ಪ್ರಧಾನ ಮಂತ್ರಿಯವರ ಕಛೇರಿ
ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಿದ್ದರು
Posted On:
07 JUL 2025 8:18AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜುಲೈ 6-7, 2025 ರಂದು ಬ್ರೆಜಿಲ್ ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು. ಜಾಗತಿಕ ಆಡಳಿತದ ಸುಧಾರಣೆ, ಗ್ಲೋಬಲ್ ಸೌತ್ ನ (ದಕ್ಷಿಣದ ದೇಶಗಳ) ಧ್ವನಿಯನ್ನು ಹೆಚ್ಚಿಸುವುದು, ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯತೆಯನ್ನು ಬಲಪಡಿಸುವುದು, ಅಭಿವೃದ್ಧಿ ವಿಷಯಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಬ್ರಿಕ್ಸ್ ಕಾರ್ಯಸೂಚಿಯಲ್ಲಿನ ವಿವಿಧ ವಿಷಯಗಳ ಕುರಿತು ನಾಯಕರು ಫಲಪ್ರದ ಚರ್ಚೆಗಳನ್ನು ನಡೆಸಿದರು. ಪ್ರಧಾನಮಂತ್ರಿಯವರು, ಬ್ರೆಜಿಲ್ ಅಧ್ಯಕ್ಷರ ಆತ್ಮೀಯ ಆತಿಥ್ಯಕ್ಕೆ ಹಾಗೂ ಶೃಂಗಸಭೆಯ ಯಶಸ್ವಿ ಆಯೋಜನೆಗೆ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಧಾನಮಂತ್ರಿಯವರು "ಜಾಗತಿಕ ಆಡಳಿತ ಸುಧಾರಣೆ ಮತ್ತು ಶಾಂತಿ ಹಾಗೂ ಭದ್ರತೆ" ಕುರಿತ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಅದೇ ದಿನ, ಪ್ರಧಾನಮಂತ್ರಿಯವರು "ಬಹುಪಕ್ಷೀಯ, ಆರ್ಥಿಕ-ಹಣಕಾಸು ವ್ಯವಹಾರಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಲಪಡಿಸುವುದು" ಕುರಿತ ಅಧಿವೇಶನವನ್ನೂ ಉದ್ದೇಶಿಸಿ ಮಾತನಾಡಿದರು. ಈ ಅಧಿವೇಶನದಲ್ಲಿ ಬ್ರಿಕ್ಸ್ ಪಾಲುದಾರ ಮತ್ತು ಆಹ್ವಾನಿತ ದೇಶಗಳು ಪಾಲ್ಗೊಂಡಿದ್ದವು.
ಜಾಗತಿಕ ಆಡಳಿತ ಮತ್ತು ಶಾಂತಿ ಹಾಗೂ ಭದ್ರತೆ" ಕುರಿತ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗ್ಲೋಬಲ್ ಸೌತ್ ನ ಧ್ವನಿಯನ್ನು ಹೆಚ್ಚಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಸುಸ್ಥಿರ ಅಭಿವೃದ್ಧಿಗಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನದ ಲಭ್ಯತೆಯ ದೃಷ್ಟಿಯಿಂದ ಹೆಚ್ಚಿನ ಬೆಂಬಲದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. 20ನೇ ಶತಮಾನದ ಜಾಗತಿಕ ಸಂಸ್ಥೆಗಳು 21ನೇ ಶತಮಾನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಒತ್ತಿ ಹೇಳಿದ ಅವರು, ಅವುಗಳನ್ನು ಸುಧಾರಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಬಹುಧ್ರುವೀಯ ಮತ್ತು ಎಲ್ಲರನ್ನೂ ಒಳಗೊಂಡ ವಿಶ್ವ ಕ್ರಮಾಂಕಕ್ಕೆ ಕರೆ ನೀಡಿದ ಪ್ರಧಾನಮಂತ್ರಿಯವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC), IMF, ವಿಶ್ವಬ್ಯಾಂಕ್, ಮತ್ತು WTO ನಂತಹ ಜಾಗತಿಕ ಆಡಳಿತ ಸಂಸ್ಥೆಗಳು ಪ್ರಸ್ತುತ ವಾಸ್ತವಗಳನ್ನು ಪ್ರತಿಬಿಂಬಿಸಲು ತುರ್ತಾಗಿ ಸುಧಾರಣೆಗೆ ಒಳಗಾಗಬೇಕು ಎಂದು ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಕ್ಕಾಗಿ ಮತ್ತು ಶೃಂಗಸಭೆಯ ಘೋಷಣೆಯಲ್ಲಿ ಈ ವಿಷಯದ ಬಗ್ಗೆ ಕಠಿಣ ನಿಲುವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅವರು ನಾಯಕರಿಗೆ ಧನ್ಯವಾದ ಅರ್ಪಿಸಿದರು.
ಶಾಂತಿ ಮತ್ತು ಭದ್ರತೆಯ ವಿಷಯದಲ್ಲಿ, ಭಯೋತ್ಪಾದನೆಯು ಮಾನವಕುಲ ಎದುರಿಸುತ್ತಿರುವ ಗಂಭೀರ ಅಪಾಯವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ, ಏಪ್ರಿಲ್ 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಕೇವಲ ಭಾರತದ ಮೇಲಿನ ದಾಳಿಯಲ್ಲ, ಬದಲಿಗೆ ಇಡೀ ಮನುಕುಲದ ಮೇಲಿನ ಹಲ್ಲೆಯಾಗಿದೆ ಎಂದು ಅವರು ಉಲ್ಲೇಖಿಸಿದರು. ಭಯೋತ್ಪಾದನೆ ವಿರುದ್ಧ ಕಠಿಣ ಜಾಗತಿಕ ಕ್ರಮಕ್ಕೆ ಕರೆ ನೀಡಿದ ಪ್ರಧಾನಮಂತ್ರಿಯವರು, ಭಯೋತ್ಪಾದಕರಿಗೆ ಹಣಕಾಸು ಒದಗಿಸುವ, ಪ್ರೋತ್ಸಾಹಿಸುವ ಅಥವಾ ಅವರಿಗೆ ಸುರಕ್ಷಿತ ಆಶ್ರಯ ನೀಡುವವರನ್ನು ಅತ್ಯಂತ ಕಠಿಣವಾಗಿ ಎದುರಿಸಬೇಕು ಎಂದು ಹೇಳಿದರು. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಯಾವುದೇ ರೀತಿಯ ಇಬ್ಬಗೆಯ ನೀತಿ ಇರಬಾರದು ಎಂದು ಅವರು ಒತ್ತಿ ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅತ್ಯಂತ ಕಠಿಣ ಶಬ್ದಗಳಲ್ಲಿ ಖಂಡಿಸಿದ್ದಕ್ಕಾಗಿ ಅವರು ಬ್ರಿಕ್ಸ್ ನಾಯಕರಿಗೆ ಧನ್ಯವಾದ ಅರ್ಪಿಸಿದರು. ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ಬ್ರಿಕ್ಸ್ ರಾಷ್ಟ್ರಗಳಿಗೆ ಕರೆ ನೀಡಿದ ಅವರು, ಈ ಪಿಡುಗನ್ನು ಎದುರಿಸುವಲ್ಲಿ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಒತ್ತಿ ಹೇಳಿದರು.
ಈ ವಿಷಯದ ಬಗ್ಗೆ ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿಯವರು, ಪಶ್ಚಿಮ ಏಷ್ಯಾದಿಂದ ಯುರೋಪ್ ವರೆಗಿನ ಸಂಘರ್ಷಗಳು ತೀವ್ರ ಕಳವಳಕಾರಿ ವಿಷಯವಾಗಿವೆ ಎಂದು ತಿಳಿಸಿದರು. ಇಂತಹ ಸಂಘರ್ಷಗಳನ್ನು ಪರಿಹರಿಸಲು ಭಾರತವು ಯಾವಾಗಲೂ ಸಂವಾದ ಮತ್ತು ರಾಜತಾಂತ್ರಿಕತೆಗೆ ಕರೆ ನೀಡಿದೆ ಮತ್ತು ಅಂತಹ ಪ್ರಯತ್ನಗಳಿಗೆ ತನ್ನ ಕೊಡುಗೆ ನೀಡಲು ಸಿದ್ಧವಾಗಿದೆ ಎಂದು ಅವರು ಹೇಳಿದರು.
"ಬಹುಪಕ್ಷೀಯತೆ, ಆರ್ಥಿಕ-ಹಣಕಾಸು ವ್ಯವಹಾರಗಳು ಮತ್ತು ಕೃತಕ ಬುದ್ಧಿಮತ್ತೆಯನ್ನು ಬಲಪಡಿಸುವುದು" ಕುರಿತ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ವಿಶ್ವ ಕ್ರಮಾಂಕವು ಸಂಕಷ್ಟದಲ್ಲಿರುವ ಮತ್ತು ಜಾಗತಿಕ ಸಮುದಾಯವು ಅನಿಶ್ಚಿತತೆ ಹಾಗೂ ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಬ್ರಿಕ್ಸ್ ನ ಪ್ರಸ್ತುತತೆ ಸ್ಪಷ್ಟವಾಗಿದೆ ಎಂದು ಪ್ರತಿಪಾದಿಸಿದರು. ವೈವಿಧ್ಯತೆ ಮತ್ತು ಬಹುಧ್ರುವೀಯತೆಯೇ ಈ ಒಕ್ಕೂಟದ ಅಮೂಲ್ಯ ಶಕ್ತಿಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಬಹುಧ್ರುವೀಯ ವಿಶ್ವ ನಿರ್ಮಾಣದಲ್ಲಿ ಬ್ರಿಕ್ಸ್ ಮಹತ್ವದ ಪಾತ್ರವನ್ನು ವಹಿಸಬಲ್ಲದು ಎಂದು ಒತ್ತಿ ಹೇಳಿದ ಅವರು, ಈ ನಿಟ್ಟಿನಲ್ಲಿ ನಾಲ್ಕು ಪ್ರಮುಖ ಸಲಹೆಗಳನ್ನು ನೀಡಿದರು: ಒಂದು, BRICS ಹೊಸ ಅಭಿವೃದ್ಧಿ ಬ್ಯಾಂಕ್ ಯೋಜನೆಗಳಿಗೆ ಅನುದಾನ ನೀಡುವಾಗ ಬೇಡಿಕೆ-ಚಾಲಿತ ತತ್ವ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಅನುಸರಿಸಬೇಕು. ಎರಡು, ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ನೆರವಾಗಬಲ್ಲ 'ವಿಜ್ಞಾನ ಮತ್ತು ಸಂಶೋಧನಾ ಜ್ಞಾನಭಂಡಾರ'ವನ್ನು ಸ್ಥಾಪಿಸುವ ಬಗ್ಗೆ ಒಕ್ಕೂಟವು ಚಿಂತನೆ ನಡೆಸಬೇಕು. ಮೂರು, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾದ ಖನಿಜಗಳ ಪೂರೈಕೆ ಸರಪಳಿಯನ್ನು ಹೆಚ್ಚು ಸುರಕ್ಷಿತ ಹಾಗೂ ಸ್ಥಿತಿಸ್ಥಾಪಕವಾಗಿಸಲು ಆದ್ಯತೆ ನೀಡಬೇಕು. ನಾಲ್ಕು, ಜವಾಬ್ದಾರಿಯುತ AI ಬಳಕೆಯನ್ನು ಉತ್ತೇಜಿಸಲು ಒಕ್ಕೂಟವು ಶ್ರಮಿಸಬೇಕು. ಈ ನಿಟ್ಟಿನಲ್ಲಿ, AI ಆಡಳಿತಕ್ಕೆ ಸಂಬಂಧಿಸಿದ ಸವಾಲುಗಳನ್ನು ನಿಭಾಯಿಸುವಂತೆಯೇ, ಈ ಕ್ಷೇತ್ರದಲ್ಲಿನ ನಾವೀನ್ಯತೆಗೆ ಸಮಾನ ಪ್ರೋತ್ಸಾಹವನ್ನು ನೀಡಬೇಕು.
ನಾಯಕರ ಅಧಿವೇಶನದ ಮುಕ್ತಾಯದಲ್ಲಿ, ಸದಸ್ಯ ರಾಷ್ಟ್ರಗಳು 'ರಿಯೊ ಡಿ ಜನೈರೊ ಘೋಷಣೆ'ಯನ್ನು ಅಂಗೀಕರಿಸಿದವು.
*****
(Release ID: 2142814)
Read this release in:
English
,
Urdu
,
Hindi
,
Nepali
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam