ಪ್ರಧಾನ ಮಂತ್ರಿಯವರ ಕಛೇರಿ
ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಭೇಟಿಯ ಮುನ್ನ ಪ್ರಧಾನಮಂತ್ರಿ ಅವರ ನಿರ್ಗಮನ ಹೇಳಿಕೆ
Posted On:
02 JUL 2025 7:56AM by PIB Bengaluru
ಇಂದು, ನಾನು ಜುಲೈ 2 ರಿಂದ 9, 2025 ರವರೆಗೆ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಐದು ರಾಷ್ಟ್ರಗಳ ಭೇಟಿಯನ್ನು ಕೈಗೊಳ್ಳುತ್ತೇನೆ
ಗರವಾನ್ವಿತ ಅಧ್ಯಕ್ಷರಾದ ಜಾನ್ ಡ್ರಾಮನಿ ಮಹಾಮಾ ಅವರ ಆಹ್ವಾನದ ಮೇರೆಗೆ, ನಾನು ಜುಲೈ 2-3 ರಂದು ಘಾನಾಗೆ ಭೇಟಿ ನೀಡಲಿದ್ದೇನೆ. ಘಾನಾ ದೇಶವು ಜಾಗತಿಕ ದಕ್ಷಿಣದಲ್ಲಿ ಮೌಲ್ಯಯುತ ಪಾಲುದಾರ ಮತ್ತು ಆಫ್ರಿಕನ್ ಒಕ್ಕೂಟ ಹಾಗು ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಹೂಡಿಕೆ, ಇಂಧನ, ಆರೋಗ್ಯ, ಭದ್ರತೆ, ಸಾಮರ್ಥ್ಯ ವೃದ್ಧಿ ಹಾಗೂ ಅಭಿವೃದ್ಧಿ ಪಾಲುದಾರಿಕೆ ಸೇರಿದಂತೆ ಸಹಕಾರದ ಹೊಸ ಹಾದಿಗಳನ್ನು ತೆರೆಯುವ ಗುರಿಯನ್ನು ಹೊಂದಿರುವ ಮಾತುಕತೆ ವಿನಿಮಯಗಳನ್ನು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಸಹವರ್ತಿ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ, ಘಾನಾ ಸಂಸತ್ತಿನಲ್ಲಿ ಮಾತನಾಡುವುದು ಒಂದು ಗೌರವವಾಗಿದೆ.
ಜುಲೈ 3-4 ರಂದು, ನಾನು ಟ್ರಿನಿಡಾಡ್ ಮತ್ತು ಟೊಬಾಗೋ ಗಣರಾಜ್ಯದಲ್ಲಿ ಇರುತ್ತೇನೆ, ಈ ದೇಶದಲ್ಲಿ ನಾವು ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಪರ್ಕವನ್ನು ಹಂಚಿಕೊಂಡಿದ್ದೇವೆ. ಈ ವರ್ಷದ ಪ್ರವಾಸಿ ಭಾರತೀಯ ದಿವಸ್ನಲ್ಲಿ ಮುಖ್ಯ ಅತಿಥಿಯಾಗಿದ್ದ ಗೌರವಾನ್ವಿತ ಅಧ್ಯಕ್ಷೆ ಶ್ರೀಮತಿ ಕ್ರಿಸ್ಟೀನ್ ಕಾರ್ಲಾ ಕಂಗಲೂ ಮತ್ತು ಇತ್ತೀಚೆಗೆ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಪ್ರಧಾನಿ ಶ್ರೀಮತಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರನ್ನು ನಾನು ಭೇಟಿ ಮಾಡುತ್ತೇನೆ. ಭಾರತೀಯರು ಮೊದಲು ಟ್ರಿನಿಡಾಡ್ ಮತ್ತು ಟೊಬಾಗೋಗೆ 180 ವರ್ಷಗಳ ಹಿಂದೆ ಬಂದರು. ಈ ಭೇಟಿಯು ನಮ್ಮನ್ನು ಒಂದುಗೂಡಿಸುವ ಹಾಗು ನಮ್ಮ ಪೂರ್ವಜರು ಮತ್ತು ರಕ್ತಸಂಬಂಧದ ವಿಶೇಷ ಬಂಧಗಳನ್ನು ಪುನರುಜ್ಜೀವನಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
