ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ಗಂಗೈಕೊಂಡ ಚೋಳಪುರಂನಲ್ಲಿ ʻಆದಿ ತಿರುವಥಿರೈʼ ಉತ್ಸವ ಉದ್ದೇಶಿಸಿ ಮಾತನಾಡಿದರು


ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರಾದ ಒಂದನೇ ರಾಜೇಂದ್ರ ಚೋಳ ಅವರನ್ನು ಗೌರವಿಸುವ ಸ್ಮರಣಾರ್ಥ ನಾಣ್ಯವನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು

ರಾಜರಾಜ ಚೋಳ ಮತ್ತು ರಾಜೇಂದ್ರ ಚೋಳ ಭಾರತದ ಅಸ್ಮಿತೆ ಮತ್ತು ಹೆಮ್ಮೆಯ ಸಂಕೇತ: ಪ್ರಧಾನಮಂತ್ರಿ

ಚೋಳ ಸಾಮ್ರಾಜ್ಯದ ಇತಿಹಾಸ ಮತ್ತು ಪರಂಪರೆ ನಮ್ಮ ಮಹಾನ್ ರಾಷ್ಟ್ರದ ಶಕ್ತಿ ಮತ್ತು ನಿಜವಾದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

ಚೋಳರ ಯುಗವು ಭಾರತೀಯ ಇತಿಹಾಸದ ಸುವರ್ಣ ಯುಗಗಳಲ್ಲಿ ಒಂದಾಗಿದೆ; ಈ ಅವಧಿಯು ಚೋಳರ ಅಸಾಧಾರಣ ಮಿಲಿಟರಿ ಶಕ್ತಿಯಿಂದ ವಿಶೇಷ ಸ್ಥಾನ ಪಡೆದಿದೆ: ಪ್ರಧಾನಮಂತ್ರಿ

ರಾಜೇಂದ್ರ ಚೋಳ ಅವರು ಗಂಗೈಕೊಂಡ ಚೋಳಪುರಂ ದೇವಾಲಯವನ್ನು ಸ್ಥಾಪಿಸಿದರು; ಇಂದಿಗೂ, ಈ ದೇವಾಲಯವು ವಿಶ್ವದಾದ್ಯಂತ ಮೆಚ್ಚುಗೆ ಪಡೆದ ವಾಸ್ತುಶಿಲ್ಪದ ಅದ್ಭುತವಾಗಿ ನಿಂತಿದೆ: ಪ್ರಧಾನಮಂತ್ರಿ
    
ಚೋಳ ಚಕ್ರವರ್ತಿಗಳು ಭಾರತವನ್ನು ಸಾಂಸ್ಕೃತಿಕ ಏಕತೆಯ ಎಳೆಯಲ್ಲಿ ಹೆಣೆದಿದ್ದರು, ಇಂದು, ನಮ್ಮ ಸರ್ಕಾರವು ಚೋಳ ಯುಗದ ಅದೇ ದೃಷ್ಟಿಕೋನವನ್ನು ಮುಂದುವರಿಸುತ್ತಿದೆ, ʻಕಾಶಿ-ತಮಿಳು ಸಂಗಮಂʼ ಮತ್ತು ʻಸೌರಾಷ್ಟ್ರ-ತಮಿಳು ಸಂಗಮಂʼನಂತಹ ಉಪಕ್ರಮಗಳ ಮೂಲಕ, ನಾವು ಶತಮಾನಗಳಷ್ಟು ಹಳೆಯ ಈ ಏಕತೆಯ ಬಂಧಗಳನ್ನು ಬಲಪಡಿಸುತ್ತಿದ್ದೇವೆ: ಪ್ರಧಾನಮಂತ್ರಿ

ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಿದಾಗ, ನಮ್ಮ ಶೈವ ಅಧೀನಂಗಳ ಸಂತರು ಆಧ್ಯಾತ್ಮಿಕವಾಗಿ ಸಮಾರಂಭದ ನೇ

Posted On: 27 JUL 2025 4:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ `ಆದಿ ತಿರುವಥಿರೈ' ಉತ್ಸವ ಉದ್ದೇಶಿಸಿ ಮಾತನಾಡಿದರು. ಸರ್ವಶಕ್ತನಾದ ಶಿವನಿಗೆ ನಮಿಸುತ್ತಾ, ರಾಜ ರಾಜ ಚೋಳನ ಪವಿತ್ರ ಭೂಮಿಯಲ್ಲಿ ದೈವಿಕ ಶಿವದರ್ಶನದ ಮೂಲಕ ಅನುಭವಿಸಿದ ಆಳವಾದ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಮಾತನಾಡಿದರು. ಶ್ರೀ ಇಳಯರಾಜಾ ಅವರ ಸಂಗೀತ ಮತ್ತು ಒಥುವರರ ಪವಿತ್ರ ಪಠಣದೊಂದಿಗೆ, ಆಧ್ಯಾತ್ಮಿಕ ವಾತಾವರಣವು ಆತ್ಮವನ್ನು ಆಳವಾಗಿ ಪ್ರಭಾವಿಸಿದೆ ಎಂದು ಶ್ರೀ ಮೋದಿ ಹೇಳಿದರು.

ಪವಿತ್ರ ಶ್ರಾವಣ ಮಾಸದ ಮಹತ್ವ ಮತ್ತು ಬೃಹದೀಶ್ವರ ಶಿವ ದೇವಾಲಯ ನಿರ್ಮಾಣದಿಂದ 1,000 ವರ್ಷಗಳನ್ನು ಗುರುತಿಸುವ ಐತಿಹಾಸಿಕ ಸಂದರ್ಭವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಇಂತಹ ಅಸಾಧಾರಣ ಕ್ಷಣದಲ್ಲಿ ಭಗವಾನ್ ಬೃಹದೀಶ್ವರ ಶಿವನ ಪಾದಗಳ ಬಳಿ ಉಪಸ್ಥಿತರಿರುವುದಕ್ಕೆ ಮತ್ತು ಪೂಜ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು. 140 ಕೋಟಿ ಭಾರತೀಯರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ನಿರಂತರ ಪ್ರಗತಿಗಾಗಿ ಐತಿಹಾಸಿಕ ಬೃಹದೀಶ್ವರ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಶಿವನ ಪವಿತ್ರ ಮಂತ್ರವನ್ನು ಪಠಿಸುತ್ತಾ ಶಿವನ ಆಶೀರ್ವಾದ ಎಲ್ಲರಿಗೂ ತಲುಪಲಿ ಎಂದು ಹಾರೈಸಿದರು.

ಮಾನವ ಕಲ್ಯಾಣ ಮತ್ತು ಸಮೃದ್ಧಿಗಾಗಿ ನಮ್ಮ ಪೂರ್ವಜರು ರೂಪಿಸಿದ ಮಾರ್ಗಸೂಚಿಗೆ ಸಂಬಂಧಿಸಿದ, 1000 ವರ್ಷಗಳ ಐತಿಹಾಸಿಕ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವಂತೆ ಶ್ರೀ ಮೋದಿ ಅವರು ಜನರನ್ನು ಒತ್ತಾಯಿಸಿದರು. ಕೇಂದ್ರ ಸಂಸ್ಕೃತಿ ಸಚಿವಾಲಯ ಇದನ್ನು ಆಯೋಜಿಸಿದೆ. ʻಚಿನ್ಮಯ ಮಿಷನ್ʼ ಆಯೋಜಿಸಿದ್ದ ʻತಮಿಳು ಗೀತಾʼ ಆಲ್ಬಂ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಅವರು, ಈ ಉಪಕ್ರಮವು ತನ್ನ ಪರಂಪರೆಯನ್ನು ಸಂರಕ್ಷಿಸುವ ರಾಷ್ಟ್ರದ ಸಂಕಲ್ಪಕ್ಕೆ ಶಕ್ತಿ ನೀಡುತ್ತದೆ ಎಂದು ಹೇಳಿದರು. ಈ ಪ್ರಯತ್ನದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅವರು ಅಭಿನಂದಿಸಿದರು.

ಇದಲ್ಲದೆ, ಚೋಳ ಆಡಳಿತಗಾರರು ತಮ್ಮ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಆಗ್ನೇಯ ಏಷ್ಯಾಕ್ಕೆ ವಿಸ್ತರಿಸಿದ್ದ ಬಗ್ಗೆ ಪ್ರಧಾನಮಂತ್ರಿ ಒತ್ತಿ ಹೇಳಿದರು. ನಿನ್ನೆಯಷ್ಟೇ ಮಾಲ್ಡೀವ್ಸ್ ನಿಂದ ಹಿಂದಿರುಗಿ ತಮಿಳುನಾಡಿನಲ್ಲಿ ಈ ಕಾರ್ಯಕ್ರಮದ ಭಾಗವಾಗಿರುವುದು ಕಾಕತಾಳೀಯ ಎಂದು ಅವರು ಉಲ್ಲೇಖಿಸಿದರು.

ಶಿವನನ್ನು ಧ್ಯಾನಿಸುವವರು ಅವನಂತೆ ಶಾಶ್ವತರಾಗುತ್ತಾರೆ ಎಂಬ ಧರ್ಮಗ್ರಂಥಗಳ ತತ್ವವನ್ನು ಉಲ್ಲೇಖಿಸಿದ ಶ್ರೀ ಮೋದಿ, ಶಿವನ ಬಗ್ಗೆ ಅಚಲ ಭಕ್ತಿಯಲ್ಲಿ ಬೇರೂರಿರುವ ಭಾರತದ ಚೋಳ ಪರಂಪರೆಯು ಅಮರತ್ವವನ್ನು ಸಾಧಿಸಿದೆ ಎಂದು ಹೇಳಿದರು. "ರಾಜರಾಜ ಚೋಳ ಮತ್ತು ರಾಜೇಂದ್ರ ಚೋಳರ ಪರಂಪರೆಯು ಭಾರತದ ಅಸ್ಮಿತೆ ಮತ್ತು ಹೆಮ್ಮೆಗೆ ಅನ್ವರ್ಥವಾಗಿದೆ," ಎಂದು ಉದ್ಗರಿಸಿದ ಪ್ರಧಾನಮಂತ್ರಿ, ಚೋಳ ಸಾಮ್ರಾಜ್ಯದ ಇತಿಹಾಸ ಮತ್ತು ಪರಂಪರೆಯು ಭಾರತದ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು. ಈ ಪರಂಪರೆಯು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ರಾಷ್ಟ್ರೀಯ ಆಕಾಂಕ್ಷೆಯನ್ನು ಪ್ರೇರೇಪಿಸುತ್ತದೆ ಎಂದು ಒತ್ತಿ ಹೇಳಿದ ಅವರು, ಮಹಾನ್ ರಾಜೇಂದ್ರ ಚೋಳರಿಗೆ ಗೌರವ ಸಲ್ಲಿಸಿದರು. ಅವರ ಶಾಶ್ವತ ಪರಂಪರೆಯನ್ನು ಗುರುತಿಸಿದರು. ʻಆದಿ ತಿರುವಥಿರೈʼ ಉತ್ಸವವನ್ನು ಇತ್ತೀಚೆಗೆ ಆಚರಿಸಲಾಗಿದೆ ಎಂದು ಹೇಳಿದ ಶ್ರೀ ಮೋದಿ, ಇಂದಿನ ಭವ್ಯ ಕಾರ್ಯಕ್ರಮವು ಅದರ ಸಮಾರೋಪವನ್ನು ಸೂಚಿಸುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

