ಪ್ರಧಾನ ಮಂತ್ರಿಯವರ ಕಛೇರಿ
ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
04 JUL 2025 10:40PM by PIB Bengaluru
ಗೌರವಾನ್ವಿತ ಪ್ರಧಾನ ಮಂತ್ರಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಜಿ,
ಸೆನೆಟ್ ನ ಗೌರವಾನ್ವಿತ ಅಧ್ಯಕ್ಷ ಶ್ರೀ ವೇಡ್ ಮಾರ್ಕ್,
ಗೌರವಾನ್ವಿತ ಸ್ಪೀಕರ್ ಶ್ರೀ ಜಗದೇವ್ ಸಿಂಗ್,
ಗೌರವಾನ್ವಿತ ಮಂತ್ರಿಗಳೇ,
ಗೌರವಾನ್ವಿತ ಸಂಸತ್ ಸದಸ್ಯರೇ,
ನಮಸ್ಕಾರ!
ಶುಭೋದಯ!
ಒಂದು ಹೆಮ್ಮೆಯ ಪ್ರಜಾಪ್ರಭುತ್ವ ಮತ್ತು ಸ್ನೇಹಪರ ರಾಷ್ಟ್ರದ ಚುನಾಯಿತ ಪ್ರತಿನಿಧಿಗಳಾದ ನಿಮ್ಮ ಮುಂದೆ ನಿಲ್ಲಲು ನಾನು ಅತೀವ ಗೌರವವನ್ನು ಅನುಭವಿಸುತ್ತಿದ್ದೇನೆ.
ನಾನು ಭಾರತದ 140 ಕೋಟಿ ಜನರ ಶುಭಾಶಯಗಳನ್ನು ತಂದಿದ್ದೇನೆ. ಇಲ್ಲಿಗೆ ಬರುವ ಮುನ್ನ ನಾನು ಭೇಟಿ ನೀಡಿದ ಘಾನಾ ದೇಶದ ಜನರ ಆತ್ಮೀಯ ಹಾರೈಕೆಗಳನ್ನೂ ಹೊತ್ತು ತಂದಿದ್ದೇನೆ.
ಈ ಐತಿಹಾಸಿಕ 'ರೆಡ್ ಹೌಸ್'ನಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿರುವುದು ನನಗೆ ದೊರೆತ ವಿನಮ್ರ ಗೌರವ. ಈ ಐತಿಹಾಸಿಕ ಕಟ್ಟಡವು ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಸ್ವಾತಂತ್ರ್ಯ ಮತ್ತು ಘನತೆಗಾಗಿ ನಡೆದ ಹೋರಾಟ ಹಾಗೂ ತ್ಯಾಗಗಳಿಗೆ ಸಾಕ್ಷಿಯಾಗಿದೆ. ಕಳೆದ ಆರು ದಶಕಗಳಲ್ಲಿ ನೀವು ನ್ಯಾಯನಿಷ್ಠ, ಸರ್ವಸಮ್ಮತ ಹಾಗೂ ಸಮೃದ್ಧಿಯುತ ಪ್ರಜಾಪ್ರಭುತ್ವವನ್ನು ರೂಪಿಸುವಲ್ಲಿ, ಈ ಭವನವು ನಿಮ್ಮ ಪಯಣದ ದೃಢ ಹೆಗ್ಗುರುತಾಗಿ ನಿಂತಿದೆ.
ಸ್ನೇಹಿತರೇ,
ಈ ಮಹಾನ್ ರಾಷ್ಟ್ರದ ಜನರು ಇಬ್ಬರು ಅಸಾಧಾರಣ ಮಹಿಳಾ ನಾಯಕಿಯರನ್ನು ಆಯ್ಕೆ ಮಾಡಿದ್ದಾರೆ – ಒಬ್ಬರು ರಾಷ್ಟ್ರಪತಿಗಳು, ಇನ್ನೊಬ್ಬರು ಪ್ರಧಾನಮಂತ್ರಿಗಳು. ಇವರಿಬ್ಬರೂ ತಮ್ಮನ್ನು ಭಾರತೀಯ ಮೂಲದ ಹೆಣ್ಣುಮಕ್ಕಳು ಎಂದು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತಾರೆ. ತಮ್ಮ ಭಾರತೀಯ ಪರಂಪರೆಯ ಬಗ್ಗೆ ಅವರಿಗೆ ಅಪಾರ ಹೆಮ್ಮೆಯಿದೆ. ಭಾರತದಲ್ಲಿ ನಾವು ಅವರ ನಾಯಕತ್ವ, ಧೈರ್ಯ ಮತ್ತು ದೃಢ ಸಂಕಲ್ಪವನ್ನು ನಿಜಕ್ಕೂ ಮೆಚ್ಚುತ್ತೇವೆ. ನಮ್ಮ ದೇಶಗಳ ನಡುವಿನ ಸಂಬಂಧಕ್ಕೆ, ಹಂಚಿಕೊಂಡ ಬೇರುಗಳು ಮತ್ತು ಹಂಚಿಕೊಂಡ ಕನಸುಗಳ ಮೇಲೆ ನಿರ್ಮಿತವಾದ ನಂಟಿಗೆ, ಅವರು ಜೀವಂತ ಸಂಕೇತಗಳಾಗಿದ್ದಾರೆ.
ಗೌರವಾನ್ವಿತ ಸದಸ್ಯರೇ,
ನಮ್ಮ ಎರಡೂ ರಾಷ್ಟ್ರಗಳು ವಸಾಹತುಶಾಹಿ ಆಡಳಿತದ ನೆರಳಿನಿಂದ ಹೊರಬಂದು ತಮ್ಮದೇ ಆದ ಕಥೆಗಳನ್ನು ಬರೆದಿವೆ – ಧೈರ್ಯ ನಮ್ಮ ಶಾಯಿಯಾದರೆ, ಪ್ರಜಾಪ್ರಭುತ್ವ ನಮ್ಮ ಲೇಖನಿ.
ಇಂದು, ನಮ್ಮ ಎರಡೂ ರಾಷ್ಟ್ರಗಳು ಹೆಮ್ಮೆಯ ಪ್ರಜಾಪ್ರಭುತ್ವಗಳಾಗಿ, ಆಧುನಿಕ ಜಗತ್ತಿನಲ್ಲಿ ಶಕ್ತಿಯ ಆಧಾರಸ್ತಂಭಗಳಾಗಿ ನಿಂತಿವೆ. ಕೆಲವು ತಿಂಗಳ ಹಿಂದೆ, ನೀವು ಚುನಾವಣೆಗಳಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿದ್ದೀರಿ. ಈ ದೇಶದ ಜನರಿಗೆ ಅವರ ಬುದ್ಧಿವಂತಿಕೆ ಮತ್ತು ದೂರದೃಷ್ಟಿಗಾಗಿ – ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ – ನಾನು ಅಭಿನಂದಿಸುತ್ತೇನೆ. ಈ ಭವ್ಯ ಸದನದ ನೂತನವಾಗಿ ಆಯ್ಕೆಯಾದ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ.
ಪ್ರಧಾನಮಂತ್ರಿ ಕಮಲಾ ಜೀ ಅವರು ಮತ್ತೊಮ್ಮೆ ಸರ್ಕಾರವನ್ನು ರಚಿಸಿದ್ದಕ್ಕಾಗಿ ನಾನು ವಿಶೇಷ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮತ್ತು, ಅವರು ಈ ಮಹಾನ್ ರಾಷ್ಟ್ರವನ್ನು ನಿರಂತರ ಬೆಳವಣಿಗೆ ಮತ್ತು ಸಮೃದ್ಧಿಯತ್ತ ಮುನ್ನಡೆಸುವಲ್ಲಿ ನಿರಂತರ ಯಶಸ್ಸನ್ನು ಪಡೆಯಲಿ ಎಂದು ಹಾರೈಸುತ್ತೇನೆ.
ಸ್ನೇಹಿತರೇ,
ಸಭಾಧ್ಯಕ್ಷರ ಆಸನದ ಮೇಲೆ ಕೆತ್ತಿರುವ "ಭಾರತದ ಜನರಿಂದ, ಟ್ರಿನಿಡಾಡ್ ಮತ್ತು ಟೊಬಾಗೋದ ಜನರಿಗೆ" ಎಂಬ ಸುವರ್ಣಾಕ್ಷರಗಳನ್ನು ನೋಡಿದಾಗ, ನನ್ನ ಮನಸ್ಸು ಭಾವಪರವಶವಾಗುತ್ತದೆ. ಆ ಪೀಠವು ಕೇವಲ ಒಂದು ಆಸನವಲ್ಲ, ಅದು ನಮ್ಮ ಎರಡೂ ರಾಷ್ಟ್ರಗಳ ನಡುವಿನ ಸ್ನೇಹ ಮತ್ತು ವಿಶ್ವಾಸದ ಒಂದು ಶಕ್ತಿಯುತ ಸಂಕೇತವಾಗಿದೆ. ಒಂದು ಪ್ರಜಾಪ್ರಭುತ್ವವು ಇನ್ನೊಂದು ಪ್ರಜಾಪ್ರಭುತ್ವದ ಬಗ್ಗೆ ಇಟ್ಟಿರುವ ಭಾವನಾತ್ಮಕ ಸಂಬಂಧವನ್ನು ಆ ಮಾತುಗಳು ಸಾರುತ್ತವೆ.
ನಿಮ್ಮೆಲ್ಲರಿಗೂ ತಿಳಿದಿರುವಂತೆ, ಭಾರತೀಯರಿಗೆ ಪ್ರಜಾಪ್ರಭುತ್ವ ಕೇವಲ ಒಂದು ರಾಜಕೀಯ ಮಾದರಿ ಮಾತ್ರವಲ್ಲ. ನಮ್ಮ ಪಾಲಿಗೆ, ಇದು ಜೀವನ ವಿಧಾನ... ಇದು ನಮ್ಮ ಸಾವಿರಾರು ವರ್ಷಗಳ ಮಹಾನ್ ಪರಂಪರೆಯಾಗಿದೆ. ಈ ಸಂಸತ್ತಿನಲ್ಲಿಯೂ ಬಿಹಾರ ಮೂಲದ ಅನೇಕ ಸದಸ್ಯರಿದ್ದಾರೆ... ಆ ಬಿಹಾರವು ಮಹಾಜನಪದಗಳ, ಅಂದರೆ ಪ್ರಾಚೀನ ಗಣರಾಜ್ಯಗಳ ನಾಡು.
ಭಾರತದಲ್ಲಿ, ಪ್ರಜಾಪ್ರಭುತ್ವ ಕೇವಲ ಒಂದು ರಾಜಕೀಯ ವ್ಯವಸ್ಥೆಯಲ್ಲ. ನಮ್ಮ ಪಾಲಿಗೆ, ಇದು ಒಂದು ಜೀವನ ವಿಧಾನ. ನಿಮ್ಮ ಸಂಸತ್ತಿನಲ್ಲಿಯೂ ಕೆಲವು ಸದಸ್ಯರಿದ್ದಾರೆ, ಅವರ ಪೂರ್ವಜರು ಭಾರತದ ಬಿಹಾರ ರಾಜ್ಯದಿಂದ ಬಂದವರು. ಬಿಹಾರವು ವೈಶಾಲಿಯಂತಹ ಪ್ರಾಚೀನ ಗಣರಾಜ್ಯಗಳ ಕೇಂದ್ರಗಳಿಗೆ ಹೆಸರುವಾಸಿಯಾಗಿದೆ.
ಸ್ನೇಹಿತರೇ,
ನಮ್ಮ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಒಂದು ಸಹಜವಾದ ಆತ್ಮೀಯತೆಯಿದೆ. ನಾನು ಇದನ್ನು ಹೇಳಲೇಬೇಕು, ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಭಾರತೀಯರು ಅತ್ಯಂತ ಕಟ್ಟಾ ಅಭಿಮಾನಿಗಳಾಗಿದ್ದಾರೆ! ಅವರು ಭಾರತದ ವಿರುದ್ಧ ಆಡುವಾಗ ಮಾತ್ರ ಹೊರತುಪಡಿಸಿ, ಉಳಿದ ಸಮಯಗಳಲ್ಲಿ ನಾವು ಅವರನ್ನು ಹೃತ್ಪೂರ್ವಕವಾಗಿ ಹುರಿದುಂಬಿಸುತ್ತೇವೆ.
ನಮ್ಮ ಎರಡೂ ದೇಶಗಳ ಸಂಬಂಧವು ಶತಮಾನಗಳಷ್ಟು ಹಳೆಯ ನಂಟುಗಳ ಅಡಿಪಾಯದ ಮೇಲೆ ನಿಂತಿದೆ. 180 ವರ್ಷಗಳ ಹಿಂದೆ, ಮೊದಲ ಭಾರತೀಯರು ಸುದೀರ್ಘ ಮತ್ತು ಕಠಿಣ ಪ್ರಯಾಣದ ನಂತರ ಈ ನೆಲಕ್ಕೆ ಆಗಮಿಸಿದರು. ಸಾಗರಗಳ ಆಚೆಯಿಂದ, ಭಾರತೀಯ ತಾಳಗಳು ಕೆರಿಬಿಯನ್ ಲಯದೊಂದಿಗೆ ಸುಂದರವಾಗಿ ಬೆರೆತು ಹೋದವು.
ಇಲ್ಲಿ, ಭೋಜ್ ಪುರಿಯು ಕ್ರಿಯೋಲ್‌ನೊಂದಿಗೆ ಸಾಮರಸ್ಯವನ್ನು ಕಂಡುಕೊಂಡಿತು.
ದಾಲ್ ಪುರಿಯು ಡಬಲ್ಸ್ ಅನ್ನು ಸಂಧಿಸಿತು,
ಹಾಗೆಯೇ, ತಬಲಾವು ಸ್ಟೀಲ್ ಪ್ಯಾನ್ ಅನ್ನು ಸೇರಿಕೊಂಡಿತು!
ಇಂದು, ಭಾರತೀಯ ಮೂಲದ ಜನರು ಕೆಂಪು, ಕಪ್ಪು ಮತ್ತು ಬಿಳಿ ಬಣ್ಣದ ಧ್ವಜವನ್ನು ಹೆಮ್ಮೆಯಿಂದ ಎತ್ತಿ ಹಿಡಿದಿದ್ದಾರೆ!
ರಾಜಕೀಯದಿಂದ ಕಾವ್ಯದವರೆಗೆ, ಕ್ರಿಕೆಟ್‌ನಿಂದ ವಾಣಿಜ್ಯದವರೆಗೆ, ಕ್ಯಾಲಿಪ್ಸೋದಿಂದ ಚಟ್ನಿಯವರೆಗೆ, ಪ್ರತಿಯೊಂದು ಕ್ಷೇತ್ರಕ್ಕೂ ಅವರು ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ನೀವೆಲ್ಲರೂ ಗೌರವಿಸುವ ಈ ವರ್ಣರಂಜಿತ ವೈವಿಧ್ಯತೆಯ ಅವಿಭಾಜ್ಯ ಅಂಗವಾಗಿದ್ದಾರೆ ಅವರು. "ಒಟ್ಟಾಗಿ ನಾವು ಆಶಿಸುತ್ತೇವೆ, ಒಟ್ಟಾಗಿ ನಾವು ಸಾಧಿಸುತ್ತೇವೆ” (Together we aspire, together we achieve) ಎಂಬ ತನ್ನ ಧ್ಯೇಯವಾಕ್ಯದಂತೆ ಜೀವಿಸುವ ರಾಷ್ಟ್ರವನ್ನು ನೀವೆಲ್ಲರೂ ಜೊತೆಗೂಡಿ ನಿರ್ಮಿಸಿದ್ದೀರಿ.
ಸ್ನೇಹಿತರೇ,
ಇಂದು ಬೆಳಿಗ್ಗೆ, ಘನತೆವೆತ್ತ ರಾಷ್ಟ್ರಪತಿಯವರು ನನಗೆ ಈ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 140 ಕೋಟಿ ಭಾರತೀಯರ ಪರವಾಗಿ ನಾನು ಅದನ್ನು ವಿನಮ್ರವಾಗಿ ಸ್ವೀಕರಿಸಿದ್ದೇನೆ.
ಈಗ, ಅಪಾರ ಕೃತಜ್ಞತೆಯೊಂದಿಗೆ, ಈ ಪ್ರಶಸ್ತಿಯನ್ನು ನಮ್ಮೆರಡೂ ರಾಷ್ಟ್ರಗಳ ನಡುವಿನ ಶಾಶ್ವತ ಸ್ನೇಹ ಮತ್ತು ಪಾರಂಪರಿಕ ಸಂಬಂಧಗಳಿಗೆ ಸಮರ್ಪಿಸುತ್ತೇನೆ.
ಸ್ನೇಹಿತರೇ,
ಈ ಸದನದಲ್ಲಿ ಇಷ್ಟೊಂದು ಮಹಿಳಾ ಸದಸ್ಯರಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಮಹಿಳೆಯರ ಬಗೆಗಿನ ಗೌರವವು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ನಮ್ಮ ಪ್ರಮುಖ ಪವಿತ್ರ ಗ್ರಂಥಗಳಲ್ಲಿ ಒಂದಾದ ಸ್ಕಂದ ಪುರಾಣದಲ್ಲಿ ಹೀಗೆ ಹೇಳಲಾಗಿದೆ:
ದಶಪುತ್ರ ಸಮ ಕನ್ಯಾ ದಶಪುತ್ರಾನ್ ಪ್ರವರ್ಧಯನ್ |
ಯತ್ ಫలం ಲಭತೇ ಮರ್ತ್ಯಃ ತತ್ ಲಭ್ಯಂ ಕನ್ಯಾ ಏಕಯಾ ||
ಇದರರ್ಥ, ಒಬ್ಬ ಮಗಳು ಹತ್ತು ಗಂಡುಮಕ್ಕಳಷ್ಟೇ ಸಂತೋಷವನ್ನು ತರುತ್ತಾಳೆ. ಆಧುನಿಕ ಭಾರತವನ್ನು ಕಟ್ಟಲು ನಾವು ಮಹಿಳೆಯರ ಕೈಗಳನ್ನು ಬಲಪಡಿಸುತ್ತಿದ್ದೇವೆ.
ಅಂತರಿಕ್ಷದಿಂದ ಕ್ರೀಡೆಯವರೆಗೆ, ನವೋದ್ಯಮಗಳಿಂದ ವಿಜ್ಞಾನದವರೆಗೆ, ಶಿಕ್ಷಣದಿಂದ ಉದ್ಯಮದವರೆಗೆ, ವಾಯುಯಾನದಿಂದ ಸಶಸ್ತ್ರ ಪಡೆಗಳವರೆಗೆ – ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಹೊಸ ಭವಿಷ್ಯದತ್ತ ಮುನ್ನಡೆಸುತ್ತಿದ್ದಾರೆ. ನಿಮ್ಮ ದೇಶದಂತೆ, ನಮ್ಮಲ್ಲೂ ಒಬ್ಬ ಮಹಿಳೆ ಸಾಮಾನ್ಯ ಹಿನ್ನೆಲೆಯಿಂದಲೇ ರಾಷ್ಟ್ರಪತಿ ಸ್ಥಾನಕ್ಕೇರಿದ್ದಾರೆ.
ಎರಡು ವರ್ಷಗಳ ಹಿಂದೆ, ಭಾರತೀಯ ಸಂಸತ್ತು ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿತು. ಸಂಸತ್ತು ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ಖಾತರಿಪಡಿಸಲು ನಾವು ತೀರ್ಮಾನಿಸಿದೆವು. ಇದರಿಂದಾಗಿ ಮುಂದಿನ ತಲೆಮಾರುಗಳಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ರಾಷ್ಟ್ರದ ಭವಿಷ್ಯ ಮತ್ತು ದಿಕ್ಕನ್ನು ನಿರ್ಧರಿಸಲಿದ್ದಾರೆ.
ಭಾರತದಲ್ಲಿ ತಳಮಟ್ಟದಲ್ಲಿಯೂ ಮಹಿಳಾ ನಾಯಕರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಸುಮಾರು 1.5 ದಶಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳೆಯರು ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ನಾವು ಪ್ರಸ್ತುತ ಮಹಿಳಾ ನೇತೃತ್ವದ ಅಭಿವೃದ್ಧಿಯ ಯುಗದಲ್ಲಿದ್ದೇವೆ. ಇದು ನಮ್ಮ G20 ಅಧ್ಯಕ್ಷತೆಯ ಅವಧಿಯಲ್ಲಿ ನಾವು ಪ್ರಮುಖವಾಗಿ ಪ್ರಚಾರ ಮಾಡಿದ ವಿಷಯಗಳಲ್ಲಿ ಒಂದಾಗಿದೆ.
ಭಾರತದಲ್ಲಿ ನಾವು ಮಹಿಳಾ ನೇತೃತ್ವದ ಅಭಿವೃದ್ಧಿಯ ಒಂದು ಹೊಸ ಮಾದರಿಯನ್ನು ರೂಪಿಸುತ್ತಿದ್ದೇವೆ. ನಮ್ಮ G-20 ಅಧ್ಯಕ್ಷತೆಯ ಸಮಯದಲ್ಲಿ, ಈ ಮಾದರಿಯ ಯಶಸ್ಸನ್ನು ನಾವು ಇಡೀ ವಿಶ್ವದ ಮುಂದಿಟ್ಟಿದ್ದೇವೆ.
ಗೌರವಾನ್ವಿತ ಸದಸ್ಯರೇ,
ಇಂದು ಭಾರತ ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಪ್ರತಿ ಕ್ಷೇತ್ರ, ಪ್ರತಿ ಪ್ರದೇಶ ಮತ್ತು ಸಮಾಜದ ಪ್ರತಿಯೊಬ್ಬರೂ ಈ ಬೆಳವಣಿಗೆಯ ಕಥೆಯ ಭಾಗವಾಗಿದ್ದಾರೆ.
ಭಾರತದ ಬೆಳವಣಿಗೆಯು ಸಮಗ್ರ ಮತ್ತು ಜನ-ಕೇಂದ್ರಿತವಾಗಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಇತ್ತೀಚಿನ ವರದಿಯು, ಭಾರತದ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಯು 950 ಮಿಲಿಯನ್ ಜನರನ್ನು (ಸುಮಾರು 1 ಬಿಲಿಯನ್ ಜನರನ್ನು) ಒಳಗೊಂಡಿದೆ ಎಂದು ಹೇಳುತ್ತದೆ. ಇದು ವಿಶ್ವದ ಹೆಚ್ಚಿನ ದೇಶಗಳ ಜನಸಂಖ್ಯೆಗಿಂತಲೂ ಅಧಿಕ!
