ಗೃಹ ವ್ಯವಹಾರಗಳ ಸಚಿವಾಲಯ
ಆಪರೇಷನ್ ಸಿಂದೂರ್ ಕುರಿತು ರಾಜ್ಯಸಭೆಯ ವಿಶೇಷ ಚರ್ಚೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಭಾಗಿ - ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಬಲಿಷ್ಠ, ಯಶಸ್ವಿ ಮತ್ತು ನಿರ್ಣಾಯಕ ಪ್ರತ್ಯುತ್ತರ
ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್ ಮೂಲಕ ಭಾರತದ ಗೌರವ ಹೆಚ್ಚಿಸಿದ ಸೇನೆ ಮತ್ತು ಎಲ್ಲಾ ಭದ್ರತಾ ಪಡೆಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವರು
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ನೀವು ನೀಡಿದ್ದೀರಿ ಎಂದು ನಾನು ವಿರೋಧ ಪಕ್ಷಗಳಿಗೆ ಹೇಳಲು ಬಯಸುತ್ತೇನೆ, ಅದನ್ನು ಮರಳಿ ತರುವ ಕೆಲಸ ಮೋದಿ ಸರ್ಕಾರದಿಂದ ಮಾತ್ರ ಆಗುತ್ತದೆ
ಯಾವುದೇ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ
ವಿರೋಧ ಪಕ್ಷದ ಆಳ್ವಿಕೆಯಲ್ಲಿ, ಸೈನ್ಯದ ಬಳಿ ಚಳಿಗಾಲದಲ್ಲಿ ಬಳಸಲು ಕನಿಷ್ಠ ಉಪ್ಪು, ಬೆಂಕಿಕಡ್ಡಿ ಮತ್ತು ಬಟ್ಟೆ ಸಹ ಇರಲಿಲ್ಲ, ಬಂದೂಕುಗಳು ಮತ್ತು ಮದ್ದು ಗುಂಡುಗಳ ವಿಷಯವನ್ನು ಮರೆತುಬಿಡಿ
ಇಂದು ಮೋದಿ ಸರ್ಕಾರದಲ್ಲಿ ನಮ್ಮ ಸೈನ್ಯವು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಅದು ಪಾಕಿಸ್ತಾನದ ಸಂಪೂರ್ಣ ವಾಯು ರಕ್ಷಣಾ ವ್ಯವಸ್ಥೆಯನ್ನು ಅರ್ಧ ಗಂಟೆಯಲ್ಲಿ ಧ್ವಂಸ ಮಾಡುತ್ತದೆ
ಕಾಶ್ಮೀರ ಭಯೋತ್ಪಾದನೆಯಿಂದ ಮುಕ್ತವಾಗುವುದಿಲ್ಲ ಎಂದು ಪಾಕಿಸ್ತಾನ ಮತ್ತು ಭಯೋತ್ಪಾದಕರು ಸಂದೇಶ ನೀಡಲು ಬಯಸುತ್ತಾರೆ. ಆದರೆ, ಜಮ್ಮು-ಕಾಶ್ಮೀರ ಭಯೋತ್ಪಾದನೆಯಿಂದ ಮುಕ್ತವಾಗುತ್ತದೆ ಎಂಬುದು ಮೋದಿ ಜಿ ಅವರ ಸಂಕಲ್ಪವಾಗಿದೆ
ಪಹಲ್ಗಾಮ್ ದಾಳಿ ವಿರೋಧ ಪಕ್ಷದ ಅವಧಿಯಲ್ಲಿ ನಡೆದಿದ್ದರೆ, ಪಾಕಿಸ್ತಾನಕ್ಕೆ ಬಹಳ ಹಿಂದೆಯೇ ಕ್ಲೀನ್ ಚಿಟ್ ಸಿಗುತ್ತಿತ್ತು
ಭಾರತದಲ್ಲಿ ಭಯೋತ್ಪಾದನೆ ಪ್ರವರ್ಧಮಾನಕ್ಕೆ ಬರಲು ಮತ್ತು ಹರಡಲು ಏಕೈಕ ಕಾರಣ ವಿರೋಧ ಪಕ್ಷದ ತುಷ್ಟೀಕರಣ ನೀತಿ
ಇಂದಿನ ಭಾರತ ಭಯೋತ್ಪಾದಕ ದಾಳಿಯ ನಂತರ ಕ್ಷಿಪಣಿಗಳನ್ನು ಕಳುಹಿಸುತ್ತಿದೆ, ದಾಖಲೆಗಳನ್ನಲ್ಲ
Posted On:
30 JUL 2025 11:00PM by PIB Bengaluru
ಆಪರೇಷನ್ ಸಿಂದೂರ್ ಮೂಲಕ ನಾವು ಮೊದಲ ಬಾರಿಗೆ ಭಯೋತ್ಪಾದನೆಯ ಮೂಲಗಳ ಮೇಲೆ ದಾಳಿ ಮಾಡಿದ್ದೇವೆ
ಈ ಮೂವರು ಭಯೋತ್ಪಾದಕರು ಪಾಕಿಸ್ತಾನಿಯರು ಎಂಬುದಕ್ಕೆ ಇಡೀ ವಿಶ್ವದ ಬಳಿ ಪುರಾವೆಗಳಿವೆ, ಆದರೆ ವಿರೋಧ ಪಕ್ಷವು ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುತ್ತಿದೆ
ದೇಶದ ಭದ್ರತೆ ಅಥವಾ ಭಯೋತ್ಪಾದನೆ ನಿರ್ಮೂಲನೆ ವಿರೋಧ ಪಕ್ಷದ ಆದ್ಯತೆ ಅಲ್ಲ, ಬದಲಿಗೆ ಮತ ಬ್ಯಾಂಕ್ ರಾಜಕೀಯ
ಆಪರೇಷನ್ ಮಹಾದೇವ್ ಎಂಬ ಹೆಸರಿಗೆ ಧಾರ್ಮಿಕ ಅರ್ಥವಿದೆ ಎಂದು ಆರೋಪಿಸುವ ವಿರೋಧ ಪಕ್ಷದ ನಾಯಕರು ಶಿವಾಜಿ ಮಹಾರಾಜರು 'ಹರ್ ಹರ್ ಮಹಾದೇವ್' ಎಂಬ ಯುದ್ಧ ಘೋಷಣೆ ಸಾರುವ ಮೂಲಕ ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂಬುದನ್ನು ಮರೆತಿದ್ದಾರೆ
ಯಾರ ಆದೇಶದಿಂದಲೂ ಆಪರೇಷನ್ ಸಿಂದೂರ್ ನಿಲ್ಲಿಸಲಿಲ್ಲ. ಪಾಕಿಸ್ತಾನ ಮಂಡಿಯೂರಿ, ಅದರ ಡಿಜಿಎಂಒ ಕರೆ ಮಾಡಿ... 'ಸಾಕು ಸಾಕು, ದಯವಿಟ್ಟು ಈಗಲೇ ನಿಲ್ಲಿಸಿ' ಎಂದು ಬೇಡಿದರು.
1971ರ ಯುದ್ಧ ನಿರ್ಣಾಯಕವಾಗಿತ್ತೇ ಎಂದು ವಿರೋಧ ಪಕ್ಷ ಹೇಳಬೇಕು? ಹಾಗಿದ್ದಲ್ಲಿ, ಭಯೋತ್ಪಾದನೆ ಏಕೆ ಹರಡಿತು?
ಶತ್ರು ಭಯಭೀತರಾಗದ ಹೊರತು ಅಥವಾ ಸ್ವತಃ ಸುಧಾರಣೆಯಾಗದ ಹೊರತು, ಭಯೋತ್ಪಾದನೆಗೆ ನಿರ್ಣಾಯಕ ಅಂತ್ಯವಿಲ್ಲ. ನಾವು ಭಯೋತ್ಪಾದನೆಯನ್ನು ನಾಶ ಮಾಡುತ್ತೇವೆ
ವಿರೋಧ ಪಕ್ಷಗಳ ನೀತಿಗಳಿಂದಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗಿದೆ, ಜಮಾತ್-ಎ-ಇಸ್ಲಾಮಿ ಮತ್ತು ಹುರಿಯತ್ ಅನ್ನು ಪ್ರತಿಪಕ್ಷಗಳು ಉತ್ತೇಜಿಸಿದವು, ಇದರಿಂದಾಗಿ ಭಯೋತ್ಪಾದನೆ ಇಡೀ ಕಾಶ್ಮೀರವನ್ನು ಆವರಿಸಿತು
ಹಿಂದೆ ಕೇವಲ 3 ಕುಟುಂಬಗಳು ಕಾಶ್ಮೀರವನ್ನು ಆಳುತ್ತಿದ್ದವು, ಇಂದು ಪಂಚಾಯತ್ ಚುನಾವಣೆಗಳ ಮೂಲಕ ಕಾಶ್ಮೀರ ಜನರ ಆಡಳಿತ ಸ್ಥಾಪಿಸಲಾಗಿದೆ
ಹಿಂದೆ ಭಯೋತ್ಪಾದಕರು ಹೊರಗಿನಿಂದ ಬರುತ್ತಿರಲಿಲ್ಲ, ಕಾಶ್ಮೀರಿ ಯುವಕರೇ ಬಂದೂಕುಗಳನ್ನು ಎತ್ತಿಕೊಳ್ಳುತ್ತಿದ್ದರು, ಕಳೆದ 6 ತಿಂಗಳಲ್ಲಿ ಒಬ್ಬ ಕಾಶ್ಮೀರಿ ಯುವಕ ಕೂಡ ಭಯೋತ್ಪಾದಕ ಸಂಘಟನೆಗಳನ್ನು ಸೇರಿಲ್ಲ
ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನ ಮರಣದ ಬಗ್ಗೆ ವಿರೋಧ ಪಕ್ಷದ ನಾಯಕರು ಕಣ್ಣೀರು ಸುರಿಸಿದರು. ಆದರೆ ಹುತಾತ್ಮ ಮೋಹನ್ ಚಂದ್ ಶರ್ಮಾ ಅವರಿಗಾಗಿ ಅವರ ಕಣ್ಣಿನಿಂದ ಒಂದು ಹನಿ ಕಣ್ಣೀರು ಕೂಡ ಬರಲಿಲ್ಲ
ಪಂಡಿತ್ ನೆಹರು ದೇಶದ 38,000 ಚದರ ಕಿ.ಮೀ ಪ್ರದೇಶವನ್ನು ಚೀನಾಕ್ಕೆ ನೀಡಿ ಪಾಪ ಮಾಡಿದರು. ಚೀನಾಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಲು ನಿರಾಕರಿಸಿದವರು ಅದೇ ಪಂಡಿತ್ ನೆಹರು.
ರಾಜೀವ್ ಗಾಂಧಿ ಫೌಂಡೇಶನ್ ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿ ಚೀನಾದಿಂದ ಹಣ ಪಡೆದುಕೊಂಡಿತು, ನಾವು ರಾಜೀವ್ ಗಾಂಧಿ ಫೌಂಡೇಶನ್‌ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ) ಪರವಾನಗಿಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸಿದ್ದೇವೆ.
ವಿರೋಧ ಪಕ್ಷವು ಚೀನಾದೊಂದಿಗೆ ಯಾವ ರೀತಿಯ ಒಪ್ಪಂದಕ್ಕೆ ಸಹಿ ಹಾಕಿತು, ಚೀನಾದಿಂದ ಎಷ್ಟು ಹಣವನ್ನು ಪಡೆದುಕೊಂಡಿತು?
1971ರಲ್ಲಿ ನಾವು ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿದೆವು, ಆದರೆ ಶಿಮ್ಲಾ ಒಪ್ಪಂದದಲ್ಲಿ ನಾವು ಏನು ಮಾಡಿದ್ದೇವೆ? ನಾವು ಪಿಒಕೆಯನ್ನು ತೆಗೆದುಕೊಳ್ಳಲಿಲ್ಲ ಅಥವಾ 15,000 ಚದರ ಕಿ.ಮೀ ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ. ಇದಷ್ಟೇ ಅಲ್ಲ, 93,000 ಪಾಕಿಸ್ತಾನಿ ಯುದ್ಧ ಕೈದಿಗಳನ್ನು ಸಹ ಬಿಡುಗಡೆ ಮಾಡಲಾಯಿತು.
ಪಿಒಕೆ ಬಗ್ಗೆ ಚಿಂತಿಸಬೇಡಿ, ನಮ್ಮ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ವಾಪಸ್ ಪಡೆಯುತ್ತದೆ.
ಶರ್ಮ್ ಎಲ್-ಶೇಖ್‌ನಲ್ಲಿ, ಆಗಿನ ವಿರೋಧ ಸರ್ಕಾರವು ಭಾರತದ ಗೌರವದೊಂದಿಗೆ ರಾಜಿ ಮಾಡಿಕೊಂಡು ಪಾಕಿಸ್ತಾನಕ್ಕೆ ಭಯೋತ್ಪಾದನೆಯಲ್ಲಿ ಕ್ಲೀನ್ ಚಿಟ್ ನೀಡಿತು
ಮೋದಿ ಜಿ ನಾಯಕತ್ವವು ಸೂಕ್ಷ್ಮವಾಗಿದೆ, ನಿರ್ಣಾಯಕವಾಗಿದೆ ಮತ್ತು ಸದೃಢವಾಗಿದೆ, ಅದು ನಮ್ಮ ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ
ಮೋದಿ ಜಿ ನಾಯಕತ್ವದಲ್ಲಿ, ನಾವು ದೇಶದಿಂದ ಭಯೋತ್ಪಾದನೆಯನ್ನು ಕೊನೆಗೊಳಿಸುತ್ತೇವೆ, ನಕ್ಸಲೀಯ ಚಟುವಟಿಕೆ ಶೀಘ್ರದಲ್ಲೇ ಕೊನೆಗೊಳ್ಳುತ್ತದೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿಂದು 'ಆಪರೇಷನ್ ಸಿಂದೂರ್' - ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಬಲವಾದ, ಯಶಸ್ವಿ ಮತ್ತು ನಿರ್ಣಾಯಕ ಪ್ರತ್ಯುತ್ತರ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದರು.
ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ ಅಮಾಯಕ ನಾಗರಿಕರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಆಪರೇಷನ್ ಸಿಂದೂರ್ ಮತ್ತು ಆಪರೇಷನ್ ಮಹಾದೇವ್ ಮೂಲಕ ದೇಶದ ಭದ್ರತಾ ಪಡೆಗಳು ಭಾರತದ ಗೌರವ ಹೆಚ್ಚಿಸಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರನ್ನು ಅಭಿನಂದಿಸಿದ ಅಮಿತ್ ಶಾ, ದೇಶದ 140 ಕೋಟಿ ಜನರ ಆಶಯಗಳಿಗೆ ಅನುಗುಣವಾಗಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ರಾಜಕೀಯ ಇಚ್ಛಾಶಕ್ತಿ ತೋರಿಸಿದ್ದಾರೆ ಎಂದರು.
ಕಾಶ್ಮೀರದಲ್ಲಿ ಜುಲೈ 28ರಂದು ನಮ್ಮ ಭದ್ರತಾ ಪಡೆಗಳು ಆಪರೇಷನ್ ಮಹಾದೇವ್ ಮೂಲಕ ಮೂವರು ಲಷ್ಕರ್ ಭಯೋತ್ಪಾದಕರಾದ ಸುಲೇಮಾನ್, ಅಫ್ಘಾನ್ ಮತ್ತು ಜಿಬ್ರಾನ್ ನನ್ನು ಹತ್ಯೆಗೈದಿವೆ. ಪಹಲ್ಗಾಮ್ ದಾಳಿಯ ಹಿಂದೆ ಲಷ್ಕರ್ ಕೈವಾಡವಿದೆ ಎಂಬುದನ್ನು ಇದು ದೃಢಪಡಿಸಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ 'ಆಪರೇಷನ್ ಸಿಂದೂರ್' ಮೂಲಕ ಭಯೋತ್ಪಾದಕರ ಸೂತ್ರಧಾರರನ್ನು ಯಜಮಾನರನ್ನು ಕೊಲ್ಲಲಾಗಿದೆ. ಅಲ್ಲದೆ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು 'ಆಪರೇಷನ್ ಮಹಾದೇವ್'ನಲ್ಲಿ ನಿರ್ನಾಮ ಮಾಡಲಾಗಿದೆ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ನೇತೃತ್ವದಲ್ಲಿ ಭಾರತದ ಭದ್ರತಾ ಪಡೆಗಳು ಆಪರೇಷನ್ ಸಿಂಧೂರ್ ಮತ್ತು ಆಪರೇಷನ್ ಮಹಾದೇವ್ ಮೂಲಕ, ವಿಶ್ವದ ಯಾವುದೇ ಭಯೋತ್ಪಾದಕ ದಾಳಿಯ ನಂತರ ಇದುವರೆಗೆ ನೀಡಲಾದ ಅತ್ಯಂತ ನಿಖರ ಮತ್ತು ತ್ವರಿತ ಪ್ರತ್ಯುತ್ತರ ನೀಡಿವೆ. ಪಹಲ್ಗಾಮ್ ದಾಳಿಯ ಜವಾಬ್ದಾರಿಯನ್ನು ಲಷ್ಕರೆ ಸಂಘಟನೆಯಾದ ಟಿಆರ್‌ಎಫ್ ವಹಿಸಿಕೊಂಡಿತ್ತು. ಅದೇ ದಿನ ನಾನು ಸ್ವತಃ ಅಲ್ಲಿಗೆ ಹೋಗಿದ್ದೆ ಮತ್ತು ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದೆ, ಆ ಭಯೋತ್ಪಾದಕರು ದೇಶದಿಂದ ಪಲಾಯನ ಮಾಡುವುದನ್ನು ತಡೆಯಲು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ ಎಂದು ಅವರು ಹೇಳಿದರು.
ಆಪರೇಷನ್ ಮಹಾದೇವ್‌ನಲ್ಲಿ ಹತರಾದ ಮೂವರು ಭಯೋತ್ಪಾದಕರಿಂದ 3 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು 19 ಎಂ-4 ಕಾರ್ಬೈನ್ ಮತ್ತು 2 ಎಕೆ 47. ಪಹಲ್ಗಾಮ್ ದಾಳಿಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ಬೈಸರನ್ ಕಣಿವೆಯಲ್ಲಿ ಖಾಲಿಯಾದ ಮದ್ದುಗುಂಡು ತೋಟಾ(ಕಾರ್ಟ್ರಿಜ್)ಗಳನ್ನು ವಶಪಡಿಸಿಕೊಂಡಿದೆ, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಈ ಭಯೋತ್ಪಾದಕರು ಹತ್ಯೆಯಾದಾಗ, ಅವರಿಂದ ವಶಪಡಿಸಿಕೊಂಡ ರೈಫಲ್‌ಗಳನ್ನು ಪರೀಕ್ಷಿಸಲಾಯಿತು, ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆ ನಂತರ, ಈ 3 ರೈಫಲ್‌ಗಳನ್ನು ಪಹಲ್ಗಾಮ್ ದಾಳಿಯಲ್ಲಿ ಬಳಸಲಾಗಿದೆ ಎಂಬುದು 100% ಖಚಿತವಾಗಿದೆ. ಈ ಕಾರ್ಟ್ರಿಜ್ ಗಳಲ್ಲಿ 44 ಕಾರ್ಟ್ರಿಜ್ ಗಳು 19 ಎಂ-4 ಕಾರ್ಬೈನ್‌ಗಳದ್ದಾಗಿವೆ, 25 ಕಾರ್ಟ್ರಿಜ್ ಗಳು ಎಕೆ 47 ರೈಫಲ್‌ಗಳದ್ದಾಗಿವೆ ಎಂಬುದು ಸಹ ಪತ್ತೆಯಾಗಿದೆ. ಎನ್ಐಎ ಸಂಪೂರ್ಣ ತನಿಖೆ ನಡೆಸಿ 1,055 ಜನರ ಹೇಳಿಕೆಗಳನ್ನು ಪಡೆದುಕೊಂಡಿದೆ, ಶಂಕಿತರ ರೇಖಾಚಿತ್ರಗಳನ್ನು ತಯಾರಿಸಿದೆ. ಅವರಿಗೆ ಆಶ್ರಯ ನೀಡಿದ ಮೂವರನ್ನು ಸಹ ಬಂಧಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಸದನಕ್ಕೆ ತಿಳಿಸಿದರು.
