ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮಿಳುನಾಡಿನ ತೂತುಕುಡಿಯಲ್ಲಿ ₹4800 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಕಾರ್ಯಗಳ  ಶಿಲಾನ್ಯಾಸ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿದರು


ಮೂಲಸೌಕರ್ಯ ಮತ್ತು ಇಂಧನವು ಯಾವುದೇ ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿದೆ; ಕಳೆದ 11 ವರ್ಷಗಳಲ್ಲಿ, ಈ ವಲಯಗಳ ಮೇಲಿನ ನಮ್ಮ ಗಮನವು ತಮಿಳುನಾಡಿನ ಅಭಿವೃದ್ಧಿ ನಮಗೆ ಹೊಂದಿರುವ ಹೆಚ್ಚಿನ ಆದ್ಯತೆಯನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

ಇಂದು, ಭಾರತದ ಬೆಳವಣಿಗೆಯಲ್ಲಿ ಜಗತ್ತು ತನ್ನದೇ ಬೆಳವಣಿಗೆಯನ್ನು ಕಾಣುತ್ತದೆ: ಪ್ರಧಾನಮಂತ್ರಿ

ತಮಿಳುನಾಡಿನ ಮೂಲಸೌಕರ್ಯವನ್ನು ಆಧುನೀಕರಿಸಲು ಭಾರತ ಸರ್ಕಾರವು ಕೆಲಸ ಮಾಡುತ್ತಿದೆ; ರಾಜ್ಯದ ಬಂದರು ಮೂಲಸೌಕರ್ಯವನ್ನು ಹೈಟೆಕ್ ಮಾಡುತ್ತಿದ್ದೇವೆ, ಅದೇ ಸಮಯದಲ್ಲಿ ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ರಸ್ತೆಗಳನ್ನು ಸಹ ಸುಗಮ ಸಂಪರ್ಕಕ್ಕಾಗಿ ಸಂಯೋಜಿಸುತ್ತಿದ್ದೇವೆ: ಪ್ರಧಾನಮಂತ್ರಿ

ಇಂದು, ದೇಶಾದ್ಯಂತ ಮೆಗಾ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಬೃಹತ್ ಅಭಿಯಾನ ನಡೆಯುತ್ತಿದೆ: ಪ್ರಧಾನಮಂತ್ರಿ

Posted On: 26 JUL 2025 9:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮಿಳುನಾಡಿನ ತೂತುಕುಡಿಯಲ್ಲಿ ₹4800 ಕೋಟಿಗೂ ಹೆಚ್ಚು ಮೌಲ್ಯದ ದೇಶದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿದರು. ಪ್ರಾದೇಶಿಕ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುವ, ಸಾರಿಗೆ ಸೌಲಭ್ಯದ ದಕ್ಷತೆಯನ್ನು ಹೆಚ್ಚಿಸುವ, ಶುದ್ಧ ಇಂಧನ ಮೂಲಸೌಕರ್ಯವನ್ನು ಬಲಪಡಿಸುವ ಹಾಗು ತಮಿಳುನಾಡಿನಾದ್ಯಂತ ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವ ಬಹು ವಲಯಗಳಲ್ಲಿ ಪ್ರಮುಖವಾದ ಯೋಜನೆಗಳ ಸರಣಿ ಇದಾಗಿದೆ. ಕಾರ್ಗಿಲ್ ವಿಜಯ ದಿವಸದ ಸಂದರ್ಭದಲ್ಲಿ, ಶ್ರೀ ಮೋದಿ ಕಾರ್ಗಿಲ್ ನ  ವೀರ ಸೇನಾನಿಗಳಿಗೆ  ಗೌರವ ಸಲ್ಲಿಸಿದರು ಮತ್ತು ವೀರ ಯೋಧರಿಗೆ ನಮನ ಸಲ್ಲಿಸಿದರು ಮತ್ತು ರಾಷ್ಟ್ರಕ್ಕಾಗಿ  ಬೆಲೆಕಟ್ಟಲಾಗದ ತ್ಯಾಗ ಮಾಡಿದ ಹುತಾತ್ಮರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ನಾಲ್ಕು ದಿನಗಳ ವಿದೇಶಿ ಪ್ರವಾಸದ ನಂತರ ಭಗವಾನ್ ರಾಮೇಶ್ವರನ ಪವಿತ್ರ ಭೂಮಿಗೆ ನೇರವಾಗಿ ತಲುಪಿದ್ದು ತಮ್ಮ ಸೌಭಾಗ್ಯವೆಂದು ಹೇಳಿದರು. ವಿದೇಶ ಪ್ರವಾಸದ ಸಮಯದಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ನಡುವೆ ಸಹಿ ಹಾಕಲಾದ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಎತ್ತಿ ತೋರಿಸಿದರು. ಈ ಬೆಳವಣಿಗೆಯು ಭಾರತದ ಮೇಲೆ ಬೆಳೆಯುತ್ತಿರುವ ಜಾಗತಿಕ ನಂಬಿಕೆ ಮತ್ತು ರಾಷ್ಟ್ರದ ನವೀಕೃತ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಹೇಳಿದ ಶ್ರೀ ಮೋದಿಯವರು, ಈ ವಿಶ್ವಾಸವು ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ತಮಿಳುನಾಡನ್ನು ಸೃಷ್ಟಿಸಲು ಚಾಲನೆ ನೀಡುತ್ತದೆ ಎಂದು ಹೇಳಿದರು. ರಾಮೇಶ್ವರ ಮತ್ತು ತಿರುಚೆಂಡೂರ್ ಮುರುಗನ್ ಅವರ ಆಶೀರ್ವಾದದೊಂದಿಗೆ ಇಂದು ತೂತುಕುಡಿಯಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು. "ತಮಿಳುನಾಡನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಏರಿಸಲು 2014 ರಲ್ಲಿ ಪ್ರಾರಂಭಿಸಲಾದ ಕಾರ್ಯಗಳಿಗೆ ತೂತುಕುಡಿ ಸಾಕ್ಷಿಯಾಗುತ್ತಲೇ ಇದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.

ಫೆಬ್ರವರಿ 2024 ರಲ್ಲಿ ವಿ.ಒ. ಚಿದಂಬರನಾರ್ ಬಂದರಿನಲ್ಲಿ ಔಟರ್ ಹಾರ್ಬರ್ ಕಂಟೇನರ್ ಟರ್ಮಿನಲ್ಗೆ ಅಡಿಪಾಯ ಹಾಕಿದ್ದನ್ನು ನೆನೆದ ಶ್ರೀ ಮೋದಿ, ಆ ಭೇಟಿಯ ಸಮಯದಲ್ಲಿ ನೂರಾರು ಕೋಟಿ ಮೌಲ್ಯದ ಹಲವಾರು ಯೋಜನೆಗಳ ಉದ್ಘಾಟನೆಯ ಬಗ್ಗೆ ಎತ್ತಿ ತೋರಿಸಿದರು. ಸೆಪ್ಟೆಂಬರ್ 2024 ರಲ್ಲಿ ಹೊಸ ತೂತುಕುಡಿ ಅಂತರರಾಷ್ಟ್ರೀಯ ಕಂಟೇನರ್ ಟರ್ಮಿನಲ್ ಅನ್ನು ಸಹ ಉದ್ಘಾಟಿಸಲಾಯಿತು ಎಂದು ಅವರು ಹೇಳಿದರು. ಇಂದು ಮತ್ತೊಮ್ಮೆ ₹4,800 ಕೋಟಿ ಮೌಲ್ಯದ ಯೋಜನೆಗಳನ್ನು ತೂತುಕುಡಿಯಲ್ಲಿ ಪ್ರಾರಂಭಿಸಿ ಉದ್ಘಾಟಿಸಲಾಗಿದೆ ಎಂದು ಅವರು ಹೇಳಿದರು. ಈ ಉಪಕ್ರಮಗಳು ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಬಂದರುಗಳು, ರೈಲ್ವೆಗಳು ಮತ್ತು  ಅತಿಮುಖ್ಯವಾದ ವಿದ್ಯುತ್ ಕ್ಷೇತ್ರದಲ್ಲಿನ  ಪ್ರಗತಿಗಳು ಸೇರಿದಂತೆ ಪ್ರಮುಖ ವಲಯಗಳಲ್ಲಿ ವ್ಯಾಪಿಸಿವೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಈ ಮಹತ್ವದ ಬೆಳವಣಿಗೆಗಳಿಗಾಗಿ ಅವರು ತಮಿಳುನಾಡಿನ ಜನರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

"ಮೂಲಸೌಕರ್ಯ ಮತ್ತು ಇಂಧನವು ಯಾವುದೇ ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ, ಈ ಕ್ಷೇತ್ರಗಳ ಮೇಲಿನ ನಿರಂತರ ಗಮನವು ತಮಿಳುನಾಡಿನ ಪ್ರಗತಿಗೆ ನೀಡಲಾದ ಆದ್ಯತೆಯನ್ನು ತೋರಿಸುತ್ತದೆ " ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇಂದು ಉದ್ಘಾಟನೆಗೊಂಡ ಯೋಜನೆಗಳು ತೂತುಕುಡಿ ಮತ್ತು ತಮಿಳುನಾಡನ್ನು  ಹೆಚ್ಚಿಸಿದ ಸಂಪರ್ಕ, ಶುದ್ಧ ಇಂಧನ ಮತ್ತು ಹೊಸ ಅವಕಾಶಗಳ ಕೇಂದ್ರಗಳಾಗಿ ಪರಿವರ್ತಿಸುತ್ತವೆ ಎಂದು ಅವರು ಹೇಳಿದರು.

ಶ್ರೀ ಮೋದಿ ಅವರು ತಮಿಳುನಾಡು ಮತ್ತು ತೂತುಕುಡಿಯ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಗೌರವ ಸಲ್ಲಿಸುತ್ತಾ, ಸಮೃದ್ಧ ಮತ್ತು ಬಲವಾದ ಭಾರತವನ್ನು ನಿರ್ಮಿಸಲು ಈ ರಾಜ್ಯದ ಸ್ಥಳದ ನಿರಂತರ ಕೊಡುಗೆಯ ಬಗ್ಗೆ ಹೇಳಿದರು. ವಸಾಹತುಶಾಹಿ ಕಾಲದಲ್ಲಿ ಸಮುದ್ರ ವ್ಯಾಪಾರದ ಸಾಮರ್ಥ್ಯವನ್ನು ಮುನ್ನರಿತಿದ್ದ  ಮತ್ತು ಸ್ಥಳೀಯ ಹಡಗು ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಬ್ರಿಟಿಷ್ ಪ್ರಾಬಲ್ಯವನ್ನು ಪ್ರಶ್ನಿಸಿದ ದೂರದೃಷ್ಟಿಯ ಸ್ವಾತಂತ್ರ್ಯ ಹೋರಾಟಗಾರ ಶ್ರೀ ವಿ.ಒ. ಚಿದಂಬರಂ ಪಿಳ್ಳೈ ಅವರನ್ನು ಅವರು ಶ್ಲಾಘಿಸಿದರು. ಧೈರ್ಯ ಮತ್ತು ದೇಶಭಕ್ತಿಯಲ್ಲಿ ಬೇರೂರಿರುವ ಸ್ವತಂತ್ರ ಮತ್ತು ಸಬಲೀಕೃತ ಭಾರತದ ಕನಸನ್ನು ಕಂಡಿದ್ದಕ್ಕಾಗಿ ವೀರಪಾಂಡ್ಯ ಕಟ್ಟಬೊಮ್ಮನ್ ಮತ್ತು ಅಲಗು ಮುತ್ತು ಕೋನ್ ಅವರಂತಹ ದಂತಕಥೆಯ ವ್ಯಕ್ತಿಗಳನ್ನು ಪ್ರಧಾನಮಂತ್ರಿಯವರು ಗೌರವದಿಂದ ನೆನೆದರು. ತೂತುಕುಡಿಯ ಬಳಿಯ ರಾಷ್ಟ್ರಕವಿ ಸುಬ್ರಮಣ್ಯ ಭಾರತಿ ಅವರ ಜನ್ಮಸ್ಥಳವನ್ನು ನೆನಪಿಸಿಕೊಂಡ ಶ್ರೀ ಮೋದಿ, ತೂತುಕುಡಿ ಮತ್ತು ಅವರ ಸ್ವಂತ ಕ್ಷೇತ್ರವಾದ ಕಾಶಿಯ ನಡುವಿನ ಆಳವಾದ ಭಾವನಾತ್ಮಕ ಬಾಂಧವ್ಯವನ್ನು ಎತ್ತಿ ತೋರಿಸಿದರು. ಕಾಶಿ-ತಮಿಳು ಸಂಗಮದಂತಹ ಸಾಂಸ್ಕೃತಿಕ ಉಪಕ್ರಮಗಳು ಭಾರತದ ಒಂದಾಗಿಸುವ ಪರಂಪರೆ ಮತ್ತು ಏಕತೆಯನ್ನು ಬಲಪಡಿಸುತ್ತಲೇ ಇವೆ ಎಂದು ಅವರು ಒತ್ತಿ ಹೇಳಿದರು.

