ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವೇವ್ಸ್ 2025ರಲ್ಲಿ ಭಾರತ-ನೇತೃತ್ವದ ಜಾಗತಿಕ ಮನರಂಜನಾ ಕ್ರಾಂತಿಯ ದೃಷ್ಟಿಯನ್ನು ಅನಾವರಣಗೊಳಿಸಿದ ಮುಖೇಶ್ ಅಂಬಾನಿ
'ವೇವ್ಸ್' ಒಂದು ನವೋತ್ಥಾನದ ಹೊಸ್ತಿಲಲ್ಲಿರುವ ಹೊಸ ಭಾರತದಿಂದ ಜಗತ್ತಿಗೆ ಭರವಸೆಯ ಸಂದೇಶವಾಗಲಿ: ಮುಖೇಶ್ ಅಂಬಾನಿ
ಮಾಧ್ಯಮ ಮತ್ತು ಮನರಂಜನೆ ಕೇವಲ ಭಾರತದ ಮೃದು ಶಕ್ತಿಯಲ್ಲ—ಇದು ಭಾರತದ ನಿಜವಾದ ಶಕ್ತಿ: ಅಂಬಾನಿ
Posted On:
01 MAY 2025 8:32PM
|
Location:
PIB Bengaluru
"ಭಾರತ ಕೇವಲ ಒಂದು ರಾಷ್ಟ್ರವಲ್ಲ—ಇದು ಕಥೆಗಳೇ ತುಂಬಿರುವ ಒಂದು ನಾಗರಿಕತೆ, ಇಲ್ಲಿ ಕಥೆ ಹೇಳುವುದು ಬದುಕಿನ ಒಂದು ಅವಿಭಾಜ್ಯ ಅಂಗ", ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮುಖೇಶ್ ಅಂಬಾನಿ ಅವರು ಇಂದು ಮುಂಬೈನಲ್ಲಿ ಆರಂಭಗೊಂಡಿರುವ ಮೊಟ್ಟಮೊದಲ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಶೃಂಗಸಭೆ ವೇವ್ಸ್ 2025 ರಲ್ಲಿ ಮುಖ್ಯ ಭಾಷಣ ಮಾಡುತ್ತಾ ಹೇಳಿದರು.
ಖ್ಯಾತ ಅಮೇರಿಕನ್ ಲೇಖಕ ಮಾರ್ಕ್ ಟ್ವೈನ್ ಅವರ ಉಕ್ತಿಯನ್ನು ಉಲ್ಲೇಖಿಸಿದ ಶ್ರೀ ಅಂಬಾನಿ ಅವರು, ಭಾರತವನ್ನು "ಮಾನವ ಕುಲದ ತೊಟ್ಟಿಲು, ಮಾನವ ಮಾತಿನ ಜನ್ಮಸ್ಥಳ, ಇತಿಹಾಸದ ತಾಯಿ, ದಂತಕಥೆಯ ಅಜ್ಜಿ, ಸಂಪ್ರದಾಯಗಳ ಮುತ್ತಜ್ಜಿ" ಎಂದು ಬಣ್ಣಿಸಿದರು. ಕಥೆ ಹೇಳುವುದು ಭಾರತೀಯರ ಬದುಕಿನೊಂದಿಗೆ ಗಾಢವಾಗಿ ಬೆಸೆದುಕೊಂಡಿದೆ ಎಂದು ಪ್ರತಿಪಾದಿಸಿದ ಅವರು, "ನಮ್ಮ ಸನಾತನ ಮಹಾಕಾವ್ಯಗಳಿಂದ ಹಿಡಿದು ಪೌರಾಣಿಕ ಕಥೆಗಳವರೆಗೆ, ಕಥೆ ಹೇಳುವುದು ನಮ್ಮ ಪರಂಪರೆ. ಕಂಟೆಂಟ್ ಯಾವಾಗಲು ಕಿಂಗ್ — ಮತ್ತು ಉತ್ತಮ ಕಥೆಗಳಿಗೆ ಸದಾ ಬೇಡಿಕೆಯಿದೆ. ಈ ಸಾರ್ವಕಾಲಿಕ ತತ್ವವು ಜಾಗತಿಕ ಮನರಂಜನೆಯ ಅಡಿಪಾಯವಾಗಿದೆ" ಎಂದು ಹೇಳಿದರು.

"ಭಾರತದಿಂದಲೇ ಮುಂದಿನ ಜಾಗತಿಕ ಮನರಂಜನಾ ಕ್ರಾಂತಿಯನ್ನು ಕಟ್ಟೋಣ" ಎಂಬ ಸ್ಫೂರ್ತಿದಾಯಕ ಮತ್ತು ಭವಿಷ್ಯದ ದೃಷ್ಟಿಯ ಭಾಷಣದಲ್ಲಿ, ಅಂಬಾನಿ ಅವರು ಭಾರತವು ವಿಶ್ವದ ಮನರಂಜನಾ ಉದ್ಯಮದ ಕೇಂದ್ರಬಿಂದುವಾಗುವ ಭವಿಷ್ಯವನ್ನು ಕಲ್ಪಿಸಿದರು. ಈ ಪರಿವರ್ತನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದಿಟ್ಟ ದೃಷ್ಟಿಕೋನವೇ ಪ್ರೇರಣೆ ಎಂದು ಶ್ಲಾಘಿಸಿದ ಅವರು, ವೇವ್ಸ್ ಶೃಂಗಸಭೆಯನ್ನು ಆ ದಿಕ್ಕಿನಲ್ಲಿ ಒಂದು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದರು. "ಜನರು ಮಾಧ್ಯಮ ಮತ್ತು ಮನರಂಜನೆಯನ್ನು ಭಾರತದ ಮೃದು ಶಕ್ತಿ ಎಂದು ಹೇಳುತ್ತಾರೆ—ನಾನು ಅದನ್ನು ಭಾರತದ ನಿಜವಾದ ಶಕ್ತಿ ಎಂದು ಕರೆಯುತ್ತೇನೆ," ಎಂದು ಅಂಬಾನಿ ಅವರು ಜಾಗತಿಕ ಸಂಸ್ಕೃತಿ ಮತ್ತು ಸೃಜನಶೀಲತೆಯಲ್ಲಿ ದೇಶದ ಹೆಚ್ಚುತ್ತಿರುವ ಪ್ರಭಾವವನ್ನು ದೃಢಪಡಿಸಿದರು.
ಸೃಜನಶೀಲ ರಂಗವನ್ನು ಮರುರೂಪಿಸುತ್ತಿರುವ ಎರಡು ಪ್ರಮುಖ ಬದಲಾವಣೆಗಳನ್ನು ಅವರು ಗುರುತಿಸಿದರು: ಭೌಗೋಳಿಕ ಅರ್ಥವ್ಯವಸ್ಥೆ ಮತ್ತು ತಂತ್ರಜ್ಞಾನ. ವಿಶ್ವದ ಶೇಕಡಾ 85 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಜಾಗತಿಕ ದಕ್ಷಿಣದ ಆರ್ಥಿಕ ಶಕ್ತಿಯು ಹೆಚ್ಚುತ್ತಿರುವಂತೆ, ಕಂಟೆಂಟ್ ಕ್ರಿಯೇಷನ್ ಮತ್ತು ಬಳಕೆಯಲ್ಲಿ ಅದರ ಪಾತ್ರವೂ ಹೆಚ್ಚುತ್ತಿದೆ. ಅದೇ ಸಮಯದಲ್ಲಿ, ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಕಂಟೆಂಟ್ ಕ್ರಿಯೇಷನ್ ನಿಂದ ಹಿಡಿದು ವಿತರಣೆಯವರೆಗೆ ಮನರಂಜನೆಯ ಮೌಲ್ಯ ಸರಪಳಿಯ ಪ್ರತಿಯೊಂದು ಹಂತದಲ್ಲೂ ಕ್ರಾಂತಿಯನ್ನುಂಟುಮಾಡುತ್ತಿವೆ. "ಕೃತಕ ಬುದ್ಧಿಮತ್ತೆಯು ಕಲ್ಪನೆ ಮತ್ತು ಕಾರ್ಯಗತಗೊಳಿಸುವಿಕೆಯ ನಡುವಿನ ಗಡಿಗಳನ್ನು ಅಳಿಸಿಹಾಕುತ್ತಿದೆ. ಒಂದು ಶತಮಾನದ ಹಿಂದೆ ಮೂಕಿ ಕ್ಯಾಮೆರಾ ಸಿನೆಮಾಗೆ ಏನು ಮಾಡಿತೋ, ಅದಕ್ಕಿಂತ ಮಿಲಿಯನ್ ಪಟ್ಟು ಹೆಚ್ಚು ಪರಿವರ್ತನಾತ್ಮಕ ಕೆಲಸವನ್ನು ಇಂದು ಕೃತಕ ಬುದ್ಧಿಮತ್ತೆ ಮನರಂಜನೆಗೆ ಮಾಡುತ್ತಿದೆ," ಎಂದು ಅವರು ಹೇಳಿದರು.
ಭಾರತದ ಅನನ್ಯ ಸಾಮರ್ಥ್ಯಗಳನ್ನು ಎತ್ತಿ ತೋರಿಸುತ್ತಾ ಅಂಬಾನಿ ಅವರು, ಮೂರು ಪ್ರಮುಖ ಆಧಾರಗಳಾದ ಆಕರ್ಷಕ ಕಂಟೆಂಟ್, ಕ್ರಿಯಾಶೀಲ ಜನಸಂಖ್ಯೆ ಮತ್ತು ತಾಂತ್ರಿಕ ಮುನ್ನೋಟದ ಬಲದಿಂದ ಭಾರತವು ಮನರಂಜನಾ ಕ್ರಾಂತಿಗೆ ನಾಯಕತ್ವ ವಹಿಸಲು ಸನ್ನದ್ಧವಾಗಿದೆ ಎಂದು ಸಾರಿದರು. "ಭಾರತದ ಡಿಜಿಟಲ್ ಕ್ರಾಂತಿಯು ಕೇವಲ ದೊಡ್ಡ ಪ್ರಮಾಣದ ಕಥೆಯಲ್ಲ—ಇದು ಆಕಾಂಕ್ಷೆ, ಮಹತ್ವಾಕಾಂಕ್ಷೆ ಮತ್ತು ಪರಿವರ್ತನೆಯ ಕಥೆಯಾಗಿದೆ," ಎಂದು ಅವರು ದೃಢವಾಗಿ ನುಡಿದರು.
"ಧ್ರುವೀಕರಣಗೊಂಡ ಮತ್ತು ಅನಿಶ್ಚಿತ ಜಗತ್ತಿನಲ್ಲಿ, ಜನರು ಸಂತೋಷ, ಸಂಪರ್ಕ ಮತ್ತು ಪ್ರೇರಣೆಯನ್ನು ಬಯಸುತ್ತಾರೆ. ಭಾರತವು ಮನರಂಜನೆಗಾಗಿರುವ ಈ ಜಾಗತಿಕ ಹಸಿವನ್ನು ನೀಗಿಸುತ್ತದೆ. ವೇವ್ಸ್, ಪುನರುತ್ಥಾನಗೊಳ್ಳುತ್ತಿರುವ ಹೊಸ ಭಾರತದಿಂದ ಜಗತ್ತಿಗೆ ಭರವಸೆಯ ಸಂದೇಶವಾಗಲಿ" ಎಂದು ಅಂಬಾನಿಯವರು ತಮ್ಮ ಪ್ರಧಾನ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಆಶಾವಾದದ ಸಂದೇಶವನ್ನು ನೀಡಿದರು.
*****
Release ID:
(Release ID: 2125991)
| Visitor Counter:
24