ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೆಹಲಿಯ ವಿಐಪಿಎಸ್ ನಲ್ಲಿ ನಡೆದ ವೇವ್ಸ್ ಶೃಂಗಸಭೆ ರೋಡ್ ಶೋ ವಿದ್ಯಾರ್ಥಿಗಳಿಗೆ ವೀಡಿಯೊ ಸಂಕಲನ, ಟ್ರೇಲರ್ ರಚನೆ, ಡಿಜಿಟಲ್ ಕಂಟೆಂಟ್ ನಿರ್ಮಾಣದಲ್ಲಿ ಪ್ರಾಯೋಗಿಕ ಕೌಶಲ್ಯಗಳ ಕಲಿಕೆಯ ಅನುಭವ ನೀಡಿತು
ಚಲನಚಿತ್ರ ನಿರ್ಮಾಣ ಮತ್ತು ಡಿಜಿಟಲ್ ರಚನೆಯಲ್ಲಿ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಬಯಸುವಿರಾ? ಮಾರ್ಚ್ 31, 2025 ರೊಳಗೆ ವೇವ್ಸ್ - 'ಟ್ರೇಲರ್ ನಿರ್ಮಾಣ ಸ್ಪರ್ಧೆ'ಗೆ ನೋಂದಾಯಿಸಿಕೊಳ್ಳಿ
ಅಗ್ರ 20 ವಿಜೇತರು ಟ್ರೋಫಿಗಳನ್ನು ಪಡೆಯುತ್ತಾರೆ, ಮುಂಬೈನಲ್ಲಿ ನಡೆಯುವ ವೇವ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ವಿಶೇಷ ಅವಕಾಶ ಪಡೆಯುತ್ತಾರೆ
Posted On:
18 FEB 2025 5:31PM by PIB Bengaluru
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟ (ಎಫ್ ಐ ಸಿ ಸಿ ಐ) ನೆಟ್‌ಫ್ಲಿಕ್ಸ್ ನ ಸಹಭಾಗಿತ್ವದಲ್ಲಿ ಆಯೋಜಿಸಿರುವ 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್' ಸೀಸನ್ 1ರ ಭಾಗವಾದ 'ವೇವ್ಸ್ ಶೃಂಗಸಭೆ ರೋಡ್ ಶೋ' ಇಂದು ನವದೆಹಲಿಯ ರೋಹಿಣಿಯಲ್ಲಿರುವ ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್ (ವಿಐಪಿಎಸ್) ನಲ್ಲಿ ಯಶಸ್ವಿಯಾಗಿ ನಡೆಯಿತು. ಸಂಸ್ಥೆಯ ವಾರ್ಷಿಕ ಪ್ರಮುಖ ಉತ್ಸವ 'ಆಬ್ಲಿವಿಯನ್' ಸಂದರ್ಭದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಚಲನಚಿತ್ರ ನಿರ್ಮಾಣ ಮತ್ತು ಡಿಜಿಟಲ್ ಕಂಟೆಂಟ್ ರಚನೆಯ ಬಗ್ಗೆ ಆಸಕ್ತಿ ಹೊಂದಿರುವ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವ ನೀಡಿತು.
ಸೃಜನಶೀಲತೆಯನ್ನು ಪೋಷಿಸುವುದು ಮತ್ತು ತಾಂತ್ರಿಕ ಕೌಶಲ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸಿದ ವೇವ್ಸ್ ಶೃಂಗಸಭೆ ರೋಡ್ ಶೋ, ವಿಐಪಿಎಸ್ ನಲ್ಲಿ ವಿದ್ಯಾರ್ಥಿಗಳಿಗೆ ಅಮೂಲ್ಯವಾದ ವೇದಿಕೆಯಾಗಿ ಸಾಬೀತುಪಡಿಸಿತು. ಸ್ಪರ್ಧೆಯು ಪ್ರಪಂಚದಾದ್ಯಂತ ನಮೂದುಗಳನ್ನು ಸ್ವೀಕರಿಸುತ್ತಲೇ ಇರುವುದರಿಂದ, ಮುಂದಿನ ಪೀಳಿಗೆಯ ಮಾಧ್ಯಮ ಮತ್ತು ಮನರಂಜನಾ ನಾಯಕರನ್ನು ಗುರುತಿಸುವ ಮತ್ತು ಬೆಳೆಸುವತ್ತ ರೋಡ್ ಶೋ ಒಂದು ಪ್ರಮುಖ ಹೆಜ್ಜೆಯಾಯಿತು.

ಚಲನಚಿತ್ರ ನಿರ್ಮಾಣ ಮತ್ತು ಸಂಕಲನ ತರಬೇತಿ
ಈ ರೋಡ್ ಶೋ ಅಡೋಬ್ ಪ್ರೀಮಿಯರ್ ಪ್ರೊ ಬಳಸಿ ವೀಡಿಯೊ ಸಂಕಲನದಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಿತು. ಈ ಅಧಿವೇಶನವು ವಿದ್ಯಾರ್ಥಿಗಳಿಗೆ ಟ್ರೇಲರ್ ರಚನೆ, ಸ್ಟೋರಿಬೋರ್ಡಿಂಗ್ ಮತ್ತು ಡಿಜಿಟಲ್ ಕಂಟೆಂಟ್ ನಿರ್ಮಾಣಕ್ಕೆ ತಂತ್ರಗಳನ್ನು ಅನ್ವೇಷಿಸುತ್ತಾ ಉದ್ಯಮ ವೃತ್ತಿಪರರಿಂದ ಕಲಿಯುವ ಅವಕಾಶವನ್ನು ಒದಗಿಸಿತು.
ಉದಯೋನ್ಮುಖ ಚಲನಚಿತ್ರ ನಿರ್ಮಾತೃಗಳನ್ನು ಒಂದುಗೂಡಿಸುವ ಟ್ರೇಲರ್ ನಿರ್ಮಾಣ ಸವಾಲು
ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ ಟ್ರೇಲರ್ ನಿರ್ಮಾಣ ಸ್ಪರ್ಧೆ, ಇದು ವಿದ್ಯಾರ್ಥಿಗಳನ್ನು ಅತ್ಯಂತ ಜನಪ್ರಿಯ ವೆಬ್ ಸರಣಿಗಳು ಮತ್ತು ಚಲನಚಿತ್ರಗಳನ್ನು ಬಳಸಿಕೊಂಡು ಆಕರ್ಷಕ ಟ್ರೇಲರ್ ಗಳನ್ನು ತಯಾರಿಸಲು ಪ್ರೋತ್ಸಾಹಿಸಿತು. ಯುಕೆ, ಯುಎಇ, ಕೆನಡಾ, ಶ್ರೀಲಂಕಾ ಮತ್ತು ಇನ್ನೂ ಹೆಚ್ಚಿನ ದೇಶಗಳ ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ, ಈ ಸ್ಪರ್ಧೆಯು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಸುವರ್ಣಾವಕಾಶವನ್ನು ಒದಗಿಸಿತು.
ಟ್ರೇಲರ್ ರಚನೆಗಾಗಿ ಆಯ್ಕೆ ಮಾಡಲಾದ ಶೀರ್ಷಿಕೆಗಳಲ್ಲಿ ಹೀರಾಮಂಡಿ, ಜಾನೆ ಜಾನ್, ಚೋರ್ ನಿಕಲ್ ಕೆ ಭಾಗಾ, ಮಿಸ್‌ಮ್ಯಾಚ್ಡ್, ಮೋನಿಕಾ, ಓ ಮೈ ಡಾರ್ಲಿಂಗ್, ಮತ್ತು ಗನ್ಸ್ & ಗುಲಾಬ್ಸ್‌ನಂತಹ ಜನಪ್ರಿಯ ಭಾರತೀಯ ಸರಣಿಗಳು ಸೇರಿದ್ದವು. ಇದರ ಜೊತೆಗೆ, ಸ್ಕ್ವಿಡ್ ಗೇಮ್ ಮತ್ತು ಮನಿ ಹೀಸ್ಟ್ ನಂತಹ ಜಾಗತಿಕವಾಗಿ ಪ್ರಸಿದ್ಧವಾದ ಸರಣಿಗಳು ವಿದ್ಯಾರ್ಥಿಗಳಿಗೆ ಅಂತರರಾಷ್ಟ್ರೀಯ ಮತ್ತು ಭಾರತೀಯ ನಿರೂಪಣೆಗಳ ಮಿಶ್ರಣವನ್ನು ಪ್ರಯೋಗಿಸಲು ಅವಕಾಶ ನೀಡಿದವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ಥಕ್ ಝಾ ಮಾತನಾಡಿ, "ಅಡೋಬ್ ಪ್ರೀಮಿಯರ್ ಪ್ರೊನಲ್ಲಿನ ಪ್ರಾಯೋಗಿಕ ತರಬೇತಿ ನಂಬಲಾಗದಷ್ಟು ಉತ್ಕೃಷ್ಟವಾಗಿತ್ತು. ನನ್ನ ಸಂಕಲನ ಕೌಶಲ್ಯದ ಬಗ್ಗೆ ಈಗ ಹೆಚ್ಚು ವಿಶ್ವಾಸ ಬಂದಿದೆ ಮತ್ತು ನೈಜ-ಪ್ರಪಂಚದ ಯೋಜನೆಗಳಲ್ಲಿ ಈ ತಂತ್ರಗಳನ್ನು ಅನ್ವಯಿಸಲು ಉತ್ಸುಕನಾಗಿದ್ದೇನೆ. ಇದೊಂದು ಅದ್ಭುತ ಅವಕಾಶವಾಗಿತ್ತು" ಎಂದು ಹೇಳಿದರು.
ಸೃಜನಶೀಲತೆಯ ಅನಾವರಣ: ಟ್ರೇಲರ್ ತಯಾರಿಕೆಯ ಕಲೆಯನ್ನು ಕರಗತ ಮಾಡಿಕೊಳ್ಳುವುದು
ವೇವ್ಸ್ ಶೃಂಗಸಭೆಯ ಭಾಗವಾಗಿ ನೆಟ್‌ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿಯಿಂದ ನಡೆಸಲ್ಪಡುವ ಅನ್‌ಲಾಕಿಂಗ್ ಕ್ರಿಯೇಟಿವಿಟಿ, ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾತೃಗಳನ್ನು ಪ್ರೇರೇಪಿಸಲು ಮತ್ತು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾದ ಸ್ಪರ್ಧೆಯಾಗಿದೆ. ಈ ವಿಶಿಷ್ಟ ಉಪಕ್ರಮವು ವಿದ್ಯಾರ್ಥಿಗಳಿಗೆ ನೆಟ್‌ಫ್ಲಿಕ್ಸ್ ನ ವ್ಯಾಪಕ ಕಂಟೆಂಟ್ ಭಂಡಾರದಿಂದ ಆಕರ್ಷಕ ಟ್ರೇಲರ್ ಗಳನ್ನು ತಯಾರಿಸಲು ಅವಕಾಶವನ್ನು ನೀಡುತ್ತದೆ.
ತಜ್ಞರ ನೇತೃತ್ವದ ತರಬೇತಿ ಅಧಿವೇಶನಗಳ ಮೂಲಕ, ಭಾಗವಹಿಸುವವರು ಕಥೆ ಹೇಳುವಿಕೆ, ವೀಡಿಯೊ ಸಂಕಲನ, ಧ್ವನಿ ವಿನ್ಯಾಸ ಕೌಶಲ್ಯಗಳೊಂದಿಗೆ ಉತ್ತಮ ಗುಣಮಟ್ಟದ ಟ್ರೇಲರ್ ಗಳನ್ನು ತಯಾರಿಸುವುದನ್ನು ಕಲಿಯುತ್ತಾರೆ. ಅನ್‌ಲಾಕಿಂಗ್ ಕ್ರಿಯೇಟಿವಿಟಿ ಕೇವಲ ಸ್ಪರ್ಧೆಗಿಂತ ಹೆಚ್ಚಾಗಿ, ಮಾರ್ಗದರ್ಶನ ಮತ್ತು ಪ್ರಾಯೋಗಿಕ ಅನುಭವವನ್ನು ನೀಡುತ್ತದೆ, ಇದು ಉದ್ಯಮ ವೃತ್ತಿಪರರಿಂದ ನಿರ್ಣಯಿಸಲಾಗುವ ಅಂತಿಮ ಸ್ಪರ್ಧಾತ್ಮಕ ಪ್ರದರ್ಶನದಲ್ಲಿ ಕೊನೆಗೊಳ್ಳುತ್ತದೆ.
ಭಾಗವಹಿಸುವವರಲ್ಲಿ ಅಗ್ರ ಸ್ಥಾನಕ್ಕೆ ಬರುವವರಿಗೆ ಅಮೂಲ್ಯವಾದ ಪ್ರತಿಕ್ರಿಯೆ ಮತ್ತು ಮನ್ನಣೆ ದೊರೆಯುತ್ತದೆ ಮತ್ತು ನೆಟ್‌ಫ್ಲಿಕ್ಸ್ ಚಂದಾದಾರಿಕೆಗಳು ಮತ್ತು ಬ್ರಾಂಡ್ ಸರಕುಗಳು ಸೇರಿದಂತೆ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶವಿರುತ್ತದೆ.
ಯಾರು ಭಾಗವಹಿಸಬಹುದು
ಈ ಸ್ಪರ್ಧೆಯು ವಿದ್ಯಾರ್ಥಿಗಳು ಮತ್ತು ವಿಡಿಯೋ ಸಂಕಲನ, ಚಲನಚಿತ್ರ ನಿರ್ಮಾಣ ಅಥವಾ ಕಂಟೆಂಟ್ ರಚನೆಯಲ್ಲಿ ಉತ್ಸಾಹ ಹೊಂದಿರುವ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ಮುಕ್ತವಾಗಿದೆ. ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
ಸ್ಪರ್ಧೆಗೆ ಅರ್ಜಿ ಸಲ್ಲಿಸಿ
https://reskilll.com/hack/wavesficci/signup ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ನಿಮ್ಮ ಸೃಜನಶೀಲ ಹಿನ್ನೆಲೆ ಮತ್ತು ಭಾಗವಹಿಸಲು ಕಾರಣಗಳಂತಹ ಅಗತ್ಯ ಮಾಹಿತಿಯನ್ನು ಒದಗಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, 2025.
ವಿಜೇತರ ಆಯ್ಕೆ ವಿಧಾನ
ಟ್ರೇಲರ್ ಗಳನ್ನು ಸೃಜನಶೀಲತೆ, ಕಥೆ ಹೇಳುವಿಕೆ, ತಾಂತ್ರಿಕತೆಯ ಬಳಕೆ ಮತ್ತು ಒಟ್ಟಾರೆ ಪ್ರಭಾವದ ಆಧಾರದ ಮೇಲೆ ಉದ್ಯಮ ತಜ್ಞರ ಸಮಿತಿಯು ಮೌಲ್ಯಮಾಪನ ಮಾಡುತ್ತದೆ. ಸ್ಕ್ರೀನಿಂಗ್ ಪ್ರಕ್ರಿಯೆಯು ಹಲವು ಸುತ್ತುಗಳಲ್ಲಿ ನಡೆಯಲಿದ್ದು, ಭಾಗವಹಿಸುವವರಿಗೆ ಅವರ ಕೆಲಸದ ಬಗ್ಗೆ ಅಭಿಪ್ರಾಯಗಳನ್ನು ನೀಡಲಾಗುತ್ತದೆ.
ನಾಲ್ಕನೇ ಅಧಿವೇಶನದ ನಂತರ ಅರ್ಹ ಟ್ರೇಲರ್ ಗಳನ್ನು ಸಲ್ಲಿಸುವ ಎಲ್ಲಾ ಭಾಗವಹಿಸುವವರು ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ. ಅಗ್ರ 20 ಭಾಗವಹಿಸುವವರು ಉತ್ಕೃಷ್ಟತೆಯ ಪ್ರಮಾಣಪತ್ರ, ಟ್ರೋಫಿ ಅಥವಾ ಸ್ಮರಣಿಕೆ, ನೆಟ್‌ಫ್ಲಿಕ್ಸ್ ಸರಕುಗಳು ಮತ್ತು ಮುಂಬೈನಲ್ಲಿ ನಡೆಯುವ ವೇವ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಯಾಣದ ಸಂಪೂರ್ಣ ವೆಚ್ಚದ ಮರುಪಾವತಿಯನ್ನು ಪಡೆಯುತ್ತಾರೆ.
*****
(Release ID: 2104858)
Visitor Counter : 14