ಸಹಕಾರ ಸಚಿವಾಲಯ
azadi ka amrit mahotsav

ಭೋಪಾಲ್‌ ನಲ್ಲಿ ನಡೆದ ರಾಜ್ಯ ಮಟ್ಟದ ಸಹಕಾರಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಸಹಕಾರ ಸಚಿವಾಲಯ ರಚನೆಯಾದಾಗಿನಿಂದ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಹಕಾರಿ ವಲಯದಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಮತ್ತು ಈಗ ಈ ವಲಯವು ವೇಗವಾಗಿ ಪ್ರಗತಿ ಸಾಧಿಸುತ್ತಿದೆ

ಮಧ್ಯಪ್ರದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಸಹಕಾರಿ ಡೈರಿ ಸಂಘಗಳ ಕೊಡುಗೆಯನ್ನು ಹೆಚ್ಚಿಸಲು ಎನ್‌ ಡಿ ಡಿ ಬಿ ಮತ್ತು ಎಂಪಿಸಿಡಿಎಫ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ

ತಿಳುವಳಿಕೆ ಒಪ್ಪಂದವು ಮಧ್ಯಪ್ರದೇಶದ ಪ್ರತಿಯೊಂದು ಹಳ್ಳಿಗೂ ಸಹಕಾರಿ ಡೈರಿಯನ್ನು ವಿಸ್ತರಿಸಲಿದೆ

ಹಳ್ಳಿಗಳಲ್ಲಿ ಸಹಕಾರಿ ಹಾಲು ಉತ್ಪಾದಕ ಸಂಘಗಳನ್ನು ಸ್ಥಾಪಿಸುವುದರಿಂದ ಹಾಲು ಸಂಸ್ಕರಣಾ  ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ, ಇದು ರೈತರನ್ನು ಸಮೃದ್ಧಗೊಳಿಸುತ್ತದೆ

ಮಧ್ಯಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಮೋದಿ ಸರ್ಕಾರವು ರಾಜ್ಯದ ರೈತರ ಕಲ್ಯಾಣಕ್ಕಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ

ವಿರೋಧ ಪಕ್ಷದ ಸರ್ಕಾರದ ಸಮಯದಲ್ಲಿ, ಮಧ್ಯಪ್ರದೇಶದಲ್ಲಿ ಸಹಕಾರಿ ವಲಯವು ಕುಸಿದಿತ್ತು, ಈಗ ಸಹಕಾರಿ ವಲಯವನ್ನು ಪುನರುಜ್ಜೀವನಗೊಳಿಸಲು ಇದೊಂದು ಸುವರ್ಣಾವಕಾಶ

ಮೋದಿ ಸರ್ಕಾರ ರಚಿಸಿದ ಮೂರು ಬಹು-ರಾಜ್ಯ ಸಹಕಾರಿ ಸಂಸ್ಥೆಗಳು ರೈತರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಒದಗಿಸುತ್ತಿವೆ, ರಫ್ತಿಗೆ ವೇದಿಕೆಯನ್ನು ಒದಗಿಸುತ್ತಿವೆ ಮತ್ತು ಪ್ರಯೋಜನಗಳು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿದೆ

ಮೊದಲು ಅಲ್ಪಾವಧಿ ಕೃಷಿ ಸಾಲಗಳನ್ನು ಮಾತ್ರ ನೀಡುತ್ತಿದ್ದ ಪಿಎಸಿಎಸ್, ಈಗ 20ಕ್ಕೂ ಹೆಚ್ಚು ರೀತಿಯ ಸೇವೆಗಳನ್ನು ಒದಗಿಸುತ್ತಿದ್ದು, ಇದು ಅವುಗಳ ಆದಾಯವನ್ನು ಹೆಚ್ಚಿಸಿದೆ

