ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2025, ನವೆಂಬರ್ ನಲ್ಲಿ ರಾಜಸ್ಥಾನದಲ್ಲಿ ನಡೆಯಲಿದೆ ಎಂದು ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ ಘೋಷಿಸಿದ್ದಾರೆ
ಪೂರ್ಣಿಮಾ ವಿಶ್ವವಿದ್ಯಾಲಯ ಮತ್ತು ರಾಜಸ್ಥಾನ ವಿಶ್ವವಿದ್ಯಾಲಯ ಜಂಟಿಯಾಗಿ ಆಯೋಜಿಸಲಿರುವ 25 ವರ್ಷದೊಳಗಿನವರ ಕ್ರೀಡಾಕೂಟದಲ್ಲಿ 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ
Posted On:
25 JUN 2025 6:26PM by PIB Bengaluru
ಪೂರ್ಣಿಮಾ ವಿಶ್ವವಿದ್ಯಾಲಯ ಮತ್ತು ರಾಜಸ್ಥಾನ ವಿಶ್ವವಿದ್ಯಾಲಯ ಜಂಟಿಯಾಗಿ ನವೆಂಬರ್ ನಲ್ಲಿ ಜೈಪುರದಲ್ಲಿ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2025 ಅನ್ನು ಆಯೋಜಿಸಲಿವೆ ಎಂದು ಬುಧವಾರ ಘೋಷಿಸಲಾಯಿತು. ಇದು ಫೆಬ್ರವರಿ 2020 ರಲ್ಲಿ ಪ್ರಾರಂಭವಾದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಐದನೇ ಆವೃತ್ತಿಯಾಗಿದೆ.
ಈ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ 4,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ, ಇದು ವ್ಯಾಪಕ ಶ್ರೇಣಿಯ ಕ್ರೀಡೆಗಳನ್ನು ಒಳಗೊಂಡಿರುತ್ತದೆ. ಹಿಂದಿನ ಆವೃತ್ತಿಗಳಂತೆ, ಕೆಐಯುಜಿ 2025 ಕನಿಷ್ಠ 20 ಕ್ರೀಡೆಗಳನ್ನು ಒಳಗೊಂಡಿರುತ್ತದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳು ಸಹ-ಆತಿಥ್ಯ ವಹಿಸಿದ್ದ ಕೆಐಯುಜಿ 2024 ರಲ್ಲಿ ಚಂಡೀಗಢ ವಿಶ್ವವಿದ್ಯಾಲಯವು ತಂಡ ಚಾಂಪಿಯನ್ ಶಿಪ್ ಅನ್ನು ಗೆದ್ದುಕೊಂಡಿತ್ತು.
"ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವು 2025ರ ನವೆಂಬರ್ ನಲ್ಲಿ ರಾಜಸ್ಥಾನದಲ್ಲಿ ನಡೆಯಲಿದೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಕ್ರೀಡಾಕೂಟವು 25 ವರ್ಷದೊಳಗಿನ ಕ್ರೀಡಾಪಟುಗಳಿಗಾಗಿ ಮತ್ತು ಈ ವರ್ಷದ ಮೇ ತಿಂಗಳಲ್ಲಿ ಬಿಹಾರದಲ್ಲಿ ನಡೆದ 18 ವರ್ಷದೊಳಗಿನವರ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ನಂತರ ನಡೆಯಲಿದೆ. ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕುತ್ತಿರುವ ತಜ್ಞರನ್ನು ಮೆಚ್ಚಿಸಲು ರಾಷ್ಟ್ರೀಯ ವೇದಿಕೆಯನ್ನು ಹುಡುಕುತ್ತಿರುವ ಕ್ರೀಡಾಪಟುಗಳಿಗೆ ಈ ಕ್ರೀಡಾಕೂಟವು ಉತ್ತಮ ಅವಕಾಶವನ್ನು ನೀಡುತ್ತದೆ" ಎಂದು ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದರು.
ಕೆಐಯುಜಿ 2024ರಲ್ಲಿ ಅಥ್ಲೆಟಿಕ್ಸ್ ನಲ್ಲಿ ಎಂಟು ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ದಾಖಲೆಗಳು ಸೃಷ್ಟಿಯಾದವು. ಅವುಗಳಲ್ಲಿ ಐದು ದಾಖಲೆಗಳನ್ನು ಪುರುಷ ಕ್ರೀಡಾಪಟುಗಳು ಸ್ಥಾಪಿಸಿದರು. "ಪ್ರಪಂಚದಾದ್ಯಂತ, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಹು-ಕ್ರೀಡೆಗಳ ಕೂಟಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ರಾಜಸ್ಥಾನದಲ್ಲಿ, ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆಂದು ನಾವು ನಿರೀಕ್ಷಿಸುತ್ತಿದ್ದು, ಕೆಲವು ಉತ್ತಮ ಪ್ರದರ್ಶನಗಳನ್ನು ನೋಡಲು ಆಶಿಸುತ್ತೇವೆ" ಎಂದು ಡಾ. ಮಾಂಡವಿಯಾ ಹೇಳಿದರು.
ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ನಡೆದ 11 ದಿನಗಳ ಕೆಐಯುಜಿ 2024ರಲ್ಲಿ ಒಟ್ಟು 770 ಪದಕಗಳು - 240 ಚಿನ್ನ, 240 ಬೆಳ್ಳಿ ಮತ್ತು 290 ಕಂಚು - ಇದ್ದವು. 200 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಕೆಐಯುಜಿ 2024 ಪ್ರಶಸ್ತಿಗಾಗಿ ಸ್ಪರ್ಧಿಸಿದವು, 20 ಕ್ರೀಡೆಗಳಲ್ಲಿ ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಿದ್ದರು.
ಉತ್ಕಲ್ ವಿಶ್ವವಿದ್ಯಾಲಯದ ಈಜುಗಾರ್ತಿ ಪ್ರತ್ಯಾಸ ರೇ ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳೊಂದಿಗೆ ಅತ್ಯಂತ ಯಶಸ್ವಿ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅತ್ಯಂತ ಯಶಸ್ವಿ ಪುರುಷ ಕ್ರೀಡಾಪಟು ಎಂಬ ಗೌರವವು ನಾಲ್ಕು ಚಿನ್ನದ ಪದಕಗಳನ್ನು ಗೆದ್ದ ಜೈನ್ ವಿಶ್ವವಿದ್ಯಾಲಯದ ಕ್ಸೇವಿಯರ್ ಮೈಕೆಲ್ ಡಿಸೋಜಾ ಅವರಿಗೆ ಸಂದಿತು.
ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯವು ಕೆಐಯುಜಿ 2024 ರಲ್ಲಿ 20 ಚಿನ್ನ, 14 ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳು ಒಳಗೊಂಡಂತೆ ಒಟ್ಟು 42 ಪದಕಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿತ್ತು, ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯವು 12 ಚಿನ್ನ, 20 ಬೆಳ್ಳಿ ಮತ್ತು 19 ಕಂಚಿನ ಪದಕಗಳು ಸೇರಿದಂತೆ ಒಟ್ಟು 51 ಪದಕಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನ ಗಳಿಸಿತ್ತು.
*****
(Release ID: 2139737)