ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪೈರಸಿ ನಿಗ್ರಹ, ತಂತ್ರಜ್ಞಾನ, ಕಾನೂನು ಮತ್ತು ಜಾಗೃತಿಯ ಬಗ್ಗೆ ಸಂಘಟಿತ ಕ್ರಮಕ್ಕೆ ವೇವ್ಸ್ 2025ರಲ್ಲಿ ತಜ್ಞರ ಕರೆ
ಚರ್ಚಾಗೋಷ್ಠಿಯು ಆರ್ಥಿಕ ನಷ್ಟಗಳು, ಸೈಬರ್ ಅಪರಾಧ ಬೆದರಿಕೆಗಳು ಮತ್ತು ಅನುಷ್ಠಾನ ಮತ್ತು ಶಿಕ್ಷಣವನ್ನು ಸಂಯೋಜಿಸುವ ಪರಿಹಾರಗಳ ಮೇಲೆ ಕೇಂದ್ರೀಕರಿಸಿತು
"ಪರಿಣಾಮಕಾರಿಯಾದ ಪೈರಸಿ ನಿಗ್ರಹ ಜಾರಿಯು ಕಾನೂನುಬದ್ಧ ವೀಡಿಯೊ ಸೇವಾ ಬಳಕೆದಾರರಲ್ಲಿ ಶೇಕಡಾ 25 ರಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು"
Posted On:
03 MAY 2025 2:51PM
|
Location:
PIB Bengaluru
ವೇವ್ಸ್ 2025ರಲ್ಲಿ, "ಪೈರಸಿ: ತಂತ್ರಜ್ಞಾನದ ಮೂಲಕ ಕಂಟೆಂಟ್ ರಕ್ಷಿಸುವುದು" ಎಂಬ ವಿಷಯದ ಕುರಿತು ನಡೆದ ಚರ್ಚಾಗೋಷ್ಠಿಯಲ್ಲಿ ಮಾಧ್ಯಮ, ಕಾನೂನು ಮತ್ತು ಸೈಬರ್ ಭದ್ರತೆಯ ಜಾಗತಿಕ ನಾಯಕರು ಡಿಜಿಟಲ್ ಕಂಟೆಂಟ್ ಆರ್ಥಿಕತೆ ಎದುರಿಸುತ್ತಿರುವ ಅತ್ಯಂತ ಕಷ್ಟಕರವಾದ ಸವಾಲನ್ನು ಪರಿಹರಿಸಲು ಒಟ್ಟಾಗಿ ಸೇರಿದರು. ಐಪಿ ಹೌಸ್ ನ ಏಷ್ಯಾ ಪೆಸಿಫಿಕ್ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ನೀಲ್ ಗೇನ್ ಅವರು ನಡೆಸಿಕೊಟ್ಟ ಚರ್ಚೆಯಲ್ಲಿ, ಪೈರಸಿ ಇನ್ನು ಮುಂದೆ ಒಂದು ಸಣ್ಣ ಕಾಳಜಿಯಲ್ಲ, ಬದಲಾಗಿ ಸಂಘಟಿತ, ಬಹುಮುಖಿ ಪ್ರತಿಕ್ರಿಯೆಗಳ ಅಗತ್ಯವಿರುವ ಮುಖ್ಯವಾಹಿನಿಯ ಬೆದರಿಕೆಯಾಗಿದೆ ಎಂದು ಹೇಳಿದರು.

ಮೀಡಿಯಾ ಪಾರ್ಟ್ನರ್ಸ್ ಏಷ್ಯಾದ ವ್ಯವಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ವಿವೇಕ್ ಕೌಟೊ, ಅನಿಯಂತ್ರಿತ ಪೈರಸಿಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಒತ್ತಿ ಹೇಳಿದರು. "ಆನ್ಲೈನ್ ಪೈರಸಿಯಿಂದಾಗಿ 2025 ಮತ್ತು 2029 ರ ನಡುವೆ ಉದ್ಯಮವು ತನ್ನ ಆದಾಯದಲ್ಲಿ ಶೇ.10 ಕ್ಕಿಂತ ಹೆಚ್ಚು ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು. "ಆದರೆ ಪರಿಣಾಮಕಾರಿ ಪೈರಸಿ ನಿಗ್ರಹ ಜಾರಿಯು ಕಾನೂನುಬದ್ಧ ವೀಡಿಯೊ ಸೇವಾ ಬಳಕೆದಾರರಲ್ಲಿ ಶೇ.25 ರಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಕಂಟೆಂಟ್ ಹೂಡಿಕೆಯಲ್ಲಿ ಹೆಚ್ಚುವರಿ 0.5 ಬಿಲಿಯನ್ ಡಾಲರ್ ಹೆಚ್ಚಳಕ್ಕೆ ಕಾರಣವಾಗಬಹುದು, ಇದು 2029 ರ ವೇಳೆಗೆ ಒಟ್ಟು ಮೌಲ್ಯವನ್ನು 3.8 ಬಿಲಿಯನ್ ಡಾಲರ್ ಗೆ ಹೆಚ್ಚಿಸುತ್ತದೆ" ಎಂದು ಹೇಳಿದರು. ಭಾರತದ ಡಿಜಿಟಲ್ ವಿಡಿಯೋ ಆರ್ಥಿಕತೆಯು ಬೆಳೆಯುತ್ತಿರುವಂತೆ, ಪೈರಸಿಯ ಚರ್ಚೆಯನ್ನು ರಕ್ಷಣೆಯಿಂದ ದಕ್ಷತೆಗೆ ಮರುರೂಪಿಸುವಂತೆ ಅವರು ಪಾಲುದಾರರನ್ನು ಒತ್ತಾಯಿಸಿದರು.
ಐ ಎಸ್ ಬಿ ಇನ್ಸ್ಟಿಟ್ಯೂಟ್ ಆಫ್ ಡೇಟಾ ಸೈನ್ಸ್ ನ ಸಹ ನಿರ್ದೇಶಕಿ ಡಾ. ಶ್ರುತಿ ಮಂತ್ರಿ, ಡಿಜಿಟಲ್ ಪೈರಸಿ ಮತ್ತು ಸೈಬರ್ ಅಪರಾಧದ ನಡುವಿನ ಸಂಪರ್ಕವನ್ನು ಎತ್ತಿ ತೋರಿಸಿದರು. "ಪೈರಸಿಯಲ್ಲಿ ಹೆಚ್ಚಾಗಿ ಟ್ರೋಜನ್ ಗಳು, ರಾನ್ಸಮ್ವೇರ್ ಮತ್ತು ಸ್ಪೈವೇರ್ ನಂತಹ ದುರುದ್ದೇಶಪೂರಿತ ಸಾಧನಗಳು ಸೇರಿವೆ. 18–24 ವರ್ಷ ವಯಸ್ಸಿನ ಬಳಕೆದಾರರು ವಿಶೇಷವಾಗಿ ಇವುಗಳಿಗೆ ಬಲಿಯಾಗುತ್ತಿದ್ದಾರೆ" ಎಂದು ಅವರು ಹೇಳಿದರು. ವ್ಯಾಪಕ ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಶೈಕ್ಷಣಿಕ ಉಪಕ್ರಮಗಳಿಗೆ ಅವರು ಕರೆ ನೀಡಿದರು, ತಡೆಗಟ್ಟುವಿಕೆಯು ತಿಳುವಳಿಕೆಯುಳ್ಳ ಗ್ರಾಹಕರೊಂದಿಗೆ ಪ್ರಾರಂಭವಾಗಬೇಕು ಎಂದು ಹೇಳಿದರು. ಜುಲೈ 9–10 ರಂದು ಸಿಬಿಐ ಮತ್ತು ಇಂಟರ್ಪೋಲ್ ಸಹಯೋಗದೊಂದಿಗೆ ಐ ಎಸ್ ಬಿ ಡಿಜಿಟಲ್ ಪೈರಸಿ ಶೃಂಗಸಭೆಯನ್ನು ಆಯೋಜಿಸುವುದಾಗಿ ಅವರು ಘೋಷಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ಪೈರಸಿ ವಿರೋಧಿ ಕಾರ್ಯಾಚರಣೆಗಳ ಕುರಿತು ಮಾತನಾಡಿದ DAZN ನ ಪೈರಸಿ ವಿರೋಧಿ ಕಾರ್ಯಾಚರಣೆಗಳ ಮುಖ್ಯಸ್ಥ ಅನುರಾಗ್ ಕಶ್ಯಪ್, ತಡೆಗಟ್ಟುವ ವಿಧಾನವನ್ನು ವಿವರಿಸಿದರು. "ನಮ್ಮ ಕಾರ್ಯತಂತ್ರವು ಮೂರು ಡಿ ಗಳನ್ನು ಆಧರಿಸಿದೆ: ಪತ್ತೆ, ಅಡ್ಡಿ ಮತ್ತು ತಡೆಗಟ್ಟುವಿಕೆ. ಕಾರ್ಯಕ್ರಮ ನೇರ ಪ್ರಸಾರವಾಗುವ ಮೊದಲೇ ನಾವು ಅನುಷ್ಠಾನವನ್ನು ಪ್ರಾರಂಭಿಸುತ್ತೇವೆ" ಎಂದು ಅವರು ಹೇಳಿದರು. ಸೋರಿಕೆಗಳನ್ನು ಪತ್ತೆಹಚ್ಚುವಲ್ಲಿ ಅದೃಶ್ಯ ವಾಟರ್ಮಾರ್ಕಿಂಗ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ಜಿಯೋ ಹಾಟ್ಸ್ಟಾರ್ ನ ಕಾನೂನು ಮುಖ್ಯಸ್ಥ ಮತ್ತು ಈ ಕಾನೂನಿಗೆ ಸಂಬಂಧಿಸಿದ ವಿಷಯಗಳ ತಜ್ಞ ಅನಿಲ್ ಲೇಲ್, ಕಟ್ಟುನಿಟ್ಟಿನ ಅನುಷ್ಠಾನದ ಮಹತ್ವವನ್ನು ವಿವರಿಸಿದರು. "ಪೈರಸಿ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸುವುದು ಅತಿ ದೊಡ್ಡ ತಡೆಗಟ್ಟುವಿಕೆಯಾಗಿದೆ. ಕಾನೂನು ಜಾರಿಯಲ್ಲಿ ಎಲ್ಲೆಲ್ಲಿ ಅಂತರಗಳಿವೆ ಎಂಬುದನ್ನು ಗುರುತಿಸುವುದು ಮತ್ತು ಮೇಲ್ನೋಟಕ್ಕೆ ಮಾತ್ರ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸುವುದು ಅವಶ್ಯಕ" ಎಂದು ಅವರು ಹೇಳಿದರು. ತಡೆಗಟ್ಟುವಿಕೆ ಪ್ರತಿಕ್ರಿಯಾತ್ಮಕವಾಗಿರುವುದಕ್ಕಿಂತ ಸಕ್ರಿಯವಾಗಿರಬೇಕೆಂದು ಅವರು ಹೇಳಿದರು.

ಆನಂದ್ & ಆನಂದ್ ಅಸೋಸಿಯೇಟ್ಸ್ ನ ಪ್ರವೀಣ್ ಆನಂದ್, ಪರಿಹಾರವು ತಂತ್ರಜ್ಞಾನ ಮತ್ತು ನ್ಯಾಯಾಂಗ ಸುಧಾರಣೆ ಎರಡರಲ್ಲೂ ಇದೆ ಎಂದು ಒತ್ತಿ ಹೇಳಿದರು. "ಎಐ, ಬ್ಲಾಕ್ ಚೈನ್ ಮತ್ತು ವಾಟರ್ಮಾರ್ಕಿಂಗ್ ನಂತಹ ಸಾಧನಗಳು ಮುಖ್ಯ. ಆದರೆ ಲೋಹ ಶೋಧಕಗಳಂತಹ ಕ್ರಮಗಳೊಂದಿಗೆ ಕ್ಯಾಮ್ ಕಾರ್ಡಿಂಗ್ ಅನ್ನು ಕಷ್ಟಕರವಾಗಿಸುವ ಅಗತ್ಯವೂ ಇದೆ. ಅಂತಹ ವಿಷಯಗಳನ್ನು ತಡೆಗಟ್ಟಲು ಸಕಾಲಿಕ ಕಾನೂನು ಕ್ರಮದ ಅಗತ್ಯವಿದೆ" ಎಂದು ಅವರು ಹೇಳಿದರು.
ಡಿಜಿಟಲ್ ಕಂಟೆಂಟ್ ನ ಭವಿಷ್ಯವನ್ನು ರಕ್ಷಿಸಲು ತಂತ್ರಜ್ಞಾನ, ಕಾನೂನು, ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಜಾಗೃತಿ ಒಟ್ಟಾಗಿ ಕೆಲಸ ಮಾಡುವ ಒಗ್ಗಟ್ಟಿನ ಅಗತ್ಯದ ಕುರಿತು ಗೋಷ್ಠಿಯು ಒಮ್ಮತ ವ್ಯಕ್ತಪಡಿಸಿತು. ವೇವ್ಸ್ 2025, ಇಂತಹ ಚರ್ಚೆಗಳ ಮೂಲಕ, ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಅತ್ಯಂತ ಪ್ರಮುಖ ಸಮಸ್ಯೆಗಳಿಗೆ ಪರಿಹಾರಗಳನ್ನು ಎತ್ತಿ ತೋರಿಸುವುದನ್ನು ಮುಂದುವರೆಸಿದೆ.
For official updates on realtime, please follow us:
On X :
https://x.com/WAVESummitIndia
https://x.com/MIB_India
https://x.com/PIB_India
https://x.com/PIBmumbai
On Instagram:
https://www.instagram.com/wavesummitindia
https://www.instagram.com/mib_india
https://www.instagram.com/pibindia
*****
Release ID:
(Release ID: 2126755)
| Visitor Counter:
5