ಪೋರ್ಟ್ ಆಫ್ ಸ್ಪೇನ್ನಿಂದ ನಾನು ಬ್ಯೂನಸ್ ಐರಿಸ್ಗೆ ಪ್ರಯಾಣಿಸುತ್ತೇನೆ. 57 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಅರ್ಜೆಂಟೀನಾ ಲ್ಯಾಟಿನ್ ಅಮೆರಿಕಾದಲ್ಲಿ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಜಿ20 ರಲ್ಲಿ ನಿಕಟ ಸಹಯೋಗಿ. ಕಳೆದ ವರ್ಷ ನಾನು ಭೇಟಿಯಾದ ಗೌರವಾನ್ವಿತ ಅಧ್ಯಕ್ಷ ಶ್ರೀ ಜೇವಿಯರ್ ಮಿಲೀ ಅವರೊಂದಿಗೆ ನನ್ನ ಚರ್ಚೆಗಳನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ. ಕೃಷಿ, ನಿರ್ಣಾಯಕ ಖನಿಜಗಳು, ಇಂಧನ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ ಮತ್ತು ಹೂಡಿಕೆ ಕ್ಷೇತ್ರಗಳನ್ನು ಒಳಗೊಂಡಂತೆ ನಮ್ಮ ಪರಸ್ಪರ ಪ್ರಯೋಜನಕಾರಿ ಸಹಕಾರವನ್ನು ಮುಂದುವರಿಸುವತ್ತ ನಾವು ಗಮನಹರಿಸುತ್ತೇವೆ.
ಜುಲೈ 6-7 ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ನಾನು ಭಾಗವಹಿಸಲಿದ್ದೇನೆ. ಸ್ಥಾಪಕ ಸದಸ್ಯನಾಗಿ, ಉದಯೋನ್ಮುಖ ಆರ್ಥಿಕತೆಗಳ ನಡುವಿನ ಸಹಕಾರಕ್ಕಾಗಿ ಭಾರತವು ಬ್ರಿಕ್ಸ್ ಅನ್ನು ಪ್ರಮುಖ ವೇದಿಕೆಯಾಗಿ ಬೆಂಬಲಿಸಲು ಬದ್ಧವಾಗಿದೆ. ಒಟ್ಟಾಗಿ, ನಾವು ಹೆಚ್ಚು ಶಾಂತಿಯುತ, ಸಮಾನ, ನ್ಯಾಯಯುತ, ಪ್ರಜಾಪ್ರಭುತ್ವ ಮತ್ತು ಸಮತೋಲಿತ ಬಹುಧ್ರುವೀಯ ಜಾಗತಿಕ ವ್ಯವಸ್ಥೆಗಾಗಿ ಶ್ರಮಿಸುತ್ತೇವೆ. ಶೃಂಗಸಭೆಯ ವೇಳೆ, ನಾನು ಹಲವಾರು ವಿಶ್ವ ನಾಯಕರನ್ನು ಸಹ ಭೇಟಿ ಮಾಡುತ್ತೇನೆ. ದ್ವಿಪಕ್ಷೀಯ ಅಧಿಕೃತ ಭೇಟಿಗಾಗಿ ನಾನು ಬ್ರೆಸಿಲಿಯಾಕ್ಕೆ ಪ್ರಯಾಣಿಸುತ್ತೇನೆ. ಭಾರತೀಯ ಪ್ರಧಾನಿಯೊಬ್ಬರು ಸುಮಾರು ಆರು ದಶಕಗಳ ಬಳಿಕ, ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಬ್ರೆಜಿಲ್ ಜೊತೆಗಿನ ನಮ್ಮ ನಿಕಟ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ನನ್ನ ಸ್ನೇಹಿತ ಅಧ್ಯಕ್ಷ ಘನತೆವೆತ್ತ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ಜಾಗತಿಕ ದಕ್ಷಿಣದ ಆದ್ಯತೆಗಳನ್ನು ಮುನ್ನಡೆಸುವ ಕುರಿತು ಕೆಲಸ ಮಾಡಲು ಅವಕಾಶವನ್ನು ಈ ಭೇಟಿಯು ಒದಗಿಸುತ್ತದೆ.