ಇಂತಹ ಸಮಗ್ರ ಬೆಳವಣಿಗೆಗಾಗಿ ನಮ್ಮ ವಿಷನ್ ನಮ್ಮ ಗಡಿಗಳಿಗಷ್ಟೇ ಸೀಮಿತವಾಗಿಲ್ಲ. ನಮ್ಮ ಅಭಿವೃದ್ಧಿಯನ್ನು ಇತರರ ಬಗೆಗಿನ ಜವಾಬ್ದಾರಿಯೆಂದೂ ನಾವು ಭಾವಿಸುತ್ತೇವೆ. ಮತ್ತು, ಗ್ಲೋಬಲ್ ಸೌತ್ (Global South) ಯಾವಾಗಲೂ ನಮ್ಮ ಆದ್ಯತೆಯಾಗಿರುತ್ತದೆ.
ಅದೇ ಸ್ಪೂರ್ತಿಯೊಂದಿಗೆ, ನಾವು ಟ್ರಿನಿಡಾಡ್ ಮತ್ತು ಟೊಬಾಗೋದೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದೇವೆ. ನಮ್ಮ ವ್ಯಾಪಾರ-ವಹಿವಾಟು ಮತ್ತಷ್ಟು ವೃದ್ಧಿಸಲಿದೆ. ನಮ್ಮ ಉದ್ಯಮಗಳು ಈ ದೇಶದಲ್ಲಿ ಹೆಚ್ಚು ಹೂಡಿಕೆ ಮಾಡಲು ನಾವು ಪ್ರೋತ್ಸಾಹಿಸುತ್ತೇವೆ. ನಮ್ಮ ಅಭಿವೃದ್ಧಿ ಸಹಭಾಗಿತ್ವವು ವಿಸ್ತರಿಸಲಿದೆ. ತರಬೇತಿ, ಸಾಮರ್ಥ್ಯ ವೃದ್ಧಿ, ಮತ್ತು ಕೌಶಲ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ, ಮಾನವ ಅಭಿವೃದ್ಧಿಯೇ ನಮ್ಮ ಸಹಭಾಗಿತ್ವದ ಕೇಂದ್ರಬಿಂದುವಾಗಿರುತ್ತದೆ. ಆರೋಗ್ಯವು ನಮ್ಮ ಪಾಲುದಾರಿಕೆಯ ಪ್ರಮುಖ ಭಾಗವಾಗಿದೆ ಮತ್ತು ಮುಂದೆಯೂ ಆಗಿರಲಿದೆ.
ಅನೇಕ ಭಾರತೀಯ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಇಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಭಾರತೀಯ ವೈದ್ಯಕೀಯ ಮಾನದಂಡಗಳನ್ನು ಮಾನ್ಯ ಮಾಡಲು ನಿರ್ಧರಿಸಿರುವುದು ನಮಗೆ ಸಂತಸ ತಂದಿದೆ. ಇದು ಎಲ್ಲರಿಗೂ ಉತ್ತಮ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಔಷಧಿಗಳು ಲಭ್ಯವಾಗುವಂತೆ ಮಾಡುತ್ತದೆ.
ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಮ್ಮ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಇದು ಒಂದು ಮಹತ್ವದ ಮುನ್ನಡೆಯಾಗಿದೆ. ಯುಪಿಐ ಭಾರತದಲ್ಲಿ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ.
ಈ ವೇದಿಕೆಯ ಬಲದಿಂದ, ಜಗತ್ತಿನಲ್ಲಿಯೇ ಅತಿ ಹೆಚ್ಚು ರಿಯಲ್ ಟೈಮ್ ಡಿಜಿಟಲ್ ಪಾವತಿಗಳನ್ನು ನಡೆಸುವ ರಾಷ್ಟ್ರವಾಗಿ ಭಾರತವು ಇಂದು ಹೊರಹೊಮ್ಮಿದೆ. ಇಂದು ಭಾರತದಲ್ಲಿ, ಮಾವಿನಹಣ್ಣು ಮಾರುವವರ ಬಳಿಯೂ ಕ್ಯೂಆರ್ ಕೋಡ್ ಗಳಿವೆ. ನೀವು ಅವರಿಗೆ ನಗದು ನೀಡಲು ಹೋದರೆ, ಅವರ ಬಳಿ ಚಿಲ್ಲರೆ ಇರುವುದಿಲ್ಲವಾದ್ದರಿಂದ, ಯುಪಿಐ ಬಳಸಲು ಹೇಳುತ್ತಾರೆ!
ಇತರ ಡಿಜಿಟಲ್ ನಾವೀನ್ಯತೆಗಳಲ್ಲೂ ಸಹಭಾಗಿತ್ವ ಹೊಂದಲು ನಾವು ಉತ್ಸುಕರಾಗಿದ್ದೇವೆ. 'ಗ್ಲೋಬಲ್ ಸೌತ್' ರಾಷ್ಟ್ರಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತವು ಕೃತಕ ಬುದ್ಧಿಮತ್ತೆಯ (AI) ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೋ ನಮ್ಮ ಆದ್ಯತೆಯ ರಾಷ್ಟ್ರವಾಗಿರುತ್ತದೆ.
ಕೃಷಿ, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ನಮ್ಮ ಪರಿಣತಿಯನ್ನು ನಾವು ಹಂಚಿಕೊಳ್ಳುತ್ತೇವೆ. ಭಾರತದಿಂದ ಬರುವ ಯಂತ್ರೋಪಕರಣಗಳು ನಿಮ್ಮ ಕೃಷಿ-ಉದ್ಯಮಕ್ಕೆ ಬೆಂಬಲ ನೀಡಲಿವೆ. ಹಾಗೆಯೇ, ಅಭಿವೃದ್ಧಿ ಎಂದರೆ ಘನತೆಯೂ ಹೌದು. ಆದ್ದರಿಂದ, ಇಲ್ಲಿನ ವಿಶೇಷ ಚೇತನ ನಾಗರಿಕರಿಗಾಗಿ ನಾವು ಕೃತಕ ಕಾಲು ಜೋಡಣೆಯ ಶಿಬಿರವೊಂದನ್ನು ಆಯೋಜಿಸಲಿದ್ದೇವೆ.
ನಮ್ಮ ಪಾಲಿಗೆ, ನಿಮ್ಮೊಂದಿಗಿನ ನಮ್ಮ ಸಹಕಾರಕ್ಕೆ ಯಾವುದೇ ಮಿತಿಗಳಿಲ್ಲ. ನಿಮ್ಮ ಅಗತ್ಯಗಳು ಮತ್ತು ಆದ್ಯತೆಗಳೇ ನಮಗೆ ಸದಾ ಮಾರ್ಗದರ್ಶಿಯಾಗಿರುತ್ತವೆ.
ಸ್ನೇಹಿತರೇ,
ನಮ್ಮ ರಾಷ್ಟ್ರಗಳ ನಡುವಿನ ಸಮನ್ವಯ ಶಕ್ತಿಯು (Synergy) ಉಜ್ವಲ ಭವಿಷ್ಯವನ್ನು ಹೊಂದಿದೆ. ಕೆರಿಬಿಯನ್ ವಲಯದ ಪ್ರಮುಖ ರಾಷ್ಟ್ರವಾಗಿ ಮತ್ತು ಲ್ಯಾಟಿನ್ ಅಮೇರಿಕಾಕ್ಕೆ ಒಂದು ಸೇತುವೆಯಾಗಿ, ಟ್ರಿನಿಡಾಡ್ ಮತ್ತು ಟೊಬಾಗೋ ಅಪಾರವಾದ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಬಾಂಧವ್ಯವು, ಈ ವಿಶಾಲ ಪ್ರದೇಶದೊಂದಿಗೆ ಮತ್ತಷ್ಟು ಬಲವಾದ ಸಂಬಂಧವನ್ನು ಬೆಸೆಯಲು ನಮಗೆ ಸಹಾಯ ಮಾಡುತ್ತದೆ ಎಂಬ ಖಾತ್ರಿ ನನಗಿದೆ.
ಎರಡನೇ ಭಾರತ-ಕ್ಯಾರಿಕಾಮ್ (India-CARICOM) ಶೃಂಗಸಭೆಯ ವೇಗವನ್ನು ಬಳಸಿಕೊಂಡು, ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ, ಮೂಲಸೌಕರ್ಯ ಮತ್ತು ಸಂಚಾರವನ್ನು ನಿರ್ಮಿಸುವ, ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ದೊಡ್ಡ ಪ್ರಮಾಣದಲ್ಲಿ ಸಾಮರ್ಥ್ಯ ವರ್ಧನೆ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಬೆಂಬಲಿಸುವ ಉಪಕ್ರಮಗಳಲ್ಲಿ ಸಹಕರಿಸಲು ನಾವು ಉತ್ಸುಕರಾಗಿದ್ದೇವೆ.
ಸ್ನೇಹಿತರೇ,
ನಾನು ನಮ್ಮ ಈ ಸಹಭಾಗಿತ್ವವನ್ನು ಕೇವಲ ದ್ವಿಪಕ್ಷೀಯವಾಗಿ ನೋಡದೆ, ಒಂದು ವಿಶಾಲವಾದ ಜಾಗತಿಕ ಚೌಕಟ್ಟಿನಲ್ಲಿ ನೋಡುತ್ತೇನೆ. ಇಂದು ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯ ಪ್ರಮಾಣ ಮತ್ತು ವೇಗವು ಅಭೂತಪೂರ್ವವಾಗಿದೆ. ರಾಜಕೀಯ ಮತ್ತು ಅಧಿಕಾರದ ಸ್ವರೂಪದಲ್ಲಿಯೇ ಮೂಲಭೂತವಾದ ಪಲ್ಲಟಗಳು ಆಗುತ್ತಿವೆ. ಮುಕ್ತ ವ್ಯಾಪಾರವು ಒತ್ತಡದಲ್ಲಿದೆ. ಜಾಗತಿಕ ಮಟ್ಟದಲ್ಲಿ ವಿಭಜನೆಗಳು, ವಿವಾದಗಳು ಮತ್ತು ಅಸಮಾನತೆಗಳು ಹೆಚ್ಚುತ್ತಿವೆ.
ಇಡೀ ಜಗತ್ತು ಹವಾಮಾನ ಬದಲಾವಣೆ, ಆಹಾರ, ಆರೋಗ್ಯ ಮತ್ತು ಇಂಧನ ಭದ್ರತೆಯಂತಹ ಸವಾಲುಗಳನ್ನು ಎದುರಿಸುತ್ತಿದೆ. ಭಯೋತ್ಪಾದನೆಯು ಇಂದಿಗೂ ಒಂದು ಗಂಭೀರವಾದ ಬೆದರಿಕೆಯಾಗಿಯೇ ಉಳಿದಿದೆ. ಹಿಂದಿನ ವಸಾಹತುಶಾಹಿ ಆಡಳಿತಗಳು ಕೊನೆಗೊಂಡಿರಬಹುದು, ಆದರೆ ಅವುಗಳ ಕರಾಳ ನೆರಳುಗಳು ಇಂದಿಗೂ ಹೊಸ ಹೊಸ ರೂಪಗಳಲ್ಲಿ ನಮ್ಮನ್ನು ಕಾಡುತ್ತಿವೆ.