ಮೇ 22ರಿಂದ ಜುಲೈ 22ರ ವರೆಗೆ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಮಾಹಿತಿ ದೃಢೀಕರಿಸಲು ನಮ್ಮ ಸಂಸ್ಥೆಗಳು ನಿರಂತರ ಪ್ರಯತ್ನಗಳನ್ನು ಮಾಡಿದ್ದವು. ಜುಲೈ 22ರಂದು ನಮಗೆ ಈ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿತು, ಭಯೋತ್ಪಾದಕರ ಉಪಸ್ಥಿತಿ ದೃಢಪಟ್ಟಿತು. ಸೇನೆಯ 4 ಪ್ಯಾರಾಚೂಟ್ ರೆಜಿಮೆಂಟ್ ನೇತೃತ್ವದಲ್ಲಿ, ಸಿಆರ್‌ಪಿಎಫ್ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿ ಒಟ್ಟಾಗಿ ಭಯೋತ್ಪಾದಕರನ್ನು ಸುತ್ತುವರೆದರು. ಜುಲೈ 28ರಂದು ನಡೆಸಿದ ಕಾರ್ಯಾಚರಣೆಯಲ್ಲಿ, ನಮ್ಮ ಮುಗ್ಧ ನಾಗರಿಕರನ್ನು ಕೊಂದ ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು ಎಂದು ಅಮಿತ್ ಶಾ ಹೇಳಿದರು.
"ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿದ್ದಾರೆ" ಎಂಬುದಕ್ಕೆ ಪುರಾವೆ ಕೇಳುವ ಮೂಲಕ ವಿರೋಧ ಪಕ್ಷದ(ಕಾಂಗ್ರೆಸ್) ಸರ್ಕಾರದ ಮಾಜಿ ಗೃಹ ಸಚಿವರು, ಪಾಕಿಸ್ತಾನ ಮತ್ತು ಲಷ್ಕರ್ ಉಗ್ರ ಸಂಘಟನೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷವು ತನ್ನ ಮತ ಬ್ಯಾಂಕ್ ರಾಜಕೀಯಕ್ಕಾಗಿ ಪಾಕಿಸ್ತಾನವನ್ನು ಬೆಂಬಲಿಸಲು ಮತ್ತು ಲಷ್ಕರ್ ಅನ್ನು ರಕ್ಷಿಸಲು ಹಿಂಜರಿಯುವುದಿಲ್ಲ. ಧಾರ್ಮಿಕ ಅರ್ಥಗಳನ್ನು ಹೊಂದಿರುವ ಹೆಸರುಗಳನ್ನು ಸೇನಾ ಕಾರ್ಯಾಚರಣೆಗಳಿಗೆ ಇಡುವುದನ್ನು ಹೊರತುಪಡಿಸಿ, ನಮಗೆ ಏನೂ ತಿಳಿಯುತ್ತಿಲ್ಲ ಎಂದು ವಿರೋಧ ಪಕ್ಷ ದೂಷಿಸುತ್ತಿದೆ. ಹರ್ ಹರ್ ಮಹಾದೇವ್ ಕೇವಲ ಒಂದು ಧರ್ಮದ ಘೋಷಣೆಯಲ್ಲ, ಆದರೆ ಮೊಘಲರ ವಿರುದ್ಧ ಹೋರಾಡಿದ ಶಿವಾಜಿ ಮಹಾರಾಜರು, ತನ್ನ ಸೈನ್ಯಕ್ಕೆ ಇಟ್ಟಿದ್ದ ಯುದ್ಧದ ಕೂಗು ಇದು ಎಂಬುದು ವಿರೋಧ ಪಕ್ಷಕ್ಕೆ ತಿಳಿದಿಲ್ಲ. ಇದು ಭಾರತದ ಸಂಕೇತವಾಗಿದೆ, ಭಾರತದ ಸಾರ್ವಭೌಮತ್ವದ ಮೇಲಿನ ದಾಳಿ ಮತ್ತು ಭಾರತದ ಗಡಿಗಳ ಅತಿಕ್ರಮಣಕ್ಕೆ ನೀಡಿದ ಪ್ರತೀಕಾರವಾಗಿದೆ. ಇದು ನಮ್ಮ ಸೇನೆಯ ಸೈನಿಕರ ಮನಸ್ಸಿನಿಂದ ಬರುವ ಯುದ್ಧ ಕೂಗು ಮತ್ತು ಇದನ್ನು ಹಿಂದೂ-ಮುಸ್ಲಿಂ ದೃಷ್ಟಿಕೋನದಿಂದ ನೋಡಬಾರದು ಎಂದು ಅಮಿತ್ ಶಾ ಹೇಳಿದರು.
ಈ ಭಯೋತ್ಪಾದಕರನ್ನು ಕೊಲ್ಲುವುದು ಅಷ್ಟೇನು ಸುಲಭದ ಮಾತಲ್ಲ. 22 ದಿನಗಳ ಕಾಲ ಸಿಆರ್‌ಪಿಎಫ್, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿ ಈ ಭಯೋತ್ಪಾದಕರನ್ನು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಬೆನ್ನಟ್ಟಿ ಡ್ರೋನ್‌ಗಳು ಕಳುಹಿಸಿದ ಆಹಾರ ಸೇವಿಸಿ, ಕಷ್ಟದ ದಿನಗಳನ್ನು ಕಳೆದು ಅವರನ್ನು ಕೊಂದಿದ್ದಾರೆ ಎಂದು ಅಮಿತ್ ಶಾ ಹೇಳಿದರು. ವಿರೋಧ ಪಕ್ಷದ ಆದ್ಯತೆ ದೇಶದ ಭದ್ರತೆಯಲ್ಲ, ಅದು ರಾಜಕೀಯ. ಅವರ ಆದ್ಯತೆ ಭಯೋತ್ಪಾದನೆಯನ್ನು ಕೊನೆಗೊಳಿಸುವುದಲ್ಲ, ಬದಲಿಗೆ ಅವರ ಮತ ಬ್ಯಾಂಕ್ ರಾಜಕೀಯ. ಅವರ ಆದ್ಯತೆ ನಮ್ಮ ಗಡಿಗಳ ಭದ್ರತೆಯಲ್ಲ, ಆದರೆ ಜಾತ್ಯತೀತತೆ ಹೆಸರಿನ ಓಲೈಕೆ(ತುಷ್ಟೀಕರಣ) ರಾಜಕೀಯ ಎಂಬುದನ್ನು ಇಡೀ ದೇಶದ ಜನರು ನೋಡುತ್ತಿದ್ದಾರೆ. ಪಹಲ್ಗಾಮ್ ದಾಳಿ 2025ರ ಏಪ್ರಿಲ್ 22ರಂದು ಮಧ್ಯಾಹ್ನ 1 ಗಂಟೆಗೆ ನಡೆಯಿತು, ಅಂದೇ ಸಂಜೆಗೆ ಮುನ್ನ ಶ್ರೀನಗರವನ್ನು ತಲುಪಿದ್ದೆ. ಮರುದಿನ ಮಡಿದವರಿಗೆ ಗೌರವ ಸಲ್ಲಿಸಲು ಹೋದೆ, ಆ ದಿನವನ್ನು ತಮ್ಮ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು, ಅವರ ಕುಟುಂಬ ಸದಸ್ಯರ ಮುಂದೆಯೇ ಆಯ್ಕೆ ಮಾಡಿ ಕೊಂದ ಘೋರ ಅಪರಾಧ ಇಲ್ಲಿಯವರೆಗೆ ನಡೆದಿಲ್ಲ. ಕಾಶ್ಮೀರವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಎಂದಿಗೂ ಬಿಡುವುದಿಲ್ಲ ಎಂಬ ಸಂದೇಶ ನೀಡಲು ಭಯೋತ್ಪಾದಕರು ಬಯಸಿದ್ದರು. ಇಂದು ಈ ಸದನದಿಂದ, ಕಾಶ್ಮೀರ ಭಯೋತ್ಪಾದನೆಯಿಂದ ಮುಕ್ತವಾಗಲಿದೆ ಎಂಬ ಸಂದೇಶವನ್ನು ಭಯೋತ್ಪಾದಕರಿಗೆ ನೀಡಲು ನಾನು ಬಯಸುತ್ತೇನೆ. ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರದ ನಿರ್ಣಯವಾಗಿದೆ, ದೃಢ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.
