ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 30.03.2025 ರಂದು ಮಾಡಿದ ‘ಮನ್ ಕಿ ಬಾತ್’ – 120ನೇ ಸಂಚಿಕೆಯ ಕನ್ನಡ ಅವತರಣಿಕೆ

Posted On: 30 MAR 2025 11:41AM by PIB Bengaluru

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಈ ಶುಭ ದಿನದಂದು, ನಿಮ್ಮೊಂದಿಗೆ 'ಮನದ ಮಾತು' ಹಂಚಿಕೊಳ್ಳುವ ಅವಕಾಶ ನನಗೆ ಲಭಿಸಿದೆ.  ಇಂದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿ. ಇಂದಿನಿಂದ ಚೈತ್ರ ನವರಾತ್ರಿ ಪ್ರಾರಂಭವಾಗಲಿದೆ. ಇಂದಿನಿಂದ ಭಾರತೀಯ ನವ ವರ್ಷವೂ ಆರಂಭವಾಗುತ್ತದೆ. ಈ ಬಾರಿ ವಿಕ್ರಮ ಸಂವತ್ಸರ ಅಂದರೆ ೨೦೮೨ (ಎರಡು ಸಾವಿರದ ಎಂಬತ್ತೆರಡು) ಶುರುವಾಗಲಿದೆ. ನನ್ನ ಮುಂದೆ ನೀವು ಬರೆದ ಬಹಳಷ್ಟು ಪತ್ರಗಳಿವೆ. ಬಿಹಾರದವರು, ಬಂಗಾಳದವರು, ಕೆಲವರು ತಮಿಳುನಾಡಿನವರು, ಕೆಲವರು ಗುಜರಾತ್‌ನವರು ಪತ್ರ ಬರೆದಿದ್ದಾರೆ. ಬಹಳ ಆಸಕ್ತಿಕರವಾಗಿ ಜನರು ತಮ್ಮ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪತ್ರಗಳು ಶುಭ ಹಾರೈಕೆಗಳು ಮತ್ತು ಅಭಿನಂದನಾ ಸಂದೇಶಗಳನ್ನು ಹೊತ್ತು ತಂದಿವೆ. ಆದರೆ ಇಂದು ನಿಮ್ಮೊಂದಿಗೆ ಕೆಲವು ಸಂದೇಶಗಳನ್ನು ಹಂಚಿಕೊಳ್ಳಬಯಸುತ್ತೇನೆ -

                        ಪ್ರಧಾನಮಂತ್ರಿ (ತೆಲುಗು ಭಾಷೆಯಲ್ಲಿ) – ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಇನ್ನೊಂದು ಪತ್ರದಲ್ಲಿ ಹೀಗೆ ಬರೆಯಲಾಗಿದೆ -

ಪ್ರಧಾನಮಂತ್ರಿ (ಕೊಂಕಣಿಯಲ್ಲಿ) - ಸಂಸಾರ್ ಪಾಡ್ವ ಶುಭಾಶಯಗಳು

ಸಂಸಾರ್ ಪಾಡ್ಯಮಿಯ ಶುಭಾಶಯಗಳು

ಮುಂದಿನ ಪತ್ರದಲ್ಲಿ ಬರೆಯಲಾಗಿದೆ –

ಪ್ರಧಾನಮಂತ್ರಿ (ಮರಾಠಿಯಲ್ಲಿ) - ಗುಡಿ ಪಾಡ್ವಾ ಸಂದರ್ಭದಲ್ಲಿ ಮನಃಪೂರ್ವಕ ಶುಭಾಶಯಗಳು

ನಮ್ಮ ಸ್ನೇಹಿತರೊಬ್ಬರು ಬರೆದಿದ್ದಾರೆ:

ಪ್ರಧಾನಮಂತ್ರಿ (ಮಲಯಾಳಂನಲ್ಲಿ) – ಎಲ್ಲರಿಗೂ ವಿಷು ಹಬ್ಬದ ಶುಭಾಶಯಗಳು.

ಇನ್ನೊಂದು ಸಂದೇಶವಿದೆ-

ಪ್ರಧಾನಮಂತ್ರಿ (ತಮಿಳಿನಲ್ಲಿ) - ಸರ್ವರಿಗೂ ನವ ವರ್ಷದ ಶುಭಾಶಯಗಳು (ಪುಥಾಂಡು) ಶುಭಾಶಯಗಳು

ಸ್ನೇಹಿತರೇ, ಬೇರೆ ಬೇರೆ ಭಾಷೆಗಳಲ್ಲಿ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ನಿಮಗೆ ತಿಳಿಯಿತಲ್ಲವೇ. ಆದರೆ ಇದರ ಹಿಂದಿರುವ ಕಾರಣ ನಿಮಗೆ ತಿಳಿದಿದೆಯೇ? ಅದೇ ವಿಶೇಷ ವಿಷಯವನ್ನು ಇಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಮತ್ತು ಮುಂದಿನ ಕೆಲವು ದಿನಗಳಲ್ಲಿ ನವ ವರ್ಷಾರಂಭವಾಗುತ್ತಿದೆ ಮತ್ತು ಈ ಎಲ್ಲಾ ಸಂದೇಶಗಳು ಹೊಸ ವರ್ಷ ಮತ್ತು ವಿವಿಧ ಹಬ್ಬಗಳ ಶುಭಾಶಯಗಳು. ಅದಕ್ಕೆಂದೇ ಜನರು ವಿವಿಧ ಭಾಷೆಗಳಲ್ಲಿ ಶುಭ ಹಾರೈಕೆಗಳನ್ನು ಕಳುಹಿಸಿದ್ದಾರೆ.

ಸ್ನೇಹಿತರೇ, ಇಂದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಯುಗಾದಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಇಂದು ಗುಡಿಪಾಡ್ವ ಆಚರಿಸಲಾಗುತ್ತಿದೆ. ವೈವಿಧ್ಯಮಯವಾದ ನಮ್ಮ ದೇಶದಲ್ಲಿ, ಮುಂದಿನ ಕೆಲವು ದಿನಗಳಲ್ಲಿ, ವಿವಿಧ ರಾಜ್ಯಗಳು ಅಂದರೆ ಅಸ್ಸಾಂನಲ್ಲಿ 'ರೊಂಗಾಲಿ ಬಿಹು', ಬಂಗಾಳದಲ್ಲಿ 'ಪೊಯಿಲಾ ಬೋಯಿಶಾಖ್', ಕಾಶ್ಮೀರದಲ್ಲಿ 'ನವ್ರೇಹ್' ಹೆಸರಿನಲ್ಲಿ ನವ ವರ್ಷ ಆಚರಿಸಲಾಗುತ್ತದೆ. ಅದೇ ರೀತಿ, ಏಪ್ರಿಲ್ 13 ರಿಂದ 15 ರವರೆಗೆ, ದೇಶದ ವಿವಿಧ ಭಾಗಗಳಲ್ಲಿ ಹಬ್ಬಗಳ ಸಂಭ್ರಮಾಚರಣೆ ಮನೆ ಮಾಡಿರಲಿದೆ. ಈ ಸಂಭ್ರಮದ ವಾತಾವರಣದಲ್ಲಿಯೇ, ಈದ್ ಹಬ್ಬವೂ ಮೇಳಯಿಸಿದೆ. ಅಂದರೆ ಈ ತಿಂಗಳು ಪೂರ್ತಿ ಹಬ್ಬಗಳು ಮತ್ತು ಆಚರಣೆಗಳಿಂದ ತುಂಬಿರುತ್ತದೆ. ಈ ಹಬ್ಬಗಳ ಸಂದರ್ಭದಲ್ಲಿ ದೇಶದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಈ ಹಬ್ಬಗಳು ಬೇರೆ ಬೇರೆ ಪ್ರದೇಶಗಳಲ್ಲಿ ಆಚರಿಸಲ್ಪಡಬಹುದು ಆದರೆ ಭಾರತದ ವೈವಿಧ್ಯತೆಯಲ್ಲಿಯೂ  ಏಕತೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಅವು ತೋರ್ಪಡಿಸುತ್ತವೆ. ಈ ಏಕತೆಯ ಭಾವನೆಯನ್ನು ನಿರಂತರವಾಗಿ ಬಲಪಡಿಸುತ್ತಾ ಸಾಗಬೇಕು.

ಸ್ನೇಹಿತರೇ, ಪರೀಕ್ಷೆಗಳು ಸಮೀಪಿಸಿದಾಗ, ನಾನು ನನ್ನ ಯುವ ಸ್ನೇಹಿತರೊಂದಿಗೆ ಪರೀಕ್ಷೆಗಳ ಕುರಿತು ಚರ್ಚಿಸುತ್ತೇನೆ. ಈಗ ಪರೀಕ್ಷೆಗಳು ಮುಗಿದಿವೆ. ಅನೇಕ ಶಾಲೆಗಳಲ್ಲಿ, ಮತ್ತೆ ತರಗತಿಗಳನ್ನು ಪ್ರಾರಂಭಿಸುವ ಸಿದ್ಧತೆಗಳು ನಡೆಯುತ್ತಿವೆ. ಇದಾದ ನಂತರ, ಬೇಸಿಗೆ ರಜೆ ಬರಲಿದೆ. ವರ್ಷದ ಈ ಅವಧಿಗಾಗಿ ಮಕ್ಕಳು ಕಾತುರದಿಂದ ಕಾಯುತ್ತಿರುತ್ತಾರೆ . ನಾನು ಮತ್ತು ನನ್ನ ಸ್ನೇಹಿತರು ದಿನವಿಡೀ ಏನಾದರೂ ಕಿಡಿಗೇಡಿತನ ಮಾಡುತ್ತಿದ್ದಂತಹ  ನನ್ನ ಬಾಲ್ಯದ ದಿನಗಳು ನೆನಪಾದವು. ಆದರೆ ಅದೇ ಸಮಯದಲ್ಲಿ, ನಾವು ಏನಾದರೂ ರಚನಾತ್ಮಕವಾದದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೆವು ಮತ್ತು ಕಲಿಯುತ್ತಿದ್ದೆವು. ಬೇಸಿಗೆಯ ದಿನಗಳು ಸುದೀರ್ಘವಾಗಿರುತ್ತವೆ ಮತ್ತು ಮಕ್ಕಳಿಗೆ ಏನನ್ನಾದರೂ ಮಾಡಲು ಬಹಳ ಅವಕಾಶವಿರುತ್ತದೆ. ಹೊಸ ಹವ್ಯಾಸವನ್ನು ಮೈಗೂಡಿಸಿಕೊಳ್ಳಲು ಮತ್ತು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಇದು ಸಕಾಲವಾಗಿದೆ. ಮಕ್ಕಳು ಬಹಳಷ್ಟು ಕಲಿಯಬಹುದಾದ ವೇದಿಕೆಗಳಿಗೆ ಇಂದು ಕೊರತೆಯಿಲ್ಲ. ಉದಾಹರಣೆಗೆ, ಯಾವುದೇ ಸಂಸ್ಥೆ ತಂತ್ರಜ್ಞಾನ ಶಿಬಿರವನ್ನು ನಡೆಸುತ್ತಿದ್ದರೆ, ಮಕ್ಕಳು ಅಲ್ಲಿ ಅಪ್ಲಿಕೇಶನ್‌ಗಳನ್ನು ತಯಾರಿಸುವುದರ ಜೊತೆಗೆ ಓಪನ್ ಸೋರ್ಸ್ ಸಾಫ್ಟ್‌ವೇರ್ ಬಗ್ಗೆ ಅರಿಯಬಹುದು. ಪರಿಸರ, ರಂಗಭೂಮಿ ಅಥವಾ ನಾಯಕತ್ವದಂತಹ ವಿವಿಧ ವಿಷಯಗಳ ಕುರಿತು ಕೋರ್ಸ್‌ಗಳಿರುತ್ತವೆ, ತಾವು ಅವುಗಳಿಗೂ ಸೇರಿಕೊಳ್ಳಬಹುದು. ಭಾಷಣ ಅಥವಾ ನಾಟಕವನ್ನು ಕಲಿಸುವ ಅನೇಕ ಶಾಲೆಗಳಿವೆ, ಇವು ಮಕ್ಕಳಿಗೆ ತುಂಬಾ ಉಪಯುಕ್ತವಾಗಿವೆ. ಇಷ್ಟೇ ಅಲ್ಲದೆ, ಈ ರಜಾದಿನಗಳಲ್ಲಿ ವಿವಿಧೆಡೆ ನಡೆಯುತ್ತಿರುವ ಸ್ವಯಂಸೇವಕ ಚಟುವಟಿಕೆಗಳು ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿಮಗೆ ಅವಕಾಶವಿದೆ. ಅಂತಹ ಕಾರ್ಯಕ್ರಮಗಳ ಬಗ್ಗೆ ಒಂದು ವಿಶೇಷ ವಿನಂತಿ ಇದೆ. ಯಾವುದೇ ಸಂಸ್ಥೆ, ಶಾಲೆ, ಸಾಮಾಜಿಕ ಸಂಸ್ಥೆ ಅಥವಾ ವಿಜ್ಞಾನ ಕೇಂದ್ರಗಳು ಇಂತಹ ಬೇಸಿಗೆ ಶಿಬಿರಗಳನ್ನು ಆಯೋಜಿಸುತ್ತಿದ್ದರೆ, ಅದನ್ನು #MyHolidays ನೊಂದಿಗೆ ಹಂಚಿಕೊಳ್ಳಿ. ಇದರಿಂದಾಗಿ, ದೇಶಾದ್ಯಂತ ಮಕ್ಕಳು ಮತ್ತು ಅವರ ಪೋಷಕರಿಗೆ ಇವುಗಳ ಬಗ್ಗೆ ಸುಲಭವಾಗಿ ಮಾಹಿತಿ ಲಭ್ಯವಾಗುತ್ತದೆ.

ನನ್ನ ಯುವ ಸ್ನೇಹಿತರೇ, ಇಂದು ನಿಮ್ಮೊಂದಿಗೆ ಈ ಬೇಸಿಗೆ ರಜೆಗಾಗಿ ಸಿದ್ಧಪಡಿಸಲಾಗಿರುವ MY-Bharat ವಿಶೇಷ ಕ್ಯಾಲೆಂಡರ್ ಬಗ್ಗೆ ಚರ್ಚಿಸಲು ಬಯಸುತ್ತೇನೆ. ಈ ಕ್ಯಾಲೆಂಡರ್‌ನ ಒಂದು ಪ್ರತಿಯನ್ನು ಈಗ ನನ್ನ ಮುಂದೆ ಇರಿಸಲಾಗಿದೆ. ಈ ಕ್ಯಾಲೆಂಡರ್‌ ಮೂಲಕ ಕೆಲವು ವಿಶಿಷ್ಟ ಪ್ರಯತ್ನಗಳ ಕುರಿತು ಪ್ರಸ್ತುತಪಡಿಸಬಯಸುತ್ತೇನೆ. ಅವುಗಳೇನೆಂದರೆ MY-Bharat ಅಧ್ಯಯನ ಪ್ರವಾಸದಲ್ಲಿ, ನಮ್ಮ 'ಜನೌಷಧಿ ಕೇಂದ್ರಗಳು' ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ವೈಬ್ರಂಟ್ ವಿಲೇಜ್ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಗಡಿ ಗ್ರಾಮಗಳಲ್ಲಿ ವಿಶಿಷ್ಟ ಅನುಭವವನ್ನು ಪಡೆಯಬಹುದು. ಇದರೊಂದಿಗೆ, ಅಲ್ಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಕೂಡಾ ನೀವು ಭಾಗವಹಿಸಬಹುದು. ಜೊತೆಗೆ ಅಂಬೇಡ್ಕರ್ ಪುಣ್ಯತಿಥಿಯಂದು ನಡೆಯುವ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ನೀವು ಸಂವಿಧಾನದ ಮೌಲ್ಯಗಳ ಬಗ್ಗೆ ನೀವು ಜಾಗೃತಿ ಮೂಡಿಸುವ ಕೆಲಸ ಕೂಡಾ ಮಾಡಬಹುದು. ಮಕ್ಕಳು ಮತ್ತು ಅವರ ಪೋಷಕರಲ್ಲಿ ತಮ್ಮ ರಜಾದಿನದ ಅನುಭವಗಳನ್ನು #HolidayMemories ನೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಮುಂಬರುವ 'ಮನದ ಮಾತಿ' ನಲ್ಲಿ ನಿಮ್ಮ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ, ಪ್ರತಿ ನಗರ ಮತ್ತು ಗ್ರಾಮಗಳಲ್ಲಿ ನೀರಿನ ಉಳಿತಾಯದ ಸಿದ್ಧತೆಗಳು ಪ್ರಾರಂಭವಾಗುತ್ತವೆ. ಅನೇಕ ರಾಜ್ಯಗಳಲ್ಲಿ, ನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಗಳು ಹೊಸ ಆವೇಗ ಪಡೆದುಕೊಂಡಿವೆ. ಜಲಶಕ್ತಿ ಸಚಿವಾಲಯ ಮತ್ತು ವಿವಿಧ ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

ದೇಶದಲ್ಲಿ ಸಾವಿರಾರು ಕೃತಕ ಕೊಳಗಳು, ಚೆಕ್ ಡ್ಯಾಮ್‌ಗಳು, ಬೋರ್‌ವೆಲ್ ರೀಚಾರ್ಜ್, ಕಮ್ಯೂನಿಟಿ ಸೋಕ್ ಪಿಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ‘catch the rain’ ಅಭಿಯಾನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಅಭಿಯಾನ ಸರ್ಕಾರದದ್ದಲ್ಲ, ಬದಲಾಗಿ ಸಮಾಜದ್ದು, ಜನಮಾನಸದ್ದು. ಜಲ ಸಂರಕ್ಷಣೆ ಕಾರ್ಯದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುವಂತೆ ಮಾಡಲು, ಜಲ್ ಸಂಚಯ್ ಜನ ಭಾಗಿದಾರಿ ಅಭಿಯಾನ ಸಹ ನಡೆಸಲಾಗುತ್ತಿದೆ. ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ವರ್ಗಾಯಿಸುವುದು ನಮ್ಮ ಪ್ರಯತ್ನ.

ಸ್ನೇಹಿತರೇ, ಮಳೆಹನಿಗಳನ್ನು ಸಂರಕ್ಷಿಸುವ ಮೂಲಕ ನಾವು ವ್ಯರ್ಥವಾಗುತ್ತಿರುವ ನೀರಿನ ಪ್ರಮಾಣವನ್ನು ತಗ್ಗಿಸಬಹುದು. ಕಳೆದ ಕೆಲವು ವರ್ಷಗಳಲ್ಲಿ, ಈ ಅಭಿಯಾನದಡಿ ದೇಶದ ಹಲವಾರು ಭಾಗಗಳಲ್ಲಿ ಜಲ ಸಂರಕ್ಷಣೆಯ ಅಭೂತಪೂರ್ವ ಕೆಲಸ ನಡೆದಿದೆ. ನಿಮಗೆ ಒಂದು ಕುತೂಹಲಕಾರಿ ಅಂಕಿಅಂಶದ ಬಗ್ಗೆ ಹೇಳುತ್ತೇನೆ. ಕಳೆದ 7-8 ವರ್ಷಗಳಲ್ಲಿ, ಹೊಸದಾಗಿ ನಿರ್ಮಿಸಲಾದ ಟ್ಯಾಂಕ್‌ಗಳು, ಕೊಳಗಳು ಮತ್ತು ಇತರ ನೀರಿನ ಮರುಪೂರಣ ರಚನೆಗಳ ಮೂಲಕ 11 ಶತಕೋಟಿ ಘನ ಮೀಟರ್‌ಗಳಿಗಿಂತ ಹೆಚ್ಚು ನೀರನ್ನು ಸಂರಕ್ಷಿಸಲಾಗಿದೆ. ಈಗ ನೀವು 11 ಬಿಲಿಯನ್ ಕ್ಯೂಬಿಕ್ ಮೀಟರ್ ಅಂದರೆ ಎಷ್ಟು ನೀರು ಎಂದು ಆಶ್ಚರ್ಯಪಡುತ್ತಿರಬೇಕು?

ಸ್ನೇಹಿತರೇ, ನೀವು ಭಾಕ್ರಾ ನಂಗಲ್ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಚಿತ್ರಗಳನ್ನು ನೋಡಿರಬಹುದು. ಈ ನೀರು ಗೋವಿಂದ ಸಾಗರ್ ಸರೋವರವನ್ನು ರೂಪಿಸುತ್ತದೆ. ಈ ಸರೋವರದ ಉದ್ದವು 90 ಕಿಲೋಮೀಟರ್‌ಗಳಿಗಿಂತ ಹೆಚ್ಚು. ಈ ಸರೋವರದಲ್ಲಿಯೂ ಸಹ 9-10 ಶತಕೋಟಿ ಘನ ಮೀಟರ್‌ಗಳಿಗಿಂತ ಹೆಚ್ಚಿನ ನೀರನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಕೇವಲ 9-10 ಬಿಲಿಯನ್ ಘನ ಮೀಟರ್! ಆದರೆ ತಮ್ಮ ಸಣ್ಣಪುಟ್ಟ ಪ್ರಯತ್ನಗಳ ಮೂಲಕ, ದೇಶವಾಸಿಗಳು ದೇಶದ ವಿವಿಧ ಭಾಗಗಳಲ್ಲಿ 11 ಬಿಲಿಯನ್ ಘನ ಮೀಟರ್ ನೀರನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ - ಇದು ಒಂದು ಅದ್ಭುತ ಪ್ರಯತ್ನವಲ್ಲವೇ!

ಸ್ನೇಹಿತರೇ,  ಈ ನಿಟ್ಟಿನಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಜನರು ಒಂದು ಮಾದರಿಯನ್ನು ರೂಪಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಇಲ್ಲಿನ ಎರಡು ಹಳ್ಳಿಗಳ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿದ್ದವು. ಪ್ರಾಣಿಗಳಿಗೂ ಕುಡಿಯಲು ನೀರು ಇಲ್ಲದ ಕಾಲ ಬಂದೊದಗಿತು. ಕ್ರಮೇಣ ಆ ಕೆರೆ ಹುಲ್ಲು ಮತ್ತು ಕಸಕಡ್ಡಿಗಳಿಂದ ತುಂಬಿಹೋಯಿತು. ಆದರೆ ಕೆಲವು ಗ್ರಾಮಸ್ಥರು ಕೆರೆ ಪುನರುಜ್ಜೀವನಗೊಳಿಸಲು ನಿರ್ಧರಿಸಿ ಕಾರ್ಯನಿರತರಾದರು. ಗಾದೆ ಮಾತಿನಂತೆ 'ಮನಸ್ಸಿದ್ದಲ್ಲಿ ಮಾರ್ಗ'. ಗ್ರಾಮಸ್ಥರ ಈ ಪ್ರಯತ್ನವನ್ನು ನೋಡಿ, ಸುತ್ತಮುತ್ತಲ ಸಾಮಾಜಿಕ ಸಂಸ್ಥೆಗಳು ಸಹ ಅವರೊಂದಿಗೆ ಕೈಜೋಡಿಸಿದವು. ಎಲ್ಲರೂ ಒಗ್ಗೂಡಿ ಕಸಕಡ್ಡಿ ಸ್ವಚ್ಛಗೊಳಿಸಿ, ಹೂಳೆತ್ತುವ ಕೆಲಸ ಮಾಡಿದರು.  ಕೆಲ ಸಮಯದ ನಂತರ ಕೆರೆ ಪ್ರದೇಶವು ಸಂಪೂರ್ಣವಾಗಿ ಸ್ವಚ್ಛವಾಯಿತು. ಈಗ ಜನ ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ನಿಜಕ್ಕೂ, ಇದು ‘catch the rain’ ಅಭಿಯಾನದ ಒಂದು ಉತ್ತಮ ಉದಾಹರಣೆಯಾಗಿದೆ. ಸ್ನೇಹಿತರೇ, ನೀವು ಕೂಡ ಸಮುದಾಯ ಮಟ್ಟದಲ್ಲಿ ಇಂತಹ ಪ್ರಯತ್ನಗಳಿಗೆ ಕೈಜೋಡಿಸಬಹುದು. ಈ ಜನಾಂದೋಲನವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಈಗಲೇ ಯೋಜನೆ ಆರಂಭಿಸಬೇಕು, ಮತ್ತು ನೀವು ಇನ್ನೊಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು - ಸಾಧ್ಯವಾದರೆ, ಬೇಸಿಗೆಯಲ್ಲಿ ನಿಮ್ಮ ಮನೆಯ ಮುಂದೆ ಒಂದು ಪಾತ್ರೆಯಲ್ಲಿ ತಣ್ಣೀರನ್ನು ಇರಿಸಿ. ನಿಮ್ಮ ಮನೆಯ ಛಾವಣಿ ಅಥವಾ ಅಂಗಳದಲ್ಲಿ ಪಕ್ಷಿಗಳಿಗೆ ನೀರನ್ನು ಇರಿಸಿ. ಈ ಪುಣ್ಯದ ಕೆಲಸ ಮಾಡಿದ ನಂತರ ನಿಮಗೆ ಎಷ್ಟು ಒಳ್ಳೆಯ ಅನುಭೂತಿಯಾಗುತ್ತದೆ ಎಂದು ನೀವೇ ಅನುಭವಿಸಿ ನೋಡಿ.

ಸ್ನೇಹಿತರೇ, ಈಗ 'ಮನದ ಮಾತಿನಲ್ಲಿ' ಧೈರ್ಯ ಸಾಹಸದ ಬಗ್ಗೆ, ಸವಾಲುಗಳ ಮಧ್ಯೆಯೂ ಉತ್ಸಾಹ ಮೆರೆದ ವಿಷಯಗಳ ಬಗ್ಗೆ ಮಾತನಾಡೋಣ! ಕೆಲವು ದಿನಗಳ ಹಿಂದೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ, ಮತ್ತೊಮ್ಮೆ ತಮ್ಮ ಸಮರ್ಪಣೆ ಮತ್ತು ಪ್ರತಿಭೆಯ ಮೂಲಕ ನಮ್ಮ ಕ್ರೀಡಾಳುಗಳು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಬಾರಿ ಈ ಕ್ರೀಡೆಗಳಲ್ಲಿ ಮೊದಲಿಗಿಂತ ಹೆಚ್ಚಿನ ಕ್ರೀಡಾಳುಗಳು ಭಾಗವಹಿಸಿದ್ದರು. ಪ್ಯಾರಾ ಸ್ಪೋರ್ಟ್ಸ್ ಎಷ್ಟು ಜನಪ್ರಿಯವಾಗುತ್ತಿದೆ ಎಂಬುದು ಇದರಿಂದ  ತಿಳಿಯುತ್ತದೆ. ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರ ಅದ್ಭುತ ಪ್ರಯತ್ನಗಳಿಗಾಗಿ ನಾನು ಅಭಿನಂದಿಸುತ್ತೇನೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದ ಹರಿಯಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶದ ಕ್ರೀಡಾಳುಗಳನ್ನು ನಾನು ಅಭಿನಂದಿಸುತ್ತೇನೆ. ಈ ಪಂದ್ಯಗಳಲ್ಲಿ, ನಮ್ಮ ವಿಕಲಚೇತನ ಆಟಗಾರರು 18 ರಾಷ್ಟ್ರೀಯ ದಾಖಲೆಗಳನ್ನು ಮಾಡಿದರು. ಅವುಗಳಲ್ಲಿ 12 ನಮ್ಮ ಮಹಿಳಾ ಆಟಗಾರ್ತಿಯರ ಸಾಧನೆಯಾಗಿವೆ. ಈ ವರ್ಷದ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ Arm Wrestler ಜಾಬಿ ಮ್ಯಾಥ್ಯೂ ನನಗೆ ಪತ್ರ ಬರೆದಿದ್ದಾರೆ. ಅವರ ಪತ್ರದ ಕೆಲವು ಭಾಗವನ್ನು ನಾನು ಓದಲು ಬಯಸುತ್ತೇನೆ. ಅವರು ಹೀಗೆ ಬರೆದಿದ್ದಾರೆ-

"ಪದಕ ಗೆಲ್ಲುವುದು ಬಹಳ ವಿಶೇಷ ಅನುಭವ, ಆದರೆ ನಮ್ಮ ಹೋರಾಟ ಕೇವಲ ವೇದಿಕೆಯ ಮೇಲೆ ಸ್ಥಾನ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮದು ನಿತ್ಯ ಹೋರಾಟ. ಹಲವು ವಿಧಗಳಲ್ಲಿ ಜೀವನವು ನಮಗೆ ಪರೀಕ್ಷೆಯನ್ನೊಡ್ಡುತ್ತದೆ, ನಮ್ಮ ಈ  ಹೋರಾಟವನ್ನು ಕೆಲವರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಇದರ ಹೊರತಾಗಿಯೂ, ನಾವು ಧೈರ್ಯದಿಂದ ಮುಂದುವರಿಯುತ್ತೇವೆ. ನಮ್ಮ ಕನಸುಗಳನ್ನು ನನಸಾಗಿಸಲು ನಾವು ಶ್ರಮಿಸುತ್ತೇವೆ. ನಾವು ಯಾರಿಗೇನೂ ಕಡಿಮೆಯಿಲ್ಲ ಎಂದು ನಮ್ಮಲ್ಲಿ ಅಚಲ ವಿಶ್ವಾಸವಿರುತ್ತದೆ."

ಅದ್ಭುತ! ಜಾಬಿ ಮ್ಯಾಥ್ಯೂ ಅವರೇ, ನೀವು ಅದ್ಭುತವಾಗಿ ಬರೆದಿದ್ದೀರಿ. ಈ ಪತ್ರಕ್ಕಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಾಬಿ ಮ್ಯಾಥ್ಯೂ ಮತ್ತು ನಮ್ಮ ಎಲ್ಲಾ ವಿಕಲಚೇತನ ಸ್ನೇಹಿತರಿಗೆ ನಾನು ಹೇಳಲು ಬಯಸುವುದೇನೆಂದರೆ, ನಿಮ್ಮ ಪ್ರಯತ್ನಗಳು ನಮಗೆ ದೊಡ್ಡ ಸ್ಫೂರ್ತಿಯಾಗಿದೆ.ಸ್ನೇಹಿತರೇ, ದೆಹಲಿಯಲ್ಲಿ ಮತ್ತೊಂದು ಬೃಹತ್ ಆಯೋಜನೆಯು ಜನರಿಗೆ ಬಹಳ ಪ್ರೇರಣಾದಾಯಕವಾಗಿತ್ತು, ಜನರಲ್ಲಿ ಉತ್ಸಾಹ ತುಂಬಿತು. ಒಂದು ಆವಿಷ್ಕಾರಕ ಆಲೋಚನೆಯ ರೂಪದಲ್ಲಿ ಮೊಟ್ಟಮೊದಲ ಬಾರಿಗೆ Fit India Carnival ಆಯೋಜಿಸಲಾಯಿತು. ಇದರಲ್ಲಿ ಬೇರೆ ಬೇರೆ ಕ್ಷೇತ್ರಗಳ ಸರಿಸುಮಾರು 25 ಸಾವಿರ ಮಂದಿ ಪಾಲ್ಗೊಂಡಿದ್ದರು. ಇವರೆಲ್ಲರ ಲಕ್ಷ್ಯ-ಗುರಿ ಒಂದೇ ಆಗಿತ್ತು ಅದೆಂದರೆ – ಆರೋಗ್ಯವಾಗಿ ಸದೃಢರಾಗಿರುವುದು ಮತ್ತು ಸದೃಡರಾಗಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ತಮ್ಮ ಆರೋಗ್ಯ ಮಾತ್ರವಲ್ಲದೇ ಪೋಷಣೆ ಸಂಬಂಧಿತ ಅರಿವನ್ನು ಕೂಡಾ ಪಡೆದುಕೊಂಡರು. ನೀವು ವಾಸಿಸುವ ಪ್ರದೇಶಗಳಲ್ಲಿ ಕೂಡಾ ಇಂತಹ ಕಾರ್ನಿವಾಲ್ ಗಳನ್ನು ಆಯೋಜಿಸಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಉಪಕ್ರಮದಲ್ಲಿ ನಿಮಗೆ MY-Bharat ಬಹಳ ಉಪಯುಕ್ತವಾಗಬಹುದು.

ಸ್ನೇಹಿತರೆ, ನಮ್ಮ ದೇಶೀಯ ಆಟ ಈಗ ಜನಪ್ರಿಯ ಸಂಸ್ಕೃತಿಯ ಭಾಗವಾಗುತ್ತಿದೆ. ನಿಮ್ಮೆಲ್ಲರಿಗೂ ಪ್ರಸಿದ್ಧ ರಾಪ್ಪರ್ ಹನುಮಾನ್ ಕೈಂಡ್ ಬಗ್ಗೆ ತಿಳಿದೇ ಇದೆ. ಇತ್ತೀಚೆಗೆ ಇವರ ಹೊಸ ಹಾಡು “Run It Up” ಬಹಳ ಜನಪ್ರಿಯವಾಗುತ್ತಿದೆ. ಇದರಲ್ಲಿ ಕಲಾರಿಪಯುಟ್ಟು, ಗತಕಾದಂತಹ ನಮ್ಮ ಸಾಂಪ್ರದಾಯಿಕ ಸಮರ ಕಲೆಗಳನ್ನು ಕೂಡಾ ಸೇರಿಸಲಾಗಿದೆ.  Hanumankind (हनुमान काइन्ड) ಅವರ ಪ್ರಯತ್ನಗಳಿಂದಾಗಿ ನಮ್ಮ ಸಾಂಪ್ರದಾಯಿಕ ಸಮರ ಕಲೆಗಳ ಬಗ್ಗೆ ವಿಶ್ವಾದ್ಯಂತ ಜನರು ತಿಳಿದುಕೊಳ್ಳಲು ಸಾಧ್ಯವಾಗುತ್ತಿರುವುದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತಿದ್ದೇನೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿ ತಿಂಗಳೂ ನನಗೆ MyGov ಮತ್ತು NaMo App ನಲ್ಲಿ ನಿಮ್ಮ ಅನೇಕ ಸಂದೇಶಗಳು ದೊರೆಯುತ್ತವೆ. ಕೆಲವು ಸಂದೇಶಗಳು ನನ್ನ ಮನ ಮುಟ್ಟಿದರೆ ಇನ್ನು ಕೆಲವು ಸಂದೇಶಗಳು ನನ್ನ ಮನಸ್ಸಿನಲ್ಲಿ ಹೆಮ್ಮೆ ತುಂಬುತ್ತವೆ. ಹಲವು ಬಾರಿ ಈ ಸಂದೇಶಗಳಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ವಿಶೇಷ ಮಾಹಿತಿ ದೊರೆಯುತ್ತದೆ. ಈ ಬಾರಿ ನನ್ನ ಗಮನ ಸೆಳೆದ ಅಂತಹ ಒಂದು ಸಂದೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವಾರಾಣಸಿಯ ಅಥರ್ವ್ ಕಪೂರ್, ಮುಂಬಯಿನ ಆರ್ಯಶ್ ಲೀಖಾ ಮತ್ತು ಅತ್ರೇಯ ಮಾನ್ ಅವರು ನನ್ನ ಇತ್ತೀಚಿನ ಮಾರಿಷಸ್ ಪ್ರವಾಸದ ಬಗ್ಗೆ ತಮ್ಮ ಭಾವನೆಗಳನ್ನು ಬರೆದು ಕಳುಹಿಸಿದ್ದಾರೆ. ಈ ಪ್ರವಾಸದ ಸಮಯದಲ್ಲಿ ಗೀತ್ ಗವಯೀ ಅವರ ಪ್ರದರ್ಶನ ಅವರಿಗೆ ಬಹಳ ಸಂತಸ ತಂದಿತೆಂದು ಅವರು ಬರೆದಿದ್ದಾರೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಬಂದ ಅನೇಕ ಪತ್ರಗಳಲ್ಲಿ ನಾನು ಇದೇ ರೀತಿಯ ಭಾವುಕತೆಯನ್ನು ನೋಡಿದ್ದೇನೆ. ಮಾರಿಷಸ್‌ ನಲ್ಲಿ ಗೀತ್ ಗವಾಯಿ ಅವರ ಅದ್ಭುತ ಪ್ರದರ್ಶನದ ಸಮಯದಲ್ಲಿ ನನಗೆ ನಿಜಕ್ಕೂ ಅದ್ಭುತ ಅನಿಸಿಕೆಯಾಗಿತ್ತು.

ಸ್ನೇಹಿತರೇ, ನಾವು ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವಾಗ, ಎಷ್ಟೇ ದೊಡ್ಡ ಬಿರುಗಾಳಿ ಬಂದರೂ, ಅದು ನಮ್ಮನ್ನು ಬೇರು ಸಹಿತ ಕಿತ್ತುಹಾಕಲು ಸಾಧ್ಯವಿಲ್ಲ. ಊಹಿಸಿಕೊಳ್ಳಿ, ಸುಮಾರು 200 ವರ್ಷಗಳ ಹಿಂದೆ ಭಾರತದಿಂದ ಅನೇಕರು ಗುತ್ತಿಗೆ ಕಾರ್ಮಿಕರಾಗಿ ಮಾರಿಷಸ್‌ ಗೆ ಹೋಗಿದ್ದರು. ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ ಕಾಲಕ್ರಮೇಣ ಅವರು ಅಲ್ಲಿಯೇ ನೆಲೆಸಿದರು. ಅವರು ಮಾರಿಷಸ್‌ ನಲ್ಲಿ ಹೆಸರು ಗಳಿಸಿದರು. ತಮ್ಮ ಪರಂಪರೆಯನ್ನು ಸಂರಕ್ಷಿಸಿಕೊಂಡರು ಮತ್ತು ತಮ್ಮ ಬೇರುಗಳೊಂದಿಗೆ ಸಂಪರ್ಕ ಕಡಿದುಕೊಳ್ಳಲಿಲ್ಲ, ಹಾಗೆಯೇ ಉಳಿಸಿಕೊಂಡು ಬಂದರು. ಇಂತಹ ವಿಷಯಗಳಿಗೆ ಕೇವಲ ಮಾರಿಷಸ್ ಮಾತ್ರಾ ಒಂದು ಉದಾಹರಣೆಯಲ್ಲ. ಕಳೆದ ವರ್ಷ ನಾನು ಗಯಾನಾಗೆ ಹೋದಾಗ, ಅಲ್ಲಿನ ಚೌತಾಲ್ ಪ್ರದರ್ಶನದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ.

ಸ್ನೇಹಿತರೇ, ನಾನು ಈಗ ನಿಮಗೆ ಒಂದು ಆಡಿಯೋ ಕೇಳಿಸುತ್ತೇನೆ

#(Audio clip Fiji)#

ಇದು ನಮ್ಮದೇ ದೇಶದ ಯಾವುದೋ ಭಾಗದ ಮಾತುಕತೆ ಎಂದು ನೀವು ಖಂಡಿತವಾಗಿಯೂ ಯೋಚಿಸುತ್ತಿದ್ದೀರಿ ಅಲ್ಲವೇ. ಆದರೆ ಇದು ಫಿಜಿ ದೇಶಕ್ಕೆ ಸಂಬಂಧಿಸಿದ್ದು ಎಂದು ತಿಳಿದು ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇದು ಫಿಜಿ ದೇಶದ ಬಹಳ ಜನಪ್ರಿಯ ‘ಫಾಗವಾ ಚೌತಾಲ್‘ ಆಗಿದೆ. ಈ ಹಾಡು ಮತ್ತು ಸಂಗೀತ ಪ್ರತಿಯೊಬ್ಬರಲ್ಲೂ ಉತ್ಸಾಹ ತುಂಬುತ್ತದೆ. ನಾನು ನಿಮಗೆ ಮತ್ತೊಂದು ಆಡಿಯೋ ಕೇಳಿಸುತ್ತೇನೆ.

#(Audio clip Surinam)#

ಇದು ಸೂರಿನಾಮ್ ನ ‘ಚೌತಾಲ್’ ಆಡಿಯೋ. ಈ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವ ದೇಶವಾಸಿಗಳು, ಸೂರಿನಾಮ್ ನ ಅಧ್ಯಕ್ಷರು ಮತ್ತು ನನ್ನ ಪ್ರಿಯ ಸ್ನೇಹಿತರಾಗಿರುವ ಚಾನ್ ಸಂತೋಖೀ ಅವರು ಇದರ ಆನಂದ ಆಸ್ವಾದಿಸುತ್ತಿರುವುದನ್ನು ಕಾಣಬಹುದು. ಬೈಠಕ್ ಮತ್ತು ಹಾಡುಗಳ ಈ ಸಂಪ್ರದಾಯವು ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಕೂಡಾ ಬಹಳ ಜನಪ್ರಿಯವೆನಿಸಿದೆ. ಈ ಎಲ್ಲಾ ದೇಶಗಳಲ್ಲಿ ಜನರು ರಾಮಾಯಣವನ್ನು ಬಹಳ ಓದುತ್ತಾರೆ. ಈ ಫಗವಾ ಬಹಳ ಜನಪ್ರಿಯವಾಗಿದೆ ಮತ್ತು ಇಲ್ಲಿನ ಜನರು ಎಲ್ಲಾ ಭಾರತೀಯ ಹಬ್ಬಗಳನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಅವರ ಅನೇಕ ಹಾಡುಗಳು ಭೋಜಪುರಿ, ಅವಧಿ ಅಥವಾ ಮಿಶ್ರ ಭಾಷೆಯಲ್ಲಿರುತ್ತವೆ, ಕೆಲವೊಮ್ಮೆ ಬ್ರಜ್ ಮತ್ತು ಮೈಥಿಲಿ ಭಾಷೆಗಳ ಕೂಡಾ ಬಳಕೆಯಾಗುತ್ತವೆ. ಈ ದೇಶಗಳಲ್ಲಿ ನಮ್ಮ ಸಂಪ್ರದಾಯಗಳನ್ನು ರಕ್ಷಿಸುವವರೆಲ್ಲರೂ ಪ್ರಶಂಸಾರ್ಹರು.  

ಸ್ನೇಹಿತರೇ, ಜಗತ್ತಿನಲ್ಲಿ ಇಂತಹ ಅನೇಕ ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿವೆ. ಅಂತಹ ಒಂದು ಸಂಸ್ಥೆಯೇ - 'ಸಿಂಗಾಪುರ್ ಭಾರತೀಯ ಲಲಿತಾ ಕಲಾ ಸಂಘ ಅಥವಾ ಸಿಂಗಾಪುರ್ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ'. ಭಾರತೀಯ ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಈ ಸಂಸ್ಥೆಯು  ಈಗ ವೈಭವಯುತ 75 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಸಿಂಗಾಪುರದ ಅಧ್ಯಕ್ಷ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಗೌರವಾನ್ವಿತ ಅತಿಥಿಯಾಗಿದ್ದರು. ಅವರು ಈ ಸಂಸ್ಥೆಯ ಪ್ರಯತ್ನಗಳನ್ನು ಬಹಳವಾಗಿ ಶ್ಲಾಘಿಸಿದರು. ನಾನು ಈ ತಂಡಕ್ಕೆ ನನ್ನ ಅನೇಕಾನೇಕ ಶುಭ ಹಾರೈಕೆಗಳನ್ನು ಕೋರುತ್ತೇನೆ.

ಸ್ನೇಹಿತರೇ, ‘ಮನದ ಮಾತಿನಲ್ಲಿ’  ನಾವು ದೇಶವಾಸಿಗಳ ಸಾಧನೆಯೊಂದಿಗೆ ಆಗಾಗ್ಗೆ ಸಾಮಾಜಿಕ ವಿಷಯಗಳ ಕುರಿತು ಮಾತನಾಡುತ್ತೇವೆ. ಅನೇಕ ಬಾರಿ ಸವಾಲುಗಳ ಬಗ್ಗೆ ಕೂಡಾ ಚರ್ಚಿಸಲಾಗುತ್ತದೆ. ಈ ಬಾರಿ ‘ಮನದ ಮಾತಿನಲ್ಲಿ’ ನಾನು, ನೇರವಾಗಿ ನಮ್ಮೆಲ್ಲರಿಗೂ ಸಂಬಂಧಿಸಿದಂತಹ ಒಂದು ಸವಾಲಿನ ಬಗ್ಗೆ ಮಾತನಾಡಲು ಬಯಸುತ್ತೇನೆ. ಈ ಸವಾಲೆಂದರೆ ಅದು ‘ಜವಳಿ ತ್ಯಾಜ್ಯ’. ಈ ಜವಳಿ ತ್ಯಾಜ್ಯ ಯಾವ ಹೊಸ ಸವಾಲು ಒಡ್ಡಿದೆ ಎಂದು ನೀವು ಯೋಚಿಸುತ್ತಿರಬಹುದಲ್ಲವೇ? ವಾಸ್ತವದಲ್ಲಿ ಜವಳಿ ತ್ಯಾಜ್ಯ ಇಡೀ ವಿಶ್ವಕ್ಕೆ ಒಂದು ಹೊಸ ಚಿಂತೆಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹಳೆಯ ಉಡುಪುಗಳನ್ನು ಬೇಗ ಬೇಗ ಎಸೆದು ಹೊಸ ಉಡುಪುಗಳನ್ನು ಖರೀದಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ನೀವು ಧರಿಸದೇ ಬಿಟ್ಟ ಹಳೆಯ ಬಟ್ಟೆಗಳು ಏನಾಗುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದೇ ಜವಳಿ ತ್ಯಾಜ್ಯವಾಗುತ್ತದೆ. ಈ ವಿಷಯದ ಬಗ್ಗೆ ಅನೇಕ ಜಾಗತಿಕ ಸಂಶೋಧನೆಗಳು ನಡೆಯುತ್ತಿವೆ. ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಪ್ರಮಾಣದ ಜವಳಿ ತ್ಯಾಜ್ಯ ಮಾತ್ರ ಹೊಸ ಬಟ್ಟೆಗಳಲ್ಲಿ ರೀಸೈಕಲ್ ಆಗುತ್ತದೆ – ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಮಾತ್ರಾ ಎಂಬ ವಿಷಯ ಒಂದು ಸಂಶೋಧನೆಯಿಂದ ಹೊರಬಿದ್ದಿದೆ! ವಿಶ್ವದಲ್ಲಿ ಅತ್ಯಂತ ಹೆಚ್ಚು ಜವಳಿ ತ್ಯಾಜ್ಯ ಹೊರಬೀಳುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಂದರೆ ನಮ್ಮ ಮುಂದಿರುವ ಸವಾಲು ಬಹಳ ದೊಡ್ಡದು ಎಂದು ಇದರ ಅರ್ಥ. ಆದರೆ ನಮ್ಮ ದೇಶದಲ್ಲಿ ಇಂತಹ ಸವಾಲುಗಳನ್ನು ಎದುರಿಸಲು ಅನೇಕ ಶ್ಲಾಘನೀಯ ಪ್ರಯತ್ನಗಳು ನಡೆಯುತ್ತಿವೆ ಎನ್ನುವುದು ನನಗೆ ಸಂತಸ ತರುವ ವಿಷಯವಾಗಿದೆ. ಅನೇಕ ಭಾರತೀಯ ನವೋದ್ಯಮಗಳು textile recovery facilities ಕುರಿತು ಕೆಲಸ ಆರಂಭಿಸಿವೆ. ತ್ಯಾಜ್ಯ ಆಯುವ ನಮ್ಮ ಸೋದರ - ಸೋದರಿಯರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿರುವ ಇಂತಹ ಅನೇಕ ತಂಡಗಳಿವೆ. ಸುಸ್ಥಿರ ಫ್ಯಾಷನ್‌ ನಿಟ್ಟಿನಲ್ಲಿ ಅನೇಕ ಯುವಜನರು ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹಳೆಯ ಬಟ್ಟೆ ಮತ್ತು ಬೂಟುಗಳನ್ನು ಮರುಬಳಕೆ ಮಾಡಿ ಅಗತ್ಯವಿರುವವರಿಗೆ ತಲುಪಿಸುತ್ತಾರೆ. ಅಲಂಕಾರಿಕ ವಸ್ತುಗಳು, ಕೈಚೀಲಗಳು, ಲೇಖನ ಸಾಮಗ್ರಿಗಳು ಮತ್ತು ಆಟಿಕೆಗಳಂತಹ ಅನೇಕ ವಸ್ತುಗಳನ್ನು ಜವಳಿ ತ್ಯಾಜ್ಯದಿಂದ ತಯಾರಿಸಲಾಗುತ್ತಿದೆ. ಅನೇಕ ಸಂಸ್ಥೆಗಳು ಇತ್ತೀಚೆಗೆ ‘circular fashion brand’ ಅನ್ನು ಜನಪ್ರಿಯಗೊಳಿಸುವಲ್ಲಿ ತೊಡಗಿಕೊಂಡಿವೆ. ಹೊಸ ಹೊಸ rental ವೇದಿಕೆಗಳೂ ತೆರೆದುಕೊಂಡಿದ್ದು, ಇಲ್ಲಿ designer ಉಡುಪುಗಳು ಬಾಡಿಗೆ ಆಧಾರದಲ್ಲಿ ದೊರೆಯುತ್ತವೆ. ಕೆಲವು ಸಂಸ್ಥೆಗಳು ಹಳೆಯ ಬಟ್ಟೆಗಳನ್ನು ತೆಗೆದುಕೊಂಡು ಅವುಗಳನ್ನು ಪುನಃ ಬಳಕೆಮಾಡುವಂತೆ ಸಿದ್ಧಪಡಿಸಿ, ಅವುಗಳನ್ನು ಬಡವರಿಗೆ ತಲುಪಿಸುತ್ತವೆ.

ಸ್ನೇಹಿತರೇ, ಕೆಲವು ನಗರಗಳು ಜವಳಿ ತ್ಯಾಜ್ಯವನ್ನು ನಿರ್ವಹಿಸುವಲ್ಲಿ ತಮ್ಮದೇ ಆದ ಗುರುತು ಮೂಡಿಸುತ್ತಿವೆ. ಹರಿಯಾಣಾದ ಪಾನಿಪತ್ textile recycling ನ ಜಾಗತಿಕ hub ನ ರೂಪದಲ್ಲಿ ಹೊರಹೊಮ್ಮುತ್ತಿದೆ. ಬೆಂಗಳೂರು ಕೂಡಾ ಆವಿಷ್ಕಾರಕ ತಂತ್ರಜ್ಞಾನ ಪರಿಹಾರಗಳಿಂದ ತನ್ನದೇ ಆದ ಗುರುತು ಮೂಡಿಸುತ್ತಿದೆ. ಇಲ್ಲಿ ಅರ್ಧಕ್ಕಿಂತ ಹೆಚ್ಚು ಜವಳಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ನಮ್ಮ ಇತರ ನಗರಗಳಿಗೂ ಇದು ಒಂದು ಉದಾಹರಣೆಯಾಗಿದೆ. ಇದೇ ರೀತಿ ತಮಿಳುನಾಡಿನ ತಿರುಪ್ಪೂರ್, ತ್ಯಾಜ್ಯ ನೀರು ಸಂಸ್ಕರಣೆ ಮತ್ತು ನವೀಕರಿಸಬಹುದಾದ ಇಂಧನದ ಮೂಲಕ ಜವಳಿ ತ್ಯಾಜ್ಯ ನಿರ್ವಹಣೆಯಲ್ಲಿಯೂ ತೊಡಗಿಸಿಕೊಂಡಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಸದೃಢತೆಯಲ್ಲಿ count ಅಥವಾ ಎಣಿಕೆಯ ಪಾತ್ರ ಬಹಳ ದೊಡ್ಡದಾಗಿದೆ. ಒಂದು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿದ್ದೀರಿ ಎನ್ನುವುದರ ಎಣಿಕೆ, ಒಂದು ದಿನದಲ್ಲಿ ಎಷ್ಟು ಕ್ಯಾಲೊರಿ ಸೇವಿಸಿದ್ದೀರಿ ಎನ್ನುವುದರ ಎಣಿಕೆ, ಎಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡಿದ್ದೀರಿ ಎನ್ನುವುದರ ಎಣಿಕೆ, ಇಷ್ಟೊಂದು ಎಣಿಕೆಗಳ ನಡುವೆ ಮತ್ತೊಂದು ಇಳಿಎಣಿಕೆ ಆರಂಭವಾಗಲಿದೆ. ಅದೇ ಅಂತಾರಾಷ್ಟ್ರೀಯ ಯೋಗ ದಿನದ ಇಳಿಎಣಿಕೆ. ಯೋಗ ದಿನಕ್ಕೆ ಈಗ 100 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ. ನೀವು ಇದುವರೆಗೂ ನಿಮ್ಮ ಜೀವನದಲ್ಲಿ ಯೋಗಾಭ್ಯಾಸ ಸೇರಿಸಿಕೊಂಡಿಲ್ಲವೆಂದಾದಲ್ಲಿ, ಇನ್ನೂ ವಿಳಂಬವಾಗಿಲ್ಲ, ಈಗ ಖಂಡಿತವಾಗಿಯೂ ನಿಮ್ಮ ದಿನಚರಿಯಲ್ಲಿ ಯೋಗ ಸೇರಿಸಿಕೊಳ್ಳಿ. 10 ವರ್ಷಗಳ ಹಿಂದೆ 2015 ರ ಜೂನ್ 21 ರಂದು ಪ್ರಥಮ ಯೋಗ ದಿನ ಆಚರಿಸಲಾಯಿತು. ಈಗಂತೂ ಈ ದಿನವು ಯೋಗದ ಬೃಹತ್ ಉತ್ಸವದ ರೂಪವನ್ನು ಪಡೆದುಕೊಂಡಿದೆ. ಇದು ಭಾರತದಿಂದ ಮನುಕುಲಕ್ಕೆ ದೊರೆತ ಅಮೂಲ್ಯ ಕೊಡುಗೆಯಾಗಿದ್ದು, ಭವಿಷ್ಯದ ಪೀಳಿಗೆಗೆ ಇದು ತುಂಬಾ ಉಪಯುಕ್ತವಾಗಲಿದೆ. 2025 ರ ಯೋಗ ದಿನದ ಘೋಷವಾಕ್ಯವೆಂದರೆ 'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎನ್ನುವುದಾಗಿದೆ. ಅಂದರೆ ನಾವು ಯೋಗದ ಮುಖಾಂತರ ಇಡೀ ವಿಶ್ವವನ್ನು ಆರೋಗ್ಯಪೂರ್ಣವನ್ನಾಗಿ ಮಾಡಬೇಕೆಂದು ಬಯಸುತ್ತೇವೆ.

ಸ್ನೇಹಿತರೇ, ಇಂದು ಪ್ರಪಂಚದಾದ್ಯಂತ ನಮ್ಮ ಯೋಗ ಮತ್ತು ಸಾಂಪ್ರದಾಯಿಕ ಔಷಧದ ಬಗ್ಗೆ ಕುತೂಹಲ ಹೆಚ್ಚುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಹೆಚ್ಚಿನ ಸಂಖ್ಯೆಯ ಯುವಜನತೆ ಯೋಗ ಮತ್ತು ಆಯುರ್ವೇದವನ್ನು ಅತ್ಯುತ್ತಮ ಆರೋಗ್ಯ ಮಾಧ್ಯಮವೆಂದು ಪರಿಗಣಿಸಿ ಅಳವಡಿಸಿಕೊಳ್ಳುತ್ತಿದ್ದಾರೆ. ಈಗ ದಕ್ಷಿಣ ಅಮೆರಿಕಾದ ದೇಶ ಚಿಲಿಯ ಬಗ್ಗೆ ನೋಡೋಣ. ಇಲ್ಲಿ ಆಯುರ್ವೇದ ಬಹಳ ಬೇಗ ಜನಪ್ರಿಯವಾಗುತ್ತಿದೆ. ಕಳೆದ ವರ್ಷ, ನಾನು ಬ್ರೆಜಿಲ್‌ ಗೆ ಭೇಟಿ ನೀಡಿದ್ದಾಗ ಚಿಲಿಯ ಅಧ್ಯಕ್ಷರನ್ನು ಭೇಟಿಯಾಗಿದ್ದೆ. ಆಯುರ್ವೇದದ ಜನಪ್ರಿಯತೆಯ ಬಗ್ಗೆ ನಮ್ಮ ನಡುವೆ ಸಾಕಷ್ಟು ವಿಚಾರ ವಿನಿಮಯ ನಡೆದವು. ನನಗೆ ಸೊಮೋಸ್ ಇಂಡಿಯಾ ಎಂಬ ತಂಡದ ಬಗ್ಗೆ ತಿಳಿಯಿತು. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ – “ನಾವು ಭಾರತ” ಎಂಬುದಾಗಿದೆ. ಈ ತಂಡವು ಸುಮಾರು ಒಂದು ದಶಕದಿಂದ ಯೋಗ ಮತ್ತು ಆಯುರ್ವೇದವನ್ನು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದೆ. ಯೋಗ ಚಿಕಿತ್ಸೆ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೇಲೆ ಅದು ಗಮನ ಕೇಂದ್ರೀಕರಿಸುತ್ತದೆ. ಈ ತಂಡ ಆಯುರ್ವೇದ ಮತ್ತು ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸುತ್ತಿದೆ. ಹಿಂದಿನ ವರ್ಷದ ಬಗ್ಗೆ ಮಾತನಾಡುವುದಾದರೆ, ಸುಮಾರು 9 ಸಾವಿರ ಜನರು ಅವರ ವಿವಿಧ ಕಾರ್ಯಕ್ರಮಗಳು ಮತ್ತು ಕೋರ್ಸ್‌ ಗಳಲ್ಲಿ ಭಾಗವಹಿಸಿದ್ದರು. ಈ ತಂಡದೊಂದಿಗೆ ಸಂಬಂಧ ಹೊಂದಿದ್ದ ಪ್ರತಿಯೊಬ್ಬರ ಪ್ರಯತ್ನಗಳನ್ನೂ ನಾನು ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ’ ಈಗ ಒಂದು ಚಮತ್ಕಾರಿ, ಕುತೂಹಲಕಾರಿ ಪ್ರಶ್ನೆ! ನೀವು ಎಂದಾದರೂ ಹೂವುಗಳ ಪ್ರಯಾಣದ ಬಗ್ಗೆ ಯೋಚಿಸಿರುವಿರಾ? ಗಿಡ, ಮರಗಳಿಂದ ಹೊರಟ ಹೂವುಗಳ ಪ್ರಯಾಣ ದೇವಾಲಯಗಳವರೆಗೂ ಸಾಗುತ್ತದೆ.  ಕೆಲವು ಹೂವುಗಳು ಮನೆಗಳನ್ನು ಸುಂದರವಾಗಿಸುತ್ತವೇ, ಕೆಲವು ಸುಗಂಧ ದ್ರವ್ಯದಲ್ಲಿ ಕರಗಿ ನಾಲ್ಕೂ ದಿಕ್ಕಿನಲ್ಲಿ ಪರಿಮಳ ಹರಡುತ್ತವೆ. ಆದರೆ ನಾನು ಇಂದು ನಿಮಗೆ ಹೂವುಗಳ ಮತ್ತೊಂದು ಪಯಣದ ಬಗ್ಗೆ ಹೇಳುತ್ತೇನೆ. ನೀವು ಮಹುವಾ (ಇಪ್ಪೆ) ಹೂವುಗಳ ಬಗ್ಗೆ ಖಂಡಿತವಾಗಿಯೂ ಕೇಳಿರುತ್ತೀರಿ. ನಮ್ಮ ಹಳ್ಳಿಗಳು ಮತ್ತು ವಿಶೇಷವಾಗಿ ಬುಡಕಟ್ಟು ಸಮುದಾಯದ ಜನರು ಇದರ ಮಹತ್ವದ ಬಗ್ಗೆ ಬಹಳ ಚೆನ್ನಾಗಿ ಅರಿತಿರುತ್ತಾರೆ. ದೇಶದ ಹಲವು ಭಾಗಗಳಲ್ಲಿ ಮಹುವಾ ಹೂವುಗಳ ಪ್ರಯಾಣ ಈಗ ಹೊಸ ಹಾದಿಯಲ್ಲಿ ಆರಂಭವಾಗಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಮಹುವಾ ಹೂವುಗಳಿಂದ ಕುಕೀಗಳನ್ನು ತಯಾರಿಸಲಾಗುತ್ತಿದೆ. ರಾಜಾಖೋಹ್ ಗ್ರಾಮದ ನಾಲ್ವರು ಸೋದರಿಯರ ಪ್ರಯತ್ನದಿಂದಾಗಿ ಈ ಕುಕೀಗಳು ಬಹಳ ಜನಪ್ರಿಯವಾಗುತ್ತಿವೆ. ಈ ಮಹಿಳೆಯರ ಉತ್ಸಾಹವನ್ನು ನೋಡಿ, ಒಂದು ದೊಡ್ಡ ಕಂಪನಿಯವರು ಅವರಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ತರಬೇತಿ ನೀಡಿದರು. ಇದರಿಂದ ಪ್ರೇರಿತರಾದ ಗ್ರಾಮದ ಹಲವು ಮಹಿಳೆಯರು ಇವರೊಂದಿಗೆ ಸೇರಿಕೊಂಡರು. ಇವರು ತಯಾರಿಸುವ ಮಹುವಾ ಕುಕೀಗಳಿಗೆ ಬೇಡಿಕೆ ವೇಗವಾಗಿ ಏರಿಕೆಯಾಗುತ್ತಿದೆ. ತೆಲಂಗಾಣಾದ ಅದಿಲಾಬಾದ್ ಜಿಲ್ಲೆಯಲ್ಲಿ ಕೂಡಾ ಇಬ್ಬರು ಸೋದರಿಯರು ಮಹುವಾ ಹೂವುಗಳಿಂದ ಹೊಸದೊಂದು ಪ್ರಯೋಗವನ್ನು ಮಾಡಿದ್ದಾರೆ. ಅವರು ಇದರಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸುತ್ತಾರೆ, ಇದನ್ನು ಜನರು ಬಹಳವಾಗಿ ಇಷ್ಟಪಡುತ್ತಾರೆ. ಇವರ ಭಕ್ಷ್ಯಗಳಲ್ಲಿ ಬುಡಕಟ್ಟು ಸಂಸ್ಕೃತಿಯ ಸ್ವಾದ, ಮಾಧುರ್ಯವೂ ತುಂಬಿರುತ್ತದೆ.

ಸ್ನೇಹಿತರೇ, ನಾನು ನಿಮಗೆ ಮತ್ತೊಂದು ಅದ್ಭುತ ಹೂವಿನ ಬಗ್ಗೆ ಹೇಳಲು ಇಷ್ಟಪಡುತ್ತೇನೆ, ಅದರ ಹೆಸರು ‘ಕೃಷ್ಣ ಕಮಲ’ ಎಂಬುದಾಗಿದೆ. ನೀವು ಗುಜರಾತ್ ನ ಏಕತಾ ನಗರದಲ್ಲಿ ಏಕತಾ ಪ್ರತಿಮೆ ನೋಡಲು ಹೋಗಿರುವಿರಾ? ಏಕತಾ ಪ್ರತಿಮೆಯ ಸುತಮುತ್ತ ನಿಮಗೆ ಬಹಳಷ್ಟು ಸಂಖ್ಯೆಯಲ್ಲಿ ಈ ಕೃಷ್ಣ ಕಮಲ ಕಾಣಬರುತ್ತದೆ. ಈ ಹೂವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ. ಈ ಕೃಷ್ಣ ಕಮಲಗಳು ಏಕತಾ ನಗರದ ಆರೋಗ್ಯ ವನ, ಏಕತಾ ನರ್ಸರಿ, ವಿಶ್ವ ವನ ಮತ್ತು ಮಿಯಾವಾಕಿ ಅರಣ್ಯದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಇಲ್ಲಿ ಲಕ್ಷಗಟ್ಟಲೆ ಕೃಷ್ಣ ಕಮಲ ಗಿಡಗಳನ್ನು ಯೋಜಿತ ರೀತಿಯಲ್ಲಿ ನೆಡಲಾಗಿದೆ. ನೀವು ಸುತ್ತಲೂ ನೋಡಿದರೆ. ಸಾಕಷ್ಟು ಪ್ರಮಾಣದಲ್ಲಿ ಹೂವುಗಳ ಆಸಕ್ತಿದಾಯಕ ಪ್ರಯಾಣಗಳು ಕಾಣಬರುತ್ತವೆ. ನೀವು ವಾಸವಾಗಿರುವ ಪ್ರದೇಶದಲ್ಲಿ ಹೂವುಗಳ ಇಂತಹ ವಿಶಿಷ್ಠ ಪ್ರಯಾಣದ ಬಗ್ಗೆ ನನಗೆ ಕೂಡಾ ಬರೆದು ತಿಳಿಸಿರಿ.

ನನ್ನ ಪ್ರೀತಿಯ ಬಾಂಧವರೆ, ನೀವು ಎಂದಿನಂತೆಯೇ ನಿಮ್ಮ ಚಿಂತನೆಗಳು, ಅನುಭವಗಳು ಮತ್ತು ಮಾಹಿತಿಯನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರಿ, ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಯಾವುದಾದರೂ ವಿಷಯ ನಿಮಗೆ ಸಾಮಾನ್ಯವಾಗಿ ತೋರಬಹುದು ಆದರೆ ಇತರರಿಗೆ ಆ ವಿಷಯವು ತುಂಬಾ ಆಸಕ್ತಿದಾಯಕ ಮತ್ತು ಹೊಸದಾಗಿ ತೋರಬಹುದು. ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ, ನಮ್ಮಲ್ಲಿ ಪ್ರೇರಣೆ ತುಂಬುವಂತಹ ದೇಶವಾಸಿಗಳ ವಿಷಯದ ಬಗ್ಗೆ ಮಾತನಾಡೋಣ. ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.

 

*****


(Release ID: 2116736) Visitor Counter : 38