ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವೈಯುಜಿಎಂ ಇನ್ನೋವೇಶನ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು


ಯುವಜನರನ್ನು ಸ್ವಾವಲಂಬಿಗಳನ್ನಾಗಿಸುವ ಮತ್ತು ಭಾರತವನ್ನು ಜಾಗತಿಕ ಇನೋವೇಶನ್ ಕೇಂದ್ರವಾಗಿ ರೂಪಿಸುವ ಕೌಶಲ್ಯಗಳೊಂದಿಗೆ ಸಶಕ್ತಗೊಳಿಸುವುದು ನಮ್ಮ ಉದ್ದೇಶವಾಗಿದೆ: ಪ್ರಧಾನಮಂತ್ರಿ

21ನೇ ಶತಮಾನದ ಅಗತ್ಯಗಳಿಗೆ ತಕ್ಕಂತೆ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾವು ಆಧುನೀಕರಿಸುತ್ತಿದ್ದೇವೆ: ಪ್ರಧಾನಮಂತ್ರಿ

ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಜಾಗತಿಕ ಶಿಕ್ಷಣದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ: ಪ್ರಧಾನಮಂತ್ರಿ

'ಒಂದು ರಾಷ್ಟ್ರ, ಒಂದು ಚಂದಾದಾರಿಕೆ' ಯೋಜನೆಯು ಸರ್ಕಾರವು ಯುವಕರ ಅಗತ್ಯಗಳನ್ನು ಅರಿತಿದೆ ಎಂಬ ಭರವಸೆಯನ್ನು ನೀಡಿದೆ. ಇಂದು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ಸಂಶೋಧನಾ ನಿಯತಕಾಲಿಕೆಗಳಿಗೆ ಸುಲಭವಾಗಿ ಪ್ರವೇಶ ದೊರೆಯುತ್ತಿದೆ: ಪ್ರಧಾನಮಂತ್ರಿ

ಭಾರತದ ವಿಶ್ವವಿದ್ಯಾಲಯ ಕ್ಯಾಂಪಸ್ಗಳು ಯುವಶಕ್ತಿಯು ಕ್ರಾಂತಿಕಾರಿ ಆವಿಷ್ಕಾರಗಳಿಗೆ ಕಾರಣವಾಗುವ ಕ್ರಿಯಾಶೀಲ ಕೇಂದ್ರಗಳಾಗಿ ಬೆಳೆಯುತ್ತಿವೆ: ಪ್ರಧಾನಮಂತ್ರಿ

ಪ್ರ ತಿಭೆ, ಮನೋಭಾವ ಮತ್ತು ತಂತ್ರಜ್ಞಾನದ ತ್ರಿವೇಣಿ ಸಂಗಮವು ಭಾರತದ ಭವಿಷ್ಯವನ್ನು ಪರಿವರ್ತಿಸುತ್ತದೆ: ಪ್ರಧಾನಮಂತ್ರಿ

ಕಲ್ಪನೆಯಿಂದ ಮೂಲಮಾದರಿ ಮತ್ತು ಉತ್ಪನ್ನದವರೆಗಿನ ಪ್ರಯಾಣವು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪೂರ್ಣಗೊಳ್ಳುವುದು ಬಹಳ ಮುಖ್ಯ: ಪ್ರಧಾನಮಂತ್ರಿ

ನಾವು ಮೇಕ್ AI ಇನ್ ಇಂಡಿಯಾ ಎಂಬ ದೃಷ್ಟಿಕೋನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಮತ್ತು ನಮ್ಮ ಗುರಿ ಮೇಕ್ AI ವರ್ಕ್ ಫಾರ್ ಇಂಡಿಯಾ: ಪ್ರಧಾನಮಂತ್ರಿ

Posted On: 29 APR 2025 12:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ವೈಯುಜಿಎಂ ಇನ್ನೋವೇಶನ್ ಸಮಾವೇಶವನ್ನುದ್ದೇಶಿಸಿ  (YUGM Innovation Conclave) ಮಾತನಾಡಿದರು. ಈ ಸಂದರ್ಭದಲ್ಲಿ ಅವರು, ಸರ್ಕಾರಿ ಅಧಿಕಾರಿಗಳು, ಶೈಕ್ಷಣಿಕ ವಲಯದವರು ಹಾಗೂ ವಿಜ್ಞಾನ ಮತ್ತು ಸಂಶೋಧನಾ ವೃತ್ತಿಪರರ ಈ ಮಹತ್ವದ ಸಮಾಗಮವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಎಲ್ಲಾ ಪಾಲುದಾರರ ಈ ಸಂಗಮವೇ "YUGM" ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ವಿಕಸಿತ ಭಾರತಕ್ಕಾಗಿ ಭವಿಷ್ಯದ ತಂತ್ರಜ್ಞಾನಗಳನ್ನು ಮುನ್ನಡೆಸುವ ಗುರಿ ಹೊಂದಿರುವ ಸಹಯೋಗವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಮೂಲಕ, ಭಾರತದ ನಾವೀನ್ಯತಾ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಡೀಪ್-ಟೆಕ್ನಲ್ಲಿ (Deep-tech) ಅದರ ಪಾತ್ರವನ್ನು ಬಲಪಡಿಸುವ ಪ್ರಯತ್ನಗಳು ಇನ್ನಷ್ಟು ವೇಗವನ್ನು ಪಡೆದುಕೊಳ್ಳಲಿವೆ ಎಂದು ಪ್ರಧಾನಮಂತ್ರಿಯವರು ವಿಶ್ವಾಸ ವ್ಯಕ್ತಪಡಿಸಿದರು. ಅವರು AI, ಇಂಟೆಲಿಜೆಂಟ್‌ ಸಿಸ್ಟಮ್ ಹಾಗೂ ಜೈವಿಕ ವಿಜ್ಞಾನ (Biosciences), ಜೈವಿಕ ತಂತ್ರಜ್ಞಾನ (Biotechnology), ಆರೋಗ್ಯ (Health) ಮತ್ತು ವೈದ್ಯಕೀಯ (Medicine) ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಐಐಟಿ ಕಾನ್ಪುರ ಮತ್ತು ಐಐಟಿ ಬಾಂಬೆಯಲ್ಲಿ ಸೂಪರ್ ಹಬ್ಗಳ (Super hubs) ಉದ್ಘಾಟನೆಯನ್ನು ಪ್ರಸ್ತಾಪಿಸಿದರು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (National Research Foundation) ಸಹಯೋಗದೊಂದಿಗೆ ಸಂಶೋಧನೆಯನ್ನು ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸುವ 'ವಾಧ್ವಾನಿ ಇನ್ನೋವೇಶನ್ ನೆಟ್ವರ್ಕ್' (Wadhwani Innovation Network) ನ ಪ್ರಾರಂಭದ ಬಗ್ಗೆಯೂ ಅವರು ಉಲ್ಲೇಖಿಸಿದರು. ಪ್ರಧಾನಿಯವರು ವಾಧ್ವಾನಿ ಫೌಂಡೇಶನ್, ಐಐಟಿಗಳು ಮತ್ತು ಈ ಉಪಕ್ರಮಗಳಲ್ಲಿ ಭಾಗಿಯಾಗಿರುವ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು. 1 ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಹಯೋಗದ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಶ್ರೀ ರೊಮೇಶ್ ವಾಧ್ವಾನಿಯವರ ಸಮರ್ಪಣೆ ಮತ್ತು ಸಕ್ರಿಯ ಪಾತ್ರಕ್ಕಾಗಿ ಅವರು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.   

ನಿಜವಾದ ಜೀವನವೆಂದರೆ ಸೇವೆ ಮತ್ತು ನಿಸ್ವಾರ್ಥತೆಯಲ್ಲಿ ಬದುಕುವುದು ಎಂಬ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿದ ಶ್ರೀ ಮೋದಿಯವರು, ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೂಡ ಸೇವೆಯ ಮಾಧ್ಯಮಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ವಾಧ್ವಾನಿ ಫೌಂಡೇಶನ್ ನಂತಹ ಸಂಸ್ಥೆಗಳು ಹಾಗೂ ಶ್ರೀ ರೋಮೇಶ್ ವಾಧ್ವಾನಿ ಮತ್ತು ಅವರ ತಂಡದ ಪ್ರಯತ್ನಗಳು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿರುವುದನ್ನು ಕಂಡು ತಾವು ಸಂತೃಪ್ತಿ ವ್ಯಕ್ತಪಡಿಸಿದರು. ವಿಭಜನೆಯ ನಂತರದ ಪರಿಣಾಮಗಳು, ಜನ್ಮಸ್ಥಳದಿಂದ ಸ್ಥಳಾಂತರ, ಬಾಲ್ಯದಲ್ಲಿ ಪೋಲಿಯೊ ವಿರುದ್ಧ ಹೋರಾಟ ಮುಂತಾದ ಸಂಕಷ್ಟಗಳನ್ನು ಎದುರಿಸಿ, ಈ ಎಲ್ಲಾ ಸವಾಲುಗಳನ್ನು ಮೀರಿ ಬೃಹತ್ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದ ಶ್ರೀ ವಾಧ್ವಾನಿಯವರ ಅಸಾಧಾರಣ ಜೀವನ ಪಯಣವನ್ನು ಅವರು ಒತ್ತಿ ಹೇಳಿದರು. ಶ್ರೀ ವಧ್ವಾನಿಯವರು ತಮ್ಮ ಯಶಸ್ಸನ್ನು ಭಾರತದ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಿಗೆ ಸಮರ್ಪಿಸಿರುವುದನ್ನು ಶ್ರೀ ಮೋದಿ ಶ್ಲಾಘಿಸಿದರು, ಇದನ್ನು ಒಂದು ಅನುಕರಣೀಯ ಕಾರ್ಯ ಎಂದು ಬಣ್ಣಿಸಿದರು. ಶಾಲಾ ಶಿಕ್ಷಣ, ಅಂಗನವಾಡಿ ತಂತ್ರಜ್ಞಾನಗಳು ಮತ್ತು ಕೃಷಿ-ತಂತ್ರಜ್ಞಾನ ಉಪಕ್ರಮಗಳಿಗೆ ಫೌಂಡೇಶನ್ ನೀಡಿದ ಕೊಡುಗೆಗಳನ್ನು ಅವರು ಗುರುತಿಸಿದರು. ವಧ್ವಾನಿ ವಾಧ್ವಾನಿ ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Wadhwani Institute of Artificial Intelligence) ಸ್ಥಾಪನೆಯಂತಹ ಕಾರ್ಯಕ್ರಮಗಳಲ್ಲಿ ತಾವು ಈ ಹಿಂದೆ ಭಾಗವಹಿಸಿದ್ದನ್ನು ಅವರು ನೆನಪಿಸಿಕೊಂಡರು. ಫೌಂಡೇಶನ್ ಭವಿಷ್ಯದಲ್ಲಿ ಇನ್ನೂ ಅನೇಕ ಮೈಲಿಗಲ್ಲುಗಳನ್ನು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರಲ್ಲದೆ, ವಧ್ವಾನಿ ಫೌಂಡೇಶನ್ನ ಪ್ರಯತ್ನಗಳಿಗೆ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು.

ಯಾವುದೇ ರಾಷ್ಟ್ರದ ಭವಿಷ್ಯವು ಅದರ ಯುವಜನತೆಯ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಒತ್ತಿಹೇಳುತ್ತಾ ಮತ್ತು ಅವರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವ ಪ್ರಾಮುಖ್ಯತೆಯನ್ನು ಗುರುತಿಸುತ್ತಾ, ಈ ಸಿದ್ಧತೆಯಲ್ಲಿ ಶಿಕ್ಷಣ ವ್ಯವಸ್ಥೆಯು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ಹಾಗೂ 21ನೇ ಶತಮಾನದ ಅಗತ್ಯಗಳನ್ನು ಪೂರೈಸಲು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವ ಪ್ರಯತ್ನಗಳನ್ನು ಅವರು ಒತ್ತಿ ಹೇಳಿದರು. ಜಾಗತಿಕ ಶಿಕ್ಷಣದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP)ಯ ಪರಿಚಯವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಇದು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ತಂದಿರುವ ಮಹತ್ವದ ಬದಲಾವಣೆಗಳನ್ನು ಉಲ್ಲೇಖಿಸಿದರು. ಒಂದರಿಂದ ಏಳನೇ ತರಗತಿಗಳಿಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF), ಕಲಿಕಾ ಬೋಧನಾ ಸಾಮಗ್ರಿಗಳು (Learning Teaching Material) ಮತ್ತು ಹೊಸ ಪಠ್ಯಪುಸ್ತಕಗಳ ಅಭಿವೃದ್ಧಿಯ ಬಗ್ಗೆಯೂ ಅವರು ಉಲ್ಲೇಖಿಸಿದರು.

ಪಿಎಂ ಇ-ವಿದ್ಯಾ (PM e-Vidya) ಮತ್ತು ದೀಕ್ಷಾ (DIKSHA) ವೇದಿಕೆಗಳ ಅಡಿಯಲ್ಲಿ, ಕೃತಕ ಬುದ್ಧಿಮತ್ತೆ ಆಧಾರಿತ (AI-based) ಮತ್ತು ವಿಸ್ತರಿಸಬಹುದಾದ (scalable) ಡಿಜಿಟಲ್ ಶಿಕ್ಷಣ ಮೂಲಸೌಕರ್ಯ ವೇದಿಕೆಯಾದ – ‘ಒಂದು ರಾಷ್ಟ್ರ, ಒಂದು ಡಿಜಿಟಲ್ ಶಿಕ್ಷಣ ಮೂಲಸೌಕರ್ಯ’ ('One Nation, One Digital Education Infrastructure') ರಚನೆಯನ್ನು ಅವರು ಪ್ರಮುಖವಾಗಿ ತಿಳಿಸಿದರು. ಇದು 30ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಮತ್ತು ಏಳು ವಿದೇಶಿ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ಅನುವು ಮಾಡಿಕೊಡುತ್ತದೆ. ರಾಷ್ಟ್ರೀಯ ಕ್ರೆಡಿಟ್ ಫ್ರೇಮ್ವರ್ಕ್ (National Credit Framework) ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ವೈವಿಧ್ಯಮಯ ವಿಷಯಗಳನ್ನು ಅಧ್ಯಯನ ಮಾಡಲು ಸುಲಭಗೊಳಿಸಿದೆ, ಆಧುನಿಕ ಶಿಕ್ಷಣವನ್ನು ಒದಗಿಸುತ್ತಿದೆ ಮತ್ತು ಹೊಸ ವೃತ್ತಿ ಮಾರ್ಗಗಳನ್ನು ತೆರೆಯುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಭಾರತದ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. 2013-14ರಲ್ಲಿ ₹60,000 ಕೋಟಿಯಷ್ಟಿದ್ದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಮೇಲಿನ ಒಟ್ಟು ವೆಚ್ಚವು ₹1.25 ಲಕ್ಷ ಕೋಟಿಗೂ ಹೆಚ್ಚಾಗಿ ದ್ವಿಗುಣಗೊಂಡಿರುವುದನ್ನು, ಅತ್ಯಾಧುನಿಕ ಸಂಶೋಧನಾ ಪಾರ್ಕ್ಗಳ ಸ್ಥಾಪನೆಯನ್ನು, ಮತ್ತು ಸುಮಾರು 6,000 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸೆಲ್ ಗಳ (Research and Development Cells) ರಚನೆಯನ್ನು ಅವರು ಎತ್ತಿ ತೋರಿಸಿದರು. ಭಾರತದಲ್ಲಿ ನಾವೀನ್ಯತಾ ಸಂಸ್ಕೃತಿಯ (innovation culture) ತ್ವರಿತ ಬೆಳವಣಿಗೆಯ ಬಗ್ಗೆ ಅವರು ಉಲ್ಲೇಖಿಸಿದರು. 2014ರಲ್ಲಿ ಸುಮಾರು 40,000 ದಷ್ಟಿದ್ದ ಪೇಟೆಂಟ್ ಸಲ್ಲಿಕೆಗಳು (patent filings) 80,000ಕ್ಕೂ ಹೆಚ್ಚಾಗಿರುವುದನ್ನು ಉದಾಹರಿಸಿದ ಅವರು, ಇದು ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯು (intellectual property ecosystem) ಯುವಜನತೆಗೆ ನೀಡುತ್ತಿರುವ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸಲು ₹50,000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ (National Research Foundation - NRF) ಸ್ಥಾಪನೆ ಹಾಗೂ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಸಂಶೋಧನಾ ನಿಯತಕಾಲಿಕಗಳ ಪ್ರವೇಶವನ್ನು ಸುಗಮಗೊಳಿಸಿರುವ ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ('One Nation, One Subscription') ಉಪಕ್ರಮದ ಬಗ್ಗೆಯೂ ಪ್ರಧಾನಮಂತ್ರಿಯವರು ಮುಂದುವರಿದು ಪ್ರಮುಖವಾಗಿ ತಿಳಿಸಿದರು. ಪ್ರತಿಭಾವಂತ ವ್ಯಕ್ತಿಗಳು ತಮ್ಮ ವೃತ್ತಿಜೀವನವನ್ನು ಮುನ್ನಡೆಸುವಲ್ಲಿ ಯಾವುದೇ ಅಡೆತಡೆಗಳನ್ನು ಎದುರಿಸದಂತೆ ಖಚಿತಪಡಿಸುವ ಪ್ರಧಾನಮಂತ್ರಿ ಸಂಶೋಧನಾ ಫೆಲೋಶಿಪ್ ಬಗ್ಗೆಯೂ ಅವರು ಒತ್ತಿ ಹೇಳಿದರು.

ಇಂದಿನ ಯುವಕರು ಕೇವಲ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಾತ್ರ ಪರಿಣತರಾಗಿಲ್ಲ, ಬದಲಿಗೆ ತಾವೂ ಸಿದ್ಧರಾಗಿ, ಬದಲಾವಣೆ ತರುವವರು ಆಗಿ ರೂಪುಗೊಂಡಿದ್ದಾರೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು. ಭಾರತದ ಯುವ ಪೀಳಿಗೆಯು ವಿವಿಧ ವಲಯಗಳಲ್ಲಿನ ಸಂಶೋಧನೆಗೆ ನೀಡುತ್ತಿರುವ ಪರಿವರ್ತನಾಶೀಲ ಕೊಡುಗೆಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಉದಾಹರಣೆಗೆ, ಐಐಟಿ ಮದ್ರಾಸ್ನಲ್ಲಿ ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ, 422 ಮೀಟರ್ ಉದ್ದದ ವಿಶ್ವದ ಅತಿ ಉದ್ದದ ಹೈಪರ್ಲೂಪ್ ಪರೀಕ್ಷಾ ಟ್ರ್ಯಾಕ್ ನ ಕಾರ್ಯಾರಂಭದಂತಹ ಮೈಲಿಗಲ್ಲುಗಳನ್ನು ಅವರು ಉಲ್ಲೇಖಿಸಿದರು. ಬೆಂಗಳೂರಿನ ಐಐಎಸ್ಸಿ ಸೈಂಟಿಸ್ಟ್ಗಳು ನ್ಯಾನೋ ಮಟ್ಟದಲ್ಲಿ ಬೆಳಕನ್ನು ಕಂಟ್ರೋಲ್ ಮಾಡೋ ನ್ಯಾನೊಟೆಕ್ನಾಲಜಿ ಕಂಡುಹಿಡಿದಿದ್ದಾರೆ. ಮತ್ತೆ ಒಂದು ಚಿಕ್ಕ ಪದರದಲ್ಲಿ 16,000ಕ್ಕೂ ಹೆಚ್ಚು ರೀತಿಯಲ್ಲಿ ಡೇಟಾ ಸೇವ್ ಮಾಡಿ ಪ್ರೊಸೆಸ್ ಮಾಡುವ 'ಬ್ರೈನ್ ಆನ್ ಎ ಚಿಪ್' (brain on a chip)  ಅನ್ನು ಟೆಕ್ನಾಲಜಿಯನ್ನೂ ಅಭಿವೃದ್ಧಿಪಡಿಸಿದ್ದಾರೆ ಅಂತ ಅವರು ಹೇಳಿದರು. ಇಷ್ಟೇ ಅಲ್ಲ, ಕೆಲವೇ ವಾರಗಳ ಹಿಂದೆ ಭಾರತದದ ಮೊದಲ ಸ್ವಂತ MRI ಮಷೀನ್ ಕೂಡಾ ತಯಾರಾಗಿದೆ. 'ಇಂಡಿಯಾದ ಕಾಲೇಜು ಕ್ಯಾಂಪಸ್ ಗಳು ಯುವಕರ ಶಕ್ತಿಯಿಂದ ಹೊಸ ಹೊಸ ಸಂಶೋಧನೆಗಳ ತಾಣಗಳಾಗುತ್ತಿವೆ' ಅಂತ ಶ್ರೀ ಮೋದಿ ಹೇಳಿದರು. ಜಗತ್ತಿನ 2,000 ಕಾಲೇಜುಗಳಲ್ಲಿ ನಮ್ಮ 90ಕ್ಕೂ ಹೆಚ್ಚು ಯೂನಿವರ್ಸಿಟಿಗಳು ಉನ್ನತ ಶಿಕ್ಷಣದ ಶ್ರೇಯಾಂಕ (Higher Education Impact Rankings) ದಲ್ಲಿವೆ ಅಂತ ಹೇಳಿದರು.. ಕ್ಯೂಎಸ್ (QS) ವಿಶ್ವ ಶ್ರೇಯಾಂಕಗಳಲ್ಲಿ 2014ರಲ್ಲಿ ಬರೀ ಒಂಬತ್ತು ಇದ್ದ ನಮ್ಮ ಕಾಲೇಜುಗಳು 2025ರಲ್ಲಿ 46ಕ್ಕೆ ಏರಿವೆ. ಕಳೆದ ಹತ್ತು ವರ್ಷಗಳಲ್ಲಿ ಜಗತ್ತಿನ ಟಾಪ್ 500 ಕಾಲೇಜುಗಳ ಪಟ್ಟಿಯಲ್ಲೂ ನಮ್ಮ ಕಾಲೇಜುಗಳ ಸಂಖ್ಯೆ ಜಾಸ್ತಿಯಾಗಿದೆ. ನಮ್ಮ ಐಐಟಿ ಡೆಲ್ಲಿ ಅಬುಧಾಬಿಯಲ್ಲೂ, ಐಐಟಿ ಮದ್ರಾಸ್ ಟಾಂಜಾನಿಯಾದಲ್ಲೂ ಕ್ಯಾಂಪಸ್ ಶುರು ಮಾಡ್ತಿವೆ, ಇನ್ನು ಐಐಎಂ ಅಹಮದಾಬಾದ್ ದುಬೈನಲ್ಲೂ ಶುರು ಮಾಡಲಿದೆ. ದೊಡ್ಡ ದೊಡ್ಡ ವಿದೇಶಿ ಯೂನಿವರ್ಸಿಟಿಗಳೂ ಭಾರತದದಲ್ಲಿ ಕ್ಯಾಂಪಸ್ ತೆರೆಯುತ್ತಿವೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಓದಲು, ಸಂಶೋದನೆ ಮಾಡಲು ಮತ್ತೆ ಬೇರೆ ಬೇರೆ ಸಂಸ್ಕೃತಿಗಳ ಬಗ್ಗೆ ಕಲಿಯಲು ಅವಕಾಶ ಸಿಗುತ್ತದೆ ಅಂತ ಅವರು ತಿಳಿಸಿದರು. 

ಪ್ರತಿಭೆ, ಮನೋಧರ್ಮ ಮತ್ತು ತಂತ್ರಜ್ಞಾನ'ದ ತ್ರಿಶಕ್ತಿಯು (Talent, Temperament and Technology) ಭಾರತದ ಭವಿಷ್ಯವನ್ನು ಪರಿವರ್ತಿಸುತ್ತದೆ" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ತಂತ್ರಜ್ಞಾನದ ಪರಿಚಯ ನೀಡಲು ಈಗಾಗಲೇ 10,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳು (Atal Tinkering Labs) ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದ ಬಜೆಟ್ನಲ್ಲಿ ಇನ್ನೂ 50,000 ಲ್ಯಾಬ್ ಗಳನ್ನು ಸ್ಥಾಪಿಸುವ ಘೋಷಣೆಯಂತಹ ಉಪಕ್ರಮಗಳನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ನೀಡಲು ಪಿಎಂ ವಿದ್ಯಾ ಲಕ್ಷ್ಮಿ (PM Vidya Lakshmi) ಯೋಜನೆಯ ಪ್ರಾರಂಭ ಮತ್ತು ವಿದ್ಯಾರ್ಥಿಗಳ ಕಲಿಕೆಯನ್ನು ನೈಜ-ಜಗತ್ತಿನ ಅನುಭವವಾಗಿ ಪರಿವರ್ತಿಸಲು 7,000ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಇಂಟರ್ನ್ಶಿಪ್ ಸೆಲ್ ಗಳ (internship cells) ಸ್ಥಾಪನೆಯನ್ನು ಅವರು ಉಲ್ಲೇಖಿಸಿದರು.  ಯುವಕರಲ್ಲಿ ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಮತ್ತು ಅವರ ಸಂಯೋಜಿತ ಪ್ರತಿಭೆ, ಮನೋಧರ್ಮ ಮತ್ತು ತಾಂತ್ರಿಕ ಶಕ್ತಿಯು ಭಾರತವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.

ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವುದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಯವರು, 'ಕಲ್ಪನೆಯಿಂದ ಮೂಲಮಾದರಿ ಮತ್ತು ಉತ್ಪನ್ನದವರೆಗಿನ ಪ್ರಯಾಣವನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸುವುದು ಅತ್ಯಗತ್ಯ' ಎಂದರು. ಪ್ರಯೋಗಾಲಯದಿಂದ ಮಾರುಕಟ್ಟೆಗೆ ಇರುವ ಅಂತರವನ್ನು ಕಡಿಮೆ ಮಾಡುವುದರಿಂದ ಸಂಶೋಧನೆಯ ಫಲಿತಾಂಶಗಳು ಜನರಿಗೆ ವೇಗವಾಗಿ ತಲುಪುತ್ತವೆ, ಸಂಶೋಧಕರಿಗೆ ಪ್ರೇರಣೆ ಸಿಗುತ್ತದೆ ಮತ್ತು ಅವರ ಕಾರ್ಯಕ್ಕೆ ಸ್ಪಷ್ಟವಾದ ಪ್ರೋತ್ಸಾಹ ದೊರೆಯುತ್ತದೆ ಎಂದು ಅವರು ಪ್ರತಿಪಾದಿಸಿದರು. ಇದು ಸಂಶೋಧನೆ, ನಾವೀನ್ಯತೆ ಮತ್ತು ಮೌಲ್ಯವರ್ಧನೆಯ ಚಕ್ರವನ್ನು ತ್ವರಿತಗೊಳಿಸುತ್ತದೆ. ಒಂದು ಬಲವಾದ ಸಂಶೋಧನಾ ಪರಿಸರ ವ್ಯವಸ್ಥೆಗಾಗಿ ಕರೆ ನೀಡಿದ ಪ್ರಧಾನ ಮಂತ್ರಿಯವರು, ಸಂಶೋಧಕರಿಗೆ ಬೆಂಬಲ ನೀಡಲು ಮತ್ತು ಮಾರ್ಗದರ್ಶನ ನೀಡಲು ಶೈಕ್ಷಣಿಕ ಸಂಸ್ಥೆಗಳು, ಹೂಡಿಕೆದಾರರು ಮತ್ತು ಕೈಗಾರಿಕೆಗಳನ್ನು ಒತ್ತಾಯಿಸಿದರು. ಯುವಕರಿಗೆ ಮಾರ್ಗದರ್ಶನ ನೀಡುವಲ್ಲಿ, ಧನಸಹಾಯ ಒದಗಿಸುವಲ್ಲಿ ಮತ್ತು ಹೊಸ ಪರಿಹಾರಗಳನ್ನು ಒಟ್ಟಾಗಿ ಅಭಿವೃದ್ಧಿಪಡಿಸುವಲ್ಲಿ ಕೈಗಾರಿಕಾ ಮುಖಂಡರ ಸಂಭಾವ್ಯ ಪಾತ್ರವನ್ನು ಅವರು ಎತ್ತಿ ತೋರಿಸಿದರು. ಈ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ನಿಯಮಗಳನ್ನು ಸರಳಗೊಳಿಸಲು ಮತ್ತು ಅನುಮೋದನೆಗಳನ್ನು ತ್ವರಿತಗೊಳಿಸಲು ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್ ಕಂಪ್ಯೂಟಿಂಗ್, ಮುಂದುವರಿದ ವಿಶ್ಲೇಷಣೆ, ಬಾಹ್ಯಾಕಾಶ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನ ಮತ್ತು ಸಂಶ್ಲೇಷಿತ ಜೀವಶಾಸ್ತ್ರವನ್ನು ಸ್ಥಿರವಾಗಿ ಉತ್ತೇಜಿಸುವ ಅಗತ್ಯವನ್ನು ಪ್ರತಿಪಾದಿಸಿದ ಶ್ರೀ ಮೋದಿ ಅವರು, AI ಅಭಿವೃದ್ಧಿ ಮತ್ತು ಅಳವಡಿಕೆಯಲ್ಲಿ ಭಾರತದ ಅಗ್ರಸ್ಥಾನವನ್ನು ಎತ್ತಿ ತೋರಿಸಿದರು. ವಿಶ್ವದರ್ಜೆಯ ಮೂಲಸೌಕರ್ಯ, ಉನ್ನತ ಗುಣಮಟ್ಟದ ದತ್ತಾಂಶ ಸಮೂಹಗಳು ಮತ್ತು ಸಂಶೋಧನಾ ಸೌಕರ್ಯಗಳನ್ನು ನಿರ್ಮಿಸಲು 'ಭಾರತ-AI ಮಿಷನ್' ಅನ್ನು ಪ್ರಾರಂಭಿಸಿರುವುದನ್ನು ಅವರು ಉಲ್ಲೇಖಿಸಿದರು. ಪ್ರಮುಖ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸ್ಟಾರ್ಟ್ಅಪ್ಗಳ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ AI ಉತ್ಕೃಷ್ಟತಾ ಕೇಂದ್ರಗಳ ಹೆಚ್ಚುತ್ತಿರುವ ಸಂಖ್ಯೆಯ ಬಗ್ಗೆ ಅವರು ಗಮನ ಸೆಳೆದರು. 'ಮೇಕ್ AI ಇನ್ ಇಂಡಿಯಾ' (ಭಾರತದಲ್ಲಿ AI ತಯಾರಿಸಿ) ಎಂಬ ದೃಷ್ಟಿ ಮತ್ತು 'ಮೇಕ್ AI ವರ್ಕ್ ಫಾರ್ ಇಂಡಿಯಾ' (ಭಾರತಕ್ಕಾಗಿ AI ಕಾರ್ಯನಿರ್ವಹಿಸುವಂತೆ ಮಾಡಿ) ಎಂಬ ಗುರಿಯ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಇದಲ್ಲದೆ, IIT ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು IIT ಹಾಗೂ AIIMS ಸಹಯೋಗದೊಂದಿಗೆ ವೈದ್ಯಕೀಯ ಮತ್ತು ತಂತ್ರಜ್ಞಾನ ಶಿಕ್ಷಣವನ್ನು ಸಂಯೋಜಿಸುವ ಮೆಡಿಟೆಕ್ ಕೋರ್ಸ್ಗಳನ್ನು ಪರಿಚಯಿಸುವ ಬಜೆಟ್ ನಿರ್ಧಾರವನ್ನು ಅವರು ಉಲ್ಲೇಖಿಸಿದರು. ಭವಿಷ್ಯದ ತಂತ್ರಜ್ಞಾನಗಳಲ್ಲಿ ಭಾರತವನ್ನು 'ವಿಶ್ವದಲ್ಲೇ ಅತ್ಯುತ್ತಮ' ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಗುರಿಯೊಂದಿಗೆ ಈ ಉಪಕ್ರಮಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು. ತಮ್ಮ ಭಾಷಣದ ಕೊನೆಯಲ್ಲಿ, ಶಿಕ್ಷಣ ಸಚಿವಾಲಯ ಮತ್ತು ವಾಧ್ವಾನಿ ಫೌಂಡೇಶನ್ನ ಸಹಯೋಗದೊಂದಿಗೆ ರಚಿಸಲಾದ YUGM ನಂತಹ ಉಪಕ್ರಮಗಳು ಭಾರತದ ನಾವೀನ್ಯತೆಯ ಪರಿಸರವನ್ನು ಪುನಶ್ಚೇತನಗೊಳಿಸಬಹುದು ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ವಾಧ್ವಾನಿ ಫೌಂಡೇಶನ್ನ ನಿರಂತರ ಪ್ರಯತ್ನಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು ಮತ್ತು ಈ ಉದ್ದೇಶಗಳನ್ನು ಸಾಧಿಸುವಲ್ಲಿ ಇಂದಿನ ಕಾರ್ಯಕ್ರಮದ ಮಹತ್ವದ ಪ್ರಭಾವವನ್ನು ಒತ್ತಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಡಾ. ಜಿತೇಂದ್ರ ಸಿಂಗ್, ಶ್ರೀ ಜಯಂತ್ ಚೌಧರಿ, ಡಾ. ಸುಕಾಂತ ಮಜುಂದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿನ್ನೆಲೆ

