ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೀಬಿಯಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ

Posted On: 09 JUL 2025 7:55PM by PIB Bengaluru

ತಮ್ಮ ನಮೀಬಿಯಾ ಅಧಿಕೃತ ಪ್ರವಾಸದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಂಡ್‌ಹೋಕ್‌ ನಲ್ಲಿರುವ ಸ್ಟೇಟ್ ಹೌಸ್‌ ನಲ್ಲಿ ನಮೀಬಿಯಾ ಅಧ್ಯಕ್ಷರಾದ ಗೌರವಾನ್ವಿತ ಡಾ. ನೆಟುಂಬೊ ನಂದಿ-ನದೈತ್ವಾ ಅವರನ್ನು ಭೇಟಿಯಾದರು. ಸ್ಟೇಟ್ ಹೌಸ್‌ ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಅಧ್ಯಕ್ಷೆ ನಂದಿ-ನದೈತ್ವಾ ಅವರು ಆತ್ಮೀಯವಾಗಿ ಬರಮಾಡಿಕೊಂಡು, ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಿದರು. ಭಾರತದಿಂದ ನಮೀಬಿಯಾ ಗೆ ಪ್ರಧಾನಮಂತ್ರಿ ಮಟ್ಟದಲ್ಲಿ ಈ ಭೇಟಿಯು 27 ವರ್ಷಗಳ ನಂತರ ನಡೆದಿದೆ. ಅಲ್ಲದೆ, ಈ ವರ್ಷದ ಮಾರ್ಚ್‌ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷೆ ನಂದಿ-ನದೈತ್ವಾ ಅವರು ಆಯೋಜಿಸಿದ ಮೊದಲ ದ್ವಿಪಕ್ಷೀಯ ಅಧಿಕೃತ ಭೇಟಿ ಇದಾಗಿತ್ತು.

ನಮೀಬಿಯಾ ದ ರಾಷ್ಟ್ರದ ಮುಖ್ಯಸ್ಥರಾಗಿ ಆಯ್ಕೆಯಾದ ಅಧ್ಯಕ್ಷೆ ನಂದಿ- ನದೈತ್ವಾ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು. ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳಿಗೆ ಆಧಾರವಾಗಿರುವ ಹೆಮ್ಮೆಯ ಇತಿಹಾಸವನ್ನು ಸ್ಮರಿಸಿದರು. ಈ ವರ್ಷ ನಿಧನರಾದ ನಮೀಬಿಯಾ ದ ರಾಷ್ಟ್ರಪಿತ ಡಾ. ಸ್ಯಾಮ್ ನುಜೋಮಾ ಅವರಿಗೆ ಪ್ರಧಾನಮಂತ್ರಿಯವರು ಸಂತಾಪ ಸೂಚಿಸಿದರು. ರಕ್ಷಣೆ, ಕಡಲ ಭದ್ರತೆ, ಡಿಜಿಟಲ್ ತಂತ್ರಜ್ಞಾನ ಮತ್ತು ಯು.ಪಿ.ಐ. (UPI), ಕೃಷಿ, ಆರೋಗ್ಯ ಮತ್ತು ಔಷಧ, ಇಂಧನ ಹಾಗೂ ಆಯಕಟ್ಟಿನ ಖನಿಜಗಳ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು.

ದ್ವಿಪಕ್ಷೀಯ ವ್ಯಾಪಾರದಲ್ಲಿನ ಬೆಳವಣಿಗೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಉಭಯ ನಾಯಕರು, ಈ ನಿಟ್ಟಿನಲ್ಲಿ ಪೂರ್ಣ ಸಾಮರ್ಥ್ಯವನ್ನು ಇನ್ನೂ ಬಳಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ, ಭಾರತ - SACU (ದಕ್ಷಿಣ ಆಫ್ರಿಕಾ ದ ಕಸ್ಟಮ್ಸ್ ಯೂನಿಯನ್) ಆದ್ಯತಾ ವ್ಯಾಪಾರ ಒಪ್ಪಂದ (PTA) ಕುರಿತ ಚರ್ಚೆಗಳನ್ನು ತ್ವರಿತಗೊಳಿಸಬೇಕೆಂದು ಅವರು ಕರೆ ನೀಡಿದರು. ನಮೀಬಿಯಾ ದ ಪರಿಣತರಿಗಾಗಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ ಭಾರತವು ಅಭಿವೃದ್ಧಿ ಸಹಕಾರವನ್ನು ಹೆಚ್ಚಿಸಲಿದೆ ಮತ್ತು ನಮೀಬಿಯಾ ದಲ್ಲಿ ಉತ್ಪಾದನ ಸೌಲಭ್ಯಗಳನ್ನು ಸ್ಥಾಪಿಸುವಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಕೃಷಿ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ 'ಕ್ಷಿಪ್ರ ಪರಿಣಾಮದ ಅಭಿವೃದ್ಧಿ ಯೋಜನೆ'ಗಳಿಗೆ (Quick Impact development projects) ಭಾರತದ ಬೆಂಬಲವನ್ನು ಪ್ರಧಾನಮಂತ್ರಿಯವರು ಘೋಷಿಸಿದರು. ಕೃಷಿ ಉದ್ದೇಶಗಳಿಗಾಗಿ ಡ್ರೋನ್‌ ಗಳನ್ನು ಬಳಸುವಲ್ಲಿ ಭಾರತದ ಅನುಭವವನ್ನು ಪ್ರಧಾನಿ ಹಂಚಿಕೊಂಡರು, ಈ ಯೋಜನೆಯು ನಮೀಬಿಯಾ ಗೆ ಮೌಲ್ಯವನ್ನು ತಂದುಕೊಡಬಲ್ಲದು ಎಂದು ಹೇಳಿದರು.

ಭಾರತದಲ್ಲಿನ ಚೀತಾ ಸಂರಕ್ಷಣಾ ಯೋಜನೆಗೆ ನಮೀಬಿಯಾ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷೆ ನಂದಿ-ನದೈತ್ವಾ ಅವರಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ, 'ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್' (International Big Cat Alliance) ಸೇರಲು ನಮೀಬಿಯಾಕ್ಕೆ ಅವರು ಆಹ್ವಾನ ನೀಡಿದರು.

ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತದ ಜನರಿಗೆ ನೀಡಿದ ಬಲವಾದ ಬೆಂಬಲ ಮತ್ತು ಒಗ್ಗಟ್ಟಿಗೆ ನಮೀಬಿಯಾಕ್ಕೆ ಪ್ರಧಾನಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು. ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ಅವರು ಒಪ್ಪಿಕೊಂಡರು. 'ಗ್ಲೋಬಲ್ ಸೌತ್' ರಾಷ್ಟ್ರಗಳ ಧ್ವನಿಯನ್ನು ಪ್ರಬಲಗೊಳಿಸಲು ಒಟ್ಟಾಗಿ ಕೆಲಸ ಮಾಡಲು ಅವರು ಬದ್ಧತೆಯನ್ನು ವ್ಯಕ್ತಪಡಿಸಿದರು.

ಮಾತುಕತೆಗಳ ನಂತರ, ಉಭಯ ನಾಯಕರು ಆರೋಗ್ಯ ಮತ್ತು ಉದ್ಯಮಶೀಲತೆ ಕ್ಷೇತ್ರಗಳಲ್ಲಿನ ಎರಡು ತಿಳುವಳಿಕೆ ಒಪ್ಪಂದಗಳ (MoUs) ವಿನಿಮಯಕ್ಕೆ ಸಾಕ್ಷಿಯಾದರು. ಇದಲ್ಲದೆ, ನಮೀಬಿಯಾ ವು ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟ (Coalition for Disaster Resilient Infrastructure) ಮತ್ತು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು (Global Biofuels Alliance) ಸೇರಿಕೊಂಡಿದೆ ಎಂದು ಘೋಷಿಸಲಾಯಿತು. ವಿಶೇಷವೆಂದರೆ, ಯು.ಪಿ.ಐ. (UPI) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪರವಾನಗಿ ಒಪ್ಪಂದ ಮಾಡಿಕೊಂಡ ಮೊದಲ ದೇಶ ನಮೀಬಿಯಾ ಎಂದು ಪ್ರಕಟಿಸಲಾಯಿತು.

ಅಧ್ಯಕ್ಷೆ ನಂದಿ-ನದೈತ್ವಾ ಅವರು ಪ್ರಧಾನಮಂತ್ರಿಗಳ ಗೌರವಾರ್ಥ ಔತಣಕೂಟವನ್ನು ಆಯೋಜಿಸಿದ್ದರು. ಪ್ರಧಾನಮಂತ್ರಿಗಳು ಅನುಕೂಲಕರ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಲು ಅಧ್ಯಕ್ಷೆ ನಂದಿ-ನದೈತ್ವಾ ಅವರಿಗೆ ಆಹ್ವಾನ ನೀಡಿದರು.

 

*****
 


(Release ID: 2143654)