ಹಣಕಾಸು ಸಚಿವಾಲಯ
ಹಣಕಾಸೇತರ ವಲಯದ ಎಲ್ಲಾ ನಿಯಮಗಳು, ಪ್ರಮಾಣಪತ್ರಗಳು, ಪರವಾನಗಿಗಳು ಮತ್ತು ಅನುಮತಿಗಳ ಪರಿಶೀಲನೆಗಾಗಿ ನಿಯಂತ್ರಕ ಸುಧಾರಣೆಗಳ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು
2025ರಲ್ಲಿ ರಾಜ್ಯಗಳ ಹೂಡಿಕೆ ಸ್ನೇಹಿ ಸೂಚ್ಯಂಕವನ್ನು ಸರ್ಕಾರವು ಪ್ರಾರಂಭಿಸಲಿದೆ
ವಿವಿಧ ಕಾನೂನುಗಳಲ್ಲಿನ 100 ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು ಜನ ವಿಶ್ವಾಸ ಮಸೂದೆ 2.0 ತರಲಾಗುವುದು
Posted On:
01 FEB 2025 1:04PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025-26 ಮಂಡಿಸಿದರು.
ನಿಯಂತ್ರಣ ಸುಧಾರಣೆಗಳು
ತಮ್ಮ ಬಜೆಟ್ ಭಾಷಣದಲ್ಲಿ, ಕೇಂದ್ರ ಹಣಕಾಸು ಸಚಿವರು ತಾಂತ್ರಿಕ ನವೀನತೆಗಳು ಮತ್ತು ಜಾಗತಿಕ ನೀತಿ ಬೆಳವಣಿಗೆಗಳೊಂದಿಗೆ ನಿಯಮಗಳು ಸಮಾನಾಂತರವಾಗಿ ಸಾಗಬೇಕೆಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು. ತತ್ವಗಳು ಮತ್ತು ವಿಶ್ವಾಸದ ಮೇಲೆ ಆಧಾರಿತವಾದ ಸರಳ-ನಿಯಂತ್ರಕ ಚೌಕಟ್ಟು ಉತ್ಪಾದಕತೆ ಮತ್ತು ಉದ್ಯೋಗವನ್ನು ಹೆಚ್ಚಿಸುತ್ತದೆ. ಈ ಚೌಕಟ್ಟಿನ ಮೂಲಕ, ಹಳೆಯ ಕಾನೂನುಗಳ ಅಡಿಯಲ್ಲಿ ಮಾಡಲಾದ ನಿಯಂತ್ರಣಗಳನ್ನು ಅಪ್‌ಡೇಟ್ ಮಾಡಲಾಗುವುದು.
ಈ ಆಧುನಿಕ, ನಮ್ಯ, ಜನಸ್ನೇಹಿ ಮತ್ತು ವಿಶ್ವಾಸಾರ್ಹ ನಿಯಂತ್ರಕ ಚೌಕಟ್ಟನ್ನು ಇಪ್ಪತ್ತೊಂದನೇ ಶತಮಾನಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲು, ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ನಾಲ್ಕು ನಿರ್ದಿಷ್ಟ ಕ್ರಮಗಳನ್ನು ಪ್ರಸ್ತಾಪಿಸಿದರು:
ನಿಯಂತ್ರಕ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿ
ಕೇಂದ್ರ ಹಣಕಾಸು ಸಚಿವರು ತಿಳಿಸಿದಂತೆ, ಹಣಕಾಸೇತರ ವಲಯದ ಎಲ್ಲಾ ನಿಯಮಗಳು, ಪ್ರಮಾಣಪತ್ರಗಳು, ಪರವಾನಗಿಗಳು ಮತ್ತು ಅನುಮತಿಗಳನ್ನು ಪರಿಶೀಲಿಸಲು ನಿಯಂತ್ರಕ ಸುಧಾರಣೆಗಳಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು ಒಂದು ವರ್ಷದೊಳಗೆ ತನ್ನ ಶಿಫಾರಸ್ಸುಗಳನ್ನು ನೀಡುವ ನಿರೀಕ್ಷೆಯಿದೆ. ವಿಶ್ವಾಸಾರ್ಹ ಆರ್ಥಿಕ ಆಡಳಿತವನ್ನು ಬಲಪಡಿಸುವುದು ಮತ್ತು ವಿಶೇಷವಾಗಿ ತಪಾಸಣೆ ಮತ್ತು ಅನುಸರಣೆಗಳ ವಿಷಯಗಳಲ್ಲಿ 'ವ್ಯವಹಾರ ಸುಲಭತೆ'ಯನ್ನು ಹೆಚ್ಚಿಸಲು ಪರಿವರ್ತನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಇದರ ಉದ್ದೇಶವಾಗಿದೆ. ಈ ಪ್ರಯತ್ನದಲ್ಲಿ ರಾಜ್ಯಗಳು ಸಹ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುವುದು.
ರಾಜ್ಯಗಳ ಹೂಡಿಕೆ ಸ್ನೇಹಪರ ಸೂಚ್ಯಂಕ
ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಹೆಚ್ಚಿಸಲು 2025ರಲ್ಲಿ ರಾಜ್ಯಗಳ ಹೂಡಿಕೆ ಸ್ನೇಹಪರ ಸೂಚ್ಯಂಕವನ್ನು ಪ್ರಾರಂಭಿಸಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.
FSDC ಕಾರ್ಯವಿಧಾನ
ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ, ಪ್ರಸ್ತುತ ಹಣಕಾಸು ನಿಯಮಗಳು ಮತ್ತು ಅಂಗಸಂಸ್ಥೆ ಸೂಚನೆಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಒಂದು ಕಾರ್ಯವಿಧಾನವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು. ಇದು ಅವರ ಸ್ಪಂದಿಸುವಿಕೆ ಮತ್ತು ಹಣಕಾಸು ಕ್ಷೇತ್ರದ ಅಭಿವೃದ್ಧಿಯನ್ನು ಹೆಚ್ಚಿಸಲು ಒಂದು ಚೌಕಟ್ಟನ್ನು ರೂಪಿಸುತ್ತದೆ.
ಜನ್ ವಿಶ್ವಾಸ್ ಮಸೂದೆ 2.0
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ವಿವಿಧ ಕಾನೂನುಗಳಲ್ಲಿನ 100ಕ್ಕೂ ಹೆಚ್ಚು ನಿಬಂಧನೆಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲು ಸರ್ಕಾರವು ಈಗ ಜನ ವಿಶ್ವಾಸ ಮಸೂದೆ 2.0 ಅನ್ನು ಮಂಡಿಸಲಿದೆ ಎಂದು ತಿಳಿಸಿದರು. 2023ರ ಜನ ವಿಶ್ವಾಸ ಕಾಯ್ದೆಯಲ್ಲಿ, ನೂರ ಎಂಬತ್ತಕ್ಕೂ ಹೆಚ್ಚು ಕಾನೂನು ನಿಬಂಧನೆಗಳನ್ನು ಅಪರಾಧೀಕರಣದಿಂದ ಮುಕ್ತಗೊಳಿಸಲಾಗಿತ್ತು.
ಕಳೆದ ಹತ್ತು ವರ್ಷಗಳಲ್ಲಿ, ಹಣಕಾಸು ಮತ್ತು ಹಣಕಾಸೇತರ ಕ್ಷೇತ್ರಗಳು ಸೇರಿದಂತೆ ವಿವಿಧ ರಂಗಗಳಲ್ಲಿ, ನಮ್ಮ ಸರ್ಕಾರವು 'ವ್ಯವಹಾರ ಸುಲಭತೆ'ಗೆ ದೃಢವಾದ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
*****
(Release ID: 2098596)
Visitor Counter : 26
Read this release in:
English
,
Urdu
,
Marathi
,
Nepali
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam