ಹಣಕಾಸು ಸಚಿವಾಲಯ
“ಮೇಕ್ ಇನ್ ಇಂಡಿಯಾ” ಅನ್ನು ಮುಂದುವರಿಸಲು ಹಾಗೂ ಪ್ರೋತ್ಸಹಿಸಲು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಒಳಗೊಳ್ಳುವ ನೂತನ “ರಾಷ್ಟ್ರೀಯ ಉತ್ಪಾದನಾ ಮಿಷನ್” ಅನ್ನು “ಕೇಂದ್ರ ಬಜೆಟ್ 2025-26”ರಲ್ಲಿ ಘೋಷಿಸಲಾಗಿದೆ
ಪಾದರಕ್ಷೆಗಳು ಮತ್ತು ಚರ್ಮದ ವಲಯದವರಿಗೆ ನೂತನ ‘ಕೇಂದ್ರೀಕೃತ ಉತ್ಪನ್ನ ಯೋಜನೆ’ ಪ್ರಾರಂಭ, 22 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಸಲಿರುವ ಯೋಜನೆ
ಭಾರತವನ್ನು ಆಟಿಕೆಗಳ ಉತ್ಪಾದನೆಯಲ್ಲಿ ಜಾಗತಿಕ ಕೇಂದ್ರವನ್ನಾಗಿ ಮಾಡಲು ಆಟಿಕೆಗಳ “ರಾಷ್ಟ್ರೀಯ ಕ್ರಿಯಾ ಯೋಜನೆ”
Posted On:
01 FEB 2025 1:19PM by PIB Bengaluru
“ಮೇಕ್ ಇನ್ ಇಂಡಿಯಾ” ಅನ್ನು ಉತ್ತೇಜಿಸಿ ಮುಂದುವರಿಸಲು ಸಣ್ಣ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳನ್ನು ಒಳಗೊಳ್ಳುವ “ರಾಷ್ಟ್ರೀಯ ಉತ್ಪಾದನಾ ಮಿಷನ್” ಅನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ರ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ಘೋಷಿಸಿದರು. ಇದು ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯಗಳಿಗೆ ನೀತಿ ಬೆಂಬಲ, ಅನುಷ್ಠಾನ ಮಾರ್ಗಸೂಚಿಗಳು, ಆಡಳಿತ ಮತ್ತು ಮೇಲ್ವಿಚಾರಣಾ ಚೌಕಟ್ಟನ್ನು ಒದಗಿಸುತ್ತದೆ.
“ರಾಷ್ಟ್ರೀಯ ಉತ್ಪಾದನಾ ಮಿಷನ್” ಐದು ಕೇಂದ್ರೀಕೃತ ಕ್ಷೇತ್ರಗಳ ಮೇಲೆ ಒತ್ತು ನೀಡುತ್ತದೆ, ಅವುಗಳೆಂದರೆ ವ್ಯಾಪಾರ ಮಾಡುವ ಸುಲಭ ವ್ಯವಸ್ಥೆ ನಿರ್ಮಾಣ ಮತ್ತು ವೆಚ್ಚ; ಬೇಡಿಕೆಯಲ್ಲಿರುವ ಉದ್ಯೋಗಗಳಿಗೆ ಭವಿಷ್ಯದಲ್ಲಿ ಸಿದ್ಧವಾಗಿರುವ ಕಾರ್ಯಪಡೆ; ರೋಮಾಂಚಕ ಮತ್ತು ಕ್ರಿಯಾತ್ಮಕ ಎಂ.ಎಸ್.ಎಂ.ಇ. ವಲಯ; ತಂತ್ರಜ್ಞಾನದ ಲಭ್ಯತೆ; ಮತ್ತು ಗುಣಮಟ್ಟದ ಉತ್ಪನ್ನಗಳು - ಇತ್ಯಾದಿಗಳಾಗಿವೆ.
“ಈ ಮಿಷನ್ “ಕ್ಲೀನ್ ಟೆಕ್” ಉತ್ಪಾದನೆಯನ್ನು ಸಹ ಬೆಂಬಲಿಸುತ್ತದೆ ಮತ್ತು ದೇಶೀಯ ಮೌಲ್ಯವರ್ಧನೆಯನ್ನು ಸುಧಾರಿಸುವ ಮತ್ತು ಸೌರ ಪಿವಿ ಕೋಶಗಳು, ಇವಿ ಬ್ಯಾಟರಿಗಳು, ಮೋಟಾರ್ ಗಳು ಮತ್ತು ನಿಯಂತ್ರಕಗಳು, ಎಲೆಕ್ಟ್ರೋಲೈಜರ್ಗಳು, ವಿಂಡ್ ಟರ್ಬೈನ್ ಗಳು, ಅತಿ ಹೆಚ್ಚಿನ ವೋಲ್ಟೇಜ್ ಪ್ರಸರಣ ಉಪಕರಣಗಳು ಮತ್ತು ಗ್ರಿಡ್ ಸ್ಕೇಲ್ ಬ್ಯಾಟರಿಗಳಿಗೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಈ ನೂತನ ಯೋಜನೆ ಹೊಂದಿದೆ” ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
ಕಾರ್ಮಿಕ ಕೇಂದ್ರಿತ ಉದ್ಯಮ – ಕೈಗಾರಿಕಾ ವಲಯಗಳಿಗೆ ನೂತನ ಕ್ರಮಗಳನ್ನು ಹಣಕಾಸು ಸಚಿವರು ವಿವರಿಸಿದರು, ಹಾಗೂ “ಕಾರ್ಮಿಕ ಕೇಂದ್ರಿತ ಉದ್ಯಮ – ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಮತ್ತು ಉದ್ಯಮಶೀಲತಾ ಅವಕಾಶಗಳನ್ನು ಉತ್ತೇಜಿಸಲು ಸರ್ಕಾರವು ನಿರ್ದಿಷ್ಟ ನೀತಿ ಮತ್ತು ಸೌಲಭ್ಯ ಕ್ರಮಗಳನ್ನು ಕೈಗೊಳ್ಳುತ್ತದೆ” ಎಂದು ಹೇಳಿದರು.
ಭಾರತದ ಪಾದರಕ್ಷೆಗಳು ಮತ್ತು ಚರ್ಮದ ವಲಯದ ಉತ್ಪಾದಕತೆ, ಗುಣಮಟ್ಟ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು, ಕೇಂದ್ರೀಕೃತ ಉತ್ಪನ್ನ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವರು ನಿರ್ದಿಷ್ಟಪಡಿಸಿದರು. “ಈ ಯೋಜನೆಯು 22 ಲಕ್ಷ ಜನರಿಗೆ ಉದ್ಯೋಗ ಅವಕಾಶವನ್ನು ಸುಗಮಗೊಳಿಸುತ್ತದೆ, ರೂ. 4 ಲಕ್ಷ ಕೋಟಿ ವಾರ್ಷಿಕ ವ್ಯವಹಾರ ಮತ್ತು ರೂ. 1.1 ಲಕ್ಷ ಕೋಟಿಗಳಿಗೂ ಹೆಚ್ಚಿನ ವಾರ್ಷಿಕ ರಫ್ತು ವ್ಯವಹಾರ ಸಾಧ್ಯತೆ, ಜೊತೆಗೆ, ಚರ್ಮದ ಪಾದರಕ್ಷೆಗಳು ಮತ್ತು ಉತ್ಪನ್ನಗಳ ಬೆಂಬಲದ ಜೊತೆಗೆ, ಚರ್ಮದೇತರ ಗುಣಮಟ್ಟದ ಪಾದರಕ್ಷೆಗಳ ಉತ್ಪಾದನೆಗೆ ಅಗತ್ಯವಿರುವ ವಿನ್ಯಾಸ ಸಾಮರ್ಥ್ಯ, ಘಟಕ ಉತ್ಪಾದನೆ ಮತ್ತು ಯಂತ್ರೋಪಕರಣಗಳನ್ನು ಕೂಡಾ ಈ ಯೋಜನೆ ಬೆಂಬಲಿಸುತ್ತದೆ” ಎಂದು ಕೇಂದ್ರ ಹಣಕಾಸು ಸಚಿವರು ಮಾಹಿತಿ ನೀಡಿದರು.
ಭಾರತವನ್ನು ಆಟಿಕೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಜಾರಿಗೆ ತರಲಾಗುವ ಆಟಿಕೆಗಳ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಕೇಂದ್ರ ಸಚಿವರು ಪ್ರಸ್ತಾಪಿಸಿದರು. “ಈ ಯೋಜನೆಯು ಕ್ಲಸ್ಟರ್ ಗಳ ಅಭಿವೃದ್ಧಿ, ಕೌಶಲ್ಯ ಮತ್ತು 'ಭಾರತದಲ್ಲಿ ತಯಾರಿಸಿ( ಮೇಕ್ ಇನ್ ಇಂಡಿಯಾ)' ಬ್ರ್ಯಾಂಡ್ ಅನ್ನು ಪ್ರತಿನಿಧಿಸುವ ಉತ್ತಮ ಗುಣಮಟ್ಟದ, ವಿಶಿಷ್ಟ, ನವೀನ ಮತ್ತು ಸುಸ್ಥಿರ ಆಟಿಕೆಗಳನ್ನು ರಚಿಸುವ ಉತ್ಪಾದನಾ ಪರಿಸರ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸುತ್ತದೆ” ಎಂದು ಸಚಿವರು ಹೇಳಿದರು.
ಆಹಾರ ಸಂಸ್ಕರಣೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ, ಕೇಂದ್ರ ಹಣಕಾಸು ಸಚಿವರು 'ಪೂರ್ವೋದಯ'ದ ಕಡೆಗೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸಚಿವರು ಪ್ರಸ್ತಾಪಿಸಿದರು. ಈ ಸಂಸ್ಥೆಯು ಇಡೀ “ಪೂರ್ವ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಚಟುವಟಿಕೆಗಳಿಗೆ ಬಲವಾದ ಉತ್ತೇಜನವನ್ನು ನೀಡುತ್ತದೆ. ಇದು ರೈತರಿಗೆ ತಮ್ಮ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮತ್ತು ಕೌಶಲ್ಯ, ಉದ್ಯಮಶೀಲತೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳ ಮೂಲಕ ವರ್ಧಿತ ಆದಾಯಕ್ಕೆ ಕಾರಣವಾಗುತ್ತದೆ.” ಎಂದು ಹೇಳಿದರು
*****
(Release ID: 2098564)
Visitor Counter : 26