ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮೇ 1 ಮತ್ತು 2ರಂದು ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ


ಮುಂಬೈನಲ್ಲಿ ವಿಶ್ವ ದೃಶ್ಯ ಶ್ರವಣ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಸುಮಾರು 25 ದೇಶಗಳ ಸಚಿವರು ಭಾಗವಹಿಸಲಿರುವ ಜಾಗತಿಕ ಮಾಧ್ಯಮ ಸಂವಾದವನ್ನು ಭಾರತ ಆಯೋಜಿಸಲಿದೆ

ಕೇರಳದಲ್ಲಿ ವಿಝಿಂಜಂ ಅಂತಾರಾಷ್ಟ್ರೀಯ ಆಳ ನೀರಿನ ಬಹುಪಯೋಗಿ ಬಂದರು; ಪ್ರಧಾನಮಂತ್ರಿ ಅವರಿಂದ ರಾಷ್ಟ್ರಕ್ಕೆ ಸಮರ್ಪಣೆ

ಇದು ಭಾರತದ ಚೊಚ್ಚಲ ಮೀಸಲಾದ ಕಂಟೇನರ್ ಸರಕು ಸಾಗಣೆ ಬಂದರು

ಅಮರಾವತಿಯಲ್ಲಿ 58,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ

ಈ ಪ್ರದೇಶದಲ್ಲಿ ಸಂಪರ್ಕ ಹೆಚ್ಚಿಸುವ ಪ್ರಮುಖ ಉತ್ತೇಜನಾ ಕ್ರಮವಾಗಿ, ಆಂಧ್ರ ಪ್ರದೇಶದಲ್ಲಿ ಬಹು ರಸ್ತೆ ಮತ್ತು ರೈಲು ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ

Posted On: 30 APR 2025 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 1 ಮತ್ತು 2ರಂದು ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಮೇ 1ರಂದು ಮುಂಬೈಗೆ ಪ್ರಯಾಣಿಸಲಿದ್ದು, ಬೆಳಗ್ಗೆ 10.30ರ ಸುಮಾರಿಗೆ ವಿಶ್ವ ದೃಶ್ಯ ಶ್ರವಣ ಮತ್ತು ಮನರಂಜನಾ ಶೃಂಗಸಭೆ(ವೇವ್ಸ್-WAVES) ಉದ್ಘಾಟಿಸಲಿದ್ದಾರೆ.

ನಂತರ ಅವರು ಕೇರಳಕ್ಕೆ ಪ್ರಯಾಣಿಸಲಿದ್ದಾರೆ. ಮೇ 2ರಂದು ಬೆಳಗ್ಗೆ 10.30ರ ಸುಮಾರಿಗೆ ವಿಝಿಂಜಂ ಅಂತಾರಾಷ್ಟ್ರೀಯ ಆಳ ನೀರಿನ ಬಹುಪಯೋಗಿ ಬಂದರನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ಅವರು ಆಂಧ್ರ ಪ್ರದೇಶಕ್ಕೆ ಪ್ರಯಾಣಿಸಲಿದ್ದು, ಮಧ್ಯಾಹ್ನ 3:30ರ ಸುಮಾರಿಗೆ ಅಮರಾವತಿಯಲ್ಲಿ 58,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ಮಾಡಿ, ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಭಾರತದ ಚೊಚ್ಚಲ ವಿಶ್ವ ದೃಶ್ಯ ಶ್ರವಣ ಮತ್ತು ಮನರಂಜನಾ ಶೃಂಗಸಭೆ ವೇವ್ಸ್(WAVES)-2025ಅನ್ನು ಉದ್ಘಾಟಿಸಲಿದ್ದಾರೆ. "ಸೃಷ್ಟಿಕರ್ತರನ್ನು ಸಂಪರ್ಕಿಸುವುದು, ದೇಶಗಳನ್ನು ಸಂಪರ್ಕಿಸುವುದು" ಎಂಬ ಟ್ಯಾಗ್‌ಲೈನ್‌ನೊಂದಿಗೆ 4 ದಿನಗಳ ಶೃಂಗಸಭೆಯು ವಿಶ್ವಾದ್ಯಂತದ ವಿಷಯ ಸೃಷ್ಟಿಕರ್ತರು, ನವೋದ್ಯಮಗಳು, ಉದ್ಯಮ ನಾಯಕರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುವ ಮೂಲಕ ಭಾರತವನ್ನು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಇರಿಸಲು ದೇಶವು ಸಜ್ಜಾಗಿದೆ.

ಉಜ್ವಲ ಭವಿಷ್ಯ ರೂಪಿಸಲು ಸೃಜನಶೀಲತೆ, ತಂತ್ರಜ್ಞಾನ ಮತ್ತು ಪ್ರತಿಭೆಯನ್ನು ಬಳಸಿಕೊಳ್ಳುವ ಪ್ರಧಾನಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ ವೇವ್ಸ್  ಚಲನಚಿತ್ರಗಳು, ಒಟಿಟಿ, ಗೇಮಿಂಗ್, ಕಾಮಿಕ್ಸ್, ಡಿಜಿಟಲ್ ಮಾಧ್ಯಮ, ಎಐ, ಎವಿಜಿಸಿ-ಎಕ್ಸ್ಆರ್, ಪ್ರಸಾರ ಮತ್ತು ಉದಯೋನ್ಮುಖ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ, ಇದು ಭಾರತದ ಮಾಧ್ಯಮ ಮತ್ತು ಮನರಂಜನಾ ಪರಾಕ್ರಮದ ಸಮಗ್ರ ಪ್ರದರ್ಶನವಾಗಿದೆ. 2029ರ ವೇಳೆಗೆ 50 ಶತೋಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆಯನ್ನು ತೆರೆದಿಡುವ ಗುರಿಯನ್ನು ವೇವ್ಸ್ ಹೊಂದಿದೆ, ಅಲ್ಲದೆ ಜಾಗತಿಕ ಮನರಂಜನಾ ಆರ್ಥಿಕತೆಯಲ್ಲಿ ಭಾರತದ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ.

ವೇವ್ಸ್-2025 ರಲ್ಲಿ ಭಾರತವು ಇದೇ ಮೊದಲ ಬಾರಿಗೆ ಜಾಗತಿಕ ಮಾಧ್ಯಮ ಸಂವಾದ (ಜಿಎಂಡಿ) ಆಯೋಜಿಸಲಿದೆ, ಇದರಲ್ಲಿ 25 ದೇಶಗಳ ಸಚಿವರು ಭಾಗವಹಿಸಲಿದ್ದಾರೆ. ಇದು ಜಾಗತಿಕ ಮಾಧ್ಯಮ ಮತ್ತು ಮನರಂಜನಾ ವಲಯದೊಂದಿಗೆ ಭಾರತದ ತೊಡಗಿಸಿಕೊಳ್ಳುವಿಕೆಯು ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ. ಶೃಂಗಸಭೆಯು 6,100ಕ್ಕೂ ಹೆಚ್ಚು ಖರೀದಿದಾರರು, 5,200 ಮಾರಾಟಗಾರರು ಮತ್ತು 2,100 ಯೋಜನೆಗಳನ್ನು ಹೊಂದಿರುವ ಜಾಗತಿಕ ಇ-ಮಾರುಕಟ್ಟೆಯಾದ ವೇವ್ಸ್ ಬಜಾರ್ ಅನ್ನು ಸಹ ಒಳಗೊಂಡಿರುತ್ತದೆ. ಇದು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಖರೀದಿದಾರರು ಮತ್ತು ಮಾರಾಟಗಾರರನ್ನು ಸಂಪರ್ಕಿಸುವ ಗುರಿ ಹೊಂದಿದೆ, ವ್ಯಾಪಕ ಜಾಲ ಮತ್ತು ವ್ಯಾಪಾರ ಅವಕಾಶಗಳನ್ನು ಈ ಶೃಂಗಸಭೆ ಖಚಿತಪಡಿಸುತ್ತದೆ.