ಕಳೆದ ವರ್ಷ, ತೂತುಕುಡಿಯ ಹೆಸರುವಾಸಿಯಾದ  ಮುತ್ತುಗಳನ್ನು ಶ್ರೀ ಬಿಲ್ ಗೇಟ್ಸ್ ಅವರಿಗೆ ಉಡುಗೊರೆಯಾಗಿ ನೀಡಿದ್ದನ್ನು ನೆನಪಿಸಿಕೊಂಡ ಪ್ರಧಾನಮಂತ್ರಿಯವರು, ಶ್ರೀ ಗೇಟ್ಸ್ ಮುತ್ತುಗಳನ್ನು ಬಹಳವಾಗಿ ಇಷ್ಟಪಟ್ಟರು ಎಂದು ಹೇಳಿದರು. ಈ ಪ್ರದೇಶದ ಪಾಂಡ್ಯ ಮುತ್ತುಗಳನ್ನು ಒಂದು ಕಾಲದಲ್ಲಿ ಪ್ರಪಂಚದಾದ್ಯಂತ ಭಾರತದ ಆರ್ಥಿಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿತ್ತು ಎಂದು ಅವರು ತಿಳಿಸಿದರು.

"ಭಾರತವು ತನ್ನ ನಿರಂತರ ಪ್ರಯತ್ನಗಳ ಮೂಲಕ ಅಭಿವೃದ್ಧಿ ಹೊಂದಿದ ತಮಿಳುನಾಡು ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಮುನ್ನಡೆಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು, ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ನಡುವೆ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.) ಈ  ದೃಷ್ಟಿಕೋನಕ್ಕೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ಹೇಳಿದರು. "ಭಾರತದ ಪ್ರಗತಿಯಲ್ಲಿ ಜಗತ್ತು ಈಗ ತನ್ನದೇ ಬೆಳವಣಿಗೆಯನ್ನು ಕಾಣುತ್ತಿದೆ " ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಎಫ್.ಟಿ.ಎ. ಭಾರತದ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ದೇಶದ ಪ್ರಯಾಣವನ್ನು ವೇಗಗೊಳಿಸುತ್ತದೆ.

ಮುಕ್ತ ವ್ಯಾಪಾರ ಒಪ್ಪಂದದ ನಂತರ, ಯು.ಕೆ.ಯಲ್ಲಿ ಮಾರಾಟವಾಗುವ ಭಾರತೀಯ ಉತ್ಪನ್ನಗಳಲ್ಲಿ ಶೇಕಡ 99 ರಷ್ಟು ತೆರಿಗೆ ಮುಕ್ತವಾಗಿರುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಯು.ಕೆ.ಯಲ್ಲಿ ಭಾರತೀಯ ಸರಕುಗಳು ಹೆಚ್ಚು ಕೈಗೆಟುಕುವಂತಾಗುತ್ತಿದ್ದಂತೆ, ಬೇಡಿಕೆ ಹೆಚ್ಚಾಗುತ್ತದೆ, ಇದು ಭಾರತದಲ್ಲಿ ಹೆಚ್ಚಿನ ಉತ್ಪಾದನಾ ಅವಕಾಶಗಳಿಗೆ ಕಾರಣವಾಗುತ್ತದೆ ಎಂದು ಅವರು ಒತ್ತಿ ಹೇಳಿದರು. ಭಾರತ-ಯುಕೆ ಎಫ್.ಟಿ.ಎ. ತಮಿಳುನಾಡಿನ ಯುವಜನರು, ಸಣ್ಣ ಕೈಗಾರಿಕೆಗಳು, ಎಂ.ಎಸ್.ಎಂ.ಇ.ಗಳು ಮತ್ತು ನವೋದ್ಯಮಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಒಪ್ಪಂದವು ಕೈಗಾರಿಕೆ, ಮೀನುಗಾರಿಕಾ ಸಮುದಾಯ ಹಾಗು ಸಂಶೋಧನೆ ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳನ್ನು ಬೆಂಬಲಿಸುತ್ತದೆ ಮತ್ತು ವಿಶಾಲವಾದ ಲಾಭಗಳನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಸರ್ಕಾರವು ʻಮೇಕ್ ಇನ್ ಇಂಡಿಯಾʼ ಮತ್ತು ʻಮಿಷನ್ ಮ್ಯಾನುಫ್ಯಾಕ್ಚರಿಂಗ್ʼಗೆ ಬಲವಾದ ಒತ್ತು ನೀಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಪರೇಷನ್ ಸಿಂದೂರ್ ಸಮಯದಲ್ಲಿ, ಮೇಕ್ ಇನ್ ಇಂಡಿಯಾದ ಬಲವನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ ಎಂದು ಒತ್ತಿ ಹೇಳಿದರು. ಸ್ವದೇಶದಲ್ಲಿ  ತಯಾರಿಸಿದ ಶಸ್ತ್ರಾಸ್ತ್ರಗಳು ಭಯೋತ್ಪಾದಕ ಭದ್ರಕೋಟೆಗಳನ್ನು ತಟಸ್ಥಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಅವರು ಹೇಳಿದರು. ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಭಯೋತ್ಪಾದನೆಯ ಮಾಸ್ಟರ್ ಮೈಂಡ್ ಗಳ  ನಿದ್ದೆಗೆಡಿಸುತ್ತಲೇ  ಇವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ತಮಿಳುನಾಡಿನ ಮೂಲಸೌಕರ್ಯವನ್ನು ಆಧುನೀಕರಿಸುವ ಮೂಲಕ ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಬದ್ಧತೆಯನ್ನು ದೃಢಪಡಿಸಿದ ಶ್ರೀ ಮೋದಿಯವರು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಬಂದರು ಸೌಲಭ್ಯಗಳನ್ನು ನವೀಕರಿಸಲು ಗಮನಾರ್ಹ ಹೆಜ್ಜೆಗಳನ್ನು ಇಡಲಾಗುತ್ತಿದೆ ಎಂದು ಹೇಳಿದರು. ಜೊತೆಯಲ್ಲಿ, ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ರೈಲ್ವೆಗಳನ್ನು ಸಂಯೋಜಿಸಲು ಪ್ರಯತ್ನಗಳು ನಡೆಯುತ್ತಿವೆ, ಇದು ರಾಜ್ಯದಾದ್ಯಂತ ತಡೆರಹಿತ ಸಂಪರ್ಕವನ್ನು ಹೆಚ್ಚಿಸುತ್ತದೆ. ತೂತುಕುಡಿ ವಿಮಾನ ನಿಲ್ದಾಣದಲ್ಲಿ ಹೊಸ ಸುಧಾರಿತ ಟರ್ಮಿನಲ್ ಉದ್ಘಾಟನೆಯು ಈ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ₹450 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಟರ್ಮಿನಲ್ ಈಗ ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಹಿಂದಿನ ಸಾಮರ್ಥ್ಯ ಕೇವಲ 3 ಲಕ್ಷ ಪ್ರಯಾಣಿಕರಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಹೊಸದಾಗಿ ಉದ್ಘಾಟನೆಗೊಂಡ ಟರ್ಮಿನಲ್ ಭಾರತದಾದ್ಯಂತ ಅನೇಕ ಸ್ಥಳಗಳಿಗೆ ತೂತುಕುಡಿಯ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಿದ ಶ್ರೀ ಮೋದಿ, ಈ ಅಭಿವೃದ್ಧಿಯು ತಮಿಳುನಾಡಿನಾದ್ಯಂತ ಕಾರ್ಪೊರೇಟ್ ಪ್ರಯಾಣ, ಶೈಕ್ಷಣಿಕ ಕೇಂದ್ರಗಳು ಮತ್ತು ಆರೋಗ್ಯ ಮೂಲಸೌಕರ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಎತ್ತಿ ತೋರಿಸಿದರು. ಹೆಚ್ಚುವರಿಯಾಗಿ, ಈ ಸುಧಾರಿತ  ಸುಲಭಲಭ್ಯತೆಯ ಮೂಲಕ ಈ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವು ಹೊಸ ವೇಗವನ್ನು ಪಡೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ತಮಿಳುನಾಡಿನ ಎರಡು ಪ್ರಮುಖ ರಸ್ತೆ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಿಸುವುದಾಗಿ ಪ್ರಧಾನಮಂತ್ರಿಯವರು ಘೋಷಿಸಿದರು. ಸುಮಾರು ₹2,500 ಕೋಟಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಈ ರಸ್ತೆಗಳನ್ನು ಎರಡು ಪ್ರಮುಖ ಅಭಿವೃದ್ಧಿ ವಲಯಗಳನ್ನು ಚೆನ್ನೈನೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ.  ಹೆಚ್ಚಿಸಿದ ರಸ್ತೆ ಮೂಲಸೌಕರ್ಯವು ನದಿ ಮುಖಜ ಭೂಮಿ ಜಿಲ್ಲೆಗಳು ಮತ್ತು ರಾಜ್ಯ ರಾಜಧಾನಿಯ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಿದೆ, ಇದು ಹೆಚ್ಚಿನ ಆರ್ಥಿಕ ಏಕೀಕರಣ ಮತ್ತು ಸುಲಭಲಭ್ಯತೆಗೆ  ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ರಸ್ತೆ ಯೋಜನೆಗಳು ತೂತುಕುಡಿ ಬಂದರಿಗೆ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿವೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಬೆಳವಣಿಗೆಗಳು ಪ್ರದೇಶದಾದ್ಯಂತ ನಿವಾಸಿಗಳ ಜೀವನ ಸುಲಭತೆಯನ್ನು ಹೆಚ್ಚಿಸುವ ಹಾಗು ವ್ಯಾಪಾರ ಮತ್ತು ಉದ್ಯೋಗಕ್ಕೆ ಹೊಸ ಮಾರ್ಗಗಳನ್ನು ತೆರೆಯುವ ನಿರೀಕ್ಷೆಯಿದೆ ಎಂದು ಹೇಳಿದರು.

ಒಕ್ಕೂಟ ಸರ್ಕಾರವು ರೈಲ್ವೆ ಜಾಲವನ್ನು ಕೈಗಾರಿಕಾ ಬೆಳವಣಿಗೆ ಮತ್ತು ಆತ್ಮನಿರ್ಭರ ಭಾರತದ ಜೀವನಾಡಿಯಾಗಿ ಪರಿಗಣಿಸುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತದ ರೈಲ್ವೆ ಮೂಲಸೌಕರ್ಯವು ಆಧುನೀಕರಣದ ಪರಿವರ್ತನಾ ಹಂತವನ್ನು ಪ್ರವೇಶಿಸಿದ್ದು, ತಮಿಳುನಾಡು ಈ ಅಭಿಯಾನದ ಕೇಂದ್ರವಾಗಿ ಹೊರಹೊಮ್ಮುತ್ತಿದೆ, ಅಮೃತ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ, ತಮಿಳುನಾಡಿನಾದ್ಯಂತ ಎಪ್ಪತ್ತೇಳು ನಿಲ್ದಾಣಗಳು ಸಮಗ್ರ ಪುನರಾಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು. ಆಧುನಿಕ ವಂದೇ ಭಾರತ್ ರೈಲುಗಳು ಈಗ ತಮಿಳುನಾಡಿನ ನಾಗರಿಕರಿಗೆ ಹೊಸ ಪ್ರಯಾಣದ ಅನುಭವವನ್ನು ಒದಗಿಸುತ್ತಿವೆ. ಭಾರತದ ಮೊದಲ ಲಂಬ ಲಿಫ್ಟ್ ರೈಲು ಸೇತುವೆಯಾದ  ಪಂಬನ್ ಸೇತುವೆಯನ್ನು ತಮಿಳುನಾಡಿನಲ್ಲಿ ನಿರ್ಮಿಸಲಾಗಿದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು, ಇದು ಈ ಪ್ರದೇಶದಲ್ಲಿ ವ್ಯಾಪಾರ ಮಾಡುವ ಸುಲಭತೆ ಮತ್ತು ಪ್ರಯಾಣದ ಸುಲಭತೆ ಎರಡನ್ನೂ ಸುಧಾರಿಸಿದ ವಿಶಿಷ್ಟ ತಂತ್ರಜ್ಞಾನದ   ಸಾಧನೆಯಾಗಿದೆ.
 
"ದೇಶದಾದ್ಯಂತ ಮೆಗಾ ಮತ್ತು ಆಧುನಿಕ ಮೂಲಸೌಕರ್ಯವನ್ನು ನಿರ್ಮಿಸುವ ಪರಿವರ್ತನಾ ಅಭಿಯಾನವು ಭಾರತದಲ್ಲಿ ನಡೆಯುತ್ತಿದೆ " ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಚೆನಾಬ್ ಸೇತುವೆಯನ್ನು ಅವರು ಎಂಜಿನಿಯರಿಂಗ್ ಅದ್ಭುತ ಎಂದು ಬಣ್ಣಿಸಿದರು, ಇದು ಮೊದಲ ಬಾರಿಗೆ ಜಮ್ಮು ಮತ್ತು ಶ್ರೀನಗರವನ್ನು ರೈಲುಮಾರ್ಗದ ಮೂಲಕ ಸಂಪರ್ಕಿಸಿದೆ ಎಂದು ಹೇಳಿದರು. ಇದರ ಜೊತೆಗೆ, ಭಾರತವು ದೇಶದ ಅತಿ ಉದ್ದದ ಸಮುದ್ರ ಸೇತುವೆ  ಅಟಲ್ ಸೇತು, ಅಸ್ಸಾಂನ ಬೋಗಿಬೀಲ್ ಸೇತುವೆ ಮತ್ತು ಆರು ಕಿಲೋಮೀಟರ್ಗಳಿಗಿಂತ ಹೆಚ್ಚು ಉದ್ದವಾದ ಸೋನಾಮಾರ್ಗ್ ಸುರಂಗದಂತಹ ಹಲವಾರು ಮಹತ್ವದ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಶ್ರೀ ಮೋದಿ ವಿವರಿಸಿದರು. ಈ ಉಪಕ್ರಮಗಳು, ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ದೇಶಾದ್ಯಂತ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ ಎಂದು ಅವರು ಹೇಳಿದರು.

ತಮಿಳುನಾಡಿನಲ್ಲಿ ಹೊಸದಾಗಿ ಸಮರ್ಪಿತವಾದ ರೈಲ್ವೆ ಯೋಜನೆಗಳು ರಾಜ್ಯದ ದಕ್ಷಿಣ ಪ್ರದೇಶದಾದ್ಯಂತ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಮಧುರೈ-ಬೋಡಿನಾಯಕನೂರು ರೈಲು ಮಾರ್ಗದ ವಿದ್ಯುದೀಕರಣದೊಂದಿಗೆ, ಈ ಪ್ರದೇಶದಲ್ಲಿ ವಂದೇ ಭಾರತ್ ನಂತಹ ಆಧುನಿಕ ರೈಲುಗಳ ಕಾರ್ಯಾಚರಣೆಗೆ ಮಾರ್ಗವು ಈಗ ಮುಕ್ತವಾಗಿದೆ ಎಂದು ಅವರು ಹೇಳಿದರು. "ಈ ರೈಲ್ವೆ ಉಪಕ್ರಮಗಳು ತಮಿಳುನಾಡಿನ ಪ್ರಗತಿಯ ವೇಗವನ್ನು ಹೆಚ್ಚಿಸಲು ಮತ್ತು ಅದರ ಅಭಿವೃದ್ಧಿಯ ಪ್ರಮಾಣವನ್ನು ನವೀಕೃತ ವೇಗದೊಂದಿಗೆ ವಿಸ್ತರಿಸಲು ಸಜ್ಜಾಗಿವೆ" ಎಂದು ಶ್ರೀ ಮೋದಿ ಹೇಳಿದರು.

