ಹಣಕಾಸು ಸಚಿವಾಲಯ
azadi ka amrit mahotsav

ಆರ್ಥಿಕತೆಯಲ್ಲಿ ಹೂಡಿಕೆಯ 3ನೇ ಎಂಜಿನ್‌ನ ಭಾಗವಾಗಿ, ಕೇಂದ್ರ ಹಣಕಾಸು ಸಚಿವರು ಸಾರ್ವಜನಿಕ ಖಾಸಗಿ ಸಹಭಾಗಿತ್ವ, ರಾಜ್ಯಗಳಿಗೆ ಬೆಂಬಲ, ಆಸ್ತಿಗಳ ಹಣಗಳಿಕೆ, ಗಣಿಗಾರಿಕೆ ಮತ್ತು ದೇಶೀಯ ಉತ್ಪಾದನೆಯಲ್ಲಿ ಬಹು-ವಲಯದ ಸುಧಾರಣೆಗಳನ್ನು ಪ್ರಸ್ತಾಪಿಸಿದರು


ಕೇಂದ್ರ ಬಜೆಟ್ 2025-26 ಕೋಬಾಲ್ಟ್ ಪುಡಿ ಮತ್ತು ತ್ಯಾಜ್ಯ, ಲಿಥಿಯಂ-ಐಯಾನ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ, ಸತು ಮತ್ತು 12 ಕ್ಕೂ ಹೆಚ್ಚು ನಿರ್ಣಾಯಕ ಖನಿಜಗಳಿಗೆ ಪೂರ್ಣ ವಿನಾಯಿತಿಯನ್ನು ನೀಡಲು ಪ್ರಸ್ತಾಪಿಸಿದೆ 

Posted On: 01 FEB 2025 1:06PM by PIB Bengaluru

ಆರ್ಥಿಕತೆಯಲ್ಲಿ ಹೂಡಿಕೆಯ 3ನೇ ಎಂಜಿನ್‌ ನ ಭಾಗವಾಗಿ, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ, ಸಾರ್ವಜನಿಕ ಖಾಸಗಿ ಸಹಭಾಗಿತ್ವ, ರಾಜ್ಯಗಳಿಗೆ ಬೆಂಬಲ, 2025-2030ರ ಆಸ್ತಿ ಹಣಗಳಿಸುವ ಯೋಜನೆ, ಗಣಿಗಾರಿಕೆ ವಲಯ ಮತ್ತು ದೇಶೀಯ ಉತ್ಪಾದನೆಗೆ ಬೆಂಬಲವನ್ನು ಒಳಗೊಂಡ ಬಹು-ವಲಯ ಸುಧಾರಣೆಗಳನ್ನು ಪ್ರಸ್ತಾಪಿಸಿದರು.

ಮೂಲಸೌಕರ್ಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ

ಶ್ರೀಮತಿ ಸೀತಾರಾಮನ್ ಅವರು, ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಸಚಿವಾಲಯವೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅನುಷ್ಠಾನಗೊಳಿಸಬಹುದಾದ ಯೋಜನೆಗಳ ಮೂರು ವರ್ಷಗಳ ಕ್ರಿಯಾ ಯೋಜನೆಯನ್ನು ರೂಪಿಸಬೇಕು ಎಂದು ಪ್ರಸ್ತಾಪಿಸಿದರು.  ರಾಜ್ಯಗಳು ಸಹ ಪಿಪಿಪಿ ಪ್ರಸ್ತಾವನೆಗಳನ್ನು ಸಿದ್ಧಪಡಿಸಲು ಭಾರತ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಐಐಪಿಡಿಎಫ್) ಯೋಜನೆಯಡಿ ಬೆಂಬಲ ಪಡೆಯಲು ಮತ್ತು ಯೋಜನೆಗಳನ್ನು ಆರಂಭಿಸಲು ಪ್ರೋತ್ಸಾಹಿಸಲಾಗುವುದು.

ರಾಜ್ಯಗಳಿಗೆ ಮೂಲಸೌಕರ್ಯಕ್ಕೆ ಸಹಾಯ

ಕೇಂದ್ರ ಹಣಕಾಸು ಸಚಿವರು ರಾಜ್ಯಗಳಿಗೆ ಬಂಡವಾಳ ವೆಚ್ಚ ಮತ್ತು ಸುಧಾರಣೆಗಳಿಗೆ ಪ್ರೋತ್ಸಾಹ ಧನ ನೀಡಲು 50 ವರ್ಷಗಳವರೆಗೆ ಬಡ್ಡಿ ಇಲ್ಲದ ₹1.5 ಲಕ್ಷ ಕೋಟಿ ಸಾಲದ ಪ್ರಸ್ತಾವನೆಯನ್ನು ಮಂಡಿಸಿದರು.

ಆಸ್ತಿಗಳ ಹಣಗಳಿಕೆ ಯೋಜನೆ 2025-30

2021ರಲ್ಲಿ ಘೋಷಿಸಲಾದ ಮೊದಲ ಆಸ್ತಿಗಳ ಹಣಗಳಿಕೆ ಯೋಜನೆಯ ಯಶಸ್ಸನ್ನು ಗಮನದಲ್ಲಿಟ್ಟುಕೊಂಡು, ಶ್ರೀಮತಿ ಸೀತಾರಾಮನ್ ಅವರು 2025-30ರ ಅವಧಿಗೆ ಎರಡನೇ ಯೋಜನೆಯನ್ನು ಜಾರಿಗೊಳಿಸಲು ಪ್ರಸ್ತಾಪಿಸಿದರು. ಈ ಯೋಜನೆಯಡಿ, ನಿಯಂತ್ರಕ ಮತ್ತು ಹಣಕಾಸು ಕ್ರಮಗಳನ್ನು ಸೂಕ್ತವಾಗಿ ಸರಿಹೊಂದಿಸಿ, ₹10 ಲಕ್ಷ ಕೋಟಿ ಬಂಡವಾಳವನ್ನು ಹೊಸ ಯೋಜನೆಗಳಲ್ಲಿ ಮರುಹೂಡಿಕೆ ಮಾಡಲಾಗುವುದು.

ಗಣಿಗಾರಿಕೆ ವಲಯದಲ್ಲಿ ಸುಧಾರಣೆಗಳು

ಕೇಂದ್ರ ಹಣಕಾಸು ಸಚಿವರು ಗಣಿಗಾರಿಕೆ ವಲಯದಲ್ಲಿ ಸುಧಾರಣೆಗಳನ್ನು ತರಲು ಪ್ರಸ್ತಾಪಿಸಿದರು.  ಇವುಗಳಲ್ಲಿ ಸಣ್ಣ ಖನಿಜಗಳಿಗೆ ಸಂಬಂಧಿಸಿದ ಸುಧಾರಣೆಗಳೂ ಸೇರಿವೆ.  ಉತ್ತಮ ಕಾರ್ಯವಿಧಾನಗಳ ಹಂಚಿಕೆ ಮತ್ತು ರಾಜ್ಯ ಗಣಿಗಾರಿಕೆ ಸೂಚ್ಯಂಕವನ್ನು ರೂಪಿಸುವ ಮೂಲಕ ಈ ಸುಧಾರಣೆಗಳನ್ನು ಜಾರಿಗೊಳಿಸಲಾಗುವುದು.

ಖಾಸಗಿ ವಲಯಕ್ಕೆ ಪ್ರಧಾನ ಮಂತ್ರಿ ಗತಿ ಶಕ್ತಿ ದತ್ತಾಂಶ

ಪಿಪಿಪಿಗಳನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಯೋಜನಾ ಯೋಜನೆಯಲ್ಲಿ ಖಾಸಗಿ ವಲಯಕ್ಕೆ ಸಹಾಯ ಮಾಡಲು ಪ್ರಧಾನ ಮಂತ್ರಿ ಗತಿ ಶಕ್ತಿ ಪೋರ್ಟಲ್‌ನಿಂದ ಸಂಬಂಧಿತ ದತ್ತಾಂಶ ಮತ್ತು ನಕ್ಷೆಗಳಿಗೆ ಪ್ರವೇಶವನ್ನು ಒದಗಿಸಲು ಶ್ರೀಮತಿ ಸೀತಾರಾಮನ್ ಪ್ರಸ್ತಾಪಿಸಿದರು.

ದೇಶೀಯ ಉತ್ಪಾದನೆಗೆ ಉತ್ತೇಜನ ಮತ್ತು ನಿರ್ಣಾಯಕ ಖನಿಜಗಳ ಮೌಲ್ಯವರ್ಧನೆ

ಕೇಂದ್ರ ಹಣಕಾಸು ಸಚಿವರು ಭಾರತದಲ್ಲಿ ಉತ್ಪಾದನೆಗೆ ನಿರ್ಣಾಯಕ ಖನಿಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೋಬಾಲ್ಟ್ ಪುಡಿ ಮತ್ತು ತ್ಯಾಜ್ಯ, ಲಿಥಿಯಂ-ಐಯಾನ್ ಬ್ಯಾಟರಿಯ ಸ್ಕ್ರ್ಯಾಪ್, ಸೀಸ, ಸತು ಮತ್ತು ಇನ್ನೂ 12 ನಿರ್ಣಾಯಕ ಖನಿಜಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ಪ್ರಸ್ತಾಪವನ್ನು ಮಂಡಿಸಿದರು.

Click here https://pib.gov.in/PressReleasePage.aspx?PRID=2098788


(Release ID: 2098812) Visitor Counter : 11