Posted On: 13 APR 2025 7:12PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ ನಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ಸಹಕಾರಿ ಸಮ್ಮೇಳನವನ್ನು ಉದ್ದೇಶಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ರಾಜ್ಯ ಸಹಕಾರ ಸಚಿವ ಶ್ರೀ ವಿಶ್ವಾಸ್ ಸಾರಂಗ್ ಮತ್ತು ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಧ್ಯಪ್ರದೇಶದಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಸಹಕಾರ ಈ ಮೂರು ಕ್ಷೇತ್ರಗಳಲ್ಲಿ ಸಾಕಷ್ಟು ಸಾಮರ್ಥ್ಯವಿದ್ದು, ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಕಷ್ಟು ಕೆಲಸಗಳು ನಡೆಯಬೇಕಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಹೇಳಿದರು. ದೇಶದಲ್ಲಿ ಸಹಕಾರಿ ಚಳುವಳಿ ಹಲವು ವರ್ಷಗಳಿಂದ ನಶಿಸಿ ಹೋಗಿತ್ತು, ದೇಶದಲ್ಲಿ ವಿವಿಧ ಹಂತಗಳಲ್ಲಿ ವಿಭಜನೆಯಾಗಿತ್ತು. ಇದಕ್ಕೆ ಸಹಕಾರಿ ಕಾನೂನುಗಳು ಕಾಲಕ್ಕೆ ತಕ್ಕಂತೆ ಬದಲಾಗದಿರುವುದು ಕಾರಣ ಎಂದು ಅವರು ಹೇಳಿದರು.

ನಮ್ಮ ಸಂವಿಧಾನದಲ್ಲಿ, ಬಹು-ರಾಜ್ಯ ಸಹಕಾರಿ ಸಂಸ್ಥೆಗಳನ್ನು ಹೊರತುಪಡಿಸಿ, ಎಲ್ಲಾ ಸಹಕಾರಿ ಸಂಸ್ಥೆಗಳು ರಾಜ್ಯಕ್ಕೆ ಸೇರಿದ ವಿಷಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ದೇಶದಲ್ಲಿ ವೇಗವಾಗಿ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾನೂನುಗಳನ್ನು ರಚಿಸಲು ಯಾವುದೇ ಉಪಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳಿದರು. ಪ್ರತಿಯೊಂದು ರಾಜ್ಯದ ಭೌಗೋಳಿಕ ಪರಿಸ್ಥಿತಿಗಳು, ಮಳೆಯ ಪರಿಸ್ಥಿತಿಗಳು, ಗ್ರಾಮೀಣಾಭಿವೃದ್ಧಿ, ಕೃಷಿ ಅಭಿವೃದ್ಧಿ ಮತ್ತು ಪಶುಸಂಗೋಪನಾ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಚಿಂತನೆಯನ್ನು ಮಾಡಲಿಲ್ಲ ಎಂದು ಅವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಸಚಿವಾಲಯ ಇಲ್ಲದ ಕಾರಣ ಅದರ ಬಗ್ಗೆ ಎಂದಿಗೂ ಯೋಚಿಸಲೇ ಇಲ್ಲ ಎಂದು ಶ್ರೀ ಶಾ ಹೇಳಿದರು.

ಸ್ವಾತಂತ್ರ್ಯದ 75 ವರ್ಷಗಳ ನಂತರ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು ಮತ್ತು ತಮಗೆ ಮೊದಲ ಸಹಕಾರ ಸಚಿವರಾಗುವ ಸೌಭಾಗ್ಯ ದೊರೆಯಿತು ಎಂದು ಶ್ರೀ ಶಾ ಹೇಳಿದರು.

ಸಹಕಾರ ಸಚಿವಾಲಯ ರಚನೆಯಾದಾಗಿನಿಂದ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಹಕಾರಿ ವಲಯದಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಮತ್ತು ಈಗ ಈ ವಲಯವು ವೇಗವಾಗಿ ಪ್ರಗತಿ ಕಾಣುತ್ತಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ನಮ್ಮ ಸಂವಿಧಾನದಲ್ಲಿದ್ದ ಮಿತಿಗಳು ಇನ್ನೂ ಹಾಗೆಯೇ ಇವೆ ಎಂದು ಅವರು ಹೇಳಿದರು. ಇಂದಿಗೂ ಸಹಕಾರವು ರಾಜ್ಯ ವಿಷಯವಾಗಿದೆ. ಸಹಕಾರ ಕ್ಷೇತ್ರದಲ್ಲಿ ಭಾರತ ಸರ್ಕಾರವು ಯಾವುದೇ ಕಾನೂನು ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಶ್ರೀ ಶಾ ಹೇಳಿದರು. ಆದಾಗ್ಯೂ, ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (ಪಿಎಸಿಎಸ್) ಪುನರುಜ್ಜೀವನಗೊಳಿಸಲು, ಡೈರಿ ವಲಯವನ್ನು ಉತ್ತೇಜಿಸಲು, ಉತ್ಪಾದನಾ ಕ್ಷೇತ್ರದಲ್ಲಿ ಸಹಕಾರವನ್ನು ಪ್ರೋತ್ಸಾಹಿಸಲು, ನಗರ ಸಹಕಾರಿ ಬ್ಯಾಂಕುಗಳು, ಜಿಲ್ಲಾ ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳ ಸುಗಮ ನಿರ್ವಹಣೆಗೆ ಪ್ರಯತ್ನಗಳನ್ನು ಮಾಡಲಾಗಿದೆ. ಸಹಕಾರ ಸಚಿವಾಲಯವು ಮೊದಲು ಪಿಎಸಿಎಸ್ ಗಾಗಿ ಮಾದರಿ ಬೈಲಾಗಳನ್ನು ರಚಿಸುವ ಕೆಲಸ ಮಾಡಿದೆ ಮತ್ತು ಅದನ್ನು ಅನುಮೋದನೆಗಾಗಿ ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ ಎಂದು ಅವರು ಹೇಳಿದರು. ಇಂದು ಇಡೀ ಭಾರತವು ಈ ಮಾದರಿ ಬೈಲಾಗಳನ್ನು ಸ್ವೀಕರಿಸಿದೆ. ಮಾದರಿ ಬೈಲಾಗಳನ್ನು ಸ್ವೀಕರಿಸಿದ್ದಕ್ಕಾಗಿ ರಾಜ್ಯಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಶ್ರೀ ಶಾ, ಈ ಕ್ರಮವು ಸಹಕಾರಿ ವಲಯಕ್ಕೆ ಹೊಸ ಜೀವ ತುಂಬಿದೆ ಎಂದು ಹೇಳಿದರು. ಪಿಎಸಿಎಸ್ ಅನ್ನು ಬಲಪಡಿಸದ ಹೊರತು, ಮೂರು ಹಂತದ ಸಹಕಾರಿ ರಚನೆಯನ್ನು ಬಲಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಹಿಂದಿನ ಪಿಎಸಿಎಸ್‌ ಗಳು ಅಲ್ಪಾವಧಿ ಕೃಷಿ ಸಾಲಗಳನ್ನು ಮಾತ್ರ ಒದಗಿಸುತ್ತಿದ್ದವು, ಅದರಲ್ಲಿ ಅವು ಸುಮಾರು ಅರ್ಧ ಪರ್ಸೆಂಟ್‌ ಮಾತ್ರ ಆದಾಯವನ್ನು ಗಳಿಸುತ್ತಿದ್ದವು, ಆದರೆ ಇಂದು ಪಿಎಸಿಎಸ್‌ ಗಳು 20 ಕ್ಕೂ ಹೆಚ್ಚು ರೀತಿಯ ಸೇವೆಗಳನ್ನು ಒದಗಿಸುತ್ತಿವೆ ಮತ್ತು ಹೊಸ ಸುಧಾರಣೆಗಳು ಪಿಎಸಿಎಸ್‌ ಗಳ ಆದಾಯವನ್ನು ಹೆಚ್ಚಿಸುತ್ತಿವೆ ಎಂದು ಅವರು ಹೇಳಿದರು.

ಇಂದು ಪಿಎಸಿಎಸ್‌ ಗಳು ಜನೌಷಧಿ ಕೇಂದ್ರ, ನೀರು ವಿತರಣೆ, ಸಾಮಾನ್ಯ ಸೇವಾ ಕೇಂದ್ರಗಳಂತಹ ಸೇವೆಗಳನ್ನು ಒದಗಿಸಲು ಅವಕಾಶ ನೀಡಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಂದು ಪಿಎಸಿಎಸ್ ಕಂಪ್ಯೂಟರ್‌ ಗಳಲ್ಲಿ 300 ಕ್ಕೂ ಹೆಚ್ಚು ಯೋಜನೆಗಳು ಜನರಿಗೆ ಲಭ್ಯವಿವೆ ಎಂದು ಅವರು ಹೇಳಿದರು. ರೈಲು ಟಿಕೆಟ್‌, ವಿದ್ಯುತ್ ಬಿಲ್‌, ನೀರಿನ ಬಿಲ್‌, ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಹಳ್ಳಿಯಿಂದ ಹೊರಗೆ ಹೋಗಬೇಕಾಗಿಲ್ಲ, ಈ ಎಲ್ಲಾ ಸೌಲಭ್ಯಗಳು ಈಗ ಪಿಎಸಿಎಸ್‌ ಗಳಲ್ಲಿ ಲಭ್ಯವಿವೆ. ಅನೇಕ ಪಿಎಸಿಎಸ್‌ ಗಳು ಈ ಸೇವೆಗಳಿಂದ ಆದಾಯವನ್ನು ಗಳಿಸಿವೆ ಎಂದು ಶ್ರೀ ಶಾ ಹೇಳಿದರು. ಪಿಎಸಿಎಸ್‌ ಗಳು ಈಗ ರಸಗೊಬ್ಬರ ವಿತರಕರಾಗಬಹುದು, ಪೆಟ್ರೋಲ್ ಪಂಪ್‌ ಗಳನ್ನು ಪ್ರಾರಂಭಿಸಬಹುದು, ಅಡುಗೆ ಅನಿಲವನ್ನು ವಿತರಿಸಬಹುದು ಮತ್ತು 'ಹರ್ ಘರ್ ನಲ್' ಯೋಜನೆಯನ್ನು ಸಹ ನಿರ್ವಹಿಸಬಹುದು ಎಂದು ಅವರು ಹೇಳಿದರು.

ಹೊಸ ಬೈಲಾಗಳ ಅಡಿಯಲ್ಲಿ, ಪಿಎಸಿಎಸ್‌, ಡೈರಿ ಸಹಕಾರ ಸಂಘಗಳು ಮತ್ತು ಮೀನುಗಾರಿಕಾ ಸಹಕಾರ ಸಂಘಗಳನ್ನು ವಿಲೀನಗೊಳಿಸುವ ಮೂಲಕ ಬಹುಪಯೋಗಿ ಪಿಎಸಿಎಸ್‌ (ಎಂಪಿಎಸಿಎಸ್) ಅನ್ನು ರಚಿಸಲು ಕೆಲಸ ಮಾಡಲಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಭಾರತ ಸರ್ಕಾರವು 2500 ಕೋಟಿ ರೂ. ವೆಚ್ಚದಲ್ಲಿ ದೇಶದ ಎಲ್ಲಾ ಪಿಎಸಿಎಸ್‌ ಗಳನ್ನು ಗಣಕೀಕರಿಸಿದೆ ಎಂದು ಅವರು ಹೇಳಿದರು. ಪಿಎಸಿಎಸ್‌ ಗಳ ಗಣಕೀಕರಣದಲ್ಲಿ ಮಧ್ಯಪ್ರದೇಶವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ರಾಜ್ಯ ಸಹಕಾರಿ ಬ್ಯಾಂಕ್ ಕಂಪ್ಯೂಟರ್ ಜಾಲದಿಂದಾಗಿ ನಬಾರ್ಡ್‌ ನೊಂದಿಗೆ ಸಂಪರ್ಕ ಹೊಂದಿವೆ. ಇದರೊಂದಿಗೆ, ಆನ್‌ಲೈನ್ ಆಡಿಟ್ ವ್ಯವಸ್ಥೆಯಿಂದಾಗಿ ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕತೆ ಸಹ ಬಂದಿದೆ ಎಂದು ಅವರು ಹೇಳಿದರು.

