ಪ್ರಧಾನ ಮಂತ್ರಿಯವರ ಕಛೇರಿ
ಘಾನಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ
Posted On:
03 JUL 2025 1:15AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಘಾನಾದ ಅಧ್ಯಕ್ಷರಾದ, ಗೌರವಾನ್ವಿತ ಡಾ. ಜಾನ್ ಡ್ರಾಮಾನಿ ಮಹಾಮಾ ಅವರನ್ನು ಭೇಟಿ ಮಾಡಿದರು. ಜ್ಯೂಬಿಲಿ ಹೌಸ್ ಗೆ ಆಗಮಿಸಿದ ಪ್ರಧಾನಮಂತ್ರಿಯವರನ್ನು ಅಧ್ಯಕ್ಷ ಮಹಾಮಾ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ಮೂರು ದಶಕಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಘಾನಾಕ್ಕೆ ನೀಡುತ್ತಿರುವ ಮೊದಲ ಅಧಿಕೃತ ಭೇಡಿ ಇದಾಗಿದೆ.
ಇಬ್ಬರು ನಾಯಕರು ಏಕಾಂತ ಸಭೆ ಮತ್ತು ನಿಯೋಗ ಮಟ್ಟದ ಸಭೆಗಳನ್ನು ನಡೆಸಿ, ವಿಸ್ತೃತ ಮಾತುಕತೆ ನಡೆಸಿದರು. ಉಭಯ ದೇಶಗಳ ಸಂಬಂಧವನ್ನು 'ಸಮಗ್ರ ಪಾಲುದಾರಿಕೆ'ಯ (Comprehensive Partnership) ಮಟ್ಟಕ್ಕೆ ಏರಿಸಲು ಅವರು ಒಪ್ಪಿಕೊಂಡರು. ಭಾರತ ಮತ್ತು ಘಾನಾ ನಡುವಿನ ಸುದೀರ್ಘ ಮತ್ತು ಗಟ್ಟಿ ಸಂಬಂಧಗಳನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಅಲ್ಲದೆ, ವ್ಯಾಪಾರ ಮತ್ತು ಹೂಡಿಕೆ, ಕೃಷಿ, ಸಾಮರ್ಥ್ಯ ವೃದ್ಧಿ, ಡಿಜಿಟಲ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಜನರ ನಡುವಿನ ಬಾಂಧವ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು. ಬೆಳೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಮತ್ತು ಘಾನಾದಲ್ಲಿ ಹೆಚ್ಚುತ್ತಿರುವ ಭಾರತೀಯ ಹೂಡಿಕೆಗಳನ್ನು ಅವರು ಸ್ವಾಗತಿಸಿದರು. ರಕ್ಷಣೆ ಮತ್ತು ಭದ್ರತಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆಯೂ ನಾಯಕರು ಚರ್ಚಿಸಿದರು. ವಿಶೇಷವಾಗಿ ಭಾರತದ ಬೆಂಬಲಿತ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿ ಯೋಜನೆಗಳ ಮೂಲಕ ಅಭಿವೃದ್ಧಿ ಸಹಕಾರ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಅವರು ಬದ್ಧತೆಯನ್ನು ವ್ಯಕ್ತಪಡಿಸಿದರು. ಆರೋಗ್ಯ, ಔಷಧ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಯುಪಿಐ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಭಾರತವು ಪ್ರಸ್ತಾಪಿಸಿತು. 'ಗ್ಲೋಬಲ್ ಸೌತ್' ನ (Global South) ಕಾಳಜಿಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಲು ಭಾರತಕ್ಕಿರುವ ಆಳವಾದ ಬದ್ಧತೆಯನ್ನು ಪ್ರಧಾನಮಂತ್ರಿಯವರು ತಿಳಿಸಿದರು ಮತ್ತು ಈ ವಿಷಯದಲ್ಲಿ ಘಾನಾ ನೀಡುತ್ತಿರುವ ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದರು. ಅಲ್ಲದೆ, ಘಾನಾದಲ್ಲಿರುವ ಸುಮಾರು 15,000 ಭಾರತೀಯ ಸಮುದಾಯದವರನ್ನು ಉತ್ತಮವಾಗಿ ನೋಡಿಕೊಳ್ಳುತ್ತಿರುವುದಕ್ಕಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಮಹಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ವಿಶ್ವಸಂಸ್ಥೆಯ ಸುಧಾರಣೆಗಳು ಸೇರಿದಂತೆ, ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಬಗ್ಗೆಯೂ ಇಬ್ಬರು ನಾಯಕರು ಚರ್ಚಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಘಾನಾ ನೀಡಿದ ಬೆಂಬಲ ಮತ್ತು ಸಹಾನುಭೂತಿಗಾಗಿ ಪ್ರಧಾನಮಂತ್ರಿಯವರು ಅಧ್ಯಕ್ಷ ಮಹಾಮಾ ಅವರಿಗೆ ಧನ್ಯವಾದ ಅರ್ಪಿಸಿದರು. ಭಯೋತ್ಪಾದನೆ ವಿರುದ್ಧದ ಜಾಗತಿಕ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಉಭಯ ದೇಶಗಳು ಒಪ್ಪಿದವು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿನ ಸದಸ್ಯತ್ವ ಮತ್ತು ಘಾನಾದ ವಿದೇಶಾಂಗ ಸಚಿವರು ಕಾಮನ್ ವೆಲ್ತ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಸೇರಿದಂತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಾನಾದ ಹೆಚ್ಚುತ್ತಿರುವ ವರ್ಚಸ್ಸಿಗೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ಪ್ರಜಾಸತ್ತಾತ್ಮಕ ಮೌಲ್ಯಗಳು, ದಕ್ಷಿಣ-ದಕ್ಷಿಣ ಸಹಕಾರ (South-South cooperation), ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಶಾಂತಿಯ ಬಗ್ಗೆ ತಮಗಿರುವ ಸಮಾನ ದೃಷ್ಟಿಕೋನಕ್ಕೆ ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ನಿಯೋಗ ಮಟ್ಟದ ಮಾತುಕತೆಗಳ ಮುಕ್ತಾಯದ ನಂತರ, ಉಭಯ ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾಲ್ಕು ಮಹತ್ವದ ತಿಳುವಳಿಕೆ ಒಪ್ಪಂದಗಳಿಗೆ (MoUs) ಅಂಕಿತ ಹಾಕಿ, ವಿನಿಮಯ ಮಾಡಿಕೊಳ್ಳಲಾಯಿತು. ಈ ಒಪ್ಪಂದಗಳು ಸಂಸ್ಕೃತಿ, ಗುಣಮಟ್ಟ, ಆಯುರ್ವೇದ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿ, ಹಾಗೂ ಉಭಯ ವಿದೇಶಾಂಗ ಸಚಿವಾಲಯಗಳ ನಡುವಿನ ಸಹಭಾಗಿತ್ವಕ್ಕಾಗಿ ಸ್ಥಾಪಿಸಲಾದ ಜಂಟಿ ಆಯೋಗದ ಕಾರ್ಯವಿಧಾನದ ಕ್ಷೇತ್ರಗಳನ್ನು ಒಳಗೊಂಡಿವೆ. ತದನಂತರ, ಅಧ್ಯಕ್ಷ ಮಹಾಮಾ ಅವರು ಪ್ರಧಾನ ಮಂತ್ರಿಯವರ ಗೌರವಾರ್ಥವಾಗಿ ಭವ್ಯವಾದ ಸರ್ಕಾರಿ ಔತಣಕೂಟವನ್ನು ಏರ್ಪಡಿಸಿದ್ದರು. ಪ್ರಧಾನ ಮಂತ್ರಿಯವರು, ಅಧ್ಯಕ್ಷ ಮಹಾಮಾ ಅವರ ಘನ ಆತಿಥ್ಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ಪರಸ್ಪರ ಅನುಕೂಲಕರವಾದ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸುವಂತೆ ಅವರನ್ನು ಆಹ್ವಾನಿಸಿದರು.
*****
(Release ID: 2141744)
Read this release in:
English
,
Urdu
,
Marathi
,
Hindi
,
Nepali
,
Bengali-TR
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam