WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಅಡೆತಡೆಗಳನ್ನು ಮೆಟ್ಟಿ ನಿಂತು, ಹೊಸ ಕಥೆಯನ್ನು ರಚಿಸುವುದು": ವೇವ್ಸ್ 2025 ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಧೈರ್ಯ, ಸಮಾನತೆ ಮತ್ತು ಛಲವನ್ನು ಶ್ಲಾಘಿಸುತ್ತದೆ


ವೇವ್ಸ್ 2025 ರಲ್ಲಿ ಮಾಜಿ ಜರ್ಮನ್ ಫುಟ್ ಬಾಲ್ ಆಟಗಾರ್ತಿ ಮತ್ತು ವಿಶ್ವ ಚಾಂಪಿಯನ್ ಏರಿಯಾನ್ ಹಿಂಗ್ಸ್ಟ್ ಅವರು ಕ್ರೀಡಾ ಜಗತ್ತಿನಲ್ಲಿ ಸಮಾನ ಅವಕಾಶಗಳ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದರು

ವೇವ್ಸ್ 2025 ರಲ್ಲಿ ಬಿಂಕಾ ಬಾಲ್ಟಿ ಅಸಮಾನತೆಯನ್ನು ಪ್ರಶ್ನಿಸುವಲ್ಲಿ ಮತ್ತು ನ್ಯಾಯಯುತ ಪ್ರಾತಿನಿಧ್ಯವನ್ನು ಉತ್ತೇಜಿಸುವಲ್ಲಿ ಸಾಮಾಜಿಕ ಮಾಧ್ಯಮದ ಶಕ್ತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು

ವೇವ್ಸ್‌ 2025 ರಲ್ಲಿ ರೋನಾ-ಲೀ ಶಿಮನ್ ಅವರು ಮಹಿಳಾ ಧ್ವನಿಗಳನ್ನು ಬಲಪಡಿಸುವಲ್ಲಿ ಮತ್ತು ಸಿನಿಮಾದಲ್ಲಿನ ರೂಢಿಗತ ಕಲ್ಪನೆಗಳನ್ನು ಮುರಿಯುವಲ್ಲಿ ಮಾಧ್ಯಮದ ಪಾತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು

 Posted On: 01 MAY 2025 8:45PM |   Location: PIB Bengaluru

ಇಂದು ವೇವ್ಸ್ 2025 ಜಾಗತಿಕ ಶೃಂಗಸಭೆಯಲ್ಲಿ ನಡೆದ "ಅಡೆತಡೆಗಳನ್ನು ಮೆಟ್ಟಿ ನಿಂತು, ಹೊಸ ಕಥೆಯನ್ನು ರಚಿಸುವುದು" ಎಂಬ ವಿಷಯದ ಕುರಿತಾದ ಚರ್ಚಾಕೂಟದಲ್ಲಿ ಮೂವರು ಸ್ಪೂರ್ತಿದಾಯಕ ಭಾಷಣಕಾರರು ಭಾಗವಹಿಸಿದ್ದರು. ಅವರೇ  ಫೌಡಾದಂತಹ ಆಕ್ಷನ್-ಪ್ಯಾಕ್ಡ್ ನಾಟಕಗಳಲ್ಲಿನ ಪ್ರಬಲ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಇಸ್ರೇಲಿ ನಟಿ ರೋನಾ-ಲೀ ಶಿಮನ್; ಜಾಗತಿಕವಾಗಿ ಗುರುತಿಸಲ್ಪಟ್ಟ ಇಟಾಲಿಯನ್ ಮಾಡೆಲ್ ಮತ್ತು ಕ್ಯಾನ್ಸರ್ನಿಂದ ಬದುಕುಳಿದ ಬಿಂಕಾ ಬಾಲ್ಟಿ; ಮತ್ತು ಜರ್ಮನಿಯ ಮಾಜಿ ಫುಟ್ ಬಾಲ್  ಆಟಗಾರ್ತಿ ಮತ್ತು ವಿಶ್ವ ಚಾಂಪಿಯನ್ ಅರಿಯಾನೆ ಹಿಂಗ್ಸ್ಟ್. ಈ ಮೂವರು ತಮ್ಮ ವೃತ್ತಿ ಮತ್ತು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ.

ಈ ಸವಾಲುಗಳಿಗೆ ಹಿಂಜರಿಯದ ಈ ಸಾಧಕಿಯರು, ಅವುಗಳನ್ನೇ ತಮ್ಮ ಬೆಳವಣಿಗೆಗೆ ಮತ್ತು ಭವಿಷ್ಯದ ಹೊಸ ಹಾದಿಗಳನ್ನು ರೂಪಿಸಿಕೊಳ್ಳಲು ಒಂದು ಅವಕಾಶವನ್ನಾಗಿ ಪರಿವರ್ತಿಸಿಕೊಂಡರು. ವೇವ್ಸ್ 2025 ಮುಖ್ಯವಾಗಿ ಕಷ್ಟಕರ ಅನುಭವಗಳನ್ನು ಧೈರ್ಯವಾಗಿ ಎದುರಿಸಿ, ಅವುಗಳನ್ನು ತಮ್ಮ ಬಲವನ್ನಾಗಿಸಿಕೊಂಡು ಇತರರಿಗೆ ಸ್ಫೂರ್ತಿ ನೀಡುವ ವ್ಯಕ್ತಿಗಳನ್ನು ಗೌರವಿಸುತ್ತದೆ. ಇದು ಧೈರ್ಯ, ಬದಲಾವಣೆ ಮತ್ತು ನಾಯಕತ್ವವನ್ನು ಸನ್ಮಾನಿಸುವ ವೇದಿಕೆಯಾಗಿದ್ದು, ವಿಶೇಷವಾಗಿ ಸಾಮಾಜಿಕ ಅಡೆತಡೆಗಳನ್ನು ಮುರಿದು ಅಥವಾ ಕಷ್ಟಕರ ಸಂದರ್ಭಗಳನ್ನು ಮೀರಿ ಬಂದವರನ್ನು ಇದು ಗುರುತಿಸುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅರಿಯಾನೆ ಹಿಂಗ್ಸ್ಟ್ ಅವರು, ಪುರುಷರೇ ಹೆಚ್ಚಾಗಿರುವ ಫುಟ್ಬಾಲ್ ಜಗತ್ತಿನಲ್ಲಿ ವೃತ್ತಿಪರ ಆಟಗಾರ್ತಿಯಾಗಿ ಬೆಳೆದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಲಿಂಗ ತಾರತಮ್ಯವನ್ನು ಮೀರಿ ವಿಶ್ವ ಚಾಂಪಿಯನ್ ಆಗಿದ್ದು ಹೇಗೆ ಮತ್ತು ಈಗ ಕ್ರೀಡೆಯಲ್ಲಿ ನ್ಯಾಯ ಹಾಗೂ ಸಮಾನತೆಯನ್ನು ಪ್ರತಿಪಾದಿಸಲು ತಮ್ಮ ಮಾತನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ವಿವರಿಸಿದರು. ಪುರುಷರ ಫುಟ್ಬಾಲ್ಗೆ ಸಿಗುವಷ್ಟು ಮಾಧ್ಯಮದ ಗಮನ ಮತ್ತು ಸರಿಯಾದ ವೇದಿಕೆಗಳು ಮಹಿಳೆಯರ ಫುಟ್ಬಾಲ್ಗೆ ಸಿಗುತ್ತಿಲ್ಲ ಎಂದು ವಿಷಾದಿಸಿದರು. ಮಹಿಳಾ ಕ್ರೀಡಾಪಟುಗಳಿಗೆ ಸರಿಸಮಾನವಾದ ಅವಕಾಶಗಳು ಮತ್ತು ಮನ್ನಣೆ ದೊರೆಯಬೇಕಾದ ಮಹತ್ವವನ್ನು ಅವರು ಒತ್ತಿ ಹೇಳಿದರು.

ಈ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ವಿಶ್ವವಿಖ್ಯಾತ ಮಾಡೆಲ್ ಹಾಗೂ ಕ್ಯಾನ್ಸರ್ನಿಂದ ಚೇತರಿಸಿಕೊಂಡ ಬಿಂಕಾ ಬಾಲ್ಟಿ ಅವರು, ತಮ್ಮ ಅದ್ಭುತವಾದ ಸ್ಥೈರ್ಯದ ಕಥೆಯನ್ನು ಮತ್ತು ಕಾಯಿಲೆಯಿಂದ ಗುಣಮುಖರಾದ ಬಳಿಕ ಕೆಲಸಕ್ಕೆ ಮರಳಿದ ಅನುಭವವನ್ನು ಹಂಚಿಕೊಂಡರು. ಮಾಡೆಲಿಂಗ್ ಕ್ಷೇತ್ರದಲ್ಲಿರುವ ಗಂಡು-ಹೆಣ್ಣಿನ ತಾರತಮ್ಯದ ಬಗ್ಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಮಹಿಳಾ ಮಾಡೆಲ್ಗಳಿಗೆ ಪುರುಷ ಮಾಡೆಲ್ಗಳಿಗಿಂತ ಕಡಿಮೆ ಸಂಭಾವನೆ ನೀಡಲಾಗುತ್ತದೆ ಮತ್ತು ಮಾಧ್ಯಮಗಳಲ್ಲಿ ಪುರುಷರೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಾರೆ ಎಂದು ವಿವರಿಸಿದರು. ಸಾಮಾಜಿಕ ಮಾಧ್ಯಮ ಸೇರಿದಂತೆ ಮಾಧ್ಯಮದ ನಿಜವಾದ ಶಕ್ತಿಯಿರುವುದು ಬದಲಾವಣೆಯನ್ನು ತರುವ ಸಾಮರ್ಥ್ಯದಲ್ಲಿ ಎಂದು ಬಿಂಕಾ ಒತ್ತಿ ಹೇಳಿದರು. ಕೇಳದವರ ಧ್ವನಿಯನ್ನು ಎತ್ತಿ ತೋರಿಸಲು, ಅಸಮಾನತೆಯನ್ನು ಪ್ರಶ್ನಿಸಲು ಮತ್ತು ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ನ್ಯಾಯಯುತವಾದ ಪ್ರಾತಿನಿಧ್ಯವನ್ನು ನೀಡಲು ಇದು ನೆರವಾಗಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ರೋನಾ-ಲೀ ಶಿಮನ್ ಅವರು, ಕಥೆ ಹೇಳುವವರಿಗೆ ತಮ್ಮ ನಿರೂಪಣೆಗಳನ್ನು ಬದಲಾಯಿಸಲು ಮತ್ತು ಜನರನ್ನು ಒಗ್ಗೂಡಿಸಲು ವೇವ್ಸ್ ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಒತ್ತಿ ಹೇಳಿದರು. ಚಲನಚಿತ್ರರಂಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಮಹಿಳೆಯರು ಒಗ್ಗೂಡುವಿಕೆಯ ಮಹತ್ವವನ್ನು ಅವರು ತಿಳಿಸಿದರು. ಧೈರ್ಯದಿಂದಿರಲು, ಒಬ್ಬರಿಗೊಬ್ಬರು ಬೆಂಬಲ ನೀಡಲು ಮತ್ತು ಬದಲಾವಣೆಗಾಗಿ ಧ್ವನಿ ಎತ್ತಲು ಹಿಂಜರಿಯಬಾರದು ಎಂದು ಅವರು ಪ್ರೋತ್ಸಾಹಿಸಿದರು. ಈ ಹೋರಾಟದಲ್ಲಿ ಸಾಮಾಜಿಕ ಮಾಧ್ಯಮವು ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಅದು ಮಹಿಳೆಯರಿಗೆ ತಮ್ಮ ಅಭಿಪ್ರಾಯ ಮತ್ತು ಕಥೆಗಳನ್ನು ಹಂಚಿಕೊಳ್ಳುವ ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು. ತೆರೆಯ ಮೇಲೆ ತಮ್ಮ ಗಟ್ಟಿಯಾದ ಮತ್ತು ಕ್ರಿಯಾತ್ಮಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ರೋನಾ-ಲೀ, ಮನರಂಜನಾ ಉದ್ಯಮದಲ್ಲಿನ ರೂಢಿಗತ ಕಲ್ಪನೆಗಳನ್ನು ಮುರಿಯುತ್ತಿದ್ದಾರೆ. ಶಕ್ತಿ, ಸಾಹಸ ಮತ್ತು ಗಾಂಭೀರ್ಯ ಕೇವಲ ಒಂದು ನಿರ್ದಿಷ್ಟ ಲಿಂಗಕ್ಕೆ ಸೀಮಿತವಲ್ಲ ಎಂದು ಅವರು ತೋರಿಸಿಕೊಡುತ್ತಿದ್ದಾರೆ.

ಪ್ರತಿಯೊಬ್ಬ ಭಾಷಣಕಾರರೂ ತಮ್ಮ ವೈಯಕ್ತಿಕ ಅಥವಾ ವೃತ್ತಿ ಜೀವನದಲ್ಲಿ ಕಷ್ಟಗಳನ್ನು ಎದುರಿಸಿದ್ದಾರೆ. ಆದರೆ ಆ ಸವಾಲುಗಳೇ ಅವರನ್ನು ಕುಗ್ಗಿಸುವ ಬದಲು, ಅವುಗಳನ್ನು ಮೆಟ್ಟಿ ನಿಂತು ತಮ್ಮದೇ ಆದ ಹೊಸ ಕಥೆಯನ್ನು ಬರೆದಿದ್ದಾರೆ. ವೇವ್ಸ್ 2025ರ ಮುಖ್ಯ ಆಶಯವೂ ಇದೇ ಆಗಿದೆ: ಕೇವಲ ಸಂಕಷ್ಟಗಳನ್ನು ಎದುರಿಸುವುದಷ್ಟೇ ಅಲ್ಲದೆ, ಅವುಗಳನ್ನು ಬದಲಾವಣೆಯ ಮತ್ತು ಪ್ರೇರಣೆಯ ಮೂಲಗಳನ್ನಾಗಿ ಪರಿವರ್ತಿಸುವ ವ್ಯಕ್ತಿಗಳನ್ನು ಗೌರವಿಸುವುದು.

 

*****


Release ID: (Release ID: 2126062)   |   Visitor Counter: 16