"ಇತಿಹಾಸಕಾರರು ಚೋಳರ ಕಾಲವನ್ನು ಭಾರತದ ಸುವರ್ಣ ಯುಗಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ, ಚೋಳರ ಯುಗವು ತನ್ನ ಮಿಲಿಟರಿ ಶಕ್ತಿಯಿಂದ ಪ್ರತ್ಯೇಕ ಸ್ಥಾನವನ್ನು ಪಡೆದಿತ್ತು," ಎಂದು ಪ್ರಧಾನಮಂತ್ರಿ ಹೇಳಿದರು. ಚೋಳ ಸಾಮ್ರಾಜ್ಯವು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಮುನ್ನಡೆಸಿತು, ಆದರೆ ಇದನ್ನು ಜಾಗತಿಕ ಕಥಾನಕಗಳಲ್ಲಿ ಹೆಚ್ಚಾಗಿ ಕಡೆಗಣಿಸಲಾಗುತ್ತದೆ ಎಂದು ಒತ್ತಿ ಹೇಳಿದರು. ಇತಿಹಾಸಕಾರರು ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಬ್ರಿಟನ್ನ ʻಮ್ಯಾಗ್ನಾ ಕಾರ್ಟಾʼ ಬಗ್ಗೆ ಮಾತನಾಡಿದರೆ, ಚೋಳ ಸಾಮ್ರಾಜ್ಯವು ಶತಮಾನಗಳ ಹಿಂದೆ ʻಕುಡವೊಲೈ ಅಮೈಪ್ಪುʼ ವ್ಯವಸ್ಥೆಯ ಮೂಲಕ ಪ್ರಜಾಸತಾತ್ಮಕ ಚುನಾವಣಾ ಅಭ್ಯಾಸಗಳನ್ನು ಜಾರಿಗೆ ತಂದಿತ್ತು ಎಂದು ಅವರು ಪ್ರಧಾನಮಂತ್ರಿ ಸೆಳೆದರು. ಇಂದು ಜಾಗತಿಕ ಚರ್ಚೆಯು ಹೆಚ್ಚಾಗಿ ನೀರಿನ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಸುತ್ತ ಕೇಂದ್ರೀಕೃತವಾಗಿದೆ. ಭಾರತದ ಪೂರ್ವಜರು ಈ ವಿಷಯಗಳ ಮಹತ್ವವನ್ನು ಬಹಳ ಹಿಂದೆಯೇ ಅರ್ಥಮಾಡಿಕೊಂಡಿದ್ದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಇತರ ಪ್ರದೇಶಗಳಿಂದ ಚಿನ್ನ, ಬೆಳ್ಳಿ ಅಥವಾ ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕಾಗಿ ಅನೇಕ ರಾಜರನ್ನು ಸ್ಮರಿಸಲಾಗುತ್ತದೆ. ಆದರೆ ರಾಜೇಂದ್ರ ಚೋಳರು ಪವಿತ್ರ ಗಂಗಾ ನೀರನ್ನು ತಂದಿದ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ರಾಜೇಂದ್ರ ಚೋಳ ಉತ್ತರ ಭಾರತದಿಂದ ಗಂಗಾ ನೀರನ್ನು ಸಾಗಿಸಿ ದಕ್ಷಿಣದಲ್ಲಿ ಸ್ಥಾಪಿಸಿದ್ದನ್ನು ಪ್ರಧಾನಮಂತ್ರಿ ಸ್ಮರಿಸಿದರು. ಅವರು "ಗಂಗಾ ಜಲಮಯಂ ಜಯಸ್ತಂಭಂ" ಎಂಬ ನುಡಿಗಟ್ಟನ್ನು ಉಲ್ಲೇಖಿಸಿ, ನೀರನ್ನು ಈಗ ಪೊನ್ನೇರಿ ಸರೋವರ ಎಂದು ಕರೆಯಲ್ಪಡುವ ಚೋಳ ಗಂಗಾ ಸರೋವರಕ್ಕೆ ಹರಿಸಲಾಯಿತು ಎಂದು ವಿವರಿಸಿದರು.

ರಾಜೇಂದ್ರ ಚೋಳ ಗಂಗೈಕೊಂಡ ಚೋಳಪುರಂ ದೇವಾಲಯವನ್ನು ಸ್ಥಾಪಿಸಿದರು, ಇದು ವಾಸ್ತುಶಿಲ್ಪದ ಅದ್ಭುತವಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ತಾಯಿ ಕಾವೇರಿಯ ಭೂಮಿಯಲ್ಲಿ ಗಂಗಾ ಆಚರಣೆಯು ಚೋಳ ಸಾಮ್ರಾಜ್ಯದ ಪರಂಪರೆಯಾಗಿದೆ ಎಂದು ಹೇಳಿದರು. ಈ ಐತಿಹಾಸಿಕ ಘಟನೆಯ ನೆನಪಿಗಾಗಿ, ಗಂಗಾ ನೀರನ್ನು ಮತ್ತೊಮ್ಮೆ ಕಾಶಿಯಿಂದ ತಮಿಳುನಾಡಿಗೆ ತರಲಾಗಿದೆ ಎಂದು ಹೇಳಿದ ಅವರು, ಸ್ಥಳದಲ್ಲಿ ಔಪಚಾರಿಕ ಆಚರಣೆಯನ್ನೂ ನಡೆಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕಾಶಿಯಿಂದ ಚುನಾಯಿತರಾದ ಜನಪ್ರತಿನಿಧಿಯಾಗಿ ಪ್ರಧಾನಮಂತ್ರಿಯವರು ಗಂಗಾ ಮಾತೆಯೊಂದಿಗಿನ ತಮ್ಮ ಆಳವಾದ ಭಾವನಾತ್ಮಕ ಸಂಬಂಧವನ್ನು ಹಂಚಿಕೊಂಡರು. ಚೋಳ ರಾಜರಿಗೆ ಸಂಬಂಧಿಸಿದ ಪ್ರಯತ್ನಗಳು ಮತ್ತು ಕಾರ್ಯಕ್ರಮಗಳು ಪವಿತ್ರ ಪ್ರಯತ್ನಗಳಿದ್ದಂತೆ. ಇವು "ಏಕ ಭಾರತ-ಶ್ರೇಷ್ಠ ಭಾರತ"ದ ಸಂಕೇತವಾಗಿದ್ದು, ಈ ಉಪಕ್ರಮಕ್ಕೆ ಹೊಸತನ ಮತ್ತು ವೇಗವನ್ನು ನೀಡುತ್ತವೆ ಎಂದು ಅವರು ಹೇಳಿದರು.

"ಚೋಳ ರಾಜರು ಭಾರತವನ್ನು ಸಾಂಸ್ಕೃತಿಕ ಏಕತೆಯ ಎಳೆಯಲ್ಲಿ ಹೆಣೆದಿದ್ದರು. ಇಂದು, ನಮ್ಮ ಸರ್ಕಾರವು ಚೋಳರ ಯುಗದ ಅದೇ ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುತ್ತಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ʻಕಾಶಿ ತಮಿಳು ಸಂಗಮಂʼ ಮತ್ತು ʻಸೌರಾಷ್ಟ್ರ ತಮಿಳು ಸಂಗಮಂʼನಂತಹ ಕಾರ್ಯಕ್ರಮಗಳು ಶತಮಾನಗಳಷ್ಟು ಹಳೆಯ ಏಕತೆಯ ಬಂಧಗಳನ್ನು ಬಲಪಡಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು. ತಮಿಳುನಾಡಿನ ಗಂಗೈಕೊಂಡ ಚೋಳಪುರಂನಂತಹ ಪ್ರಾಚೀನ ದೇವಾಲಯಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮೂಲಕ ಸಂರಕ್ಷಿಸಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಹೊಸ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ʻಶಿವ ಅಧೀನಂʼನ ಸಂತರು ಆಧ್ಯಾತ್ಮಿಕ ಮಾರ್ಗದರ್ಶನದೊಂದಿಗೆ ಸಮಾರಂಭದ ನೇತೃತ್ವ ವಹಿಸಿದ್ದರು ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಮಿಳು ಸಂಪ್ರದಾಯಕ್ಕೆ ಸಂಬಂಧಿಸಿದ ಪವಿತ್ರ ʻಸೆಂಗೋಲ್ʼ ಅನ್ನು ಸಂಸತ್ತಿನಲ್ಲಿ ಔಪಚಾರಿಕವಾಗಿ ಸ್ಥಾಪಿಸಲಾಗಿದೆ. ಈ ಕ್ಷಣವನ್ನು ಅವರು ಇನ್ನೂ ಅಪಾರ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ ಎಂದರು.

ಚಿದಂಬರಂನ ನಟರಾಜ ದೇವಸ್ಥಾನದ ದೀಕ್ಷಿತರನ್ನು ಭೇಟಿಯಾದ ಸಂದರ್ಭವನ್ನು ಸ್ಮರಿಸಿದ ಶ್ರೀ ಮೋದಿ ಅವರು, ಶಿವನನ್ನು ನಟರಾಜನ ರೂಪದಲ್ಲಿ ಪೂಜಿಸುವ ದೇವಾಲಯದಿಂದ ಪವಿತ್ರ ಅರ್ಪಣೆಯನ್ನು ತಮಗೆ ನೀಡಿದ್ದಾಗಿ ಹೇಳಿದರು. ನಟರಾಜನ ಈ ರೂಪವು ಭಾರತದ ತತ್ವಶಾಸ್ತ್ರ ಮತ್ತು ವೈಜ್ಞಾನಿಕ ಅಡಿಪಾಯಗಳನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. 2023ರಲ್ಲಿ ಜಿ-20 ಶೃಂಗಸಭೆಯ ಸಮಯದಲ್ಲಿ ಜಾಗತಿಕ ನಾಯಕರು ಒಟ್ಟುಗೂಡಿದ ದೆಹಲಿಯ ʻಭಾರತ ಮಂಟಪʼವನ್ನು ಇದೇ ರೀತಿಯ ನಟರಾಜನ ಆನಂದ ತಾಂಡವ ವಿಗ್ರಹವು ಅಲಂಕರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.

"ಭಾರತದ ಶೈವ ಸಂಪ್ರದಾಯವು ರಾಷ್ಟ್ರದ ಸಾಂಸ್ಕೃತಿಕ ಗುರುತನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಚೋಳ ಚಕ್ರವರ್ತಿಗಳು ಪ್ರಮುಖ ವಾಸ್ತುಶಿಲ್ಪಿಗಳಾಗಿದ್ದರು ಮತ್ತು ತಮಿಳುನಾಡು ರೋಮಾಂಚಕ ಶೈವ ಪರಂಪರೆಯ ಪ್ರಮುಖ ಕೇಂದ್ರವಾಗಿ ಮುಂದುವರೆದಿದೆ," ಎಂದು ಪ್ರಧಾನಮಂತ್ರಿ ಉದ್ಗರಿಸಿದರು. ಪೂಜ್ಯ ನಯನ್ಮಾರ್ ಸಂತರ ಪರಂಪರೆ, ಅವರ ಭಕ್ತಿ ಸಾಹಿತ್ಯ, ತಮಿಳು ಸಾಹಿತ್ಯ ಕೊಡುಗೆಗಳು ಮತ್ತು ಅಧೀನಂಗಳ ಆಧ್ಯಾತ್ಮಿಕ ಪ್ರಭಾವವನ್ನು ಎತ್ತಿ ತೋರಿದರು. ಈ ಅಂಶಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಹೊಸ ಯುಗವನ್ನು ಪ್ರವರ್ಧಮಾನಕ್ಕೆ ತಂದವು ಎಂದು ಪ್ರಧಾನಮಂತ್ರಿ ಹೇಳಿದರು. 

ಜಗತ್ತು ಇಂದು ಅಸ್ಥಿರತೆ, ಹಿಂಸಾಚಾರ ಮತ್ತು ಪರಿಸರ ಬಿಕ್ಕಟ್ಟಿನಂತಹ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಶೈವ ತತ್ವಶಾಸ್ತ್ರವು ಇವುಗಳಿಗೆ ಅರ್ಥಪೂರ್ಣ ಪರಿಹಾರ ಮಾರ್ಗಗಳನ್ನು ಒದಗಿಸುತ್ತದೆ ಎಂದು ಒತ್ತಿ ಹೇಳಿದರು. "ಪ್ರೀತಿಯೇ ಶಿವ" ಎಂಬ ಅರ್ಥವನ್ನು ನೀಡುವ 'ಅನ್ಬೆ ಶಿವಂ' ಬರೆದ ತಿರುಮುಲಾರ್ ಅವರ ಬೋಧನೆಗಳನ್ನು ಅವರು ಉಲ್ಲೇಖಿಸಿದರು. ಜಗತ್ತು ಈ ಚಿಂತನೆಯನ್ನು ಅಳವಡಿಸಿಕೊಂಡರೆ, ಅನೇಕ ಬಿಕ್ಕಟ್ಟುಗಳು ತಾವಾಗಿಯೇ ಪರಿಹಾರವಾಗುತ್ತವೆ ಎಂದು ಹೇಳಿದ ಪ್ರಧಾನಮಂತ್ರಿ, ಭಾರತವು 'ಒಂದು ಜಗತ್ತು, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ಧ್ಯೇಯವಾಕ್ಯದ ಮೂಲಕ ಈ ತತ್ವವನ್ನು ಮುನ್ನಡೆಸುತ್ತಿದೆ ಎಂದು ಹೇಳಿದರು.

"ಇಂದು, ಭಾರತವು ʻವಿಕಾಸವೂ ಇರಲಿ, ಪರಂಪರೆಯೂ ಮುಂದುವರಿಯಲಿʼ(ವಿಕಾಸ್ ಭಿ, ವಿರಾಸತ್ ಭಿ) ಎಂಬ ಮಂತ್ರದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ, ಮತ್ತು ಆಧುನಿಕ ಭಾರತವು ತನ್ನ ಇತಿಹಾಸದ ಬಗ್ಗೆ ಹೆಮ್ಮೆ ಪಡುತ್ತದೆ," ಎಂದು ಶ್ರೀ ಮೋದಿ ಹೇಳಿದರು. ಕಳೆದ ದಶಕದಲ್ಲಿ, ರಾಷ್ಟ್ರವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳಲು ಸಮರೋಪಾದಿಯಲ್ಲಿ ಕೆಲಸ ಮಾಡಿದೆ ಎಂದು ಮೋದಿ ಅವರು ಹೇಳಿದರು. ಕದ್ದು ವಿದೇಶದಲ್ಲಿ ಮಾರಾಟ ಮಾಡಲಾದ ಪ್ರಾಚೀನ ಪ್ರತಿಮೆಗಳು ಮತ್ತು ಕಲಾಕೃತಿಗಳನ್ನು ಭಾರತಕ್ಕೆ ಮರಳಿ ತರಲಾಗಿದೆ ಎಂದು ಅವರು ಗಮನ ಸೆಳೆದರು. 2014ರಿಂದ, ವಿಶ್ವದಾದ್ಯಂತದ ವಿವಿಧ ದೇಶಗಳಿಂದ 600ಕ್ಕೂ ಹೆಚ್ಚು ಪ್ರಾಚೀನ ಕಲಾಕೃತಿಗಳನ್ನು ಸ್ವದೇಶಕ್ಕೆ ತರಲಾಗಿದೆ, ಈ ಕಲಾಕೃತಿಗಳಲ್ಲಿ 36 ನಿರ್ದಿಷ್ಟವಾಗಿ ತಮಿಳುನಾಡಿನವು ಎಂದು ಪ್ರಧಾನಮಂತ್ರಿ ಗಮನಸೆಳೆದರು. ನಟರಾಜ, ಲಿಂಗೋದ್ಭವರ್, ದಕ್ಷಿಣಾಮೂರ್ತಿ, ಅರ್ಧನಾರೀಶ್ವರ, ನಂದಿಕೇಶ್ವರ, ಉಮಾ ಪರಮೇಶ್ವರಿ, ಪಾರ್ವತಿ ಮತ್ತು ಸಂಬಂದರ್ ಸೇರಿದಂತೆ ಅನೇಕ ಅಮೂಲ್ಯ ಪರಂಪರೆಯ ಪ್ರತಿಮೆಗಳು ಮತ್ತೊಮ್ಮೆ ಭರತ ಭೂಮಿಯನ್ನು ಅಲಂಕರಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು.

ಭಾರತದ ಪರಂಪರೆ ಮತ್ತು ಶೈವ ತತ್ತ್ವಶಾಸ್ತ್ರದ ಪ್ರಭಾವವು ಈಗ ತನ್ನ ಭೌಗೋಳಿಕ ಗಡಿಗಳಿಗೆ ಸೀಮಿತವಾಗಿಲ್ಲ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ದೇಶವಾದಾಗ, ನಿರ್ದಿಷ್ಟ ಚಂದ್ರನ ತಾಣವನ್ನು "ಶಿವ-ಶಕ್ತಿ" ಎಂದು ಹೆಸರಿಸಲಾಯಿತು ಮತ್ತು ಇದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ ಎಂದು ಸ್ಮರಿಸಿದರು.

"ಚೋಳರ ಕಾಲದಲ್ಲಿ ಸಾಧಿಸಿದ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಗತಿಗಳು ಆಧುನಿಕ ಭಾರತಕ್ಕೆ ಸ್ಫೂರ್ತಿಯ ಮೂಲವಾಗಿ ಉಳಿದಿವೆ; ರಾಜರಾಜ ಚೋಳ ಬಲಿಷ್ಠ ನೌಕಾಪಡೆಯನ್ನು ಸ್ಥಾಪಿಸಿದರು, ಅದನ್ನು ರಾಜೇಂದ್ರ ಚೋಳ ಮತ್ತಷ್ಟು ಬಲಪಡಿಸಿದರು," ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಚೋಳರ ಅವಧಿಯು ಸ್ಥಳೀಯ ಆಡಳಿತ ವ್ಯವಸ್ಥೆಗಳ ಸಬಲೀಕರಣ ಮತ್ತು ದೃಢವಾದ ಆದಾಯ ಸಂಗ್ರಹದ ಅನುಷ್ಠಾನ ಸೇರಿದಂತೆ ಪ್ರಮುಖ ಆಡಳಿತ ಸುಧಾರಣೆಗಳಿಗೆ ಸಾಕ್ಷಿಯಾಯಿತು ಎಂದು ಹೇಳಿದರು. ವಾಣಿಜ್ಯ ಪ್ರಗತಿ, ಕಡಲ ಮಾರ್ಗಗಳ ಬಳಕೆ ಹಾಗೂ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಕ ಭಾರತವು ಎಲ್ಲಾ ದಿಕ್ಕುಗಳಲ್ಲಿ ವೇಗವಾಗಿ ಪ್ರಗತಿ ಸಾಧಿಸಿದೆ ಎಂದು ಅವರು ಗಮನ ಸೆಳೆದರು. ಚೋಳ ಸಾಮ್ರಾಜ್ಯವು ನವ ಭಾರತವನ್ನು ನಿರ್ಮಿಸಲು ಪ್ರಾಚೀನ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು, ಭಾರತವು ಏಕತೆಗೆ ಆದ್ಯತೆ ನೀಡಬೇಕು, ತನ್ನ ನೌಕಾಪಡೆ ಮತ್ತು ರಕ್ಷಣಾ ಪಡೆಗಳನ್ನು ಬಲಪಡಿಸಬೇಕು, ಹೊಸ ಅವಕಾಶಗಳನ್ನು ಹುಡುಕಬೇಕು ಮತ್ತು ಅದರ ಪ್ರಮುಖ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಶ್ರೀ ಮೋದಿ ಹೇಳಿದರು. ಈ ದೃಷ್ಟಿಕೋನದಿಂದ ಪ್ರೇರಿತತವಾಗಿ ದೇಶ ಮುನ್ನಡೆಯುತ್ತಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು.

ಇಂದಿನ ಭಾರತವು ತನ್ನ ರಾಷ್ಟ್ರೀಯ ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಒತ್ತಿಹೇಳುತ್ತಾ, ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ತನ್ನ ಸಾರ್ವಭೌಮತ್ವದ ವಿರುದ್ಧದ ಯಾವುದೇ ಬೆದರಿಕೆಗೆ ಭಾರತದ ದೃಢ ಮತ್ತು ನಿರ್ಣಾಯಕ ಪ್ರತಿಕ್ರಿಯೆಯನ್ನು ಜಗತ್ತು ನೋಡಿದೆ ಎಂದು ಹೇಳಿದರು. ಈ ಕಾರ್ಯಾಚರಣೆಯು ಭಯೋತ್ಪಾದಕರು ಮತ್ತು ರಾಷ್ಟ್ರದ ಶತ್ರುಗಳಿಗೆ ಸುರಕ್ಷಿತ ತಾಣವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ ಎಂದು ಅವರು ದೃಢಪಡಿಸಿದರು. ʻಆಪರೇಷನ್ ಸಿಂಧೂರʼ ಭಾರತದ ಜನರಲ್ಲಿ ಹೊಸ ವಿಶ್ವಾಸವನ್ನು ಹುಟ್ಟುಹಾಕಿದೆ ಮತ್ತು ಇಡೀ ಜಗತ್ತು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಗಂಗೈಕೊಂಡ ಚೋಳಪುರಂ ನಿರ್ಮಾಣವನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ರಾಜೇಂದ್ರ ಚೋಳರ ಪರಂಪರೆಗೆ ಅರ್ಥಪೂರ್ಣ ಸಮಕಾಲೀನ ಉದಾಹರಣೆಯನ್ನು ಒತ್ತಿ ಹೇಳಿದರು. ರಾಜೇಂದ್ರ ಚೋಳರು ತಮ್ಮ ತಂದೆಯ ಬಗ್ಗೆ ಆಳವಾದ ಗೌರವದಿಂದ, ದೇವಾಲಯದ ಗೋಪುರವನ್ನು ತಂಜಾವೂರಿನಲ್ಲಿ ಅವರ ತಂದೆ ನಿರ್ಮಿಸಿದ್ದ ಬೃಹದೀಶ್ವರರ್ ದೇವಾಲಯಕ್ಕಿಂತ ಕೆಳಮಟ್ಟದಲ್ಲಿ ನಿರ್ಮಿಸಿದರು. ತನ್ನ ಸಾಧನೆಗಳ ಹೊರತಾಗಿಯೂ, ರಾಜೇಂದ್ರ ಚೋಳರು ನಮ್ರತೆಗೆ ಉದಾಹರಣೆಯಾಗಿದ್ದರು. "ಇಂದಿನ ನವ ಭಾರತವು ಇದೇ ಮನೋಭಾವವನ್ನು ಸಾಕಾರಗೊಳಿಸುತ್ತದೆ - ಬಲಗೊಳ್ಳುತ್ತಿದೆ, ಆದರೆ ಜಾಗತಿಕ ಕಲ್ಯಾಣ ಮತ್ತು ಏಕತೆಯ ಮೌಲ್ಯಗಳಲ್ಲಿ ಅದು ತನ್ನ ಬೇರುಗಳನ್ನು ಹೊಂದಿದೆ," ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದ ಪರಂಪರೆಯ ಬಗ್ಗೆ ಹೆಮ್ಮೆಯ ಮನೋಭಾವವನ್ನು ಹೆಚ್ಚಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದ ಶ್ರೀ ಮೋದಿ ಅವರು, ರಾಜರಾಜ ಚೋಳ ಮತ್ತು ಅವರ ಮಗ, ಪ್ರಸಿದ್ಧ ಆಡಳಿತಗಾರ ಒಂದನೇ ರಾಜೇಂದ್ರ ಚೋಳರ ಭವ್ಯ ಪ್ರತಿಮೆಗಳನ್ನು ಮುಂಬರುವ ಸಮಯದಲ್ಲಿ ತಮಿಳುನಾಡಿನಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಈ ಪ್ರತಿಮೆಗಳು ಭಾರತದ ಐತಿಹಾಸಿಕ ಪ್ರಜ್ಞೆಯ ಆಧುನಿಕ ಸ್ತಂಭಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು. ಇಂದು ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯತಿಥಿ ಎಂದು ಸ್ಮರಿಸಿದ ಪ್ರಧಾನಮಂತ್ರಿಯವರು, ಅಭಿವೃದ್ಧಿ ಹೊಂದಿದ ಭಾರತವನ್ನು ಮುನ್ನಡೆಸಲು ದೇಶಕ್ಕೆ ಡಾ. ಕಲಾಂ ಮತ್ತು ಚೋಳ ರಾಜರಂತಹ ಲಕ್ಷಾಂತರ ಯುವಕರ ಅಗತ್ಯವಿದೆ ಎಂದರು. ಶಕ್ತಿ ಮತ್ತು ಭಕ್ತಿಯಿಂದ ತುಂಬಿದ ಅಂತಹ ಯುವಕರು 140 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸುತ್ತಾರೆ ಎಂದು ಒತ್ತಿ ಹೇಳುವ ಮೂಲಕ ಮೋದಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು. ನಾವು ಒಟ್ಟಾಗಿ ʻಏಕ ಭಾರತ, ಶ್ರೇಷ್ಠ ಭಾರತʼ ಸಂಕಲ್ಪವನ್ನು ಮುನ್ನಡೆಸುತ್ತೇವೆ ಎಂದು ಹೇಳಿದ ಅವರು, ಈ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭ ಕೋರಿದರು.

ಗೌರವಾನ್ವಿತ ಸಂತರು, ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ, ಕೇಂದ್ರ ಸಚಿವರಾದ ಡಾ.ಎಲ್. ಮುರುಗನ್ ಸೇರಿದಂತೆ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ    

ಗಂಗೈಕೊಂಡ ಚೋಳಪುರಂ ದೇವಸ್ಥಾನದಲ್ಲಿ `ಆದಿ ತಿರುವಥಿರೈ’ ಉತ್ಸವ ಆಚರಣೆ ಅಂಗವಾಗಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಭಾರತದ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರಾದ ಒಂದನೇ ರಾಜೇಂದ್ರ ಚೋಳ ಅವರನ್ನು ಗೌರವಿಸುವ ಸ್ಮರಣಾರ್ಥ ನಾಣ್ಯವನ್ನು ಪ್ರಧಾನಮಂತ್ರಿ ಮೋದಿ ಬಿಡುಗಡೆ ಮಾಡಿದರು. ಈ ವಿಶೇಷ ಆಚರಣೆಯು ಆಗ್ನೇಯ ಏಷ್ಯಾಕ್ಕೆ ಒಂದನೇ ರಾಜೇಂದ್ರ ಚೋಳ ಅವರ ಕಡಲ ದಂಡಯಾತ್ರೆಯ 1,000 ವರ್ಷಗಳನ್ನು ಮತ್ತು ಚೋಳ ವಾಸ್ತುಶಿಲ್ಪದ ಭವ್ಯವಾದ ಉದಾಹರಣೆಯಾದ ಅಪ್ರತಿಮ ಗಂಗೈಕೊಂಡ ಚೋಳಪುರಂ ದೇವಾಲಯದ ನಿರ್ಮಾಣದ ಪ್ರಾರಂಭವನ್ನು ನೆನಪಿಸುತ್ತದೆ.

ಒಂದನೇ ರಾಜೇಂದ್ರ ಚೋಳ (ಕ್ರಿ.ಶ. 1014-1044) ಭಾರತೀಯ ಇತಿಹಾಸ ಕಂಡಂಥ ಅತ್ಯಂತ ಶಕ್ತಿಶಾಲಿ ಮತ್ತು ದೂರದೃಷ್ಟಿಯ ಆಡಳಿತಗಾರರಲ್ಲಿ ಒಬ್ಬನಾಗಿದ್ದರು. ಅವರ ನಾಯಕತ್ವದಲ್ಲಿ, ಚೋಳ ಸಾಮ್ರಾಜ್ಯವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ತನ್ನ ಪ್ರಾಬಲ್ಯ ವಿಸ್ತರಿಸಿತು. ಒಂದನೇ ರಾಜೇಂದ್ರ ಚೋಳ ತನ್ನ ವಿಜಯಶಾಲಿ ದಂಡಯಾತ್ರೆಗಳ ನಂತರ ಗಂಗೈಕೊಂಡ ಚೋಳಪುರಂ ಅನ್ನು ಸಾಮ್ರಾಜ್ಯದ ರಾಜಧಾನಿಯಾಗಿ ಸ್ಥಾಪಿಸಿದರು, ಮತ್ತು ಅಲ್ಲಿ ಅವರು ನಿರ್ಮಿಸಿದ ದೇವಾಲಯವು 250 ವರ್ಷಗಳಿಗಿಂತ ಹೆಚ್ಚು ಕಾಲ ಶೈವ ಭಕ್ತಿ, ಸ್ಮಾರಕ ವಾಸ್ತುಶಿಲ್ಪ ಮತ್ತು ಆಡಳಿತ ಪರಾಕ್ರಮದ ಹೆಗ್ಗುರುತಾಗಿ ಕಾರ್ಯನಿರ್ವಹಿಸಿತು. ಇಂದು, ಈ ದೇವಾಲಯವು ʻಯುನೆಸ್ಕೋ ವಿಶ್ವ ಪಾರಂಪರಿಕ ತಾಣʼವಾಗಿ ಸ್ಥಾನ ಪಡೆದಿದೆ. ಇದು ಸಂಕೀರ್ಣ ಶಿಲ್ಪಗಳು, ಚೋಳ ಕಂಚುಗಳು ಮತ್ತು ಪ್ರಾಚೀನ ಶಾಸನಗಳಿಗೆ ಹೆಸರುವಾಸಿಯಾಗಿದೆ.

ʻಆದಿ ತಿರುವಥಿರೈʼ ಉತ್ಸವವು ಶ್ರೀಮಂತ ತಮಿಳು ಶೈವ ಭಕ್ತಿ ಸಂಪ್ರದಾಯವನ್ನು ಆಚರಿಸುತ್ತದೆ.  ತಮಿಳು ಶೈವ ಭಕ್ತಿ ಸಂಪ್ರದಾಯವನ್ನು ಚೋಳರು ಅಪಾರವಾಗಿ ಬೆಂಬಲಿಸಿದರು ಮತ್ತು ತಮಿಳು ಶೈವ ಧರ್ಮದ ಸಂತ-ಕವಿಗಳಾದ 63 ನಾಯನ್ಮಾರ್ಗಳು ಇದನ್ನು ಚಿರಸ್ಥಾಯಿಯಾಗಿಸಿದರು. ವಿಶೇಷವೆಂದರೆ, ರಾಜೇಂದ್ರ ಚೋಳರ ಜನ್ಮ ನಕ್ಷತ್ರವಾದ ʻತಿರುವಥಿರೈʼ (ಆರ್ದ್ರಾ) ಜುಲೈ 23 ರಂದು ಪ್ರಾರಂಭವಾಗಿದ್ದು, ಇದು ಈ ವರ್ಷದ ಆಚರಣೆಗೆ ಮತ್ತಷ್ಟು  ಮಹತ್ವ ನೀಡಿದೆ.

 

 

*****

 


(Release ID: 2149132)