WAVES BANNER 2025
ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವೇವ್ಸ್ 2025ರಲ್ಲಿ "ಈಶಾನ್ಯ ಭಾರತದಲ್ಲಿ ಸಿನೆಮಾದ ಸವಾಲುಗಳು ಮತ್ತು ಭವಿಷ್ಯ" ಕುರಿತ ಚರ್ಚೆಯಲ್ಲಿ ಅಸ್ಸಾಮಿ ಚಲನಚಿತ್ರ ನಿರ್ಮಾಪಕರು ಮತ್ತು ಕಲಾವಿದರು ಭಾಗವಹಿಸಿದರು


ಈಶಾನ್ಯವು ಪ್ರತಿಭೆಗಳ ಆಗರ: ಜಹ್ನು ಬರುವಾ

"ಅಸ್ಸಾಂ ತನ್ನ ಚಲನಚಿತ್ರಗಳನ್ನು ಉತ್ತಮವಾಗಿ ಮಾರಾಟ ಮಾಡಲು ಒಟಿಟಿ ಪ್ಲಾಟ್ ಫಾರ್ಮ್‌ಗಳ ಅಗತ್ಯವಿದೆ" ಎಂದು ಜತಿನ್ ಬೋರಾ ಹೇಳಿದರು

ನಮ್ಮ ಭಾಷೆಗಳು ಶತಮಾನಗಳ ಮೌಖಿಕ ಇತಿಹಾಸವನ್ನು ಹೊಂದಿವೆ: ಐಮೀ ಬರುವಾ

 Posted On: 01 MAY 2025 8:36PM |   Location: PIB Bengaluru

ಈಶಾನ್ಯ ಭಾರತೀಯ ಸಿನಿಮಾದ ಒಂದು ಮಹತ್ವಪೂರ್ಣ ಘಟ್ಟದಲ್ಲಿ, ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆದ ವಿಶ್ವ ಶ್ರವ್ಯ-ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025ರಲ್ಲಿ, “ಈಶಾನ್ಯ ಭಾರತದಲ್ಲಿ ಸಿನಿಮಾದ ಸವಾಲುಗಳು ಮತ್ತು ಭವಿಷ್ಯ” ಎಂಬ ವಿಷಯದ ಕುರಿತು ವಿಚಾರ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಗೋಷ್ಠಿಯು, ಆ ಪ್ರಾಂತ್ಯದ ಜೀವಂತಿಕೆ ತುಂಬಿದ ಸಿನಿಮಾ ಲೋಕವನ್ನು ಅನ್ವೇಷಿಸಲು, ಅಲ್ಲಿನ ಚಲನಚಿತ್ರೋದ್ಯಮದ ಕೆಲವು ಪ್ರಮುಖ ವ್ಯಕ್ತಿಗಳನ್ನು ಒಂದೆಡೆ ಸೇರಿಸಿತು.

ಈಶಾನ್ಯ ಪ್ರಾಂತ್ಯದ ಚಲನಚಿತ್ರ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಹ್ನು ಬರುವಾ, ಜತಿನ್ ಬೋರಾ, ರವಿ ಶರ್ಮಾ, ಐಮೀ ಬರುವಾಹ್, ಹಾವೊಬಮ್ ಪಬನ್ ಕುಮಾರ್ ಮತ್ತು ಡೊಮಿನಿಕ್ ಸಂಗ್ಮಾ ಸೇರಿದಂತೆ ಇತರ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ಮತ್ತು ನಟರು ಈ ಸಮಿತಿಯಲ್ಲಿ ಭಾಗವಹಿಸಿದ್ದರು.

ಈ ಚರ್ಚೆಯು ಆ ಪ್ರಾಂತ್ಯದ ಚಲನಚಿತ್ರ ನಿರ್ಮಾಪಕರು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಪ್ರಸ್ತಾಪಿಸಿತು, ಇದರಲ್ಲಿ ಅಸಮರ್ಪಕ ನಿರ್ಮಾಣ ಮೂಲಸೌಕರ್ಯ, ಭಾಷಾ ಅಡೆತಡೆಗಳು, ಸೀಮಿತ ಮಾರುಕಟ್ಟೆ ಪ್ರವೇಶ ಮತ್ತು ಸಾಂಸ್ಥಿಕ ಬೆಂಬಲದ ಕೊರತೆಗಳು ಸೇರಿವೆ. ಈ ಅಡೆತಡೆಗಳ ಹೊರತಾಗಿಯೂ, ಸಿನಿಮೀಯ ನಾವೀನ್ಯತೆ ಮತ್ತು ಸಾಂಸ್ಕೃತಿಕ ಕಥನಕಲೆಗೆ ಈಶಾನ್ಯ ವಲಯವು ಒಂದು ಫಲವತ್ತಾದ ನೆಲೆಯಾಗಿ ಉಳಿದಿದೆ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದವರು ಸರ್ವಾನುಮತದಿಂದ ಒಪ್ಪಿಕೊಂಡರು.

ಹಿರಿಯ ಚಲನಚಿತ್ರ ನಿರ್ಮಾಪಕ ಜಹ್ನು ಬರುವಾ ಅವರು ಈಶಾನ್ಯವು ಪ್ರತಿಭೆಗಳ ಆಗರ ಎಂದು ಅಭಿಪ್ರಾಯಪಟ್ಟರು. ಈ ಪ್ರದೇಶದ ಚಲನಚಿತ್ರ ನಿರ್ಮಾಪಕರು ಗಮನಾರ್ಹವಾದ ಕೆಲಸವನ್ನು ಮಾಡುತ್ತಿದ್ದಾರೆ. ಈ ಪ್ರದೇಶದ ಶ್ರೀಮಂತ ಸಾಮಾಜಿಕ-ಸಾಂಸ್ಕೃತಿಕ ರಚನೆ ಮತ್ತು ಹೇಳಲಾಗದ ಕಥೆಗಳ ಸಮೃದ್ಧಿಯ ಬಗ್ಗೆ ಅವರು ಒತ್ತಿ ಹೇಳಿದರು. ಅನೇಕ ಯುವ ಪ್ರತಿಭೆಗಳು ಹೊರಹೊಮ್ಮುತ್ತಿರುವುದರಿಂದ ಈಶಾನ್ಯ ಸಿನೆಮಾದ ಭವಿಷ್ಯವು ಬಹಳ ಉಜ್ವಲವಾಗಿದೆ ಎಂದು ಅವರು ಹೇಳಿದರು.

ಅಸ್ಸಾಂನ ಖ್ಯಾತ ನಟ ಜತಿನ್ ಬೋರಾ ಅವರು, ಈಶಾನ್ಯ ವಲಯದ ಚಲನಚಿತ್ರಗಳು ಪ್ರಾದೇಶಿಕ ಗಡಿಗಳನ್ನು ದಾಟಿ ತಲುಪುವಲ್ಲಿನ ಸೀಮಿತತೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಡಿಜಿಟಲ್ ವಿತರಣೆಯ ಅಗತ್ಯತೆಯ ಬಗ್ಗೆ ಮಾತನಾಡುತ್ತಾ, ಅವರು, "ಅಸ್ಸಾಂ ತನ್ನ ಚಲನಚಿತ್ರಗಳನ್ನು ಉತ್ತಮವಾಗಿ ಮಾರಾಟ ಮಾಡಲು ಒಟಿಟಿ (OTT) ವೇದಿಕೆಗಳನ್ನು ಹೊಂದುವ ಅಗತ್ಯವಿದೆ," ಎಂದರು. ಅಂತಹ ವೇದಿಕೆಗಳ ಸೃಷ್ಟಿಗೆ ಸರ್ಕಾರವು ಬೆಂಬಲ ನೀಡಬೇಕೆಂದು ಅವರು ಒತ್ತಾಯಿಸಿದರು, ಇದರಿಂದ ಪ್ರಾದೇಶಿಕ ಚಿತ್ರಗಳು ವಿಶಾಲ ಪ್ರೇಕ್ಷಕ ವರ್ಗವನ್ನು  ತಲುಪಲು ಸಹಾಯವಾಗುತ್ತದೆ. ಪ್ರಾದೇಶಿಕ ಚಲನಚಿತ್ರ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ದೀರ್ಘಕಾಲೀನ ನೀತಿಗಳನ್ನು ರೂಪಿಸುವಂತೆ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಕರೆ ನೀಡಿದರು. ದೃಢವಾದ ವಿತರಣಾ ಜಾಲವಿಲ್ಲದೆ, ಅತ್ಯುತ್ತಮ ಚಿತ್ರಗಳು ಸಹ ರಾಜ್ಯದ ಗಡಿಗಳನ್ನು ದಾಟಲು ಹೆಣಗಾಡುತ್ತವೆ ಎಂದು ಅವರು ಒತ್ತಿ ಹೇಳಿದರು.

