ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಯುವಕರನ್ನು ತೊಡಗಿಸಿಕೊಳ್ಳಲು ಮತ್ತು ಅನುಭವ ಹೆಚ್ಚಿಸಲು ʻಮೈ ಭಾರತ್ ಪೋರ್ಟಲ್ʼ ಜೊತೆ ʻವಾಟ್ಸ್ಆಪ್ ಚಾಟ್ ಬಾಟ್ʼ ಸಂಯೋಜನೆ ಪ್ರಾರಂಭಿಸಿದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ
Posted On:
27 JUN 2025 11:09AM by PIB Bengaluru
ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಮತ್ತು ಭಾರತದ ಯುವಕರಿಗೆ ಸೇವೆಗಳ ಪ್ರವೇಶ ಸುಗಮಗೊಳಿಸಲು ಪ್ರಗತಿಪರ ಉಪಕ್ರಮ ಕೈಗೊಂಡಿದ್ದು, ʻಮೈ ಭಾರತ್ʼ ಪೋರ್ಟಲ್ (https://mybharat.gov.in) ಜೊತೆ ʻವಾಟ್ಸ್ಆಪ್ʼ ಸಂಯೋಜನೆಯನ್ನು ಪ್ರಾರಂಭಿಸಿದೆ.
ʻವಾಟ್ಸ್ಆಪ್ ಚಾಟ್ಬಾಟ್ʼ ಈಗ ʻಮೈ ಭಾರತ್ʼ ಪೋರ್ಟಲ್ ನಲ್ಲಿ ಲಭ್ಯವಾಗಿದ್ದು, ವಾಟ್ಸ್ಆಪ್ (7289001515) ಮೂಲಕ ನೇರವಾಗಿ ಪ್ರವೇಶಿಸಬಹುದು. ಇದು ಬಳಕೆದಾರರಿಗೆ ವೇದಿಕೆಯೊಂದಿಗೆ ಸಂವಹನ ನಡೆಸಲು ಸುಗಮ, ನೈಜ-ಸಮಯದ ಮತ್ತು ಬಳಕೆದಾರ ಸ್ನೇಹಿ ಮಾರ್ಗ ಒದಗಿಸುತ್ತದೆ. ಈ ಸೇವೆಯ ಆರಂಭದೊಂದಿಗೆ ಎಲ್ಲಾ ನೋಂದಾಯಿತ ʻಮೈ ಭಾರತ್ʼ ಬಳಕೆದಾರರು ವೇದಿಕೆಯ ಪ್ರಮುಖ ವೈಶಿಷ್ಟ್ಯಗಳನ್ನು ಸುಗಮವಾಗಿ ಪಡೆಯಬಹುದಾಗಿದೆ. ಇದು ಪ್ರಾಯೋಗಿಕ ಕಲಿಕೆ ಕಾರ್ಯಕ್ರಮಗಳು, ಸ್ವಯಂಸೇವಕ ಅವಕಾಶಗಳು, ಸಿವಿ ರಚನೆ, ಮಾರ್ಗದರ್ಶನ, ಸಂಸ್ಥೆ ಸೇರ್ಪಡೆ / ರಚನೆ, ಯಾವುದೇ ಸಮಸ್ಯೆಗಳನ್ನು ವರದಿ ಮಾಡಲು ಮತ್ತು ʻಮೈ ಭಾರತ್ʼ ಸಹಾಯ ಸೇವೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ʻವಾಟ್ಸಾಆಪ್ ಚಾಟ್ ಬಾಟ್ʼನಲ್ಲಿ ಸೆಷನ್ ಪ್ರಾರಂಭಿಸಲು, ಯಾವುದೇ ಬಳಕೆದಾರರು 7289001515 ಸಂಖ್ಯೆಗೆ 'Hi' ಸಂದೇಶ ಕಳುಹಿಸಬೇಕಾಗುತ್ತದೆ. ವೈಯಕ್ತಿಕ ಲಾಗಿನ್ ಗುರುತನ್ನು `ಒಟಿಪಿ’ (OTP) ಮೂಲಕ ಗುರುತಿಸಲಾಗುತ್ತದೆ ಮತ್ತು ಸೆಷನ್ ಅನ್ನು ಆರಂಭಿಸಲಾಗುತ್ತದೆ.
ಮುಂಬರುವ ಬಿಡುಗಡೆಗಳಲ್ಲಿ ಇನ್-ಅಪ್ಲಿಕೇಶನ್ ನೋಂದಣಿಗಳು, ಡೌನ್ಲೋಡ್ಗಳೊಂದಿಗೆ ನೋಟಿಫಿಕೇಶನ್ಗಳು, ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆಗಾಗಿ ಮಾಧ್ಯಮ ಅಪ್ಲೋಡ್ಗಳು, ಜ್ಞಾಪನೆಗಳು (ರಿಮೈಂಡರ್ಸ್) ಮತ್ತು ಅನುಸರಣೆ, ಪ್ರೊಫೈಲ್/ಕಾರ್ಯ ಪೂರ್ಣಗೊಳಿಸುವಿಕೆ ಮುಂತಾದ ಅನೇಕ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು. ವಹಿವಾಟು ಸೇವೆಗಳ ಜೊತೆಗೆ, ಸ್ವಯಂಚಾಲಿತ ರಿಮೈಂಡರ್ಗಳನ್ನು ಕಳುಹಿಸಲು, ಪ್ರಮಾಣಪತ್ರಗಳು, ಇತರ ಸಂಪನ್ಮೂಲ ದಾಖಲೆಗಳನ್ನು ತಲುಪಿಸಲು ಮತ್ತು ಅನುಸರಣೆ ಎಚ್ಚರಿಕೆ ಹಂಚಿಕೊಳ್ಳಲು ಚಾಟ್ ಬಾಟ್ ಬಳಸಬಹುದು. ಇದು ಅಭಿಯಾನದ ವಿಷಯವಸ್ತು, ಕಾರ್ಯಕ್ರಮದ ಮುಖ್ಯಾಂಶಗಳು, ಸರ್ಕಾರಿ ಯೋಜನೆಗಳ ನವೀಕರಣಗಳು, ಉತ್ತಮ ಕಾರ್ಯವಿಧಾನಗಳು ಮತ್ತು ಯುವಕರಿಗೆ ಮಾಹಿತಿ ನೀಡಲು ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳಲು ʻಟೂಲ್ ಕಿಟ್ʼ ಸಹ ಒದಗಿಸುತ್ತದೆ.