ಬಾಹ್ಯಾಕಾಶ ಮತ್ತು ಸೈಬರ್ ಭದ್ರತಾ ಕ್ಷೇತ್ರಗಳಲ್ಲಿ ಹೊಸ ಸವಾಲುಗಳು ಎದುರಾಗಿವೆ. ಕೃತಕ ಬುದ್ಧಿಮತ್ತೆಯು (AI) ಹೊಸ ಅವಕಾಶಗಳನ್ನು ತೆರೆಯುತ್ತಿರುವುದರ ಜೊತೆಗೆ, ಹೊಸ ಅಪಾಯಗಳನ್ನೂ ಸಹ ಸೃಷ್ಟಿಸುತ್ತಿದೆ. ಹಳೆಯ ಜಾಗತಿಕ ಸಂಸ್ಥೆಗಳು ಶಾಂತಿ ಮತ್ತು ಪ್ರಗತಿಯನ್ನು ಒದಗಿಸಲು ಹೆಣಗಾಡುತ್ತಿವೆ.
ಅದೇ ಸಮಯದಲ್ಲಿ, 'ಗ್ಲೋಬಲ್ ಸೌತ್' (Global South) ರಾಷ್ಟ್ರಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಅವು ಒಂದು ಹೊಸ ಮತ್ತು ಹೆಚ್ಚು ನ್ಯಾಯಸಮ್ಮತವಾದ ಜಾಗತಿಕ ವ್ಯವಸ್ಥೆಯನ್ನು ಕಾಣಲು ಬಯಸುತ್ತಿವೆ. ವಿಶ್ವಸಂಸ್ಥೆಗೆ 75 ವರ್ಷಗಳು ತುಂಬಿದಾಗ, ಅಭಿವೃದ್ಧಿಶೀಲ ರಾಷ್ಟ್ರಗಳಾದ್ಯಂತ ಒಂದು ದೊಡ್ಡ ಭರವಸೆ ಮೂಡಿತ್ತು. ಹಲವು ಸಮಯದಿಂದ ಬಾಕಿ ಉಳಿದಿದ್ದ ಸುಧಾರಣೆಗಳು ಜಾರಿಗೆ ಬರಬಹುದೆಂಬ, ತಮ್ಮ ಧ್ವನಿಯನ್ನು ಕೊನೆಗೂ ಯಾರಾದರೂ ಕೇಳುತ್ತಾರೆಂಬ ಭರವಸೆ ಅದಾಗಿತ್ತು. ಆದರೆ, ಆ ಭರವಸೆಯು ಇಂದು ನಿರಾಶೆಯಾಗಿ ಬದಲಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯು ಇಂದಿಗೂ ಮೂಲೆಗುಂಪಾಗಿದೆ. ಭಾರತವು ಈ ಕಂದಕವನ್ನು ಮುಚ್ಚಲು ಸದಾ ಪ್ರಯತ್ನಿಸುತ್ತಾ ಬಂದಿದೆ.
ಭಾರತದ ಪಾಲಿಗೆ, 'ಮಹಾಸಾಗರ್' (MAHASAGAR - Mutual and Holistic Advancement for Security and Growth Across Regions) ಎಂಬುದು 'ಗ್ಲೋಬಲ್ ಸೌತ್' ರಾಷ್ಟ್ರಗಳಿಗಾಗಿ ನಮ್ಮ ಮಾರ್ಗದರ್ಶಿ ದೃಷ್ಟಿಕೋನವಾಗಿದೆ. ನಮಗೆ ಅವಕಾಶ ಸಿಕ್ಕಾಗಲೆಲ್ಲಾ, ನಾವು 'ಗ್ಲೋಬಲ್ ಸೌತ್' ರಾಷ್ಟ್ರಗಳ ಧ್ವನಿಯಾಗಿದ್ದೇವೆ.
ನಮ್ಮ ಜಿ-20 (G−20) ಅಧ್ಯಕ್ಷತೆಯ ಅವಧಿಯಲ್ಲಿ, ನಾವು 'ಗ್ಲೋಬಲ್ ಸೌತ್' ರಾಷ್ಟ್ರಗಳ ಕಾಳಜಿಗಳನ್ನು ಜಾಗತಿಕ ನಿರ್ಧಾರ-ಕೈಗೊಳ್ಳುವಿಕೆಯ ಕೇಂದ್ರಸ್ಥಾನಕ್ಕೆ ತಂದೆವು. ಸಾಂಕ್ರಾಮಿಕದ ಸಂದರ್ಭದಲ್ಲಿ, ನಮ್ಮ 140 ಕೋಟಿ ಜನರ ಆರೈಕೆ ಮಾಡುತ್ತಲೇ, ಭಾರತವು 150ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಮತ್ತು ಔಷಧಿಗಳನ್ನು ಒದಗಿಸಿತು. ವಿಪತ್ತಿನ ಸಮಯಗಳಲ್ಲಿ, ನಾವು ನೆರವು, ಪರಿಹಾರ ಮತ್ತು ಐಕಮತ್ಯದೊಂದಿಗೆ ತಕ್ಷಣವೇ ಸ್ಪಂದಿಸಿದ್ದೇವೆ. ನಮ್ಮ ಅಭಿವೃದ್ಧಿ ಸಹಭಾಗಿತ್ವಗಳು ಬೇಡಿಕೆ-ಆಧಾರಿತವಾಗಿವೆ, ಗೌರವಯುತವಾಗಿವೆ ಮತ್ತು ಯಾವುದೇ ಷರತ್ತುಗಳಿಲ್ಲದವಾಗಿವೆ.
