ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

ರಾಷ್ಟ್ರೀಯ ರೋಪ್‌ ವೇ ಅಭಿವೃದ್ಧಿ ಕಾರ್ಯಕ್ರಮ - ಪರ್ವತಮಾಲ ಪರಿಯೋಜನಾ ಅಡಿಯಲ್ಲಿ ಉತ್ತರಾಖಂಡ ರಾಜ್ಯದ ಸೋನ್‌ ಪ್ರಯಾಗದಿಂದ ಕೇದಾರನಾಥಕ್ಕೆ (12.9 ಕಿ.ಮೀ) ರೋಪ್‌ ವೇ ಯೋಜನೆಗೆ ಸಂಪುಟದ ಅನುಮೋದನೆ

Posted On: 05 MAR 2025 3:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ), ಸೋನ್‌ ಪ್ರಯಾಗದಿಂದ ಕೇದಾರನಾಥಕ್ಕೆ 12.9 ಕಿ.ಮೀ ರೋಪ್‌ ವೇ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯನ್ನು ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿ ಬಿ ಎಫ್‌ ಒ ಟಿ) ಮಾದರಿಯಲ್ಲಿ ಒಟ್ಟು 4,081.28 ಕೋಟಿ ರೂ. ಬಂಡವಾಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಈ ರೋಪ್‌ ವೇ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಮತ್ತು ಇದು ಅತ್ಯಂತ ಮುಂದುವರಿದ ಟ್ರೈ-ಕೇಬಲ್ ಡಿಟ್ಯಾಚೇಬಲ್ ಗೊಂಡೊಲಾ (3S) ತಂತ್ರಜ್ಞಾನವನ್ನು ಆಧರಿಸಿದೆ. ಇದು ಪ್ರತಿ ಗಂಟೆಗೆ ಪ್ರತಿ ದಿಕ್ಕಿಗೆ 1,800 ಪ್ರಯಾಣಿಕರನ್ನು (ಪಿ ಪಿ ಎಚ್ ಪಿ ಡಿ) ಮತ್ತು ದಿನಕ್ಕೆ 18,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯದ ವಿನ್ಯಾಸವನ್ನು ಹೊಂದಿದೆ.

ಕೇದಾರನಾಥಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಈ ರೋಪ್‌ ವೇ ಯೋಜನೆಯು ವರದಾನವಾಗಲಿದೆ. ಏಕೆಂದರೆ ಇದು ಪರಿಸರ ಸ್ನೇಹಿ, ಆರಾಮದಾಯಕ ಮತ್ತು ವೇಗದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಒಂದು ದಿಕ್ಕಿನ ಪ್ರಯಾಣದ ಸಮಯವನ್ನು ಈಗಿರುವ 8 ರಿಂದ 9 ಗಂಟೆಗಳಿಂದ ಸುಮಾರು 36 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.

ಈ ರೋಪ್‌ ವೇ ಯೋಜನೆಯು ನಿರ್ಮಾಣ ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಆತಿಥ್ಯ, ಪ್ರಯಾಣ, ಆಹಾರ ಮತ್ತು ಪಾನೀಯ (ಎಫ್ & ಬಿ) ಮತ್ತು ಪ್ರವಾಸೋದ್ಯಮ ಸಂಬಂಧಿತ ಉದ್ಯಮಗಳಲ್ಲಿ ವರ್ಷವಿಡೀ ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ರೋಪ್‌ ವೇ ಯೋಜನೆಯ ಅಭಿವೃದ್ಧಿಯು ಸಮತೋಲಿತ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ, ಗುಡ್ಡಗಾಡು ಪ್ರದೇಶಗಳಲ್ಲಿ ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುವ ಮತ್ತು ತ್ವರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

ಕೇದಾರನಾಥ ಮಂದಿರಕ್ಕೆ ಪ್ರಯಾಣವು ಗೌರಿಕುಂಡದಿಂದ 16 ಕಿ.ಮೀ. ಎತ್ತರದ ಚಾರಣವಾಗಿದ್ದು,  ಪ್ರಸ್ತುತ ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳು, ಪಲ್ಲಕ್ಕಿಗಳು ಮತ್ತು ಹೆಲಿಕಾಪ್ಟರ್ ಮೂಲಕ ಸಾಗುತ್ತಿದೆ. ಪ್ರಸ್ತಾವಿತ ರೋಪ್‌ ವೇಯನ್ನು ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವನ್ನು ಒದಗಿಸಲು ಮತ್ತು ಸೋನ್‌ ಪ್ರಯಾಗ ಮತ್ತು ಕೇದಾರನಾಥ ನಡುವೆ ಸರ್ವೃ ಋತು ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಯೋಜಿಸಲಾಗಿದೆ.

ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿ 3,583 ಮೀ (11968 ಅಡಿ) ಎತ್ತರದಲ್ಲಿರುವ ಕೇದಾರನಾಥವು 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವು ಅಕ್ಷಯ ತೃತೀಯ (ಏಪ್ರಿಲ್-ಮೇ) ದಿಂದ ದೀಪಾವಳಿ (ಅಕ್ಟೋಬರ್-ನವೆಂಬರ್) ವರೆಗೆ ವರ್ಷದಲ್ಲಿ ಸುಮಾರು 6 ರಿಂದ 7 ತಿಂಗಳುಗಳ ಕಾಲ ಯಾತ್ರಾರ್ಥಿಗಳಿಗೆ ತೆರೆದಿರುತ್ತದೆ ಮತ್ತು ಈ ಋತುವಿನಲ್ಲಿ ವಾರ್ಷಿಕವಾಗಿ ಸುಮಾರು 20 ಲಕ್ಷ ಯಾತ್ರಿಕರು ಭೇಟಿ ನೀಡುತ್ತಾರೆ.

 

*****


(Release ID: 2108450) Visitor Counter : 26