YUGM (ಸಂಸ್ಕೃತದಲ್ಲಿ "ಸಂಗಮ" ಎಂದು ಅರ್ಥ) ಎಂಬುದು ಸರ್ಕಾರ, ಶೈಕ್ಷಣಿಕ ವಲಯ, ಉದ್ಯಮ ಮತ್ತು ಇನೋವೇಶನ್ ಪರಿಸರ ವ್ಯವಸ್ಥೆಯ ನಾಯಕರನ್ನು ಒಟ್ಟುಗೂಡಿಸುವ, ಈ ರೀತಿಯ ಮೊಟ್ಟಮೊದಲ ಕಾರ್ಯತಂತ್ರದ ಸಮಾವೇಶವಾಗಿದೆ. ವಾಧ್ವಾನಿ ಫೌಂಡೇಶನ್ (Wadhwani Foundation) ಮತ್ತು ಸರ್ಕಾರಿ ಸಂಸ್ಥೆಗಳ ಜಂಟಿ ಹೂಡಿಕೆಯೊಂದಿಗೆ, ಸುಮಾರು ₹1,400 ಕೋಟಿ ಮೊತ್ತದ ಸಹಯೋಗದ ಯೋಜನೆಯಿಂದ ಪ್ರೇರಿತವಾದ ಈ ಸಮಾವೇಶವು ಭಾರತದ ಇನೋವೇಶನ್ ಪಯಣಕ್ಕೆ ತನ್ನ ಕೊಡುಗೆಯನ್ನು ನೀಡುತ್ತದೆ.

ಪ್ರಧಾನಮಂತ್ರಿಯವರ ಸ್ವಾವಲಂಬಿ ಮತ್ತು ಇನೋವೇಷನ್-ನೇತೃತ್ವದ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಸಮಾವೇಶದ ಸಂದರ್ಭದಲ್ಲಿ ವಿವಿಧ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಲಾಗುವುದು. ಅವುಗಳಲ್ಲಿ ಐಐಟಿ ಕಾನ್ಪುರದಲ್ಲಿ (AI ಮತ್ತು ಇಂಟೆಲಿಜೆಂಟ್ ಸಿಸ್ಟಮ್ಸ್) ಮತ್ತು ಐಐಟಿ ಬಾಂಬೆಯಲ್ಲಿ (ಜೈವಿಕ ವಿಜ್ಞಾನ, ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ವೈದ್ಯಕೀಯ) ಸೂಪರ್ ಹಬ್ಗಳು; ಸಂಶೋಧನೆಯ ವಾಣಿಜ್ಯೀಕರಣವನ್ನು ಉತ್ತೇಜಿಸಲು ಉನ್ನತ ಸಂಶೋಧನಾ ಸಂಸ್ಥೆಗಳಲ್ಲಿ ವಾಧ್ವಾನಿ ಇನ್ನೋವೇಷನ್ ನೆಟ್ವರ್ಕ್ (WIN) ಕೇಂದ್ರಗಳು; ಮತ್ತು ಅಂತಿಮ ಹಂತದ ಪರಿವರ್ತನಾ ಯೋಜನೆಗಳಿಗೆ ಜಂಟಿಯಾಗಿ ಧನಸಹಾಯ ನೀಡಲು ಹಾಗೂ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದೊಂದಿಗೆ (Anusandhan National Research Foundation - ANRF) ಪಾಲುದಾರಿಕೆ ಸೇರಿವೆ.

ಸಮಾವೇಶವು ಸರ್ಕಾರಿ ಅಧಿಕಾರಿಗಳು, ಉನ್ನತ ಉದ್ಯಮ ಮತ್ತು ಶೈಕ್ಷಣಿಕ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ದುಂಡುಮೇಜಿನ ಸಭೆಗಳು ಮತ್ತು ಸಮಿತಿ ಚರ್ಚೆಗಳನ್ನೂ ಒಳಗೊಳ್ಳುತ್ತದೆ; ಸಂಶೋಧನೆಯನ್ನು ತ್ವರಿತವಾಗಿ ಪರಿಣಾಮಕಾರಿ ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡುವ ಕುರಿತು ಕ್ರಿಯಾ-ಆಧಾರಿತ ಸಂವಾದ; ಭಾರತದಾದ್ಯಂತದ ಅತ್ಯಾಧುನಿಕ ನಾವೀನ್ಯತೆಗಳನ್ನು ಒಳಗೊಂಡ 'ಡೀಪ್ ಟೆಕ್' (Deep Tech) ಸ್ಟಾರ್ಟ್ ಅಪ್ ಪ್ರದರ್ಶನ; ಮತ್ತು ಸಹಯೋಗಗಳು ಹಾಗೂ ಪಾಲುದಾರಿಕೆಗಳನ್ನು ಉತ್ತೇಜಿಸಲು ವಿವಿಧ ವಲಯಗಳಲ್ಲಿ ವಿಶೇಷವಾದ ನೆಟ್ವರ್ಕಿಂಗ್ (ಸಂಪರ್ಕ ವೃದ್ಧಿ) ಅವಕಾಶಗಳನ್ನೂ ಒಳಗೊಂಡಿರುತ್ತದೆ.

ಈ ಸಮಾವೇಶವು ಭಾರತದ ಇನೋವೇಷನ್ ಪರಿಸರ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವುದು; ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಂಶೋಧನೆಯಿಂದ-ವಾಣಿಜ್ಯೀಕರಣದ ಮಾರ್ಗಗಳನ್ನು ವೇಗಗೊಳಿಸುವುದು; ಶೈಕ್ಷಣಿಕ-ಉದ್ಯಮ-ಸರ್ಕಾರದ ಪಾಲುದಾರಿಕೆಗಳನ್ನು ಬಲಪಡಿಸುವುದು; ANRF ಮತ್ತು AICTE ಇನ್ನೋವೇಶನ್ನಂತಹ ರಾಷ್ಟ್ರೀಯ ಉಪಕ್ರಮಗಳನ್ನು ಮುನ್ನಡೆಸುವುದು; ಸಂಸ್ಥೆಗಳಾದ್ಯಂತ ನಾವೀನ್ಯತೆಯ ಪ್ರವೇಶವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು; ಮತ್ತು ವಿಕಸಿತ ಭಾರತ@2047 ರತ್ತ ರಾಷ್ಟ್ರೀಯ ಇನೋವೇಶನ್ ಜೋಡಣೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 

 

*****


(Release ID: 2125219) Visitor Counter : 9