ರಾಷ್ಟ್ರಪತಿಗಳ ಕಾರ್ಯಾಲಯ
'ನಾರಿ ಶಕ್ತಿ ಸೆ ವಿಕಸಿತ ಭಾರತ' ಶೀರ್ಷಿಕೆಯ ಮೇಲಣ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಭಾರತದ ರಾಷ್ಟ್ರಪತಿ
Posted On:
08 MAR 2025 1:39PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಮಾರ್ಚ್ 8, 2025) ಹೊಸದಿಲ್ಲಿಯಲ್ಲಿ 'ನಾರಿ ಶಕ್ತಿ ಸೆ ವಿಕ್ಷಿತ್ ಭಾರತ್' ಶೀರ್ಷಿಕೆಯ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಸಮ್ಮೇಳನವನ್ನು ಆಯೋಜಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಅಂತರರಾಷ್ಟ್ರೀಯ ಮಹಿಳಾ ದಿನದಂದು ನಾಗರಿಕರಿಗೆ ಶುಭ ಕೋರಿದರು ಮತ್ತು ಈ ದಿನವು ಮಹಿಳೆಯರ ಸಾಧನೆಗಳನ್ನು ಗೌರವಿಸಲು, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ನಮ್ಮನ್ನು ಸಮರ್ಪಿಸಿಕೊಳ್ಳುವ ಸಂದರ್ಭವಾಗಿದೆ ಎಂದು ಹೇಳಿದರು.

ಇಂದು ನಾವು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ 50ನೇ ವರ್ಷವನ್ನು ಆಚರಿಸುತ್ತಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು. ಈ ಅವಧಿಯಲ್ಲಿ, ಮಹಿಳಾ ಸಮುದಾಯವು ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ತಮ್ಮ ಜೀವನ ಪ್ರಯಾಣವನ್ನು ಈ ಪ್ರಗತಿಯ ಒಂದು ಭಾಗವೆಂದು ಪರಿಗಣಿಸುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು. ಒಡಿಶಾದ ಸರಳ ಕುಟುಂಬ ಮತ್ತು ಹಿಂದುಳಿದ ಪ್ರದೇಶದಲ್ಲಿ ಜನಿಸಿದ ತಾವು ರಾಷ್ಟ್ರಪತಿ ಭವನಕ್ಕೆ ತಮ್ಮ ಪ್ರಯಾಣವು ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಮತ್ತು ಸಾಮಾಜಿಕ ನ್ಯಾಯದ ಕಥೆಯನ್ನು ಹೇಳುತ್ತದೆ ಎಂದು ಅವರು ಹೇಳಿದರು. ಮಹಿಳೆಯರ ಯಶಸ್ಸಿನ ಉದಾಹರಣೆಗಳು ಬೆಳೆಯುತ್ತಲೇ ಇರುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಹೆಣ್ಣುಮಕ್ಕಳಿಗೆ ಮುಂದೆ ಸಾಗಲು ಉತ್ತಮ ವಾತಾವರಣ ಅಗತ್ಯ ಎಂದು ರಾಷ್ಟ್ರಪತಿ ಪ್ರತಿಪಾದಿಸಿದರು. ಒತ್ತಡ ಅಥವಾ ಭಯವಿಲ್ಲದೆ ತಮ್ಮ ಜೀವನದ ಬಗ್ಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ವಾತಾವರಣವನ್ನು ಅವರು ಪಡೆಯಬೇಕು. ಯಾವುದೇ ಮಗಳು ಅಥವಾ ಸಹೋದರಿ ಎಲ್ಲಿಗೆ ಬೇಕಾದರೂ ಹೋಗಲು ಅಥವಾ ಒಂಟಿಯಾಗಿ ಉಳಿಯಲು ಹೆದರದಂತಹ ಆದರ್ಶ ಸಮಾಜವನ್ನು ನಾವು ರಚಿಸಬೇಕಾಗಿದೆ. ಮಹಿಳೆಯರ ಬಗ್ಗೆ ಗೌರವದ ಭಾವನೆ ಮಾತ್ರ ಭಯ ಮುಕ್ತ ಸಾಮಾಜಿಕ ವಾತಾವರಣವನ್ನು ಸೃಷ್ಟಿಸುತ್ತದೆ. ಅಂತಹ ವಾತಾವರಣದಲ್ಲಿ ಹುಡುಗಿಯರು ಪಡೆಯುವ ಆತ್ಮವಿಶ್ವಾಸವು ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.

ನಾವು ಮಹಿಳೆಯರ ಪ್ರತಿಭೆಯನ್ನು ಗೌರವಿಸಿದಾಗಲೆಲ್ಲಾ ಅವರು ನಮ್ಮನ್ನು ಎಂದಿಗೂ ನಿರಾಶೆಗೊಳಿಸಿಲ್ಲ ಎಂದು ರಾಷ್ಟ್ರಪತಿ ಹೇಳಿದರು. ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಸರೋಜಿನಿ ನಾಯ್ಡು, ರಾಜಕುಮಾರಿ ಅಮೃತ್ ಕೌರ್, ಸುಚೇತಾ ಕೃಪಲಾನಿ ಮತ್ತು ಹನ್ಸಾಬೆನ್ ಮೆಹ್ತಾ ಅವರಂತಹ ಗಣ್ಯ ವ್ಯಕ್ತಿಗಳ ಕೊಡುಗೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ಮಹಿಳೆಯರು ತಮ್ಮ ಬುದ್ಧಿವಂತಿಕೆ, ಜ್ಞಾನ ಮತ್ತು ಅರಿವಿನ ಬಲದಿಂದ ಖ್ಯಾತಿಯನ್ನು ಗಳಿಸುವ ಮೂಲಕ ಅತ್ಯುನ್ನತ ಸ್ಥಾನವನ್ನು ಪಡೆದುದಲ್ಲದೆ, ದೇಶ ಮತ್ತು ಸಮಾಜದ ಪ್ರತಿಷ್ಠೆಯನ್ನು ಹೆಚ್ಚಿಸಿದ ಅನೇಕ ಉದಾಹರಣೆಗಳಿವೆ. ಅದು ವಿಜ್ಞಾನ, ಕ್ರೀಡೆ, ರಾಜಕೀಯ ಅಥವಾ ಸಮಾಜ ಸೇವೆಯಾಗಿರಲಿ - ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಪ್ರತಿಭೆಗೆ ಗೌರವವನ್ನು ತುಂಬಿದ್ದಾರೆ ಎಂದೂ ರಾಷ್ಟ್ರಪತಿ ಹೇಳಿದರು.
ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿರುವಾಗ, ದೇಶದ ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ವೇಗವಾಗಿ ಹೆಚ್ಚಾಗಬೇಕು ಎಂದು ರಾಷ್ಟ್ರಪತಿ ಹೇಳಿದರು. ಭಾರತದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲಿಯೂ, ಮಹಿಳೆಯರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ರಜೆ ತೆಗೆದುಕೊಳ್ಳುತ್ತಾರೆ ಅಥವಾ ಕೆಲಸದ ಬಗ್ಗೆ ಅವರ ಗಮನ ಕಡಿಮೆ ಇರುತ್ತದೆ ಎಂಬ ಭಾವನೆ/ ನಂಬಿಕೆಯು ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆಯಾಗಿರಲು ಒಂದು ಕಾರಣವಾಗಿದೆ ಎಂಬುದರತ್ತ ಅವರು ಗಮನಸೆಳೆದರು. ಆದರೆ ಈ ಆಲೋಚನೆ ಸರಿಯಲ್ಲ. ಮಕ್ಕಳ ಬಗ್ಗೆ ಸಮಾಜಕ್ಕೆ ಯಾವುದೇ ಜವಾಬ್ದಾರಿ ಇಲ್ಲವೇ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು. ಕುಟುಂಬದಲ್ಲಿ ಮೊದಲ ಶಿಕ್ಷಕಿ ತಾಯಿ ಎಂದು ನಮಗೆಲ್ಲರಿಗೂ ತಿಳಿದಿದೆ. ಒಬ್ಬ ತಾಯಿ ಮಕ್ಕಳನ್ನು ನೋಡಿಕೊಳ್ಳಲು ರಜೆ ತೆಗೆದುಕೊಂಡರೆ, ಅವಳ ಈ ಪ್ರಯತ್ನವು ಸಮಾಜದ ಸುಧಾರಣೆಗಾಗಿಯೂ ಆಗಿದೆ. ತಾಯಿ ತನ್ನ ಪ್ರಯತ್ನಗಳ ಮೂಲಕ ತನ್ನ ಮಗುವನ್ನು ಆದರ್ಶ ನಾಗರಿಕನನ್ನಾಗಿ ಮಾಡಬಹುದು ಎಂದವರು ನುಡಿದರು.
ಸ್ವಾವಲಂಬಿ, ಸ್ವಾಭಿಮಾನಿ, ಸ್ವತಂತ್ರ ಮತ್ತು ಸಶಕ್ತ ಮಹಿಳೆಯರ ಬಲದಿಂದ ಮಾತ್ರ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಬಹುದು ಎಂದು ರಾಷ್ಟ್ರಪತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವು ನಮ್ಮೆಲ್ಲರ ಸಂಕಲ್ಪವಾಗಿದೆ, ಅದನ್ನು ನಾವೆಲ್ಲರೂ ಒಟ್ಟಾಗಿ ಪೂರೈಸಬೇಕಾಗಿದೆ. ಆದ್ದರಿಂದ, ಬಲಶಾಲಿ, ಸಶಕ್ತ ಮತ್ತು ಸ್ವಾವಲಂಬಿಯಾಗಲು ಪ್ರತಿ ಹಂತದಲ್ಲೂ ಮಹಿಳೆಯರನ್ನು ಪುರುಷರು ಬೆಂಬಲಿಸಬೇಕು. ಮಹಿಳೆಯರು ತಮ್ಮ ಜೀವನದಲ್ಲಿ ಸಂಪೂರ್ಣ ಆತ್ಮವಿಶ್ವಾಸ, ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಮುಂದೆ ಸಾಗಬೇಕು ಮತ್ತು ದೇಶ ಹಾಗು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದವರು ಹೇಳಿದರು.
Please click here to see the President's Speech-
*****
(Release ID: 2109882)
Visitor Counter : 14
Read this release in:
Odia
,
Bengali
,
English
,
Urdu
,
Hindi
,
Marathi
,
Bengali-TR
,
Punjabi
,
Gujarati
,
Tamil
,
Malayalam