ಭಯೋತ್ಪಾದಕರ ಯಾವುದೇ ಅಡಗು ತಾಣ ಉಳಿದಿದ್ದರೂ ಅದನ್ನು ನಾಶಪಡಿಸಲಾಗುವುದು. ಇಂದು ಅವರ ತರಬೇತಿ ಶಿಬಿರಗಳು, ಪ್ರಧಾನ ಕಚೇರಿಗಳು ಮತ್ತು ಉಡಾವಣಾ ಪ್ಯಾಡ್‌ಗಳನ್ನು ನೆಲಸಮ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಜಿ ಬಿಹಾರದಲ್ಲಿ ಹೇಳಿದ್ದರು. ಭಯೋತ್ಪಾದಕರ ಸೂತ್ರಧಾರಿಗಳನ್ನು ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. ಭಯೋತ್ಪಾದಕರನ್ನು ಕಳುಹಿಸುವವರನ್ನು ಸಹ ನಮ್ಮ ಸಶಸ್ತ್ರ ಪಡೆಗಳು ಇಂದು ನಿರ್ನಾಮ ಮಾಡಿವೆ. ಭಯೋತ್ಪಾದಕರನ್ನು ಸಹ ಬಿಡುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು, ಆಪರೇಷನ್ ಮಹಾದೇವ್ ಮೂಲಕ ಆ ಮೂವರು ಭಯೋತ್ಪಾದಕರನ್ನು ನಿರ್ನಾಮ ಮಾಡಲಾಗಿದೆ. ಒಂದು ರೀತಿಯಲ್ಲಿ, ಮೋದಿ ಜಿ ಹೇಳಿದ ಪ್ರತಿಯೊಂದು ವಾಕ್ಯವನ್ನು ನಮ್ಮ ಸೇನೆ, ವಾಯುಪಡೆ, ನೌಕಾಪಡೆ, ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಪೂರೈಸಿದ್ದಾರೆ, ಅವರು ಭಯೋತ್ಪಾದಕರಿಗೆ ಕಠಿಣ ಶಿಕ್ಷೆಯನ್ನು ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಏಪ್ರಿಲ್ 23ರಂದು ಭದ್ರತೆ ಕುರಿತ ಸಂಪುಟ ಸಮಿತಿ(ಸಿಸಿಎಸ್) ಸಭೆ ಕರೆಯಲಾಗಿತ್ತು. ಭಾರತದ ಗಡಿ, ಸೇನೆ, ನಾಗರಿಕರು ಮತ್ತು ಸಾರ್ವಭೌಮತ್ವಕ್ಕೆ ಗೊಂದಲ ಉಂಟು ಮಾಡಿದರೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎಂಬ ಬಲವಾದ ಸಂದೇಶವನ್ನು ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ಇಡೀ ಜಗತ್ತಿಗೆ ರವಾನಿಸಲಾಗಿದೆ. ಸಿಸಿಎಸ್ ಸಭೆಯಲ್ಲಿ, ಜವಾಹರಲಾಲ್ ನೆಹರು ಸಹಿ ಮಾಡಿದ, ಏಕಪಕ್ಷೀಯವಾಗಿ ಪಾಕಿಸ್ತಾನಕ್ಕೆ ಪ್ರಯೋಜನಕಾರಿಯಾಗಿದ್ದ 1960ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಸಿಂಧೂ ಜಲ ಒಪ್ಪಂದವು ಏಕಪಕ್ಷೀಯವಾಗಿದ್ದು, ಭಾರತದ ರೈತರು ನೀರಿನ ಮೇಲೆ ಹಕ್ಕು ಹೊಂದಿದ್ದಾರೆ. ಇನ್ನು ಸ್ವಲ್ಪ ಸಮಯದಲ್ಲೇ ಸಿಂಧೂ ನದಿಯಿಂದ ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಗೆ ಕುಡಿಯುವ ನೀರು ತಲುಪಲಿದೆ. ಇದರ ನಂತರ, ಅಟ್ಟಾರಿ ಮೂಲಕ ಹರಿಯುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮುಚ್ಚಲಾಯಿತು, ಪಾಕಿಸ್ತಾನದ ನಾಗರಿಕರ ಸಾರ್ಕ್ ವೀಸಾಗಳನ್ನು ಸ್ಥಗಿತಗೊಳಿಸಿ, ಎಲ್ಲರನ್ನೂ ಪಾಕಿಸ್ತಾನಕ್ಕೆ ವಾಪಸ್ ಕಳಿಸಲಾಗಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಅವರ ರಕ್ಷಣಾ, ಮಿಲಿಟರಿ, ನೌಕಾಪಡೆ ಸಲಹೆಗಾರರನ್ನು ಅನಪೇಕ್ಷಿತ ವ್ಯಕ್ತಿಗಳೆಂದು ಘೋಷಿಸಲಾಗಿದೆ, ಅವರ ಸಂಖ್ಯೆಯನ್ನು 55ರಿಂದ 30ಕ್ಕೆ ಇಳಿಸಲಾಗಿದೆ. ಭಯೋತ್ಪಾದಕರನ್ನು ಕಳುಹಿಸುವವರಿಗೆ ಮತ್ತು ದುಷ್ಕೃತ್ಯ ಎಸಗುವವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಸಿಸಿಎಸ್ ಸಭೆಯಲ್ಲಿ ನಿರ್ಧರಿಸಲಾಯಿತು, ಇದಕ್ಕಾಗಿ ಸಿಸಿಎಸ್ ಸಭೆಯಲ್ಲಿ ಸೈನ್ಯಕ್ಕೆ ಮುಕ್ತ ಅಧಿಕಾರ ನೀಡಲಾಯಿತು ಎಂದು ಅಮಿತ್ ಶಾ ಹೇಳಿದರು.
ಏಪ್ರಿಲ್ 30ರಂದು ಪ್ರಧಾನ ಮಂತ್ರಿ ಮೋದಿ ಅವರು ಸಶಸ್ತ್ರ ಪಡೆಗಳಿಗೆ 'ಕಾರ್ಯಾಚರಣೆಯ ಸ್ವಾತಂತ್ರ್ಯ' ನೀಡಿದ್ದಾರೆ. ರಕ್ಷಣಾ ಸಚಿವಾಲಯ ಮತ್ತು ಸೇನೆ ಎರಡೂ ಸೇರಿ ಗುರಿ, ವಿಧಾನ, ಸ್ಥಳ ಮತ್ತು ಸಮಯವನ್ನು ನಿರ್ಧರಿಸುತ್ತವೆ. ಮೇ 7ರಂದು ಬೆಳಗಿನ ಜಾವ 1:04ಕ್ಕೆ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಲಾಯಿತು, ಇದರಲ್ಲಿ ಕನಿಷ್ಠ 100 ಭಯೋತ್ಪಾದಕರು ಸಾವನ್ನಪ್ಪಿದರು. ಮೋದಿ ಸರ್ಕಾರ ಮತ್ತು ನಮ್ಮ ಸಶಸ್ತ್ರ ಪಡೆಗಳು ಲಷ್ಕರ್, ಜೈಶ್ ಮತ್ತು ಹಿಜ್ಬುಲ್‌ನ ಪ್ರಧಾನ ಕಚೇರಿಯನ್ನು ನಾಶ ಮಾಡುವ ಕಾರ್ಯ ಪೂರ್ಣಗೊಳಿಸಿದವು. ವಿರೋಧ ಪಕ್ಷವೇ ಪಾಕ್ ಆಕ್ರಮಿತ ಕಾಶ್ಮೀರವನ್ನು ನೀಡಿದೆ, ಆದರೆ ನಮ್ಮ ಸರ್ಕಾರ ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತದೆ. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ನಾವು ದಾಳಿ ಮಾಡಿದ್ದೇವೆ, ಮೇ 8ರಂದು ಪಾಕಿಸ್ತಾನವು ನಮ್ಮ ವಸತಿ ಪ್ರದೇಶಗಳು ಮತ್ತು ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಿದವು. ಆದರೆ ಭಾರತೀಯ ಸೇನೆಯು ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಪಡಿಸಿತು, ಭಯೋತ್ಪಾದನೆಗೆ ಸೂಕ್ತ ಪ್ರತ್ಯುತ್ತರವನ್ನು ನೀಡಿದೆ. ಇದರ ನಂತರ, ಪಾಕಿಸ್ತಾನವು ಮೊಣಕಾಲೂರಿ ದಾಳಿಗಳನ್ನು ನಿಲ್ಲಿಸುವಂತೆ ಮನವಿ ಮಾಡಿತು. 'ಆಪರೇಷನ್ ಸಿಂಧೂರ್' ಭಯೋತ್ಪಾದನೆಯ ಮೂಲ ಕೇಂದ್ರದ ಮೇಲೆ ನಡೆಸಿರುವ ಭಾರತದ ಮೊದಲ ದಾಳಿಯಾಗಿದೆ ಎಂದು ಅಮಿತ್ ಶಾ ಉಲ್ಲೇಖಿಸಿದರು.
ಮೋದಿ ಸರ್ಕಾರದ ನೀತಿಗಳಿಂದಾಗಿ ಕಾಶ್ಮೀರದಲ್ಲಿ ಭಯೋತ್ಪಾದನೆ ಶೇ.70ರಷ್ಟು ಕಡಿಮೆಯಾಗಿದೆ ಮತ್ತು ಶಾಂತಿಯತ್ತ ಸಾಗುತ್ತಿದೆ. ಹಿಂದೆ ಭಯೋತ್ಪಾದಕರು ಹೊರಗಿನಿಂದ ಬರುತ್ತಿರಲಿಲ್ಲ, ಕಾಶ್ಮೀರಿ ಯುವಕರೇ ಬಂದೂಕುಗಳನ್ನು ಕೈಗೆ ಎತ್ತಿಕೊಳ್ಳುತ್ತಿದ್ದರು, ಈಗ ಒಬ್ಬ ಕಾಶ್ಮೀರಿ ಯುವಕನೂ ಭಯೋತ್ಪಾದಕ ಸಂಘಟನೆಗಳಿಗೆ ಸೇರುತ್ತಿಲ್ಲ. 370ನೇ ವಿಧಿಯನ್ನು ರದ್ದುಪಡಿಸಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಲಾಗಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಪಾಕಿಸ್ತಾನದ ರಕ್ಷಣಾ ಸ್ಥಾಪನೆಗಳು ನಾಶವಾದವು, ಇದಕ್ಕೆ ಭಾರತೀಯ ಸೇನೆಯ ಶೌರ್ಯವು ಸಾಕ್ಷಿಯಾಯಿತು ಎಂದು ಅಮಿತ್ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಾರಥ್ಯದಲ್ಲಿ "ಆತ್ಮನಿರ್ಭರ ಭಾರತ"ದ ಮೂಲಕ ನಮ್ಮ ಸೇನಾ ಉಪಕರಣಗಳ ರಫ್ತು ಹೆಚ್ಚಾಗಿದೆ. ಪ್ರತಿಪಕ್ಷಗಳ ಓಲೈಕೆ ನೀತಿಗಳು ಭಯೋತ್ಪಾದನೆಗೆ ಕಾರಣವಾಗಿವೆ. ಈಗ ಪಹಲ್ಗಾಮ್ ದಾಳಿಯ ನಂತರ ಭಾರತ ಭಯೋತ್ಪಾದಕರ ಪರಿಸರ ವ್ಯವಸ್ಥೆಯನ್ನು ನಾಶಪಡಿಸಲಾಗಿದೆ. ಕಾಶ್ಮೀರದಲ್ಲಿ ಕಲ್ಲು ತೂರಾಟ ಮತ್ತು ದಾಳಿಗಳು ಶೂನ್ಯಕ್ಕೆ ಇಳಿದಿವೆ, ಶಾಂತಿಯ ಹೊಸ ಆರಂಭವನ್ನು ಸ್ಥಾಪಿಸಲಾಗಿದೆ. ಮೋದಿ ಸರ್ಕಾರ ಭಯೋತ್ಪಾದಕರ ಅಂತ್ಯಕ್ರಿಯೆಗಳನ್ನು ನಿಷೇಧಿಸಿ, ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಿಂದೆ ಉಪ್ಪು ಮತ್ತು ಸಕ್ಕರೆಯ ಕೊರತೆ ಅನುಭವಿಸಿದ್ದ ಭಾರತೀಯ ಸೇನೆಯು ಈಗ ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿಗಳನ್ನು ಹೊಂದಿದೆ. ಪಂಚಾಯಿತಿ ಚುನಾವಣೆಗಳು 98.03% ಮತದಾನದೊಂದಿಗೆ ಯಶಸ್ವಿಯಾಗಿವೆ, ಇದು ಕಾಶ್ಮೀರದ ಪ್ರಜಾಪ್ರಭುತ್ವದ ವಿಜಯವಾಗಿದೆ. ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದನ್ನು ತಡೆಯಲಾಗಿದ್ದು, 347 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಈಶಾನ್ಯದಲ್ಲಿ ಹಿಂಸಾಚಾರ ಮತ್ತು ನಕ್ಸಲೀಯ ಚಟುವಟಿಕೆಯನ್ನು ಶೇ. 75ರಷ್ಟು ಕಡಿಮೆ ಮಾಡಿರುವುದು ಮೋದಿ ಸರ್ಕಾರದ ದೊಡ್ಡ ಸಾಧನೆ. ವಿಶ್ವಸಂಸ್ಥೆಯ ನಾಗರೀಕ ಸನ್ನದು ಅಡಿ, ಭಾರತವು ಸ್ವಯಂ ರಕ್ಷಣೆ ಅಥವಾ ಆತ್ಮರಕ್ಷಣೆಗಾಗಿ ಆಪರೇಷನ್ ಸಿದೂರ್ ನಡೆಸಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೇರುಗಳನ್ನು ಬೇರುಸಹಿತ ಕಿತ್ತು ಹಾಕಲಾಗಿದೆ, ಜಮಾತ್-ಇ-ಇಸ್ಲಾಮಿಯಂತಹ ಸಂಘಟನೆಗಳನ್ನು ನಿಷೇಧಿಸಲಾಗಿದೆ. ಮೋದಿ ಸರ್ಕಾರವು 75 ಪಾಕಿಸ್ತಾನ ಪರ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಅವರು ಹೇಳಿದರು.
ಆಪರೇಷನ್ ಸಿಂದೂರ್‌ನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಭಯೋತ್ಪಾದಕ ತಾಣಗಳು ಮತ್ತು ತರಬೇತಿ ಶಿಬಿರಗಳನ್ನು ನಾಶಪಡಿಸಿದೆ. 53 ಯೋಜನೆಗಳೊಂದಿಗೆ, ಕಾಶ್ಮೀರದಲ್ಲಿ 59,000 ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ, ಇದು ಹೊಸ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ವಿರೋಧ ಪಕ್ಷವು ಭಯೋತ್ಪಾದನೆಯನ್ನು ಪೋಷಿಸುತ್ತಿದೆ. ಉರಿ ದಾಳಿ ನಡೆದಾಗ, ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ, ನಾವು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇವೆ . ಪಹಲ್ಗಾಮ್ ನಂತರ, ನಾವು ಪಾಕಿಸ್ತಾನ ಪ್ರದೇಶವನ್ನು ಪ್ರವೇಶಿಸಿ ಅವರನ್ನು ನಿರ್ನಾಮ ಮಾಡಿದ್ದೇವೆ ಎಂದು ಶ್ರೀ ಶಾ ಹೇಳಿದರು.
2019ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ)ಗೆ ತಿದ್ದುಪಡಿ ತರಲಾಗಿದ್ದು, ಅದರ ಅಡಿ 57 ಜನರನ್ನು ಭಯೋತ್ಪಾದಕರು ಎಂದು ಘೋಷಿಸಲಾಗಿದೆ. ದೇಶದ ಹೊರಗೆ ತನಿಖೆ ನಡೆಸುವ ಅಧಿಕಾರವನ್ನು ಎನ್‌ಐಎಗೆ ನೀಡಲಾಗಿದೆ. ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‌ಎಸ್‌ಎ)ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಯಿತು, 370ನೇ ವಿಧಿಯನ್ನು ರದ್ದುಗೊಳಿಸಲಾಯಿತು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ವನ್ನು ನಿಷೇಧಿಸಲಾಯಿತು, ಕಡ್ಡಾಯ ಪ್ರವೇಶ ನಿಯಂತ್ರಣ (ಎಂಎಸಿ)ವನ್ನು ಬಲಪಡಿಸಲಾಯಿತು, ಪರಸ್ಪರ ಅಥವಾ ಅಂತರ್ ಕಾರ್ಯಾಚರಣೆಯ ಅಪರಾಧ ನ್ಯಾಯ ವ್ಯವಸ್ಥೆ (ಐಸಿಜೆಎಸ್) ಮತ್ತು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ (ಎನ್‌ಎಎಫ್‌ಐಎಸ್)ಯನ್ನು ಸ್ಥಾಪಿಸಲಾಯಿತು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಮತ್ತು ರಾಷ್ಟ್ರೀಯ ಗುಪ್ತಚರ ಜಾಲ (ಎನ್‌ಎಟಿಜಿಆರ್‌ಐಡಿ) ಮೂಲಕ ಭಯೋತ್ಪಾದನಾ ಹಣಕಾಸು ವರ್ಗಾವಣೆ ನಿಗ್ರಹಿಸಲಾಯಿತು, ದೇಶಾದ್ಯಂತ ಭಯೋತ್ಪಾದಕ ಸಂಘಟನೆಗಳನ್ನು ಕಂಪ್ಯೂಟರ್ ಕ್ಲಿಕ್‌ನಲ್ಲಿ ಮೇಲ್ವಿಚಾರಣೆ ಮಾಡಲಾಗಿದೆ. ನರೇಂದ್ರ ಮೋದಿ ಸರ್ಕಾರವು ಒಳನುಸುಳುವಿಕೆ ಮತ್ತು ಭಯೋತ್ಪಾದಕ ಘಟನೆಗಳನ್ನು ನಿರ್ಮೂಲನೆ ಮಾಡಲು ದೃಢ ನಿಶ್ಚಯ ಹೊಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ, ಬಲೂಚಿಸ್ತಾನ್ ಪ್ರಮಾದ ಎಂದು ವಿಶ್ವಾದ್ಯಂತ ಕರೆಯಲ್ಪಡುವ ಶರ್ಮ್ ಎಲ್-ಶೇಖ್ ಸಮ್ಮೇಳನ ನಡೆಯಿತು, ಅಲ್ಲಿ ಎರಡೂ ದೇಶಗಳು ಭಯೋತ್ಪಾದನೆಯ ಬಲಿಪಶುಗಳು ಎಂದು ಪ್ರಸ್ತಾಪಿಸಲಾಯಿತು. ಜಗತ್ತಿನಲ್ಲಿ ಯಾರಾದರೂ ಪಾಕಿಸ್ತಾನವನ್ನು ಭಯೋತ್ಪಾದನೆಯ ಬಲಿಪಶು ಎಂದು ಕರೆಯಬಹುದೇ ಎಂದು ಸಚಿವರು ಪ್ರಶ್ನಿಸಿದರು. ಆದರೆ, ವಿರೋಧ ಪಕ್ಷವು ಪಾಕಿಸ್ತಾನಕ್ಕೆ ಪ್ರಮಾಣಪತ್ರ ನೀಡುತ್ತಿದೆ. ಪಾಕಿಸ್ತಾನದಿಂದ ಭಯೋತ್ಪಾದನೆ ನಿಲ್ಲುವವರೆಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮೋದಿ ಅವರು ಜಿ-20 ಶೃಂಗಸಭೆಯನ್ನು ದೇಶದ ಪ್ರತಿಯೊಂದು ರಾಜ್ಯಕ್ಕೂ ಕೊಂಡೊಯ್ದು, ನಮ್ಮ ಸಂಸ್ಕೃತಿ, ಸಾಮರ್ಥ್ಯ, ಶಕ್ತಿ ಮತ್ತು ಪ್ರಜಾಪ್ರಭುತ್ವವನ್ನು ಜಗತ್ತಿಗೆ ಪ್ರದರ್ಶಿಸಿದ್ದಾರೆ. ಮೋದಿ ಅವರಂತೆ ಬೇರೆ ಯಾವುದೇ ದೇಶದ ನಾಯಕರು 27 ದೇಶಗಳಿಂದ ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದಿಲ್ಲ. ಈ ಗೌರವವು ಮೋದಿ ಅವರಿಗೆ ಮಾತ್ರವಲ್ಲ, ಭಾರತದ ಪ್ರಧಾನ ಮಂತ್ರಿ ಮತ್ತು ಅದರ 140 ಕೋಟಿ ಜನರಿಗೆ ಸಲ್ಲುತ್ತದೆ. ಪ್ರಧಾನಿ ಮೋದಿ ಅವರ ನಾಯಕತ್ವವು ಕೇವಲ ಭಾವನಾತ್ಮಕವಲ್ಲ, ಆದರೆ ಅದು ಸೂಕ್ಷ್ಮ, ನಿರ್ಣಾಯಕ ಮತ್ತು ದೃಢ ನಿಶ್ಚಯದಿಂದ ಕೂಡಿದೆ. ಕೋವಿಡ್ ಅವಧಿಯಲ್ಲಿ, ಮೋದಿ ಜಿ ಸದೃಢವಾಗಿದ್ದರು, ಸಾಂಕ್ರಾಮಿಕ ರೋಗವು ಕೊನೆಗೊಂಡಾಗ, ಭಾರತವು ಅದನ್ನು ಅತ್ಯುತ್ತಮವಾಗಿ ನಿರ್ವಹಿಸಿದೆ ಎಂದು ಜಗತ್ತು ಒಪ್ಪಿಕೊಂಡಿತು. ಪ್ರಧಾನಿ, ಭಾರತ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು 140 ಕೋಟಿ ಜನರು ಕೋವಿಡ್ ವಿರುದ್ಧ ಒಟ್ಟಾಗಿ ಹೋರಾಡಿದರು. ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ 11 ವರ್ಷಗಳಲ್ಲಿ ಜಗತ್ತು ಭಾರತದ ಸಾಮರ್ಥ್ಯಗಳನ್ನು ಗುರುತಿಸಿದೆ ಎಂದು ಅಮಿತ್ ಶಾ ತಿಳಿಸಿದರು.
ಇಂದು ನಾವು 11ನೇ ಸ್ಥಾನದಿಂದ 4ನೇ ಅತಿದೊಡ್ಡ ಆರ್ಥಿಕತೆಗೆ ಏರಿದ್ದೇವೆ, ನಮ್ಮ ಜಿಡಿಪಿ 4.19 ಟ್ರಿಲಿಯನ್ ಡಾಲರ್ ಗೆ ತಲುಪಿದೆ. ಒಂದು ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯನ್ನು ಸೃಜಿಸಲಾಗಿದೆ. ತಲಾ ಆದಾಯವು 68,572 ರೂಪಾಯಿಗಳಿಂದ 1,33,488 ರೂಪಾಯಿಗಳಿಗೆ ಏರಿದೆ. ರಾಷ್ಟ್ರೀಯ ಹೆದ್ದಾರಿ ಜಾಲವು ಶೇಕಡ 60ರಷ್ಟು ಬೆಳೆದಿದೆ, 159 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ, 136 ವಂದೇ ಭಾರತ್ ರೈಲುಗಳಿವೆ. ಭಾರತೀಯ ರೈಲ್ವೆಯ ಶೇಕಡ 97ಕ್ಕೂ ಹೆಚ್ಚಿನ ಮಾರ್ಗಗಳು ವಿದ್ಯುದ್ದೀಕರಣಗೊಂಡಿವೆ. ಭಾರತವು ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದನಾ ದೇಶವಾಗುವ ಸಮೀಪದಲ್ಲಿದೆ, 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿದೆ. ಮೋದಿ ಸರ್ಕಾರದಲ್ಲಿ, 118 ಯುನಿಕಾರ್ನ್‌ಗಳನ್ನು ರೂಪಿಸಲಾಗಿದೆ, ರಕ್ಷಣಾ ಉತ್ಪಾದನೆ 1.27 ಲಕ್ಷ ಕೋಟಿ ತಲುಪಿದೆ, ರಫ್ತು ವಹಿವಾಟು 21,000 ಕೋಟಿ ರೂ.ಗೆ ತಲುಪಿದೆ. ಮೋದಿ ಸರ್ಕಾರದ ಶ್ರೇಷ್ಠ ಸಾಧನೆಯೆಂದರೆ 60 ಕೋಟಿ ಜನರಿಗೆ ಮನೆಗಳು, ವಿದ್ಯುತ್, ಅನಿಲ, ಶೌಚಾಲಯಗಳು, ಕುಡಿಯುವ ನೀರು, 5 ಕೆಜಿ ಆಹಾರ ಧಾನ್ಯಗಳು ಮತ್ತು 5 ಲಕ್ಷ ರೂಪಾಯಿ ತನಕ ಆರೋಗ್ಯ ರಕ್ಷಣೆ ಒದಗಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷದಲ್ಲಿ ಭಾರತದ ಸ್ವಾತಂತ್ರ್ಯ ಇತಿಹಾಸ ಬರೆಯುವಾಗ, ಈ ಮೋದಿ ಯುಗವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ. ನಮ್ಮ ಹೆಮ್ಮೆ, ಸಂಸ್ಕೃತಿ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ವಿರೋಧ ಪಕ್ಷಗಳು 75 ವರ್ಷಗಳ ಕಾಲ ಬಾಕಿ ಇರಿಸಿದ್ದವು ಎಂದು ಅಮಿತ್ ಶಾ ಹೇಳಿದರು.
*****
(Release ID: 2150630)