ರವಿ ಶರ್ಮಾ ಅವರು ಈ ಪ್ರದೇಶದ ಸೃಜನಾತ್ಮಕ ಮೂಲಸೌಕರ್ಯದಲ್ಲಿ ವ್ಯವಸ್ಥಿತ ಹೂಡಿಕೆಯ ತಕ್ಷಣದ ಅಗತ್ಯದ ಬಗ್ಗೆ ಮಾತನಾಡಿದರು. ಪ್ರಾದೇಶಿಕ ಉದ್ಯಮದ ಬೆಳವಣಿಗೆಗೆ ಹಣಕಾಸಿನ ಬೆಂಬಲ ಮತ್ತು ಮಾರುಕಟ್ಟೆ ಮೂಲಸೌಕರ್ಯ ನಿರ್ಣಾಯಕ. ಈಶಾನ್ಯವು ಲಕ್ಷಾಂತರ ಸುಂದರವಾದ ಮತ್ತು ವಿಶಿಷ್ಟ ಕಥೆಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ನಟಿ-ನಿರ್ದೇಶಕಿ ಐಮೀ ಬರುವಾ ಅವರು ಭಾಷಾ ವೈವಿಧ್ಯತೆಯನ್ನು ಕಾಪಾಡುವಲ್ಲಿ ಸಿನೆಮಾದ ಪಾತ್ರದ ಬಗ್ಗೆ ಗಮನ ಹರಿಸಿದರು. “ನಮ್ಮ ಭಾಷೆಗಳು ಶತಮಾನಗಳ ಮೌಖಿಕ ಇತಿಹಾಸವನ್ನು ಹೊಂದಿವೆ. ಅವುಗಳನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸಿನಿಮಾ ಒಂದು ಪ್ರಬಲ ಮಾಧ್ಯಮ” ಎಂದು ಅವರು ಹೇಳಿದರು.

ಚಲನಚಿತ್ರ ನಿರ್ಮಾಪಕರಾದ ಹಾವೊಬಮ್ ಪಬನ್ ಕುಮಾರ್ ಮತ್ತು ಡೊಮಿನಿಕ್ ಸಂಗ್ಮಾ ಅವರು ಆ ಪ್ರಾಂತ್ಯದಲ್ಲಿನ ತಳಮಟ್ಟದ ಚಲನಚಿತ್ರ ನಿರ್ಮಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು, ಅನೇಕ ಕಥೆಗಾರರು ಯಾವುದೇ ಔಪಚಾರಿಕ ಬೆಂಬಲ ವ್ಯವಸ್ಥೆಗಳಿಲ್ಲದೆ ಕೆಲಸ ಮುಂದುವರೆಸುತ್ತಿದ್ದಾರೆ ಎಂಬುದರ ಬಗ್ಗೆ ಅವರು ಗಮನಸೆಳೆದರು.

ಈ ಅಧಿವೇಶನವು ಒಂದು ಆಶಾದಾಯಕ ದನಿಯಲ್ಲಿ ಮುಕ್ತಾಯಗೊಂಡಿತು; ಚರ್ಚೆಯಲ್ಲಿ ಭಾಗವಹಿಸಿದವರು ನೀತಿ ಸುಧಾರಣೆಗಳು, ಪ್ರಾದೇಶಿಕ ಸಹಯೋಗಗಳು, ಮತ್ತು ಸಾಂಪ್ರದಾಯಿಕ ಅಡೆತಡೆಗಳನ್ನು ಭೇದಿಸಲು ಒಟಿಟಿ (OTT) ವೇದಿಕೆಗಳ ವ್ಯೂಹಾತ್ಮಕ ಬಳಕೆಗೆ ಕರೆ ನೀಡಿದರು. ಎಲ್ಲಾ ಭಾಗೀದಾರರು, ಸರ್ಕಾರಿ ಸಂಸ್ಥೆಗಳು, ಖಾಸಗಿ ಹೂಡಿಕೆದಾರರು ಮತ್ತು ರಾಷ್ಟ್ರೀಯ ಸ್ಟುಡಿಯೋಗಳು ಈಶಾನ್ಯ ವಲಯದ ಸಿನಿಮೀಯ ಧ್ವನಿಗಳನ್ನು ಗುರುತಿಸಿ ಉನ್ನತೀಕರಿಸಲು ಒಟ್ಟಾಗಿ ಕೆಲಸ ಮಾಡುವಂತೆ ಅವರು ಒತ್ತಾಯಿಸಿದರು.

 

*****


Release ID: (Release ID: 2125988)   |   Visitor Counter: 18