ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ₹708 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು; ಅಂಚೆ ಇಲಾಖೆಯ ಸವಲತ್ತು ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು
ಭಾರತದ ಸಶಸ್ತ್ರ ಪಡೆಗಳ ಸಾಮರ್ಥ್ಯ ಮತ್ತು ಪ್ರಧಾನಮಂತ್ರಿ ಮೋದಿಯವರ ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಇಡೀ ಜಗತ್ತು ಶ್ಲಾಘಿಸುತ್ತಿದೆ
ಇಂದು ಇಡೀ ಜಗತ್ತು ಭಾರತದ ಕಾರ್ಯತಂತ್ರ ಮತ್ತು ಮಿಲಿಟರಿ ಶಕ್ತಿಯನ್ನು ಅಚ್ಚರಿಯಿಂದ ನೋಡುತ್ತಿದೆ ಮತ್ತು ಪಾಕಿಸ್ತಾನವು ಭಯದಿಂದ ಅದನ್ನು ಅನುಭವಿಸುತ್ತಿದೆ
ಮೋದಿಯವರ ಆಳ್ವಿಕೆಯಲ್ಲಿ ಪರಿಪೂರ್ಣಗೊಳಿಸಲಾದ ವಾಯು ರಕ್ಷಣಾ ವ್ಯವಸ್ಥೆಯು ಒಂದೇ ಒಂದು ಕ್ಷಿಪಣಿ ಅಥವಾ ಡ್ರೋನ್ ಭಾರತದ ನೆಲದಲ್ಲಿ ಬೀಳಲು ಅವಕಾಶ ನೀಡಲಿಲ್ಲ
ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಾರತವು ಪಾಕಿಸ್ತಾನದ 100 ಕಿಲೋಮೀಟರ್ ಒಳಗೆ ಇದ್ದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು
ಭಾರತವು ಪಾಕಿಸ್ತಾನದ ಅನೇಕ ವಾಯುನೆಲೆಗಳನ್ನು ನಾಶಪಡಿಸಿತು ಮತ್ತು ಅದರ ವಾಯುಪಡೆಯ ದಾಳಿ ಸಾಮರ್ಥ್ಯವನ್ನು ಧ್ವಂಸಮಾಡಿತು
ಪರಮಾಣುಗಳ ಅಸ್ತ್ರಗಳ ಹೆಸರಿನಲ್ಲಿ ನಮ್ಮನ್ನು ಹೆದರಿಸುತ್ತಿದ್ದವರಿಗೆ, ನಮ್ಮ ವಾಯುಪಡೆ, ನೌಕಾಪಡೆ ಮತ್ತು ಸೇನೆಯು ಸೂಕ್ತ ಉತ್ತರವನ್ನು ನೀಡಿದೆ
'ಆಪರೇಷನ್ ಸಿಂಧೂರ' ಯಶಸ್ಸಿಗಾಗಿ ಗೃಹ ಸಚಿವರು ಮೂರು ಸಶಸ್ತ್ರ ಪಡೆಗಳ ಸೈನಿಕರನ್ನು ಅಭಿನಂದಿಸಿದರು
ಭಯೋತ್ಪಾದನೆ ನಿಗ್ರಹ ಅಭಿಯಾನವನ್ನು 'ಆಪರೇಷನ್ ಸಿಂಧೂರ' ಎಂದು ಹೆಸರಿಸುವ ಮೂಲಕ ಮೋದಿಯವರು 'ಸಿಂಧೂರ ಭಾರತದ ಸಂಸ್ಕಾರ' ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ
ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಗಳನ್ನು ನೆಲಸಮಗೊಳಿಸುವ ಮೂಲಕ ಭಾರತ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ
Posted On:
17 MAY 2025 9:16PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ₹708 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಅಂಚೆ ಇಲಾಖೆಯ ಸವಲತ್ತು ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಗುಜರಾತ್ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದುವತ್ತ ಸಾಗುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಪಡಿಸಿದ್ದಲ್ಲದೆ, ಅದನ್ನು ಸುರಕ್ಷಿತವಾಗಿಡಲು ಶ್ರಮಿಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2014 ರಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು, ದೇಶದಲ್ಲಿ ಪ್ರತಿದಿನ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದವು, ಭಯೋತ್ಪಾದಕರು ಪಾಕಿಸ್ತಾನದಿಂದ ಬಂದು ನಮ್ಮ ಸೈನಿಕರು ಮತ್ತು ಜನರನ್ನು ಕೊಂದು ಬಾಂಬ್ ಸ್ಫೋಟಗಳನ್ನು ನಡೆಸುತ್ತಿದ್ದರು, ಆದರೆ ಯಾವುದೇ ಪ್ರತ್ಯುತ್ತರ ನೀಡುತ್ತಿರಲಿಲ್ಲ ಎಂದು ಅವರು ಹೇಳಿದರು.

ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಮೂರು ಪ್ರಮುಖ ಭಯೋತ್ಪಾದಕ ದಾಳಿಗಳು ನಡೆದಿವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮೊದಲ ದಾಳಿ ಉರಿಯಲ್ಲಿ, ಎರಡನೇ ದಾಳಿ ಪುಲ್ವಾಮಾದಲ್ಲಿ ಮತ್ತು ಮೂರನೇ ದಾಳಿಯನ್ನು ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಯೊಂದು ದಾಳಿಗೂ ಎಷ್ಟು ಬಲವಾಗಿ ಪ್ರತಿಕ್ರಿಯಿಸಿದ್ದಾರೆಂದರೆ ಇಂದು ಇಡೀ ಜಗತ್ತು ಆಶ್ಚರ್ಯದಿಂದ ನೋಡುತ್ತಿದೆ ಮತ್ತು ಪಾಕಿಸ್ತಾನವು ಅದನ್ನು ಭಯದಿಂದ ಅನುಭವಿಸುತ್ತಿದೆ ಎಂದು ಅವರು ಹೇಳಿದರು.
ಉರಿಯಲ್ಲಿ ಭಯೋತ್ಪಾದಕ ದಾಳಿ ನಡೆದಾಗ, ಭಾರತವು ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಸಾಂಕೇತಿಕ ಪ್ರತಿಕ್ರಿಯೆ ನೀಡಿತು ಮತ್ತು ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ, ವಾಯುದಾಳಿ ನಡೆಸುವ ಮೂಲಕ ಎಚ್ಚರಿಕೆ ನೀಡಲಾಯಿತು ಎಂದು ಶ್ರೀ ಅಮಿತ್ ಶಾ ಹೇಳಿದರು. ಪಾಕಿಸ್ತಾನ ಮತ್ತು ಭಯೋತ್ಪಾದಕರು ಇನ್ನೂ ತಮ್ಮ ದಾರಿಯನ್ನು ಸರಿಪಡಿಸಿಕೊಂಡಿಲ್ಲ ಮತ್ತು ಅವರು ಪಹಲ್ಗಾಮ್ ಮೇಲೆ ದಾಳಿ ಮಾಡಿದರು, ಆದರೆ ಈ ಬಾರಿ ಆಪರೇಷನ್ ಸಿಂಧೂರ ಅಡಿಯಲ್ಲಿ ಭಯೋತ್ಪಾದಕರ ಪ್ರಧಾನ ಕಚೇರಿಯನ್ನು ನಾಶಪಡಿಸಲಾಯಿತು ಎಂದು ಅವರು ಹೇಳಿದರು. ಪ್ರಪಂಚದಾದ್ಯಂತದ ಭದ್ರತಾ ತಜ್ಞರು ಆಪರೇಷನ್ ಸಿಂಧೂರವನ್ನು ವಿಶ್ಲೇಷಿಸುವಾಗ ಆಶ್ಚರ್ಯಚಕಿತರಾಗುತ್ತಾರೆ ಎಂದು ಅವರು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಗಳನ್ನು ನೆಲಸಮಗೊಳಿಸುವ ಮೂಲಕ ಸೇಡು ತೀರಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪಾಕಿಸ್ತಾನಿ ಭಯೋತ್ಪಾದಕರು ನಮ್ಮ ನಾಗರಿಕರು, ಪ್ರವಾಸಿಗರು, ನಿರಾಯುಧ ಜನರನ್ನು ಅವರ ಧರ್ಮದ ಬಗ್ಗೆ ಕೇಳಿದರು ಮತ್ತು ನಂತರ ಅವರ ಕುಟುಂಬಗಳು ಮತ್ತು ಮಕ್ಕಳ ಮುಂದೆ ಹೇಡಿತನದಿಂದ, ನಿರ್ದಯವಾಗಿ ಅವರನ್ನು ಕೊಂದರು ಎಂದು ಅವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ತನ್ನ ಸಂಸ್ಕೃತಿಗೆ ಅನುಗುಣವಾಗಿ ಪ್ರತಿಕ್ರಿಯಿಸಿತು ಎಂದು ಅವರು ಹೇಳಿದರು. ಭಾರತವು ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿಗಳನ್ನು ಸ್ಫೋಟಿಸಿತು ಮತ್ತು ಧೈರ್ಯಶಾಲಿ ಭಾರತೀಯ ಪಡೆಗಳು ಭಯೋತ್ಪಾದಕರಿಗೆ ಸಿದ್ಧತೆ ಮತ್ತು ತರಬೇತಿ ನೀಡಲಾಗಿದ್ದ 9 ಅಡಗುತಾಣಗಳನ್ನು ನಾಶಪಡಿಸಿದವು ಎಂದು ಶ್ರೀ ಶಾ ಹೇಳಿದರು. ನಮ್ಮ ಸೇನೆಯು ಪಾಕಿಸ್ತಾನದ ಗಡಿಯೊಳಗೆ 100 ಕಿಲೋಮೀಟರ್ ಒಳಗೆ ಮತ್ತು ಪಿಒಕೆಯ ಅನೇಕ ಸ್ಥಳಗಳಲ್ಲಿ ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿದೆ ಎಂದು ಅವರು ಹೇಳಿದರು.
ನಮ್ಮ ಬಾಂಬ್ ಸ್ಫೋಟಗಳ ಪ್ರತಿಧ್ವನಿಯು ಅನೇಕ ಅಂತರರಾಷ್ಟ್ರೀಯ ಭಯೋತ್ಪಾದಕ ಘಟನೆಗಳ ಸೂತ್ರಧಾರಿಗಳು ಮತ್ತು ಶಿಬಿರಗಳಲ್ಲಿ ಅಡಗಿರುವ ಭಯೋತ್ಪಾದಕರಿಗೆ ಭಾರತದ ಜನರೊಂದಿಗೆ ಯಾವುದೇ ರೀತಿಯ ದುಷ್ಕೃತ್ಯ ನಡೆದರೆ ಮತ್ತು ಯಾವುದೇ ಭಯೋತ್ಪಾದಕ ಘಟನೆ ನಡೆದರೆ, ಅದಕ್ಕೆ ಎರಡು ಪಟ್ಟು ಹೆಚ್ಚು ಪ್ರತಿಕ್ರಿಯೆ ನೀಡಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಾವು ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದ್ದೇವೆ, ಆದರೆ ಪಾಕಿಸ್ತಾನಿ ಸೈನ್ಯವು ಮೇ 8 ರಂದು ಕಚ್ ನಿಂದ ಕಾಶ್ಮೀರ ಮತ್ತು ಭಾರತದ ಪಶ್ಚಿಮ ಗಡಿಯವರೆಗೆ ನಮ್ಮ ಮುಗ್ಧ ಜನರ ಮೇಲೆ ದಾಳಿ ಮಾಡುವ ಧೈರ್ಯ ಮಾಡಿತು ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರ ಆಳ್ವಿಕೆಯಲ್ಲಿ ಪರಿಪೂರ್ಣಗೊಳಿಸಲಾದ ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಒಂದೇ ಒಂದು ಕ್ಷಿಪಣಿ ಅಥವಾ ಡ್ರೋನ್ ಅನ್ನು ಭಾರತದ ನೆಲದಲ್ಲಿ ಬೀಳಲು ಬಿಡಲಿಲ್ಲ ಎಂದು ಅವರು ಹೇಳಿದರು. ಭಾರತವು 100 ಕ್ಕೂ ಹೆಚ್ಚು ಭಯಾನಕ ಭಯೋತ್ಪಾದಕರನ್ನು ನಿರ್ನಾಮ ಮಾಡಿದ ನಂತರ, ಪಾಕಿಸ್ತಾನವು ಭಾರತಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡುವಲ್ಲಿ ಯಶಸ್ವಿಯಾಗಲಿಲ್ಲ ಎಂದು ಅವರು ಹೇಳಿದರು. ನಂತರ ಮೇ 9 ರಂದು, ಭಾರತದ ಧೈರ್ಯಶಾಲಿ ಸೈನಿಕರು 15 ಸ್ಥಳಗಳಲ್ಲಿ ಪಾಕಿಸ್ತಾನದ ಅನೇಕ ವಾಯುನೆಲೆಗಳ ಮೇಲೆ ದಾಳಿ ಮಾಡಿ ಅವರ ವಾಯುಪಡೆಯ ಸಾಮರ್ಥ್ಯವನ್ನು ನಾಶಪಡಿಸಿದರು. ಇಂದು ಇಡೀ ಜಗತ್ತು ಭಾರತೀಯ ಸಶಸ್ತ್ರ ಪಡೆಗಳ ಬಲವನ್ನು ಆಶ್ಚರ್ಯದಿಂದ ನೋಡುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಸ್ವಾತಂತ್ರ್ಯದ ನಂತರ ಭಾರತವು ಮೊದಲ ಬಾರಿಗೆ ಪಾಕಿಸ್ತಾನದೊಳಗೆ 100 ಕಿ.ಮೀ. ಹೋಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪರಮಾಣು ಅಸ್ತ್ರಗಳ ಹೆಸರಿನಲ್ಲಿ ನಮ್ಮನ್ನು ಹೆದರಿಸುತ್ತಿದ್ದವರಿಗೆ, ನಮ್ಮ ವಾಯುಪಡೆ, ನೌಕಾಪಡೆ ಮತ್ತು ಸೇನೆಯು ಸೂಕ್ತ ಉತ್ತರವನ್ನು ನೀಡಿದೆ ಎಂದು ಅವರು ಹೇಳಿದರು. ನಮ್ಮ ಪಡೆಗಳ ದಾಳಿಯ ಶಕ್ತಿಯ ನಿಖರತೆ, ಅವರ ಸಂಯಮ ಮತ್ತು ಪ್ರಧಾನಿ ಮೋದಿಯವರ ಬಲವಾದ ರಾಜಕೀಯ ಇಚ್ಛಾಶಕ್ತಿಯನ್ನು ಇಂದು ಇಡೀ ಜಗತ್ತು ಕೊಂಡಾಡುತ್ತಿದೆ ಎಂದು ಅವರು ಹೇಳಿದರು. ಇಂದು ಇಡೀ ದೇಶವು ಭಾರತದ ಮೂರು ಸಶಸ್ತ್ರ ಪಡೆಗಳ ಸೈನಿಕರಿಗೆ ವಂದಿಸುತ್ತಿದೆ ಎಂದು ಅವರು ಹೇಳಿದರು.

ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಇಡೀ ರಾಷ್ಟ್ರ ಹೆಮ್ಮೆ ಪಡುವಂತೆ ಮಾಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗುಜರಾತ್ ಮತ್ತು ಭಾರತ ಮಾತೆಯ ಪುತ್ರರಾದ ನಮ್ಮ ನಾಯಕ ಶ್ರೀ ನರೇಂದ್ರ ಮೋದಿ ಅವರು ಭಾರತ ಮಾತೆಯು ಹೆಮ್ಮೆಪಡುವಂತೆ ಮತ್ತು ದೇಶವನ್ನು ಸುರಕ್ಷಿತಗೊಳಿಸುವ ಕೆಲಸವನ್ನು ಮಾಡಿದ್ದಾರೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು. ಜಗತ್ತಿನಲ್ಲಿ ಮಿಲಿಟರಿ ಎಲ್ಲಿಯವರಗೆ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ನಡೆಯುತ್ತವೆಯೋ ಅಲ್ಲಿ ಆಪರೇಷನ್ ಸಿಂಧೂರದ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಅವರು ಹೇಳಿದರು. ನಮ್ಮ ತಾಯಂದಿರು ಮತ್ತು ಸಹೋದರಿಯರ ಗೌರವಾರ್ಥವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರೇ 'ಆಪರೇಷನ್ ಸಿಂಧೂರ' ಎಂದು ಹೆಸರಿಸಿದರು ಎಂದು ಶ್ರೀ ಶಾ ಹೇಳಿದರು. ಸಿಂಧೂರವನ್ನು ಗೌರವಿಸುವುದು ಭಾರತೀಯ ಸಂಪ್ರದಾಯವಾಗಿದ್ದು, ಇದಕ್ಕೆ ಆಪರೇಷನ್ ಸಿಂಧೂರ ಎಂದು ಹೆಸರಿಸುವ ಮೂಲಕ ಇಡೀ ಜಗತ್ತಿಗೆ ಅದರ ಸಂದೇಶವನ್ನು ತಲುಪಿಸಲಾಗಿದೆ ಎಂದು ಅವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಾವು ಖಂಡಿತವಾಗಿಯೂ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಬಿಹಾರದಲ್ಲಿ ನೀಡಿದ್ದ ಭರವಸೆಯನ್ನು ಪ್ರಧಾನಮಂತ್ರಿ ಮೋದಿಯವರು ಈಡೇರಿಸಿದ್ದಾರೆ ಎಂದು ಅವರು ಹೇಳಿದರು.
*****
(Release ID: 2129386)