ಸಂಪುಟ
azadi ka amrit mahotsav

ಉತ್ತರ ಪ್ರದೇಶದಲ್ಲಿ ಸೆಮಿಕಂಡಕ್ಟರ್ ಘಟಕಕ್ಕೆ ಕೇಂದ್ರ ಸಂಪುಟದ ಅನುಮೋದನೆ


ಸೆಮಿಕಂಡಕ್ಟರ್ ಮಿಷನ್: ಸ್ಥಿರವಾದ ಆವೇಗ

Posted On: 14 MAY 2025 3:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಮತ್ತೊಂದು ಸೆಮಿಕಂಡಕ್ಟರ್ ಘಟಕವನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.

ಈಗಾಗಲೇ ಐದು ಸೆಮಿಕಂಡಕ್ಟರ್ ಘಟಕಗಳು ನಿರ್ಮಾಣದ ಹಂತಗಳಲ್ಲಿವೆ. ಈ ಆರನೇ ಘಟಕದೊಂದಿಗೆ, ಭಾರತವು ಕಾರ್ಯತಂತ್ರದ ಪ್ರಮುಖ ಸೆಮಿಕಂಡಕ್ಟರ್ ಉದ್ಯಮವನ್ನು ಅಭಿವೃದ್ಧಿಪಡಿಸುವ ತನ್ನ ಪ್ರಯಾಣದಲ್ಲಿ ಮುಂದುವರಿಯುತ್ತಿದೆ.

ಇಂದು ಅನುಮೋದಿಸಲಾದ ಘಟಕವು ಎಚ್ ಸಿ ಎಲ್ ಮತ್ತು ಫಾಕ್ಸ್ ಕಾನ್ ನ ಜಂಟಿ ಉದ್ಯಮವಾಗಿದೆ. ಎಚ್ ಸಿ ಎಲ್ ಹಾರ್ಡ್‌ವೇರ್ ಅಭಿವೃದ್ಧಿಪಡಿಸುವ ಮತ್ತು ತಯಾರಿಸುವ ದೀರ್ಘ ಇತಿಹಾಸವನ್ನು ಹೊಂದಿದೆ. ಫಾಕ್ಸ್ಕಾನ್ ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಅವರು ಒಟ್ಟಾಗಿ ಜೆವಾರ್ ವಿಮಾನ ನಿಲ್ದಾಣದ ಬಳಿ ಯಮುನಾ ಎಕ್ಸ್ ಪ್ರೆಸ್ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ- ವೈಇಐಡಿಎ ಯಲ್ಲಿ (YEIDA) ಒಂದು ಘಟಕವನ್ನು ಸ್ಥಾಪಿಸುತ್ತವೆ.

ಈ ಘಟಕವು ಮೊಬೈಲ್ ಫೋನ್, ಲ್ಯಾಪ್ ಟಾಪ್, ಆಟೋಮೊಬೈಲ್, ಪಿಸಿಗಳು ಮತ್ತು ಡಿಸ್ಪ್ಲೇ ಹೊಂದಿರುವ ಹಲವಾರು ಇತರ ಸಾಧನಗಳಿಗೆ ಡಿಸ್‌ಪ್ಲೇ ಡ್ರೈವರ್ ಚಿಪ್ ಗಳನ್ನು ತಯಾರಿಸುತ್ತದೆ.

ಈ ಘಟಕವನ್ನು ತಿಂಗಳಿಗೆ 20,000 ವೇಫರ್ ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ವಿನ್ಯಾಸ ಉತ್ಪಾದನಾ ಸಾಮರ್ಥ್ಯವು ತಿಂಗಳಿಗೆ 36 ಮಿಲಿಯನ್ ಯೂನಿಟ್ ಗಳು.

ದೇಶಾದ್ಯಂತ ಸೆಮಿಕಂಡಕ್ಟರ್ ಉದ್ಯಮವು ಈಗ ರೂಪುಗೊಳ್ಳುತ್ತಿದೆ. ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ವಿಶ್ವ ದರ್ಜೆಯ ವಿನ್ಯಾಸ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ವಿನ್ಯಾಸ ಸಂಸ್ಥೆಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರಗಳು ತೀವ್ರ ಪ್ರಯತ್ನಗಳನ್ನು ಮಾಡುತ್ತಿವೆ.

270 ಶೈಕ್ಷಣಿಕ ಸಂಸ್ಥೆಗಳು ಮತ್ತು 70 ನವೋದ್ಯಮಗಳ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ವಿಶ್ವದರ್ಜೆಯ ಇತ್ತೀಚಿನ ವಿನ್ಯಾಸ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 20 ಉತ್ಪನ್ನಗಳನ್ನು ಎಸ್ ಸಿ ಎಲ್  ಮೊಹಾಲಿ ಬಳಸಿಕೊಂಡಿದೆ.

ಇಂದು ಅನುಮೋದಿಸಲಾದ ಹೊಸ ಸೆಮಿಕಂಡಕ್ಟರ್ ಘಟಕವು 3,700 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸಲಿದೆ.

ದೇಶವು ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಮುಂದುವರಿಯುತ್ತಿದ್ದಂತೆ, ಅದರ ಪೂರಕ ವ್ಯವಸ್ಥೆಯ ಪಾಲುದಾರರು ಭಾರತದಲ್ಲಿ ತಮ್ಮ ಸೌಲಭ್ಯಗಳನ್ನು ಸ್ಥಾಪಿಸಿದ್ದಾರೆ. ಅಪ್ಲೈಡ್ ಮೆಟೀರಿಯಲ್ಸ್ ಮತ್ತು (LAM) ಲ್ಯಾಮ್ ರಿಸರ್ಚ್ ಎರಡು ದೊಡ್ಡ ಸಾಧನ ತಯಾರಕರಾಗಿದ್ದು, ಈ ಎರಡೂ ಈಗ ಭಾರತದಲ್ಲಿ ಅಸ್ತಿತ್ವವನ್ನು ಹೊಂದಿವೆ. ಮೆರ್ಕ್, ಲಿಂಡೆ, ಏರ್ ಲಿಕ್ವಿಡ್, ಐನಾಕ್ಸ್  ಮತ್ತು ಇತರ ಅನೇಕ ಅನಿಲ ಮತ್ತು ರಾಸಾಯನಿಕ ಪೂರೈಕೆದಾರರು ನಮ್ಮ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಸಜ್ಜಾಗುತ್ತಿದ್ದಾರೆ.

ಭಾರತದಲ್ಲಿ ಲ್ಯಾಪ್‌ಟಾಪ್  ಮೊಬೈಲ್ ಫೋನ್, ಸರ್ವರ್, ವೈದ್ಯಕೀಯ ಸಾಧನ, ವಿದ್ಯುತ್ ಎಲೆಕ್ಟ್ರಾನಿಕ್ಸ್, ರಕ್ಷಣಾ ಉಪಕರಣಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ತ್ವರಿತ ಬೆಳವಣಿಗೆಯೊಂದಿಗೆ ಸೆಮಿಕಂಡಕ್ಟರ್ ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ, ಈ ಹೊಸ ಘಟಕವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಮುನ್ನಡೆಸುತ್ತದೆ.

 

*****


(Release ID: 2128639)