ಗಣಕೀಕೃತ ಪಿಎಸಿಎಸ್‌ ಗಳು ಭಾರತದ 13 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತ ಸರ್ಕಾರವು ಪಿಎಸಿಎಸ್‌ ಗಾಗಿ ಅಂತಹ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ, ಅದು ರೈತರು ಬ್ಯಾಂಕ್ ಖಾತೆ ತೆರೆಯಲು ಅವರ ಭಾಷೆಯಲ್ಲಿ ಕೆಲಸ ಮಾಡುತ್ತದೆ, ಅಂದರೆ ಇದು ಮಧ್ಯಪ್ರದೇಶದಲ್ಲಿ ಹಿಂದಿ, ಗುಜರಾತ್‌ ನಲ್ಲಿ ಗುಜರಾತಿ, ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಮತ್ತು ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಮಟ್ಟದ ಮೂರು ಹೊಸ ಸಹಕಾರ ಸಂಘಗಳನ್ನು ರಚಿಸಲಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ರೈತರ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ (ಎನ್‌ ಸಿ ಇ ಎಲ್) ಅನ್ನು ಸ್ಥಾಪಿಸಲಾಗಿದೆ ಮತ್ತು ರೈತರು ತಮ್ಮ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆಯುವ ಉದ್ದೇಶದಿಂದ ರಾಷ್ಟ್ರೀಯ ಸಹಕಾರಿ ಸಾವಯವ ಲಿಮಿಟೆಡ್ (ಎನ್‌ ಸಿ ಒ ಎಲ್) ಅನ್ನು ಸ್ಥಾಪಿಸಲಾಗಿದೆ. ಮುಂದಿನ 20 ವರ್ಷಗಳಲ್ಲಿ ಈ ಎರಡೂ ಸಂಸ್ಥೆಗಳು ಅಮುಲ್ ಮತ್ತು ಇತರ ಸಂಸ್ಥೆಗಳಿಗಿಂತ ದೊಡ್ಡದಾಗಿ ಬೆಳೆಯುತ್ತವೆ ಎಂದು ಅವರು ಹೇಳಿದರು. ಭಾರತದ ಸಿಹಿ ಬೀಜಗಳು ಮತ್ತು ಹೈಬ್ರಿಡ್ ಅಲ್ಲದ ಬೀಜಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕಾಗಿ ಭಾರತೀಯ ಬೀಜ ಸಹಕಾರಿ ಸಮಿತಿ ಲಿಮಿಟೆಡ್ (ಬಿ ಬಿ ಎಸ್‌ ಎಸ್‌ ಎಲ್) ಎಂಬ ರಾಷ್ಟ್ರೀಯ ಸಹಕಾರಿ ಸಂಸ್ಥೆಯನ್ನು ರಚಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಮೊದಲು ದೊಡ್ಡ ರೈತರು ಮಾತ್ರ ಬೀಜ ಕೃಷಿ ಮಾಡಬಹುದಿತ್ತು, ಆದರೆ ಈಗ 2.5 ಎಕರೆ ಭೂಮಿ ಹೊಂದಿರುವ ರೈತರಿಗೆ ಸಹ ಅವಕಾಶ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರ ರಚಿಸಿದ ಮೂರು ಬಹು-ರಾಜ್ಯ ಸಹಕಾರಿ ಸಂಘಗಳು - ಎನ್‌ ಸಿ ಇ ಎಲ್, ಎನ್‌ ಸಿ ಒ ಎಲ್, ಬಿ ಬಿ ಎಸ್‌ ಎಸ್‌ ಎಲ್ - ರೈತರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ರಫ್ತಿಗೆ ವೇದಿಕೆಯನ್ನು ಒದಗಿಸುತ್ತಿವೆ ಮತ್ತು ಪ್ರಯೋಜನ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿದೆ ಎಂದು ಅವರು ಹೇಳಿದರು.

ಸಹಕಾರಿ ವಲಯದಲ್ಲಿ ತರಬೇತಿ ನೀಡಲು ನಾವು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಹಕಾರಿ ವಲಯದಲ್ಲಿ ಕೆಲಸ ಮಾಡುವ ವೃತ್ತಿಪರರು ಇಲ್ಲಿ ತರಬೇತಿ ಪಡೆಯುತ್ತಾರೆ. ಇವರಲ್ಲಿ ಲೆಕ್ಕಪರಿಶೋಧಕರು, ಡೈರಿ ಎಂಜಿನಿಯರ್‌ ಗಳು, ಪಶುವೈದ್ಯರು ಮತ್ತು ಕೃಷಿ ವಿಜ್ಞಾನಿಗಳು ಸೇರಿರುತ್ತಾರೆ ಮತ್ತು ಅವರ ಪರಿಣತಿಯು ಸಹಕಾರಿ ಆಧಾರಿತವಾಗಿರುತ್ತದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ ಡಿ ಡಿ ಬಿ) ಮತ್ತು ಮಧ್ಯಪ್ರದೇಶ ಸಹಕಾರಿ ಡೈರಿ ಒಕ್ಕೂಟ (ಎಂ ಪಿ ಸಿ ಡಿ ಎಫ್‌) ನಡುವೆ ಇಂದು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಪ್ರಸ್ತುತ ಮಧ್ಯಪ್ರದೇಶದಲ್ಲಿ ಐದೂವರೆ ಕೋಟಿ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ, ಇದು ದೇಶದ ಒಟ್ಟು ಹಾಲು ಉತ್ಪಾದನೆಯ ಒಂಬತ್ತು ಪ್ರತಿಶತದಷ್ಟಿದೆ ಎಂದು ಅವರು ಹೇಳಿದರು. ಇದರಲ್ಲಿ ಸಹಕಾರಿ ಡೈರಿಗಳ ಪಾಲು ಶೇಕಡಾ ಒಂದಕ್ಕಿಂತ ಕಡಿಮೆಯಿದೆ. ಮಧ್ಯಪ್ರದೇಶ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ನಡುವಿನ ಒಪ್ಪಂದದಿಂದಾಗಿ ಈ ಪ್ರಮಾಣವು ಹೆಚ್ಚಾಗುತ್ತದೆ. ಒಬ್ಬ ರೈತ ತನ್ನ ಹಾಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದಾಗ, ಅವನು ಶೋಷಣೆಗೆ ಒಳಗಾಗುತ್ತಾನೆ ಎಂದು ಅವರು ಹೇಳಿದರು. ಪ್ರತಿಯೊಂದು ಹಳ್ಳಿಯ ಪ್ರತಿಯೊಬ್ಬ ರೈತನನ್ನು ಸಹಕಾರಿ ಡೈರಿಯೊಂದಿಗೆ ತ್ವರಿತವಾಗಿ ಸಂಪರ್ಕಿಸುವುದು ಮತ್ತು ಹಾಲಿನಿಂದ ತಯಾರಿಸಿದ ಚೀಸ್, ಮೊಸರು, ಮಜ್ಜಿಗೆ ಇತ್ಯಾದಿಗಳನ್ನು ಮಾರಾಟ ಮಾಡುವ ವ್ಯವಸ್ಥೆಗಳನ್ನು ಮಾಡುವುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ, ಮಧ್ಯಪ್ರದೇಶವು ಪ್ರಾಥಮಿಕ ಡೈರಿಯನ್ನು ವಿಸ್ತರಿಸಬೇಕು, ಹಾಲು ಸಂಗ್ರಹವನ್ನು ಹೆಚ್ಚಿಸಬೇಕು, ಪ್ರಾಣಿಗಳಿಗೆ ಉತ್ತಮ ಮೇವನ್ನು ಒದಗಿಸಬೇಕು ಮತ್ತು ಪ್ರತಿ ಜಾನುವಾರು ಹೆಚ್ಚು ಹಾಲು ನೀಡುವಂತೆ ಅವುಗಳ ತಳಿಯನ್ನು ಸುಧಾರಿಸಬೇಕು ಎಂದು ಅವರು ಹೇಳಿದರು. ಹಾಲನ್ನು ಸಂಸ್ಕರಿಸಿ ಹೆಚ್ಚಿನ ಲಾಭದೊಂದಿಗೆ ಮಾರಾಟ ಮಾಡಲು ಸಂಸ್ಕರಣಾ ಘಟಕವನ್ನು ಸಹ ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ, ಮಾರುಕಟ್ಟೆ ಮಾಡಬಹುದಾದ ಹಾಲು ಅಂದರೆ ಸೇವನೆಯ ನಂತರ ಹೆಚ್ಚುವರಿ ಹಾಲು 3.5 ಕೋಟಿ ಲೀಟರ್ ಆಗಿದ್ದು, ಅದರಲ್ಲಿ ಕೇವಲ 2.5 ಪ್ರತಿಶತ ಮಾತ್ರ ಸಹಕಾರಿ ಡೈರಿಗೆ ಹೋಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಮಧ್ಯಪ್ರದೇಶದ ಕೇವಲ 17 ಪ್ರತಿಶತ ಹಳ್ಳಿಗಳಲ್ಲಿ ಮಾತ್ರ ಹಾಲು ಸಂಗ್ರಹ ವ್ಯವಸ್ಥೆ ಇದೆ. ಇಂದು ಸಹಿ ಹಾಕಲಾದ ಒಪ್ಪಂದವು ಸಹಕಾರಿ ಡೈರಿಯನ್ನು ಶೇಕಡಾ 83 ರಷ್ಟು ಹಳ್ಳಿಗಳಿಗೆ ವಿಸ್ತರಿಸುವ ಸಾಧ್ಯತೆಯನ್ನು ಸೃಷ್ಟಿಸಿದೆ. ನಗರದಲ್ಲಿ ಹಾಲಿನ ಬೇಡಿಕೆ ದಿನಕ್ಕೆ 1 ಕೋಟಿ 20 ಲಕ್ಷ ಲೀಟರ್ ಆಗಿದೆ, ಆದರೆ ರೈತನಿಗೆ ಸರಿಯಾದ ಲಾಭ ಸಿಗುತ್ತಿಲ್ಲ ಎಂದು ಅವರು ಹೇಳಿದರು. ಈ ಒಪ್ಪಂದದೊಂದಿಗೆ, ಮೊದಲ ಐದು ವರ್ಷಗಳ ಕಾಲ ಶೇಕಡಾ 50 ರಷ್ಟು ಹಳ್ಳಿಗಳಲ್ಲಿ ಸಹಕಾರಿ ಪ್ರಾಥಮಿಕ ಹಾಲು ಉತ್ಪಾದಕ ಸಮಿತಿಗಳನ್ನು ಸ್ಥಾಪಿಸುವ ಗುರಿಯನ್ನು ನಾವು ಹೊಂದಿರಬೇಕು ಎಂದು ಶ್ರೀ ಶಾ ಹೇಳಿದರು. ಶೇಕಡಾ 50 ರಷ್ಟು ಹಳ್ಳಿಗಳಲ್ಲಿ ಸಹಕಾರಿ ಹಾಲು ಉತ್ಪಾದಕ ಸಮಿತಿಗಳನ್ನು ಸ್ಥಾಪಿಸಿದರೆ, ಸಹಕಾರಿ ವಲಯದಲ್ಲಿ ಹಾಲು ಸಂಸ್ಕರಣಾ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ ಮತ್ತು ಇದು ರೈತರನ್ನು ಸಮೃದ್ಧಗೊಳಿಸುತ್ತದೆ. ಈ ಪ್ರಯತ್ನದಲ್ಲಿ, ಮೋದಿ ಸರ್ಕಾರ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮಧ್ಯಪ್ರದೇಶದ ರೈತರೊಂದಿಗೆ ಬಂಡೆಯಂತೆ ನಿಂತಿವೆ ಎಂದು ಅವರು ಹೇಳಿದರು.

ಗುಣಮಟ್ಟದ ಪರಿಶೀಲನೆ ಮತ್ತು ರೈತರಿಗೆ ವಾರಕ್ಕೊಮ್ಮೆ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರದೇಶ ಸಹಕಾರಿ ಡೈರಿ ಒಕ್ಕೂಟ (ಎಂ ಪಿ ಸಿ ಡಿ ಎಫ್‌) ನೀತಿ ನಿರೂಪಣೆ ಮತ್ತು ಬ್ರ್ಯಾಂಡಿಂಗ್‌ ನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು. ಡೈರಿ ಕನಿಷ್ಠ 50 ಪ್ರತಿಶತ ಹಳ್ಳಿಗಳನ್ನು ತಲುಪುವಂತೆ ಮತ್ತು ರೈತರು ಅದರಿಂದ ಪ್ರಯೋಜನ ಪಡೆಯುವಂತೆ ಎನ್‌ ಡಿ ಡಿ ಬಿ ಮತ್ತು ಎಂ ಪಿ ಸಿ ಡಿ ಎಫ್‌ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಇದಕ್ಕಾಗಿ, ಹಣಕಾಸು ಅಗತ್ಯವಿದ್ದರೆ, ಭಾರತ ಸರ್ಕಾರದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮವು ಖಂಡಿತವಾಗಿಯೂ ಸಹಾಯ ಮಾಡುತ್ತದೆ. ರೈತರು ತಮ್ಮ ಹಾಲು ಉತ್ಪಾದನೆಯ 100 ಪ್ರತಿಶತ ಲಾಭವನ್ನು ಪಡೆಯಬೇಕು, ಆಗ ಮಾತ್ರ ಹಾಲು ಉತ್ಪಾದನೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು ಮಧ್ಯಪ್ರದೇಶ ಸರ್ಕಾರದ ಸಹಯೋಗದೊಂದಿಗೆ ರಾಜ್ಯದ ರೈತರ ಕಲ್ಯಾಣಕ್ಕಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಈಗ ಉತ್ತಮ ಆಡಳಿತವಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ವಿರೋಧ ಪಕ್ಷದ ಸರ್ಕಾರದ ಸಮಯದಲ್ಲಿ, ಇಲ್ಲಿ ಸಹಕಾರಿ ಕ್ಷೇತ್ರವು ಕುಸಿದಿತ್ತು. ಸಹಕಾರಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಈಗ ಸುವರ್ಣಾವಕಾಶ ಬಂದಿದೆ. ಮಧ್ಯಪ್ರದೇಶದ ಜನರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

 

*****

 

 


(Release ID: 2121498) Visitor Counter : 25