ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 25.05.2025 ರಂದು ಮಾಡಿದ ‘ಮನ್ ಕಿ ಬಾತ್’ – 122ನೇ ಸಂಚಿಕೆಯ ಕನ್ನಡ ಅವತರಣಿಕೆ 

Posted On: 25 MAY 2025 11:38AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಸಂಪೂರ್ಣ ದೇಶ ಭಯೋತ್ಪಾದನೆಯ ವಿರುದ್ಧ ಒಗ್ಗೂಡಿ ನಿಂತಿದೆ. ಆಕ್ರೋಶದಿಂದ ಕೂಡಿದೆ ಮತ್ತು ದೃಢನಿಶ್ಚಯ ಹೊಂದಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲೇಬೇಕು ಎಂಬುದು ಇಂದು ಪ್ರತಿಯೊಬ್ಬ ಭಾರತೀಯನ ಸಂಕಲ್ಪವಾಗಿದೆ. ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಸಮಯದಲ್ಲಿ ನಮ್ಮ ಸೇನಾ ಪಡೆಗಳು ಪ್ರದರ್ಶಿಸಿದ ಶೌರ್ಯ ಪ್ರತಿಯೊಬ್ಬ ಹಿಂದೂಸ್ತಾನಿಯನ್ನೂ ಹೆಮ್ಮೆಪಡುವಂತೆ ಮಾಡಿದೆ. ಗಡಿಯಾಚೆಗಿನ ಭಯೋತ್ಪಾದಕ ಅಡಗುತಾಣಗಳನ್ನು ನಮ್ಮ ಪಡೆಗಳು ನಿಖರತೆಯಿಂದ ಕರಾರುವಾಕ್ಕಾಗಿ  ನಾಶಪಡಿಸಿರುವುದು ಅದ್ಭುತವಾಗಿದೆ. 'ಆಪರೇಷನ್ ಸಿಂಧೂರ್' ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಹೊಸ ಭರವಸೆ ನೀಡಿದೆ ಮತ್ತು ಉತ್ಸಾಹ ತುಂಬಿದೆ.

ಸ್ನೇಹಿತರೇ, 'ಆಪರೇಷನ್ ಸಿಂಧೂರ್' ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಇದು ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ.  ಈ ಚಿತ್ರಣ ಇಡೀ ದೇಶವನ್ನು ದೇಶಭಕ್ತಿಯ ಭಾವನೆಯಿಂದ ತುಂಬಿದೆ.  ತ್ರಿವರ್ಣದಲ್ಲಿ ರಂಗು ಮೇಳೈಸಿದೆ. ದೇಶದ ವಿವಿಧ ನಗರಗಳು, ಗ್ರಾಮಗಳು ಮತ್ತು ಸಣ್ಣಪುಟ್ಟ  ಪಟ್ಟಣಗಳಲ್ಲಿ ತ್ರಿವರ್ಣ ಧ್ವಜ ಯಾತ್ರೆ ಕೈಗೊಳ್ಳಲಾಗುತ್ತಿದ್ದುದನ್ನು ನೀವು ನೋಡಿರಬಹುದು. ಸಾವಿರಾರು ಜನರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ದೇಶದ ಸೇನೆಗೆ ಗೌರವ ಸಲ್ಲಿಸಲು ಮುಂದೆ ಬಂದರು. ಅನೇಕ ನಗರಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ನಾಗರಿಕ ರಕ್ಷಣಾ ಸ್ವಯಂಸೇವಕರಾಗಲು ಒಗ್ಗೂಡಿದರು ಮತ್ತು ಚಂಡೀಗಢದ ವೀಡಿಯೊಗಳು ಸಾಕಷ್ಟು ವೈರಲ್ ಆಗಿರುವುದನ್ನು ನಾವು ಕಂಡಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕವಿತೆಗಳನ್ನು ಬರೆಯಲಾಗುತ್ತಿತ್ತು, ದೇಶಭಕ್ತಿ ಗೀತೆಗಳನ್ನು ಹಾಡಲಾಗುತ್ತಿತ್ತು. ಪುಟ್ಟ ಪುಟ್ಟ ಮಕ್ಕಳು ಅಗಾಧ ಸಂದೇಶಗಳನ್ನು ಹೊತ್ತ  ಚಿತ್ರಗಳನ್ನು ಬಿಡಿಸುತ್ತಿದ್ದರು. ನಾನು ಮೂರು ದಿನಗಳ ಹಿಂದೆಯಷ್ಟೇ ಬಿಕಾನೇರ್‌ಗೆ ಹೋಗಿದ್ದೆ. ಅಲ್ಲಿನ ಮಕ್ಕಳು ನನಗೆ ಇದೇ ರೀತಿಯ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದ್ದರು. 'ಆಪರೇಷನ್ ಸಿಂಧೂರ್' ದೇಶದ ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದೆ ಎಂದರೆ, ಅನೇಕ ಕುಟುಂಬಗಳು ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿವೆ. ಬಿಹಾರದ ಕಟಿಹಾರ್, ಉತ್ತರ ಪ್ರದೇಶದ ಕುಶಿನಗರ ಮತ್ತು ಇನ್ನೂ ಹಲವಾರು ನಗರಗಳಲ್ಲಿ, ಆ ಸಮಯದಲ್ಲಿ ಜನಿಸಿದ ಮಕ್ಕಳಿಗೆ 'ಸಿಂಧೂರ್' ಎಂದು ನಾಮಕರಣ ಮಾಡಲಾಗಿದೆ.

ಸ್ನೇಹಿತರೇ, ನಮ್ಮ ಸೈನಿಕರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದರು, ಅದು ಅವರ ಅದಮ್ಯ ಸಾಹಸವಾಗಿತ್ತು ಮತ್ತು ಅದರಲ್ಲಿ ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ತಂತ್ರಜ್ಞಾನದ ಶಕ್ತಿಯೂ ಸೇರಿತ್ತು. 'ಸ್ವಾವಲಂಬಿ ಭಾರತ'ದ ಸಂಕಲ್ಪವೂ ಇತ್ತು. ಈ ಗೆಲುವಿನಲ್ಲಿ ನಮ್ಮ ಎಂಜಿನಿಯರ್‌ಗಳು, ತಂತ್ರಜ್ಞರು ಸೇರಿದಂತೆ ಎಲ್ಲರ ಶ್ರಮವೂ ಸೇರಿದೆ. ಈ ಅಭಿಯಾನದ ನಂತರ, ದೇಶಾದ್ಯಂತ ‘Vocal for Local’ ಕುರಿತು ಹೊಸ ಆಶಾಕಿರಣ ಮೂಡಿದೆ. ಅನೇಕ ವಿಷಯಗಳು ಮನ ಮುಟ್ಟುತ್ತವೆ. "ಇನ್ನು ಮುಂದೆ ನಾವು ನಮ್ಮ ಮಕ್ಕಳಿಗಾಗಿ ಭಾರತದಲ್ಲಿ ತಯಾರಿಸಿದ ಆಟಿಕೆಗಳನ್ನು ಮಾತ್ರ ಖರೀದಿಸುತ್ತೇವೆ. ದೇಶಪ್ರೇಮ ಬಾಲ್ಯದಿಂದಲೇ ಮೂಡಬೇಕು" ಎಂದು ಪೋಷಕರೊಬ್ಬರು ಹೇಳಿದರು. “ನಾವು ನಮ್ಮ ಮುಂದಿನ ರಜೆಯನ್ನು ದೇಶದ ಯಾವುದಾದರೂ ಸುಂದರ ಸ್ಥಳದಲ್ಲಿ ಕಳೆಯುತ್ತೇವೆ." ಎಂದು ಕೆಲವು ಕುಟುಂಬಗಳು ಪ್ರತಿಜ್ಞೆ ಮಾಡಿವೆ. ಅನೇಕ ಯುವಕರು ‘Wed in India’ ಸಂಕಲ್ಪಗೈದಿದ್ದಾರೆ , ಅವರು ನಮ್ಮ ದೇಶದಲ್ಲೇ ವಿವಾಹವಾಗಲಿದ್ದಾರೆ. "ಈಗ ನೀವು ಯಾವುದೇ ಉಡುಗೊರೆಯನ್ನು ನೀಡಿದರೂ, ಅದು ಕೆಲವು ಭಾರತೀಯ ಕುಶಲಕರ್ಮಿಗಳೇ ತಯಾರಿಸಿದ್ದಾಗಿರುತ್ತದೆ" ಎಂದು ಇನ್ನೂ ಕೆಲವರು ಹೇಳಿದ್ದಾರೆ

ಸ್ನೇಹಿತರೇ, 'ಜನರ ಒಗ್ಗೂಡುವಿಕೆ, ಸಾರ್ವಜನಿಕ ಭಾಗವಹಿಸುವಿಕೆ' - ಇದೇ  ಅಲ್ಲವೆ ಭಾರತದ ನಿಜವಾದ ಶಕ್ತಿ. ಬನ್ನಿ ಈ ಸಂದರ್ಭದಲ್ಲಿ ನಾವೆಲ್ಲ “ನಮ್ಮ ಜೀವನದಲ್ಲಿ ಸಾಧ್ಯವಾದಲ್ಲೆಲ್ಲಾ ಸ್ವದೇಶದಲ್ಲಿ ತಯಾರಿಸಿದ ವಸ್ತುಗಳಿಗೆ ಆದ್ಯತೆ ನೀಡುತ್ತೇವೆ  ಎಂದು ಸಂಕಲ್ಪಗೈಯೋಣ ಎಂದು ನಿಮ್ಮಲ್ಲಿ ಆಗ್ರಹಿಸುತ್ತೇನೆ.  ಇದು ಕೇವಲ ಆರ್ಥಿಕ ಸ್ವಾವಲಂಬನೆಯ ವಿಷಯವಲ್ಲ, ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸುವ ಭಾವನೆಯಾಗಿದೆ. ನಮ್ಮ ಒಂದು ಹೆಜ್ಜೆ ಭಾರತದ ಪ್ರಗತಿಗೆ ದೊಡ್ಡ ಕೊಡುಗೆ ನೀಡಬಹುದಾಗಿದೆ.       

ಸ್ನೇಹಿತರೇ, ಬಸ್ಸಿನಲ್ಲಿ ಎಲ್ಲಿಯಾದರೂ  ಪ್ರಯಾಣಿಸುವುದು ಬಹಳ ಸಾಮಾನ್ಯ ವಿಷಯ. ಆದರೆ ಮೊದಲ ಬಾರಿಗೆ ಒಂದು ಗ್ರಾಮಕ್ಕೆ ಬಸ್ ತಲುಪಿರುವ ಕುರಿತು ನಾನು ನಿಮಗೆ ಹೇಳಬಯಸುತ್ತೇನೆ. ಅಲ್ಲಿನ ಜನರು ಈ ದಿನಕ್ಕಾಗಿ ವರ್ಷಗಳಿಂದ ಕಾಯುತ್ತಿದ್ದರು. ಮತ್ತು ಮೊದಲ ಬಾರಿ ಗ್ರಾಮಕ್ಕೆ  ಬಸ್ ತಲುಪಿದಾಗ, ಜನರು ಅದನ್ನು ಢೋಲು ಢಕ್ಕೆ ಬಾರಿಸುವ ಮೂಲಕ ಸ್ವಾಗತಿಸಿದರು. ಬಸ್ ನೋಡಿ ಜನರ ಸಂತೋಷ ತುಂಬಾ ಮೇರೆ ಮೀರಿತ್ತು. ಗ್ರಾಮಕ್ಕೆ ಡಾಂಬರೀಕರಣ ಮಾಡಿದ ರಸ್ತೆ ಇತ್ತು, ಜನರಿಗೆ ಅದರ ಅವಶ್ಯಕತೆಯೂ ಇತ್ತು, ಆದರೆ ಇಲ್ಲಿ ಈ ಹಿಂದೆ ಬಸ್ ಓಡಾಡುತ್ತಿರಲಿಲ್ಲ. ಏಕೆಂದರೆ ಈ ಗ್ರಾಮವು ಮಾವೋವಾದಿ ಹಿಂಸಾಚಾರದಿಂದ ಪ್ರಭಾವಿತವಾಗಿತ್ತು. ಈ ಸ್ಥಳವು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿದೆ ಮತ್ತು ಈ ಗ್ರಾಮದ ಹೆಸರು ಕಾಟೇಝರಿ. ಕಾಟೇಝರಿಯಲ್ಲಾದ ಈ ಬದಲಾವಣೆಯ ಅನುಭವ ಸುತ್ತಮುತ್ತಲಿನ ಪ್ರದೇಶದ ಮೇಲೂ ಪ್ರಭಾವ ಬೀರಿರುವುದು ಕಂಡುಬರುತ್ತಿದೆ. ಈಗ ಇಲ್ಲಿನ ಪರಿಸ್ಥಿತಿ ಸಾಮಾನ್ಯಕ್ಕೆ ಮರಳುತ್ತಿದೆ. ಮಾವೋವಾದದ ವಿರುದ್ಧದ ಸಾಮೂಹಿಕ ಹೋರಾಟದಿಂದಾಗಿ, ಮೂಲಭೂತ ಸೌಕರ್ಯಗಳು ಈಗ ಇಂತಹ ಪ್ರದೇಶಗಳಿಗೂ ತಲುಪಲು ಪ್ರಾರಂಭಿಸಿವೆ. ಬಸ್ ಬಂದರೆ ತಮ್ಮ ಜೀವನ ತುಂಬಾ ಸುಲಭವಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ

ಸ್ನೇಹಿತರೇ, 'ಮನ್ ಕಿ ಬಾತ್' ನಲ್ಲಿ ನಾವು ಈಗಾಗಲೇ ಛತ್ತೀಸ್‌ಗಢದಲ್ಲಿ ನಡೆದ ಬಸ್ತರ್ ಒಲಿಂಪಿಕ್ಸ್ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿನ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಚರ್ಚಿಸಿದ್ದೇವೆ. ಇಲ್ಲಿನ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ಇದೆ. ಅವರು ಕ್ರೀಡೆಯಲ್ಲೂ ಅದ್ಭುತ ಸಾಧನೆಗೈಯುತ್ತಿದ್ದಾರೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಎಷ್ಟು ಧೈರ್ಯಶಾಲಿಗಳು ಎಂಬುದನ್ನು ಇಂತಹ ಪ್ರಯತ್ನಗಳು ಎತ್ತಿ ತೋರಿಸುತ್ತವೆ. ಈ ಜನರು ಎಲ್ಲಾ ಸವಾಲುಗಳ ಮಧ್ಯೆಯೂ ತಮ್ಮ ಜೀವನವನ್ನು ಉತ್ತಮಗೊಳಿಸುವ ಮಾರ್ಗವನ್ನು ಆರಿಸಿಕೊಂಡಿದ್ದಾರೆ. 10 ಮತ್ತು 12ನೇ ತರಗತಿಯ ಫಲಿತಾಂಶಗಳಲ್ಲಿಯೂ ದಂತೇವಾಡ ಜಿಲ್ಲೆಯ ಸಾಧನೆ ಅತ್ಯುತ್ತಮವಾಗಿರುವುದನ್ನು ತಿಳಿದು ನನಗೆ ತುಂಬಾ ಸಂತೋಷವಾಯಿತು. ಈ ಜಿಲ್ಲೆ 10 ನೇ ತರಗತಿಯ ಫಲಿತಾಂಶದಲ್ಲಿ ಸುಮಾರು ಶೇಕಡಾ ತೊಂಬತ್ತೈದು ಫಲಿತಾಂಶದೊಂದಿಗೆ ಅಗ್ರಸ್ಥಾನದಲ್ಲಿ ಮೆರೆದಿದೆ. 12ನೇ ತರಗತಿ ಪರೀಕ್ಷೆಯಲ್ಲಿ, ಈ ಜಿಲ್ಲೆ ಛತ್ತೀಸ್‌ಗಢದಲ್ಲಿ ಆರನೇ ಸ್ಥಾನಗಳಿಸಿದೆ. ಒಂದು ಕಾಲದಲ್ಲಿ ಮಾವೋವಾದ ತೀವ್ರವಾಗಿದ್ದ ದಂತೇವಾಡದಲ್ಲಿ, ಇಂದು ಶಿಕ್ಷಣದ ಪತಾಕೆ ಮುಗಿಲು ಮುಟ್ಟುತ್ತಿದೆ ಎಂಬ ಬಗ್ಗೆ ಆಲೋಚಿಸಿ. ಇಂತಹ ಬದಲಾವಣೆಗಳು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತವೆ.

ನನ್ನ ಪ್ರಿಯ ದೇಶವಾಸಿಗಳೇ, ಈಗ ನಾನು ನಿಮಗೆ ಸಿಂಹಗಳಿಗೆ ಸಂಬಂಧಿಸಿದ ಒಂದೊಳ್ಳೆ  ಸುದ್ದಿಯನ್ನು ಹೇಳಬಯಸುತ್ತೇನೆ. ಕಳೆದ ಕೇವಲ ಐದು ವರ್ಷಗಳಲ್ಲಿ, ಗುಜರಾತ್‌ನ ಗಿರ್‌ನಲ್ಲಿ ಸಿಂಹಗಳ ಸಂಖ್ಯೆ 674 ರಿಂದ 891 ಕ್ಕೇರಿದೆ .  ಆರುನೂರಾ ಎಪ್ಪತ್ತ ನಾಲ್ಕರಿಂದ  ಎಂತುನಊರಾ ತೊಂಭತ್ತೊಂದು! ಸಿಂಹಗಳ ಗಣತಿಯ ನಂತರ ತಿಳಿದುಬಂದ ಸಿಂಹಗಳ ಈ ಸಂಖ್ಯೆ ತುಂಬಾ ಉತ್ತೇಜನಕಾರಿಯಾಗಿದೆ. ಸ್ನೇಹಿತರೇ, ನಿಮ್ಮಲ್ಲಿ ಹಲವರು ಈ ಪ್ರಾಣಿಗಳ ಗಣತಿ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಲು ಬಯಸಬಹುದು? ಈ ಕೆಲಸ ಬಹಳ ಸವಾಲಿನದ್ದಾಗಿದೆ. ಸಿಂಹ ಗಣತಿಯನ್ನು ಹನ್ನೊಂದು  ಜಿಲ್ಲೆಗಳಲ್ಲಿ, 35 ಸಾವಿರ ಚದರ ಕಿಲೋಮೀಟರ್ ಪ್ರದೇಶದಲ್ಲಿ ನಡೆಸಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗಣತಿಗಾಗಿ, ತಂಡಗಳು ಈ ಪ್ರದೇಶಗಳನ್ನು ದಿನದ 24 ಗಂಟೆಯೂ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಸಂಪೂರ್ಣ  ಅಭಿಯಾನದಲ್ಲಿ ಪರಿಶೀಲನೆ ಮತ್ತು ಮರು ಪರಿಶೀಲನೆ ಎರಡನ್ನೂ ಮಾಡಲಾಯಿತು. ಈ ಮೂಲಕ, ಸಿಂಹಗಳ ಎಣಿಕೆ ಕೆಲಸವನ್ನು ಅತ್ಯಂತ ನಿಖರವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು

ಸ್ನೇಹಿತರೇ, ಸಮಾಜದಲ್ಲಿ ಜವಾಬ್ದಾರಿಯ ಭಾವನೆ ಗಾಢವಾಗಿದ್ದಾಗ ಎಷ್ಟು ಅದ್ಭುತ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿನ ವೃದ್ಧಿ - ಎತ್ತಿ ತೋರಿಸುತ್ತದೆ. ಕೆಲವು ದಶಕಗಳ ಹಿಂದೆ ಗಿರ್‌ನಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಆದರೆ ಅಲ್ಲಿನ ಜನರು ಒಗ್ಗೂಡಿ ಬದಲಾವಣೆಗೆ ಟೊಂಕ ಕಟ್ಟಿ ನಿಂತರು. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ, ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಕೂಡ ಅಳವಡಿಸಿಕೊಳ್ಳಲಾಯಿತು. ಇದೇ ಸಮಯದಲ್ಲಿ, ಅರಣ್ಯ ಅಧಿಕಾರಿಗಳ ಹುದ್ದೆಯಲ್ಲಿ ಮಹಿಳೆಯರನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದ ಮೊದಲ ರಾಜ್ಯವಾಗಿ ಗುಜರಾತ್ ಹೊರಹೊಮ್ಮಿತು. ಇಂದು ನಾವು ನೋಡುತ್ತಿರುವ ಫಲಿತಾಂಶಗಳಿಗೆ ಈ ಎಲ್ಲ ಅಂಶಗಳು ಕಾರಣವಾಗಿವೆ. ವನ್ಯಜೀವಿ ರಕ್ಷಣೆಗಾಗಿ, ಇದೆ ರೀತಿ ನಾವು ನಿರಂತರ ಜಾಗೃತರಾಗಿರಬೇಕು ಮತ್ತು ಜಾಗರೂಕರಾಗಿರಬೇಕು.

ನನ್ನ ಪ್ರಿಯ ದೇಶವಾಸಿಗಳೇ, ಎರಡು-ಮೂರು ದಿನಗಳ ಹಿಂದೆ, ನಾನು ಪ್ರಥಮ Rising North East ಶೃಂಗಸಭೆಗೆ ಹೋಗಿದ್ದೆ. ಅದಕ್ಕೂ ಮುನ್ನ ನಾವು ಈಶಾನ್ಯದ ಸಾಮರ್ಥ್ಯಕ್ಕೆ ಸಮರ್ಪಿತವಾದ 'ಅಷ್ಟಲಕ್ಷ್ಮಿ ಮಹೋತ್ಸವ'ವನ್ನು ಆಚರಿಸಿದ್ದೆವು. ಈಶಾನ್ಯ ಪ್ರದೇಶದ ವಿಶೇಷತೆಯೇ ಬೇರೆ; ಅದರ ಸಾಮರ್ಥ್ಯ, ಪ್ರತಿಭೆ ನಿಜಕ್ಕೂ ಅದ್ಭುತ. crafted fibers ಬಗ್ಗೆ ಒಂದು ಆಸಕ್ತಿದಾಯಕ ಕಥೆಯ ಬಗ್ಗೆ ನನಗೆ ತಿಳಿಯಿತು.  ಕ್ರಾಫ್ಟೆಡ್ ಫೈಬರ್ಸ್ ಕೇವಲ ಒಂದು ಬ್ರಾಂಡ್ ಅಲ್ಲ, ಬದಲಾಗಿ ಸಿಕ್ಕಿಂನ ಸಂಪ್ರದಾಯ, ನೇಯ್ಗೆ ಕಲೆ ಮತ್ತು ಫ್ಯಾಷನ್ ಕುರಿತ ಇಂದಿನ ಚಿಂತನೆ, ಇ ಮೂರರ ಸುಂದರ ಸಮ್ಮಿಲನವಾಗಿದೆ. ಡಾ. ಚೆವಾಂಗ್ ನೋರ್ಬು ಭೂಟಿಯಾ ಇದನ್ನು ಪ್ರಾರಂಭಿಸಿದರು. ಅವರು ವೃತ್ತಿಯಲ್ಲಿ ಪಶುವೈದ್ಯರು ಆದರೆ ಅಂತಃಕರಣದಿಂದ ಸಿಕ್ಕಿಂ ಸಂಸ್ಕೃತಿಯ ನಿಜವಾದ ರಾಯಭಾರಿಯಾಗಿದ್ದಾರೆ. ನೇಯಿಗೆಗೆ ಹೊಸ ಆಯಾಮವನ್ನು ನೀಡಬಾರದೆ  ಎಂಬ ಆಲೋಚನೆ ಅವರಲ್ಲಿ ಮೂಡಿತು! ಈ ಆಲೋಚನೆಯಿಂದ, ಕ್ರಾಫ್ಟೆಡ್ ಫೈಬರ್ಸ್ ಹುಟ್ಟಿಕೊಂಡಿತು. ಅವರು ಸಾಂಪ್ರದಾಯಿಕ ನೇಯ್ಗೆಯನ್ನು ಆಧುನಿಕ ಫ್ಯಾಷನ್‌ನೊಂದಿಗೆ ಸಂಯೋಜಿಸಿ ಅದನ್ನು ಸಾಮಾಜಿಕ ಉದ್ಯಮವನ್ನಾಗಿ ಮಾರ್ಪಡಿಸಿದರು. ಈಗ ಇಲ್ಲಿ ಕೇವಲ ವಸ್ತ್ರಗಳ ನೇಯ್ಗೆ ಮಾತ್ರವಲ್ಲ, ಜೀವನವನ್ನು ಕೂಡ ರೂಪಿಸಲಾಗುತ್ತಿದೆ. ಅವರು ಸ್ಥಳೀಯ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಾರೆ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಾರೆ. ಡಾ. ಭೂಟಿಯಾ ಗ್ರಾಮದ ನೇಕಾರರು, ಪಶುಪಾಲಕರು ಮತ್ತು ಸ್ವಸಹಾಯ ಗುಂಪುಗಳನ್ನು ಒಗ್ಗೂಡಿಸಿ, ಉದ್ಯೋಗದ ಹೊಸ ಮಾರ್ಗಗಳನ್ನು ಸೃಷ್ಟಿಸಿದ್ದಾರೆ. ಇಂದು, ಸ್ಥಳೀಯ ಮಹಿಳೆಯರು ಮತ್ತು ಕುಶಲಕರ್ಮಿಗಳು ತಮ್ಮ ಕೌಶಲ್ಯದಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. crafted fibers ನ ಶಾಲುಗಳು, ಸ್ಟೋಲ್‌ಗಳು, ಕೈಗವಸುಗಳು, ಸಾಕ್ಸ್‌ಗಳು, ಎಲ್ಲವೂ ಸ್ಥಳೀಯ ಕೈಮಗ್ಗಗಳಲ್ಲಿ ತಯಾರಿಸಲಾಗಿದ್ದು, ಇದರಲ್ಲಿ ಬಳಸಲಾಗುವ ಉಣ್ಣೆ ಸಿಕ್ಕಿಂನ ಮೊಲಗಳು ಮತ್ತು ಕುರಿಗಳಿಂದ ಪಡೆಯಲಾಗುತ್ತದೆ. ಬಣ್ಣಗಳು ಸಹ ಸಂಪೂರ್ಣವಾಗಿ ನೈಸರ್ಗಿಕವಾಗಿವೆ - ಯಾವುದೇ ರಾಸಾಯನಿಕಗಳಿಲ್ಲ, ಕೇವಲ ಪ್ರಾಕೃತಿಕ ಬಣ್ಣಗಳು. ಸಿಕ್ಕಿಂನ ಸಾಂಪ್ರದಾಯಿಕ ನೇಯ್ಗೆ ಮತ್ತು ಸಂಸ್ಕೃತಿಗೆ ಡಾ. ಭೂಟಿಯಾ ಹೊಸ ಸ್ಥಾನಮಾನ ನೀಡಿದ್ದಾರೆ. ಸಂಪ್ರದಾಯದೊಂದಿಗೆ  ಉತ್ಸಾಹವನ್ನು ಸಂಯೋಜಿಸಿದಾಗ ಅದು ಜಗತ್ತನ್ನು ಎಷ್ಟು ಆಕರ್ಷಿಸಬಹುದು ಎಂಬುದನ್ನು ಡಾ. ಭೂಟಿಯಾ ಅವರ ಕೆಲಸ ನಮಗೆ ಕಲಿಸುತ್ತದೆ.

ನನ್ನ ಪ್ರಿಯ ದೇಶವಾಸಿಗಳೇ, ಇಂದು ನಾನು ನಿಮಗೆ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ಹೇಳಬಯಸುತ್ತೇನೆ, ಅವರು ಒಬ್ಬ ಕಲಾವಿದರು ಮತ್ತು ಸ್ಫೂರ್ತಿಯ ಸೆಲೆ. ಅವರ ಹೆಸರು - ಜೀವನ್ ಜೋಶಿ, ವಯಸ್ಸು 65 ವರ್ಷ. ಯಾರ ಹೆಸರಿನಲ್ಲಿಯೇ ಜೀವ ತುಂಬಿದೆಯೋ ಅವರು ಎಷ್ಟು ಚೈತನ್ಯದಿಂದ ತುಂಬಿರುತ್ತಾರೆ ಎಂಬುದನ್ನು ಊಹಿಸಿ. ಜೀವನ್ ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಲ್ಲಿ ಪೋಲಿಯೊದಿಂದಾಗಿ ಅವರ ಕಾಲುಗಳ ಬಲ ಕುಂದಿಹೋಯಿತು, ಆದರೆ ಪೋಲಿಯೊ ಅವರ ಧೈರ್ಯವನ್ನು ಕುಂದಿಸಲಾಗಲಿಲ್ಲ. ಅವರ ನಡಿಗೆಯ ವೇಗ ಕಡಿಮೆಯಾದರೂ, ಅವರ ಮನಸ್ಸು - ಕಲ್ಪನಾತೀತವಾಗಿ ಹಾರುತ್ತಲೇ ಇತ್ತು. ಈ ಹಾರಾಟದಲ್ಲಿಯೇ, ಜೀವನ್ ಅವರು  'ಬಗೆಟ್' ಎಂಬ ವಿಶಿಷ್ಟ ಕಲೆಗೆ ಜನ್ಮ ನೀಡಿದರು. ಇದರಲ್ಲಿ, ಅವರು ಪೈನ್ ಮರಗಳಿಂದ ಬೀಳುವ ಒಣ ತೊಗಟೆಯಿಂದ ಸುಂದರವಾದ ಕಲಾಕೃತಿಗಳನ್ನು ಮಾಡುತ್ತಾರೆ. ಜನರು ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಪರಿಗಣಿಸುವ ಆ ತೊಗಟೆ - ಜೀವನ್ ಅವರ ಕೈಗೆ ಬಂದ ಕೂಡಲೇ ಪರಂಪರೆಯಾಗಿ ಮಾರ್ಪಾಡಾಗುತ್ತದೆ. ಅವರ ಪ್ರತಿಯೊಂದು ಸೃಷ್ಟಿಯಲ್ಲೂ ಉತ್ತರಾಖಂಡ್ ನ ಮಣ್ಣಿನ ಸೊಬಗಿದೆ. ಕೆಲವೊಮ್ಮೆ ಅದು ಪರ್ವತಗಳ ಜಾನಪದ ವಾದ್ಯಗಳಾಗಿ ರೂಪುಗೊಂಡರೆ, ಮತ್ತು ಕೆಲವೊಮ್ಮೆ ಪರ್ವತಗಳ ಆತ್ಮವೇ ಆ ಕಲಾಕೃತಿಯಲ್ಲಿ ಅವತರಿಸಿದಂತೆ ಭಾಸವಾಗುತ್ತದೆ. ಜೀವನ್ ಅವರ ಕೆಲಸ ಕೇವಲ ಒಂದು ಕಲೆ ಮಾತ್ರವಲ್ಲ, ಅದೊಂದು ಸಾಧನೆಯಾಗಿದೆ. ಅವರು ತಮ್ಮ ಇಡೀ ಜೀವನವನ್ನು ಈ ಕಲೆಗೆ ಮುಡಿಪಾಗಿಟ್ಟಿದ್ದಾರೆ. ಜೀವನ್ ಜೋಶಿಯವರಂತಹ ಕಲಾವಿದರು, ಎಂತಹದೇ ಪರಿಸ್ಥಿತಿಯಿರಲಿ, ಉದ್ದೇಶ ಬಲವಾಗಿದ್ದರೆ, ಯಾವುದೂ ಅಸಾಧ್ಯವಲ್ಲ ಎಂಬುದನ್ನು ನಮಗೆ ನೆನಪಿಸುತ್ತಾರೆ. ಅವರ  ಹೆಸರು ಜೀವನ್ ಮತ್ತು ಅವರು ಜೀವನ ನಡೆಸುವುದರ ಅರ್ಥವನ್ನು ನಿಜವಾಗಿಯೂ ತೋರಿಸಿಕೊಟ್ಟಿದ್ದಾರೆ.

ನನ್ನ ಪ್ರಿಯ ದೇಶವಾಸಿಗಳೇ, ಇಂದು ಹೊಲಗದ್ದೆಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಆಕಾಶದೆತ್ತರದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರಿದ್ದಾರೆ. ಹೌದು ! ನೀವು ಸರಿಯಾಗಿ ಕೇಳಿದ್ದೀರಿ, ಈಗ ಗ್ರಾಮದ ಮಹಿಳೆಯರು ಡ್ರೋನ್ ದೀದಿಗಳಾಗಿದ್ದಾರೆ ಮತ್ತು ಡ್ರೋನ್‌ಗಳನ್ನು ಹಾರಿಸುತ್ತಿದ್ದಾರೆ ಮತ್ತು ಕೃಷಿಯಲ್ಲಿ ಹೊಸ ಕ್ರಾಂತಿಯನ್ನು ತರುತ್ತಿದ್ದಾರೆ.

ಸ್ನೇಹಿತರೇ, ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ, ಕೆಲ ಸಮಯದ ಹಿಂದೆ ಇತರರನ್ನು ಅವಲಂಬಿಸಬೇಕಾಗಿದ್ದ ಮಹಿಳೆಯರು, ಇಂದು ಡ್ರೋನ್ ಸಹಾಯದಿಂದ 50 ಎಕರೆ ಭೂಮಿಯಲ್ಲಿ ಔಷಧಿ ಸಿಂಪಡಿಸುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಬೆಳಿಗ್ಗೆ ಮೂರು ಗಂಟೆ, ಸಂಜೆ ಎರಡು ಗಂಟೆ ಮತ್ತು ಕೆಲಸ ಮಾಡಿದರೆ ಆಯ್ತು. ಬಿಸಿಲಿಗೆ ಬೇಯಬೇಕಿಲ್ಲ, ವಿಷಕಾರಿ ರಾಸಾಯನಿಕಗಳ ಅಪಾಯವಿಲ್ಲ. ಸ್ನೇಹಿತರೇ, ಗ್ರಾಮಸ್ಥರು ಕೂಡ ಈ ಬದಲಾವಣೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದಾರೆ. ಈಗ ಈ ಮಹಿಳೆಯರನ್ನು 'ಡ್ರೋನ್ ಆಪರೇಟರ್‌ಗಳು' ಎಂದು ಕರೆಯಲಾಗುವುದಿಲ್ಲ, ಬದಲಿಗೆ ‘sky warriors’ ಎಂದು ಕರೆಯಲಾಗುತ್ತದೆ. ತಂತ್ರಜ್ಞಾನ ಮತ್ತು ದೃಢಸಂಕಲ್ಪ ಒಗ್ಗೂಡಿದಾಗ  ಬದಲಾವಣೆ ಸಂಭವಿಸುತ್ತದೆ ಎಂದು ಈ ಮಹಿಳೆಯರು ನಿರೂಪಿಸಿದ್ದಾರೆ.

ನನ್ನ ಪ್ರಿಯ ದೇಶವಾಸಿಗಳೇ, 'ಅಂತಾರಾಷ್ಟ್ರೀಯ ಯೋಗ ದಿನ' ಕ್ಕೆ ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ನೀವು ಇನ್ನೂ ಯೋಗಾಭ್ಯಾಸದಿಂದ  ದೂರವಿದ್ದರೆ ಕೂಡಲೇ ಯೋಗಾಭ್ಯಾಸ ಆರಂಭಿಸಿ ಎಂಬುದನ್ನು ಈ ಸಂದರ್ಭ ನಮಗೆ ನೆನಪಿಸುತ್ತದೆ. ಯೋಗಾಭ್ಯಾಸ ನಿಮ್ಮ ಜೀವನದ ವಿಧಾನವನ್ನು ಬದಲಾಯಿಸುತ್ತದೆ. ಸ್ನೇಹಿತರೇ, ಜೂನ್ 21, 2015 ರಂದು 'ಯೋಗ ದಿನ' ಪ್ರಾರಂಭವಾದಾಗಿನಿಂದ, ಅದರ ಆಕರ್ಷಣೆ ನಿರಂತರವಾಗಿ ವೃದ್ಧಿಸುತ್ತಿದೆ. ಈ ವರ್ಷವೂ ಸಹ, 'ಯೋಗ ದಿನ'ದ ಬಗ್ಗೆ ಪ್ರಪಂಚದಾದ್ಯಂತದ ಜನರ ಉತ್ಸಾಹ ಮತ್ತು ಹುಮ್ಮಸ್ಸು ಕಂಡುಬರುತ್ತಿದೆ. ವಿವಿಧ ಸಂಸ್ಥೆಗಳು ತಮ್ಮ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಕಳೆದ ವರ್ಷಗಳ ಫೋಟೋಗಳು ನನಗೆ ತುಂಬಾ ಸ್ಫೂರ್ತಿ ನೀಡಿವೆ. ಕೆಲವು ವರ್ಷಗಳಲ್ಲಿ, ವಿವಿಧ ದೇಶಗಳಲ್ಲಿ, ಜನರು ಯೋಗ ಸರಪಳಿ ಮತ್ತು Yoga Ring ತಯಾರಿಸಿರುವುದನ್ನು ನಾವು ನೋಡಿದ್ದೇವೆ. ನಾಲ್ಕು ತಲೆಮಾರುಗಳು ಒಟ್ಟಿಗೆ ಯೋಗಾಭ್ಯಾಸ ಮಾಡುತ್ತಿರುವ ಇಂತಹ ಅನೇಕ ಚಿತ್ರಗಳಿವೆ. ಅನೇಕ ಜನರು ಯೋಗಾಭ್ಯಾಸಕ್ಕಾಗಿ ತಮ್ಮ ನಗರದ ಪ್ರತಿಷ್ಠಿತ ಸ್ಥಳಗಳನ್ನು ಆರಿಸಿಕೊಂಡರು. ಈ ಬಾರಿ ನೀವು ಕೂಡ ಯೋಗ ದಿನವನ್ನು ಆಸಕ್ತಿದಾಯಕ ರೀತಿಯಲ್ಲಿ ಆಚರಿಸುವ ಬಗ್ಗೆ ಚಿಂತಿಸಬಹುದು.

ಸ್ನೇಹಿತರೇ, ಆಂಧ್ರಪ್ರದೇಶ ಸರ್ಕಾರ ಯೋಗಆಂಧ್ರ (YogAndhra) ಅಭಿಯಾನವನ್ನು ಪ್ರಾರಂಭಿಸಿದೆ. ಇಡೀ ರಾಜ್ಯದಲ್ಲಿ ಯೋಗ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ. ಈ ಅಭಿಯಾನದ ಅಡಿಯಲ್ಲಿ, 10 ಲಕ್ಷ ಯೋಗ ಸಾಧಕರ ಗುಂಪನ್ನು ರಚಿಸಲಾಗುತ್ತಿದೆ. ಈ ವರ್ಷ, ವಿಶಾಖಪಟ್ಟಣದಲ್ಲಿ ನಡೆಯುವ 'ಯೋಗ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ದೊರೆಯಲಿದೆ. ಈ ಬಾರಿಯೂ ನಮ್ಮ ಯುವ ಸ್ನೇಹಿತರು ದೇಶದ ಪರಂಪರೆಗೆ ಸಂಬಂಧಿಸಿದ ಪ್ರತಿಷ್ಠಿತ ಸ್ಥಳಗಳಲ್ಲಿ ಯೋಗಾಭ್ಯಾಸ ಮಾಡಲಿದ್ದಾರೆ ಎಂದು ತಿಳಿದು ನನಗೆ ಬಹಳ ಸಂತೋಷವಾಗಿದೆ. ಅನೇಕ ಯುವಕರು ಹೊಸ ದಾಖಲೆಗಳನ್ನು ಸೃಷ್ಟಿಸಲು ಮತ್ತು ಯೋಗ ಸರಪಳಿಯ ಭಾಗವಾಗುವ ಪ್ರತಿಜ್ಞೆ ಕೈಗೊಂಡಿದ್ದಾರೆ. ನಮ್ಮ ಕಾರ್ಪೋರೇಟ್ ಗಳು ಕೂಡಾ ಈ ವಿಷಯದಲ್ಲಿ ಹಿಂದೆ ಉಳಿದಿಲ್ಲ. ಕೆಲವು ಸಂಸ್ಥೆಗಳು ತಮ್ಮ ಕಚೇರಿಗಳಲ್ಲೇ ಯೋಗಾಭ್ಯಾಸಕ್ಕಾಗಿ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿವೆ. ಕೆಲವು ನವೋದಯಗಳು 'ಕಚೇರಿ ಯೋಗ ಸಮಯ' ಗಳನ್ನು ನಿಗದಿಪಡಿಸಿವೆ. ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಯೋಗ ಕಲಿಸಲು ತಯಾರಿ ನಡೆಸುತ್ತಿರುವ ಜನರೂ ಇದ್ದಾರೆ. ಆರೋಗ್ಯ ಮತ್ತು ದೇಹದಾರ್ಢ್ಯತೆ ಬಗ್ಗೆ ಜನರ ಈ ತಿಳುವಳಿಕೆ ನನಗೆ ಅತೀವ ಸಂತಸ ನೀಡುತ್ತದೆ.

ಸ್ನೇಹಿತರೆ, ‘ಯೋಗ ದಿವಸ್’ ಜೊತೆಗೇ ಆಯುರ್ವೇದ ಕ್ಷೇತ್ರದಲ್ಲಿ ಬಹಳಷ್ಟು ನಡೆಯುತ್ತಿದ್ದು, ಇವುಗಳ ಕುರಿತು ಅರಿತಾಗ ನಿಮಗೆ ಕೂಡಾ ಬಹಳ ಸಂತೋಷವಾಗುತ್ತದೆ. ನಿನ್ನೆ ಅಂದರೆ ಮೇ 24ರಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರು ಹಾಗೂ ನನ್ನ ಮಿತ್ರ ತುಳಸೀ ಅವರ ಸಮ್ಮುಖದಲ್ಲಿ ಒಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದೊಂದಿಗೇ International Classification of Health Interventions ಅಡಿಯಲ್ಲಿ ಒಂದು ಮೀಸಲಾದ ಸಾಂಪ್ರದಾಯಿಕ ಔಷಧ ಮಾಡ್ಯೂಲ್ ಕುರಿತಂತೆ ಕೂಡಾ ಕೆಲಸ ಆರಂಭವಾಗಿದೆ. ಈ ಉಪಕ್ರಮದಿಂದ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರಿಗೆ ವೈಜ್ಞಾನಿಕ ರೀತಿಯಲ್ಲಿ ಆಯುಷ್ ಗೆ ಅವಕಾಶ ದೊರೆಯಲು ಸಹಾಯವಾಗುತ್ತದೆ.

ಸ್ನೇಹಿತರೆ, ನೀವು ಶಾಲೆಯಲ್ಲಿ ಕಪ್ಪು ಹಲಗೆ ಅಂದರೆ ಬ್ಲ್ಯಾಕ್ ಬೋರ್ಡ್ ನೋಡಿಯೇ ಇರುತ್ತೀರಿ, ಆದರೆ ಈಗ ಕೆಲವು ಶಾಲೆಗಳಲ್ಲಿ ‘sugar board’ ಕೂಡಾ ಹಾಕಲಾಗುತ್ತಿದೆ blackboard ಅಲ್ಲ sugar board ! ಮಕ್ಕಳಿಗೆ ಅವರ ಸಕ್ಕರೆ ಸೇವನೆ ಬಗ್ಗೆ ಜಾಗೃತಿ ಮೂಡಿಸುವುದು CBSE ದ ಈ ವಿಶಿಷ್ಠ ಉಪಕ್ರಮದ ಉದ್ದೇಶವಾಗಿದೆ. ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಸಕ್ಕರೆ ಸೇವಿಸಲಾಗುತ್ತಿದೆ ಎಂಬುದನ್ನು ಮಕ್ಕಳು ಅರಿತು, ಸ್ವತಃ ಆರೋಗ್ಯಕರ ಆಯ್ಕೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಇದೊಂದು ವಿಶಿಷ್ಠ ಪ್ರಯತ್ನವಾಗಿದೆ ಮತ್ತು ಇದರ ಪ್ರಭಾವ ಕೂಡ ಬಹಳ ಸಕಾರಾತ್ಮಕವಾಗಿರುತ್ತದೆ. ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯ ಅಭ್ಯಾಸ ಮಾಡಿಕೊಳ್ಳವ ನಿಟ್ಟಿನಲ್ಲಿ ಇದು ಅತ್ಯಂತ ಸಹಾಯಕವೆಂದು ಸಾಬೀತಾಗಬಹುದು. ಅನೇಕ ಪೋಷಕರು ಇದನ್ನು ಪ್ರಶಂಸಿಸಿದ್ದಾರೆ ಮತ್ತು ಇಂತಹ ಉಪಕ್ರಮಗಳನ್ನು ಕಚೇರಿಗಳು, ಕ್ಯಾಂಟೀನ್‌ ಗಳು ಮತ್ತು ಸಂಸ್ಥೆಗಳಲ್ಲಿಯೂ ಕೂಡಾ ಕೈಗೊಳ್ಳಬೇಕು ಎಂದು ನಾನು ನಂಬುತ್ತೇನೆ.  ಅಂತಿಮವಾಗಿ ಆರೋಗ್ಯವಿದ್ದರಷ್ಟೇ ಎಲ್ಲವೂ ಇರುತ್ತದೆ. ಫಿಟ್ ಇಂಡಿಯಾ ಬಲಿಷ್ಠ ಭಾರತದ ಅಡಿಪಾಯವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಚ್ಛ ಭಾರತದ ಬಗ್ಗೆ ಮಾತನಾಡುವಾಗ, ಮನದ ಮಾತಿನ ಶ್ರೋತೃಗಳು ಹಿಂದೆ ಉಳಿಯುವುದು ಹೇಗೆ ಸಾಧ್ಯ? ನೀವೆಲ್ಲರೂ ನಿಮ್ಮ ಸ್ವಂತ ಮಟ್ಟದಲ್ಲಿ ಈ ಅಭಿಯಾನವನ್ನು ಬಲಪಡಿಸುತ್ತಿದ್ದೀರಿ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಆದರೆ ಇಂದು ನಾನು ನಿಮಗೆ ಸ್ವಚ್ಛತೆಯ ಸಂಕಲ್ಪವು ಪರ್ವತದಂತಹ ಸವಾಲುಗಳನ್ನು ಕೂಡಾ ಪರಾಭವಗೊಳಿಸಿದೆ ಎಂಬ ಉದಾಹರಣೆಯ ಕುರಿತು ಹೇಳಲು ಬಯಸುತ್ತೇನೆ.  ಉಸಿರಾಡಲು ಕಷ್ಟವಾಗುವ ಹಿಮಭರಿತ ಪರ್ವತಗಳನ್ನು ಹತ್ತುತ್ತಿರುವ ವ್ಯಕ್ತಿಯನ್ನು ಊಹಿಸಿಕೊಳ್ಳಿ, ಪ್ರತಿ ಹೆಜ್ಜೆಯಲ್ಲೂ ಜೀವಕ್ಕೆ ಅಪಾಯವಿರುತ್ತದೆ ಮತ್ತು ಆ ವ್ಯಕ್ತಿ ಅಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತನಾಗಿದ್ದಾನೆ. ನಮ್ಮ ಐಟಿಬಿಪಿ (ITBP) ತಂಡದ ಸದಸ್ಯರು ಇದೇ ರೀತಿಯ ಕೆಲಸವನ್ನು ಮಾಡಿದ್ದಾರೆ. ಈ ತಂಡವು ವಿಶ್ವದ ಅತ್ಯಂತ ಕಷ್ಟಕರವಾದ ಶಿಖರ ಎನಿಸಿದ ಮೌಂಟ್ ಮಕಾಲು ಅನ್ನು ಏರಲು ಹೋಗಿತ್ತು. ಆದರೆ ಸ್ನೇಹಿತರೇ, ಅವರು ಕೇವಲ ಪರ್ವತ ಏರುವುದು ಮಾತ್ರವಲ್ಲ, ತಮ್ಮ ಗುರಿಗೆ 'ಸ್ವಚ್ಛತೆ'ಯ ಮತ್ತೊಂದು ಧ್ಯೇಯವನ್ನೂ ಅವರು ಸೇರಿಸಿದರು. ಶಿಖರದ ಬಳಿ ಬಿದ್ದಿದ್ದ ಕಸವನ್ನು ತೆಗೆದುಹಾಕಲು ಅವರು ಉಪಕ್ರಮವನ್ನು ಕೈಗೊಂಡರು. ಊಹಿಸಿ ನೋಡಿ, ಈ ತಂಡದ ಸದಸ್ಯರು 150 ಕಿಲೋಗಿಂತ ಅಧಿಕ ಪ್ರಮಾಣ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ತಮ್ಮೊಂದಿಗೆ ತಂದರು. ಅಷ್ಟು ಎತ್ತರದಲ್ಲಿ ಸ್ವಚ್ಛಗೊಳಿಸುವುದು ಸುಲಭದ ಕೆಲಸವಲ್ಲ. ಆದರೆ ದೃಢನಿಶ್ಚಯ ಇದ್ದಲ್ಲಿ, ಮಾರ್ಗ ತಾನೇ ತಾನಾಗಿ ತೆರೆದುಕೊಳ್ಳುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.

ಸ್ನೇಹಿತರೇ, ಇದಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ವಿಷಯವೂ ಇದೆ – ಅದೇ ಕಾಗದದ ತ್ಯಾಜ್ಯ ಮತ್ತು ಮರುಬಳಕೆ. ಪ್ರತಿದಿನ ನಮ್ಮ ಮನೆಗಳು ಮತ್ತು ಕಚೇರಿಗಳಲ್ಲಿ ಬಹಳಷ್ಟು ಕಾಗದದ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಬಹುಶಃ, ಇದನ್ನು ನಾವು ಸರ್ವೇ ಸಾಮಾನ್ಯ ಎಂಬಂತೆ ಪರಿಗಣಿಸುತ್ತೇವೆ, ಆದರೆ ದೇಶದ ಲ್ಯಾಂಡ್ ಫಿಲ್  ತ್ಯಾಜ್ಯದ ಸುಮಾರು ಕಾಲು ಭಾಗ ಕಾಗದಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯವಿದೆ. ಭಾರತದಲ್ಲಿ ಅನೇಕ ನವೋದ್ಯಮಗಳು ಈ ವಲಯದಲ್ಲಿ ಉತ್ತಮ ಕೆಲಸ ಮಾಡುತ್ತಿವೆ ಎಂದು ತಿಳಿದು ನನಗೆ ಸಂತೋಷವಾಗಿದೆ. ವಿಶಾಖಪಟ್ಟಣಂ, ಗುರುಗ್ರಾಮದಂತಹ ಅನೇಕ ನಗರಗಳಲ್ಲಿನ ಅನೇಕ ನವೋದ್ಯಮಗಳು ಕಾಗದ ಮರುಬಳಕೆಯ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಕೆಲವು ಮರುಬಳಕೆಯ ಕಾಗದದಿಂದ ಪ್ಯಾಕೇಜಿಂಗ್ ಬೋರ್ಡ್‌ ಗಳನ್ನು ತಯಾರಿಸುತ್ತಿವೆ, ಕೆಲವು ಡಿಜಿಟಲ್ ವಿಧಾನಗಳ ಮೂಲಕ ವೃತ್ತಪತ್ರಿಕೆ ಮರುಬಳಕೆಯನ್ನು ಸುಲಭಗೊಳಿಸುತ್ತಿವೆ. ಜಾಲ್ನಾದಂತಹ ನಗರಗಳಲ್ಲಿ ಕೆಲವು ನವೋದ್ಯಮಗಳು 100 ಪ್ರತಿಶತ ಮರುಬಳಕೆಯ ವಸ್ತುಗಳಿಂದ ಪ್ಯಾಕೇಜಿಂಗ್ ರೋಲ್‌ ಗಳು ಮತ್ತು ಪೇಪರ್ ಕೋರ್‌ ಗಳನ್ನು ತಯಾರಿಸುತ್ತಿವೆ. ಒಂದು ಟನ್ ಕಾಗದವನ್ನು ಮರುಬಳಕೆ ಮಾಡುವುದರಿಂದ 17 ಮರಗಳನ್ನು ಕಡಿಯುವುದನ್ನು ತಡೆಯಬಹುದು ಮತ್ತು ಸಾವಿರಾರು ಲೀಟರ್ ನೀರು ಉಳಿಸಬಹುದು ಎಂದು ತಿಳಿದರೆ ನಿಮಗೆ ಸ್ಫೂರ್ತಿ ದೊರೆಯುತ್ತದೆ. ಈಗ ಯೋಚಿಸಿ, ಪರ್ವತಾರೋಹಿಗಳು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಕಸವನ್ನು ಮರಳಿ ತರಬಹುದಾದಾದರೆ, ನಾವು ಕೂಡ ನಮ್ಮ ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಕಾಗದವನ್ನು ಬೇರ್ಪಡಿಸುವ ಮೂಲಕ ಮರುಬಳಕೆಗೆ ಕೊಡುಗೆ ನೀಡಬಹುದಲ್ಲವೇ. ದೇಶದ ಪ್ರತಿಯೊಬ್ಬ ನಾಗರಿಕನು ದೇಶಕ್ಕೆ ನಾನು ಏನು ಉತ್ತಮವಾಗಿ ಮಾಡಬಹುದು ಎಂದು ಯೋಚಿಸಿದಾಗ ಮಾತ್ರ, ನಾವು ಒಟ್ಟಾಗಿ ದೊಡ್ಡ ಬದಲಾವಣೆಯನ್ನು ತರಬಹುದು.

ಸ್ನೇಹಿತರೇ, ಇತ್ತೀಚೆಗೆ ಖೇಲೋ ಇಂಡಿಯಾ ಕ್ರೀಡಾಕೂಟವು ದೊಡ್ಡ ಯಶಸ್ಸನ್ನು ಕಂಡಿದೆ. ಬಿಹಾರದ ಐದು ನಗರಗಳು ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಆಯೋಜಿಸಿದ್ದವು. ಅಲ್ಲಿ ವಿವಿಧ ವಿಭಾಗಗಳಲ್ಲಿ ಪಂದ್ಯಗಳು ನಡೆದವು. ಭಾರತದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಅಲ್ಲಿಗೆ ತಲುಪಿದ್ದರು. ಈ ಕ್ರೀಡಾಪಟುಗಳು ಬಿಹಾರದ ಕ್ರೀಡಾ ಮನೋಭಾವ ಮತ್ತು ಬಿಹಾರದ ಜನರ ಬಗ್ಗೆ ಅವರು ತೋರಿಸಿದ ಆತ್ಮೀಯತೆಯನ್ನು ಶ್ಲಾಘಿಸಿದ್ದಾರೆ.

ಸ್ನೇಹಿತರೇ, ಬಿಹಾರದ ಭೂಮಿ ತುಂಬಾ ವಿಶೇಷವಾಗಿದೆ, ಈ ಕಾರ್ಯಕ್ರಮದಲ್ಲಿ ಇಲ್ಲಿ ಅನೇಕ ವಿಶಿಷ್ಟ ಘಟನೆಗಳು ನಡೆದವು. ಇದು ಖೇಲೋ ಇಂಡಿಯಾ ಯೂತ್ ಗೇಮ್ಸ್‌ ನ ಮೊದಲ ಕಾರ್ಯಕ್ರಮವಾಗಿದ್ದು, ಇದು ಒಲಿಂಪಿಕ್ ಚಾನೆಲ್ ಮೂಲಕ ಇಡೀ ಜಗತ್ತನ್ನು ತಲುಪಿತು. ಪ್ರಪಂಚದಾದ್ಯಂತದ ಜನರು ನಮ್ಮ ಯುವ ಆಟಗಾರರ ಪ್ರತಿಭೆಯನ್ನು ನೋಡಿ ಮೆಚ್ಚಿದರು. ಎಲ್ಲಾ ಪದಕ ವಿಜೇತರನ್ನು, ವಿಶೇಷವಾಗಿ ಅಗ್ರ ಮೂರು ವಿಜೇತ ರಾಜ್ಯಗಳನ್ನು - ಮಹಾರಾಷ್ಟ್ರ, ಹರಿಯಾಣ ಮತ್ತು ರಾಜಸ್ಥಾನವನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ, ಈ ಬಾರಿ ಖೇಲೋ ಇಂಡಿಯಾದಲ್ಲಿ ಒಟ್ಟು 26ದಾಖಲೆಗಳು ನಿರ್ಮಾಣವಾಗಿವೆ. ಭಾರ ಎತ್ತುವ ಸ್ಪರ್ಧೆಗಳಲ್ಲಿ, ಮಹಾರಾಷ್ಟ್ರದ ಅಸ್ಮಿತಾ ಧೋನೆ, ಒಡಿಶಾದ ಹರ್ಷವರ್ಧನ್ ಸಾಹು ಮತ್ತು ಉತ್ತರ ಪ್ರದೇಶದ ತುಷಾರ್ ಚೌಧರಿ ಅವರ ಅತ್ಯುತ್ತಮ ಪ್ರದರ್ಶನ ಎಲ್ಲರ ಹೃದಯ ಗೆದ್ದಿತು. ಮಹಾರಾಷ್ಟ್ರದ ಸಾಯಿರಾಜ್ ಪರದೇಸಿ ಮೂರು ದಾಖಲೆಗಳನ್ನು ಬರೆದರು.  ಅಥ್ಲೆಟಿಕ್ಸ್‌ ನಲ್ಲಿ, ಉತ್ತರ ಪ್ರದೇಶದ ಖಾದಿರ್ ಖಾನ್ ಮತ್ತು ಶೇಖ್ ಜೀಶನ್ ಮತ್ತು ರಾಜಸ್ಥಾನದ ಹಂಸರಾಜ್ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಬಾರಿ ಬಿಹಾರ ಕೂಡ 36 ಪದಕಗಳನ್ನು ಗೆದ್ದಿದೆ. ಸ್ನೇಹಿತರೇ, ಆಡುವವನು ಅರಳುತ್ತಾನೆ. ಪಂದ್ಯಾವಳಿಯು ಯುವ ಕ್ರೀಡಾ ಪ್ರತಿಭೆಗಳಿಗೆ ಬಹಳಷ್ಟು ಅರ್ಥವನ್ನು ನೀಡುತ್ತದೆ. ಇಂತಹ ಘಟನೆಗಳು ಭಾರತೀಯ ಕ್ರೀಡೆಗಳ ಭವಿಷ್ಯವನ್ನು ಮತ್ತಷ್ಟು ಬೆಳಗಿಸುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ. ಮೇ 20 ಅನ್ನು 'ವಿಶ್ವ ಜೇನುನೊಣ ದಿನ' ಎಂದು ಆಚರಿಸಲಾಯಿತು, ಈ ದಿನ ಜೇನುತುಪ್ಪವು ಕೇವಲ ಸಿಹಿ ಮಾತ್ರವಲ್ಲ, ಆರೋಗ್ಯ, ಸ್ವ-ಉದ್ಯೋಗ ಮತ್ತು ಸ್ವಾವಲಂಬನೆಯ ಉದಾಹರಣೆಯಾಗಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಕಳೆದ 11 ವರ್ಷಗಳಲ್ಲಿ, ಭಾರತದಲ್ಲಿ ಜೇನು ಸಾಕಣೆಯಲ್ಲಿ ಒಂದು ಸಿಹಿ ಕ್ರಾಂತಿ ನಡೆದಿದೆ. 10-11 ವರ್ಷಗಳ ಹಿಂದೆ, ಭಾರತದ ಜೇನುತುಪ್ಪದ ಉತ್ಪಾದನೆಯು ಒಂದು ವರ್ಷದಲ್ಲಿ ಸುಮಾರು 70-75 ಸಾವಿರ ಮೆಟ್ರಿಕ್ ಟನ್‌ ಗಳಷ್ಟಿತ್ತು. ಇಂದು, ಇದು ಸರಿ ಸುಮಾರು ಒಂದೂ ಕಾಲು ಲಕ್ಷ ಮೆಟ್ರಿಕ್ ಟನ್‌ ಗಳಷ್ಟು ಆಗಿದೆ. ಇದರರ್ಥ ಜೇನುತುಪ್ಪದ ಉತ್ಪಾದನೆಯು ಸುಮಾರು ಶೇಕಡಾ 60ರಷ್ಟು ಹೆಚ್ಚಾಗಿದೆ. ನಾವು ಜೇನುತುಪ್ಪದ ಉತ್ಪಾದನೆ ಮತ್ತು ರಫ್ತಿನಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಒಂದೆನಿಸಿದ್ದೇವೆ. ಸ್ನೇಹಿತರೇ, 'ರಾಷ್ಟ್ರೀಯ ಜೇನುಸಾಕಣೆ' ಮತ್ತು 'ಜೇನು ಮಿಷನ್' ಈ ಸಕಾರಾತ್ಮಕ ಪರಿಣಾಮದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ಅಡಿಯಲ್ಲಿ, ಜೇನು ಸಾಕಣೆಗೆ ಸಂಬಂಧಿಸಿದ ಸಾವಿರಾರು ರೈತರಿಗೆ ತರಬೇತಿ ಹಾಗೂ, ಉಪಕರಣಗಳನ್ನು ನೀಡಲಾಯಿತು ಮತ್ತು ಅವರಿಗೆ ಮಾರುಕಟ್ಟೆಗೆ ನೇರ ಪ್ರವೇಶವನ್ನು ಸೃಷ್ಟಿಸಲಾಯಿತು.

ಸ್ನೇಹಿತರೇ, ಈ ಬದಲಾವಣೆ ಕೇವಲ ಅಂಕಿಅಂಶಗಳಲ್ಲಿ ಗೋಚರಿಸುವುದು ಮಾತ್ರವಲ್ಲ, ಹಳ್ಳಿಯ ನೆಲದಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತದೆ. ಛತ್ತೀಸ್‌ ಗಢದ ಕೊರಿಯಾ ಜಿಲ್ಲೆಯಲ್ಲಿ ಇಂತಹ ಉದಾಹರಣೆ ಇದೆ, ಅಲ್ಲಿ ಬುಡಕಟ್ಟು ರೈತರು 'ಸೋನ್ ಹನಿ' ಎಂಬ ಶುದ್ಧ ಸಾವಯವ ಜೇನುತುಪ್ಪದ ಬ್ರಾಂಡ್ ಅನ್ನು ರಚಿಸಿದ್ದಾರೆ. ಇಂದು ಆ ಜೇನುತುಪ್ಪವನ್ನು ಜಿಇಎಂ (GEM) ಸೇರಿದಂತೆ ಅನೇಕ ಆನ್‌ ಲೈನ್ ಪೋರ್ಟಲ್‌ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ, ಅಂದರೆ ಹಳ್ಳಿಯ ಕಠಿಣ ಪರಿಶ್ರಮ ಈಗ ಜಾಗತಿಕ ಮಟ್ಟದಲ್ಲಿದೆ. ಅದೇ ರೀತಿ, ಉತ್ತರ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದ ಸಾವಿರಾರು ಮಹಿಳೆಯರು ಮತ್ತು ಯುವಕರು ಈಗ ಜೇನುತುಪ್ಪದ ಉದ್ಯಮಿಗಳಾಗಿದ್ದಾರೆ. ಸ್ನೇಹಿತರೇ, ಈಗ ಜೇನುತುಪ್ಪದ ಪ್ರಮಾಣದ ಮೇಲೆ ಮಾತ್ರವಲ್ಲದೆ ಅದರ ಶುದ್ಧತೆಯ ಮೇಲೂ ಕೆಲಸ ಮಾಡಲಾಗುತ್ತಿದೆ. ಕೆಲವು ನವೋದ್ಯಮಗಳು  ಈಗ ಜೇನುತುಪ್ಪದ ಗುಣಮಟ್ಟವನ್ನು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನದೊಂದಿಗೆ ಪ್ರಮಾಣೀಕರಿಸುತ್ತಿವೆ. ಮುಂದಿನ ಬಾರಿ ನೀವು ಜೇನುತುಪ್ಪವನ್ನು ಖರೀದಿಸಿದಾಗ, ಈ ಜೇನುತುಪ್ಪದ ಉದ್ಯಮಿಗಳು ತಯಾರಿಸಿದ ಜೇನುತುಪ್ಪವನ್ನು ಪ್ರಯತ್ನಿಸಿ ನೋಡಿ, ಸ್ಥಳೀಯ ರೈತರು, ಮಹಿಳಾ ಉದ್ಯಮಿಗಳಿಂದ ಜೇನುತುಪ್ಪವನ್ನು ಖರೀದಿಸಲು ಪ್ರಯತ್ನಿಸಿ. ಏಕೆಂದರೆ ಅದರ ಪ್ರತಿ ಹನಿಯೂ ರುಚಿಯನ್ನು ಮಾತ್ರವಲ್ಲದೆ ಭಾರತದ ಕಠಿಣ ಪರಿಶ್ರಮ ಮತ್ತು ಭರವಸೆಯನ್ನು ಸಹ ಹೊಂದಿದೆ. ಈ ಜೇನುತುಪ್ಪದ ಮಾಧುರ್ಯವು ಸ್ವಾವಲಂಬಿ ಭಾರತದ ರುಚಿಯಾಗಿದೆ.

ಸ್ನೇಹಿತರೇ, ಜೇನಿಗೆ ಸಂಬಂಧಿಸಿದಂತೆ ದೇಶಗಳ ಪ್ರಯತ್ನಗಳ ಬಗ್ಗೆ ನಾವು ಮಾತನಾಡುವಾಗ, ಮತ್ತೊಂದು ಉಪಕ್ರಮದ ಬಗ್ಗೆ ನಿಮಗೆ ಹೇಳಲು ನಾನು ಬಯಸುತ್ತೇನೆ. ಜೇನ್ನೊಣಗಳನ್ನು ರಕ್ಷಿಸಬೇಕಾಗಿರುವುದು  ಕೇವಲ ನಮ್ಮ ಪರಿಸರಕ್ಕೆ ಮಾತ್ರವಲ್ಲದೆ ನಮ್ಮ ಹೊಲಗಳು ಭವಿಷ್ಯದ ಪೀಳಿಗೆಯ ಜವಾಬ್ದಾರಿಯೂ ಹೌದು ಎನ್ನುವುದುನ್ನು ಇದು ನಮಗೆ ನೆನಪಿಸುತ್ತದೆ. ಇದು ಪುಣೆ ನಗರದ ಒಂದು ಉದಾಹರಣೆಯಾಗಿದೆ, ಅಲ್ಲಿ ಒಂದು ವಸತಿ ಸಮುಚ್ಛಯದಲ್ಲಿ ಒಂದು ಜೇನುಗೂಡನ್ನು ತೆಗೆದುಹಾಕಲಾಯಿತು. ಬಹುಶಃ ಸುರಕ್ಷತೆ ಅಥವಾ ಭಯ ಇದಕ್ಕೆ ಕಾರಣವಿರಬಹುದು. ಆದರೆ ಈ ಘಟನೆಯು ಕೆಲವರಿಗೆ ಯೋಚಿಸುವಂತೆ ಮಾಡಿತು. ಅಮಿತ್ ಎಂಬ ಹೆಸರಿನ ಯುವಕ, ಜೇನ್ನೊಣಗಳನ್ನು ತೊಲಗಿಸಬಾರದು ಅವುಗಳನ್ನು ರಕ್ಷಿಸಬೇಕೆಂದು ನಿರ್ಧರಿಸಿದರು. ಅವರು ಸ್ವತಃ ಜೇನ್ನೊಣಗಳ ಬಗ್ಗೆ ಅರಿತರು, ಅವುಗಳ ಬಗ್ಗೆ ಸಂಶೋಧನೆ ಮಾಡಿದರು ಮತ್ತು ಇತರರನ್ನೂ ಅದರಲ್ಲಿ ಸೇರಿಸಿಕೊಳ್ಳಲು ಆರಂಭಿಸಿದರು. ಕ್ರಮೇಣ ಅವರು ಒಂದು ತಂಡ ರಚಿಸಿದರು ಮತ್ತು ಆ ತಂಡಕ್ಕೆ Bee Friends ಅಂದರೆ ಜೇನ್ನೊಣ ಮಿತ್ರ ಎಂದು ಹೆಸರಿಟ್ಟರು. ಈಗ ಈ Bee ಸ್ನೇಹಿತರು, ಜೇನ್ನೊಣಗಳಿಂದ ಜನರಿಗೆ ಅಪಾಯವೂ ಆಗಬಾರದು ಹಾಗೆಯೇ ಜೇನ್ನೊಣಗಳು ಜೀವಂತವಾಗಿಯೂ ಇರಬೇಕು ಎಂಬ ಉದ್ದೇಶದಿಂದ ಜೇನ್ನೊಣಗಳ ಗೂಡನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತ ವಿಧಾನದಲ್ಲಿ ವರ್ಗಾವಣೆ ಮಾಡುತ್ತಾರೆ. ಅಮಿತ್ ಅವರ ಈ ಪ್ರಯತ್ನದ ಪರಿಣಾಮ ಕೂಡಾ ಬಹಳ ಅದ್ಭುತವಾಗಿದೆ. ಜೇನ್ನೊಣಗಳ ಸಮುಚ್ಚಯವೂ ರಕ್ಷಿಸಲ್ಪಡುತ್ತಿದೆ. ಜೇನು ಉತ್ಪಾದನೆಯೂ ಹೆಚ್ಚಾಗುತ್ತಿದೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಜಾಗೃತಿಯೂ ಹೆಚ್ಚಾಗುತ್ತಿದೆ.  ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಿದಾಗ, ಅದರ ಪ್ರಯೋಜನ ಪ್ರತಿಯೊಬ್ಬರಿಗೂ ದೊರೆಯುತ್ತದೆ ಎನ್ನುವುದನ್ನು ಈ ಉಪಕ್ರಮ ನಮಗೆ ತಿಳಿಯಪಡಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದಿನ ‘ಮನದ ಮಾತಿನ’ ಈ ಸಂಚಿಕೆ ಇಲ್ಲಿಗೆ ಮುಗಿಸುತ್ತಿದ್ದೇನೆ, ದೇಶದ ಜನರ ಸಾಧನೆಗಳ ಕುರಿತು ಮತ್ತು ಸಮಾಜಕ್ಕೆ ಅವರು ಮಾಡುವ ಪ್ರಯತ್ನಗಳ ಕುರಿತು ನನಗೆ ಇದೇ ರೀತಿ ಪತ್ರ ಬರೆಯುತ್ತಿರಿ.  ‘ಮನದ ಮಾತಿನ’ ಮುಂದಿನ ಸಂಚಿಕೆಯಲ್ಲಿ ಪುನಃ ಭೇಟಿಯಾಗೋಣ, ಹೊಸ ವಿಷಯಗಳ ಕುರಿತು, ದೇಶವಾಸಿಗಳ ಹೊಸ ಸಾಧನೆಗಳ ಕುರಿತು ಮಾತನಾಡೋಣ.ನಾನು ನಿಮ್ಮ ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.

 

*****

 


(Release ID: 2131082)