ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ದೃಢವಾದ ಮತ್ತು ಉನ್ನತ ಮಟ್ಟದ ಸಾಮಾನ್ಯ ಕಂಪ್ಯೂಟಿಂಗ್ ಸೌಲಭ್ಯದೊಂದಿಗೆ, ಭಾರತವು ತನ್ನದೇ ಆದ ಸುರಕ್ಷಿತ ಮತ್ತು ಭದ್ರ ದೇಶೀಯ ಎಐ ಮಾದರಿಯನ್ನು ಕೈಗೆಟುಕುವ ವೆಚ್ಚದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲು ಸಜ್ಜಾಗಿದೆ: ಶ್ರೀ ಅಶ್ವಿನಿ ವೈಷ್ಣವ್
ಗಂಟೆಗೆ 2.5 ರಿಂದ 3 ಡಾಲರ್ ವೆಚ್ಚದ ಜಾಗತಿಕ ಮಾದರಿಗಳ ಗಣನೆಗೆ (ಕಂಪ್ಯೂಟೇಶನ್) ಹೋಲಿಸಿದರೆ, ಭಾರತದ ಎಐ ಮಾದರಿ ಗಣನೆಗೆ 40% ಸರ್ಕಾರದ ಸಬ್ಸಿಡಿಯ ನಂತರ ಗಂಟೆಗೆ 100 ರೂ.ಗಿಂತ ಕಡಿಮೆ ವೆಚ್ಚವಾಗುತ್ತದೆ; ಆಕರ್ಷಕ ಅರ್ಧವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳು ಅದನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತವೆ
ಭಾರತೀಯ ಭಾಷೆಗಳಲ್ಲಿ, ಭಾರತೀಯ ಸಂದರ್ಭಕ್ಕಾಗಿ ಅನೇಕ ಅಡಿಪಾಯ ಮಾದರಿಗಳು ಈ ವರ್ಷದ ಕೊನೆಯಲ್ಲಿ ಸಿದ್ಧವಾಗುವ ಸಾಧ್ಯತೆಯಿದೆ, ಇದು ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಜನರಿಗೆ ಕಡಿಮೆ ವೆಚ್ಚದ, ವೇಗದ ಕಂಪ್ಯೂಟಿಂಗ್ ಮತ್ತು ತ್ವರಿತ ಫಲಿತಾಂಶಗಳಿಗೆ ಸಹಾಯ ಮಾಡುತ್ತದೆ
ಮೊದಲಿಗೆ, ಕೃಷಿ ಕ್ಷೇತ್ರ, ಕಲಿಕೆಯ ಅಸಾಮರ್ಥ್ಯ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ 18 ನಾಗರಿಕ ಕೇಂದ್ರಿತ ಅಪ್ಲಿಕೇಶನ್ಗಳು ಈ ಎಐ ಮಾದರಿಯ ಭಾಗವಾಗಲಿವೆ
ಭದ್ರತಾ ಶಿಷ್ಟಾಚಾರ (ಪ್ರೋಟೋಕಾಲ್) ಪರಿಶೀಲನೆಗಳ ನಂತರ ಡೀಪ್ಸೀಕ್ ಅನ್ನು ಭಾರತೀಯ ಸರ್ವರ್ಗಳಲ್ಲಿ ಹೋಸ್ಟ್ ಮಾಡಲಾಗುತ್ತದೆ, ಇದರಿಂದಾಗಿ ಬಳಕೆದಾರರು, ಕೋಡರ್ಗಳು, ಡೆವಲಪರ್ಗಳು ಅದರ ಓಪನ್ ಸೋರ್ಸ್ ಕೋಡ್ನಿಂದ ಪ್ರಯೋಜನ ಪಡೆಯಬಹುದು
Posted On:
30 JAN 2025 7:48PM by PIB Bengaluru
ಭಾರತವು ತನ್ನದೇ ಆದ ಸುರಕ್ಷಿತ ಮತ್ತು ಸುಭದ್ರ ದೇಶೀಯ ಎಐ ಮಾದರಿಯನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ, ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಹೊಸದಿಲ್ಲಿಯಲ್ಲಿ ಎಲೆಕ್ಟ್ರಾನಿಕ್ಸ್ ನಿಕೇತನದಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವರು, ಭಾರತವು ರಾಷ್ಟ್ರಗಳ ಸಮುದಾಯದಲ್ಲಿ ವಿಶ್ವಾಸಾರ್ಹ ರಾಷ್ಟ್ರವಾಗಿರುವುದರಿಂದ ಭಾರತೀಯ ಎಐ ಮಾದರಿ ಸಮಯೋಚಿತ ಹೆಜ್ಜೆಯಾಗಿದೆ ಮತ್ತು ಆದ್ದರಿಂದ ಇದು ಮುಂಬರುವ ದಿನಗಳಲ್ಲಿ ನೈತಿಕ ಎಐ ಪರಿಹಾರಗಳ ಹೆಚ್ಚು ವಿಶ್ವಾಸಾರ್ಹ ತಾಂತ್ರಿಕ ಶಕ್ತಿಕೇಂದ್ರವಾಗಿ ಹೊರಹೊಮ್ಮಲು ಭಾರತಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಉನ್ನತ ಮಟ್ಟದ ಸಾಮಾನ್ಯ ಕಂಪ್ಯೂಟಿಂಗ್ ಸೌಲಭ್ಯದ ಬೆಂಬಲದೊಂದಿಗೆ, ಇಂಡಿಯಾ ಎಐ ಮಿಷನ್ ಈಗ ಭಾರತೀಯ ಭಾಷೆಗಳನ್ನು ಬಳಸಿಕೊಂಡು ಭಾರತೀಯ ಸಂದರ್ಭಕ್ಕೆ ಸ್ಥಳೀಯ/ದೇಶೀಯ ಎಐ ಪರಿಹಾರಗಳನ್ನು ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಕಸ್ಟಮೈಸ್ ಮಾಡುವ ನಿಟ್ಟಿನಲ್ಲಿ ಬಹಳ ಹತ್ತಿರದಲ್ಲಿದೆ. ವಿಜ್ಞಾನಿಗಳು, ಸಂಶೋಧಕರು, ಡೆವಲಪರ್ ಗಳು ಮತ್ತು ಕೋಡರ್ ಗಳು ಈ ನಿಟ್ಟಿನಲ್ಲಿ ಅನೇಕ ಅಡಿಪಾಯ ಮಾದರಿಗಳ ಮೇಲೆ ಕೆಲಸ ಮಾಡುತ್ತಿದ್ದಾರೆ ಮತ್ತು ಈಗ ಸಾಗುತ್ತಿರುವ ವೇಗದಲ್ಲಿ, ಭಾರತೀಯ ಎಐ ಮಾದರಿ 6 ತಿಂಗಳಲ್ಲಿ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. "ನಮ್ಮ ಪ್ರಧಾನ ಮಂತ್ರಿಯವರ ಆರ್ಥಿಕ ಚಿಂತನೆಯು ಎಲ್ಲರನ್ನೂ ಒಳಗೊಳ್ಳುವಂತಹದ್ದಾಗಿದೆ. ಪಿರಮಿಡಿನ ಕೆಳಭಾಗದಲ್ಲಿರುವ ಜನರು ಆರ್ಥಿಕವಾಗಿ ಸಬಲರಾಗುವುದನ್ನು ಖಚಿತಪಡಿಸಿಕೊಳ್ಳಲು ಆಧುನಿಕ ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕೆನ್ನುವುದನ್ನು ಅವರು ನಂಬುತ್ತಾರೆ” ಎಂದೂ ಕೇಂದ್ರ ಸಚಿವರು ಹೇಳಿದರು.