ಪ್ರಧಾನಮಂತ್ರಿ ಅವರು ಕ್ರಿಯೇಟೋಸ್ಪಿಯರ್‌ಗೆ ಭೇಟಿ ನೀಡಲಿದ್ದಾರೆ, ಸುಮಾರು 1  ವರ್ಷದ ಹಿಂದೆ ಆರಂಭಿಸಲಾದ 32 ಕ್ರಿಯೇಟ್ ಇನ್ ಇಂಡಿಯಾ ಸವಾಲುಗಳಿಂದ ಆಯ್ಕೆಯಾದ ಸೃಷ್ಟಿಕರ್ತರೊಂದಿಗೆ ಅವರು ಸಂವಹನ ನಡೆಸಲಿದ್ದಾರೆ, ಇದಕ್ಕೆ ಒಂದು ಲಕ್ಷಕ್ಕೂ ಹೆಚ್ಚಿನ ನೋಂದಣಿಗಳು ಆಗಿವೆ. ಪ್ರಧಾನಿ ಅವರು ಭಾರತ್ ಪೆವಿಲಿಯನ್‌ಗೆ ಸಹ ಭೇಟಿ ನೀಡಲಿದ್ದಾರೆ.

ವೇವ್ಸ್-2025 90ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ, 10,000ಕ್ಕೂ ಹೆಚ್ಚು ಪ್ರತಿನಿಧಿಗಳು, 1,000 ಸೃಷ್ಟಿಕರ್ತರು, 300+ ಕಂಪನಿಗಳು ಮತ್ತು 350+ ನವೋದ್ಯಮಗಳು ಇದರಲ್ಲಿ ಸೇರಿವೆ. ಈ ಶೃಂಗಸಭೆಯು 42 ಸಮಗ್ರ ಕಲಾಪಗಳು, 39 ಬ್ರೇಕ್‌ಔಟ್ ಅಧಿವೇಶನಗಳು, ಪ್ರಸಾರ, ಮಾಹಿತಿ ಮನರಂಜನೆ, ಎವಿಜಿಸಿ-ಎಕ್ಸ್ಆರ್, ಚಲನಚಿತ್ರಗಳು ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ವೈವಿಧ್ಯಮಯ ವಲಯಗಳನ್ನು ವ್ಯಾಪಿಸಿರುವ 32 ಮಾಸ್ಟರ್‌ ಕ್ಲಾಸ್‌ಗಳನ್ನು ಒಳಗೊಂಡಿರುತ್ತದೆ.

ಕೇರಳದಲ್ಲಿ ಪ್ರಧಾನಮಂತ್ರಿ

8,900 ಕೋಟಿ ರೂ. ಮೌಲ್ಯದ ವಿಝಿಂಜಂ ಅಂತಾರಾಷ್ಟ್ರೀಯ ಆಳ ಜಲ ಬಹುಪಯೋಗಿ ಬಂದರನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ದೇಶದ ಮೊದಲ ಮೀಸಲಾದ ಕಂಟೇನರ್ ಸರಕು ಸಾಗಣೆಯ ಬಂದರು ಆಗಿದ್ದು, ಇದು ವಿಕಸಿತ ಭಾರತದ ಏಕೀಕೃತ ದೃಷ್ಟಿಕೋನದ ಭಾಗವಾಗಿ, ಭಾರತದ ಕಡಲ ವಲಯದಲ್ಲಿ ಮಾಡಲಾಗುತ್ತಿರುವ ಪರಿವರ್ತನಾತ್ಮಕ ಪ್ರಗತಿಯನ್ನು ಪ್ರತಿನಿಧಿಸುತ್ತದೆ.

ಕಾರ್ಯತಂತ್ರ ಪ್ರಾಮುಖ್ಯತೆ ಹೊಂದಿರುವ ವಿಝಿಂಜಂ ಬಂದರನ್ನು ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ, ಸರಕು ಸಾಗಣೆ ದಕ್ಷತೆ ಹೆಚ್ಚಿಸಲು ಮತ್ತು ಸರಕು ಸಾಗಣೆಗಾಗಿ ವಿದೇಶಿ ಬಂದರುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಕೊಡುಗೆ ನೀಡುವ ಪ್ರಮುಖ ಆದ್ಯತೆಯ ಯೋಜನೆಯಾಗಿ ಗುರುತಿಸಲ್ಪಟ್ಟಿದೆ. ಸುಮಾರು 20 ಮೀಟರ್‌ಗಳಷ್ಟು ನೈಸರ್ಗಿಕ ಆಳವಾದ ಡ್ರಾಫ್ಟ್ ಮತ್ತು ವಿಶ್ವದ ಅತ್ಯಂತ ಜನನಿಬಿಡ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿರುವ ಈ ಸ್ಥಳವು ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ.

ಆಂಧ್ರ ಪ್ರದೇಶದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಅಮರಾವತಿಯಲ್ಲಿ 58,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ದೇಶಾದ್ಯಂತ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸಂಪರ್ಕ ಖಚಿತಪಡಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಅವರು ಆಂಧ್ರ ಪ್ರದೇಶದಲ್ಲಿ 7 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿವಿಧ ವಿಭಾಗಗಳ ವಿಸ್ತರಣೆ, ರಸ್ತೆ ಮೇಲ್ಸೇತುವೆ ಮತ್ತು ಸಬ್‌ವೇ ನಿರ್ಮಾಣ ಸೇರಿವೆ. ಈ ಯೋಜನೆಗಳು ರಸ್ತೆ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ; ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ತಿರುಪತಿ, ಶ್ರೀಕಾಳಹಸ್ತಿ, ಮಲಕೊಂಡ ಮತ್ತು ಉದಯಗಿರಿ ಕೋಟೆಯಂತಹ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ತಡೆರಹಿತ ಸಂಪರ್ಕ ಒದಗಿಸುತ್ತವೆ.

ಸಂಪರ್ಕ ಮತ್ತು ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿರುವ ರೈಲ್ವೆ ಯೋಜನೆಗಳನ್ನು ಪ್ರಧಾನಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬುಗ್ಗನಪಲ್ಲಿ ಸಿಮೆಂಟ್ ನಗರ ಮತ್ತು ಪಣ್ಯಂ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗ, ರಾಯಲಸೀಮಾ ಮತ್ತು ಅಮರಾವತಿ ನಡುವೆ ಸಂಪರ್ಕ ಹೆಚ್ಚಳ ಮತ್ತು ನ್ಯೂ ವೆಸ್ಟ್ ಬ್ಲಾಕ್ ಹಟ್ ಕ್ಯಾಬಿನ್ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ 3ನೇ ರೈಲು ಮಾರ್ಗ ನಿರ್ಮಣ ಈ ಯೋಜನೆಗಳಲ್ಲಿ ಸೇರಿವೆ.

ಪ್ರಧಾನಮಂತ್ರಿ ಅವರು 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಒಂದು ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿವಿಧ ವಿಭಾಗಗಳ ವಿಸ್ತರಣೆ, ಎತ್ತರಿಸಿದ ಕಾರಿಡಾರ್ ನಿರ್ಮಾಣ, ಅರ್ಧ ಕ್ಲೋವರ್ ಲೀಫ್ ಮತ್ತು ರಸ್ತೆ ಮೇಲ್ಸೇತುವೆ ನಿರ್ಮಾಣ ಸೇರಿವೆ. ಈ ಯೋಜನೆಗಳು ಸಂಪರ್ಕ, ಅಂತಾರಾಜ್ಯ ಪ್ರಯಾಣವನ್ನು ಸುಧಾರಿಸುತ್ತದೆ, ದಟ್ಟಣೆ ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಸರಕು ಸಾಗಣೆ ದಕ್ಷತೆಯನ್ನು ಸುಧಾರಿಸುತ್ತದೆ. ಗುಂತಕಲ್ ಪಶ್ಚಿಮ ಮತ್ತು ಮಲ್ಲಪ್ಪ ಗೇಟ್ ನಿಲ್ದಾಣಗಳ ನಡುವೆ ರೈಲ್ ಓವರ್ ರೈಲ್ ನಿರ್ಮಾಣವು ಸರಕು ರೈಲುಗಳ  ಬೈಪಾಸ್ ನಿರ್ಮಾಣ ಮತ್ತು ಗುಂತಕಲ್ ಜಂಕ್ಷನ್‌ನಲ್ಲಿ ದಟ್ಟಣೆ ಕಡಿಮೆ ಮಾಡುವ ಗುರಿ ಹೊಂದಿದೆ.

11,240 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಶಾಸಕಾಂಗ ಸಭೆ, ಹೈಕೋರ್ಟ್, ಸಚಿವಾಲಯ, ಇತರೆ ಆಡಳಿತ ಕಟ್ಟಡಗಳು ಮತ್ತು 5,200ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಕಟ್ಟಡಗಳು ಸೇರಿದಂತೆ ಬಹುಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು 17,400 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಭೂತಳದ ಉಪಯುಕ್ತತೆಗಳು ಮತ್ತು ಸುಧಾರಿತ ಪ್ರವಾಹ ನಿರ್ವಹಣಾ ವ್ಯವಸ್ಥೆಗಳೊಂದಿಗೆ 320 ಕಿ.ಮೀ. ವಿಶ್ವ ದರ್ಜೆಯ ಸಾರಿಗೆ ಜಾಲವನ್ನು ಒಳಗೊಂಡಿರುವ ಬೃಹತ್ ಮೂಲಸೌಕರ್ಯ ಮತ್ತು ಪ್ರವಾಹ ತಗ್ಗಿಸುವಿಕೆ ಯೋಜನೆಗಳನ್ನು ಸಹ ಒಳಗೊಂಡಿದೆ. ಭೂ ಸಂಗ್ರಹಣಾ ಯೋಜನೆಯ ಮೂಲಸೌಕರ್ಯ ಯೋಜನೆಗಳು ರಾಜಧಾನಿ ಅಮರಾವತಿಯಲ್ಲಿ ಕೇಂದ್ರ ಮೀಡಿಯನ್‌ಗಳು, ಸೈಕಲ್ ಟ್ರ್ಯಾಕ್‌ಗಳು ಮತ್ತು ಸಂಯೋಜಿತ ಉಪಯುಕ್ತತೆಗಳನ್ನು ಹೊಂದಿರುವ 1,281 ಕಿ.ಮೀ. ರಸ್ತೆಗಳನ್ನು ಒಳಗೊಂಡಿರುತ್ತವೆ, ಇದರ ಮೌಲ್ಯ ರೂ. 20,400 ಕೋಟಿಗೂ ಹೆಚ್ಚು.

ಪ್ರಧಾನಮಂತ್ರಿ ಅವರು ಆಂಧ್ರ ಪ್ರದೇಶದ ನಾಗಯಲಂಕಾದಲ್ಲಿ ಸುಮಾರು ರೂ. 1,460 ಕೋಟಿ ಮೌಲ್ಯದ ಕ್ಷಿಪಣಿ ಪರೀಕ್ಷಾ ಶ್ರೇಣಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ದೇಶದ ರಕ್ಷಣಾ ಸನ್ನದ್ಧತೆ ಹೆಚ್ಚಿಸುವ ಉಡಾವಣಾ ಕೇಂದ್ರವಾಗಿದ್ದು, ತಾಂತ್ರಿಕ ಉಪಕರಣ ಸೌಲಭ್ಯಗಳು, ಸ್ಥಳೀಯ ರಾಡಾರ್‌ಗಳು, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.

ಪ್ರಧಾನಮಂತ್ರಿ ಅವರು ವಿಶಾಖಪಟ್ಟಣಂನ ಮಧುರವಾಡದಲ್ಲಿ ಪಿಎಂ ಏಕ್ತಾ ಮಾಲ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಏಕೀಕರಣ ಬೆಳೆಸುವುದು, ಮೇಕ್ ಇನ್ ಇಂಡಿಯಾ ಉಪಕ್ರಮ ಬೆಂಬಲಿಸುವುದು, ಒಂದು ಜಿಲ್ಲೆ ಒಂದು ಉತ್ಪನ್ನವನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಗ್ರಾಮೀಣ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವುದು ಮತ್ತು ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಕಲ್ಪಿಸಲಾಗಿದೆ.

 

*****

 

 


 

 


(Release ID: 2125432) Visitor Counter : 13