ತಮಿಳುನಾಡಿನ 2,000 ಮೆಗಾವ್ಯಾಟ್ ಕೂಡಂಕುಳಂ ಪರಮಾಣು ವಿದ್ಯುತ್ ಯೋಜನೆಗೆ ಸಂಬಂಧಿಸಿದ ಪ್ರಮುಖ ಪ್ರಸರಣ ಯೋಜನೆಗೆ ಪ್ರಧಾನಮಂತ್ರಿಯವರು ಅಡಿಪಾಯ ಹಾಕಿದರು. ₹550 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ ಈ ಘಟಕವು ಮುಂದಿನ ವರ್ಷಗಳಲ್ಲಿ ಶುದ್ಧ ಇಂಧನವನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಈ ಇಂಧನ ಉಪಕ್ರಮವು ಭಾರತದ ಜಾಗತಿಕ ಇಂಧನ ಗುರಿಗಳು ಮತ್ತು ಪರಿಸರ ಬದ್ಧತೆಗಳಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಹೆಚ್ಚಿದ ವಿದ್ಯುತ್ ಉತ್ಪಾದನೆಯೊಂದಿಗೆ, ತಮಿಳುನಾಡಿನ ಕೈಗಾರಿಕಾ ವಲಯಗಳು ಮತ್ತು ದೇಶದ  ಬಳಕೆದಾರರು ಸುಧಾರಿತ ಇಂಧನ ಲಭ್ಯತೆಯಿಂದ ಗಣನೀಯ ಪ್ರಯೋಜನಗಳನ್ನು ಪಡೆಯುತ್ತಾರೆ.

ತಮಿಳುನಾಡಿನಲ್ಲಿ ಪ್ರಧಾನ ಮಂತ್ರಿ ʻಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆʼಯ ತ್ವರಿತ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಮೋದಿ, ಈ ಯೋಜನೆಯಡಿ ಸರ್ಕಾರವು ಈಗಾಗಲೇ ಸುಮಾರು ಒಂದು ಲಕ್ಷ ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಹೇಳಿದರು. ಇಲ್ಲಿಯವರೆಗೆ ನಲವತ್ತು ಸಾವಿರಕ್ಕೂ ಹೆಚ್ಚು ಸೌರ ಮೇಲ್ಛಾವಣಿ ಅಳವಡಿಕೆಗಳು ಪೂರ್ಣಗೊಂಡಿವೆ ಎಂದು ಅವರು ಎತ್ತಿ ತೋರಿಸಿದರು. ಈ ಯೋಜನೆಯು ಉಚಿತ ಮತ್ತು ಶುದ್ಧ ವಿದ್ಯುತ್ ಅನ್ನು ಒದಗಿಸುವುದಲ್ಲದೆ, ಸಾವಿರಾರು ಹಸಿರು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ತಮಿಳುನಾಡಿನ ಅಭಿವೃದ್ಧಿ ಮತ್ತು ಅಭಿವೃದ್ಧಿ ಹೊಂದಿದ ತಮಿಳುನಾಡಿನ ದೃಷ್ಟಿಕೋನವು ಕೇಂದ್ರ ಸರ್ಕಾರದ ಪ್ರಮುಖ ಬದ್ಧತೆಯಾಗಿ ಉಳಿದಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ತಮಿಳುನಾಡಿನ ಬೆಳವಣಿಗೆಗೆ ಸಂಬಂಧಿಸಿದ ನೀತಿಗಳಿಗೆ ನಿರಂತರವಾಗಿ ಉನ್ನತ ಆದ್ಯತೆ ನೀಡಲಾಗಿದೆ ಎಂದು ಒತ್ತಿ ಹೇಳಿದರು. ಕಳೆದ ದಶಕದಲ್ಲಿ, ಕೇಂದ್ರ ಸರ್ಕಾರವು ತಮಿಳುನಾಡಿಗೆ ₹3 ಲಕ್ಷ ಕೋಟಿ ಹಣವನ್ನು ವಿಕೇಂದ್ರೀಕರಣದ ಮೂಲಕ ವರ್ಗಾಯಿಸಿದೆ, ಈ ಮೊತ್ತವು ಹಿಂದಿನ ಸರ್ಕಾರವು ವಿತರಿಸಿದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಎಂದು ಅವರು ಒತ್ತಿ ಹೇಳಿದರು. ಈ ಹನ್ನೊಂದು ವರ್ಷಗಳಲ್ಲಿ ತಮಿಳುನಾಡು ಹನ್ನೊಂದು ಹೊಸ ವೈದ್ಯಕೀಯ ಕಾಲೇಜುಗಳನ್ನು ಪಡೆದುಕೊಂಡಿದೆ ಎಂದು ಶ್ರೀ ಮೋದಿ ಹೇಳಿದರು. ಮೊದಲ ಬಾರಿಗೆ, ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿರುವ ಸಮುದಾಯಗಳಿಗೆ ಸರ್ಕಾರವು ಅಂತಹ ವಿಶೇಷ ಕಾಳಜಿಯನ್ನು ತೋರಿಸಿದೆ ಎಂದು ಅವರು ಹೇಳಿದರು. ನೀಲಿ ಕ್ರಾಂತಿಯ ಮೂಲಕ, ಸರ್ಕಾರವು ಕರಾವಳಿ ಆರ್ಥಿಕತೆಯನ್ನು ವಿಸ್ತರಿಸುತ್ತಿದೆ, ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತಿದೆ ಎಂದು ಅವರು ದೃಢಪಡಿಸಿದರು.

"ತೂತುಕುಡಿಯು ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯದ ಉದಯಕ್ಕೆ ಸಾಕ್ಷಿಯಾಗುತ್ತಿದೆ" ಎಂದು ಶ್ರೀ ಮೋದಿಯವರು ಹೇಳಿದರು, ಸಂಪರ್ಕ, ವಿದ್ಯುತ್ ಪ್ರಸರಣ ಮತ್ತು ಮೂಲಸೌಕರ್ಯದಲ್ಲಿನ ಉಪಕ್ರಮಗಳು ಅಭಿವೃದ್ಧಿ ಹೊಂದಿದ ತಮಿಳುನಾಡು ಮತ್ತು ಅಭಿವೃದ್ಧಿ ಹೊಂದಿದ ಭಾರತಕ್ಕೆ ಬಲವಾದ ಅಡಿಪಾಯವನ್ನು ಹಾಕುತ್ತಿವೆ ಎಂದು ಒತ್ತಿ ಹೇಳಿದರು. ಈ ಪರಿವರ್ತನಾತ್ಮಕ ಯೋಜನೆಗಳಿಗಾಗಿ ತಮಿಳುನಾಡಿನ ಎಲ್ಲಾ ಜನರಿಗೆ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಆರ್. ಎನ್ ರವಿ, ಕೇಂದ್ರ ಸಚಿವರಾದ ಶ್ರೀ ರಾಮಮೋಹನ್ ನಾಯ್ಡು ಕಿಂಜರಪು, ಡಾ. ಎಲ್ ಮುರುಗನ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವಿಶ್ವ ದರ್ಜೆಯ ವಾಯು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮತ್ತು ಸಂಪರ್ಕವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ದಕ್ಷಿಣ ಪ್ರದೇಶದ ಹೆಚ್ಚುತ್ತಿರುವ ವಾಯುಯಾನ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ, ಸುಮಾರು ₹450 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ತೂತುಕುಡಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ಪ್ರಧಾನಮಂತ್ರಿಯವರು ವೀಕ್ಷಿಸಿದರು.

17,340 ಚದರ ಮೀಟರ್ಗಳಷ್ಟು ವಿಸ್ತೀರ್ಣದಲ್ಲಿರುವ ಈ ಟರ್ಮಿನಲ್, ಪೀಕ್ ಅವರ್ ನಲ್ಲಿ 1,350 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಲು ಸಜ್ಜುಗೊಳಿಸಲಾಗುವುದು, ಭವಿಷ್ಯದಲ್ಲಿ 1,800 ಪೀಕ್ ಅವರ್ ಪ್ರಯಾಣಿಕರು ಮತ್ತು ವಾರ್ಷಿಕವಾಗಿ 25 ಲಕ್ಷ ಪ್ರಯಾಣಿಕರನ್ನು ತಲುಪುವವರೆಗೆ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. 100% ಎಲ್ಇಡಿ ದೀಪಗಳು, ಇಂಧನ-ಸಮರ್ಥ ಇ ಮತ್ತು ಎಂ ವ್ಯವಸ್ಥೆಗಳು ಮತ್ತು ಆನ್ ಸೈಟ್ ಒಳಚರಂಡಿ ಸಂಸ್ಕರಣಾ ಘಟಕದ ಮೂಲಕ ಸಂಸ್ಕರಿಸಿದ ನೀರಿನ ಮರುಬಳಕೆಯೊಂದಿಗೆ, ಟರ್ಮಿನಲ್ ಅನ್ನು ಜಿ.ಆರ್.ಐ.ಎಚ್.ಎ-4 ಸುಸ್ಥಿರತೆಯ ರೇಟಿಂಗ್ ಸಾಧಿಸಲು ನಿರ್ಮಿಸಲಾಗಿದೆ. ಈ ಆಧುನಿಕ ಮೂಲಸೌಕರ್ಯವು ಪ್ರಾದೇಶಿಕ ವಾಯು ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ದಕ್ಷಿಣ ತಮಿಳುನಾಡಿನಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ರಸ್ತೆ ಮೂಲಸೌಕರ್ಯ ವಲಯದಲ್ಲಿ, ಪ್ರಧಾನ ಮಂತ್ರಿಗಳು ಎರಡು ಕಾರ್ಯತಂತ್ರದ ಮಹತ್ವದ ಹೆದ್ದಾರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಮೊದಲನೆಯದು ವಿಕ್ರವಂಡಿ-ತಂಜಾವೂರು ಕಾರಿಡಾರ್ ಅಡಿಯಲ್ಲಿ ₹2,350 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಎನ್.ಎಚ್. -36 ರ 4-ಲೇನ್ (ಚತುಷ್ಪಥ), 50 ಕಿ.ಮೀ ಸೇಥಿಯಾಥೋಪೆ-ಚೋಳಪುರಂ ಮಾರ್ಗದ ಇದು ಮೂರು ಬೈಪಾಸ್ಗಳು, ಕೊಲ್ಲಿಡಮ್ ನದಿಯ ಮೇಲೆ 1 ಕಿ.ಮೀ 4-ಲೇನಿಂಗ್ (ಚತುಷ್ಪಥ),ಸೇತುವೆ, ನಾಲ್ಕು ಪ್ರಮುಖ ಸೇತುವೆಗಳು, ಏಳು ಫ್ಲೈಓವರ್ ಗಳು ಮತ್ತು ಹಲವಾರು ಅಂಡರ್ ಪಾಸ್ ಗಳನ್ನು ಒಳಗೊಂಡಿದೆ, ಇದು ಸೇಥಿಯಾಥೋಪೆ-ಚೋಳಪುರಂ ನಡುವಿನ ಪ್ರಯಾಣದ ಸಮಯವನ್ನು 45 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ ಮತ್ತು ನದಿ ಮುಖಜ ಪ್ರದೇಶದ ಸಾಂಸ್ಕೃತಿಕ ಮತ್ತು ಕೃಷಿ ಕೇಂದ್ರಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ. ಎರಡನೆಯ ಯೋಜನೆಯು ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 5.16 ಕಿ.ಮೀ ಎನ್.ಎಚ್. -138 ತೂತುಕುಡಿ ಬಂದರು ರಸ್ತೆಯ 6-ಲೇನಿಂಗ್ ಆಗಿದೆ.  ಇದು ಅಂಡರ್ ಪಾಸ್ ಗಳು ಮತ್ತು ಸೇತುವೆಗಳನ್ನು ಒಳಗೊಂಡಿದ್ದು ಸರಕು ಸಾಗಾಣಿಕೆಯನ್ನು ಸರಾಗಗೊಳಿಸುತ್ತದೆ, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿತಗೊಳಿಸುತ್ತದೆ ಮತ್ತು ವಿ.ಒ. ಚಿದಂಬರನಾರ್ ಬಂದರಿನ ಸುತ್ತಲೂ ಬಂದರು ಮೂಲದ ಕೈಗಾರಿಕಾ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಬಂದರು ಮೂಲಸೌಕರ್ಯ ಮತ್ತು ಶುದ್ಧ ಇಂಧನ ಉಪಕ್ರಮಗಳನ್ನು ವೃದ್ಧಿಸುವ ಪ್ರಮುಖ ಪ್ರಯತ್ನವಾಗಿ, ಪ್ರಧಾನಮಂತ್ರಿಯವರು ವಿ.ಒ. ಚಿದಂಬರನಾರ್ ಬಂದರಿನಲ್ಲಿ ಸುಮಾರು ₹285 ಕೋಟಿ ಮೌಲ್ಯದ 6.96 ಎಂ.ಎಂ.ಟಿ.ಪಿ.ಎ. ಸರಕು ನಿರ್ವಹಣಾ ಸಾಮರ್ಥ್ಯದೊಂದಿಗೆ ಉತ್ತರ ಸರಕು ಬರ್ತ್ -3 ಅನ್ನು ಉದ್ಘಾಟಿಸಿದರು. ಇದು ಈ ಪ್ರದೇಶದಲ್ಲಿ ಒಣ ಬೃಹತ್ ಸರಕು ಅಗತ್ಯಗಳನ್ನು ನಿರ್ವಹಿಸುವ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಒಟ್ಟಾರೆ ಬಂದರು ದಕ್ಷತೆಯನ್ನು ಸುಧಾರಿಸುತ್ತದೆ ಹಾಗು  ಸರಕು ನಿರ್ವಹಣಾ ಸಾರಿಗೆ ಸೌಲಭ್ಯವನ್ನು ಉತ್ತಮಗೊಳಿಸುತ್ತದೆ.

ದಕ್ಷಿಣ ತಮಿಳುನಾಡಿನಲ್ಲಿ ಸುಸ್ಥಿರ ಮತ್ತು ಪರಿಣಾಮಕಾರಿ ಸಂಪರ್ಕವನ್ನು ಹೆಚ್ಚಿಸಲು ಪ್ರಧಾನಮಂತ್ರಿಯವರು ಮೂರು ಪ್ರಮುಖ ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. 90 ಕಿ.ಮೀ. ಮಧುರೈ-ಬೋಡಿನಾಯಕನೂರು ಮಾರ್ಗದ ವಿದ್ಯುದೀಕರಣವು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುತ್ತದೆ ಮತ್ತು ಮಧುರೈ ಮತ್ತು ಥೇಣಿಯಲ್ಲಿ ಪ್ರವಾಸೋದ್ಯಮ ಮತ್ತು ಪ್ರಯಾಣವನ್ನು ಬೆಂಬಲಿಸುತ್ತದೆ. ತಿರುವನಂತಪುರಂ-ಕನ್ಯಾಕುಮಾರಿ ಯೋಜನೆಯ ಭಾಗವಾಗಿರುವ ₹650 ಕೋಟಿ ವೆಚ್ಚದ 21 ಕಿ.ಮೀ. ನಾಗರಕೋಯಿಲ್ ಪಟ್ಟಣ-ಕನ್ಯಾಕುಮಾರಿ ವಿಭಾಗದ ದ್ವಿಗುಣಗೊಳಿಸುವಿಕೆಯು ತಮಿಳುನಾಡು ಮತ್ತು ಕೇರಳದ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಹೆಚ್ಚುವರಿಯಾಗಿ, ಅರಲ್ವಾಯ್ಮೋಳಿ-ನಾಗರಕೋಯಿಲ್ ಜಂಕ್ಷನ್ (12.87 ಕಿ.ಮೀ) ಮತ್ತು ತಿರುನಲ್ವೇಲಿ-ಮೇಲಪ್ಪಳಯಂ (3.6 ಕಿ.ಮೀ) ವಿಭಾಗಗಳ ದ್ವಿಗುಣಗೊಳಿಸುವಿಕೆಯು ಚೆನ್ನೈ-ಕನ್ಯಾಕುಮಾರಿಯಂತಹ ಪ್ರಮುಖ ದಕ್ಷಿಣ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಹಾಗು  ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಪ್ರಾದೇಶಿಕ ಆರ್ಥಿಕತೆಯನ್ನು ಹೆಚ್ಚಿಸುತ್ತದೆ.

ರಾಜ್ಯದ ವಿದ್ಯುತ್ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಪ್ರಮುಖ ವಿದ್ಯುತ್ ಪ್ರಸರಣ ಯೋಜನೆ  ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಘಟಕ 3 ಮತ್ತು 4 (2x1000 ಮೆ.ವ್ಯಾ) ನಿಂದ ವಿದ್ಯುತ್ ಸ್ಥಳಾಂತರಿಸಲು ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ(ಐ.ಎಸ್.ಟಿ.ಎಸ್.) ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಸುಮಾರು ₹550 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಕೂಡಂಕುಳಂನಿಂದ ತೂತುಕುಡಿ-II ಜಿ.ಐ.ಎಸ್. ಸಬ್ಸ್ಟೇಷನ್ಗೆ 400 ಕ್ವಾಡ್ ಡಬಲ್-ಸರ್ಕ್ಯೂಟ್ ಪ್ರಸರಣ ಮಾರ್ಗ ಮತ್ತು ಸಂಬಂಧಿತ ಟರ್ಮಿನಲ್ ಉಪಕರಣಗಳನ್ನು ಒಳಗೊಂಡಿರುತ್ತದೆ. ಇದು ರಾಷ್ಟ್ರೀಯ ಗ್ರಿಡ್ ಅನ್ನು ಬಲಪಡಿಸುವಲ್ಲಿ, ವಿಶ್ವಾಸಾರ್ಹ ಶುದ್ಧ ಇಂಧನ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಹಾಗು ತಮಿಳುನಾಡು ಮತ್ತು ಇತರ ಫಲಾನುಭವಿ ರಾಜ್ಯಗಳ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

 

*****

 


(Release ID: 2148987)