ಎಐ ಮಾದರಿಯು ಸರಿಸುಮಾರು 10000 ಜಿಪಿಯುಗಳ (ಗ್ರಾಫಿಕ್ಸ್ ಮತ್ತು ವೀಡಿಯೋಗಳಿಗೆ ಸಂಬಂಧಿಸಿ ಲೆಕ್ಕಾಚಾರ ಮಾಡುವ ಇಲೆಕ್ಟ್ರಾನಿಕ್ ಸರ್ಕ್ಯೂಟ್) ಗಣನಾ ಸೌಲಭ್ಯದೊಂದಿಗೆ ಪ್ರಾರಂಭವಾಗುತ್ತಿದೆ. ಶೀಘ್ರದಲ್ಲೇ ಉಳಿದ 8693 ಜಿಪಿಯುಗಳನ್ನು ಸೇರಿಸಲಾಗುವುದು. ಇದು ಆರಂಭದಲ್ಲಿ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಡೆವಲಪರ್ ಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಮಿಷನ್ ನಲ್ಲಿ ಭಾಗವಹಿಸುತ್ತಿರುವ ತಾಂತ್ರಿಕ ಪಾಲುದಾರರು ಕಂಪ್ಯೂಟಿಂಗ್ ಗೆ ಪ್ರವೇಶವನ್ನು ಪ್ರಜಾಪ್ರಭುತ್ವಗೊಳಿಸುವ ಉದ್ದೇಶವನ್ನು ಸಾಕಾರಗೊಳಿಸುವ ಮಿಷನ್ ನ ಸಾಮರ್ಥ್ಯದ ಬಗ್ಗೆ ಸಾಕಷ್ಟು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ, ಅದೂ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಅಂದರೆ, ಗಂಟೆಗೆ 2.5 ರಿಂದ 3 ಡಾಲರ್ ವೆಚ್ಚದ ಜಾಗತಿಕ ಮಾದರಿಗಳ ಗಣನೆಗೆ ಹೋಲಿಸಿದರೆ, ಭಾರತದ ಎಐ ಮಾದರಿ ಗಣನೆಗೆ 40% ಸರ್ಕಾರದ ಸಬ್ಸಿಡಿಯ ನಂತರ ಗಂಟೆಗೆ 100 ರೂ.ಗಿಂತ ಕಡಿಮೆ ವೆಚ್ಚವಾಗುತ್ತದೆ. ಆಕರ್ಷಕ ಅರ್ಧವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳು ಅದನ್ನು ಮತ್ತಷ್ಟು ಕೈಗೆಟುಕುವಂತೆ ಮಾಡುತ್ತವೆ.
ಇಂಡಿಯಾ ಎಐ ಮಿಷನ್ ಪ್ರಾರಂಭವಾದ 10 ತಿಂಗಳೊಳಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗಿದೆ ಮತ್ತು ಸುಮಾರು 18,693 ಗ್ರಾಫಿಕ್ ಸಂಸ್ಕರಣಾ ಘಟಕ- ಜಿಪಿಯುಗಳ ಉನ್ನತ ಮಟ್ಟದ ಮತ್ತು ದೃಢವಾದ ಸಾಮಾನ್ಯ ಕಂಪ್ಯೂಟಿಂಗ್ ಸೌಲಭ್ಯವನ್ನು ರೂಪಿಸಲು ಸಾಧ್ಯವಾಗಿದೆ. ಇದು ಓಪನ್ ಸೋರ್ಸ್ ಮಾಡೆಲ್ ಡೀಪ್ ಸೀಕ್ ಹೊಂದಿರುವುದಕ್ಕಿಂತ ಒಂಬತ್ತು ಪಟ್ಟು ಮತ್ತು ಚಾಟ್ ಜಿಪಿಟಿ ಹೊಂದಿರುವ ಮೂರನೇ ಎರಡರಷ್ಟು ಸಾಮರ್ಥ್ಯವನ್ನು ಒಳಗೊಂಡಿದೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರು, ಭದ್ರತಾ ತಪಾಸಣೆಯ ನಂತರ ಡೀಪ್ಸೀಕ್ ಅನ್ನು ಭಾರತೀಯ ಸರ್ವರ್ಗಳಲ್ಲಿ ಹೋಸ್ಟ್ ಮಾಡಬಹುದು, ಇದರಿಂದಾಗಿ ಕೋಡರ್ಗಳು, ಡೆವಲಪರ್ಗಳು ಮತ್ತು ವಿನ್ಯಾಸಕರು ಅದರ ಓಪನ್ ಸೋರ್ಸ್ ಕೋಡಿನ ಲಾಭವನ್ನು ಪಡೆಯಬಹುದು ಎಂದು ಹೇಳಿದರು.
ಎಐ ಮಾದರಿಯ ಸುರಕ್ಷತೆ ಮತ್ತು ನೈತಿಕ ನಿಯೋಜನೆ ಸರ್ಕಾರದ ಉನ್ನತ ಆದ್ಯತೆಯಾಗಿದೆ. ಈ ಬದ್ಧತೆಯನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವರು, ಭಾರತವು ತಾಂತ್ರಿಕ-ಕಾನೂನು ವಿಧಾನವನ್ನು ಅಳವಡಿಸಿಕೊಂಡು ಎಐ ಸುರಕ್ಷತಾ ಸಂಸ್ಥೆಯನ್ನು ಸ್ಥಾಪಿಸುತ್ತಿದೆ ಎಂದು ಘೋಷಿಸಿದರು.
ಈ ನಿಟ್ಟಿನಲ್ಲಿ ಪ್ರಮುಖ ಸುರಕ್ಷತಾ-ಸಂಬಂಧಿತ ಯೋಜನೆಗಳಲ್ಲಿ ಅಲ್ಗಾರಿದಮಿಕ್ (ಸಮಸ್ಯೆಗಳ ಪರಿಹಾರಕ್ಕೆ ಹಂತ ಹಂತವಾಗಿ ನೀಡುವ ಸೂಚನೆಗಳು) ದಕ್ಷತೆಯ ನೈತಿಕ ಲೆಕ್ಕಪರಿಶೋಧನೆಯೊಂದಿಗೆ ಡೇಟಾದ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ 8 ಏಕಕಾಲಿಕ ಪ್ರಯತ್ನಗಳು ಸೇರಿವೆ.
ಮೆಷಿನ್ ಅನ್ ಲರ್ನಿಂಗ್ (ಐಐಟಿ ಜೋಧಪುರ)
ಸಿಂಥೆಟಿಕ್ ಡೇಟಾ ಉತ್ಪಾದನೆ/ಜನರೇಷನ್ (ಐಐಟಿ ರೂರ್ಕಿ)
ಎಐ ಪಕ್ಷಪಾತ ತಗ್ಗಿಸುವ ಕಾರ್ಯತಂತ್ರ (ಎನ್ಐಟಿ ರಾಯ್ಪುರ)
ವಿವರಿಸಬಹುದಾದ ಎಐ ಚೌಕಟ್ಟು/ಫ್ರೇಮ್ವರ್ಕ್ (ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ, ಪುಣೆ & ಮೈನ್ಕ್ರಾಫ್ಟ್ ಟೆಕ್ನಾಲಜೀಸ್)
ಗೌಪ್ಯತೆ ಹೆಚ್ಚಿಸುವ ಕಾರ್ಯತಂತ್ರಗಳು (ಐಐಟಿ ದಿಲ್ಲಿ, ಐಐಐಟಿ ದಿಲ್ಲಿ, ಐಐಟಿ ಧಾರವಾಡ ಮತ್ತು ಟೆಲಿಕಾಂ ಎಂಜಿನಿಯರಿಂಗ್ ಸೆಂಟರ್, ಟಿಇಸಿ)
ಎಐ ನೈತಿಕ ಪ್ರಮಾಣೀಕರಣ ಚೌಕಟ್ಟು (ಐಐಐಟಿ, ದಿಲ್ಲಿ ಮತ್ತು ಟಿಇಸಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಸಾಧನ ನಿಷ್ಪಕ್ಷ್)
ಎಐ ಅಲ್ಗಾರಿದಮ್ ಆಡಿಟಿಂಗ್ ಫ್ರೇಮ್ವರ್ಕ್ (ಸಿವಿಕ್ ಡೇಟಾ ಲ್ಯಾಬ್ಸ್ ಅಭಿವೃದ್ಧಿಪಡಿಸುತ್ತಿರುವ ಟೂಲ್ ಪರಖ್)
ಎಐ ಗವರ್ನೆನ್ಸ್ ಟೆಸ್ಟಿಂಗ್ ಫ್ರೇಮ್ವರ್ಕ್ (ಅಮೃತ ವಿದ್ಯಾಪೀಠಂ ಮತ್ತು ಟೆಲಿಕಾಂ ಎಂಜಿನಿಯರಿಂಗ್ ಸೆಂಟರ್)
ಕಾಮನ್ ಕಂಪ್ಯೂಟ್ ಸೌಲಭ್ಯವು ಪ್ರಜಾಪ್ರಭುತ್ವದ ಎಐ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿದೆ
ಇಂಡಿಯಾ ಎಐ ಮಿಷನ್ ಅಡಿಯಲ್ಲಿ, ಬೃಹತ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ, ಇದು ಕಡಿಮೆ ಸಮಯದಲ್ಲಿ ಜಾಗತಿಕ ಮಾನದಂಡಗಳನ್ನು ಮೀರಿದ ಸಾಧನೆ ಮಾಡಿದೆ. ಈ ಸೌಲಭ್ಯವು ಈಗ 12,896 ಎಚ್ 100, 1,480 ಎಚ್ 200 ಮತ್ತು 7,200 ಎಂಐ 200 300 ಯುನಿಟ್ ಗಳು ಸೇರಿದಂತೆ 18,693 ಜಿಪಿಯುಗಳನ್ನು ಹೊಂದಿದೆ, ಇದು ಆರಂಭಿಕ ಗುರಿಯಾದ 10,000 ಜಿಪಿಯುಗಳನ್ನು ಮೀರಿ ಗಮನಾರ್ಹವಾದ ಸಾಮರ್ಥ್ಯ ಹೆಚ್ಚಳ ದಾಖಲಿಸಿದೆ. ಈ ಸಾಮರ್ಥ್ಯವನ್ನು ದೃಷ್ಟಿಕೋನದಲ್ಲಿ ಇಟ್ಟು, ಡೀಪ್ಸೀಕ್ಗೆ 2,000 ಜಿಪಿಯುಗಳಲ್ಲಿ ತರಬೇತಿ ನೀಡಲಾಯಿತು, ಆದರೆ ಚಾಟ್ಜಿಪಿಟಿಗೆ 25,000 ಜಿಪಿಯುಗಳ ಅಗತ್ಯವಿತ್ತು. ಈ ವಿಶಾಲವಾದ ಕಂಪ್ಯೂಟಿಂಗ್ ಶಕ್ತಿಯು ಸಂಶೋಧನೆ, ಮಾದರಿ ತರಬೇತಿಯನ್ನು ವೇಗಗೊಳಿಸುವುದಲ್ಲದೆ, ನೈತಿಕ ಎಐ ಅಲ್ಗಾರಿದಮ್ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಭಾರತದ ಎಐ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆಯನ್ನು ಉತ್ತೇಜಿಸುತ್ತದೆ.
ಎಲ್ಲಾ ಮಧ್ಯಸ್ಥಗಾರರಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಕಂಪ್ಯೂಟ್ ವೇದಿಕೆಯನ್ನು ರಚಿಸಲಾಗಿದೆ. ಸರಿಸುಮಾರು 10,000 ಜಿಪಿಯುಗಳು ಈಗಾಗಲೇ ಲಭ್ಯವಿವೆ, ಮತ್ತು ತಾಂತ್ರಿಕ ಪಾಲುದಾರರು ವಿಶ್ವ ದರ್ಜೆಯ ಎಐ ಪರಿಹಾರಗಳನ್ನು ನೀಡುವ ಮಿಷನ್ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅನುಮೋದನೆಯ ನಂತರ, ಈ ಸೌಲಭ್ಯವು ಶೀಘ್ರದಲ್ಲೇ ವ್ಯಾಪಕ ಬಳಕೆಗಾಗಿ ಕಾರ್ಯಾರಂಭ ಮಾಡಲಿದೆ.
ಕ್ಲೌಡ್ ನಲ್ಲಿ ಎಐ ಸೇವೆಗಳ ಎಂಪನೇಲ್ ಮೆಂಟ್
ಭಾರತ ಸರ್ಕಾರವು 2024 ರ ಮಾರ್ಚ್ ನಲ್ಲಿ 10372 ಕೋಟಿ ರೂ.ಗಳ ಬಜೆಟ್ ವೆಚ್ಚದೊಂದಿಗೆ ಇಂಡಿಯಾಎಐ ಮಿಷನ್ ಅನ್ನು ಅನುಮೋದಿಸಿತ್ತು. ಅಸ್ತಿತ್ವದಲ್ಲಿರುವ ಎಐ ಪರಿಸರ ವ್ಯವಸ್ಥೆಯಲ್ಲಿನ ಅಂತರಗಳನ್ನು ನಿವಾರಿಸುವುದು ಮತ್ತು ಎಐ ತಂತ್ರಜ್ಞಾನ ಹಾಗು ಅಪ್ಲಿಕೇಷನ್ (ಅನ್ವಯಗಳ) ಅಭಿವೃದ್ಧಿಯ ಕೇಂದ್ರವಾಗಿ ಭಾರತ ಹೊರಹೊಮ್ಮಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿತ್ತು. ಇಂಡಿಯಾಎಐ ಮಿಷನ್ ಅನ್ನು 7 ಪ್ರಮುಖ ಸ್ತಂಭಗಳ ಮೂಲಕ ಜಾರಿಗೆ ತರಲಾಗುತ್ತಿದೆ ಮತ್ತು ಎಐ ಕಂಪ್ಯೂಟ್ ಮೂಲಸೌಕರ್ಯಕ್ಕಾಗಿ 10,000 ಜಿಪಿಯುಗಳ ಲಭ್ಯತೆಯನ್ನು ಸಕ್ರಿಯಗೊಳಿಸುವುದು ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಈ ಉದ್ದೇಶಕ್ಕಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ), ಇಂಡಿಯಾಎಐ ಸ್ವತಂತ್ರ ವ್ಯವಹಾರ ವಿಭಾಗ (ಐಬಿಡಿ) ಮೂಲಕ 2024ರ ಆಗಸ್ಟ್ 16 ರಂದು ಕ್ಲೌಡ್ನಲ್ಲಿ ಎಐ ಸೇವೆಗಳನ್ನು ಎಂಪನೇಲ್ ಮಾಡಲು ಮತ್ತು ಸಿಪಿಪಿ ಪೋರ್ಟಲ್ ಮೂಲಕ ಶೈಕ್ಷಣಿಕ, ಎಂಎಸ್ಎಂಇಗಳು, ಸ್ಟಾರ್ಟ್ಅಪ್ಗಳು, ಸಂಶೋಧನಾ ಸಮುದಾಯ, ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಇಂಡಿಯಾಎಐ ಅನುಮೋದಿಸಿದ ಇತರ ಘಟಕಗಳಿಗೆ ಸೇವೆಗಳನ್ನು ಒದಗಿಸಲು ವಿನಂತಿಯನ್ನು (ಆರ್ಎಫ್ಇ) ಪ್ರಕಟಿಸಿತು.
ಕ್ಲೌಡ್ ಸೇವಾ ಪೂರೈಕೆದಾರರು (ಸಿಎಸ್ಪಿಗಳು), ನಿರ್ವಹಣಾ ಸೇವಾ ಪೂರೈಕೆದಾರರು (ಎಂಎಸ್ಪಿಗಳು) ಮತ್ತು ಡೇಟಾ ಸೆಂಟರ್ ಸೇವಾ ಪೂರೈಕೆದಾರರು ಸೇರಿದಂತೆ 19 ಬಿಡ್ ದಾರರು ಪ್ರಸ್ತಾವನೆಗಳನ್ನು ಸಲ್ಲಿಸಿದರು. ಪೂರ್ವ ಅರ್ಹತಾ ಮಾನದಂಡದ ಪ್ರಕಾರ ಆರಂಭಿಕ ಪರಿಶೀಲನೆಯ ನಂತರ ತಾಂತ್ರಿಕ ಮೌಲ್ಯಮಾಪನ ಸಮಿತಿಗೆ ಪ್ರಸ್ತುತಿಗಳನ್ನು ನೀಡಲು 13 ಬಿಡ್ ದಾರರನ್ನು ಆಹ್ವಾನಿಸಲಾಯಿತು. ತಾಂತ್ರಿಕ ಮೌಲ್ಯಮಾಪನದ ಪ್ರಕಾರ, ಹತ್ತು ಬಿಡ್ ದಾರರು ಹಣಕಾಸು ಬಿಡ್ ಗಳನ್ನು ತೆರೆಯಲು ಅರ್ಹರಾಗಿದ್ದಾರೆ ಎಂದು ಕಂಡುಬಂದಿದೆ. ತಾಂತ್ರಿಕವಾಗಿ ಅರ್ಹತೆ ಪಡೆದ 10 ಬಿಡ್ ದಾರರ ಹಣಕಾಸು ಬಿಡ್ ಗಳನ್ನು 2025ರ ಜನವರಿ 22 ರಂದು ತೆರೆಯಲಾಯಿತು. ಕೆಳಗೆ ಪಟ್ಟಿ ಮಾಡಲಾದ 10 ಬಿಡ್ ದಾರರು ಉಲ್ಲೇಖಿಸಿದ ವಿವಿಧ ವರ್ಗದ ಎಐ ಕಂಪ್ಯೂಟ್ ಘಟಕಗಳಿಗೆ (ಜಿಪಿಯು) ತಮ್ಮ ವಾಣಿಜ್ಯ ಆಶಯವನ್ನು ನೀಡಿದ್ದಾರೆ.
1. ಸಿಎಂಎಸ್ ಕಂಪ್ಯೂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
2. ಸಿಟ್ರಾಲ್ಸ್ ಡಾಟಾ ಸೆಂಟರ್ ಲಿಮಿಟೆಡ್
3. ಇ2ಇ ನೆಟ್ವರ್ಕ್ಸ್ ಲಿಮಿಟೆಡ್
4. ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್
5. ಲೊಕುಜ್ ಎಂಟರ್ಪ್ರೈಸ್ ಸೊಲ್ಯೂಷನ್ಸ್ ಲಿಮಿಟೆಡ್
6. ನೆಕ್ಸ್ಟ್ ಜೆನ್ ಡೇಟಾಸೆಂಟರ್ ಮತ್ತು ಕ್ಲೌಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್
7. ಓರಿಯಂಟ್ ಟೆಕ್ನಾಲಜೀಸ್ ಲಿಮಿಟೆಡ್
8. ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್
9. ವೆನ್ಸಿಸ್ಕೊ ಟೆಕ್ನಾಲಜೀಸ್ ಲಿಮಿಟೆಡ್
10. ಯೋಟಾ ಡೇಟಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್
ಈ ಬಿಡ್ ದಾರರು ಇಂಟೆಲ್ ಗೌಡಿ 2, ಎಎಮ್ಡಿ ಎಂಐ 300 ಎಕ್ಸ್, ಎಂಐ 325 ಎಕ್ಸ್, ಎನ್ವಿಡಿಯಾ ಎಚ್ 100 (ಪಿಸಿಐಇ, ಎನ್ವಿಎಲ್ ಮತ್ತು ಎಸ್ಎಕ್ಸ್ಎಂ), ಎನ್ವಿಡಿಯಾ ಎಚ್ 200 (ಪಿಸಿಐಇ, ಎನ್ವಿಎಲ್ ಮತ್ತು ಎಸ್ಎಕ್ಸ್ಎಂ), ಎನ್ವಿಡಿಯಾ ಎ 100, ಎನ್ವಿಡಿಯಾ ಎ 100, ಎನ್ವಿಡಿಯಾ, ಎಲ್ 40 ಎಸ್, ಎನ್ವಿಡಿಯಾ ಎಲ್ 4, ಎಡಬ್ಲ್ಯುಎಸ್ ಇನ್ಫೆರೆನ್ಟಿಯಾ 2 ಮತ್ತು ಎಡಬ್ಲ್ಯುಎಸ್ ಟ್ರಾನಿಯಂ ಸೇರಿದಂತೆ ವಿವಿಧ ವರ್ಗದ ಎಐ ಕಂಪ್ಯೂಟ್ ಘಟಕಗಳನ್ನು (ಜಿಪಿಯು) ಉಲ್ಲೇಖಿಸಿದ್ದಾರೆ. ಬಿಡ್ ದಾರರು ಎನ್ವಿಡಿಯಾ ಮತ್ತು ಎಎಂಡಿಯ 8 ಜಿಪಿಯು ಮಾಡ್ಯೂಲ್ಗಳನ್ನು ಸಹ ನೀಡಿದ್ದಾರೆ.
ಎಂಪನೇಲ್ಮೆಂಟ್ ನಿಯಮಗಳ ಪ್ರಕಾರ, ನಿರ್ದಿಷ್ಟ ವರ್ಗದ ಕಂಪ್ಯೂಟ್ ಘಟಕಕ್ಕೆ ಎಲ್ 1 ದರಗಳನ್ನು ಉಲ್ಲೇಖಿಸಿದ ಬಿಡ್ಡರ್ ರನ್ನು ಮೊದಲು ಎಂಪಾನೆಲ್ ಮಾಡಲಾಗುತ್ತದೆ ಮತ್ತು ಕಂಪ್ಯೂಟ್ ಘಟಕದ ಆ ವರ್ಗದ ಇತರ ಎಲ್ಲಾ ಬಿಡ್ದಾರರು ಎಲ್ 1 ಬಿಡ್ ಗೆ ಹೊಂದಿಕೆಯಾಗಲು ಒಪ್ಪಿದರೆ ಎಂಪಾನೆಲ್ಮೆಂಟ್ಗೆ ಅರ್ಹರಾಗಿರುತ್ತಾರೆ. ಪ್ರತಿ ಎಐ ಕಂಪ್ಯೂಟ್ ವಿಭಾಗದಲ್ಲಿ ನೀಡಲಾಗುವ ಅತ್ಯಂತ ಕಡಿಮೆ (ಎಲ್ 1) ಬಿಡ್ ದಾರರು, ಎಲ್ 1 ಬಿಡ್ ಬೆಲೆ ಮತ್ತು ಪ್ರಕಟಿತ ಮಾರುಕಟ್ಟೆ ಬೆಲೆಗಳಿಗೆ ಹೋಲಿಸಿದರೆ ಗಂಟೆ, ಮಾಸಿಕ, 6 ಮಾಸಿಕ ಮತ್ತು ವಾರ್ಷಿಕವಾಗಿ ನೀಡಲಾಗುವ ಶೇಕಡಾವಾರು ರಿಯಾಯಿತಿಯನ್ನು ಕೋಷ್ಟಕ ಎ ಮತ್ತು ಬಿ ಯಲ್ಲಿ ಅನುಬಂಧ 1 ರಲ್ಲಿ ನೀಡಲಾಗಿದೆ.
ಸಂಗ್ರಹಣೆ ಮತ್ತು ನೆಟ್ವರ್ಕ್ ಸೇವೆಗಳಿಗೆ ನೀಡಲಾಗುವ ಎಲ್ 1 ಬಿಡ್ಡರ್ ಬೆಲೆಯನ್ನು ಕೋಷ್ಟಕ ಸಿ ಮತ್ತು ಡಿ ಯಲ್ಲಿ ಅನುಬಂಧ 2 ರಲ್ಲಿ ನೀಡಲಾಗಿದೆ. ಬಿಡ್ ದಾರರು ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ಎಐ ಪ್ಲಾಟ್ಫಾರ್ಮ್ ಮತ್ತು ಇತರ ಸೇವೆಗಳನ್ನು ರಿಯಾಯಿತಿ ದರದಲ್ಲಿ ಒದಗಿಸಿದ್ದಾರೆ.
ಇಂಡಿಯಾಎಐ ಸುರಕ್ಷತಾ ಸಂಸ್ಥೆ ಸ್ಥಾಪನೆ
ಎಐ ಅಪಾಯಗಳು ಮತ್ತು ಸುರಕ್ಷತಾ ಸವಾಲುಗಳನ್ನು ಎದುರಿಸಲು ಇಂಡಿಯಾಎಐ ಮಿಷನ್ ನ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸ್ತಂಭದ ಅಡಿಯಲ್ಲಿ ಇಂಡಿಯಾಎಐ ಸುರಕ್ಷತಾ ಸಂಸ್ಥೆಯನ್ನು ಸ್ಥಾಪಿಸುವುದಾಗಿ ಕೇಂದ್ರ ಸಚಿವರು ಘೋಷಿಸಿದರು. ಎಐನಲ್ಲಿ ಸುರಕ್ಷತೆ, ಭದ್ರತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಇಂಡಿಯಾಎಐ ಸುರಕ್ಷತಾ ಸಂಸ್ಥೆ ಶಿಕ್ಷಣ ತಜ್ಞರು, ಸ್ಟಾರ್ಟ್ಅಪ್ಗಳು, ಉದ್ಯಮ ಮತ್ತು ಸರ್ಕಾರಿ ಸಚಿವಾಲಯಗಳು / ಇಲಾಖೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. ಈ ಸಂಸ್ಥೆಯು ಭಾರತೀಯ ದತ್ತಾಂಶಗಳ ಆಧಾರದ ಮೇಲೆ ಮತ್ತು ಭಾರತದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಗೆ ಸಂದರ್ಭೋಚಿತವಾಗಿ ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುತ್ತದೆ. ಇಂಡಿಯಾಎಐ ಮಿಷನ್ ನಿಂದ ಬೆಂಬಲ ಪಡೆದ ಪಡೆದ ಈ ಸಂಸ್ಥೆಯನ್ನು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಸ್ಥಾಪಿಸಲಾಗುವುದು, ವಿವಿಧ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಖಾಸಗಿ ವಲಯದ ಪಾಲುದಾರರು ಹಬ್ ಗೆ ಸೇರುತ್ತಾರೆ ಮತ್ತು ಇಂಡಿಯಾಎಐ ಮಿಷನ್ ನ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸ್ತಂಭದ ಅಡಿಯಲ್ಲಿ ಯೋಜನೆಗಳನ್ನು ಕೈಗೊಳ್ಳುತ್ತಾರೆ. ಸುರಕ್ಷಿತ ಮತ್ತು ವಿಶ್ವಾಸಾರ್ಹ ಸ್ತಂಭದ ಅಡಿಯಲ್ಲಿ, ಇಂಡಿಯಾಎಐ ಮಿಷನ್ ಮೊದಲ ಆಸಕ್ತಿಯ ಅಭಿವ್ಯಕ್ತಿ (ಇಒಐ) ಹಿನ್ನೆಲೆಯಲ್ಲಿ ಎಂಟು ಜವಾಬ್ದಾರಿಯುತ ಎಐ ಯೋಜನೆಗಳನ್ನು ಆಯ್ಕೆ ಮಾಡಿದೆ. ಈ ಯೋಜನೆಗಳನ್ನು ಅನುಬಂಧ 3 ರಲ್ಲಿ ಪಟ್ಟಿ ಮಾಡಲಾಗಿದೆ.
ಇದಲ್ಲದೆ ಇಂಡಿಯಾಎಐ ಭಾರತೀಯ ಶೈಕ್ಷಣಿಕ ಸಂಸ್ಥೆಗಳು / ಸಂಘಟನೆಗಳು, ಸ್ವಾಯತ್ತ ಸಂಸ್ಥೆಗಳು, ಆರ್ &ಡಿ ಸಂಸ್ಥೆಗಳು / ಸಂಘಟನೆಗಳು, ಸ್ಟಾರ್ಟ್ಅಪ್ಗಳು ಮತ್ತು ಕಂಪನಿಗಳಿಗೆ ತೆರೆದಿರುವ 2 ನೇ ಸುತ್ತಿನ ಆಸಕ್ತಿಯ ಅಭಿವ್ಯಕ್ತಿಯನ್ನು (ಇಒಐ) ಪ್ರಾರಂಭಿಸಿದೆ. 2 ನೇ ಇಒಐ ಅಡಿಯಲ್ಲಿ ಬರುವ ವಿಷಯಗಳು ಈ ಕೆಳಗಿನಂತಿವೆ:
i. ವಾಟರ್ ಮಾರ್ಕಿಂಗ್ ಮತ್ತು ಲೇಬಲಿಂಗ್
ii. ನೈತಿಕ ಎಐ ಚೌಕಟ್ಟುಗಳು
iii. ಎಐ ಅಪಾಯ ಮೌಲ್ಯಮಾಪನ ಮತ್ತು ನಿರ್ವಹಣೆ
iv. ಒತ್ತಡ ಪರೀಕ್ಷಾ ಸಾಧನಗಳು
v. ಡೀಪ್-ಫೇಕ್ ಪತ್ತೆ ಸಾಧನಗಳು
ಈ ಉಪಕ್ರಮವು ಕಡಿಮೆ ವೆಚ್ಚದ, ವೇಗದ ಕಂಪ್ಯೂಟಿಂಗ್ ಸಾಮರ್ಥ್ಯಗಳು ಮತ್ತು ಅದರ ತ್ವರಿತ ಫಲಿತಾಂಶಗಳೊಂದಿಗೆ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ. ಭಾರತೀಯ ಕೃತಕ ಬುದ್ಧಿಮತ್ತೆ ಮಾದರಿಯು ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ನಾಗರಿಕ ಕೇಂದ್ರಿತ ಉತ್ತಮ ಆಡಳಿತ ಸಾಧನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ, ಇದರಲ್ಲಿ ಅನೇಕ ಕೈಗಾರಿಕಾ ಬಳಕೆಗಳು ಸೇರಿವೆ, ಇದು ತಾಂತ್ರಿಕ ಪ್ರಯೋಜನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುವ ಅಪಾರ ಸಾಮರ್ಥ್ಯವನ್ನು ಹೊಂದಿದೆ.