ಈ ಪ್ರವಾಸದಲ್ಲಿ ನನ್ನ ಅಂತಿಮ ತಾಣ ನಮೀಬಿಯಾ, ವಸಾಹತುಶಾಹಿಯ ವಿರುದ್ಧದ ಹೋರಾಟದ ಸಾಮಾನ್ಯ ಇತಿಹಾಸವನ್ನು ನಾವು ಹಂಚಿಕೊಳ್ಳುವ ವಿಶ್ವಾಸಾರ್ಹ ಪಾಲುದಾರ. ಅಧ್ಯಕ್ಷ ಗೌರವಾನ್ವಿತ ಡಾ. ನೆಟುಂಬೊ ನಂದಿ-ದೈತ್ವಾ ಅವರನ್ನು ಭೇಟಿ ಮಾಡಲು ಮತ್ತು ನಮ್ಮ ಜನರು, ನಮ್ಮ ಪ್ರದೇಶಗಳು ಮತ್ತು ವಿಶಾಲವಾದ ಜಾಗತಿಕ ದಕ್ಷಿಣದ ಪ್ರಯೋಜನಕ್ಕಾಗಿ ಸಹಕಾರಕ್ಕಾಗಿ ಹೊಸ ಮಾರ್ಗಸೂಚಿಯನ್ನು ರೂಪಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ. ಸ್ವಾತಂತ್ರ್ಯ ಮತ್ತು ಅಭಿವೃದ್ಧಿಗಾಗಿ ನಮ್ಮ ನಿರಂತರ ಒಗ್ಗಟ್ಟು ಮತ್ತು ಹಂಚಿಕೆಯ ಬದ್ಧತೆಯನ್ನು ನಾವು ಸಂಭ್ರಮಿಸುವಾಗ ನಮೀಬಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದು ಒಂದು ಗೌರವದ ಅವಕಾಶ.
ಐದು ದೇಶಗಳಿಗೆ ನನ್ನ ಭೇಟಿಗಳು ಜಾಗತಿಕ ದಕ್ಷಿಣದಾದ್ಯಂತ ನಮ್ಮ ಬಾಂಧವ್ಯವನ್ನು, ಸ್ನೇಹವನ್ನು ಬಲಪಡಿಸುತ್ತವೆ, ಅಟ್ಲಾಂಟಿಕ್ ನ ಎರಡೂ ಬದಿಗಳಲ್ಲಿ ನಮ್ಮ ಪಾಲುದಾರಿಕೆಗಳನ್ನು ಬಲಪಡಿಸುತ್ತವೆ ಮತ್ತು ಬ್ರಿಕ್ಸ್ (BRICS), ಆಫ್ರಿಕನ್ ಯೂನಿಯನ್, ಇ.ಸಿ.ಒ.ಡಬ್ಲ್ಯು.ಎ.ಎಸ್. (ECOWAS) ಹಾಗು ಸಿ.ಎ.ಆರ್.ಐ.ಸಿ.ಒ.ಎಂ.(CARICOM) ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸುತ್ತದೆ ಎಂಬ ವಿಶ್ವಾಸ ನನಗಿದೆ.
*****
(Release ID: 2141462)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam