿಂಡರ್ ಮರುಪೂರಣ ಬುಕಿಂಗ್, ನಗದು ಮೆಮೊ ಉತ್ಪಾದನೆ ಮತ್ತು ಮರುಪೂರಣ ವಿತರಣೆ – ಎಸ್ ಎಂ ಎಸ್ ಸೂಚನೆಗಳನ್ನು ಸ್ವೀಕರಿಸುತ್ತಾರೆ, ಇದು ಅವರ ವಹಿವಾಟುಗಳನ್ನು ಟ್ರ್ಯಾಕ್ ಮಾಡಲು ಮತ್ತು ತಪ್ಪು ಅಥವಾ ವಿತರಣೆಯಾಗದ ಯಾವುದೇ ಪ್ರಕರಣಗಳನ್ನು ವರದಿ ಮಾಡಲು ಅನುವು ಮಾಡಿಕೊಡುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಿತರಣಾ ದೃಢೀಕರಣ ಕೋಡ್ (ಡಿಎಸಿ) ಅನ್ನು ಪರಿಚಯಿಸಿವೆ, ಇದನ್ನು ನಗದು ಮೆಮೊ ಉತ್ಪಾದನೆಯ ನಂತರ ಗ್ರಾಹಕರಿಗೆ ಎಸ್ ಎಂ ಎಸ್ ಮೂಲಕ ಕಳುಹಿಸಲಾಗುತ್ತದೆ ಮತ್ತು ವಿತರಣೆಯ ಸಮಯದಲ್ಲಿ ವಿತರಣಾ ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುವುದು ಅಗತ್ಯವಾಗಿರುತ್ತದೆ, ಇದರಿಂದಾಗಿ ದೃಢೀಕರಣವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದುಷ್ಕೃತ್ಯಗಳನ್ನು ತಡೆಯಲು, ತೈಲ ಮಾರುಕಟ್ಟೆ ಕಂಪನಿಗಳ ಕ್ಷೇತ್ರ ಅಧಿಕಾರಿಗಳು ಎಲ್ ಪಿ ಜಿ ವಿತರಕರ ನಿಯಮಿತ ಮತ್ತು ಅನಿರೀಕ್ಷಿತ ತಪಾಸಣೆಗಳನ್ನು ನಡೆಸುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು. ಇದಲ್ಲದೆ, ಪ್ರಾದೇಶಿಕ ಕಚೇರಿಗಳು, ವಲಯ ಕಚೇರಿಗಳು, ವಿಭಾಗೀಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳು ಕಲಬೆರಕೆ ವಿರೋಧಿ ಕೋಶ, ಗುಣಮಟ್ಟ ಭರವಸೆ ಕೋಶ ಮತ್ತು ಜಾಗೃತ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ, ವಿತರಕರ ಗೋದಾಮುಗಳು, ಶೋ ರೂಂಗಳು, ವಿತರಣಾ ಕೇಂದ್ರಗಳಲ್ಲಿ ಮತ್ತು ಮಾರ್ಗಮಧ್ಯೆ ಎಲ್ ಪಿ ಜಿ ದುರುಪಯೋಗವನ್ನು ತಡೆಗಟ್ಟಲು ಹಠಾತ್ ತಪಾಸಣೆ ನಡೆಸುತ್ತಾರೆ ಎಂದು ಅವರು ಹೇಳಿದರು.

ಸಬ್ಸಿಡಿ ವರ್ಗಾವಣೆ ಮತ್ತು ವ್ಯವಸ್ಥೆಯ ಬಲವರ್ಧನೆಯಲ್ಲಿ ಕೈಗೊಂಡ ಪ್ರಮುಖ ಸುಧಾರಣೆಗಳನ್ನು ಶ್ರೀ ಪುರಿ ವಿವರಿಸಿದರು, ಅವುಗಳೆಂದರೆ:

1. ಎಲ್ ಪಿ ಜಿ ನೇರ ಲಾಭ ವರ್ಗಾವಣೆ (ಡಿಬಿಟಿಎಲ್) - ಪಹಲ್ ಯೋಜನೆ:

ದೇಶಾದ್ಯಂತ ಸಬ್ಸಿಡಿಗಳ ಪಾರದರ್ಶಕ ಮತ್ತು ಪರಿಣಾಮಕಾರಿ ವಿತರಣೆಗಾಗಿ ಪಹಲ್ ಯೋಜನೆಯನ್ನು ಜನವರಿ 2015 ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ, ಎಲ್ಲಾ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳನ್ನು ಸಬ್ಸಿಡಿ ರಹಿತ ಬೆಲೆಗಳಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಅನ್ವಯವಾಗುವ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಶ್ರೀ ಪುರಿ ಹೇಳಿದರು. ಸಬ್ಸಿಡಿ ಜಮಾ ಆದ ನಂತರ, ಗ್ರಾಹಕರು ಸಬ್ಸಿಡಿ ಠೇವಣಿಯನ್ನು ದೃಢೀಕರಿಸುವ ಎಸ್ ಎಂ ಎಸ್ ಅನ್ನು ಸ್ವೀಕರಿಸುತ್ತಾರೆ. ವಹಿವಾಟು ವಿಫಲವಾಗುವ ಸಂದರ್ಭದಲ್ಲಿ, ಗ್ರಾಹಕರಿಗೆ ಎಸ್ ಎಂ ಎಸ್ ಮೂಲಕ ಅಗತ್ಯ ಕ್ರಮದೊಂದಿಗೆ ಸಮಸ್ಯೆಯ ಬಗ್ಗೆ ತಿಳಿಸಲಾಗುತ್ತದೆ. ಪಹಲ್ 'ನಕಲಿ' ಖಾತೆಗಳು, ಬಹು ಖಾತೆಗಳು ಮತ್ತು ನಿಷ್ಕ್ರಿಯ ಎಲ್ ಪಿ ಜಿ ಸಂಪರ್ಕಗಳನ್ನು ಗುರುತಿಸುವಲ್ಲಿ ಮತ್ತು ನಿರ್ಬಂಧಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ, ಇದರಿಂದಾಗಿ ವಾಣಿಜ್ಯ ಬಳಕೆಗಾಗಿ ಸಬ್ಸಿಡಿ ಎಲ್ ಪಿ ಜಿ ದುರ್ಬಳಕೆಯನ್ನು ತಡೆಯಲಾಗಿದೆ ಎಂದು ಅವರು ಹೇಳಿದರು. 01.07.2025 ರ ಹೊತ್ತಿಗೆ, 4.08 ಕೋಟಿ ನಕಲಿ/ಅಸ್ತಿತ್ವದಲ್ಲಿಲ್ಲದ ಮತ್ತು ನಿಷ್ಕ್ರಿಯ ಎಲ್ ಪಿ ಜಿ ಸಂಪರ್ಕಗಳನ್ನು ನಿರ್ಬಂಧಿಸಲಾಗಿದೆ, ಅಮಾನತುಗೊಳಿಸಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ.

2. ಸಾಮಾನ್ಯ ಎಲ್ ಪಿ ಜಿ ಡೇಟಾಬೇಸ್ ಪ್ಲಾಟ್ಫಾರ್ಮ್ (ಸಿ ಎಲ್ ಡಿ ಪಿ) ಮೂಲಕ ನಕಲಿ ಸಂಪರ್ಕಗಳನ್ನು ತೆಗೆಯುವಿಕೆ:

ಸರ್ಕಾರವು ಸಿ ಎಲ್ ಡಿ ಪಿ ಅನ್ನು ಪರಿಚಯಿಸಿದೆ ಎಂದು ಶ್ರೀ ಪುರಿ ಮಾಹಿತಿ ನೀಡಿದರು, ಇದರ ಮೂಲಕ ಎಲ್ ಪಿ ಜಿ ಡೇಟಾಬೇಸ್ ನಿಂದ ನಕಲಿ ಸಂಪರ್ಕಗಳನ್ನು ಗುರುತಿಸಲಾಗುತ್ತದೆ ಮತ್ತು ತೆಗೆದುಹಾಕಲಾಗುತ್ತದೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಎ ಎಚ್ ಎಲ್ ಟಿಐಎನ್  ಸಂಖ್ಯೆ, ಪಡಿತರ ಚೀಟಿ ವಿವರಗಳು, ಹೆಸರು ಮತ್ತು ವಿಳಾಸವನ್ನು ಪ್ರಮುಖ ನಿಯತಾಂಕಗಳಾಗಿ ಬಳಸಿಕೊಂಡು ನಕಲಿ ಸಂಪರ್ಕಗಳನ್ನು ತೆಗೆಯುವಿಕೆಯನ್ನು ನಡೆಸಲಾಗುತ್ತದೆ.

3. ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಭಿಯಾನ:

ನೇರ ಪ್ರಯೋಜನ ವರ್ಗಾವಣೆ (ಡಿಬಿಟಿ) ಯೋಜನೆಗಳಿಗೆ ಆಧಾರ್ ಆಧಾರಿತ ದೃಢೀಕರಣವು ನಿಖರ, ನೈಜ-ಸಮಯ ಮತ್ತು ವೆಚ್ಚ-ಪರಿಣಾಮಕಾರಿ ಗುರುತಿಸುವಿಕೆ, ಫಲಾನುಭವಿಗಳ ದೃಢೀಕರಣ ಮತ್ತು ನಕಲು ಮಾಡುವಿಕೆಯನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಪ್ರಯೋಜನಗಳ ಗುರಿ ವಿತರಣೆಯನ್ನು ಖಚಿತಪಡಿಸುತ್ತದೆ ಎಂದು ಸಚಿವರು ಹೇಳಿದರು. ಸರ್ಕಾರವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ ಪಿಎಂಯುವೈ ಮತ್ತು ಪಹಲ್ ಫಲಾನುಭವಿಗಳ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕೈಗೊಳ್ಳಲು ಮತ್ತು ಪೂರ್ಣಗೊಳಿಸಲು ನಿರ್ದೇಶಿಸಿತ್ತು. 01.07.2025 ರಂದು, ಅಸ್ತಿತ್ವದಲ್ಲಿರುವ ಪಿಎಂಯುವೈ ಫಲಾನುಭವಿಗಳಲ್ಲಿ ಶೇ.67 ರಷ್ಟು ಬಯೋಮೆಟ್ರಿಕ್ ಆಧಾರ್ ದೃಢೀಕರಣವು ಪೂರ್ಣಗೊಂಡಿದೆ. ಇದಲ್ಲದೆ, ಸಂಪರ್ಕವನ್ನು ಪಡೆಯುವ ಮಾಡುವ ಮೊದಲು ಎಲ್ಲಾ ಹೊಸ ಪಿಎಂಯುವೈ ಗ್ರಾಹಕರು ಬಯೋಮೆಟ್ರಿಕ್ ದೃಢೀಕರಣಕ್ಕೆ ಒಳಗಾಗಬೇಕಾಗುತ್ತದೆ.

4. ಅನರ್ಹ ಗ್ರಾಹಕರನ್ನು ಹೊರಗಿಡುವುದು:

ಪಹಲ್ ಯೋಜನೆಯು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಗ್ರಾಹಕರಿಗೆ ಉದ್ದೇಶಿತ ಸಬ್ಸಿಡಿ ಪ್ರಯೋಜನಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ಪುರಿ ಹೇಳಿದರು. ಈ ಪ್ರಯೋಜನಗಳು ಅರ್ಹ ಮತ್ತು ಉದ್ದೇಶಿತ ಫಲಾನುಭವಿಗಳನ್ನು ಪರಿಣಾಮಕಾರಿಯಾಗಿ ಮತ್ತು ಸಮಯಕ್ಕೆ ತಲುಪುವಂತೆ ನೋಡಿಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆರಂಭದಿಂದಲೂ, ವ್ಯಾಪಕವಾದ ನಕಲಿ ಸಂಪರ್ಕಗಳನ್ನು ತೆಗೆಯುವ ಪ್ರಕ್ರಿಯೆಗಳ ಪರಿಣಾಮವಾಗಿ, 8.49 ಲಕ್ಷ ಪಿಎಂಯುವೈ ಸಂಪರ್ಕಗಳನ್ನು ತೆಗೆದುಹಾಕಲಾಗಿದೆ. ಜನವರಿ 2025 ರಲ್ಲಿ, ಸಂಪರ್ಕದ ನಂತರ ಯಾವುದೇ ಮರುಪೂರಣವನ್ನು ತೆಗೆದುಕೊಳ್ಳದ ಪಿಎಂಯುವೈ ಗ್ರಾಹಕರನ್ನು ತೆಗೆದುಹಾಕಲು ಸಾಮಾನ್ಯ ಕಾರ್ಯಾಚರಣಾ ಕಾರ್ಯವಿಧಾನ (ಎಸ್ ಒ ಪಿ) ನೀಡಲಾಯಿತು ಎಂದು ಅವರು ಹೇಳಿದರು. ಈ ಎಸ್ ಒ ಪಿ ಅಡಿಯಲ್ಲಿ, ಸುಮಾರು 12,000 ನಿಷ್ಕ್ರಿಯ ಪಿಎಂಯುವೈ ಸಂಪರ್ಕಗಳನ್ನು ಕೊನೆಗೊಳಿಸಲಾಗಿದೆ.

5. ಆಧಾರ್ ಅನುಸರಣೆಯನ್ನು ಹೆಚ್ಚಿಸುವ ಮೂಲಕ ವಹಿವಾಟು ವೈಫಲ್ಯಗಳನ್ನು ಕಡಿಮೆ ಮಾಡುವುದು:

ಹೆಚ್ಚಿನ ಸಬ್ಸಿಡಿ ವಹಿವಾಟುಗಳು ವಿತರಣೆಯಾದ ಎರಡು ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆಯಾದರೂ, ಕೆಲವು ಸಮಸ್ಯೆಗಳು ಬ್ಯಾಂಕ್ ಖಾತೆಗಳಿಂದ ಆಧಾರ್ ಅನ್ನು ರದ್ದುಗೊಳಿಸುವುದು, ಬ್ಯಾಂಕ್ ವಿಲೀನಗಳು, ನಿಷ್ಕ್ರಿಯ ಆಧಾರ್ ಸಂಖ್ಯೆಗಳು ಮತ್ತು ಖಾತೆ ಮುಚ್ಚುವಿಕೆ ಅಥವಾ ವರ್ಗಾವಣೆ ಸೇರಿದಂತೆ ವಹಿವಾಟು ವೈಫಲ್ಯಗಳಿಗೆ ಕಾರಣವಾಗಿವೆ ಎಂದು ಸಚಿವರು ಹೇಳಿದರು. ಎಲ್ಲಾ ಗ್ರಾಹಕರು ಆಧಾರ್ ವರ್ಗಾವಣೆಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲಾಗಿದೆ. 01.07.2025ರ ಹೊತ್ತಿಗೆ, ಒಟ್ಟು 33.05 ಕೋಟಿ ಸಕ್ರಿಯ ಎಲ್ ಪಿ ಜಿ ಗ್ರಾಹಕರಲ್ಲಿ ಶೇ.92.44 ಜನರು ಒಎಂಸಿಗಳ ಡೇಟಾಬೇಸ್ ನಲ್ಲಿ ತಮ್ಮ ಆಧಾರ್ ಅನ್ನು ಸಂಪರ್ಕಿಸಿದ್ದಾರೆ. ಒಟ್ಟು 30.63 ಕೋಟಿ ಡಿಬಿಟಿಎಲ್ ಗ್ರಾಹಕರಲ್ಲಿ ಸುಮಾರು ಶೇ.86.78 ರಷ್ಟು ಜನರು ಆಧಾರ್ ವರ್ಗಾವಣೆಗೆ ಅನುಗುಣವಾಗಿದ್ದಾರೆ.

ಎಲ್ ಪಿ ಜಿ ವಿತರಣೆಯನ್ನು ನಿಯಂತ್ರಿಸಲು, ಸರ್ಕಾರವು "ದ್ರವೀಕೃತ ಪೆಟ್ರೋಲಿಯಂ ಅನಿಲ (ಪೂರೈಕೆ ಮತ್ತು ವಿತರಣೆಯ ನಿಯಂತ್ರಣ) ಆದೇಶ, 2000" ವನ್ನು ಅಧಿಸೂಚಿಸಿದೆ ಎಂದು ಶ್ರೀ ಪುರಿ ಮಾಹಿತಿ ನೀಡಿದರು. ಹೆಚ್ಚುವರಿಯಾಗಿ, ಎಲ್ ಪಿ ಜಿ ವಿತರಕರು ಪಾಲಿಸಬೇಕಾದ "ಮಾರುಕಟ್ಟೆ ಶಿಸ್ತಿನ ಮಾರ್ಗಸೂಚಿಗಳನ್ನು" ಓಎಂಸಿಗಳು ರೂಪಿಸಿವೆ. ಈ ಮಾರ್ಗಸೂಚಿಗಳು ದುಷ್ಕೃತ್ಯದಲ್ಲಿ ತೊಡಗಿರುವ ವಿತರಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳುತ್ತವೆ. ಎಲ್ ಪಿ ಜಿ ಮಾರಾಟದಲ್ಲಿ ಅಕ್ರಮಗಳ ಎಲ್ಲಾ ಸ್ಥಾಪಿತ ಪ್ರಕರಣಗಳಲ್ಲಿ, ಮಾರುಕಟ್ಟೆ ಶಿಸ್ತಿನ ಮಾರ್ಗಸೂಚಿಗಳು ಅಥವಾ ವಿತರಣಾ ಒಪ್ಪಂದದ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.

ಡಿಬಿಟಿಎಲ್–ಪಹಲ್ ಯೋಜನೆಯ ಪರಿಣಾಮವನ್ನು ನಿರ್ಣಯಿಸಲು ಹಲವಾರು ಅಧ್ಯಯನಗಳನ್ನು ನಡೆಸಲಾಗಿದೆ ಎಂದು ಸಚಿವರು ಹೇಳಿದರು. ಸಂಶೋಧನೆ ಮತ್ತು ಅಭಿವೃದ್ಧಿ ಉಪಕ್ರಮ (ಆರ್ ಡಿ ಐ) ನಡೆಸಿದ ಸಮಗ್ರ ಮೂರನೇ ವ್ಯಕ್ತಿಯ ಮೌಲ್ಯಮಾಪನವು ಶೇ.90 ಕ್ಕಿಂತ ಹೆಚ್ಚು ಪ್ರತಿಕ್ರಿಯಿಸಿದವರು ಸಬ್ಸಿಡಿ ಮರುಪಾವತಿ ಕಾರ್ಯವಿಧಾನದಿಂದ ತೃಪ್ತರಾಗಿರುವುದನ್ನು ಪತ್ತೆಹಚ್ಚಿದೆ. ಸಬ್ಸಿಡಿ ಪಾವತಿ ಮೂಲಸೌಕರ್ಯ ಮತ್ತು ಕುಂದುಕೊರತೆ ಪರಿಹಾರ ವ್ಯವಸ್ಥೆಗಳನ್ನು ಬಲಪಡಿಸಲು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸಬ್ಸಿಡಿಗಳನ್ನು ಸೀಮಿತಗೊಳಿಸುವ ಮೂಲಕ ಗುರಿಯನ್ನು ಸುಧಾರಿಸಲು ವರದಿಯು ಶಿಫಾರಸು ಮಾಡಿದೆ. ಸುರಕ್ಷಿತ ಬಳಕೆ ಮತ್ತು ಎಲ್ ಪಿ ಜಿ ಯ ಉತ್ತಮ ಅಳವಡಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಭಾಷೆ ಮತ್ತು ಸಮೂಹ ಮಾಧ್ಯಮ ಅಭಿಯಾನಗಳ ಮೂಲಕ ನಿರಂತರ ಸುರಕ್ಷತಾ ಅರಿವು ಮತ್ತು ವ್ಯಾಪಕ ಸಂಪರ್ಕದ ಅಗತ್ಯವನ್ನು ಇದು ಗಮನಿಸುತ್ತದೆ. ಈ ಸಂಶೋಧನೆಗಳ ಆಧಾರದ ಮೇಲೆ, ಪಹಲ್  ಯೋಜನೆಯ ದಕ್ಷತೆ, ಪಾರದರ್ಶಕತೆ ಮತ್ತು ಸಂಪರ್ಕವನ್ನು ಮತ್ತಷ್ಟು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀ ಪುರಿ ಹೇಳಿದರು.

2024-25ರ ಅವಧಿಯಲ್ಲಿ, ಸುಮಾರು 194 ಕೋಟಿ ಎಲ್ ಪಿ ಜಿ ಮರುಪೂರಣಗಳನ್ನು ಗ್ರಾಹಕರಿಗೆ ತಲುಪಿಸಲಾಗಿದೆ ಮತ್ತು ಇವುಗಳಲ್ಲಿ ಕೇವಲ ಶೇ.0.08 ರಷ್ಟು ದೂರುಗಳು ಬಂದಿವೆ - ಹೆಚ್ಚಾಗಿ ಸಬ್ಸಿಡಿ ವರ್ಗಾವಣೆ ಅಥವಾ ವಿತರಣೆಯ ವಿಳಂಬಕ್ಕೆ ಸಂಬಂಧಿಸಿವೆ - ಇದು ವ್ಯವಸ್ಥೆಯ ಒಟ್ಟಾರೆ ದಕ್ಷತೆಯನ್ನು ಪ್ರತಿಬಿಂಬಿಸುತ್ತದೆ.

ಒಟ್ಟಾರೆ ಗ್ರಾಹಕರ ಅನುಭವ ಮತ್ತು ಸೇವಾ ಗುಣಮಟ್ಟವನ್ನು ಸುಧಾರಿಸಲು ಎಲ್ ಪಿ ಜಿ ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯನ್ನು ಕ್ರಮೇಣ ಬಲಪಡಿಸಲಾಗಿದೆ ಮತ್ತು ಸುಧಾರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಗ್ರಾಹಕರು ತಮ್ಮ ದೂರುಗಳನ್ನು ಈ ಕೆಳಗಿನ ವಿಧಾನಗಳ ಮೂಲಕ ನೋಂದಾಯಿಸಬಹುದು:

1.  ಟೋಲ್-ಫ್ರೀ ಸಹಾಯವಾಣಿ: 1800 2333 555 (ಸಬ್ಸಿಡಿ ಸಮಸ್ಯೆಗಳು ಸೇರಿದಂತೆ ಎಲ್ಲಾ ಗ್ರಾಹಕ ಸಂಬಂಧಿತ ಪ್ರಶ್ನೆಗಳಿಗೆ)
2.  ಒಎಂಸಿಗಳ ಅಧಿಕೃತ ವೆಬ್ಸೈಟ್ಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಗಳು
3.  ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿ ಪಿ ಜಿ ಆರ್ ಎ ಎಂ ಎಸ್)
4.  ಚಾಟ್ಬಾಟ್ ಗಳು, ವಾಟ್ಸಾಪ್ ಮತ್ತು MoPNGeSEVA ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳು (ಟ್ವಿಟರ್, ಫೇಸ್ಬುಕ್, ಇನ್ಸ್ಟಾಗ್ರಾಮ್) 
5.  ಸಹಾಯವಾಣಿ 1906: ಎಲ್ ಪಿ ಜಿ ಅಪಘಡಗಳು ಮತ್ತು ಸೋರಿಕೆಗಳಿಗಾಗಿ ಮೀಸಲಾಗಿದೆ
6.  ವಿತರಕ ಕಚೇರಿಯಲ್ಲಿ ದೂರುಗಳನ್ನು ನೇರವಾಗಿ ಸಲ್ಲಿಸುವುದು

 

*****
 


(Release ID: 2152577)