ಯುವಕರಿಗೆ ಪ್ರಮುಖ ಪ್ರಯೋಜನಗಳು:
- ವಾಟ್ಸ್ಆಪ್ ಮೂಲಕ ʻಮೈ ಭಾರತ್ʼ ಸೇವೆಗಳಿಗೆ ಸುಗಮ ಪ್ರವೇಶ
- ತ್ವರಿತ ಸೇರ್ಪಡೆ, ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ, ಮತ್ತು ಅರ್ಜಿಯ ಸ್ಥಿತಿಗತಿ ಮಾಹಿತಿ
- ನೈಜ-ಸಮಯದ ನವೀಕರಣ ಮತ್ತು ಜ್ಞಾಪನೆ
- ಸುಲಭವಾಗಿ ಸಮಸ್ಯೆಯ ವರದಿ ಮತ್ತು ಬೆಂಬಲ ಪರಿಹಾರ
- ಅವಕಾಶಗಳು, ಯೋಜನೆಗಳು ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ನಿಯಮಿತ ಪ್ರಸಾರ
- ರಾಷ್ಟ್ರೀಯ ಕಾರ್ಯಕ್ರಮಗಳೊಂದಿಗೆ ಸಂಪರ್ಕದಲ್ಲಿರಲು ಪರಿಚಿತ, ಮೊಬೈಲ್-ಮೊದಲ ಇಂಟರ್ ಫೇಸ್
ಈ ಏಕೀಕರಣವು ಯುವಜನರು ಹೆಚ್ಚು ಬಳಸುವ ಡಿಜಿಟಲ್ ವೇದಿಕೆಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಜೋಡಿಸುವ ಮೂಲಕ ಸಬಲೀಕರಣಗೊಳಿಸುವ ಸಚಿವಾಲಯದ ಬದ್ಧತೆಯನ್ನು ಬಲಪಡಿಸುತ್ತದೆ. ಇದರಿಂದಾಗಿ ಅವರು ಸಂಪರ್ಕದಲ್ಲಿರಲು, ತೊಡಗಿಸಿಕೊಳ್ಳಲು ಮತ್ತು ಮಾಹಿತಿ ಪಡೆಯಲು ಸುಲಭವಾಗುತ್ತದೆ.
ʻಮೈ ಭಾರತ್ʼ ಎಂಬುದು ಯುವಜನ ವ್ಯವಹಾರಗಳ ಇಲಾಖೆ (ಡಿಒವೈಎ) ವಿನ್ಯಾಸಗೊಳಿಸಿದ ತಂತ್ರಜ್ಞಾನ ವೇದಿಕೆಯಾಗಿದೆ. ದೇಶದ ಯುವ ಶಕ್ತಿಯನ್ನು ತೊಡಗಿಸಿಕೊಳ್ಳಲು ಸಾಂಸ್ಥಿಕ ವಿಧಾನ ಜಾರಿಗೆ ತರುವ ನಿಟ್ಟಿನಲ್ಲಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಡಿಜಿಟಲ್ ಇಂಡಿಯಾ ಕಾರ್ಪೊರೇಷನ್ʼ (ಡಿಐಸಿ) ಇದನ್ನು ಅಭಿವೃದ್ಧಿಪಡಿಸಿದೆ. 'ಸೇವಾ ಭಾವ' ಮತ್ತು 'ಕರ್ತವ್ಯ ಬೋಧೆ' ಎಂಬ ಭಾರತೀಯ ತತ್ವಗಳೊಂದಿಗೆ ಯುವಕರನ್ನು ಸಬಲೀಕರಣಗೊಳಿಸುವ ಮುಖ್ಯ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ. ಈ ವೇದಿಕೆಯು ವಿವಿಧ ಸ್ವಯಂಸೇವಕ ಮತ್ತು ಕಲಿಕೆಯ ಚಟುವಟಿಕೆಗಳಲ್ಲಿ ಭಾಗವಹಿಸಲು, ತಜ್ಞರಿಂದ ಮಾರ್ಗದರ್ಶನ ಪಡೆಯಲು, ಯುವಕರು ಪ್ರೊಫೈಲ್ ಮತ್ತು ಸಿವಿ ರಚಿಸಲು, ಇತರ ಯುವಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಇತರ ಸಾಮರ್ಥ್ಯ ವರ್ಧನೆ ಚಟುವಟಿಕೆಗಳಿಗೆ ಆಯ್ಕೆಗಳನ್ನು ಒದಗಿಸುತ್ತದೆ.
*****
(Release ID: 2140126)