ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬಿಹಾರದ ಮೋತಿಹಾರಿಯಲ್ಲಿ 7,000 ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 


ಭಾರತದಲ್ಲಿ ಈಗ ನಮ್ಮ ಪೂರ್ವ ರಾಜ್ಯಗಳ ಯುಗ ನಡೆಯುತ್ತಿದೆ: ಪ್ರಧಾನಮಂತ್ರಿ

ದೇಶವನ್ನು ನಕ್ಸಲಿಸಂನಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು ನಮ್ಮ ಸಂಕಲ್ಪ: ಪ್ರಧಾನಮಂತ್ರಿ

ಹಿಂದುಳಿದವರು ನಮ್ಮ ಆದ್ಯತೆಯಾಗಿದ್ದಾರೆ; ʻಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆʼಗೆ ಸಚಿವ ಸಂಪುಟ ಅನುಮೋದನೆ ನೀಡಿದೆ, ಇದರ ಅಡಿಯಲ್ಲಿ ಕೃಷಿಗೆ ಸಂಬಂಧಿಸಿದಂತೆ 100 ಅತ್ಯಂತ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಲಾಗುವುದು: ಪ್ರಧಾನಮಂತ್ರಿ

Posted On: 18 JUL 2025 2:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬಿಹಾರದ ಮೋತಿಹಾರಿಯಲ್ಲಿ 7,000 ಕೋಟಿ ರೂ.ಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು ಮತ್ತು ಅವುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪವಿತ್ರ ಸಾವನ್ (ಶ್ರಾವಣ) ಮಾಸದಲ್ಲಿ ಬಾಬಾ ಸೋಮೇಶ್ವರನಾಥನ ಪಾದಗಳಿಗೆ ನಮಸ್ಕರಿಸಿದ ಪ್ರಧಾನಮಂತ್ರಿಯವರು, ಬಿಹಾರದ ಎಲ್ಲ ನಿವಾಸಿಗಳ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು. ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ, ಇದು ಚಂಪಾರಣ್ಯದ ಭೂಮಿ, ಇದು ಇತಿಹಾಸವನ್ನು ರೂಪಿಸಿದ ಭೂಮಿಯಾಗಿದೆ ಎಂದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಈ ಭೂಮಿ ಮಹಾತ್ಮ ಗಾಂಧಿಗೆ ಹೊಸ ದಿಕ್ಕನ್ನು ನೀಡಿತು. ಈ ಭೂಮಿಯಿಂದ ಪಡೆದ ಸ್ಫೂರ್ತಿ ಈಗ ಬಿಹಾರದ ಹೊಸ ಭವಿಷ್ಯವನ್ನು ರೂಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಅಭಿವೃದ್ಧಿ ಉಪಕ್ರಮಗಳಿಗಾಗಿ ಹಾಜರಿದ್ದ ಎಲ್ಲರಿಗೂ ಮತ್ತು ಬಿಹಾರದ ಜನರಿಗೆ ಅವರು ಅಭಿನಂದನೆ ಸಲ್ಲಿಸಿದರು.

21ನೇ ಶತಮಾನವು ತ್ವರಿತ ಜಾಗತಿಕ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ ಶ್ರೀ ಮೋದಿ ಅವರು, ಒಂದು ಕಾಲದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮಾತ್ರ ಹೊಂದಿದ್ದ ಪ್ರಾಬಲ್ಯವನ್ನು ಈಗ ಪೂರ್ವ ದೇಶಗಳೂ ಹೆಚ್ಚಾಗಿ ಹಂಚಿಕೊಳ್ಳುತ್ತಿವೆ, ಅವುಗಳ ಭಾಗವಹಿಸುವಿಕೆ ಮತ್ತು ಪ್ರಭಾವ ಹೆಚ್ಚುತ್ತಿದೆ ಎಂದು ಹೇಳಿದರು. ಪೂರ್ವ ರಾಷ್ಟ್ರಗಳು ಈಗ ಅಭಿವೃದ್ಧಿಯಲ್ಲಿ ಹೊಸ ವೇಗವನ್ನು ಪಡೆಯುತ್ತಿವೆ ಎಂದು ಅವರು ಒತ್ತಿ ಹೇಳಿದರು. ಪೂರ್ವ ದೇಶಗಳು ಜಾಗತಿಕವಾಗಿ ಪ್ರಗತಿ ಹೊಂದುತ್ತಿರುವ ಈ ಹೊತ್ತಿನಲ್ಲಿ, ಭಾರತದಲ್ಲೂ ಪೂರ್ವ ರಾಜ್ಯಗಳ ಯುಗ ನಡೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ಹೋಲಿಕೆ ಮಾಡಿದರು. ಮುಂಬರುವ ದಿನಗಳಲ್ಲಿ ಪೂರ್ವದ ಮೋತಿಹಾರಿಯು ಪಶ್ಚಿಮದಲ್ಲಿ ಮುಂಬೈನಷ್ಟೇ ಪ್ರಾಮುಖ್ಯತೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಸಂಕಲ್ಪವನ್ನು ಅವರು ಪುನರುಚ್ಚರಿಸಿದರು. ಶ್ರೀ ಮೋದಿ ಅವರು ಗುರುಗ್ರಾಮದಲ್ಲಿರುವಂತೆ ಗಯಾದಲ್ಲಿಯೂ ಸಮಾನ ಅವಕಾಶಗಳು, ಪುಣೆಯಂತೆಯೇ ಪಾಟ್ನಾದಲ್ಲಿ ಕೈಗಾರಿಕಾ ಬೆಳವಣಿಗೆ ಹಾಗೂ ಸೂರತ್ಗೆ ಹೋಲಿಸಬಹುದಾದ ಸಂತಾಲ್ ಪರಗಣದಲ್ಲಿ ಅಭಿವೃದ್ಧಿಯ ಕನಸನ್ನು ವ್ಯಕ್ತಪಡಿಸಿದರು. ಜಲ್ಪೈಗುರಿ ಮತ್ತು ಜಾಜ್ಪುರದ ಪ್ರವಾಸೋದ್ಯಮವು ಜೈಪುರದಂತೆ ಹೊಸ ದಾಖಲೆಗಳನ್ನು ನಿರ್ಮಿಸುತ್ತದೆ ಮತ್ತು ಬಿರ್ಭುಮ್ನ ಜನರು ಬೆಂಗಳೂರಿನ ಜನರಂತೆ ಪ್ರಗತಿ ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

"ಪೂರ್ವ ಭಾರತವನ್ನು ಮುನ್ನಡೆಸಲು, ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಪರಿವರ್ತಿಸಬೇಕು" ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಹಾರದ ಅಭಿವೃದ್ಧಿಗೆ ಬದ್ಧವಾಗಿರುವುದರಿಂದ ಬಿಹಾರದಲ್ಲಿ ತ್ವರಿತ ಪ್ರಗತಿ ಇಂದು ಸಾಧ್ಯವಿದೆ ಎಂದರು. ಇದಕ್ಕೆ ಪೂರಕವೆಂಬಂತೆ, ಕೇಂದ್ರದಿಂದ ರಾಜ್ಯಕ್ಕೆ ಇರುವ ಬೆಂಬಲದಲ್ಲಿ ಈ ಹಿಂದೆ ಮತ್ತು ಈಗ ಇರುವ ವ್ಯತ್ಯಾಸವನ್ನು ವಿವರಿಸಲು ಮೋದಿ ಅವರು ಅಂಕಿ-ಅಂಶಗಳನ್ನು ಉಲ್ಲೇಖಿಸಿದರು: ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಹಿಂದಿನ ಸರ್ಕಾರಗಳ 10 ವರ್ಷಗಳ ಅವಧಿಯಲ್ಲಿ, ಬಿಹಾರವು ಕೇವಲ 2 ಲಕ್ಷ ಕೋಟಿ ರೂ.ಗಳನ್ನು ಸ್ವೀಕರಿಸಿದೆ, ಇದು ಶ್ರೀ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧದ ರಾಜಕೀಯ ಪ್ರತೀಕಾರದ ಒಂದು ರೂಪವಾಗಿದೆ ಎಂದು ಹೇಳಿದರು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ತಮ್ಮ ಸರ್ಕಾರವು ಬಿಹಾರದ ವಿರುದ್ಧದ ಈ ಸೇಡಿನ ರಾಜಕೀಯವನ್ನು ಕೊನೆಗೊಳಿಸಿದೆ ಎಂದು ಪ್ರತಿಪಾದಿಸಿದ ಪ್ರಧಾನಿ, ಕಳೆದ 10 ವರ್ಷಗಳಲ್ಲಿ ತಮ್ಮ ಆಡಳಿತದಲ್ಲಿ ಬಿಹಾರದ ಅಭಿವೃದ್ಧಿಗೆ ಸುಮಾರು 9 ಲಕ್ಷ ಕೋಟಿ ರೂ. ನೀಡಲಾಗಿದೆ. ಇದು ಹಿಂದಿನ ಸರ್ಕಾರದ ಅಡಿಯಲ್ಲಿ ಒದಗಿಸಿದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಗಮನಸೆಳೆದರು. ಈ ಹಣವನ್ನು ಬಿಹಾರದಾದ್ಯಂತ ಸಾರ್ವಜನಿಕ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಖಚಿತಪಡಿಸಿದರು.

ಎರಡು ದಶಕಗಳ ಹಿಂದೆ ಬಿಹಾರ ಎದುರಿಸಿದ ಹತಾಶೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಇಂದಿನ ಪೀಳಿಗೆಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿತ್ತು ಮತ್ತು ಬಡವರಿಗೆ ಮೀಸಲಾದ ಹಣವು ಅವರನ್ನು ತಲುಪುವುದು ಅಸಾಧ್ಯವಾಗಿತ್ತು ಎಂದು ಹೇಳಿದರು. ಆಗಿನ ನಾಯಕತ್ವವು ಬಡವರಿಗಾಗಿ ಮೀಸಲಾದ ಹಣವನ್ನು ಲೂಟಿ ಮಾಡುವತ್ತ ಮಾತ್ರ ಗಮನ ಹರಿಸಿತು ಎಂದು ಅವರು ಟೀಕಿಸಿದರು. ಬಿಹಾರದ ಜನರ ದಿಟ್ಟತನವನ್ನು ಶ್ಲಾಘಿಸಿದ ಪ್ರಧಾನಿ, ಅಸಾಧ್ಯವಾದದ್ದನ್ನು ಸಾಧ್ಯವಾಗಿಸುವ ಭೂಮಿ ಇದೆಂದು ಬಣ್ಣಿಸಿದರು. ಹಿಂದಿನ ಸರ್ಕಾರದ ಸಂಕೋಲೆಗಳಿಂದ ಬಿಹಾರವನ್ನು ಮುಕ್ತಗೊಳಿಸಿದ್ದಕ್ಕಾಗಿ, ಬಡವರಿಗೆ ಕಲ್ಯಾಣ ಯೋಜನೆಗಳನ್ನು ನೇರವಾಗಿ ತಲುಪಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಅವರು ಸಾರ್ವಜನಿಕರನ್ನು ಶ್ಲಾಘಿಸಿದರು. ಕಳೆದ 11 ವರ್ಷಗಳಲ್ಲಿ ʻಪಿಎಂ ಆವಾಸ್ ಯೋಜನೆʼ ಅಡಿ ದೇಶಾದ್ಯಂತ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ, ಬಿಹಾರ ಒಂದರಲ್ಲೇ ಸುಮಾರು 60 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಈ ಅಂಕಿ ಅಂಶವು ನಾರ್ವೆ, ನ್ಯೂಜಿಲೆಂಡ್ ಮತ್ತು ಸಿಂಗಾಪುರದಂತಹ ದೇಶಗಳ ಒಟ್ಟು ಜನಸಂಖ್ಯೆಯನ್ನು ಮೀರಿಸುತ್ತದೆ ಎಂದು ಅವರು ಗಮನ ಸೆಳೆದರು. 

