ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಪ್ರಧಾನಮಂತ್ರಿ ಅವರ ಭೇಟಿ (ಜುಲೈ 02-09)

Posted On: 27 JUN 2025 10:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025ರ ಜುಲೈ 02ರಿಂದ 3ರವರೆಗೆ ಘಾನಾಕ್ಕೆ ಭೇಟಿ ನೀಡಲಿದ್ದಾರೆ. ಇದು ಘಾನಾಕ್ಕೆ ಪ್ರಧಾನಮಂತ್ರಿ ಅವರ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಭಾರತದಿಂದ ಘಾನಾಕ್ಕೆ ಪ್ರಧಾನಮಂತ್ರಿ ಅವರ ಈ ಭೇಟಿ ಮೂರು ದಶಕಗಳ ನಂತರ ನಡೆಯುತ್ತಿದೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಮಂತ್ರಿ ಅವರು ಘಾನಾ ಅಧ್ಯಕ್ಷರೊಂದಿಗೆ ಬಲವಾದ ದ್ವಿಪಕ್ಷೀಯ ಪಾಲುದಾರಿಕೆಯನ್ನು ಪರಿಶೀಲಿಸಲು ಮತ್ತು ಆರ್ಥಿಕ, ಇಂಧನ ಮತ್ತು ರಕ್ಷಣಾ ಸಹಯೋಗ ಮತ್ತು ಅಭಿವೃದ್ಧಿ ಸಹಕಾರ ಪಾಲುದಾರಿಕೆಯ ಮೂಲಕ ಅದನ್ನು ಹೆಚ್ಚಿಸಲು ಹೆಚ್ಚಿನ ಮಾರ್ಗಗಳ ಬಗ್ಗೆ ಚರ್ಚಿಸಲು ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಆಳಗೊಳಿಸಲು ಮತ್ತು ಇಕೋವಾಸ್ (ಪಶ್ಚಿಮ ಆಫ್ರಿಕಾ ರಾಜ್ಯಗಳ ಆರ್ಥಿಕ ಸಮುದಾಯ) ಮತ್ತು ಆಫ್ರಿಕನ್ ಒಕ್ಕೂಟದೊಂದಿಗೆ ಭಾರತದ ಸಂಬಂಧವನ್ನು ಬಲಪಡಿಸಲು ಉಭಯ ದೇಶಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ತಮ್ಮ ಭೇಟಿಯ ಎರಡನೇ ಹಂತದಲ್ಲಿ, ಟ್ರಿನಿಡಾಡ್ ಮತ್ತು ಟೊಬಾಗೊ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಕಮಲಾ ಪರ್ಸಾದ್-ಬಿಸ್ಸೆಸರ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಅವರ 2025 ರ ಜುಲೈ 3ರಿಂದ 4 ವರೆಗೆ ಟ್ರಿನಿಡಾಡ್ ಮತ್ತು ಟೊಬಾಗೊ (ಟಿ ಮತ್ತು ಟಿ) ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಇದು ಪ್ರಧಾನಿಯಾಗಿ ದೇಶಕ್ಕೆ ಅವರ ಮೊದಲ ಭೇಟಿಯಾಗಿದೆ ಮತ್ತು 1999 ರ ನಂತರ ಟಿ ಮತ್ತು ಟಿಗೆ ಪ್ರಧಾನಿ ಮಟ್ಟದಲ್ಲಿ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಈ ಭೇಟಿಯ ವೇಳೆ ಪ್ರಧಾನಮಂತ್ರಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ಅಧ್ಯಕ್ಷ ಘನತೆವೆತ್ತ ಕ್ರಿಸ್ಟಿನ್ ಕಾರ್ಲಾ ಕಂಗಾಲೂ ಮತ್ತು ಪ್ರಧಾನಿ ಗೌರವಾನ್ವಿತ ಕಮಲಾ ಪರ್ಸಾದ್-ಬಿಸ್ಸೆಸ್ಸಾರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಲಿದ್ದಾರೆ. ಪ್ರಧಾನಮಂತ್ರಿಯವರು ಟಿ ಮತ್ತು ಟಿ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ಅವರ ಟಿ ಮತ್ತು ಟಿ ಭೇಟಿಯು ಉಭಯ ದೇಶಗಳ ನಡುವಿನ ಆಳವಾಗಿ ಬೇರೂರಿರುವ ಮತ್ತು ಐತಿಹಾಸಿಕ ಸಂಬಂಧಗಳಿಗೆ ಹೊಸ ಪ್ರಚೋದನೆ ನೀಡಲಿದೆ.

ಅರ್ಜೆಂಟೀನಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಜೇವಿಯರ್ ಮಿಲೀ ಅವರ ಆಹ್ವಾನದ ಮೇರೆಗೆ ತಮ್ಮ ಭೇಟಿಯ ಮೂರನೇ ಹಂತದಲ್ಲಿ ಪ್ರಧಾನಮಂತ್ರಿ ಅವರು 2025ರ ಜುಲೈ 04-05ರವರೆಗೆ ಅರ್ಜೆಂಟೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ರಕ್ಷಣಾ, ಕೃಷಿ, ಗಣಿಗಾರಿಕೆ, ತೈಲ ಮತ್ತು ಅನಿಲ, ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಅರ್ಜೆಂಟೀನಾ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಪ್ರಧಾನಮಂತ್ರಿ ಅವರು ಅಧ್ಯಕ್ಷ ಮೈಲಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಅವರ ದ್ವಿಪಕ್ಷೀಯ ಭೇಟಿಯು ಭಾರತ ಮತ್ತು ಅರ್ಜೆಂಟೀನಾ ನಡುವಿನ ಬಹುಮುಖಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲಿದೆ.

ತಮ್ಮ ಭೇಟಿಯ ನಾಲ್ಕನೇ ಹಂತದಲ್ಲಿ, ಫೆಡರೇಟಿವ್ ರಿಪಬ್ಲಿಕ್ ಆಫ್ ಬ್ರೆಜಿಲ್ ಅಧ್ಯಕ್ಷ ಘನತೆವೆತ್ತ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಅವರು 17 ನೇ ಬ್ರಿಕ್ಸ್ ಶೃಂಗಸಭೆ 2025 ರಲ್ಲಿ ಭಾಗವಹಿಸಲು 2025 ರ ಜುಲೈ 5-8 ರಿಂದ ಬ್ರೆಜಿಲ್ ಗೆ ಪ್ರಯಾಣಿಸಲಿದ್ದಾರೆ. ಇದು ಬ್ರೆಜಿಲ್ ಗೆ ಪ್ರಧಾನಮಂತ್ರಿ ಅವರ ನಾಲ್ಕನೇ ಭೇಟಿಯಾಗಿದೆ. 17ನೇ ಬ್ರಿಕ್ಸ್ ನಾಯಕರ ಶೃಂಗಸಭೆ ರಿಯೋ ಡಿ ಜನೈರೊದಲ್ಲಿ ನಡೆಯಲಿದೆ. ಶೃಂಗಸಭೆಯ ಸಮಯದಲ್ಲಿ, ಜಾಗತಿಕ ಆಡಳಿತದ ಸುಧಾರಣೆ, ಶಾಂತಿ ಮತ್ತು ಭದ್ರತೆ, ಬಹುಪಕ್ಷೀಯತೆಯನ್ನು ಬಲಪಡಿಸುವುದು, ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ, ಹವಾಮಾನ ಕ್ರಮ, ಜಾಗತಿಕ ಆರೋಗ್ಯ, ಆರ್ಥಿಕ ಮತ್ತು ಹಣಕಾಸು ವಿಷಯಗಳು ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಪ್ರಧಾನಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ಶೃಂಗಸಭೆಯ ಹೊರತಾಗಿ ಪ್ರಧಾನಿ ಅವರು ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಬ್ರೆಜಿಲ್ ಗೆ ಅಧಿಕೃತ ಭೇಟಿಗಾಗಿ ಪ್ರಧಾನಮಂತ್ರಿ ಅವರು ಬ್ರೆಸಿಲಿಯಾಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ವ್ಯಾಪಾರ, ರಕ್ಷಣೆ, ಇಂಧನ, ಬಾಹ್ಯಾಕಾಶ, ತಂತ್ರಜ್ಞಾನ, ಕೃಷಿ, ಆರೋಗ್ಯ ಮತ್ತು ಜನರ ನಡುವಿನ ಸಂಪರ್ಕ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಸ್ತರಿಸುವ ಬಗ್ಗೆ ಅಧ್ಯಕ್ಷ ಲುಲಾ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ.

ತಮ್ಮ ಭೇಟಿಯ ಕೊನೆಯ ಹಂತದಲ್ಲಿ, ನಮೀಬಿಯಾ ಗಣರಾಜ್ಯದ ಅಧ್ಯಕ್ಷ ಗೌರವಾನ್ವಿತ ಡಾ. ನೆತುಂಬೊ ನಂದಿ-ಎನ್ಡೈಟ್ವಾ  ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಅವರು 2025 ರ ಜುಲೈ 09ರಂದು ನಮೀಬಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಇದು ನಮೀಬಿಯಾಕ್ಕೆ ಪ್ರಧಾನಮಂತ್ರಿ ಅವರ ಮೊದಲ ಭೇಟಿಯಾಗಿದೆ ಮತ್ತು ನಮೀಬಿಯಾಕ್ಕೆ ಭಾರತದಿಂದ ಮೂರನೇ ಪ್ರಧಾನ ಮಂತ್ರಿ ಭೇಟಿಯಾಗಿದೆ. ತಮ್ಮ ಭೇಟಿಯ ವೇಳೆ ಪ್ರಧಾನಮಂತ್ರಿ ಅವರು ಅಧ್ಯಕ್ಷ ನಂದಿ-ಎನ್ಡೈತ್ವಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿ ಅವರು ನಮೀಬಿಯಾದ ಸ್ಥಾಪಕ ಪಿತಾಮಹ ಮತ್ತು ಪ್ರಥಮ ಅಧ್ಯಕ್ಷ ದಿವಂಗತ ಡಾ. ಸ್ಯಾಮ್ ನುಜೊಮಾ ಅವರಿಗೂ ಗೌರವ ನಮನ ಸಲ್ಲಿಸಲಿದ್ದಾರೆ. ಅವರು ನಮೀಬಿಯಾ ಸಂಸತ್ತಿನಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ಅವರ ಭೇಟಿಯು ನಮೀಬಿಯಾದೊಂದಿಗಿನ ಭಾರತದ ಬಹುಮುಖಿ ಮತ್ತು ಆಳವಾಗಿ ಬೇರೂರಿರುವ ಐತಿಹಾಸಿಕ ಸಂಬಂಧಗಳ ಪುನರುಚ್ಚರಣೆಯಾಗಿದೆ.

 

*****


(Release ID: 2140628)