WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಇಂಡಿಯಾ ಸಿನಿ ಹಬ್ ಒಂದು ವರ್ಷದಲ್ಲಿ ಭಾರತದಲ್ಲಿ ಚಿತ್ರೀಕರಣಕ್ಕಾಗಿ 100 ಅರ್ಜಿಗಳನ್ನು ಸ್ವೀಕರಿಸಿದೆ: ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಪೃಥುಲ್ ಕುಮಾರ್


ಮುಂಬರುವ ದಿನಗಳಲ್ಲಿ ಭಾರತದಲ್ಲಿ ಅನೇಕ ವಿದೇಶಿ ಚಲನಚಿತ್ರಗಳು ನಿರ್ಮಾಣವಾಗಲಿವೆ: ನಟಿ ಭೂಮಿ ಪೆಡ್ನೇಕರ್

ನೆಚ್ಚಿನ ಚಲನಚಿತ್ರಗಳ ಅನೇಕ ಸ್ಥಳಗಳು ಭಾರತದಲ್ಲಿ ಜನಪ್ರಿಯ ಪ್ರವಾಸಿ ತಾಣಗಳಾಗಿವೆ: ಭಾರತೀಯ ನಿರ್ಮಾಪಕರ ಸಂಘದ ಸಿಇಒ ನಿತಿನ್ ತೇಜ್ ಅಹುಜಾ

ವೇವ್ಸ್ 2025ರಲ್ಲಿ ‘ಲೈಟ್ಸ್, ಕ್ಯಾಮೆರಾ, ಡೆಸ್ಟಿನೇಶನ್! ಬ್ರ್ಯಾಂಡಿಂಗ್ ಇಂಡಿಯಾ ಥ್ರೂ ಫಿಲ್ಮ್ಸ್’ ಕುರಿತು ಚರ್ಚಾಗೋಷ್ಠಿ

 Posted On: 02 MAY 2025 10:09PM |   Location: PIB Bengaluru

"ಇದು ಭಾರತದ ಸಮಯ; ಜಗತ್ತಿನ ಪ್ರತಿಯೊಬ್ಬರಿಗೂ ಇದು ತಿಳಿದಿದೆ" ಎಂದು ಶುಕ್ರವಾರ ಮುಂಬೈನಲ್ಲಿ ನಡೆದ ವೇವ್ಸ್ 2025 ರಲ್ಲಿ 'ಲೈಟ್ಸ್, ಕ್ಯಾಮೆರಾ, ಡೆಸ್ಟಿನೇಶನ್!. 'ಬ್ರ್ಯಾಂಡಿಂಗ್ ಇಂಡಿಯಾ ಥ್ರೂ ಫಿಲ್ಮ್ಸ್' ಚರ್ಚಾಗೋಷ್ಠಿಯಲ್ಲಿ ಮಾತನಾಡಿದ ನಟಿ ಭೂಮಿ ಪೆಡ್ನೇಕರ್ ಹೇಳಿದರು.

ಚರ್ಚೆಯಲ್ಲಿ ಎನ್‌ ಎಫ್‌ ಡಿ ಸಿ ಜಂಟಿ ಕಾರ್ಯದರ್ಶಿ (ಐ&ಬಿ) ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್, ನಿರ್ಮಾಪಕರ ಸಂಘದ ಸಿಇಒ ಶ್ರೀ ನಿತಿನ್ ತೇಜ್ ಅಹುಜಾ, ಗುಜರಾತ್ ಸರ್ಕಾರದ ಕಾರ್ಯದರ್ಶಿ (ಪ್ರವಾಸೋದ್ಯಮ) ಶ್ರೀ ರಾಜೇಂದರ್ ಕುಮಾರ್, ಐಟಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ಮುಗ್ಧಾ ಸಿನ್ಹಾ ಭಾಗವಹಿಸಿದ್ದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸಿರುವ ಇಂಡಿಯಾ ಸಿನಿ ಹಬ್ (ಐಸಿಎಚ್) ಜಾಗತಿಕ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ಮಾತೃಗಳಿಗೆ ಭಾರತದಲ್ಲಿ ಚಲನಚಿತ್ರ ಚಿತ್ರೀಕರಣವನ್ನು ಉತ್ತೇಜಿಸುತ್ತದೆ ಮತ್ತು ಸುಗಮಗೊಳಿಸುತ್ತದೆ ಎಂದು ಜಂಟಿ ಕಾರ್ಯದರ್ಶಿ (ಐ ಮತ್ತು ಬಿ) ಮತ್ತು ಎನ್‌ ಎಫ್‌ ಡಿ ಸಿ ಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಮಾಹಿತಿ ನೀಡಿದರು. ಇದು ಭಾರತದಲ್ಲಿ ಚಿತ್ರೀಕರಣಕ್ಕೆ ಒಂದು-ನಿಲುಗಡೆ ತಾಣವಾಗಿದೆ, ಇದು ಚಲನಚಿತ್ರ ಸೌಲಭ್ಯಕ್ಕಾಗಿ ವಿವಿಧ ರಾಜ್ಯ ಪೋರ್ಟಲ್‌ ಗಳಿಗೆ ಸಂಪರ್ಕಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಇದು ಭಾರತದಲ್ಲಿ ಚಿತ್ರೀಕರಣವನ್ನು ಸುಗಮಗೊಳಿಸುವ ಏಕ-ಗವಾಕ್ಷಿ ಸೌಲಭ್ಯ ಮತ್ತು ಅನುಮತಿ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಚಲನಚಿತ್ರ ಸ್ನೇಹಿ ಪೂರಕ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ದೇಶವನ್ನು ಚಿತ್ರೀಕರಣ ತಾಣವಾಗಿ ಉತ್ತೇಜಿಸಲು ಪ್ರಯತ್ನಿಸುತ್ತದೆ. 2023 ರಲ್ಲಿ ಪ್ರೋತ್ಸಾಹ ಧನವನ್ನು ಹೆಚ್ಚಿಸಲಾಗಿದೆ ಮತ್ತು ಇದರ ಪರಿಣಾಮವಾಗಿ, ವ್ಯವಹಾರವು ಹತ್ತು ಪಟ್ಟು ಹೆಚ್ಚಾಗಿದೆ ಮತ್ತು ಭಾರತದಲ್ಲಿ ಚಿತ್ರೀಕರಣ ಮಾಡಲು ಆಸಕ್ತಿ ವ್ಯಕ್ತಪಡಿಸುವ ನೂರಕ್ಕೂ ಹೆಚ್ಚು ಅರ್ಜಿಗಳನ್ನು ಪೋರ್ಟಲ್‌ ನಲ್ಲಿ ಸ್ವೀಕರಿಸಲಾಗಿದೆ. ಈ ಪ್ರೋತ್ಸಾಹಕಗಳು ಭಾರತವನ್ನು ವಿದೇಶಿ ಚಲನಚಿತ್ರ ನಿರ್ಮಾಪಕರಿಗೆ ಆಕರ್ಷಕ ಚಿತ್ರೀಕರಣ ತಾಣವನ್ನಾಗಿ ಮಾಡಿವೆ ಎಂದು ಅವರು ಹೇಳಿದರು.

ಮುಂಬರುವ ದಿನಗಳಲ್ಲಿ ಭಾರತದಲ್ಲಿ ಅನೇಕ ವಿದೇಶಿ ಚಲನಚಿತ್ರಗಳು ನಿರ್ಮಾಣವಾಗಲಿವೆ ಎಂದು ನಟಿ ಭೂಮಿ ಪಡ್ನೇಕರ್ ಹೇಳಿದರು. "ನಮ್ಮ ಸಿನಿಮಾಗಳಿಂದಾಗಿ ಪ್ರಪಂಚದ ಅನೇಕ ಭಾಗಗಳ ಜನರು ಮುಂಬೈ ಬಗ್ಗೆ ತಿಳಿದಿದ್ದಾರೆ" ಎಂದು ಅವರು ಹೇಳಿದರು. ಭಾರತದಾದ್ಯಂತದ ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ತಮ್ಮ ಆದ್ಯತೆ ನೀಡುವ ಬಗ್ಗೆ ಮಾತನಾಡಿದ ಭೂಮಿ ಪೆಡ್ನೇಕರ್, "ನನ್ನ ಹೆಚ್ಚಿನ ಚಲನಚಿತ್ರಗಳು ಸಾಂಸ್ಕೃತಿಕವಾಗಿ ದಟ್ಟವಾಗಿವೆ, ಹೃದಯಸ್ಪರ್ಶಿ ಚಲನಚಿತ್ರಗಳಾಗಿವೆ. ಸಿನಿಮಾದ ಮೇಲಿನ ನಮ್ಮ ಉತ್ಸಾಹ, ಪ್ರೀತಿ, ನಮ್ಮ ಪಾತ್ರವರ್ಗ ಮತ್ತು ಸಿಬ್ಬಂದಿ ಸಮರ್ಪಣೆಯೊಂದಿಗೆ ಕೆಲಸ ಮಾಡುವ ರೀತಿಗೆ ಸಾಟಿಯಿಲ್ಲ" ಎಂದು ಅವರು ಹೇಳಿದರು.

ಭಾರತದಲ್ಲಿ ಚಲನಚಿತ್ರೋದ್ಯಮದ ಬಗ್ಗೆ ಬೆಳಕು ಚೆಲ್ಲಿದ ಭೂಮಿ ಪೆಡ್ನೇಕರ್, ಈಗ ಚಲನಚಿತ್ರ ಸೆಟ್‌ ಗಳಲ್ಲಿ ಬಹುತೇಕ ಸಮಾನ ಸಂಖ್ಯೆಯ ಪುರುಷರು ಮತ್ತು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಭಾರತದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಬರುವ ಗಣ್ಯರ ಸಂಖ್ಯೆ ಈಗ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಜನಪ್ರಿಯ ಚಲನಚಿತ್ರಗಳ ಅನೇಕ ಸ್ಥಳಗಳು ಭಾರತದಲ್ಲಿ ಜನಪ್ರಿಯ ಪ್ರವಾಸಿ ತಾಣಗಳಾಗಿವೆ ಎಂದು ನಿತಿನ್ ತೇಜ್ ಅಹುಜಾ ಹೇಳಿದರು. ಗುಲ್ಮಾರ್ಗ್‌ ನಲ್ಲಿರುವ 'ಬಾಬಿ' ಬಂಗಲೆ, ಡಿ ಡಿ ಎಲ್‌ ಜೆ ಜನಪ್ರಿಯಗೊಳಿಸಿದ ಪಂಜಾಬ್‌ ನ ಹಳದಿ ಸಾಸಿವೆ ಹೊಲಗಳು, 'ಜಬ್ವಿ ಮೆಟ್' ನಲ್ಲಿ ಕಾಣಿಸಿಕೊಂಡ ರತ್ಲಂ ನ ಭಟಿಂಡಾ ರೈಲು ಪ್ರಯಾಣ, 'ತ್ರೀ ಈಡಿಯಟ್ಸ್' ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಿದ ಪ್ಯಾಂಗಾಂಗ್ ಸರೋವರ ಅಂತಹ ಕೆಲವು ಉದಾಹರಣೆಗಳಾಗಿವೆ. 'ದಿಲ್ ಚಾಹ್ತಾ ಹೈ' ಬಿಡುಗಡೆಯಾದಾಗಿನಿಂದ ಭಾರತದ ಯುವಕರು ತಮ್ಮ ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರಯಾಣಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದರು.

ಚಲನಚಿತ್ರ ಚಿತ್ರೀಕರಣಕ್ಕಾಗಿ ದೇಶವು ತನ್ನ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಪರಿಗಣಿಸಬಹುದು ಎಂದು ಐಟಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ಮುಗ್ಧಾ ಸಿನ್ಹಾ ಅಭಿಪ್ರಾಯಪಟ್ಟರು. ದೇಶದಲ್ಲಿ ಚಲನಚಿತ್ರ ನಿರ್ಮಾಣ ಮತ್ತು ಪ್ರವಾಸೋದ್ಯಮಕ್ಕೆ ಇದು ಅತ್ಯುತ್ತಮ ಸಮಯ ಎಂದು ಅವರು ಹೇಳಿದರು. ಗುಜರಾತ್ ಸರ್ಕಾರದ ಕಾರ್ಯದರ್ಶಿ (ಪ್ರವಾಸೋದ್ಯಮ) ರಾಜೇಂದ್ರ ಕುಮಾರ್, ಗುಜರಾತ್ ಸರ್ಕಾರವು ಗುಜರಾತಿನಲ್ಲಿ ಚಿತ್ರೀಕರಿಸಿದ ಚಲನಚಿತ್ರಗಳ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಚಲನಚಿತ್ರವನ್ನು ಚಿತ್ರೀಕರಿಸಿದ ಸ್ಥಳವನ್ನು ಕ್ರೆಡಿಟ್‌ ಲೈನ್‌ ಗಳಲ್ಲಿ ಉಲ್ಲೇಖಿಸುವುದು ಸೇರಿದಂತೆ ತೆಗೆದುಕೊಂಡ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಕಾರಾತ್ಮಕ ನೀತಿ ಮಾದರಿಗಳು, ಉತ್ತಮ ಮೂಲಸೌಕರ್ಯ ಮತ್ತು ಚಿತ್ರೀಕರಣಕ್ಕೆ ಅನುಮತಿ ಪಡೆಯುವ ಸುಲಭತೆಯಿಂದಾಗಿ ಚಲನಚಿತ್ರ ನಿರ್ಮಾಪಕರು ರಾಜ್ಯದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಕ್ರಿಯೇಟಿವ್ ಎಕಾನಮಿ ಫೋರಂನ ಸಂಸ್ಥಾಪಕಿ ಸುಪ್ರಿಯಾ ಸೂರಿ ಅವರು ಚರ್ಚಾಗೋಷ್ಠಿಯನ್ನು ನಿರ್ವಹಿಸಿದರು.

 

*****


Release ID: (Release ID: 2126935)   |   Visitor Counter: 5