ಭಾರತದ ಸ್ವಂತ ಎಐ ಮಾದರಿ: ಸ್ಥಳೀಯ ಸಂದರ್ಭಕ್ಕಾಗಿ ನಿರ್ಮಾಣ:
ಕಳೆದ ಒಂದೂವರೆ ವರ್ಷದಿಂದ, ಭಾರತವು ತನ್ನದೇ ಆದ ಅಡಿಪಾಯ ಎಐ ಮಾದರಿಯನ್ನು ಬೆಂಬಲಿಸಲು ದೃಢವಾದ ಎಐ ಪರಿಸರ ವ್ಯವಸ್ಥೆಯ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತಿದೆ. ಈ ಮಾದರಿಯು ಪಕ್ಷಪಾತವನ್ನು ನಿವಾರಿಸುವಾಗ, ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವಾಗ ಮತ್ತು ನ್ಯಾಯಸಮ್ಮತತೆಯನ್ನು ಉತ್ತೇಜಿಸುವಾಗ ಭಾರತೀಯ ಭಾಷಾ ಮತ್ತು ಸಂದರ್ಭೋಚಿತ ಅಗತ್ಯಗಳನ್ನು ಪೂರೈಸುತ್ತದೆ. ಪ್ರಮುಖ ಡೆವಲಪರ್ ಗಳು ಮತ್ತು ಸಂಶೋಧಕರು 8 ರಿಂದ 10 ತಿಂಗಳಲ್ಲಿ ಅನೇಕ ಅಡಿಪಾಯ ಮಾದರಿಗಳನ್ನು ಪೂರ್ಣಗೊಳಿಸುವತ್ತ ಕೆಲಸ ಮಾಡುತ್ತಿದ್ದಾರೆ, ವೆಚ್ಚ-ಪರಿಣಾಮಕಾರಿ ಮತ್ತು ಸಮಯೋಚಿತ ಅಭಿವೃದ್ಧಿಯನ್ನು ಸಾಧಿಸಲು ಅಲ್ಗಾರಿದಮಿಕ್ ದಕ್ಷತೆಯನ್ನು ಬಳಸಿಕೊಳ್ಳುತ್ತಿದ್ದಾರೆ.
ಭಾರತದ ಎಐ ಮಾದರಿಯು ದೇಶದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುತ್ತದೆ, ಭಾರತೀಯ ಬಳಕೆದಾರರಿಗೆ ಅನುಗುಣವಾಗಿ ಉನ್ನತ ಮಟ್ಟದ ನಾವೀನ್ಯತೆಯನ್ನು ತರುತ್ತದೆ ಎಂದು ತಜ್ಞರು ನಂಬುತ್ತಾರೆ.
ನಾಗರಿಕರಿಗೆ ಅನುಕೂಲವಾಗುವಂತೆ ಎಐ ಅಪ್ಲಿಕೇಶನ್ ಗಳು
ಕೃಷಿ, ಆರೋಗ್ಯ, ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ನಿರ್ವಹಣೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಎಐ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸುವತ್ತ ಇಂಡಿಯಾ ಎಐ ಮಿಷನ್ ಗಮನ ಹರಿಸುತ್ತದೆ. ಸಾಮಾಜಿಕ ಪ್ರಯೋಜನಗಳಿಗಾಗಿ ಎಐ ಅನ್ನು ಬಳಸಿಕೊಳ್ಳಲು ಈ ಡೊಮೇನ್ ಗಳಲ್ಲಿ ಹದಿನೆಂಟು ಅಪ್ಲಿಕೇಶನ್ ಗಳನ್ನು ಗುರುತಿಸಲಾಗಿದೆ. ಈ ಉಪಕ್ರಮವು ಹವಾಮಾನ ಬದಲಾವಣೆ, ಕಲಿಕೆಯ ವೈಕಲ್ಯಗಳು ಮತ್ತು ಅಗ್ರಿಟೆಕ್ ಪರಿಹಾರಗಳಂತಹ ಸವಾಲುಗಳನ್ನು ಎದುರಿಸುತ್ತದೆ, ಎಐ ಲಕ್ಷಾಂತರ ಜನರ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
ಎಐ ಅಭಿವೃದ್ಧಿಗೆ ಕೈಗೆಟುಕುವ ಕಂಪ್ಯೂಟ್ ಸೌಲಭ್ಯ:
ಭಾರತದ ಕಂಪ್ಯೂಟ್ ಸೌಲಭ್ಯವನ್ನು ಹೆಚ್ಚು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುತ್ತಿದೆ. ಪ್ರತಿ ಜಿಪಿಯು ಗಂಟೆಗೆ ವೆಚ್ಚವು ಸರಿಸುಮಾರು ₹ 115.85 ಆಗಿದೆ, ಇದು ಜಾಗತಿಕ ಮಾನದಂಡವಾದ ಗಂಟೆಗೆ $ 2.5–$ 3 ಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹೈ-ಎಂಡ್ ಕಂಪ್ಯೂಟಿಂಗ್ ಗಂಟೆಗೆ ₹ 150 ಕ್ಕೆ ಲಭ್ಯವಿರುತ್ತದೆ, 40% ಸರ್ಕಾರದ ಸಬ್ಸಿಡಿಯೊಂದಿಗೆ ಸಾಮಾನ್ಯ ಕಂಪ್ಯೂಟ್ ಪ್ರವೇಶಕ್ಕಾಗಿ ವೆಚ್ಚವನ್ನು ಗಂಟೆಗೆ ₹ 100 ಕ್ಕಿಂತ ಕಡಿಮೆ ಮಾಡುತ್ತದೆ. ಈ ಕೈಗೆಟುಕುವ ಬೆಲೆಯು ಪ್ರಜಾಪ್ರಭುತ್ವೀಕೃತ ಎಐ ಪ್ರವೇಶವನ್ನು ಖಚಿತಪಡಿಸುತ್ತದೆ, ಸ್ಟಾರ್ಟ್ಅಪ್ಗಳು ಮತ್ತು ಸಂಶೋಧಕರನ್ನು ಸಮಾನವಾಗಿ ಸಬಲೀಕರಣಗೊಳಿಸುತ್ತದೆ.
ಈ ಉಪಕ್ರಮವು ಸ್ಪರ್ಧಾತ್ಮಕ ಆರು ತಿಂಗಳ ಮತ್ತು ವಾರ್ಷಿಕ ಕಂಪ್ಯೂಟ್ ದರ ಪ್ಯಾಕೇಜ್ ಗಳನ್ನು ನೀಡುತ್ತದೆ. ಈ ಸೌಲಭ್ಯವು ದಾವೋಸ್ನಲ್ಲಿ ಮಾನ್ಯತೆ ಸೇರಿದಂತೆ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ, ಇದು ವಿಶ್ವಾಸಾರ್ಹ ಜಾಗತಿಕ ಎಐ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.
ಭಾರತದ ಅಡಿಪಾಯ ಎಐ ಮಾದರಿಗಳನ್ನು ನಿರ್ಮಿಸುವ ಪ್ರಸ್ತಾಪಗಳಿಗೆ ಕರೆ
ಇದಲ್ಲದೆ, ಅಡಿಪಾಯ ಎಐ ಮಾದರಿಗಳ ಅಭಿವೃದ್ಧಿಗೆ ಬೆಂಬಲ ನೀಡಲು ಕೇಂದ್ರ ಸಚಿವರು ಇಂಡಿಯಾಎಐ ಮಿಷನ್ ಅಡಿಯಲ್ಲಿ ಪ್ರಸ್ತಾಪಗಳಿಗೆ ಕರೆಯನ್ನು ಪ್ರಾರಂಭಿಸಿದರು, ಭಾರತೀಯ ಡೇಟಾಸೆಟ್ಗಳನ್ನು ಬಳಸಿಕೊಂಡು ಅತ್ಯಾಧುನಿಕ ಎಐ ಮಾದರಿಗಳನ್ನು ರಚಿಸಲು ಸ್ಟಾರ್ಟ್ಅಪ್ಗಳು, ಸಂಶೋಧಕರು ಮತ್ತು ಉದ್ಯಮಿಗಳನ್ನು ಆಹ್ವಾನಿಸಿದರು. ಈ ಉಪಕ್ರಮವು ಸ್ಥಳೀಯ ಎಐ ಮಾದರಿಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ, ಅದು ದೊಡ್ಡ ಮಲ್ಟಿಮೋಡಲ್ ಮಾದರಿಗಳು, ದೊಡ್ಡ ಭಾಷಾ ಮಾದರಿಗಳು (ಎಲ್ಎಲ್ಎಂ) ಅಥವಾ ಸಣ್ಣ ಭಾಷಾ ಮಾದರಿಗಳು (ಎಸ್ಎಲ್ಎಂ) ಆಗಿರಬಹುದು. ಈ ಎಐ ಮಾದರಿಗಳು ಭಾರತೀಯ ಡೇಟಾಸೆಟ್ಗಳಲ್ಲಿ ತರಬೇತಿ ಪಡೆದಿರಬೇಕು, ಭಾಷಾ, ಸಾಂಸ್ಕೃತಿಕ ಮತ್ತು ಸಂದರ್ಭೋಚಿತ ಪ್ರಸ್ತುತತೆಯನ್ನು ಖಚಿತಪಡಿಸಿಕೊಳ್ಳಬೇಕು. ಆರೋಗ್ಯ, ಶಿಕ್ಷಣ, ಕೃಷಿ, ಹವಾಮಾನ ಮತ್ತು ಆಡಳಿತದಂತಹ ಕ್ಷೇತ್ರಗಳಲ್ಲಿ ಸ್ಕೇಲೆಬಲ್ ಮತ್ತು ಪರಿಣಾಮಕಾರಿ ಎಐ ಪರಿಹಾರಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ.
ಎಐ / ಎಂಎಲ್ನಲ್ಲಿ ಪರಿಣತಿ, ಹಿಂದಿನ ಅನುಭವ ಮತ್ತು ಹೆಚ್ಚಿನ ಪರಿಣಾಮ ಬೀರುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯ ಸೇರಿದಂತೆ ತಂಡದ ಸಾಮರ್ಥ್ಯ ಸೇರಿದಂತೆ ಹಲವಾರು ಪ್ರಮುಖ ಮಾನದಂಡಗಳ ಆಧಾರದ ಮೇಲೆ ಪ್ರಸ್ತಾಪಗಳನ್ನು ನಿರ್ಣಯಿಸಲಾಗುತ್ತದೆ. ನಾವೀನ್ಯತೆ, ಡೇಟಾಸೆಟ್ ಕಾರ್ಯತಂತ್ರ, ಮಾದರಿ ವಾಸ್ತುಶಿಲ್ಪ ಮತ್ತು ಸುಸ್ಥಿರತೆ ಯೋಜನೆಗಳಿಗಾಗಿ ವಿಧಾನ ಮತ್ತು ಕಾರ್ಯತಂತ್ರವನ್ನು ಪರಿಶೀಲಿಸಲಾಗುವುದು. ಟೈಮ್ ಲೈನ್ ಗಳು ಮತ್ತು ಮೈಲಿಗಲ್ಲುಗಳು ಸ್ಪಷ್ಟ ವಿತರಣೆಗಳೊಂದಿಗೆ ವಾಸ್ತವಿಕ ಅಭಿವೃದ್ಧಿ ವೇಳಾಪಟ್ಟಿಗಳನ್ನು ಪ್ರಸ್ತುತಪಡಿಸಬೇಕು. ಬಳಕೆ ಪ್ರಕರಣಗಳ ವಿಭಾಗವನ್ನು ಸೃಜನಶೀಲತೆ, ಕಾರ್ಯಸಾಧ್ಯತೆ ಮತ್ತು ಸಾಮಾಜಿಕ ಪರಿಣಾಮ ಅನ್ವಯಗಳ ಸ್ಕೇಲಬಿಲಿಟಿಯ ಮೇಲೆ ನಿರ್ಣಯಿಸಲಾಗುತ್ತದೆ. ನೈತಿಕ ಅನುಸರಣೆಗೆ ಡಿಪಿಡಿಪಿ ಕಾಯ್ದೆ, ಐಟಿ ಕಾಯ್ದೆ ಮತ್ತು ಪಕ್ಷಪಾತ ತಗ್ಗಿಸುವ ತಂತ್ರಗಳಿಗೆ ಬದ್ಧರಾಗಿರಬೇಕು. ಉದ್ಯಮದ ಮಾನದಂಡಗಳು, ದೀರ್ಘಕಾಲೀನ ಹೊಂದಾಣಿಕೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಆಧಾರದ ಮೇಲೆ ಸ್ಕೇಲಬಿಲಿಟಿ ಮತ್ತು ಸುಸ್ಥಿರತೆಯನ್ನು ಪರಿಶೀಲಿಸಲಾಗುತ್ತದೆ. ಕೊನೆಯದಾಗಿ, ಹಣಕಾಸಿನ ಕಾರ್ಯಸಾಧ್ಯತೆಯನ್ನು ಬಜೆಟ್ ಸಮರ್ಥನೆ, ಧನಸಹಾಯ ಮೂಲಗಳು ಮತ್ತು ವೆಚ್ಚ-ಪರಿಣಾಮಕಾರಿತ್ವದ ದೃಷ್ಟಿಯಿಂದ ನಿರ್ಣಯಿಸಲಾಗುತ್ತದೆ.
ಧನಸಹಾಯ ಮತ್ತು ಬೆಂಬಲ ಕಾರ್ಯವಿಧಾನಗಳು ನೇರ ಧನಸಹಾಯವನ್ನು ಒಳಗೊಂಡಿವೆ, ಇದು ಮೈಲಿಗಲ್ಲು ಆಧಾರಿತ ವಿತರಣೆಗಳೊಂದಿಗೆ ಅನುದಾನಗಳನ್ನು ನೀಡುತ್ತದೆ ಮತ್ತು ಎಐ ಲೆಕ್ಕಾಚಾರದ ಕ್ರೆಡಿಟ್ಗಳನ್ನು ನೀಡುತ್ತದೆ ಮತ್ತು ಅದು ಈಕ್ವಿಟಿ ಆಧಾರಿತ ಹೂಡಿಕೆಗಳನ್ನು ಒಳಗೊಂಡಿದೆ, ಅಲ್ಲಿ ಪರಸ್ಪರ ಒಪ್ಪಂದಗಳ ಮೂಲಕ ಹೆಚ್ಚುವರಿ ಹಣವನ್ನು ಒದಗಿಸಲಾಗುತ್ತದೆ. ಸಹ-ಹಣಕಾಸು ಆಯ್ಕೆಗಳು ಸಹ ಇವೆ, ಸಾಹಸೋದ್ಯಮ ಬಂಡವಾಳಗಾರರು, ಏಂಜೆಲ್ ಹೂಡಿಕೆದಾರರು, ಲಾಭರಹಿತ ಸಂಸ್ಥೆಗಳು ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನಗಳಿಂದ ಹೆಚ್ಚುವರಿ ಹಣವನ್ನು ಪಡೆಯಲು ಘಟಕಗಳಿಗೆ ಅವಕಾಶ ಲಭಿಸುತ್ತದೆ. ಪ್ರಸ್ತಾವನೆಗಳನ್ನು ರೋಲಿಂಗ್ ಸಲ್ಲಿಕೆ ಆಧಾರದ ಮೇಲೆ ಸ್ವೀಕರಿಸಲಾಗುತ್ತದೆ ಮತ್ತು ಮೊದಲು ಬಂದ, ಮೊದಲು ಸಲ್ಲಿಸಿದ ವಿಧಾನದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
ಭವಿಷ್ಯದ ಮಾರ್ಗಸೂಚಿ ಮತ್ತು ಸುಸ್ಥಿರತೆ
ಇಂಡಿಯಾ ಎಐ ಮಿಷನ್ ದೀರ್ಘಕಾಲೀನ ಸುಸ್ಥಿರತೆಯೊಂದಿಗೆ ನಾಲ್ಕು ವರ್ಷಗಳ ಕಾಲಮಿತಿಯ “ಸೂರ್ಯಾಸ್ತದ ಷರತ್ತು” ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತವು ತನ್ನ ಅರೆವಾಹಕ ಪ್ರಯಾಣದಲ್ಲಿ ಮುಂದುವರಿಯುತ್ತಿದ್ದಂತೆ, ಸರ್ಕಾರವು ತನ್ನ ಪರಿಸರ ವ್ಯವಸ್ಥೆಯನ್ನು ಸ್ಪಷ್ಟತೆ ಮತ್ತು ವ್ಯವಸ್ಥಿತ ಯೋಜನೆಯೊಂದಿಗೆ ಕಾರ್ಯತಂತ್ರಾತ್ಮಕವಾಗಿ ಅಭಿವೃದ್ಧಿಪಡಿಸುತ್ತಿದೆ. ಸೆಮಿಕಂಡಕ್ಟರ್ ಮಿಷನ್ನಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದರೊಂದಿಗೆ, ಭಾರತದ ಎಐ ಆಕಾಂಕ್ಷೆಗಳು ಅದರ ವಿಶಾಲ ತಾಂತ್ರಿಕ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತವೆ.
ಎಲ್ಎಲ್ಎಎಂಎಯಂತಹ ಹಿಂದಿನ ಉಪಕ್ರಮಗಳಂತೆಯೇ ಡೀಪ್ಸೀಕ್ ಮತ್ತು ಇತರ ಅಡಿಪಾಯ ಮಾದರಿಗಳನ್ನು ಭಾರತೀಯ ಸರ್ವರ್ಗಳಲ್ಲಿ ಹೋಸ್ಟ್ ಮಾಡಬಹುದು ಎಂದು ಕೇಂದ್ರ ಸಚಿವರು ಹೇಳಿದರು. ಎಐನ ನಿಜವಾದ ಪರಿಣಾಮವು ಚಾಟ್ಬಾಟ್ಗಳು ಮತ್ತು ಇಮೇಜ್ ಉತ್ಪಾದನೆಯನ್ನು ಮೀರಿದ ಕೈಗಾರಿಕಾ ಅನ್ವಯಿಕೆಗಳಲ್ಲಿದೆ; ಇದು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸುತ್ತದೆ, ಅವುಗಳೆಂದರೆ;
• ತೈಲ ತೆಗೆಯಲು ಭೂಮಿ ಕೊರೆಯುವ ರಿಗ್ ಗಳ ಆರೋಗ್ಯ/ಆಯಿಲ್ ಡ್ರಿಲ್ಲಿಂಗ್ ರಿಗ್ ಗಳ ಆರೋಗ್ಯ
• ಪರಿಣಾಮಕಾರಿ ರೈಲ್ವೆ ಟಿಕೆಟಿಂಗ್
• ಕೃಷಿಗಾಗಿ ಮಣ್ಣಿನ ಆರೋಗ್ಯ ಮೇಲ್ವಿಚಾರಣೆ
• ಹವಾಮಾನ ಮತ್ತು ಚಂಡಮಾರುತದ ಮುನ್ಸೂಚನೆ
ಈ ಮಿಷನ್ ನೈಜ-ಸಮಯದ ಪತ್ತೆ ಸಾಧನಗಳು, ಆಳವಾದ ನಕಲಿ ತಗ್ಗಿಸುವಿಕೆ ಮತ್ತು ದೃಢವಾದ ಎಐ ಅಪಾಯ ನಿರ್ವಹಣಾ ತಂತ್ರಗಳ ಮೂಲಕ ಎಐ ಸುರಕ್ಷತೆಗೆ ಒತ್ತು ನೀಡುತ್ತದೆ. ಸ್ಟ್ಯಾನ್ಫೋರ್ಡ್ ಶ್ರೇಯಾಂಕದಲ್ಲಿ ಎಐ ಶಿಕ್ಷಣಕ್ಕೆ ಸಂಬಂಧಿಸಿ ಭಾರತ ಅಗ್ರ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿದೆ, 240 ವಿಶ್ವವಿದ್ಯಾಲಯಗಳು ಎಐ ಕೋರ್ಸ್ಗಳನ್ನು ನೀಡುತ್ತಿವೆ ಮತ್ತು 100 ವಿಶ್ವವಿದ್ಯಾಲಯಗಳು 5 ಜಿ ಲ್ಯಾಬ್ಗಳನ್ನು ಹೊಂದಿವೆ.
ಪ್ರಜಾಪ್ರಭುತ್ವೀಕರಣ, ಒಳಗೊಳ್ಳುವಿಕೆ, ಕೈಗೆಟುಕುವಿಕೆ ಮತ್ತು ನಾವೀನ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಿ, ಭಾರತವು ಜಾಗತಿಕ ಎಐ ಶಕ್ತಿಕೇಂದ್ರವಾಗಿ ಹೊರಹೊಮ್ಮಲು ಸಜ್ಜಾಗಿದೆ, ಆ ಮೂಲಕ ಸಾಮಾಜಿಕ ಮತ್ತು ಕೈಗಾರಿಕಾ ಪ್ರಗತಿಗಾಗಿ ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ರೂಪಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಹಾಯಕ ಸಚಿವರಾದ ಶ್ರೀ ಜಿತಿನ್ ಪ್ರಸಾದ, ಎಂಇಐಟಿವೈ ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಿಇಒ ಶ್ರೀ ಅಭಿಷೇಕ್ ಸಿಂಗ್, ಇಂಡಿಯಾಎಐ ಸಿಒಒ ಶ್ರೀಮತಿ ಕವಿತಾ ಭಾಟಿಯಾ, ಎನ್ಇಜಿಡಿ ಪಿ ಮತ್ತು ಸಿಇಒ ಶ್ರೀ ನಂದ ಕುಮಾರಮ್ ಮತ್ತು ಎಂಇಐಟಿವೈನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(Release ID: 2097963)
Visitor Counter : 5