ಮೋತಿಹಾರಿಯೊಂದರಲ್ಲೇ ಸುಮಾರು 3 ಲಕ್ಷ ಕುಟುಂಬಗಳು ಶಾಶ್ವತ ಮನೆಗಳನ್ನು ಪಡೆದುಕೊಂಡಿವೆ ಮತ್ತು ಈ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಈ ಪ್ರದೇಶದ 12,000 ಕ್ಕೂ ಹೆಚ್ಚು ಕುಟುಂಬಗಳು ಇಂದು ತಮ್ಮ ಹೊಸ ಮನೆಗಳ ಕೀಲಿಗಳನ್ನು ಸ್ವೀಕರಿಸಿವೆ", ಎಂದು ಶ್ರೀ ಮೋದಿ ಹೇಳಿದರು. ಇದಲ್ಲದೆ, 40,000ಕ್ಕೂ ಹೆಚ್ಚು ಬಡ ಕುಟುಂಬಗಳು ಶಾಶ್ವತ ಮನೆಗಳನ್ನು ನಿರ್ಮಿಸಲು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಿವೆ, ಇದರಲ್ಲಿ ಹೆಚ್ಚಿನವರು ದಲಿತರು, ಮಹಾದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರು. ಹಿಂದಿನ ಸರ್ಕಾರದ ಆಡಳಿತದಲ್ಲಿ ಬಡವರಿಗೆ ಇಂತಹ ವಸತಿ ಸಿಗುವುದು ಊಹಿಸಲೂ ಅಸಾಧ್ಯವಾಗಿತ್ತು ಎಂದು ಪ್ರಧಾನಿ ಹೇಳಿದರು. ಹಿಂದಿನ ಸರ್ಕಾರದ ಅಧಿಕಾರಾವಧಿಯಲ್ಲಿ ಜನರು ತಮ್ಮ ಮನೆಗಳಿಗೆ ಬಣ್ಣ ಬಳಿಯಲು ಸಹ ಹೆದರುತ್ತಿದ್ದರು, ಭೂಮಾಲೀಕರನ್ನು ಗುರಿಯಾಗಿಸಲಾಗುತ್ತದೆ ಎಂದು ಆತಂಕಗೊಂಡಿದ್ದರು ಎಂದು ಅವರು ಸ್ಮರಿಸಿದರು. ಹಿಂದಿನ ಆಡಳಿತ ಪಕ್ಷದ ನಾಯಕರು ಎಂದಿಗೂ ಜನರಿಗೆ ಶಾಶ್ವತ ಮನೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಬಿಹಾರದ ಪ್ರಗತಿಗೆ ಈ ರಾಜ್ಯದ ತಾಯಂದಿರು ಮತ್ತು ಸಹೋದರಿಯರ ಶಕ್ತಿ ಮತ್ತು ದೃಢನಿಶ್ಚಯವೇ ಕಾರಣ ಎಂದು ಹೇಳಿದ ಶ್ರೀ ಮೋದಿ, ತಮ್ಮ ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯ ಮಹತ್ವವನ್ನು ಬಿಹಾರದ ಮಹಿಳೆಯರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಉಪಸ್ಥಿತಿಯನ್ನು ಗುರುತಿಸಿದ ಅವರು, ಹಿಂದೆ ಜನಸಾಮಾನ್ಯರಿಗೆ ಬ್ಯಾಂಕ್ ಖಾತೆಗಳೇ ಲಭ್ಯವಿಲ್ಲದ್ದರಿಂದ ಮತ್ತು ಬ್ಯಾಂಕ್ಗಳಿಗೆ ಅವರಿಗೆ ಪ್ರವೇಶ ನಿರಾಕರಿಸುತ್ತಿದ್ದರಿಂದ 10 ರೂ.ಗಳನ್ನು ಸಹ ಬಚ್ಚಿಟ್ಟುಕೊಳ್ಳಬೇಕಾದ ದಿನಗಳನ್ನು ನೆನಪಿಸಿಕೊಂಡರು. ಬಡವರ ಘನತೆಯ ಬಗ್ಗೆ ತಮ್ಮ ತಿಳಿವಳಿಕೆಯನ್ನು ಪುನರುಚ್ಚರಿಸಿದ ಪ್ರಧಾನಿ, ದೀನದಲಿತರಿಗೆ ಬಾಗಿಲುಗಳನ್ನು ಮುಚ್ಚಿರುವುದು ಏಕೆ ಎಂದು ಬ್ಯಾಂಕ್ಗಳನ್ನು ಪ್ರಶ್ನಿಸಿದ್ದಾಗಿ ವಿವರಿಸಿದರು. ʻಜನ್ ಧನ್ʼ ಖಾತೆಗಳನ್ನು ತೆರೆಯಲು ಪ್ರಾರಂಭಿಸಲಾದ ಬೃಹತ್ ಅಭಿಯಾನವನ್ನು ಅವರು ಎತ್ತಿ ತೋರಿದರು, ಇದು ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿತು, ಬಿಹಾರದಲ್ಲಿ ಸುಮಾರು 3.5 ಕೋಟಿ ಮಹಿಳೆಯರು ಈಗ ʻಜನ್ ಧನ್ʼ ಖಾತೆಗಳನ್ನು ಹೊಂದಿದ್ದಾರೆ. ಸರ್ಕಾರದ ಯೋಜನೆಗಳ ಹಣವನ್ನು ಈಗ ನೇರವಾಗಿ ಈ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಶ್ರೀ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ಇತ್ತೀಚೆಗೆ ವೃದ್ಧರು, ವಿಕಲಚೇತನರು ಮತ್ತು ವಿಧವೆ ತಾಯಂದಿರ ಮಾಸಿಕ ಪಿಂಚಣಿಯನ್ನು 400 ರೂ.ಗಳಿಂದ 1,100 ರೂ.ಗೆ ಹೆಚ್ಚಿಸಿದೆ ಎಂದು ಅವರು ಹೇಳಿದರು. ಈ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎಂದು ಪ್ರಧಾನಿ ಗಮನಸೆಳೆದರು. ಕಳೆದ ಒಂದೂವರೆ ತಿಂಗಳಲ್ಲಿ ಬಿಹಾರದ 24,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು 1,000 ಕೋಟಿ ರೂ.ಗಿಂತ ಹೆಚ್ಚಿನ ಸಹಾಯವನ್ನು ಸ್ವೀಕರಿಸಿವೆ ಎಂದು ಅವರು ಹೇಳಿದರು, ಈ ಯಶಸ್ಸಿಗೆ ತಾಯಂದಿರು ಮತ್ತು ಸಹೋದರಿಯರು ಹೊಂದಿರುವ ʻಜನ್ ಧನ್ʼ ಖಾತೆಗಳು ಒದಗಿಸಿದ ಆರ್ಥಿಕ ಸಬಲೀಕರಣವೇ ಕಾರಣವಾಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣ ಉಪಕ್ರಮಗಳ ಶಕ್ತಿಯುತ ಫಲಿತಾಂಶಗಳನ್ನು ಒತ್ತಿ ಹೇಳಿದ ಪ್ರಧಾನಿಯವರು, ದೇಶಾದ್ಯಂತ ಮತ್ತು ಬಿಹಾರದಲ್ಲಿ ಹೆಚ್ಚುತ್ತಿರುವ 'ಲಕ್ಷಾಧಿಪತಿ ದೀದಿ'ಯರ ಸಂಖ್ಯೆಯನ್ನು ಉಲ್ಲೇಖಿಸಿದರು. 3 ಕೋಟಿ ʻಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸುವುದು ರಾಷ್ಟ್ರೀಯ ಗುರಿಯಾಗಿದ್ದು, ಇಲ್ಲಿಯವರೆಗೆ 1.5 ಕೋಟಿ ಮಹಿಳೆಯರು ಈ ಮೈಲುಗಲ್ಲನ್ನು ಸಾಧಿಸಿದ್ದಾರೆ ಎಂದು ಹೇಳಿದರು. ಬಿಹಾರದಲ್ಲಿ 20 ಲಕ್ಷಕ್ಕೂ ಹೆಚ್ಚು ಮಹಿಳೆಯರು ʻಲಕ್ಷಾಧಿಪತಿ ದೀದಿʼಯರಾಗಿದ್ದಾರೆ. ಕೇವಲ ಚಂಪಾರಣ್ಯದಲ್ಲಿಯೇ 80,000ಕ್ಕೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ ಎಂದು ಅವರು ಒತ್ತಿ ಹೇಳಿದರು. ನಾರಿ ಶಕ್ತಿಯ ಬಲವರ್ಧನೆಯ ಉದ್ದೇಶದಿಂದ ಸಮುದಾಯ ಹೂಡಿಕೆ ನಿಧಿಯಾಗಿ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಶ್ರೀ ಮೋದಿ ಘೋಷಿಸಿದರು. ಶ್ರೀ ನಿತೀಶ್ ಕುಮಾರ್ ಅವರು ಪ್ರಾರಂಭಿಸಿದ "ಜೀವಿಕಾ ದೀದಿ" ಯೋಜನೆಯನ್ನು ಅವರು ಶ್ಲಾಘಿಸಿದರು, ಇದು ಬಿಹಾರದ ಲಕ್ಷಾಂತರ ಮಹಿಳೆಯರಿಗೆ ಸ್ವಾವಲಂಬಿಗಳಾಗಲು ದಾರಿ ಮಾಡಿಕೊಟ್ಟಿದೆ ಎಂದರು.

'ಭಾರತದ ಪ್ರಗತಿಗೆ ಬಿಹಾರದ ಪ್ರಗತಿ ಅತ್ಯಗತ್ಯ' ಎಂಬ ತಮ್ಮ ಪಕ್ಷದ ದೃಷ್ಟಿಕೋನವನ್ನು ಪುನರುಚ್ಚರಿಸಿದ ಶ್ರೀ ಮೋದಿ, ಬಿಹಾರದ ಯುವಕರು ಮುಂದೆ ಸಾಗಿದಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ ಎಂದು ಒತ್ತಿ ಹೇಳಿದರು. ಸಮೃದ್ಧ ಬಿಹಾರ ಮತ್ತು ಪ್ರತಿಯೊಬ್ಬ ಯುವಕರಿಗೆ ಉದ್ಯೋಗಕ್ಕಾಗಿ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಬಿಹಾರದಲ್ಲೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಸಂಪೂರ್ಣ ಪಾರದರ್ಶಕತೆಯೊಂದಿಗೆ ಲಕ್ಷಾಂತರ ಯುವಕರನ್ನು ಸರ್ಕಾರಿ ನೌಕರಿಗಳಲ್ಲಿ ನೇಮಕ ಮಾಡಿದ್ದಕ್ಕಾಗಿ ಶ್ರೀ ನಿತೀಶ್ ಕುಮಾರ್ ಅವರ ಸರ್ಕಾರವನ್ನು ಶ್ಲಾಘಿಸಿದರು. ಬಿಹಾರದ ಯುವಕರಿಗೆ ಹೆಚ್ಚಿನ ಉದ್ಯೋಗವನ್ನು ಒದಗಿಸಲು ಬಿಹಾರ ಮುಖ್ಯಮಂತ್ರಿ ಹೊಸ ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ಅವರು ಗಮನ ಸೆಳೆದರು ಮತ್ತು ಈ ಪ್ರಯತ್ನಗಳಿಗೆ ಕೇಂದ್ರ ಸರ್ಕಾರವು ಹೆಗಲಿಗೆ ಹೆಗಲು ಕೊಟ್ಟು ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಭರವಸೆ ನೀಡಿದರು.

ಖಾಸಗಿ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಪ್ರಮುಖ ಯೋಜನೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ ಎಂದು ಪ್ರಧಾನಿ ಘೋಷಿಸಿದರು. ಈ ಯೋಜನೆಯಡಿ, ಖಾಸಗಿ ಕಂಪನಿಯಲ್ಲಿ ಮೊದಲ ನೇಮಕಾತಿ ಪಡೆಯುವ ಯುವಕರಿಗೆ ಕೇಂದ್ರ ಸರ್ಕಾರವು 15,000 ರೂ. ನೀಡಲಿದೆ. ಈ ಯೋಜನೆಯನ್ನು ಆಗಸ್ಟ್ 1 ರಿಂದ ಜಾರಿಗೆ ತರಲಾಗುವುದು ಮತ್ತು ಕೇಂದ್ರದಿಂದ 1 ಲಕ್ಷ ಕೋಟಿ ರೂ.ಗಳ ವೆಚ್ಚವನ್ನು ಇದು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು. ಈ ಉಪಕ್ರಮವು ಬಿಹಾರದ ಯುವಕರಿಗೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು. ʻಮುದ್ರಾ ಯೋಜನೆʼಯಂತಹ ಯೋಜನೆಗಳ ಮೂಲಕ ಬಿಹಾರದಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ಪ್ರಯತ್ನಗಳನ್ನು ಶ್ರೀ ಮೋದಿ ಎತ್ತಿ ತೋರಿದರು. ಕಳೆದ ಎರಡು ತಿಂಗಳಲ್ಲಿ ಬಿಹಾರದಲ್ಲಿ ʻಮುದ್ರಾʼ ಯೋಜನೆಯಡಿ ಲಕ್ಷಾಂತರ ಸಾಲಗಳನ್ನು ವಿತರಿಸಲಾಗಿದೆ ಎಂದು ಹೇಳಿದ ಅವರು, ವಿಶೇಷವಾಗಿ ಚಂಪಾರಣ್ನಲ್ಲಿ 60,000 ಯುವಕರು ತಮ್ಮ ಸ್ವಯಂ ಉದ್ಯೋಗ ಉದ್ಯಮಗಳನ್ನು ಬೆಂಬಲಿಸಲು ʻಮುದ್ರಾʼ ಸಾಲ ಪಡೆದಿರುವುದಾಗಿ ಮಾಹಿತಿ ನೀಡಿದರು. 

ಇತರ ಪಕ್ಷಗಳ ನಾಯಕರು ಎಂದಿಗೂ ಉದ್ಯೋಗವನ್ನು ಒದಗಿಸಲು ಸಾಧ್ಯವಿಲ್ಲ. ವಿಶೇಷವಾಗಿ ಉದ್ಯೋಗ ನೀಡುವ ಸೋಗಿನಲ್ಲಿ ಜನರ ಭೂಮಿಯನ್ನು ಕಸಿದುಕೊಳ್ಳುತ್ತಾರೆ ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ʻಲಾಟೀನುಗಳ ಯುಗʼ ಮತ್ತು ಹೊಸ ಭರವಸೆಗಳಿಂದ ಬೆಳಗುತ್ತಿರುವ ಇಂದಿನ ಬಿಹಾರದ ನಡುವಿನ ವ್ಯತ್ಯಾಸವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಸಾರ್ವಜನಿಕರನ್ನು ಒತ್ತಾಯಿಸಿದರು. ತಮ್ಮ ಸಮ್ಮಿಶ್ರ ಸರ್ಕಾರದೊಂದಿಗೆ ಬಿಹಾರದ ಪ್ರಯಾಣವೇ ಈ ಪರಿವರ್ತನೆಗೆ ಕಾರಣ ಎಂದು ಅವರು ಹೇಳಿದರು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲದ ವಿಚಾರದಲ್ಲಿ ಬಿಹಾರದ ಸಂಕಲ್ಪವು ದೃಢ ಮತ್ತು ಅಚಲವಾಗಿ ಉಳಿದಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ನಕ್ಸಲಿಸಂ ವಿರುದ್ಧ ಕೈಗೊಂಡ ನಿರ್ಣಾಯಕ ಕ್ರಮವನ್ನು ಎತ್ತಿ ತೋರಿದ ಪ್ರಧಾನಿ, ಇದು ಬಿಹಾರದ ಯುವಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದರು. ಒಂದು ಕಾಲದಲ್ಲಿ ಮಾವೋವಾದಿ ಪ್ರಭಾವದಿಂದ ಹಿಂದುಳಿದಿದ್ದ ಚಂಪಾರಣ್, ಔರಂಗಾಬಾದ್, ಗಯಾ ಮತ್ತು ಜಮುಯಿಯಂತಹ ಜಿಲ್ಲೆಗಳು ಈಗ ನಕ್ಸಲಿಸಂನ ಅವನತಿಗೆ ಸಾಕ್ಷಿಯಾಗುತ್ತಿವೆ ಎಂದು ಅವರು ಹೇಳಿದರು. ಒಂದು ಕಾಲದಲ್ಲಿ ಮಾವೋವಾದಿ ಹಿಂಸಾಚಾರದಿಂದ ಮರೆಮಾಚಲ್ಪಟ್ಟ ಪ್ರದೇಶಗಳಲ್ಲಿ, ಯುವಕರು ಈಗ ದೊಡ್ಡ ಕನಸು ಕಾಣುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಭಾರತವನ್ನು ನಕ್ಸಲಿಸಂನ ಹಿಡಿತದಿಂದ ಸಂಪೂರ್ಣವಾಗಿ ಮುಕ್ತಗೊಳಿಸುವ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು.

"ಇದು ನವ ಭಾರತ- ಶತ್ರುಗಳನ್ನು ಶಿಕ್ಷಿಸುವಲ್ಲಿ, ಭೂಮಿ ಮತ್ತು ಆಕಾಶದಿಂದ ಸೇನಾಪಡೆಗಳನ್ನು ಸಜ್ಜುಗೊಳಿಸುವಲ್ಲಿ ಯಾವುದೇ ಪ್ರಯತ್ನವನ್ನು ಬಿಡದ ಭಾರತ" ಎಂದು ಘೋಷಿಸಿದ ಶ್ರೀ ಮೋದಿ, ಬಿಹಾರದ ಮಣ್ಣಿನಿಂದ ʻಆಪರೇಷನ್ ಸಿಂಧೂರ್ʼ ಪ್ರಾರಂಭಿಸಲು ತಾವು ನಿರ್ಧರಿಸಿದ್ದನ್ನು ನೆನಪಿಸಿಕೊಂಡರು. ಇಂದು, ಆ ಕಾರ್ಯಾಚರಣೆಯ ಯಶಸ್ಸನ್ನು ಇಡೀ ಜಗತ್ತು ನೋಡುತ್ತಿದೆ ಎಂದು ಅವರು ಹೇಳಿದರು.

ಬಿಹಾರಕ್ಕೆ ಸಾಮರ್ಥ್ಯ ಅಥವಾ ಸಂಪನ್ಮೂಲಗಳ ಕೊರತೆಯಿಲ್ಲ. ಮತ್ತು ಇಂದು ಬಿಹಾರದ ಸಂಪನ್ಮೂಲಗಳು ಅದರ ಪ್ರಗತಿಯ ಸಾಧನಗಳಾಗುತ್ತಿವೆ ಎಂದು ಪ್ರಧಾನಿ ದೃಢಪಡಿಸಿದರು. ತಮ್ಮ ಸರ್ಕಾರದ ಪ್ರಯತ್ನಗಳ ನಂತರ ʻಮಖಾನಾʼ ಬೆಲೆಗಳ ಏರಿಕೆಯನ್ನು ಅವರು ಎತ್ತಿ ತೋರಿದರು, ʻಮಖಾನಾʼ ರೈತರನ್ನು ದೊಡ್ಡ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು. ಈ ವಲಯವನ್ನು ಮತ್ತಷ್ಟು ಬೆಂಬಲಿಸಲು ʻಮಖಾನಾ ಮಂಡಳಿʼಯನ್ನು ಸ್ಥಾಪಿಸಿದ್ದನ್ನೂ ಅವರು ಉಲ್ಲೇಖಿಸಿದರು. ಬಾಳೆಹಣ್ಣು, ಲೀಚಿ, ಮಿರ್ಚಾ ಅಕ್ಕಿ, ಕತರ್ನಿ ಅಕ್ಕಿ, ಜರ್ದಾಲು ಮಾವು ಮತ್ತು ಮಾಘೈ ಪಾನ್ ಸೇರಿದಂತೆ ಹಲವಾರು ಪ್ರಮುಖ ಉತ್ಪನ್ನಗಳನ್ನು ಬಿಹಾರದ ಕೃಷಿ ಶ್ರೀಮಂತಿಕೆಗೆ ಉದಾಹರಣೆಗಳಾಗಿ ಶ್ರೀ ಮೋದಿ ಪಟ್ಟಿ ಮಾಡಿದರು. ಇವುಗಳ ಜೊತೆಗೆ ಇತರ ಅನೇಕ ಉತ್ಪನ್ನಗಳು ಬಿಹಾರದ ರೈತರು ಮತ್ತು ಯುವಕರನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತವೆ ಎಂದು ಅವರು ಒತ್ತಿ ಹೇಳಿದರು.

ರೈತರ ಉತ್ಪನ್ನಗಳು ಮತ್ತು ಆದಾಯವನ್ನು ಹೆಚ್ಚಿಸುವುದು ಸರ್ಕಾರದ ಉನ್ನತ ಆದ್ಯತೆಯಾಗಿದೆ ಎಂದು ಹೇಳಿದ ಶ್ರೀ ಮೋದಿ, ʻಪಿಎಂ-ಕಿಸಾನ್ ಸಮ್ಮಾನ್ ನಿಧಿʼ ಯೋಜನೆಯಡಿ ದೇಶಾದ್ಯಂತ ಸುಮಾರು 3.5 ಲಕ್ಷ ಕೋಟಿ ರೂ.ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಒತ್ತಿ ಹೇಳಿದರು. ಮೋತಿಹಾರಿ ಜಿಲ್ಲೆಯೊಂದರಲ್ಲೇ 5 ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆಯ ಮೂಲಕ 1,500 ಕೋಟಿ ರೂ.ಗಿಂತ ಅಧಿಕ ಹಣ ಪಡೆದಿದ್ದಾರೆ ಎಂದು ಅವರು ಗಮನ ಸೆಳೆದರು. 

ಸರ್ಕಾರವು ಘೋಷಣೆಗಳು ಅಥವಾ ಭರವಸೆಗಳಿಗಷ್ಟೇ ಸೀಮಿತವಾಗುವುದಿಲ್ಲ. ಅದು ಕ್ರಿಯೆಯ ಮೂಲಕ ಪ್ರಯೋಜನಗಳನ್ನು ಜನರಿಗೆ ತಲುಪಿಸುತ್ತದೆ ಎಂದು ಪ್ರಧಾನಿ ಹೇಳಿದರು. ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳಿಗಾಗಿ ಕೆಲಸ ಮಾಡುವುದಾಗಿ ತಮ್ಮ ಸರ್ಕಾರ ಹೇಳಿತ್ತು. ಅದರಂತೆ ಈ ಬದ್ಧತೆಯು ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಪ್ರತಿಫಲಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು. ಈ ನೀತಿಗಳ ಧ್ಯೇಯವು ಸ್ಪಷ್ಟವಾಗಿದೆ: ಹಿಂದುಳಿದ ಪ್ರದೇಶಗಳಿಂದ ಬಂದವರೇ ಆಗಿರಲಿ ಅಥವಾ ಹಿಂದುಳಿದ ವರ್ಗಗಳೇ ಆಗಿರಲಿ, ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಗೆ ಆದ್ಯತೆ ನೀಡಲಾಗುವುದು. ಅವರು ಸರ್ಕಾರದ ಆದ್ಯತೆಗಳ ಕೇಂದ್ರಬಿಂದುವಾಗಿರುತ್ತಾರೆ ಎಂದು ಅವರು ಹೇಳಿದರು. ದಶಕಗಳಿಂದ 110ಕ್ಕೂ ಹೆಚ್ಚು ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳು ಮತ್ತು ನಿರ್ಲಕ್ಷ್ಯಕ್ಕೆ ಒಳಪಟ್ಟ ಜಿಲ್ಲೆಗಳು ಎಂದು ಹಣೆಪಟ್ಟಿ ಕಟ್ಟಲಾಗಿತ್ತು.  ಈಗಿನ ಸರ್ಕಾರವು ಈ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ಗುರುತಿಸುವ ಮೂಲಕ ಮತ್ತು ಅವುಗಳ ಅಭಿವೃದ್ಧಿಗೆ ಚಾಲನೆ ನೀಡುವ ಮೂಲಕ ಆದ್ಯತೆ ನೀಡಿದೆ ಎಂದು ಶ್ರೀ ಮೋದಿ ಗಮನಸೆಳೆದರು. ಭಾರತದ ಗಡಿ ಗ್ರಾಮಗಳನ್ನು ಸಹ ದೀರ್ಘಕಾಲದವರೆಗೆ "ಕೊನೆಯ ಗ್ರಾಮಗಳು" ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗಿನ ಸರ್ಕಾರವು ಅವುಗಳನ್ನು "ಮೊದಲ ಗ್ರಾಮಗಳು" ಎಂದು ಮರುವ್ಯಾಖ್ಯಾನಿಸಿತು ಮತ್ತು ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಿತು ಎಂದು ಪ್ರಧಾನಿ ಹೇಳಿದರು. ʻಒಬಿಸಿ ಆಯೋಗʼಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವಂತೆ ಒಬಿಸಿ ಸಮುದಾಯವು ದೀರ್ಘಕಾಲದಿಂದ ಒತ್ತಾಯಿಸುತ್ತಿದೆ - ಈ ಬೇಡಿಕೆಯನ್ನು ಅವರ ಸಮ್ಮಿಶ್ರ ಸರ್ಕಾರ ಈಡೇರಿಸಿದೆ ಎಂದು ಅವರು ಒತ್ತಿ ಹೇಳಿದರು. ಬುಡಕಟ್ಟು ಸಮುದಾಯಗಳಲ್ಲಿ ಅತ್ಯಂತ ಅಂಚಿನಲ್ಲಿರುವವರಿಗಾಗಿ ʻಜನಮಾನ್ʼ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಅವರ ಅಭಿವೃದ್ಧಿಗೆ 25,000 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಈ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಧಾನಮಂತ್ರಿಯವರು - ʻಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆʼ ಎಂಬ ಹೊಸ ಮಹತ್ವದ ಯೋಜನೆಯನ್ನು ಘೋಷಿಸಿದರು. ಇದನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ಯೋಜನೆಯಡಿ, ಕೃಷಿಯಲ್ಲಿ ಸಾಮರ್ಥ್ಯವಿರುವ, ಆದರೆ ಉತ್ಪಾದಕತೆ ಮತ್ತು ರೈತರ ಆದಾಯದಲ್ಲಿ ಹಿಂದುಳಿದಿರುವ 100 ಜಿಲ್ಲೆಗಳನ್ನು ಗುರುತಿಸಿ ಆದ್ಯತೆ ನೀಡಲಾಗುವುದು. ಈ ಜಿಲ್ಲೆಗಳ ರೈತರು ಈ ಯೋಜನೆಯಡಿ ಉದ್ದೇಶಿತ ಬೆಂಬಲವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು. ಇದು ದೇಶಾದ್ಯಂತ ಸುಮಾರು 1.75 ಕೋಟಿ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಸಾವಿರಾರು ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಮತ್ತು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಮೋದಿ ಅವರು, ಈ ಯೋಜನೆಗಳು ಬಿಹಾರದ ಜನರಿಗೆ ಅನುಕೂಲವನ್ನು ಗಣನೀಯ ಮಟ್ಟದಲ್ಲಿ  ಹೆಚ್ಚಿಸಲಿವೆ ಎಂದರು. ದೇಶಾದ್ಯಂತ ನಾಲ್ಕು ವಿಭಿನ್ನ ಮಾರ್ಗಗಳಲ್ಲಿ ʻಅಮೃತ್ ಭಾರತ್ ಎಕ್ಸ್ಪ್ರೆಸ್ʼ ರೈಲಿಗೆ ಅವರು ಹಸಿರು ನಿಶಾನೆ ತೋರಿದರು. ʻಅಮೃತ್ ಭಾರತ್ ಎಕ್ಸ್ಪ್ರೆಸ್ʼ ಈಗ ಮೋತಿಹಾರಿ-ಬಾಪುಧಾಮ್ ನಿಂದ ದೆಹಲಿಯ ಆನಂದ್ ವಿಹಾರ್ಗೆ ನೇರವಾಗಿ ಚಲಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಮೋತಿಹಾರಿ ರೈಲ್ವೆ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳು ಮತ್ತು ಹೊಸ ನೋಟದೊಂದಿಗೆ ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಉಲ್ಲೇಖಿಸಿದರು. ದರ್ಭಂಗಾ-ನರ್ಕಟಿಯಾಗಂಜ್ ರೈಲು ಮಾರ್ಗದ ಡಬ್ಲಿಂಗ್ನಿಂದ ಈ ಮಾರ್ಗದಲ್ಲಿ ಪ್ರಯಾಣದ ಅನುಕೂಲ  ಬಹಳವಾಗಿ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.

ಭಾರತದ ನಂಬಿಕೆ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಚಂಪಾರಣ್ಯದ ಆಳವಾದ ಸಂಪರ್ಕವನ್ನು ಒತ್ತಿ ಹೇಳಿದ ಶ್ರೀ ಮೋದಿ, ʻರಾಮ-ಜಾನಕಿ ಮಾರ್ಗʼವು ಮೋತಿಹಾರಿಯ ಸತ್ತರ್ ಘಾಟ್, ಕೇಸರಿಯಾ, ಚಕಿಯಾ ಮತ್ತು ಮಧುಬನ್ ಮೂಲಕ ಹಾದುಹೋಗುತ್ತದೆ ಎಂದು ಹೇಳಿದರು. ಅಭಿವೃದ್ಧಿ ಹಂತದಲ್ಲಿರುವ ಸೀತಾಮರ್ಹಿ-ಅಯೋಧ್ಯೆ ನಡುವಿನ ಹೊಸ ರೈಲ್ವೆ ಮಾರ್ಗವು ಚಂಪಾರಣ್ಯದ ಭಕ್ತರಿಗೆ ದರ್ಶನಕ್ಕಾಗಿ ಅಯೋಧ್ಯೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಉಪಕ್ರಮಗಳು ಬಿಹಾರದಲ್ಲಿ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಿ ಹೇಳಿದರು.

ಹಿಂದಿನ ಸರ್ಕಾರಗಳು ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳ ಹೆಸರಿನಲ್ಲಿ ದೀರ್ಘಕಾಲದಿಂದ ರಾಜಕೀಯದಲ್ಲಿ ತೊಡಗಿವೆ ಎಂದು ಅವರು ಹೇಳಿದರು.  ಆ ಸರ್ಕಾರಗಳ ನಾಯಕರು ಸಮಾನ ಹಕ್ಕುಗಳನ್ನು ನಿರಾಕರಿಸಿದ್ದಲ್ಲದೆ, ತಮ್ಮ ಸ್ವಂತ ಕುಟುಂಬಗಳಿಂದ ಹೊರಗಿನವರಿಗೆ ಗೌರವವನ್ನು ತೋರಿಸಲು ವಿಫಲರಾಗಿದ್ದಾರೆ ಎಂದು ಪ್ರಧಾನಿ ಟೀಕಿಸಿದರು. ಬಿಹಾರವು ಇಂದು ಅವರ ಅಹಂಕಾರವನ್ನು ಸ್ಪಷ್ಟವಾಗಿ ನೋಡುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಅವರ ದುರುದ್ದೇಶದಿಂದ ಬಿಹಾರವನ್ನು ರಕ್ಷಿಸಲು ಕರೆ ನೀಡಿದ ಶ್ರೀ ಮೋದಿ, ಪ್ರಸ್ತುತ ಬಿಹಾರ ಸರ್ಕಾರದ ಸಮರ್ಪಿತ ಪ್ರಯತ್ನಗಳನ್ನು ಶ್ಲಾಘಿಸಿದರು.  ಪ್ರತಿಯೊಬ್ಬರೂ ಒಟ್ಟಾಗಿ ಬಿಹಾರದ ಅಭಿವೃದ್ಧಿಯನ್ನು ವೇಗಗೊಳಿಸಬೇಕು ಮತ್ತು ಉಜ್ವಲ ಭವಿಷ್ಯದತ್ತ ಸಾಗಬೇಕು ಎಂದು ಒತ್ತಾಯಿಸಿದರು. ʻನವ ಬಿಹಾರʼವನ್ನು ನಿರ್ಮಿಸುವ ಸಂಕಲ್ಪಕ್ಕೆ ಕರೆ ನೀಡುವ ಮೂಲಕ ಅವರು ತಮ್ಮ ಮಾತು ಮುಗಿಸಿದರು. ಇಂದು ಉದ್ಘಾಟಿಸಲಾದ ಅಭಿವೃದ್ಧಿ ಯೋಜನೆಗಳಿಗಾಗಿ ಜನರನ್ನು ಅಭಿನಂದಿಸಿದರು.

ಬಿಹಾರದ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್; ಬಿಹಾರ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್; ಕೇಂದ್ರ ಸಚಿವರಾದ ಶ್ರೀ ಜಿತನ್ ರಾಮ್ ಮಾಂಜಿ, ಶ್ರೀ ಗಿರಿರಾಜ್ ಸಿಂಗ್, ಶ್ರೀ ರಾಜೀವ್ ರಂಜನ್ ಸಿಂಗ್, ಶ್ರೀ ಚಿರಾಗ್ ಪಾಸ್ವಾನ್, ಶ್ರೀ ರಾಮ್ ನಾಥ್ ಠಾಕೂರ್, ಶ್ರೀ ನಿತ್ಯಾನಂದ ರೈ, ಶ್ರೀ ಸತೀಶ್ ಚಂದ್ರ ದುಬೆ, ಡಾ. ರಾಜ್ ಭೂಷಣ್ ಚೌಧರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿಯವರು ರೈಲು, ರಸ್ತೆ, ಗ್ರಾಮೀಣಾಭಿವೃದ್ಧಿ, ಮೀನುಗಾರಿಕೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಿದರು. 

ಸಂಪರ್ಕ ಮತ್ತು ಮೂಲಸೌಕರ್ಯವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಅನೇಕ ರೈಲು ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಸಮಸ್ತಿಪುರ-ಬಚ್ವಾರಾ ರೈಲು ಮಾರ್ಗದ ನಡುವೆ ಸ್ವಯಂಚಾಲಿತ ಸಿಗ್ನಲಿಂಗ್ ಅನ್ನು ಒಳಗೊಂಡಿದೆ, ಇದು ಈ ವಿಭಾಗದಲ್ಲಿ ಪರಿಣಾಮಕಾರಿ ರೈಲು ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ದರ್ಭಂಗಾ-ತಲ್ವಾರಾ ಮತ್ತು ಸಮಸ್ತಿಪುರ-ರಾಮಭದ್ರಾಪುರ ರೈಲು ಮಾರ್ಗದ ಡಬ್ಲಿಂಗ್ ಕಾರ್ಯವು 580 ಕೋಟಿ ರೂ.ಗಳ ದರ್ಭಂಗಾ-ಸಮಸ್ತಿಪುರ ಡಬ್ಲಿಂಗ್ ಯೋಜನೆಯ ಒಂದು ಭಾಗವಾಗಿದೆ, ಇದು ರೈಲು ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ವಿಳಂಬವನ್ನು ಕಡಿಮೆ ಮಾಡುತ್ತದೆ.

ಪ್ರಧಾನಮಂತ್ರಿಯವರು ಹಲವು ರೈಲು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ರೈಲು ಯೋಜನೆಗಳಲ್ಲಿ ಪಾಟಲೀಪುತ್ರದಲ್ಲಿ ʻವಂದೇ ಭಾರತ್ʼ ರೈಲುಗಳ ನಿರ್ವಹಣೆಗಾಗಿ ಮೂಲಸೌಕರ್ಯಗಳ ಅಭಿವೃದ್ಧಿಯೂ ಸೇರಿದೆ. ಸುವ್ಯವಸ್ಥಿತ ರೈಲು ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಭಟ್ನಿ-ಛಾಪ್ರಾ ಗ್ರಾಮೀಣ ರೈಲು ಮಾರ್ಗದಲ್ಲಿ (114 ಕಿ.ಮೀ) ಸ್ವಯಂಚಾಲಿತ ಸಿಗ್ನಲಿಂಗ್ ಸಹ ಇದರಲ್ಲಿ ಸೇರಿದೆ. ಟ್ರ್ಯಾಕ್ಷನ್ ವ್ಯವಸ್ಥೆಯ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಮತ್ತು ಇಂಧನ ದಕ್ಷತೆಯನ್ನು ಉತ್ತಮಗೊಳಿಸುವ ಮೂಲಕ ಹೆಚ್ಚಿನ ರೈಲು ವೇಗವನ್ನು ಸಕ್ರಿಯಗೊಳಿಸಲು ಭಟ್ನಿ-ಛಾಪ್ರಾ ಗ್ರಾಮೀಣ ವಿಭಾಗದಲ್ಲಿ ಟ್ರ್ಯಾಕ್ಷನ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು. ಸುಮಾರು 4,080 ಕೋಟಿ ರೂ.ಗಳ ದರ್ಭಂಗಾ-ನರ್ಕಟಿಯಾಗಂಜ್ ರೈಲು ಮಾರ್ಗ ಡಬ್ಲಿಂಗ್ ಯೋಜನೆಯು ವಿಭಾಗೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಹೆಚ್ಚಿನ ಪ್ರಯಾಣಿಕರ ಮತ್ತು ಸರಕು ರೈಲುಗಳ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ, ಉತ್ತರ ಬಿಹಾರ ಮತ್ತು ದೇಶದ ಇತರ ಭಾಗಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ.

ಈ ಪ್ರದೇಶದಲ್ಲಿ ರಸ್ತೆ ಮೂಲಸೌಕರ್ಯಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ, ಅರಾ-ಮೊಹಾನಿಯಾ ರಾಷ್ಟ್ರೀಯ ಹೆದ್ದಾರಿ-319 ಮತ್ತು ಪಾಟ್ನಾ-ಬಕ್ಸಾರ್ ರಾಷ್ಟ್ರೀಯ ಹೆದ್ದಾರಿ-922 ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-319ರ ಅರಾ ಬೈಪಾಸ್ ಅನ್ನು ಚತುಷ್ಪಥಗೊಳಿಸುವ ಕಾಮಗಾರಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

ಸರಕು ಮತ್ತು ಪ್ರಯಾಣಿಕರ ಚಲನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅರಾ ಪಟ್ಟಣವನ್ನು ರಾಷ್ಟ್ರೀಯ ಹೆದ್ದಾರಿ-02ಕ್ಕೆ(ಸುವರ್ಣ ಚತುಷ್ಪಥ) ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-319ರ ಭಾಗವಾದ ರಾಷ್ಟ್ರೀಯ ಹೆದ್ದಾರಿ-319ರ 4 ಪಥದ ಪರಾರಿಯಾ-ಮೊಹಾನಿಯಾ ವಿಭಾಗವನ್ನು ಪ್ರಧಾನಿ ಉದ್ಘಾಟಿಸಿದರು. ರಾಷ್ಟ್ರೀಯ ಹೆದ್ದಾರಿ-ʻ333ಸಿʼಯ ಸರ್ವನ್-ಚಕೈ ನಡುವಿನ 2 ಪಥದ ರಸ್ತೆಯನ್ನು ಸರ್ವೀಸ್ ರಸ್ತೆಯೊಂದಿಗೆ ನಿರ್ಮಿಸಲಾಗಿದ್ದು, ಇದು ಸರಕು ಮತ್ತು ಜನರ ಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಬಿಹಾರ ಮತ್ತು ಜಾರ್ಖಂಡ್ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಧಾನಮಂತ್ರಿಯವರು ಮಾಹಿತಿ ತಂತ್ರಜ್ಞಾನ/ ಐಟಿ ಆಧರಿತ ಸೇವೆಗಳು /ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿನ್ಯಾಸ ಮತ್ತು ತಯಾರಿಕೆ ಉದ್ಯಮ (ಇಎಸ್ಡಿಎಂ) ಹಾಗೂ ನವೋದ್ಯಮಗಳನ್ನು ಉತ್ತೇಜಿಸಲು ದರ್ಭಾಂಗದಲ್ಲಿ ಹೊಸ ʻಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾʼ (ಎಸ್ಟಿಪಿಐ) ಘಟಕವನ್ನು ಹಾಗೂ ಪಾಟ್ನಾದಲ್ಲಿ ʻಎಸ್ಟಿಪಿಐʼನ ಅತ್ಯಾಧುನಿಕ ಇನ್ಕ್ಯುಬೇಷನ್ ಘಟಕವನ್ನು ಉದ್ಘಾಟಿಸಿದರು. ಈ ಸೌಲಭ್ಯಗಳು ಮಾಹಿತಿ ತಂತ್ರಜ್ಞಾನ ತಂತ್ರಾಂಶ ಮತ್ತು ಸೇವಾ ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದು ಉದಯೋನ್ಮುಖ ಉದ್ಯಮಿಗಳಿಗೆ ತಂತ್ರಜ್ಞಾನ ಆಧರಿತ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪೋಷಿಸುತ್ತದೆ. ಜೊತೆಗೆ ನಾವೀನ್ಯತೆ, ಐಪಿಆರ್ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಬಿಹಾರದಲ್ಲಿ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರವನ್ನು ಬಲಪಡಿಸುವ ಪ್ರಮುಖ ಹೆಜ್ಜೆಯಾಗಿ, ʻಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆʼ(ಪಿ.ಎಂ.ಎಂ.ಎಂ.ಎಸ್.ವೈ.) ಅಡಿಯಲ್ಲಿ ಮಂಜೂರಾದ ಸರಣಿ ಮೀನುಗಾರಿಕೆ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಇದು ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಹೊಸ ಮೀನು ಹ್ಯಾಚರಿಗಳು, ಬಯೋಫ್ಲೋಕ್ ಘಟಕಗಳು, ಅಲಂಕಾರಿಕ ಮೀನು ಸಾಕಣೆ, ಸಮಗ್ರ ಜಲಚರ ಸಾಕಣೆ ಘಟಕಗಳು ಮತ್ತು ಮೀನು ಆಹಾರ ಗಿರಣಿಗಳು ಸೇರಿದಂತೆ ಆಧುನಿಕ ಮೀನುಗಾರಿಕೆ ಮೂಲಸೌಕರ್ಯಗಳ ಪ್ರಾರಂಭವನ್ನು ಸೂಚಿಸುತ್ತದೆ. ಜಲಚರ ಸಾಕಣೆ ಯೋಜನೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಮೀನು ಉತ್ಪಾದನೆಯನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸಲು ಸಹಾಯ ಮಾಡುತ್ತವೆ.

ಪ್ರಧಾನಮಂತ್ರಿಯವರು ತಮ್ಮ ಭವಿಷ್ಯಸನ್ನದ್ಧ ರೈಲ್ವೆ ಜಾಲದ ದೃಷ್ಟಿಕೋನಕ್ಕೆ ಅನುಗುಣವಾಗಿ ರಾಜೇಂದ್ರನಗರ ಟರ್ಮಿನಲ್(ಪಾಟ್ನಾ)-ನವದೆಹಲಿ, ಬಾಪುಧಾಮ್ ಮೋತಿಹಾರಿ-ದೆಹಲಿ(ಆನಂದ್ ವಿಹಾರ್ ಟರ್ಮಿನಲ್), ದರ್ಭಾಂಗ-ಲಕ್ನೋ (ಗೋಮತಿನಗರ) ಮತ್ತು ಮಾಲ್ಡಾ ಟೌನ್-ಲಕ್ನೋ (ಗೋಮತಿನಗರ) ನಡುವೆ ಭಾಗಲ್ಪುರ್ ಮೂಲಕ ನಾಲ್ಕು ಹೊಸ ʻಅಮೃತ್ ಭಾರತ್ʼ ರೈಲುಗಳಿಗೆ ಹಸಿರು ನಿಶಾನೆ ತೋರಲಾಯಿತು.

ʻದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ʼ(ಡಿಎವೈ-ಎನ್ಆರ್ಎಲ್ಎಂ) ಅಡಿಯಲ್ಲಿ ಬಿಹಾರದ ಸುಮಾರು 61,500 ಸ್ವಸಹಾಯ ಗುಂಪುಗಳಿಗೆ 400 ಕೋಟಿ ರೂ.ಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು. ಮಹಿಳಾ ನೇತೃತ್ವದ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿ, 10 ಕೋಟಿಗೂ ಹೆಚ್ಚು ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ (ಎಸ್ಎಚ್ಜಿ) ಸಂಪರ್ಕಿಸಲಾಗಿದೆ.

ಪ್ರಧಾನಮಂತ್ರಿಯವರು 12,000 ಫಲಾನುಭವಿಗಳ ಗೃಹ ಪ್ರವೇಶದ ಭಾಗವಾಗಿ ಕೆಲವು ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಿದರು ಮತ್ತು ʻಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣʼ ಯೋಜನೆಯ 40,000 ಫಲಾನುಭವಿಗಳಿಗೆ 160 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದರು.

 

 

*****

 


(Release ID: 2145958)