ಗೌರವಾನ್ವಿತ ಸದಸ್ಯರೇ,
'ಗ್ಲೋಬಲ್ ಸೌತ್' (Global South) ರಾಷ್ಟ್ರಗಳಿಗೆ ಜಾಗತಿಕ ವೇದಿಕೆಗಳಲ್ಲಿ ಅವುಗಳ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾದ ಸಮಯವಿದು. ಹವಾಮಾನ ನ್ಯಾಯವನ್ನು ಖಚಿತಪಡಿಸಬೇಕು, ಆ ಮೂಲಕ ಹವಾಮಾನ ಬಿಕ್ಕಟ್ಟಿಗೆ ಅತಿ ಕಡಿಮೆ ಕೊಡುಗೆ ನೀಡಿದವರ ಮೇಲೆ ಅದರ ಹೊರೆ ಬೀಳದಂತೆ ನೋಡಿಕೊಳ್ಳಬೇಕು. ಈ ಪ್ರಯತ್ನದಲ್ಲಿ, ಟ್ರಿನಿಡಾಡ್ ಮತ್ತು ಟೊಬಾಗೋವನ್ನು ನಾವು ನಮ್ಮ ಪ್ರಮುಖ ಪಾಲುದಾರರೆಂದು ಪರಿಗಣಿಸುತ್ತೇವೆ.
ಸ್ನೇಹಿತರೇ,
ನಮ್ಮ ಎರಡೂ ದೇಶಗಳು ಗಾತ್ರದಲ್ಲಿ ಮತ್ತು ಭೌಗೋಳಿಕತೆಯಲ್ಲಿ ಭಿನ್ನವಾಗಿರಬಹುದು, ಆದರೆ ನಮ್ಮ ಮೌಲ್ಯಗಳಲ್ಲಿ ನಾವು ಆಳವಾಗಿ ಒಂದಾಗಿದ್ದೇವೆ. ನಾವು ಸ್ವಾಭಿಮಾನಿ ಪ್ರಜಾಪ್ರಭುತ್ವಗಳು. ನಾವು ಸಂವಾದ, ಸಾರ್ವಭೌಮತ್ವ, ಬಹುಪಕ್ಷೀಯತೆ ಮತ್ತು ಮಾನವ ಘನತೆಯಲ್ಲಿ ನಂಬಿಕೆಯಿಟ್ಟಿದ್ದೇವೆ. ಈ ಸಂಘರ್ಷದ ಕಾಲದಲ್ಲಿ, ನಾವು ಈ ಮೌಲ್ಯಗಳಿಗೆ ಸದಾ ಬದ್ಧರಾಗಿರಬೇಕು.
ಭಯೋತ್ಪಾದನೆಯು ಮಾನವಕುಲದ ಶತ್ರು. ಈ 'ಕೆಂಪು ಭವನ'ವೇ (Red House) ಸ್ವತಃ ಭಯೋತ್ಪಾದನೆಯ ಗಾಯಗಳಿಗೆ ಮತ್ತು ನಿರಪರಾಧಿಗಳ ರಕ್ತಪಾತಕ್ಕೆ ಸಾಕ್ಷಿಯಾಗಿದೆ. ಭಯೋತ್ಪಾದನೆಗೆ ಯಾವುದೇ ಆಶ್ರಯ ಅಥವಾ ಅವಕಾಶ ಸಿಗದಂತೆ ಮಾಡಲು ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಮ್ಮೊಂದಿಗೆ ನಿಂತಿರುವ ಈ ದೇಶದ ಜನರಿಗೆ ಮತ್ತು ಸರ್ಕಾರಕ್ಕೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ನಮ್ಮ ಪೂರ್ವಜರು ಮುಂದಿನ ಪೀಳಿಗೆಗೆ ಉತ್ತಮ ಬದುಕನ್ನು ನೀಡಲು ಹೋರಾಡಿದರು, ತ್ಯಾಗ ಮಾಡಿದರು ಮತ್ತು ಕನಸುಗಳನ್ನು ಕಂಡರು. ನಾವು ನಮ್ಮ ಜನರಿಗೆ ವಾಗ್ದಾನ ಮಾಡಿದ ಭವಿಷ್ಯದ ಪಯಣದಲ್ಲಿ, ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋ ಎರಡೂ ರಾಷ್ಟ್ರಗಳು ಬಹಳ ದೂರ ಸಾಗಿ ಬಂದಿವೆ. ಆದರೆ, ನಮ್ಮಷ್ಟಕ್ಕೆ ನಾವು ಮತ್ತು ಜೊತೆಯಾಗಿ ಸೇರಿ, ಇನ್ನೂ ಮಹತ್ತನ್ನು ಸಾಧಿಸಬೇಕಿದೆ.
ಆ ಭವಿಷ್ಯವನ್ನು ರೂಪಿಸುವಲ್ಲಿ, ಸಂಸತ್ ಸದಸ್ಯರಾದ ನಿಮ್ಮೆಲ್ಲರ ಪಾತ್ರವು ಅತ್ಯಂತ ನಿರ್ಣಾಯಕವಾಗಿದೆ. ಅಯೋಧ್ಯೆಯಿಂದ ಅರಿಮಾದವರೆಗೆ, ಗಂಗೆಯ ಘಟ್ಟಗಳಿಂದ ಪರಿಯಾ ಕೊಲ್ಲಿಯವರೆಗೆ, ನಮ್ಮ ಬಾಂಧವ್ಯವು ಇನ್ನಷ್ಟು ಗಾಢವಾಗಲಿ, ನಮ್ಮ ಕನಸುಗಳು ಇನ್ನಷ್ಟು ಎತ್ತರಕ್ಕೇರಲಿ.
ಈ ಆಶಯದೊಂದಿಗೆ, ಈ ಗೌರವಕ್ಕಾಗಿ ನಾನು ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವು ಇಲ್ಲಿ ಹೆಮ್ಮೆ ಮತ್ತು ವಿನಯದಿಂದ ಹೇಳುವ, "ಗೌರವ ಸಲ್ಲುತ್ತದೆ" (Respect due) ಎಂಬ ಮಾತಿನೊಂದಿಗೆ ನನ್ನ ಮಾತು ಮುಗಿಸುತ್ತೇನೆ.
ಧನ್ಯವಾದಗಳು. ತಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.
*****
(Release ID: 2142653)
Read this release in:
English
,
Urdu
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam